Saturday, October 27, 2018

ಊರ ಉಸಾಬರಿ, ತಪ್ಪು ಯಾವುದು, ಯಾವುದು ಸರಿ.

   
             ಚಿಕ್ಕವನಿದ್ದಾಗ ತರಕಾರಿ ಹೆಚ್ಚುವ ಚಾಕುವನ್ನು ನಾನು ಮುಟ್ಟದೇ ಇರಲಿ ಅಂತ ಅವ್ವ ನನಗೆ 'ಅದ್ರಾಗ ಬವ್ವಾ ಐತಿ, ಮುಟ್ಟಬ್ಯಾಡ' ಅಂತ ಹೇಳಿದ್ದಳು. ಅವ್ವ ಹೇಳಿದರೆ ಆಯ್ತು, ಇದ್ದರೂ ಇರಬಹುದು ಅಂತ ನಾನು ಹೆದರಿಕೊಂಡು ಹದಿನೆರಡು ವಯ್ಯಸ್ಸಿನವರೆಗೂ ಆ ಚಾಕುವಿನ ಹತ್ತಿರ ಹೋಗಿರಲೇ ಇಲ್ಲ. ಆಮೇಲೆ ಅಲ್ಲಿ ಇಲ್ಲಿ ನೋಡಿ, ಕೇಳಿ, ತಿಳಿದ ನಂತರ ಅನಿಸಿದ್ದು ಆಕೆ ಹಾಗೆ ಹೇಳುವುದಕ್ಕೆ ಬೇರೆಯೇ ಕಾರಣ ಇತ್ತು ಅಂತ. ಅಕಸ್ಮಾತ್ ಅದನ್ನೇ ನಂಬಿಕೊಂಡು ನಮ್ಮಮ್ಮ ಹೇಳಿದ್ದೇ ಸರಿ, ಆಕೆ ನನಗೋಸ್ಕರ ಇಷ್ಟೆಲ್ಲಾ ಮಾಡಿದ್ದಾಳೆ ಅವಳ ಮಾತು ಹೇಗೆ ಸುಳ್ಳಾದೀತು? ಅವಳು ತಪ್ಪು ಮಾಡಲು ಸಾಧ್ಯವೇ ಇಲ್ಲ, ಅವಳು ದೇವರು ಅಂತ ಪ್ರಾಕ್ಟಿಕಲ್ ಆಗುವಲ್ಲಿ ಭಾವೂಕನಾಗಿ ಆ ಚಾಕುವಿನಿಂದ ಇನ್ನೂ ದೂರವೇ ಉಳಿದಿದ್ದರೆ ಈಗ ತರಕಾರಿ ಹೆಚ್ಚಲಾಗದೇ ನನ್ನ ಹೆಂಡತಿಯ ಕಯ್ಯಲ್ಲಿ ಶಾಸ್ತಿಯಾಗುತ್ತಿದ್ದಿದ್ದು ಖಂಡಿತ. ಅಂದರೆ, ಇಲ್ಲಿ ಮಾತು ನಾವು ವ್ಯಕ್ತಿಯನ್ನು ಅಥವಾ ವಸ್ತುವನ್ನು ಗೌರವಿಸುವುದರ ಬಗ್ಗೆ ಅಲ್ಲ, ಅದನ್ನು ಮೀರಿ ವಿಷಯವನ್ನು ಕಾಣುವುದರ ಬಗ್ಗೆ. ಇಲ್ಲಿ ಚಾಕುವಿನ ಪರಿಣಾಮಗಳು  'ವಿಷಯ', ಅಮ್ಮ ವ್ಯಕ್ತಿ ಅಥವಾ ಅಮ್ಮನ ಮಾತು ಒಂದು ವಸ್ತು.

ಕೆಲವು ಸಂಬಂಧವಿರದ ಹೇಳಿಕೆಗಳನ್ನು ಹೇಳುತ್ತೇನೆ, ಸಂಬಂಧ ಕಂಡಲ್ಲಿ ಹೆಮ್ಮೆ ಪಡಿ.
ನಾನಾ ಪಾಟೇಕರ್ ಒಬ್ಬ ಉತ್ತಮ ಕಲಾವಿದ, ಸರಳ ಜೀವಿ, ಅನೇಕ ಪ್ರಶಸ್ತಿಗಳ ಸರದಾರ, ಅಂಥವರಿಂದ ಕಲಿಯುವುದು ಬೆಟ್ಟದಷ್ಟಿದೆ; ಆದರೆ ಕೆಲ ಮಹಿಳೆಯರು ಅವರ ಸ್ವಭಾವದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ದೀಪಾವಳಿ ಕತ್ತಲಿನ ಮೇಲೆ ಬೆಳಕಿನ ವಿಜಯದ ಪ್ರತೀಕ, ಅದಕ್ಕೆ ಸಿಕ್ಕಾಪಟ್ಟೆ ಮದ್ದು ಸಿಡಿಸಿ ಬೆಳಕು ತರುವ ಪ್ರಯತ್ನ ನಮ್ಮೆಲ್ಲರದ್ದು. ಬಕ್ರಿ ಈದ್ ಹಬ್ಬವು ತ್ಯಾಗದ ಪ್ರತೀಕ, ಅದಕ್ಕೆಂದೇ ನಾವು ಎಲ್ಲಕ್ಕಿಂತ ಹೆಚ್ಚು ಪ್ರೀತಿಯ ಒಂದನ್ನು ತುಂಬಾ ದೇವರಿಗೆ ಬಲಿ ಕೊಡುತ್ತೇವೆ. ಬಸವಣ್ಣನವರು ಜಾತಿ ಬಿಡಿ ಅಂತ ಹೇಳಿದರು,ಅದನ್ನು ಪಾಲಿಸುವ ನಿಟ್ಟಿನಲ್ಲಿ ನಾವು ಅವರ ಹೆಸರಿನಲ್ಲೇ ಒಂದು ಜಾತಿಯನ್ನು ಸೃಷ್ಟಿಸಿ ಅವರ ದಾರಿಯಲ್ಲಿ ನಡೆಯುವ ಪ್ರಯತ್ನದಲ್ಲಿದ್ದೇವೆ. ಅರ್ಜುನ್ ಸರ್ಜಾ ಒಬ್ಬ ಅಪ್ರತಿಮ ನಟ, ನಮಗೆಲ್ಲ ಅವರೆಂದರೆ ಪ್ರೀತಿ, ಹೆಮ್ಮೆ  ಜೊತೆಗೆ ಅವರು ಹನುಮಂತನ ಕಟ್ಟಾ ಭಕ್ತರೂ ಹೌದು. ಶೃತಿ ಹರಿಹರನ್ ಕೂಡ ಒಬ್ಬ ಉತ್ತಮ ನಟಿ, ಬಹುಭಾಷಾ ಚಿತ್ರಗಳಲ್ಲಿ ಗುರುತಿಸಿಕೊಂಡವರು; ಆದರೆ ಆದ್ಯಾವುದೋ ಇಂಟರ್ವ್ಯೂ ನಲ್ಲಿ ಅವರು ಸೆಕ್ಸ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ, ಛೆ ಛೆ ಬ್ರಹ್ಮಾಂಡ ತಪ್ಪು! ನರೇಂದ್ರ ಮೋದಿ ಒಬ್ಬ ಆಕರ್ಷಕ ಭಾಷಣಕಾರ, ಅವರು ಎಷ್ಟು ಮಾತನಾಡಿದರೂ ಕೇಳಬೇಕೆನಿಸುತ್ತದೆ, ಅದಕ್ಕೆಂದೇ ಅವರು ಬಹುಷಃ ಅಷ್ಟು ಮಾತನಾಡುತ್ತಾರೆ. ಜೀಸಸ್ ಕ್ರೈಸ್ಟ್ ದೇವರ ಮಗ, ಅವರಷ್ಟೇ ಸತ್ಯ, ಅವರಿಗೆ ಎರಡು ಬಗೆದರೆ ದೇವರು ಕ್ಷಮಿಸುವುದಿಲ್ಲ. ಶಿವರಾಜಕುಮಾರ್ ಅಣ್ಣಾವ್ರ ಮಗ ಅವರಿಗೆ ಯಾರಾದರೂ ಸಿನಿಮಾದಲ್ಲೂ ಹೊಡೆದರೆ ಅಭಿಮಾನಿ ದೇವರುಗಳು ಕ್ಷಮಿಸುವುದಿಲ್ಲ.

         ಮೇಲೆ ಹೇಳಿದ ಎಲ್ಲಾ ವಾಕ್ಯಗಳ್ಲಲೂ ವಸ್ತು ಹಾಗು ಕೆಲ ವಿಷಯಗಳಿವೆ. ನಾನಾ ಪಾಟೇಕರ್ ಮಾತಿನ ವಸ್ತುವಾದರೆ ಅವರ ಮೇಲೆ ಹಾಕಲಾದ ಅಪವಾದಗಳು ವಿಷಯ. ದೀಪಾವಳಿ ಮಾತಿನ ವಸ್ತುವಾದರೆ, ಮದ್ದು ಸಿಡಿಸಿ ಪರಿಸರ ಮಾಲಿನ್ಯ ಮಾಡುವುದೊಂದು ವಿಷಯ. ಬಕ್ರಿ ಈದ್ ಮಾತಿನ ವಸ್ತುವಾದರೆ, ಸಾಮೂಹಿಕ ಪ್ರಾಣಿ ಹತ್ಯೆ  ಒಂದು ವಿಷಯ. ಅರ್ಜುನ್ ಸರ್ಜಾ ವಸ್ತು, ಅವರ ಮೇಲಿದ್ದ ಆಪಾದನೆಗಳು ವಿಷಯ. ಶೃತಿ ಹರಿಹರನ್ ವಸ್ತು,ಅವರಾಡಿದ ಮಾತುಗಳು ವಿಷಯ. ನರೇಂದ್ರ ಮೋದಿ ಮಾತಿನ ವಸ್ತುವಾದರೆ, ಅವರ ಭಾಷಣದ ಹವ್ಯಾಸ ಒಂದು ವಿಷಯ. ಜೀಸಸ್, ಶಿವಣ್ಣ ಮಾತಿನ ವಸ್ತುವಾದರೆ, ಅವರ ಅಭಿಮಾನದಲ್ಲಿ ನಡೆಯಬಹುದಾದ ಮೂಢ ಆಚರಣೆಗಳು ವಿಷಯ. ಈ ಬರಹವೂ ಒಂದು ವಸ್ತು, ವಿಷಯವೇನೆಂದರೆ ನಾವು ಒಂದು ಸೃಜನಶೀಲ ಸಮಾಜವಾಗಿ ಇಂತಹ ನೂರೆಂಟು ದೈನಂದಿನ  'ವಸ್ತು' ಹಾಗು 'ವಿಷಯ'ಗಳ ನಡುವೆ ಇರುವ ಅಂತರವನ್ನು ಎಷ್ಟು ಸ್ಪಶ್ಟವಾಗಿ ಗುರುತಿಸಿ ಪ್ರತಿಕ್ರಯಿಸುತ್ತಿದ್ದೇವೆ ಹಾಗೂ ಸ್ಪಂದಿಸುತ್ತಿದ್ದೇವೆ ಎಂಬುದು. ಎಷ್ಟೋ ಬಾರಿ ಒಂದು ಪರಿಸ್ಥಿತಿ/ಘಟನೆಯಲ್ಲಿ ನಾವು ವಸ್ತು ವಿಷಯಗಳನ್ನ ಬೇರ್ಪಡಿಸದೇ ಭಾವೂಕರಾಗಿ, ಯಾವುದೋ ಮೂಢ ನಂಬಿಕೆಯ ಕಾರಣದಿಂದಾಗಿ, ಹುಚ್ಚು ಅಭಿಮಾನದಿಂದಾಗಿ ಹಠಾತ್ತನೇ ನಿರ್ಣಯಿಸಿಬಿಡುತ್ತೇವೆ. ಗುಪ್ತರ ಆಳ್ವಿಕೆಯವರೆಗೂ ನಾವು ಭೂಮಿ ಸಪಾಟಾಗಿದೆ ಅಂತಲೇ ನಂಬಿದ್ದೆವು, ಭೂಮಿ ಗೋಲಾಕಾರದಲ್ಲಿದೆ ಅಂತ ಹೇಳಿದವರಿಗೆಲ್ಲ ತಲೆ ತಿರುಕನ ಪಟ್ಟ ಕಟ್ಟಿ ನೇಣು ಹಾಕಿದ್ದೂ ಉಂಟಂತೆ. ಜಗತ್ತಿಗೆ ಒಂದೇ ಸತ್ಯ ಅಂತ ನಂಬಿದ ಒಂದು ಸಮಾಜಕ್ಕೆ, ಇಲ್ಲ! ಇನ್ನೊಂದೇನೋ ಬೇರೆ ಇದೆ/ಇರಬಹುದು ಅಂತ ಒಬ್ಬ ಹೇಳಿದರೆ ಒಪ್ಪಿಕೊಳ್ಳುವುದು ತುಸು ಹೊತ್ತಾಗಲಿ ಆದರೆ ಅವನನ್ನು ಎಳೆದು ನೇಣು ಹಾಕಿತೆಂದರೆ? ಎಷ್ಟು ಭಯಾನಕ ಪರಿಸರವದು? ಅಂತಹ ಪರಿಸರದಲ್ಲಿ ಹೊಸತು ಹುಟ್ಟುವುದೆಷ್ಟು ದುರ್ಲಭ. ನಮ್ಮ ಸೌಭಾಗ್ಯ, ಎಲ್ಲೋ ಒಂದು ಕಡೆ ಯಾರೋ ಒಬ್ಬರು ಕಿವಿ ಕೊಟ್ಟು, ನಿನ್ನ ವಿಷಯವನ್ನಾದರೂ ಹೇಳು ಅಂತ ಅಂಥದ್ದೇ  ಒಬ್ಬ 'ತಲೆ ತಿರುಕ'ನಿಗೆ ಹೇಳಿರಬಹುದು. ಆಗ ಭೂಮಿಯ ಆಕಾರದ ಬಗ್ಗೆ ಚರ್ಚೆಗಳು ಶುರುವಾಗಿ ಈಗ ನಮಗೆ ಯಾವುದು ಗೋಲು, ಯಾವುದು ಓಳು ಎಂದು ತಿಳಿದಿದೆ.

ವಿಷಯ ಇಷ್ಟೇ, ಯಾರ ಬಗ್ಗೆ ಯಾರು ಹೇಳಿದರು ಹೇಳಿದರು ಅಂತ ಭಾವೂಕರಾಗಿ, ಹುಚ್ಚು ಅಭಿಮಾನದಿಂದಾಗಿ, ಸಾಮೂಹಿಕವಾಗಿ ಒಮ್ಮೆಲೇ ನಿರ್ಧಾರಗಳಿಗೆ ಬಾರದೇ, ಏನು ಹೇಳಿದರು? ಯಾಕೆ ಹೇಳಿರಬಹುದು ಎಂದು ತುಸು ಪ್ರಾಕ್ಟಿಕಲ್ ಆಗಿ, ತಾಳ್ಮೆಯಿಂದ ಯೋಚಿಸೋಣ. ಕಣ್ಣಲ್ಲಿ ಕಂಡು, ಕಿವಿಯಲ್ಲಿ ಕೇಳಿ input ತೆಗೆದುಕೊಂಡರೆ ಮಾತ್ರ ಮೆದುಳು ಅದನ್ನು analyse ಮಾಡಿ ಒಂದು output ನೀಡಬಲ್ಲದು. ಬಾಯಿಯಿಂದ ತಿಂದು, ಹೊಟ್ಟೆಯಲ್ಲಿ ಜೀರ್ಣಿಸಿದರೆ ಮಾತ್ರ ಬರಬೇಕಾದ ಜಾಗದಿಂದ ಮಲವು ಹೊರಬಂದು ದೇಹ ಶುಚಿಯಾರುವುದು. Input ಇರದೆಯೇ ನಮ್ಮ ತಲೆಯಲ್ಲಿ ಇದ್ದಿದ್ದನ್ನೇ ಹೊರ ಹಾಕುತ್ತ ಕುಳಿತರೆ ಅದು ಬಾಯಿಂದ ಸರಿಯಾಗಿ ತಿನ್ನದೇ ಬಾಯಿಂದಲೇ ಹೊರಹಾಕಿದ ವಾಂತಿಯಂತೆ, ಇದರಿಂದ ದೇಹಕ್ಕೆ ಬರುವುದು ರೋಗ ರುಜಿನಗಳಷ್ಟೇ. ಸಮಾಜವೂ ಒಂದು ಸದಾ ವಿಕಸಿತಗೊಳ್ಳಬೇಕಾದ ದೇಹ, ಸಮಯಕ್ಕೆ ತಕ್ಕಂತೆ ಊಟ ಮಾಡಿ, ಜೀರ್ಣಿಸಿ, ಮಲವನ್ನು ಹೊರಹಾಕುತ್ತಲೇ ಇರಬೇಕು, ಇಲ್ಲವಾದರೆ ಆ ಸಮಾಜದ ಬೆಳವಣಿಗೆ ಕಷ್ಟ. ಊಟ ಯಾವುದು, ಮಲ ಯಾವುದು ಅಂತ ಗುರುತು ಸಿಗುವುದು ನೋಡುವುದರಿಂದ, ಕೇಳುವುದರಿಂದ, ಸಮಾಧಾನದಿಂದ ತಿಳಿದುಕೊಳ್ಳುವುದರಿಂದ. ಊಟದ ಮೇಲಿರಬೇಕಾದ ಪ್ರೀತಿ ಮಲದ ಮೇಲೆ ಆಗಿಹೋದರೆ ಏನನ್ನೂ ಹೊರಹಾಕಬೇಕೆಂದು ತಿಳಿಯದೇ confuse ಆಗಿ ಹಾಳಾಗಿ ಹೋಗುತ್ತದೆ.

ಒಂದೋ ಸುದ್ದಿಯಲ್ಲಿರುವ ಯಾವುದೇ ವಸ್ತು ಅಥವಾ ವಿಷಯಗಳ ಬಗ್ಗೆ ಗಮನ ಕೊಡಬೇಡಿ, PUBG ಆಡಿಕೊಂಡು, ಸುದೀಪ್-ಶಿವಣ್ಣ ಕಟ್ ಔಟ್ ಗಳಿಗೆ ಅರ್ಧ ಲೀಟರ್ ಹಾಲು ಸುರಿದು ಜಮ್ಮಂತ ಇದ್ದುಬಿಡಿ. ಇಲ್ಲವೋ 'ವಸ್ತು' ಹಾಗೂ 'ವಿಷಯ' ಎರಡಕ್ಕೂ ಸಮನಾದ ಗಮನ ಕೊಡಿ. ನಾನಾ ಪಾಟೇಕರ್, ಅರ್ಜುನ್ ಸರ್ಜಾ ದೊಡ್ಡವರೇ, ಹಾಗಂತ ಅವರು ತಪ್ಪೇ ಮಾಡಿಲ್ಲ ಅಂತ ಮೂಢವಾಗಿ ನಂಬಿ ಕುಳಿತರೆ ಆಗದು, ಹಾಗೆಯೇ ಶ್ರುತಿ ಹರಿಹರನ್ ತನುಶ್ರೀ ದತ್ತ ಒಳ್ಳೆಯವರು ಅಥವಾ ಕೆಟ್ಟವರು ಅಂತ ಒಂದೇ ಉಸಿರಲ್ಲಿ ಹೇಳಲಾಗುವುದಿಲ್ಲ, ಎಲ್ಲರೂ ಹೇಳುವುದನ್ನು  ಕೇಳಿ ತಿಳಿದುಕೊಂಡಮೇಲೆಯೇ ಪರಿಶೀಲನೆಗೆ ದಾರಿ. ಹಾಗೆಯೇ ನಾವು ಆಚರಿಸುವ ಹಬ್ಬಗಳು, ನಮ್ಮ ಆಚರಣೆಗಳು ತುಂಬಾ ಹಳೆಯ ಕಾಲದಿಂದ ನಡೆದು ಬಂದ ಮಾತ್ರಕೆ ಅವುಗಳು ನೂರಕ್ಕೆ ನೂರು ಸರಿ ಅಂತಲೂ ಹೇಳಲಾಗುವುದಿಲ್ಲ, ಭೂಮಿ ಸಪಾಟಾಗಿ ಇರದೇ ಇರಬಹುದು ಎಂಬ ಸಣ್ಣ ಸಾಧ್ಯತೆಯ ಅರಿವು ನಮಗೆ ಸಕಾಲದಲ್ಲಿ ಬಂದಿದ್ದಕ್ಕೇ ನಾವು ಈಗ ಜಿಯೋ ಇಂಟರ್ನೆಟ್ ನಲ್ಲಿ ಬಿಗ್ ಬಾಸ್ ನೋಡುತ್ತಿರುವುದು. ಗಣೇಶನ ಶಿರ ಕಡಿದು ತಾನು ತಪ್ಪು ಮಾಡಿದೆ ಎಂದು ಶಿವ ಅರಿತಮೇಲೆಯೇ ನಮಗೆ ಗಣೇಶನ ಹಬ್ಬ ಹುಟ್ಟಿದ್ದು. ಆಡುವುದಕ್ಕೆ ಬಾಯಿ ಒಂದೇ, ಆದರೆ ಕೇಳುವುದಕ್ಕೆ ಎರಡು ಕಿವಿಗಳು, ಎರಡರಷ್ಟು ಕೇಳಿಸಿಕೊಳ್ಳೋಣ. ಅಮ್ಮನ ಆ ಪುಟ್ಟ ಸುಳ್ಳನ್ನು ಧನಾತ್ಮಕವಾಗಿ ಕಂಡು, ಅರಿತುಕೊಂಡ ಮೇಲೆಯೇ ನಾವು ಚಾಕುವಿನಿಂದ ಅನಾಹುತಗಳಿಂದ ದೂರ ಉಳಿದೆವು, ಕಲಿಯಬೇಕಾದ ಸಮಯದಲ್ಲಿ ತರಕಾರಿ ಹೆಚ್ಚುವುದನ್ನೂ ಕಲಿತೆವು. ಇನ್ನೂ ಕಲಿಯದೇ ಇರುವವರು ಬೇಗ ಕಲೀರಪ್ಪಾ, ಹೆಂಡತಿಯಿಂದಾಗಬಹುದಾದ ಅನಾಹುತಗಳಿಂದ ಉಳಿಯಬಹುದು.      


4 comments:

  1. Very well written. I hope more people read it !

    ReplyDelete
  2. Nice le...this is such a hipocracy that people blindlu follow or unfollow.

    ReplyDelete
  3. ನೈಜ ಸಹಜ ಉದಾಹರಣೆಗಳ ಸಮೇತ ವಿಷಯವನ್ನು ಅದ್ಭೂತವಾಗಿ ಹೇಳಿದೀರ. ಒಳ್ಳೆಯದಾಗಲಿ!

    ReplyDelete
  4. Truth.. Brame enda ache bandu sathyana hudko kelsa madbeku

    ReplyDelete

ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...

ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು,...