ಕರ್ರಗಿದ್ದ ತುಟಿಗಳನ್ನು ಮುಟ್ಟಿ ಅವಳಂದಳು - 'ಬಹಳ ಕನಸು ಕಾಣುತ್ತೀಯ ನೀನು '.
'ಜಾಸ್ತಿ ಸಿಗರೇಟ್ ಸೇದಿದರೂ ತುಟಿಗಳು ಕರ್ರಗಾಗುತ್ತವೆ' - ನಾನೆಂದೆ.
'ಅಷ್ಟು ಸೇದಬೇಡ. ಕಣ್ಣುಗಳನ್ನು ನೋಡು ' - ಅವಳು
ನನ್ನ ಕಣ್ಣುಗಳನ್ನು ನೋಡಿಕೋ ಎಂದಿದ್ದಳು, ಅಷ್ಟು ಕಡುಗೆಂಪಾಗಿರುವುದಕ್ಕೆ.
'ನೋಡ್ತಾ ಇದ್ದೀನಿ ' -ನಾನು
ನಸುನಕ್ಕು ನನ್ನ ಗಲ್ಲದ ಮೇಲಿದ್ದ ಅವಳ ಕೈ ಇಳಿಸಿ ಹೊರಟು ಹೋದಳು .
ಅವಳಿಗಿಂತ ಅವಳ ಬೆನ್ನೇ ನನ್ನನ್ನ ಜಾಸ್ತಿ ಪ್ರೀತಿಸುತ್ತಿತ್ತು. ನನಗೂ ಅದೇ ಇಷ್ಟ, ಹಾಗೇ ಇದ್ದು ಬಿಟ್ಟಿದ್ದೆ.
ಮುತ್ತು :
ಕೊಟ್ಟರೊಂದಾಗಿಬಿಡುತ್ತದೆ
ಸುಮ್ಮನಿರು.
ಕೊಡದೇ ಸಾವಿರವಾಗಲಿ,
ಆಸೆಗಳು.
ಸಾರ್ವಕಾಲಿಕ:
ನೀ ಬರದ ಖಾತರಿಯಲಿ, ಇಂದು ಮತ್ತೆ ಕಾಯುವೆ.
ಒಲಿಯಬೇಡ ಇಂದಾದರೂ, ನಾಳೆ ಮತ್ತೆ ಸಾಯುವೆ.
ಹೇಳಬೇಡ ನಾನು ಕೇಳಿದರೆ,
ಹಂಗಿರದಿರಲಿ.
ಕೇಳಬೇಡ ನಾನು ಹೇಳಿದರೆ,
ಹಂಗಿರದಿರಲಿ.
ಅಪರಿಚಿತರಂತೆ ನೋಡಿ,
ಕೆಂದು ಮುಂಗುರುಳ ನಡುವಿಂದ.
ಸದ್ದು ಮಾಡದೆ ಮೆಲ್ಲಗೆ ಜಾರಿಬಿಡು ಎಂದಿನಂತೆ,
ಮುದ್ದಾದ ಭಯಂಕರವಾಗಿ.