Saturday, June 16, 2018

ಬೂಬೂ



 'ಬೂಬೂ...!!' ಎಂದು ಕೂಗುತ್ತ, ಛಾ ಕುಡಿಯಲು ಬಾ ಎಂದು ಸನ್ನೆ ಮಾಡಿ ಕರೆದಳು ಅಕ್ಕ, ಹಿತ್ತಲಿನಲ್ಲಿ ರಾಶಿ ಭಾಂಡಿಗಳ ನಡುವೆ ಬೆವರಾಗುತ್ತಿರುವವಳನ್ನ. 

ಅಡುಗೆ ಮನೆಯಿಂದ ಬಂದ ಛಾ ಲೋಟವೊಂದು ಪಡಸಾಲಿಯ ಟೀಪಾಯಿ ಮೇಲೆ ಬೆಚ್ಚಗೆ ಹೊಗೆ ಬಿಡುತ್ತ ಬೂಬೂಳನ್ನೇ ದಿಟ್ಟಿಸಿ ನೋಡಹತ್ತಿತು. ಅಕ್ಕನ ಅವಸರ ಬಲ್ಲ ಬೂಬೂ ತನ್ನ ಭಾಂಡಿಗಳನ್ನು ಬೇಗ ಮುಗಿಸಲು ಶುರುಮಾಡಿದಳು.

ತನ್ನ ಅಮ್ಮ ಅಡುಗೆ ಮನೆಯ ಕಪಾಟುಗಳ ಸರಂಜಾಮುಗಳನ್ನು ಕಿತ್ತು ಧೂಳು ಝಾಡಿಸುವ ಕೆಲಸದಲ್ಲಿ ಮಗ್ನಳಾಗಿದ್ದನ್ನು  ಕಂಡ ಪುಟ್ಟೂ ಅವಳ ಕಣ್ಣು ಮರೆಸಿ ಅಲ್ಲಿಂದ ಕಾಲು ಕಿತ್ತು ಹೊರ ಓಡಿಬಂದ. ಟೀಪಾಯಿಯ ಮೇಲಿಟ್ಟ ಛಾ ಕಪ್ಪಿನ ಮೇಲೆ ತೇಲುತ್ತಿದ್ದ ದುಂಡು ಕೆನೆಯ ಪದರನ್ನು ತನ್ನ ತೋರುಬೆರಳಿನಲ್ಲಿ ಅದ್ದಿ ಆಡಿದ. ಅಷ್ಟರಲ್ಲೇ ಪಡಸಾಲಿಗೆ ಬಂದ ಬೂಬೂ ಪುಟ್ಟೂವಿನ ಬೆರಳನ್ನು ತನ್ನ ಸೆರಗಿನಿಂದ ಒರೆಸಿ ಛಾ ಲೋಟವನ್ನು ಎತ್ತಿಕೊಂಡಳು. 'ಕೆನಿ ಬೂಬೂ!!, ಅಂದ್ರ ಛಾ ಆರೇತಿ' ಎಂದು ಒಂದೊಂದೇ ಪದ ಜೋಡಿಸಿ ಅಮ್ಮ ಹೇಳಿಕೊಟ್ಟದ್ದನ್ನು ಹೇಳಿದ ಪುಟ್ಟೂ. 'ಹೌದೂ??' ಎಂದು ಮುದ್ದಿನಿಂದ ಪುಟ್ಟೂ ನ ಗಲ್ಲ ಹಿಂಡಿ ಅಡುಗೆ ಮನೆಯತ್ತ ನಡೆದಳು ಬೂಬೂ.

'ಏನಂತಾನ್ ಅವಾ ಉಡಾಳ?' ಅಂತ ಅಕ್ಕ ಬೂಬೂಳನ್ನು ನೋಡಿ ಕೇಳಲು, 'ಏನಿಲ್ಲಕ್ಕಾ' ಅಂತ ನಕ್ಕಳು. ಛಾ ಆರಿದ್ದು ತಿಳಿದರೆ ಅಕ್ಕ ಮತ್ತೊಮ್ಮೆ ಬಿಸಿ ಮಾಡಿ ಕೊಡುವ ಗೋಜಿಗೆ ಹೋಗಬಾರದು. ಅಕ್ಕನ ಮನೆಯಲ್ಲಿ ಕೆಲಸ ಮಾಡುತ್ತಾ ಈಗ ಐದು ವರ್ಷಗಳು, ತನಗೆ ಮದುವೆಯಾಗಿ ಈ ಊರಿಗೆ ಬಂದು ಕೂಡ ಅಷ್ಟೇ ವರ್ಷ. ಗಂಗೀಮರಡಿಯ ಕೇರಿಯಲ್ಲಿ ಒಂದು ಪುಟ್ಟ ತಗಡಿನ ಮನೆಯಲ್ಲಿ ಅವಳ ಸಂಸಾರದ ಬಿಡಾರ. ಗಂಡನ ಹೆಸರು ಮಲಿಕಸಾಬ. ಮಲ್ಕಪ್ಪಣ್ಣ ಎಂದೇ ಜನರಲ್ಲಿ  ಬೆರೆತ ಮಲಿಕಸಾಬ ಬೂಬೂಗಿಂತ ಹದಿನೈದು ವರ್ಷ ದೊಡ್ಡವನು. ಊರಲ್ಲಿ ಸಣ್ಣ ಪುಟ್ಟ ಬಡಿಗಿ ಕೆಲಸವನ್ನು ಮಾಡಿಕೊಂಡಿದ್ದ ಮಲ್ಕಪ್ಪಣ್ಣ ಬೂಬೂಳ 'ಅಕ್ಕ'ನ ಮನೆಯ ಕಪಾಟು, ಕಿಟಕಿಗಳಿಗೂ ಪರಿಚಯ. ರಾಮಗುಡಿಯ ತೇರು ರಿಪೇರಿ ಕೆಲಸ ತುಸು ಕೈ ಹಿಡಿಯುತ್ತಿದ್ದುದರಿಂದ ಈಗೀಗ ಮಲ್ಕಪ್ಪಣ್ಣ ಮನೆಗೆ ಬರಲು ಆರರ ಸಂಜೆಯಾಗುತ್ತದೆ. ಸಂಜೆ ತನ್ನ ಯಜಮಾನ ಮನೆಗೆ ಬರುವ ಮುನ್ನ ಅಂಗಳದ ಕಸ ಗೂಡಿಸಿ, ನೀರು ಚಿಮುಕಿಸಿ, ಕಿಟಕಿಯಡಿಗೆ ಬಂದು ಕುಳಿತರೆ ತನಗೆ ಗಂಗೀಮರಡಿಯ ಮಸೀದಿಯ ಅಜಾನ್ ಕೇಳಿಸುತ್ತದೆ. ಕುಳಿತಲ್ಲಿಂದಲೇ ಕಿಟಕಿಯ ಕಂಬಿಗಳನ್ನು ಸವರಿ ಕೈ ಮುಗಿದು, ಮನೆಯ ಟ್ಯೂಬ್ ಲೈಟ್ ಹಚ್ಚುತ್ತಾಳೆ.

ಮಲಿಕಾಸಾಬನನ್ನು ಬಿಟ್ಟರೆ ಆ ಊರಿನಲ್ಲಿ ಬೂಬೂಳಿಗೆ ಯಾವ ಸಂಬಂಧಿಕರೂ ಇರಲಿಲ್ಲ. ಇಷ್ಟು ದೂರದ ಊರಿಗೆ ತನ್ನ ಮದುವೆ ಗೊತ್ತು ಮಾಡಿದ ತನ್ನ ಚಾಚಾನ ನೆನೆದು ಆಗಾಗ ಅಳು ಬರುತ್ತದೆ. ರೈಲಿನಲ್ಲಿ ತನ್ನೂರಿಗೆ ಹೋಗಲು ಎರಡು ರಾತ್ರಿ ಬೇಕು. ಕೊನೆ ಬಾರಿ ಊರಿಗೆ ಹೋದಾಗ ಚಾಚಾ ಮಂಚಕ್ಕೇ ಅಂಟಿಕೊಂಡಂತಿದ್ದ, ಈಗ ಹೇಗಿದ್ದಾನೋ. ಮುಂದಿನ ತಿಂಗಳು ಹೇಗಾದರೂ ಮಾಡಿ ಹೋಗಿ ಚಾಚಾನನ್ನು ನೋಡಿಕೊಂಡು ಬರೋಣ ಎಂದು ಗಂಡನನ್ನ ಬೇಡಿ ಒಪ್ಪಿಸಿದ್ದಳು. ಊರಿಗೆ ಹೋಗುವುದ ನಿಶ್ಚಯಿಸಿದ ದಿನದಿಂದ ಸರಿಯಾಗಿ ಮೂವತ್ತು ದಿನಗಳನ್ನು ಎಣಿಸಿ ಗೋಡೆಯ ಕ್ಯಾಲೆಂಡರ್ ಮೇಲೆ ತನ್ನ ಕಾಜಲ್ ನಿಂದ ಒಂದು ಸಣ್ಣ ಚುಕ್ಕಿಯನ್ನು ಇಟ್ಟಿದ್ದಾಳೆ. ನೆನಪಾದಾಗ ಒಮ್ಮೆ ಪುಟ ತಿರುಗಿಸಿ, ಪುಟದ ಹಿಂದೆ ಅಡಗಿ ಕುಳಿತ ಆ ಚುಕ್ಕಿಯನ್ನು ನೋಡಿ ಸಮಾಧಾನವಾಗುತ್ತಾಳೆ. 'ನೀ ನಿನ್ನ ಚುಕ್ಕಿ ಮುಟ್ಟುದು ಇರ್ಲಿ, ಚಾಚಾ ಅದನ್ನ ಮುಟ್ಟತಾನೇನ ನೋಡೋಣು ತಡಿ ಇನ್ನ ' ಎಂದು ಗೇಲಿ ಮಾಡಿದ ಮಾಲಿಕಸಾಬನ ಮೇಲೆ ಕೋಪಿಸಿಕೊಂಡವಳು, ಅವನ ಬಾಯಿಂದಲೇ ತೋಬಾ ತೋಬಾ ಅನಿಸಿದ್ದಳು. ಈ ಚಾಚಾ ಚುಕ್ಕಿಯ ಸಂಭ್ರಮವನ್ನು ತನ್ನ ಅಕ್ಕನ ಜೊತೆಗೂ ಹಂಚಿಕೊಂಡು ಖುಷಿಪಟ್ಟಿದ್ದಳು. ಗಂಡನ ಬಿಟ್ಟರೆ ಅಕ್ಕನೇ ಬೂಬೂಳಿಗೆ ಆಸರೆ, "ಸಂಜೀಮುಂದ ಲೇಟ್ ಆಗಿ ಹೋಗೂ ಧವತಿ ಏನೈತಿ ನಿಂಗ, ದಾರಿ ಕಟ್ಟಿಗೆ ಆ ಉಡಾಳ್ ಹುಡಗೋರು ಕುಂತಿರ್ತಾವ ಆ ಹೊತ್ತಿನ್ಯಾಗ ಮೊದಲ" ಎಂದು ಅಕ್ಕ ಅವಳನ್ನು ಜಬರಿಸಿ ಬೇಗ ಮನೆಗೆ ಅಟ್ಟಿದ್ದು, ಪುಂಡರ ಗುಂಪನ್ನು ನೋಡಿದಾಗ ನೆನಪಾಗಿ ಮುಗುಳುನಗುತ್ತಾಳೆ. ಕಟ್ಟೆಯ ಹುಡುಗರು ಮರಳಿ ನಕ್ಕು ತುಸು ದೂರ ಹಿಂಬಾಲಿಸಿದರೆ ಹೆದರಿ ವೇಗ ಪಡೆಯುತ್ತಾಳೆ. ತನಗೆ ತಿಳಿಯದೇ ಇದ್ದ ಎಷ್ಟೋ ವಿಷಯಗಳನ್ನ ತನ್ನಕ್ಕನಿಂದ ತಿಳಿದುಕೊಂಡಿದ್ದಾಳೆ, ತಿಂಗಳಿಗೆ ಐದು ದಿನ ತಾನು 'ಹೊರಗಾದಾಗ' ತನ್ನನ್ನು ರಾತ್ರಿ ಮುಟ್ಟಕೂಡದು ಎಂದು ತನ್ನ ಯಜಮಾನನಿಗೆ ತಾನೇ ತಿಳಿ ಹೇಳಿದ್ದಾಳೆ. ಇಷ್ಟೆಲ್ಲಾ ಗಟ್ಟಿತನ, ತಿಳುವಳಿಕೆ ಅವಳಿಗೆ ದೊಡ್ಡಮನೆ ಅಮ್ಮನವರಿಂದಲೇ ಬಂದಿರುವುದು ಎಂದು ಗೊತ್ತಿದ್ದೂ ಮಲ್ಕಪ್ಪಣ್ಣ "ಅರೆ! ಭಾಳಾ ಶಾಣೆ ಆಗಿ ನೋಡ್ ನೀ ಈಗೀಗ" ಅಂತ ಕಾಡಿಸಿ ನಗುತ್ತಾನೆ. 

ಆವತ್ತು ಮಧ್ಯಾಹ್ನ ಗಂಗೀಮರಡಿಯಲ್ಲಿ ಎಂದಿನಂತೆ ತುಸು ಪೋಲೀಸು ವ್ಯಾನುಗಳು ಸಾಲುಗಟ್ಟಿ ನಿಂತಿದ್ದವು. ಊರಿನಾಚೆ ಇರುವ ಈ ಕೇರಿಯಲಿ ಈ ದೃಶ್ಯ ಹೊಸದೇನಲ್ಲ, "ರಾಮನವಮಿ ಬಂದಿದ್ಕ ಪೊಲೀಸ್ ಬಂದೂಬಸ್ತ್ ಜಾಸ್ತಿ ಆಗೇತಿ" ಎಂದು ನಿನ್ನೆ ರಾತ್ರಿ ಗಂಡ ಹೇಳಿದ ಮಾತು ನೆನಪಾಗಿ ಆ ವ್ಯಾನುಗಳಿಂದ ತುಸು ದೂರದಿಂದಲೇ ಹಾದು ಅಕ್ಕನ ಮನೆಗೆ ಹೆಜ್ಜೆ ಹಾಕಿದಳು. ವಾರೆಗಣ್ಣಿಂದಲೇ ವ್ಯಾನುಗಳನ್ನು ಎಣಿಸುತ್ತ ಬೇಗ ಅಕ್ಕನ ಮುಂದೆ ಇದೆಲ್ಲ ಕಥೆ ಮಾಡಿ ಹೇಳಬೇಕು, "ಇವತ್ತ  ಎಣಿಸಿ ಹನ್ನೆರಡು ಪೊಲೀಸ್ ಗಾಡಿ ಬಂದಾವ್ ಅಕ್ಕಾ!". "ಏನ್ ಬಿಡಾ ಬೂಬೂ, ಸುಮ್ಮ ಕಡ್ಡೀನ ಗುಡ್ಡಾ ಮಾಡ್ತಾವ್ ಮಂದಿ. ಪಾಪ್ ಪೊಲೀಸರು ಹೆಂಡತಿ ಮಕ್ಕಳ್ನ ಬಿಟ್ಟು ಈ ಪುಢಾರಿಗಳ ಮುಕಳಿ ಕಾಯ್ಬೇಕು" ಎಂದು ಏನೋ ಒಂದನ್ನ ಹೇಳಿ ನಕ್ಕು ಬಿಡುತ್ತಾಳೆ ಅಕ್ಕ. ತನ್ನ ಮನದಲ್ಲಿದ್ದ ಎಷ್ಟೋ 'ಗುಡ್ಡ' ಗಳನ್ನ ಹೀಗೇ ಒಂದೇ ಕ್ಷಣದಲ್ಲಿ ಅಕ್ಕ 'ಕಡ್ಡಿ' ಮಾಡಿಬಿಡುತ್ತಾಳೆ.

ಗೇಟು ತೆಗೆದು ಒಳ ಬಂದ ಬೂಬೂಳನ್ನು ನೋಡಿ ಅಕ್ಕ ಅಡುಗೆ ಮನೆಯ ಕಿಟಕಿಯಿಂದಲೇ ಬಾ ಎಂದಳು. ಸೆಕ್ಯೂರಿಟಿ ಗಾರ್ಡ್ ಖಾನ್ ಭಯ್ಯಾ "ಬಾರವಾ ಸೌಕಾರ್ತಿ!" ಅಂತ ಚಾಷ್ಟಿ ಮಾಡಿ ನಕ್ಕು ಬರಮಾಡಿಕೊಂಡ. ಒಳಗೆ ಬಂದವಳೇ ತನ್ನ ಬುರ್ಖಾ ತೆಗೆದು ಚೀಲದಲ್ಲಿಟ್ಟು ಹಿತ್ತಲಿನ ಕಡೆ ನಡೆದಳು. ಹಿತ್ತಲಿನಲ್ಲಿದ್ದ ಪುಟ್ಟೂ ಅವಳನ್ನು ನೋಡಿ ಅವರಮ್ಮನ ಕಡೆಗೆ ಓಡಿದ. ಬೂಬೂ ನೀರಲ್ಲಿ ಅದ್ದಿದ ಬಟ್ಟೆಗಳನ್ನು ಒಂದೊಂದಾಗಿ ತೆಗೆಯುವಾಗ ಪಡಸಾಲಿಯ ಬಾಗಿಲಿನಿಂದ ಪುಟ್ಟೂ ಕಯ್ಯಲ್ಲಿ ಛಾ ಕಪ್ ಹಿಡಿದುಕೊಂಡು ಹಗುರವಾಗಿ, ಒಂದೊಂದೇ ಹೆಜ್ಜೆ ಹಾಕುತ್ತ, ಛಾ ಕೆಳ ಬೀಳಿಸದೆ ಅವಳತ್ತ ಬರುವುದನ್ನು ನೋಡಿ ಬಟ್ಟೆ ಬಿಟ್ಟು ಅವನತ್ತ ಓಡಿದಳು. "ಬೂಬು, ಛಾ!" ಎಂದು ಅರ್ಧಮರ್ಧ ಹೇಳಿದ ಪುಟ್ಟುವಿನ ಕೆನ್ನೆಗೆ ಮುತ್ತಿಡುತ್ತ "ಛಾ!!" ಎಂದು ಅವನ  ಧಾಟಿಯಲ್ಲೇ ಹೇಳಿ ನಕ್ಕಳು. "ಅಕ್ಕಾ, ಇವಾ ಜಳಕಾ ಮಾಡ್ಯಾನ್ರೀ?" ಅಂತ ಅಲ್ಲಿಂದಲೇ ಕೂಗಿ ಅಕ್ಕನನ್ನು ಕೇಳಿದಳು. "ಆಗ್ಲಿಂದ ಕರ್ಯಾಕತ್ತೀನಿ ಬರೇ ಓಡ್ತಾನಾ.. ಅವರಪ್ಪಾ ದಿನಾ ಗಿಡಕ್ಕ ನೀರು ಹಾಕ್ಬೇಕು ಅಂತ ಹೇಳ್ಯಾನಂತ ಇವ ಸುಬ್ಬ ಅದನ ಮಾಡಾಕ್ ಹೋಗಿ ಇಷ್ಟು ರಾಡಿ ಯಬಸ್ಯಾನ ನೋಡು" ಅಂತ ಪುಟ್ಟೂನ ಶರ್ಟ್ ಝಾಡಿಸುತ್ತ ಅವನ ಚಡ್ಡಿ ಕಳಚಿದಳು. "ಅಯ್ಯೋ.. ಪಪ್ಪಿ ಶೇಮ್" ಅಂತ ಲೇವಡಿ ಮಾಡಿದ ಬೂಬೂಳಿಗೆ "ಹ್ಹೀ..!!"' ಎಂದು ಹಲ್ಲು ಗಿಂಜುತ್ತ ಅಲ್ಲಿಂದ ಬಚ್ಚಲು ಮನೆಗೆ ಓಡಿದನು ಪುಟ್ಟೂ.  ಅವನ ಹಿಂದೆಯೇ ಓಡಿ  ಬಂದ ಅಕ್ಕ ಬಚ್ಚಲು ಮನೆಯಲ್ಲಿ ಬಿಸಿ ನೀರಿಗೆ ತಣ್ಣೀರು ಬೆರೆಸಿ, ಪುಟ್ಟೂವಿನ ಗುಣಗಡಿಗೆ ತೆಗೆದು ಶೆಲ್ಫ್ ಮೇಲೆ ಇಡುತ್ತಾಳೆ. ಪುಟ್ಟು ಆಟವಾಡುತ್ತ ಬಕೆಟ್ ನೀರ ಮೇಲೆ ತನ್ನ ಸಣ್ಣ ಕಾರನ್ನು ಓಡಿಸುತ್ತಾನೆ. ಸ್ವಲ್ಪ ಹೊತ್ತಿನ ನಂತರ ಭಾಂಡೀ ಸದ್ದಾಗಿ ಅಕ್ಕ ಕಿಟಕಿಯಾಚೆ ನೋಡಿದರೆ ಬೂಬು ಗೇಟಿನಿಂದ ಹೊರಕ್ಕೆ ಓಡುತ್ತಿದ್ದಾಳೆ. ಹೆದರಿಕೆಯಾಗಿ ಹೊರ ಬಂದು ನೋಡಿದರೆ ಬೂಬು ಹಾಗು ಮತ್ತೊಬ್ಬ ಪುಟ್ಟ ಹುಡುಗ ಅವರ ಮನೆಯತ್ತ  ಓಡುತ್ತಿದ್ದಾರೆ. ಏನು ತೋಚದಾಗಿ ಅಕ್ಕ ಪುಟ್ಟುವಿನತ್ತ ಓಡಿ ಬಂದು ಅವನನ್ನು ಬಚ್ಚಲಿನಿಂದ ಹೊರನಡೆಸಿ ಟವೆಲ್ ಸುತ್ತಿ ಮತ್ತೆ ತಿರುಗಿ ಬಂದು ಬಾಗಿಲಿನತ್ತ ನಿಂತು ನೋಡುತ್ತಾಳೆ. ಅಷ್ಟರಲ್ಲಿ ಒಂದೆರೆಡು ಪೋಲೀಸು ವ್ಯಾನುಗಳು ಗಂಗೀರಾಮರಡಿಯಿಂದ ಸದ್ದು ಮಾಡುತ್ತಾ ಊರೊಳೊಗೆ ಹೋಗುತ್ತವೆ. ಏನೋ ತೋಚಿದಂತಾಗಿ ಅಕ್ಕ ಹೊರ ಓಡಿ ಮನೆಯ ಮೇನ್ ಗೇಟು ಹಾಕು ಎಂದು ಖಾನ್ ಅಣ್ಣನಿಗೆ ಹೇಳಿ ಬಂದು ಎಲ್ಲ ಕಿಟಕಿಗಳನ್ನು ಹಾಕಿ ಪುಟ್ಟುವಿನ ಹಿಡಿದು ಕುಳಿತು ತನ್ನ ಮನೆಯವರಿಗೆ ಅವಸರದಿ ಫೋನು ಮಾಡುತ್ತಾಳೆ.   
         
ಗಂಗೀಮರಡಿಯಲ್ಲಿ ಮತ್ತೆ ಹಿಂದೂ-ಮುಸ್ಲಿಂ ದಂಗೆಗಳಾಗಿವೆ, ಇಬ್ಬರು ಮುಸ್ಲಿಮರನ್ನು ರಾಮ ಗುಡಿಯ ಬಳಿ ಕೊಲ್ಲಲಾಗಿದೆಯಂತೆ, ಅವರಿಬ್ಬರೂ ಮಂದಿರದ ಕೆಲಸ ಮಾಡುತ್ತಿದ್ದವರೇ ಅಂತೆ, ಸಂಜೆ ಒಳಗೆ ಕರ್ಫ್ಯು ಘೋಷಣೆ ಆಗುತ್ತದೆಯಂತೆ, ಮನೆಯತ್ತ  ಓಡುತ್ತಿದ್ದ ಬೂಬುವಿಗೆ ಹೀಗೆ ಏನೇನೋ ಕಿವಿಗೆ ಬೀಳುತ್ತಿದ್ದಂತೆಯೇ ಅವಳ ಆತಂಕ ಮುಗಿಲು ಮುಟ್ಟುತ್ತಿದೆ. ಇವತ್ತು ಕಟ್ಟೆಯ ಮೇಲೆ ಪುಢಾರಿಗಳಿಲ್ಲ, ಆಗಲೇ ತನಗೆ ಕಂಡ ಹನ್ನೆರೆಡು ಪೊಲೀಸ್ ವ್ಯಾನುಗಳು ಆ ಜಾಗದಲಿಲ್ಲ, ಮನೆ ಹತ್ತಿರವೇನೋ ದೊಡ್ಡ ಬೆಂಕಿಯ ಹೊಗೆಯೊಂದು ಕಾಣಿಸಿದಂತಿದೆ, ಜನರ ಕೂಗುಗಳು ಕೇಳಿಬರುತ್ತಿವೆ. ಮತ್ತೊಂದು ವ್ಯಾನು ಜನರನ್ನ ತುಂಬಿಕೊಂಡು ಊರೆಡೆಗೆ ಹೋಯಿತು ಸದ್ದು ಮಾಡುತ್ತಾ ಹೋಯಿತು. ಮಸೀದಿಯ ಬಾಗಿಲು ಹಾಕಿದೆ. ಮಲಿಕಸಾಬ!! ಅಯ್ಯಯ್ಯೋ! ಮಲಿಕಸಾಬ ಒಂದು ವಾರದಿಂದ ರಾಮ ಗುಡಿಯ ಬಡಿಗಿ ಕೆಲಸವನ್ನೇ ಮಾಡುತ್ತಿದ್ದಿದ್ದು, ಈ ಜಗಳದಲ್ಲಿ ಅವನೆಲ್ಲಿದ್ದಾನೋ! ಒಂದೇ ಕ್ಷಣದಲ್ಲಿ ಸಾವಿರ ಯೋಚನೆಗಳು ಬಂದು ಆ ಸುಡು ಬಿಸಿಲಿನಲ್ಲಿ ಅವಳ ತಲೆ ಸುಟ್ಟಂತಿದೆ. ಜೋರಾಗಿ ನಡೆಯುತ್ತಿದ್ದ ಅವಳು ಈಗ ಹುಚ್ಚಿಯಂತೆ ಮನೆಯತ್ತ ಓಡ ಹತ್ತಿದ್ದಾಳೆ. 

ತನ್ನ ಮನೆಯ ಹಿಂದಿನ ಸಣ್ಣ ಬೀದಿಯಲ್ಲಿ ಅಲ್ಲಲ್ಲಿ ಟೈರು, ಕಟ್ಟಿಗೆಗಳಿಗೆ ಬೆಂಕಿ ಹಾಕಲಾಗಿದೆ. ಓಡುತ್ತ ಮನೆಯತ್ತ ಹೋಗಿ ನೋಡಿದರೆ ಮನೆಗೆ ಕೀಲಿ ಹಾಕಿದ್ದೇ ಇದೆ. ಪಕ್ಕದ ಮನೆಯ ಬಾಗಿಲು ಬಡಿಯುತ್ತಾಳೆ. ಬಾಗಿಲು ತೆಗೆದಿದ್ದೇ ಫಾತಿಮಾ ಅಕ್ಕ ಅಳುತ್ತ ಬೂಬುಳನ್ನು ತಬ್ಬಿಕೊಳ್ಳುತ್ತಾಳೆ. ಮೊದಲೇ ಹೆದರಿಕೆಯಲ್ಲಿದ್ದ ಬೂಬು ಇದೆಲ್ಲ ಕಂಡು ಇನ್ನೂ ಕಂಗಾಲಾಗುತ್ತಾಳೆ. ರಾಮ ನವಮಿಯ ತಯಾರಿ ಮಾಡುವಲ್ಲಿ ಕೆಲ ಕಿಡಗೇಡಿಗಳು ಕಲ್ಲು ಎಸೆದರಂತೆ, ನಮ್ಮವರು-ಅವರು ಸೇರಿ ಹೊಡೆದಾಡಿದರೆಂತೆ. ಪೊಲೀಸರು ಅಲ್ಲಿ ಬಂದು ಲಾಠಿ ಚಾರ್ಜ್ ಮಾಡಿ ಅದೆಲ್ಲ ಸಂಭಾಳಿಸುವಷ್ಟರಲ್ಲೇ ಇತ್ತ ಮಸೀದಿಯ ಹತ್ತಿರ ಕೆಲವರನ್ನು ಎಳೆದು ತಂದು ಕೂಡಿ ಹಾಕಿದ್ದಾರಂತೆ. ಹೀಗೆ ಎಲ್ಲ ಅಂತೇ ಕಂತೆಗಳ ಹೇಳಿ ಇನ್ನು ಜೋರಾಗಿ ಅಳುತ್ತಾ ತನ್ನ ಮಕ್ಕಳನ್ನು ತಬ್ಬಿದಳು ಫಾತಿಮಕ್ಕ. "ನಮ್ಮ್ ಹಿರಿಯಾಗ ಹೋಗಬ್ಯಾಡ ಅಂತ ಬಡಕೊಂಡ್ಯಾ, ಇಲ್ಲೇ ಮಸೀದಿ ಕಡೆ ಹೋಗಿ ಬರ್ತೀನಿ ಅಂತ ಉಟ್ಟ ಅರಬ್ಯಾಗ ಓಡಿ ಹೋದ. ಈಗ ನೋಡಿದ್ರ ಮರ್ಡರ್, ಪರ್ಡೆರ್ ಅಂತ ಸುದ್ದಿ ಬರಕತ್ತಾವ" ಅಂತ ಒಂದೇ ಉಸಿರಲ್ಲಿ ಹೇಳಿ ಮತ್ತೆ ಅಳತೊಡಗಿದಳು. ಇದೆಲ್ಲ ಕೇಳಿ ಗುಡಿಯ ಕೆಲಸಲ್ಲಿದ್ದ ಮಲಿಕಸಾಬನ ನೆನಪಾಗಿ ದುಃಖ ಇಮ್ಮಡಿಯಾಗಿ ಧಸಗ್ಗೆಂದು ನೆಲಕ್ಕೆ ಕುಸಿದು ಬಿಟ್ಟಳು ಬೂಬು.   

ಒಂದೆರಡು ಘಂಟೆಗಳ ನಂತರ ಫಾತಿಮಕ್ಕನ ಗಂಡ ಹಾಗೂ ಮಲಿಕಸಾಬ ಸೇರಿದಂತೆ ಹತ್ತು ಹದಿನೈದು ಜನರು ಗಾಡಿಗಳನ್ನು ಇಳಿದು ಧಡಧಡನೆ ಓಡಿ ಬಂದು ಇಫ್ತಾರ್ ಮಾಸ್ಟರ್ ರ ಮನೆ ಹೊಕ್ಕುತ್ತಾರೆ. ಮಲಿಕಾಸಾಬನಿಗೆ ಕಾಲಿಗೆ ಚೂರು ಗಾಯವಾಗಿದೆ, ಓಡಾಟದಲ್ಲಿ ತನ್ನದೇ ಉಳಿ ತನಗೆ ತಾಕಿ ಹೀಗಾಯಿತು ಎಂದು ಅವನು ಹೇಳಿದ ಮೇಲೆ ಬೂಬುಳಿಗೆ ತುಸು ಸಮಾಧಾನ. ಅಲ್ಲಿ ನೆರೆದ ಜನರೆಲ್ಲಾ ಮಸೀದಿಯ ಮೌಲವಿ, ಕೇರಿಯ ಮುಸ್ಲಿಂ ನಾಯಕರು ಮತ್ತು ಕೆಲವರು ಕಟ್ಟೆಯ ಮೇಲೆ ಕೂರುವ ಅದೇ ಪುಂಡ ಪುಢಾರಿಗಳು ಎಂದು ಒಂದೇ ನೋಟದಲ್ಲಿ ಬೂಬುಳಿಗೆತಿಳಿಯಿತು. ಮಂದಿರದ ಹತ್ತಿರ ಮಲ್ಕಪ್ಪಣ್ಣನ ಜೊತೆ ಕೆಲಸ ಮಾಡುತ್ತಿದ್ದ ನಾಲ್ಕು ಹುಡುಗರ ಪೈಕಿ ಇಬ್ಬರಿಗೆ ಗಾಯವಾಗಿದೆ ಹಾಗೂ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ನಡೆದ ಕಲ್ಲು ತೂರಾಟ ಹಾಗು ಹೊಡೆದಾಟಗಳಲ್ಲಿ ನಮ್ಮವರಿಗೇ ಜಾಸ್ತಿ ಗಾಯಗಳಾಗಿವೆ. ಹಿಂದೂಗಳ ಪೈಕಿ ಒಬ್ಬ ಹುಡುಗನೂ ಸಹ ಅದೇ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾನೆ. ಪೋಲೀಸರ ಕಾವಲು ಇದ್ದಿದ್ದಕ್ಕೆ ನಮಗೆ ಒಳ ಹೋಗಲಾಗಿಲ್ಲ, ಇಲ್ಲ ಅಂತಂದ್ರೆ ಇನ್ನೂ ಇತ್ತು ಕಥೆ ಬೇರೆ ಅಂತ ಒಬ್ಬ ಪುಢಾರಿ ಚೀರಿ ಹೇಳಿದ. ಇಫ್ತಾರ್ ಮಾಸ್ತರ ಅವನಿಗೆ ಈ ಆಕ್ರೋಶವನ್ನು ಬೇಕಾದಲ್ಲಿ ಉಪಯೋಗಿಸು, ಇಲ್ಲಿ ಮಾಡಿದರೇನು ಪ್ರಯೋಜನ ಅಂತ ಬೈದು ಕೂರಿಸಿ ನೀರು ಕುಡಿಸಿದರು. ಅಷ್ಟರಲ್ಲಿ ಇನ್ನೊಬ್ಬ ನಾಯಕ ಮಾಲಿಕಸಾಬನನ್ನು ಹಿಡಿದು ನಮ್ಮ ಭಾಯಿ ಮಲಿಕ್ಸಾಬ್ ಯಾರಿಗೂ ತ್ರಾಸು ಮಾಡಿದವನಲ್ಲ ಅಂಥವನ ಮೇಲೆ ಹಲ್ಲೆ ಮಾಡಿದ್ದಾರೆ ರಾಂಡ್ ಕೆ ಬಚ್ಚೆ ಅಂತ ಎದ್ದು ನಿಂತ. ಇದರಿಂದ ತುಸು ಹೆದರಿದ ಬೂಬು ಮಲಿಕಸಾಬ ನ ಕಯ್ಯನ್ನು ಚೂರು ಗಟ್ಟಿಯಾಗಿ ಹಿಡಿದು ಕುಳಿತಳು. ತುಸು ಹೊತ್ತಿನ ನಂತರ ಮೌಲವಿ ಸಾಬರು ಎಲ್ಲರನ್ನೂ ಉದ್ದೇಶಿಸಿ 'ಇವತ್ತು ಆಗಿದ್ದೇ ಸಾಕು, ಇನ್ನು ಮೇಲೆ ಗುಡಿಯ ಹತ್ತಿರ ನಮ್ಮವರು ಹೋಗುವಂತಿಲ್ಲ, ಅವರ ಜನರ ಜೊತೆ ಜಾಸ್ತಿ ಬೆರೆಯುವಂತಿಲ್ಲ. ಇವತ್ತು, ನಾಳೆ ಯಾರೂ ಮನೆ ಹೊರಗೆ ಬರೋ ಹಂಗಿಲ್ಲ. ಎರಡು ದಿನ ಆದಮೇಲೆ ಎಲ್ಲ ತಾನೇ ಸರಿ ಆಗುತ್ತದೆ' ಅಂತ ಹೇಳಿ ಕುಳಿತರು. ಇಷ್ಟೊತ್ತು ದೆವ್ವ ಬಂದಂತೆ ಕಿರುಚಾಡುತ್ತಿದ್ದ ಹುಡುಗರು ಹಾಗೂ ನಾಯಕರು ಈಗ ಸುಮ್ಮನಾಗಿ ಮಾಸ್ತರ್ ರ ಮನೆಯ ತಿಂಡಿ, ಛಾ, ಬಿಸ್ಕೀಟು ಸೇವಿಸುತ್ತ ನಗಾಡಿಕೊಂಡು ಇದ್ದದ್ದನ್ನು ನೋಡಿದ ಬೂಬು ಗೆ ತುಸು ಆಶ್ಚರ್ಯವಾದರೂ ಸಹ ಸಧ್ಯ ಸಮಾಧಾನ ಆದರಲ್ಲ ಜನ ಅಂತ ನಿರಮ್ಮಳವಾಯಿತು. ಎದ್ದು ಹೋಗಿ ಮಾಸ್ತರ್ ಹೆಂಗಸರಿಗೆ ಸಹಾಯ ಮಾಡು ಎಂದು ಸನ್ನೆ ಮಾಡಿ ಹೇಳಿದ ಮಲಿಕಸಾಬನ ಮಾತಿನಂತೆ ಅಲ್ಲಿ ಕೂತವರ ಛಾ ಕಪ್ ಗಳನ್ನ ಗೂಡಿಸಲು ಶುರು ಮಾಡಿದಳು ಬೂಬು. ಈ ಎಲ್ಲದರ ನಡುವಲ್ಲಿ ತನ್ನ ಬುರ್ಖಾ ದೊಡ್ಡಮನೆಯಲ್ಲೇ ಮರೆತು ಹೋದದ್ದು ಅವಳಿಗೆ ನೆನಪಾಗಿದ್ದು ಅಲ್ಲೇ ಕುಳಿತ ಒಬ್ಬ 'ನಾಯಕ' ಅವಳನ್ನು ಕೆಟ್ಟ ಕಣ್ಣಿನಿಂದ ಗುರಾಯಿಸಿ ನೋಡಿದಾಗ.

ಮುಂದಿನ ಎರಡು ದಿನ ಇಫ್ತಾರ್ ಮಾಸ್ತರ್ ರ ಮನೆಯಲ್ಲಿ ಇಂಥ ಹತ್ತಾರು ಮೀಟಿಂಗ್ ಗಳು ಆದವು. ಒಂದೆರಡರಲ್ಲಿ ಮಲಿಕಸಾಬನ ಜೊತೆ ಬೂಬು ಕೂಡ ಹೋಗಿದ್ದಳು. ಪಕ್ಕದ ಊರಿನಿಂದ ಒಬ್ಬ ಪ್ರಭಾವಿ ಮೌಲವಿ ಬಂದು ಹೇಗೆನಮ್ಮವರಿಗೆ ಕೊನೆಗೆ ನಮ್ಮವರೇ ಆಗೋದು, ಹೇಗೆ ಬೇರೆಯವರಿಂದ  ತಾವುಗಳು ದೂರ ಇರಬೇಕು ಎಂದು ಜೋರು ಜೋರಾಗಿ ಬಾಷಣ ಮಾಡಿದರು. ಇನ್ನು ಮೇಲೆ ಅವರ ಕಯ್ಯಲ್ಲಿ ನಮ್ಮವರು ಕೆಲಸ ಮಾಡುವಂತಿಲ್ಲ, ಆ ಹಾಳು ಮಂದಿರದ ಕೆಲಸಕ್ಕೆ ಹೋಗಿದ್ದೇ ಇಷ್ಟಕ್ಕೆಲ್ಲ ಕಾರಣವಾಗಿದ್ದು. ನಮ್ಮವರನ್ನು ಕರೆಸಿ ಕೆಲಸ ಮಾಡಿಸಿಕೊಂಡು ಕೊನೆಗೆ ದುಡ್ಡನೂ ಕೊಡದೆ ಹೊಡೆದು ಹಾಕಿದ್ದಾರೆ ಅಂತ ಬಾಯಿಗೆ ಬಂದಂಗೆ ಬೈದು ಸುಮ್ಮನಾದರು. ಮತ್ತದೇ ನೀರು, ಕಾಫಿ, ಪಾನೀಯ. ಮಲಿಕಸಾಬನೋ ಶಾಲೆಗೆ ಬಂದ ಮಕ್ಕಳಂತೆ ಕರೆದಾಗೆಲ್ಲ ಬಂದು ಎಲ್ಲವನ್ನೂ ವಿಧೇಯಕನಾಗಿ ಕೇಳಿ ಆಮೇಲೆ ಕೊಟ್ಟಿದ್ದನ್ನು ತಿಂದು, ಛಾ ಕುಡಿದು ಏಳುತ್ತಿದ್ದ.

ಎರಡು ದಿನಗಳ ನಂತರ ಕೇರಿಯು ತುಸು ಶಾಂತವಾಗಿತ್ತು, ಮಲಿಕಸಾಬನು ಇಲ್ಲೇ ಚೂರು ಹೋಗಿ ಬರುತ್ತೇನೆ, ಸಂಜೆಯಾಗುತ್ತದೆ ಅಂತ ಹೇಳಿ ಬೆಳಿಗ್ಗೆಯೇ ಮನೆಯಿಂದ ಹೊರಟು ಹೋಗಿದ್ದ. ಮೂರು ದಿನಗಳಿಂದ ನಡೆದುದೆಲ್ಲದರಿಂದ ಬೇಸರಗೊಂಡಿದ್ದ ಬೂಬುಗೆ ಮತ್ತೆ ತನ್ನ ಚಾಚಾ ನೆನಪಾಗಿದ್ದ. ಚೂರೇ ಚೂರು ಪರಿಚಿತವೆನಿಸಲು ಐದು ವರ್ಷ ತಗೆದುಕೊಂಡ ಈ ಊರು ಒಂದೇ ರಾತ್ರಿಯಲ್ಲಿ ಮತ್ತೆ ಅಪರಿಚಿತವೆನಿಸಿ ಕತ್ತಲಿನ ಭೂತದಂತೆ ಕಂಡು ಅವಳನ್ನು ಬೆಚ್ಚಿ ಬೀಳಿಸಿತ್ತು. ಅವಳನ್ನು ಸಮಾಧಾನಿಸುವ ಕ್ಯಾಲೆಂಡರ್ ನ ಚುಕ್ಕಿ ಯಾಕೋ ಅವಳನ್ನ ಇನ್ನೂ ಒಂಟಿತನದೆಡೆಗೆ ದೂಕಿತು. ಅಕ್ಕ!! ಒಮ್ಮೆಲೇ ತನ್ನ ಅಕ್ಕನ ನೆನಪಾಗಿ ಮನಸಲ್ಲಿ ಒಂದು ಹೊಸ ಸಂಚಲನವೇ ಹುಟ್ಟಿ ಕಣ್ಣು ಹಿಗ್ಗಿದವು. ಮೂರು ದಿನಗಳಾಯ್ತು, ಅಕ್ಕನನ್ನು ನೋಡಿಕೊಂಡು ಬಂದರೆ ತುಸು ಸಮಾಧಾನವಾದೀತು. ಅವರ ಮನೆ ಹತ್ತಿರ ಏನೇನು ಗಲಾಟೆಗಳು ಆಗಿವೆಯೋ, ಮಂದಿರದ ಕಮಿಟಿಯಲ್ಲಿ ಅಕ್ಕನ ಮನೆಯವರೂ ಸಹ ಇದ್ದಾರೆ. ಆದರೆ ಇಷ್ಟೆಲ್ಲಾ ರಾದ್ಧಾಂತಗಳು ಆದಮೇಲೆ ನಾನು ಹೋದರೆ ಅಕ್ಕನ ಮನೆಯ ಜನ ನನ್ನ ಒಳ ಸೇರಿಸಿಯಾರೇ? ಗುಡಿಯ ಕೆಲಸಕ್ಕೆ ನನ್ನ ಗಂಡನೂ ಇದ್ದ, ಮಸೀದಿ ಅವರ ಮನೆಗೂ ದೂರವಿಲ್ಲ, ಅಲ್ಲಿ ಏನೇನೋ ಅನಾಹುತಗಳು ನಡೆದಿವೆಯೋ. ಅಕಸ್ಮಾತ್ ನನ್ನ ಅವರು ಇನ್ಮೇಲೆ ಬರಬೇಡ ಅಂದರೆ? ಇಲ್ಲ, ಅಕ್ಕನಿಗೆ ಇದೆಲ್ಲ ಹಾಳು 'ಗುಡ್ಡ'ವನ್ನೂ ಸಹ ನಗಾಡಿ ಒಂದೇ ಮಾತಿನಲ್ಲಿ 'ಕಡ್ಡಿ' ಮಾಡುವುದು ಗೊತ್ತಿರುತ್ತದೆ, ಏನೋ ಒಂದು ಹೇಳಿ ನಕ್ಕು ನನ್ನ ಒಳ ಕರೆದು ಛಾ ಕೊಟ್ಡುತ್ತಾಳೆ. ಅಕ್ಕನ ಬಿಟ್ಟು ಬೇರೆ ಯಾರ ಹತ್ತಿರ ಹೋಗಲಿ? ಎಂದು ಯೋಚಿಸಿ ಮನೆ ಬೀಗ ಹಾಕಿ ಅಕ್ಕನ ಮನೆ ದಾರಿ ನಡೆದೇ ಬಿಟ್ಟಳು.

ದೊಡ್ಡ ಮನೆ ಗೇಟು ಹಾಕಿದೆ. ಕಾಂಪೌಂಡ್ ನಲ್ಲಿ ಹೊಸದೊಂದು ನಾಯಿ ಓಡಾಡುತ್ತಿದೆ, ಆನೆ ಗಾತ್ರದ್ದು. ಅದನ್ನ ನೋಡಿದರೇ ಭಯ. ಗೇಟ್ ಮುಂದೆ ಸದಾ ನಕ್ಕು ಬರಮಾಡಿಕೊಳ್ಳುತ್ತಿದ್ದ ಖಾನ್ ಭಯ್ಯಾ ಕೂಡ ಇಲ್ಲ! ಬದಲಾಗಿ ಬೇರೊಬ್ಬ ಗಾರ್ಡ್ ನಿಂತಿದ್ದಾನೆ. ಅವಳ ಬುರ್ಖಾ ಕಂಡು ಅವನು "ಕ್ಯಾ ಜೀ? ಕಹಾಂ ಜಾರೆ ತುಮೀ?" ಎಂದು ಮುರುಕಲು ಹಿಂದಿಯಲ್ಲಿ ಕೇಳುತ್ತಾನೆ. ತಡವರಿಸುತ್ತ "ಅಕ್ಕ.. ಅಕ್ಕ.. ಮನಿ" ಎಂದು ಬೆರಳು ಮಾಡಿ ಏನೋ ತಪ್ಪು ಮಾಡಿ ಸಿಕ್ಕಿ ಬಿದ್ದವರಂತೆ ಹೆದರುತ್ತಾಳೆ. "ಅಕ್ಕ ನೈ, ಕೌನ್ ನೈ!.. ನಿಮ್ಮವರು ಈಕಡೆ ಬರಂಗಿಲ್ಲ ಕರಿಲೆನ ಪೊಲೀಸರನ??" ಅಂತ ಕೇಳುತ್ತ ತನ್ನ ಲಾಠಿ ತೆಗೆದು ನಡಿ ನಡಿ ಎಂದು ಕೈ ಮಾಡುತ್ತಾ ಇನ್ನೂ ಹತ್ತಿರ ಬರುತ್ತಾನೆ. ಹೆದರಿಕೆಯಲ್ಲಿ ಹುಂ... ಹುಂ ಎಂದು ಅಲ್ಲಿಂದ ಹಿಂದೆ ಬರಲು ಶುರು ಮಾಡುತ್ತಾಳೆ. ತುಸು ದೂರ ಬಂದು ಹಿಂಬದಿಯಿಂದ ಮೇಲಿನ ಕಿಟಕಿಗಳ ನೋಡಿದರೆ ಎಲ್ಲ ಹಾಕಿವೆ. ಮನೆ ಮುಂದೆ ಐದಾರು ಗಾಡಿಗಳೂ ನಿಂತಿವೆ. ಅದೇನಾಗಿದೆಯೋ ಅಲ್ಲಾಹ್! ಅಕ್ಕ, ಅಣ್ಣ ಚೆನ್ನಾಗಿದ್ರೆ ಸಾಕು. ದಾರಿಯಲ್ಲಿ ಯಾರನ್ನಾದರೂ ಅಲ್ಲೇನು ನಡೆದಿದೆ, ಎರಡು ದಿನ ಇಲ್ಲಿ ಏನೇನಾಯಿತು ಎಂದು ಕೇಳಿಬಿಡುವಾಸೆ. ಆದರೆ ಪೊಲೀಸರು, ಜನರು, ಪುಢಾರಿಗಳು, ನಮ್ಮವರು, ಬೇರೆಯವರು ಎಲ್ಲವೂ ನೆನಪಾಗಿ ಏನೂ ತಿಳಿಯದೇ ಹೆದರಿ ಗೊಂದಲದಲ್ಲಿ ಸುಮ್ಮನೆ ಮನೆಯತ್ತ ಸಾಗಿದಳು. ಮದುವೆ ಮುಗಿದ ಸಂಜೆ ಏನೂ ತಿಳಿಯದ ಆ ಇಳಿ ವಯ್ಯಸ್ಸಿ ತನ್ನನ್ನು ಸ್ವಂತ ಮನೆಯಿಂದ, ತನ್ನ ಸ್ನೇಹಿತರಿಂದ ಯಾಕೆ ತನ್ನನ್ನು ದೂರ ಅಟ್ಟುತ್ತಿದ್ದಾರೆಂದು ತಿಳಿಯದೇ ತಾನು ಅತ್ತಿದ್ದು, ಅಸಹಾಯಕ ಮುದಿಯನಂತೆ ಸುಮ್ಮನೆ ಅಳುತ್ತ ನಿಂತಿದ್ದ ತನ್ನ ಚಾಚಾ.. ಅದೆಲ್ಲವೂ ಈಗ ಮತ್ತೊಮ್ಮೆ ಘಟಿಸಿದಂತೆ ಅನಿಸಿ ಅಳು ಉಕ್ಕಿ ಬಂತು. ಮಲಿಕಸಾಬ ಮನೆಗೆ ಬಂದು ಎಲ್ಲಿ ಹೋಗಿದ್ದೆ ಅಂತ ಕೇಳಿ ಬಯ್ಯೋ ಮುನ್ನ ಮನೆ ಮುಟ್ಟಬೇಕು ಎಂದು ಕಣ್ಣು ಒರೆಸುತ್ತಾ ಜೋರಾಗಿ ನಡೆದಳು. ನಿಮಿಷಕ್ಕೊಮ್ಮೆ ತನ್ನಕ್ಕ ಹೇಗೋ ಬಂದು ಕರೆಯುವಳು ಎನಿಸಿ ಮತ್ತೆ ಮತ್ತೆ ದೊಡ್ಡಮನೆಯತ್ತ ನೋಡುತ್ತಾ ಅದರಿಂದ ದೂರ ದೂರ ನಡೆದಳು.   ಕಟ್ಟೆಯ ಮೇಲೆ ಕೂರುತ್ತಿದ್ದ  ಪುಢಾರಿಗಳು ಕಾಣಲಿಲ್ಲ, ಪೊಲೀಸ್ ವ್ಯಾನುಗಳು ಇಲ್ಲ. ಅಕ್ಕ ಪೋಲೀಸರ ಬಗ್ಗೆ ಹೇಳಿದ್ದು ನೆನಪಾಗಿ ಅಳುವಲ್ಲೇ ನಕ್ಕಳು.

ಇತ್ತ ಅವಳ ಅಕ್ಕ ಮೂರು ದಿನವಾದರೂ ಮನೆ ಕೆಡೆ ಬಾರದ ಬೂಬುಳ ದಾರಿಯನ್ನು ಕಾಯುತ್ತ ಮತ್ತೊಮ್ಮೆ  ತನ್ನ ಅಡುಗೆ ಮನೆಯ ಕಿಟಕಿಯಿಂದಾಚೆ ಗೇಟಿನತ್ತ ನೋಡಿದಳು.  

ಪೂರ್ವ ಜನ್ಮದ ಪಾಪಿ



ಭೂಮಿಯಷ್ಟನ್ನೂ ಎಷ್ಟಕ್ಕೆ ಕೊಡುವೆ ?
ಎಂದು ಕೇಳಿ ಕಿಸೆ ಮುಟ್ಟಿ ನೋಡಿಕೊಂಡ
ಹೀಗೇ ಮಾಡಬೇಕೆಂದವನಿಗೆ, ಹಾಗೆ ಮಾಡಿ ತೋರಿಸಿ 
ಕಣ್ಣಲ್ಲೇ ಕಲೆ ಮಾಡಿ ಒಡಮೂಡಿಕೊಂಡ.

ಕೊಳೆಯಾದರೆ ಆದೀತು ಒಮ್ಮೆ ಇಳಿದು ಬಿಡುವಾ
ಕೆಸರಿನಲ್ಲಿ ಕಮಲವ ಹುಡುಕಿ, ಬರಿ ಮೂಸಿ ನೋಡಿ ನಗುವಾ
ಕಣ್ಣನ್ನು ಹಿಸುಕಿ ಕನ್ನಡಕವ ಅಗಲಿಸಿ
ದೂರದ ಒಂದನ್ನು ತಾನೊಬ್ಬನ್ನೆ ಕಂಡಂತೆ ದಿಟ್ಟಿಸಿ ನೋಡುವ.

ಜೀವನವೆಂದರೆ... ಎಂದು ತಾನೇ ಕೇಳಿಕೊಂಡು
ಉತ್ತರದ ಉತ್ತರದುದ್ದಕ್ಕೂ ದಕ್ಷಿಣವ ಹುಡುಕಿ,
ಮೆದುಳಿನಲ್ಲಿ ಸಾಕಿಕೊಂಡ ಪೆಂಡ್ಯುಲಮ್ ನ ಅಲುಗಾಡಿಸಿ
ತಾನೂ ಅದರೊಡನೆ ಒಮ್ಮೆ ಅಲ್ಲಿಂದಿಲ್ಲಿಗೆ ಜೀಕಿ,
ಅದೆಲ್ಲ ಬೇಕಾಗಿಲ್ಲ, ಇದ್ದಿದ್ದನ್ನ ಕಳೆದುಕೊಂಡ ಮೇಲೆ
ಮತ್ತೆ ಅದೇನೋ ಸಿಕ್ಕುತ್ತದೆ; ಅದೇ ಬಹುಷಃ ಅದು - ಎಂದುಕೊಳ್ಳುವ ಪಾರ್ಟಿ!  

ಓಡುವವನಿಗೆ ಕಾಲುಗಳೇ ಮನೆ,
ಓದುವವನಿಗೆ ಕಾಗದಗಳೇ ಕೊನೆ
ಅಂತೆಲ್ಲ ಮಾತಾಡಿ ಮಾತನಾಡದಂತೆಯೇ ಸುಮ್ಮನಾಗಿ,
ಸುಖಾ ಸುಮ್ಮನೆ ಕುಡುಕನಂತೆ ಮಾಡುವ, ನೋಡುಗರಿಗೆ ಆಡುವ.

ಚೋಟುದ್ದ ದೇಹ, ಅರ್ಧ ಕಾಣುವ ಕಣ್ಣು 
ಅಷ್ಟಿದ್ದೂ ಸಮುದ್ರವ ಒಮ್ಮೆಲೇ ಬಾಚುವ ಹಪಾಪಿ.
ಹೇಳದೆಯೇ ಕೇಳಿಸುವ, ಕೇಳಿದರೂ ಹೇಳದಿರುವ
ಫಿಲಾಸಫಿ ಬೊಗಳಿ, ಕಣ್ಣು ಮಿಟುಕಿಸಿ ತರ್ಲೆ ನಗುವ ನಗುವ ಪೂರ್ವ ಜನ್ಮದ ಪಾಪಿ!  

-ಗೆಳೆಯನೊಬ್ಬನ ಮೇಲೆ ಬರೆದದ್ದು. 


ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...

ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು,...