ನಾನು ಕದ್ದು ಓದಿದ ಪ್ರೇಮ ಪತ್ರ..
Hi..
Vodafone ಟು Vodafone call rate ನಿಮಿಷಕ್ಕೆ ಹತ್ತು ಪೈಸೆ ಇದ್ದರು ನಾನು ನಿನಗೆ ಈ ಪತ್ರ ಬರೆಯುತ್ತಿರುವೆ, ಹತ್ತನೇ ಕ್ಲಾಸ್ ನಲ್ಲಿ ಬಿಂದು ಮೇಡಂ ಲೆಟರ್ ರೈಟಿಂಗ್ ಕ್ಲಾಸ್ ನಲ್ಲಿ ಫೇಲ್ ಮಾಡಿದ್ದು ಈಗ ನೆನಪಿಗೆ ಬರುತ್ತೆ. 'To ' ಹಾಗು 'From' ಅಡ್ರೆಸ್ ಉಲ್ಟಾ-ಪಲ್ಟ ಆಗಿದೆ, ಕಂಟೆಂಟ್ ನಲ್ಲಿ ವಿಧೇಯತೆ ಇಲ್ಲ ಎಂದು ಅವರಲ್ಲಿ ಬಯ್ಯಿಸಿಸ್ಕೊಂಡಿದ್ದೆ. ನಿನ್ನ ಮುಂದೆ ನೋಡು ಎಲ್ಲ ಹೇಳುತ್ತೇನೆ. ಸಧ್ಯಕ್ಕೆ ಮುಂದಿನದನ್ನು ಓದುವಾಗ ಸುತ್ತ ಮುತ್ತ ನಿಮ್ಮ ಅಮ್ಮ ಇಲ್ಲವೆಂದು ಖಚಿತ ಪಡಿಸಿಕೊಂಡು ಮುಂದುವರೆಸು, ಮೊದಲೇ ಅವರಿಗೆ ನನ್ನ ಮೇಲೆ ಅನುಮಾನ.
ಸರಿ, ನೇರ ವಿಷಯಕ್ಕೆ ಬರದೇ ಸ್ವಲ್ಪ ಸುತ್ತಿ ಬಳಸಿ ಬರುತ್ತೇನೆ. ಭಯ ನನಗೆ. So..? ಊಟ ಆಯ್ತಾ?.. ಏನನ್ನ ಮಾಡ್ತಾ ಇದ್ದೀಯ??.. ಹಾಂ!! ಈಗ ವಿಷಯಕ್ಕೆ ಬರ್ತೀನಿ. ನಿನ್ನೆ ನೀನು ಆ ಪುಳಿಯೋಗರೆ ಡಬ್ಬ ನನ್ನ ಕೈಗೆ ಇಡೋವಾಗ ನಿನ್ನ ಉಗುರಿನ ಬಣ್ಣವನ್ನು ಗಮನಿಸಿದೆ. ಅದೇ ಆ ಗೋದ್ರೆಜ್ ಬೀರುವಿನ ಕಲರ್ . ಅದು ನಿನಗೆ ಸರಿ ಕಾಣುವುದಿಲ್ಲ. ಮೊದಲಿನದ್ದೆ ಚೆನ್ನಾಗಿತ್ತು, ಕಡುಗೆಂಪು ಬಣ್ಣದ್ದು. ನಿನ್ನ ಬಿಳಿ ಬೆರಳುಗಳಿಗೆ ಕೆಂಪು ಹೊಂದಿಕೊಳುತ್ತೆ. ನಿನಗೂ ನನ್ನ ಮಾತು ಸರಿ ಎನಿಸಿದರೆ ಅದನ್ನು ಬದಲಾಯಿಸು. ನಿನ್ನ ರೂಂ ಮೇಟ್ ಬೇಕಿದ್ದರೆ ಅದನ್ನೇ ಇಟ್ಟುಕೊಳ್ಳಲಿ.
ನಮ್ಮಿಬ್ಬರ ಸ್ನೇಹಕ್ಕೆ ಆರು ವರ್ಷಗಳಾಗಿವೆ. ನಮ್ಮ ಸ್ನೇಹ ವಿಂಟೇಜ್ ಕಾರ್ ನಂತೆ ಇನ್ನು ಹೆಚ್ಚಾಗೆ ಸುಂದರವಾಗಿ ಕಾಣ್ಸತ್ತೆ ದಿನೇ ದಿನೇ ಅಂತ ಅನ್ಸಲ್ವಾ ನಿಂಗೆ? .. ನಾನು ಹೇಳಿದ ಮೇಲೆ ಅನ್ನಿಸಿರತ್ತೆ. ಆ ಸಾನ್ವಿ ಮದುವೆ ಆಗ್ತಿದಾಳೆ. ಮುಂದೆ ಒಂದು ದಿನ ನೀನು ಆಗ್ತಿಯ, ನಾನು ಆಗ್ತೀನಿ. ನಾನು ಹೇಳೋದೆನಪ್ಪ ಅಂದ್ರೆ, ನನ್ನ ನಿನ್ನ ಮದುವೆ ಒಂದೇ ದಿನ ಆದರೆ ಹೇಗೆ ಅಂತ ?. ಒಂದೇ ದಿನ, ಒಂದೇ ಚಪ್ಪರದಲ್ಲಿ, ಒಂದೇ ಮಣೆ ಮೇಲೆ!!
ಹೌದು..!! ನಾನು ನಿನಗೆ propose ಮಾಡ್ತಾ ಇದೀನಿ. ಮನಸಲ್ಲಿ ಎಷ್ಟೋ ಬಾರಿ ಮಾಡಿದ್ದರೂ explicitly ಇದೆ ಫಸ್ಟ್ ಟೈಮ್ for the records. ಈ ಬಿಳಿ ಹಾಳೆಯ ಮೇಲೆ. ನಮ್ಮ ಸ್ನೇಹವನ್ನು ಪ್ರೇಮವಾಗಿಸೋ ಪ್ರಯತ್ನ. ಹೇಗೆ ಹೇಳೋದು ಅಂತ ತಿಳಿಯದೆ ಡೈರೆಕ್ಟ್ ಮದುವೆಯ ಮ್ಯಾಟರ್ ಬರೆದು ಬಿಟ್ಟೆ. Un-romantic ಆಗಿದ್ದರೆ ಕ್ಷಮಿಸು. ಇಂದು ನಿನ್ನೆಯದಲ್ಲದ ಈ ಭಾವನೆ ನಿನ್ನ ಮೇಲೆ ಅದು ಹೇಗೆ ಬಂತೋ ನಾನರಿಯೆ. "ಬಾಡದಿರು ಸ್ನೇಹದ ಹೂವೆ, ಪ್ರೇಮದ ಬಂಧನದಲ್ಲಿ" ಅಂತ ಹಾಡು ಮಾತ್ರ ಹಾಡಬೇಡ. ಹುಚ್ಚು ಕಾನ್ಫಿಡೆನ್ಸ್ ನನಗೆ ನೀನು ನಿರಾಕರಿಸಲ್ಲ ಅಂತ. ಸ್ನೇಹದ ಹೂವನ್ನು ಪ್ರೇಮದ ಹಣ್ಣಾಗಿಸೋಣ. ನಿನ್ನ ಕೆನ್ನೆಯ ಮೇಲೆ ಕಂಬನಿ ಜಾರಿದರೆ ಅದನ್ನು ವರೆಸುವ ಕೈ ಆಗಿರುವೆ, ನಾನಿರೋವರೆಗೂ. ನನ್ನ ಜೊತೆ ನೀನಿರೋವರೆಗೂ. ಕಂಬನಿ ತರಿಸಲ್ಲ ಅಂತ ಹೇಳಲಾರೆ, ಅದು practically ಅಸಾಧ್ಯ ಅಂತ ನೀನು ಬಯ್ಯುತ್ತಿ.
ಸರಾಸರಿ ಆರು ವರ್ಷಗಳ ಕಾಲ ನನ್ನ ಹೃದಯವನ್ನು ಆಳಿದ್ದೀ, ಸ್ನೇಹಿತೆಯಾಗಿ ನನ್ನ ಒಡನಾಡಿಯಾಗಿ. ಈಗ ನಿನಗೆ ತಿಳಿಸದೆ ಅದೇ ಹೃದಯವನ್ನು ಬಣ್ಣ ಬಳಿದು, ರಂಗೋಲಿ ಹಾಕಿ ನಿನಗಾಗಿ ಕಾದಿರಿಸಿರುವೆ. ನೀನು ಬರಬೇಕು, ನಿನ್ನ ಮನೆಯಾಗಿಸಬೇಕು. ಬೇರೆ ಯಾರು ನನ್ನನು ಅರ್ಥ ಮಾಡಿಕೊಳ್ಳುವುದಿಲ್ಲ ಅಂತ ಅಥವಾ ನಿನ್ನ ಅಷ್ಟೂ ನಖರಾ ಗಳನ್ನೂ ಹಿಡಿಯಲು ನಾನೇ ಲಾಯಕ್ಕು ಅಂತನಾಗ್ಲಿ ಅಥವಾ ನಿಮ್ಮ ಅಪ್ಪನ ಅಷ್ಟು ಆಸ್ತಿನಾ ನೋಡಿ ಈ ನಿರ್ಧಾರಕ್ಕಂತೂ ಖಂಡಿತ ಬಂದಿಲ್ಲ. ನಿನ್ನನು ಬಿಟ್ಟು ಇರುವ ಒಂದೇ ಒಂದು thought ಕೂಡ ನರಕಸದೃಶ ಅನ್ಸತ್ತೆ. ಪ್ರೀತಿ ಪ್ರೇಮ ಮಾಡಿದೊರನ್ನ ಇಬ್ಬರು ಸೇರೇ ಬಯ್ತಾ ಇದ್ದ್ವಿ, ಆದರೆ ನಿನ್ನ ಜೊತೆಗಿರಬೇಕು ಅನ್ನೋ ಭಾವ ಒಂದೇ ಎದ್ದು ಕಾಣತ್ತೆ ಈಗ. ಪ್ರೇಮವೆಂದರೆ ತೀರ selfish relation ಅಂತ ಎಲ್ಲೋ ಓದಿದ್ದೆ. ಈಗ ಆ ಕವಿ ಬುದ್ಧಿವಂತ ಅಂತ ಅನ್ಸತ್ತೆ. ಒಬ್ಬನೇ ಮಲಗಿದಾಗ ಪಕ್ಕದಲ್ಲಿ ಪೊರಕೆಯನ್ನು ಇಟ್ಟುಕೊಂಡು ಮಲಗುತ್ತೇನೆ, ಮೂತ್ರ ಮಾಡುವಾಗ ಪಕ್ಕ ಯಾರಾದರು ನಿಂತರೆ ಆಗುವುದಿಲ್ಲ, ಅಲ್ಲಿ ಪೂರ್ಣ privacy ಬೇಕು ನಂಗೆ. ಇಂಥವೆಲ್ಲ ನಿನಗೆ ಹೇಳುತ್ತೇನೆ. ನೀನು ಕೂಡ ಗುಲಾಬಿ ಕೊಳ್ಳುವಾಗ ಅಂಗಡಿಯಲ್ಲಿ ಅದು ನೆಲವನ್ನು ನೋಡುತ್ತಿದ್ದರೆ ಅದನ್ನು ಕೊಂಡು ತಲೆಗೆ ಮುಡಿಯುವ ಬದಲು ಮಣ್ಣಲ್ಲಿ ಮುಚ್ಚುತ್ತೀ ಅಂತ ಹೇಳಿದ್ದೆ . ಇದು illogical, nonsense ಅನ್ನಿಸಿದರೂ ನಾನು ಅದನ್ನು ತೋರಿಸದೆ ನಮ್ರವಾಗೇ ಸ್ಪಂದಿಸಿದ್ದೆ. ನಮ್ಮಲ್ಲಿ ಯಾವುದೇ ಮುಚ್ಚು ಮರೆ ಇಲ್ಲದೆ ಎಲ್ಲವನ್ನೂ ಹೇಳಿಕೊಳ್ಳುತ್ತೇವೆ. ಒಬ್ಬರನೊಬ್ಬರು ಅರ್ಥೈಸಿಕೊಂಡಿದ್ದೇವೆ, ಜೊತೆಯಾಗಿದ್ದಾಗ ಜಾಸ್ತಿ ನಗುತ್ತೇವೆ. ಬೇರೇನೂ ಹೇಳಲಿ..
ಕೆಳಗಿನ ಸಾಲುಗಳು ನಿನಗೆ..
ನಾ ನಿನ್ನ ಖುಷಿಗಾಗಿ ಕಂಬನಿಸೋ ಕಣ್ಣು..
ಯಾರು ಬರದಲ್ಲಿ ಬಂದವಳು ನೀನು.
ಈ ಪತ್ರವನ್ನು ಓದುವಾಗ ಸುತ್ತಲೂ ಒಮ್ಮೆ ಶಾಂತವಾಗಿ ಎನೂ ಕೇಳಿಸದಂತಾದರೆ ನನ್ನ ಮಾತು ನಿನಗೆ ಕೇಳಿದಂತೆ. ಇಷ್ಟು ಓದಿ ಇನ್ನು bore ಆಗದೆ ಮುಂದೆ ಓದುವ ಹಂಬಲವಿದ್ದರೆ ಒಂದು ಸಾರಿ ಆ toilet ವಿಷಯವನ್ನು ಈ 'ಪ್ರೇಮ ಪತ್ರ' ದಲ್ಲಿ ಬರೆದಿದ್ದಕೆ ಕ್ಷಮೆ ಕೇಳಲೇ ?.. ಈ ಸಾಲಿನ ಕೊನೆಗೆ ನೀನು ನಕ್ಕರೆ ನನ್ನ ಮನವಿಯನ್ನು 'in progress ' ಇಟ್ಟಿರುವೆಯೆಂದು ತಿಳಿಯಲೇ? ಮನಸಲ್ಲೇ ನಗುತ್ತ ನೀನಿದ್ದಿಯಲ್ಲ ನೀನು!!.. ಮಾತಲ್ಲೇ ಚಂದ್ರನನ್ನು ತೋರಿಸ್ತಿಯ! ಎಂದು 'ಕಪಿ ' ಅಂತ ಬಯ್ದರೆ ಕೊಂಚ ನಿರಾಳವಾಗಲೇ?. ಮಾತಲ್ಲೇ ತೋರಿಸಿದ ಚಂದ್ರನ್ನ ಕೈಗೆ ತಂದು ಕೊಡುವೆ ಅಂತ ಹೇಳಲಾರೆ, ಅದು ಹಳೇ depressing dialog. ಆದರೆ ಅದೇ ಚಂದ್ರನ್ನ ಇಬ್ಬರು ಸೇರಿ ಹುಡುಕೋಣ, ಇಬ್ಬರು ಸೇರಿ ಪಡೆಯೋಣ. ಏನಂತೀ....??
Note: ದಯವಿಟ್ಟು ಉತ್ತರವ ಪತ್ರದಲ್ಲಿ ತಿಳಿಸಬೇಡ. ನಿನಗಿದ್ದಷ್ಟು patience ನನಗಿಲ್ಲ ಪತ್ರ ಓದುತ್ತ ಕೂರಲು. ಸಾಧ್ಯವಾದರೆ ಒಂದು message ಮಾಡು.
- ನಿನ್ನ ಶರಣ.
ಕೊನೆಯ ಹೆಸರನ್ನು ಓದಿ ನನ್ನೆದೆ ಒಂದು ಕ್ಷಣ ನಿಂತೇ ಹೋಯಿತು!!
ಅಂದು ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ದಿವ್ಯ ಮತ್ತು ಪ್ರಿಯ ಎದ್ದು wash-room ಗೆ ಹೋದಾಗ ಕಿಟಕಿಯ ಗಾಳಿಯ ರಭಸಕ್ಕೆ ಅವರ ಬ್ಯಾಗ್ ನಿಂದ ಹಾರಿಬಂದ ಪತ್ರವಿದು. ಸಧ್ಯ ನನ್ನ ಕೈಯಲ್ಲೇ ಸಿಕ್ಕಿದೆ, ಅಮ್ಮ-ಅಪ್ಪನಿಗೆ ಸಿಕ್ಕಿದ್ದರೆ ಕಷ್ಟ. ಶರಣ ಇದನ್ನು ಬರೆದು ವರ್ಷಗಳೇ ಆಗಿವೆ. ತುಂಬಾ ಹಳೆಯದೆನ್ನಿಸುವ ಬಾಹ್ಯ ಪತ್ರದ್ದು.
ನಾನು, ಶರಣ, ದಿವ್ಯ ಹಾಗು ಪ್ರಿಯ engineering ನಿಂದಲೂ ಸ್ನೇಹಿತರು. 'ಕನ್ನಡ ಬರದೆ ಇರೋನು ಕಲಿಲಿ, ಕಲಿದೇ ಇರೋನು ಊರು ಬಿಡಲಿ' ಅಂತ ತ T-Shirt ಮಾಡಿಸಿ ನಾಲ್ಕು ಜನ ಹಾಕಿಕೊಂಡು ಊರು ತಿರುಗಿದ್ದೆವು. ಬೆಂಗಳೂರಿನಲ್ಲಿ ಬೇರೆ ಭಾಷೆ ಹಾವಳಿ ಜಾಸ್ತಿ ಆಗಿದೆ ಎಂದು. ನನಗೆ ಮೊದಲಿನಿಂದಲೂ ದಿವ್ಯಳ ಮೇಲೆ ಮನಸ್ಸು, ಅವಳಿಗೂ ಅದು ಗೊತ್ತಿತ್ತು. ಆದರೆ ಹೇಳಿಕೊಂಡಿರಲಿಲ್ಲ. ಶರಣ ನಮ್ಮ department ನ chocolate-boy ಇದ್ದಂತೆ. ಅವನ philosophical ಲೇವಡಿ ಮಾತುಗಳು, ಪಟ ಪಟಾಂತ ಆಡುವ ವ್ಯಂಗ್ಯ ಎಲ್ಲವು ಜನಪ್ರಿಯ. ದಿವ್ಯ, ಪ್ರಿಯ ಅಂತೂ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಿದ್ದರು. ಒಮ್ಮೆ ಹಂಜಿ ಮೇಡಂ ಶರಣನ ಜೊತೆ ತಿರುಗಬೇಡಿ, ನಿಮ್ಮ ಓದು ಕೂಡ ಹಾಳಗತ್ತೆ ಅಂತ ಹೇಳಿದ್ದಕೆ ಅವರ ಜೊತೆ ಜಗಳವಾಡಿ ಬಂದಿದ್ದರು ದಿವ್ಯ, ಪ್ರಿಯ. ಅಷ್ಟು ಗಟ್ಟಿ ಸ್ನೇಹ. ನನ್ನ ಶರಣನ ಜೋಡಿ ಶೋಲೆ ಸಿನಿಮಾದ ಜೈ-ವೀರು, ಮಿಂಚಿನ ಓಟ ಸಿನಿಮಾದ ಅನಂತ್-ಶಂಕರ್ ನಾಗ್ ಲೆವೆಲ್ ಗೆ ಫೇಮಸ್ ಕಾಲೇಜ್ ನಲ್ಲಿ. ಶರಣ ಯಾವಾಗಲೂ ಹೇಳ್ತಿದ್ದ 'ಲೇ ಶಿವ.. ನಂಗೆ doubt ಕಣೋ.. ಪ್ರಿಯ ಯಾಕೋ ನಿನ್ನನ್ನ ಇಷ್ಟ ಪಡ್ತಿದಾಳೆ ಅನ್ಸತ್ತೆ. ಯಾವಾಗ್ಲೂ ನಿನ್ನೇ ಕೇಳ್ತಾಳೆ, ನಿನ್ನೇ ನೋಡ್ತಾಳೆ ಬರೀ .. ಒಂದಲ್ಲ ಒಂದು ದಿನ propose ಮಾಡ್ತಾಳೆ ನೋಡ್ತಾ ಇರು.. ನೀವಿಬ್ಬರು ಒಂದಾದರೆ ಜೋಡಿ ಸರಿಯಾಗಿರತ್ತೆ. ನಮ್ಮಷ್ಟು ಖುಷಿ ಯಾರು ಇರಲ್ಲ.. after all only good friends can be good partners. ' ಅಂತಿದ್ದ. ನಾನು 'ಏಯ್ ಹೋಗಲೋ.. ಸುಮ್ನೆ ಏನೋ ಒಂದ್ ಹೇಳ್ತಿಯ.. ಪಾಪ ಅವ್ಳು ಸರಿಯಾಗೇ ಇದಾಳೆ. ಏನೇನೋ ಹೇಳಬೇಡ ' ಅಂತಿದ್ದೆ.
ಇದೆಲ್ಲ ಕಳೆದು ಈಗ ಐದು ವರ್ಷ! ನನ್ನ ಮದುವೆ ಆಗಿ ಒಂದು ವಾರ ಆಗಿದೆ. ಹನಿಮೂನ್ ಹೋಗೋ ಟೈಮ್ ನಲ್ಲಿ ದರ್ಶನಕ್ಕೆ ಹೋಗ್ತಾ ಇದ್ದಿವಿ, ಹರಿದ್ವಾರಕ್ಕೆ. ಅಮ್ಮನ ಆಸೆ. ನಾನು, ಅಮ್ಮ, ಅಪ್ಪ, ಪ್ರಿಯ, ದಿವ್ಯ, ಅತ್ತಿಗೆ ಎಲ್ಲರೂ ಇದೀವಿ. ಅವನಷ್ಟೇ ಇಲ್ಲ.. ಶರಣ. ಮದುವೆಗೆಂದು ಒಂದೇ ಒಂದು ದಿನ ಬಂದು ಹೋಗಿಬಿಟ್ಟ. ಸಧ್ಯಕ್ಕೆ Indian Air-Force ನಲ್ಲಿದಾನೆ. ಅವನಿದ್ದ ಆ ಒಂದು ದಿನ ನನಗೆ ಎಷ್ಟೋ ಖುಷಿ ಇತ್ತು. tension-free ಇದ್ದೆ. ಅವನಿದ್ದರೆ ಹಾಗೆ, ನಿರಾಳವಾಗಿರ್ತೇನೆ. ಜೊತೆಗೆ ನೀನಿರು ಸಾವಿರ ಬಂದರು ನಿಲ್ಲುತ್ತೇನೆ ಎಂದು ಅವಾಗು ಹೇಳ್ತಿದ್ದೆ, ಇಗಲೂ ಹೇಳ್ತೇನೆ. ಆದರೆ ಮದುವೆಗೆಂದು ಬಂದವನು ಬಡ್ಡಿ ಮಗ ಒಂದು ಉಡುಗೊರೆಯನ್ನು ಕೊಡದೆ ಹೋದ. Formality ಇರಬಾರದು ಸ್ನೇಹದಲ್ಲಿ ನಿಜ ಆದರೆ ನಾನು ಶರಣ ಏನು ಕೊಡಬಹುದು ಅಂತ expect ಮಾಡ್ಕೊಂಡ್ ಕೂತಿದ್ದೆ. ಇರಲಿ.. ಅವನು ಬಂದದ್ದೆ ಖುಷಿ.
ದಿವ್ಯ ಮತ್ತು ಪ್ರಿಯ ಒಂದೇ ಬ್ಯಾಗ್ ನಲ್ಲಿ ಬಟ್ಟೆ ಬರೆಗಳನ್ನ ಪ್ಯಾಕ್ ಮಾಡಿಕೊಂಡಿದ್ದರಿಂದ ಈ ಲೆಟರ್ ಯಾರದ್ದೆಂದು ಗುರ್ತು ಸಿಗಲಿಲ್ಲ. ಶರಣ ಇದನ್ನು ಯಾರಿಗೆ ಬರೆದಿರಬಹುದು ? ಇದಕ್ಕೆ ಉತ್ತರವಾಗಿ ಅವನಿಗೇನು ಬಂದಿರಬಹುದು ಅಂತ ಯೋಚಿಸತೊಡಗಿದೆ..
'ನೀನು ನಗಿಸಿದಾಗಷ್ಟೇ ನಗಬೇಕು ನಾನು. ನೀನು ನನ್ನನು ಅಳಿಸಿದಾಗೆಲ್ಲ ಸ್ವಂತದ ಭಾವನೆ. ಇನ್ನೂ ಅಳಬೇಕು ಅನ್ನಿಸುತ್ತೆ. ಅತ್ತರೆ ಬರಿ ನಿನಗಾಗಿ ಅಳಬೇಕು ನಾನು. ನಿನ್ನಿಂದ ಅಳಬೇಕು ಅನ್ನೋದಲ್ಲ. ಅಳಿಸಬೇಡ ಪ್ಲೀಸ್.. ಈ ಮೂರು ವರ್ಷ ಅದು ಹೇಗೆ ಕಳೆಯಿತೋ ಗೊತ್ತಿಲ್ಲ. ಹಿಂದೆ ತಿರುಗಿ ನೋಡಿದರೆ ಅಲ್ಲೆಲ್ಲ ಬರಿ ನೀನೆ. ನಾನು 'ಹ್ಞೂ!!' ಅನ್ನಲು ಅದು ನಿನಗೆ ಕೇಳಿಸುವುದೇ??.. ಕೇಳಿಸುವ ಹಾಗೆ ನನ್ನನು ಏನಾದರು ಕೇಳು.. ಹೇಳುವೆ. ಈಗೆಲ್ಲ ನಿನ್ನಿಷ್ಟವೇ ನನ್ನಿಷ್ಟ. ನನ್ನಿಷ್ಟ ನಿನಗಿಷ್ಟವಾಗದಿರಬಹುದು. ಅದೇನೆಂದು ತಿಳಿಸು.. ಮತ್ತೆ ಕಾದಿರುವೆ '
ಈ ಸಾಲುಗಳು ಹೇಳಿ ಮಾಡಿಸಿದಂತಿವೆ ಆ ಶರಣನ ಪತ್ರಕ್ಕೆ, reply ಆಗಲು. ಮೂರು ವರ್ಷಗಳ ಹಿಂದೆ Engineering ಕೊನೆಯ ವರ್ಷದ ಕೊನೆಗೆ ಪ್ರಿಯ ನನಗೆ ಕಳಿಸಿದ ಸಂದೇಶವಿದು. ಇಗಲೂ ನನ್ನ ಮೊಬೈಲ್ ನಲ್ಲಿ ಇದೆ. ಅವಳು ನಿಜವಾಗಿಯೂ ನನ್ನನು ಇಷ್ಟ ಪಡುತ್ತಿದ್ದಳು, ಶರಣನ ಮಾತು ಸುಳ್ಳಾಗಿರಲಿಲ್ಲ.
ದಿವ್ಯ ಮತ್ತು ಪ್ರಿಯ wash-room ನಿಂದ ಮರಳಿದರು. ಇಬ್ಬರು ಏನೋ ಮಾತನಾಡಿ ನಗುತ್ತಲೇ ಬಂದು ಕುಳಿತರು. ನಾನು ನನ್ನ ಕೈಯಲ್ಲಿದ್ದ ಆ ಪತ್ರವನ್ನು ಮರೆ ಮಾಡಿದೆ. ಅಮ್ಮನ ಪಕ್ಕ ಪ್ರಿಯ ಕೂತಿದ್ದಳು, ಅವಳ ಪಕ್ಕ ದಿವ್ಯ. ಎದುರಿನ ಸೀಟ್ ನಲ್ಲಿ ನಾನು, ಅಪ್ಪ ಮತ್ತು ಮಾವ.
ಅಮ್ಮ ಕೇಳಿದರು : 'ಪ್ರಿಯಾ.. ಆ ಕೆಂಪು ಬಟ್ತೆಯೊಳಗಿದ್ದ ಬೆಳ್ಳಿ ಗುಣಗಡಿಗೆಯನ್ನು ಇಟ್ಟಿದ್ದಿಯೇನಮ್ಮ ಬ್ಯಾಗ್ ನಲ್ಲಿ ?'
ಪ್ರಿಯ : ಹಾಂ ಮಾ.. ಇಟ್ಟಿದಿನಿ.. ಎಲ್ಲ ಇದೇ.. ನೀವು ಆರಾಮಾಗಿ ಮಲ್ಕೊಳಿ..
ದಿವ್ಯ ಗಾಳಿಯನ್ನು ತಾಳದೆ ಕಿಟಕಿಯನ್ನು ಹಾಕಿದಳು.
ನಾನು, ಪ್ರಿಯ, ಅಪ್ಪ ಮತ್ತು ದಿವ್ಯ ಇಸ್ಪೀಟಿನ ಎಲೆಗಳನ್ನು ತೆರೆದು ಆಡಲು ಕೂತೆವು. ಎಲೆ ಜೋಡಿಸಿಕೊಳ್ಳುವಾಗ ನನ್ನ ಬೆರಳಲ್ಲಿನ ಹೊಚ್ಚ ಹೊಸ ಬಂಗಾರದ ಉಂಗುರುದ ಮೇಲೆ ಕೆತ್ತಲಾಗಿದ್ದ "SD" ಅಕ್ಷರಗಳು ಆ ರೈಲಿನ ಮಬ್ಬು ಬೆಳಕಿನಲ್ಲೂ ಮಿಂಚುತ್ತಿದ್ದವು.
ಯಾರು ಕೊಡಲಾಗದ ಉಡುಗೊರೆಯನ್ನು ಶರಣ ನನಗೆ ಕೊಟ್ಟಿದ್ದ..