Thursday, October 18, 2018

ಒಂಭತ್ತು ದಿನಗಳ ದುರ್ಗಿ


 
 
             ಆಫೀಸಿಗೆ ತಡವಾಯಿತೆಂದು ಅವಸರದಿ ಓಡುತ್ತ ಕ್ಯಾಬ್ ಹತ್ತುವಾಗ ತನ್ನ ಆರು ವರ್ಷದ ಮಗ ಕಿಟಕಿಯಿಂದಲೇ ಅಮ್ಮ..ಬಾಯ್! ಎಂದು ಕೂಗಿಕೊಂಡನು. 'ಬಾಯ್ ಪುಟ್ಟು' ಎಂದು ಕೈ ಮಾಡುತ್ತಾ ಕಯ್ಯಲ್ಲಿದ್ದ ಲ್ಯಾಪ್ಟಾಪ್ ಬ್ಯಾಗ್ ಅನ್ನು ಗಾಡಿಯಲ್ಲಿ ಇಟ್ಟು ಕುಳಿತುಕೊಂಡಳು ಗಂಗೆ. ತಾನು ಹಾಗೂ ತನ್ನ ಗಂಡ ಇಬ್ಬರೂ ಕಂಪನಿ ಕೆಲಸಗಳಿಗೆ ಹೋಗುತ್ತಾರೆ. ಆರು ವರ್ಷದ ಮಗುವನ್ನು ನೋಡಿಕೊಳ್ಳಲು 'ಬಾಯೀ' ಯನ್ನು ನೇಮಿಸಿದ್ದಾರೆ, ಆಗಾಗ ಅತ್ತೆ- ಮಾವ ಕೂಡ ಬಂದು ನೆರವಾಗುತ್ತಾರೆ. ಗಂಗೆಯ ಅಪ್ಪ- ಅಮ್ಮ ಬರುವುದಿಲ್ಲ. ಗಂಡನ ಮನೆಯಿಂದ ಆದ ಕೆಲ ಪುಡಿ ಜಗಳಗಳಿಂದ ನೊಂದ ಅವರನ್ನು ತಾನೂ ಸಹ ದೂರವೇ ಇರಿಸಿದ್ದಾಳೆ. ಆಗಾಗ ಗಂಗೆಗೆ ಅಮ್ಮನ ನೆನಪಾಗುತ್ತದೆ. ಕೆಟ್ಟವನಲ್ಲದೇ ಇದ್ದರೂ ಗಂಡ ಯಾಕೋ ತನ್ನ ತವರು ಎಂದರೆ ತುಸು ರೇಗಾಡುತ್ತಾನೆ, ಇದರಿಂದ ತನ್ನ ತವರು ಮನೆಯವರಿಗೆ ಆಗುವ ತೊಂದರೆಗಳನ್ನ ನೋಡಿ ತನಗೆ ಬೇಜಾರಾಗುತ್ತದೆ. ಹೋದ ವಾರದಿಂದ ತಮ್ಮಮ್ಮನಿಗೆ ಬೆನ್ನು ನೋವು ಜೋರಾಗಿದೆಯಂತೆ, ಎರಡು ದಿನ ಆಸ್ಪತ್ರೆಗೂ ಸೇರಿಸಿ, ಅಪ್ಪ ಒಬ್ಬನೇ ಪೇಚಾಡುತ್ತಿದ್ದನ್ನು ನೆನೆದು ದಿನವೂ ನೋಯುತ್ತಾಳೆ. ಆಫೀಸಿನಿಂದ ತಾಸಿಗೊಮ್ಮೆ ಅಪ್ಪನಿಗೆ ಫೋನ್ ಮಾಡಿ ಅಮ್ಮನ ಆರೋಗ್ಯ ವಿಚಾರಿಸುತ್ತಾಳೆ. ತನ್ನೂರಿನ ಡಾಕ್ಟರ್ ನೀಡಿದ ಗುಳಿಗೆಗಳ ವಿವರಗಳನ್ನು ಫೋನಿನಲ್ಲೇ ಅಪ್ಪನಿಂದ ಕೇಳಿ ಬೆಂಗಳೂರಿನ ತನ್ನ ಡಾಕ್ಟರ್ ಸ್ನೇಹಿತರಲ್ಲಿ ವಿಚಾರಿಸಿದ್ದಾಳೆ. ಕೆಲಸದ ನಡು ನಡುವೆ ಗೂಗಲ್ ನಲ್ಲಿ ಬೆನ್ನು ನೋವಿಗೆ ಏನೇನು ಮಾಡಬೇಕು, ಏನು ಮಾಡಬಾರದೆಂದು ಹುಡುಕಿ ತಿಳಿದುಕೊಂಡು ಅಮ್ಮನಿಗೆ ಅವುಗಳನ್ನು ತಿಳಿಹೇಳುತ್ತಾಳೆ.  ಮನೆಯಲ್ಲಿ ತನ್ನ ಗಂಡ ಇಲ್ಲದ ವೇಳೆ ಮಗನಿಂದ ಅಜ್ಜ-ಅಜ್ಜಿಯರಿಗೆ ಫೋನು ಮಾಡಿಸಿ ಮಾತನಾಡಿಸುತ್ತಾಳೆ. ಮೊಮ್ಮಗ ಅಂದರೆ ಅಜ್ಜ-ಅಜ್ಜಿಯರಿಗೆ ಬ್ರಹ್ಮಾಂಡ ಪ್ರೀತಿ. 'ಅಜ್ಜಿ, ನೀ ಜಲ್ದಿ ಅರಾಮ್ ಆಗು, ನನ್ನ ಜೊತಿ ಆಟ ಆಡುವಂತಿ ಈಸಾರಿ ಊರಿಗೆ ಬಂದಾಗ' ಅಂತ ಮೊಮ್ಮಗ ಫೋನಿನಲ್ಲಿ ಹೇಳಿದರೆ ಖುಷಿಗೆ ಮರುಕ್ಷಣವೇ ಅಜ್ಜಿಯ ಬೆನ್ನು ನೋವು ಮಾಯ.

ಎರಡು ತಿಂಗಳ ಹಿಂದೆ ಗಂಡ ತನ್ನ ಹುಟ್ಟುಹಬ್ಬಕ್ಕೆಂದು ಮೊಬೈಲ್ ಗಿಫ್ಟ್ ಮಾಡಿದ್ದ. ತನ್ನ ಪಗಾರ ಜಾಸ್ತಿ ಆದ ನಂತರ ಪ್ರತಿ ತಿಂಗಳು ಎಕ್ಸ್ಟ್ರಾ ಬರುವ ಆ ಮೂರು ಸಾವಿರ ರೂಪಾಯಿಗಳನ್ನು ಕೂಡಿಟ್ಟು ಕೆಲ ತಿಂಗಳಾದ ಮೇಲೆ ಕಂತಿನಲ್ಲಿ ಒಂದು ಗೇರ್ ಲೆಸ್ ಬೈಕ್ ಖರೀದಿಸಿ ಗಂಡನಿಗೆ ಸರ್ಪ್ರೈಸ್ ಕೊಡುವುದೆಂದು ಲೆಕ್ಕ ಹಾಕುತ್ತಿದ್ದಾಳೆ. ಮನೆಗೆ ಒಂದು ಬೈಕ್ ಅಂತ ಆದರೆ ತನಗೆ ಹಾಗು ಗಂಡನಿಗೆ ಸಹಾಯವಾದೀತು. ಮನೆಯ ಖರ್ಚು, ಅತ್ತೆ ಮಾವರ ಜೀವನೋಪಾಯ ಮತ್ತು ದವಾಖಾನೆ ಖರ್ಚು, ಹಳೆಯ ಸಾಲದ ಈ.ಎಂ.ಐ ಗಳು, ಭವಿಷ್ಯದ ಪುಟ್ಟುವಿನ ಶಾಲೆಗೆಂ ಕೂಡಿಕೆಯೆಂದು ಗಂಡ ಹಗಲೂ ರಾತ್ರಿ ದುಡಿಯುತ್ತಾನೆ. ಅವನಿಗೂ ಬಹಳ ಕಷ್ಟಗಳಿವೆ, ಈ ಎಲ್ಲಾ ಗೋಜು ದುಗುಡಗಳಿಂದ ಧೈರ್ಯ ಸಾಲದೇ ಆಗಾಗ ಅವನು ಧೃತಿಗೆಟ್ಟು ತನ್ನ ಮೇಲೆ ರೇಗಾಡುವುದನ್ನು ಗಂಗೆ ಇಂದಿಗೂ ಯಾರ ಮುಂದೆಯೂ ಹೇಳಿಕೊಂಡಿಲ್ಲ. ಅವನ ವಯ್ಯಸ್ಸಿಗೆ ಅವನಿಗೆ ಜವಾಬ್ದಾರಿಗಳು ಜಾಸ್ತಿ, ಸಮಾಧಾನ ಕಡಿಮೆ, ಮುಂದೆ ಹೋಗ್ತಾ ಎಲ್ಲ ಸರಿ ಹೋಗುತ್ತೆ ಎಂಬ ನಂಬಿಕೆ ಅವಳದು. ಹಿಂದೊಮ್ಮೆ ಹೀಗೆ ಯಾವುದೋ ಆಫೀಸ್ ಟೆನ್ಶನ್ ನಿಂದ ರೇಗಿಹೋಗಿದ್ದ ಅವನು ಸಿಟ್ಟಾಗಿ ಯಾವುದೋ ಮಾತಿಗೆ ತನ್ನನ್ನು ಹೊಡೆದಿದ್ದ. ತನ್ನ ಮುಖದ ಮೇಲೆ ಮೂಡಿದ ಹೆಪ್ಪು ಗಟ್ಟಿದ್ದ ರಕ್ತದ ಗುರುತನ್ನು ಕಂಡು ಮಗ ಪುಟ್ಟು ರಾತ್ರಿ ಅಳುತ್ತ ಬಂದು 'ಅಮ್ಮಾ.. ನೋವಾಗಕತ್ತೇತಿ?' ಅಂತ ಕೆನ್ನೆ ಸವರಿ ಕೇಳಿದಾಗ ತನಗೆ ಅಳು ತಡೆಯಲಾರದೆ ಪುಟ್ಟುವನ್ನು ತಬ್ಬಿ ಅತ್ತಿದ್ದಳು. ಅದಾಗಿ ಸ್ವಲ್ಪ ದಿನಕ್ಕೇ ಗಂಡನ ಬಿ.ಪಿ ಜಾಸ್ತಿಯಾಗಿ ಬಿದ್ದಾಗ ಅವನನ್ನು ಆಫೀಸಿನಿಂದಲೇ ಆಸ್ಪತ್ರೆಗೆ ಕರೆತಂದಿದ್ದೇವೆ ಎಂದೊಂದು ಫೋನ್ ಕರೆ ಬಂದಾಗ ತಾನು ಅರೆಹುಚ್ಚಿಯಂತೆ ಒಬ್ಬಳೇ ಆ ಆಸ್ಪತ್ರೆಗೆ ಓಡಿದ್ದಳು. ಬೆಡ್ ಮೇಲೆ ಮಗುವಿನಂತೆ ಮಲಗಿದ್ದನವನು ಪಾಪ. ಒಂದು ವಾರ ತನ್ನ ಆಫೀಸಿಗೆ ರಜೆ ಹಾಕಿ ಗಂಡನನ್ನು ತಾಯಿಯಂತೆ ನೋಡಿಕೊಂಡಿದ್ದಳು, ಆಗ ಹೋಗಿ ತುಸು ಹುಷಾರಾಗಿದ್ದ. ಅವನ ಆರೋಗ್ಯದ ಬಗ್ಗೆ ಅತ್ತೆ ಮಾವರಲ್ಲಿ ಹೇಳಿಕೊಳ್ಳುವುದು ಬೇಡ, ಅವರಿಗೂ ಚಿಂತೆಯಾಗುತ್ತದೆ ಎಂದು ಗಂಡನಿಗೆ ಹೇಳಿಕೊಟ್ಟದ್ದೂ ತಾನೇ. ಆಗಿನಿಂದ ಗಂಡನ ಊಟ, ನಿದ್ದೆ, ಆಚಾರ ವಿಚಾರಗಳಲ್ಲಿ ಏರುಪೇರಾಗದಂತೆ ತೀರಾ ನಿಗಾ ವಹಿಸುತ್ತಾಳೆ. ಆಫೀಸಿನಲ್ಲಿ ಮೊನ್ನೆ ಸೆಲ್ಫ್-ಹೆಲ್ಪ್ ಸೆಶನ್ ನಲ್ಲಿ ಒಳ್ಳೆ ಆರೋಗ್ಯ-ಅಭ್ಯಾಸಗಳೆಂದು ಆ ಟ್ರೈನರ್ ಹೇಳಿದ ಚಿಕ್ಕ ಪುಟ್ಟ ಟಿಪ್ಸ್ ಗಳನ್ನು ಬರೆದಿಟ್ಟುಕೊಂಡು ಅಲ್ಲಲ್ಲಿ ಅಳವಡಿಸಿಕೊಳ್ಳುತ್ತಾಳೆ.

ಸಂಜೆ ಆಫೀಸ್ ನಿಂದ ವಾಪಸ್ಸು ಮನೆಗೆ ಹೋಗುವಾಗ ತಾನು ಪ್ರಯಾಣಿಸುತ್ತಿದ್ದ ಬಾಡಿಗೆ ಓಲಾ ಕ್ಯಾಬ್ ರಸ್ತೆಯಲ್ಲಿ ನಡೆಯುತ್ತಿದ್ದ ದುರ್ಗಾ ದೇವಿ ಮೆರವಣಿಗೆಯನ್ನು ದಾಟಿಕೊಂಡು ಹೋಗಬೇಕಿತ್ತು. ದೈತ್ಯಾಕಾರದ ಪ್ರಸನ್ನ ದುರ್ಗೆಯ ಮೂರ್ತಿ, ಅವಳ ಮೈ ತುಂಬಾ ಅಲಂಕಾರದ ಒಡವೆಗಳು, ಸುತ್ತ ಮುತ್ತಲೂ ಸಾವಿರ ಜನ ಹಾಡಿ ಕುಣಿದು ಆಚರಿಸುತ್ತಿರುವುದನ್ನು ಗಂಗೆಯು ಕಾರಿನ ಕಿಟಕಿಯಿಂದಲೇ ತದೇಕಚಿತ್ತದಿಂದ ನೋಡುತ್ತಿದ್ದಳು. ದುರ್ಗೆಯ ಮೂಗಿನ ನತ್ತನ್ನು ಗಮನಿಸಿದಾಗ, ತಾನು ಮದುವೆಯಾದ ಹೊಸತರಲ್ಲಿ ಅಪ್ಪ ತನಗೆ ಮಾಡಿಸಿ ಹಾಕಿದ್ದ ಬಂಗಾರದ ನತ್ತುನೆನಪಾಯಿತು. ಅರೆ! ತಾಯಿಯ ನತ್ತು ಕೂಡ ನನ್ನ ನತ್ತಿನಂತೆಯೇ ಮೂರು ಮುತ್ತಿನದ್ದಿದೆ ಎಂದು ಖುಷಿಪಟ್ಟಳು. ಡೋಲು ಡಂಗುರದ ನಡುವೆ ಧೂಪ ಹಾಕಿ, ಬಣ್ಣಗಳ ಬಳಿದುಕೊಂಡು ಕುಣಿಯುತ್ತಿದವರನ್ನು ನೋಡಿ ಮೈಮರೆತು ಕುಳಿತವಳಿಗೆ ತನ್ನ ಕ್ಯಾಬ್ ಡ್ರೈವರ್ ನ ಹಾರ್ನ್ ಶಬ್ದದಿಂದ ಟ್ರಾಫಿಕ್ ನ ಅರಿವಾಯಿತು. ಕ್ಯಾಬ್ ತುಸು ಮುಂದೆ ಹೋಗುತ್ತಿದ್ದಂತೆ ತನ್ನ ಕಿಟಕಿಯ ಗಾಜನ್ನು ಚೂರು ಕೆಳಗಿಳಿಸಿ ಅಂಗೈ ಹೊರ ಹಾಕಿ ಕೈ ಮುಗಿದರೆ, ಮೆರವಣಿಗೆಯಲ್ಲಿದ್ದ ಯಾರೋ ಒಬ್ಬರು ಎರಡು ಹೂವುಗಳನ್ನು ಅವಳ ಕೈಗಿಟ್ಟರು. ಹೂವುಗಳು ಕೈಗೆ ಬಿದ್ದಂತೆಯೇ ಗಂಗೆಗೆ ಆ ಕ್ಷಣದಲ್ಲಿ ಖುಷಿ, ಸಮಾಧಾನ ಹಾಗೂ ತನ್ನ ಸಾವಿರ ದುಃಖಗಳು ಒಮ್ಮೆಲೇ ನುಗ್ಗಿಬಂದು ಅವಳ ಕಣ್ಣಲ್ಲಿ ನೀರಾಗಿ ಹೋದವು. ಅವಳಿಗೆ ದುರ್ಗೆ ಇನ್ನೂ ಹತ್ತಿರ ಕಂಡಳು. ಕ್ಯಾಬ್ ನ ಡ್ರೈವರ್ ಹಿಂದೆ ತಿರುಗಿ 'ಕ್ಯಾ ಮೇಡಂ? ಮಾ ಕಾ ಆಶೀರ್ವಾದ್ ಮಿಲ್ಗಯಾ ಆಪ್ಕೋ' ಅಂತ ನಗುತ್ತಲೇ ಹೇಳಿದ. ಅರೆನಗುವಲ್ಲಿ 'ಹೌದು, ಪುಣ್ಯ ನಂದು' ಅಂದಳು. 'ಒಹ್, ನೀವು ಕನ್ನಡದವರಾ!' ಅಂತ ಅಂದು ಡ್ರೈವರ್ ಮತ್ತೊಂದು ಹಾರ್ನ್ ಹಾಕಿ ಗಾಡಿ ಮುನ್ನಡೆಸಿದ. ಆ ಇಪ್ಪತ್ತು ನಿಮಿಷಗಳಲ್ಲಿ ದುರ್ಗೆ ಹಾಗೂ ತನ್ನ ನಡುವೆ ಅದ್ಯಾವುದೋ ಮಾತಿರದ ಸಂಭಾಷಣೆ ಆಯಿತೆಂಬ ಭಾವನೆ ಗಂಗೆಯದ್ದು. ದೇವಿಯ ಕಣ್ಣಲ್ಲಿ ಕಣ್ಣಿಟ್ಟು ಅವಳಿಂದ ಧೈರ್ಯ ಪಡೆದುಕೊಂಡವಳಂತೆ, ಬಂದ ಕಣ್ಣೀರನ್ನು ನುಂಗಿಕೊಂಡಳು. ಹೇಗೋ ಇನ್ನು ತುಸು ದಿನ ಕಳೆದರೆ ಎಲ್ಲವೂ ಸರಿ ಹೋಗಿ, ಮತ್ತೆ ಹೊಸತಾಗಿ ಎಲ್ಲಾ ಚಂದವಾಗುತ್ತದೆ ಎಂಬ ಹುಚ್ಚು ನಂಬಿಕೆ ಅವಳನ್ನು ಆವರಿಸಿತು. ಬ್ಯಾಗಿನಲ್ಲಿನ ಪುಟ್ಟ ಕನ್ನಡಿಯ ಹೊರತೆಗೆದು ತನ್ನ ಕಣ್ಣ ಕಾಡಿಗೆಯನ್ನೊಮ್ಮೆ  ಸರಿಮಾಡಿಕೊಂಡಳು. ಗೋಜು ಗದ್ದಲ ಸರಿದಂತೆ ಅವಳ ಗಾಡಿ ಮುನ್ನಡೆಯಿತು.    

           ಅಂದಹಾಗೆ, ಇಂತಹ ನೂರು ಗಂಗೆಯರನ್ನು ನಾವು ದಿನವೂ ನೋಡುತ್ತೇವೆ. ಒಮ್ಮೊಮ್ಮೆ ಆಫೀಸಿನಲ್ಲಿ ನೀರು ಕುಡಿಯುತ್ತ ನೇಪಥ್ಯದಲ್ಲಿ ಯಾವುದೋ ಟ್ಯಾಬ್ಲೆಟ್ ತಗೆದುಕೊಳ್ಳುತ್ತಿರುತ್ತಾಳೆ, ಮರುದಿನ ಏನೂ ಆಗದವರಂತೆ ರಂಗೋಲಿ ಕಾಂಪಿಟಿಷನ್ ನಲ್ಲಿ ಸಂಭ್ರಮದಿಂದ ಆಚರಿಸುತ್ತಿರುತ್ತಾಳೆ. ಒಮ್ಮೊಮ್ಮೆ ಯಾರಿಗೋ  'ಏನ್ರೀ? ಮದುವೆಯಾದಾಗಿಂದ ಆಫೀಸಲ್ಲಿ ಜಾಸ್ತಿ ಕಾಣೋದೇ ಇಲ್ಲ ನೀವು?' ಎಂದು ಕೇಳಿ ನಕ್ಕರ, ಒಮ್ಮೊಮ್ಮೆ  ಎಲ್ಲರೂ ನಗುವಾಗ ಒಬ್ಬಳೇ ಎಲ್ಲೋ ಕಳೆದು ಹೋದವರಂತೆ ಕೂತಿರುತ್ತಾಳೆ.  ಒಮ್ಮೊಮ್ಮೆ ಎರಡು ದಿನ ಹುಷಾರಿಲ್ಲ ಎಂದು ಯಾರಿಗೂ ಸಿಗದೇ ಇದ್ದುಬಿಡುತ್ತಾಳೆ, 'ಆಕೆಗೆ ಮನೇಲಿ ಏನೋ ಪ್ರಾಬ್ಲಮ್ ಇದೆ ಪಾಪ' ಅಂತ ಜನ ಮಾತನಾಡಿಕೊಳ್ಳುತ್ತಾರೆ. ಒಮ್ಮೊಮ್ಮೆ ರಸ್ತೆಯ ಬದಿ ಕಾಯಿಪಲ್ಯ ಮಾರುತ್ತ 'ತಗೋರಿ ಯಪ್ಪಾ.. ಎರಡು ರೂಪಾಯಿ ಕಮ್ಮಿಗೆ ಕೊಡ್ತೀನಿ' ಅಂದರೆ, ಒಮ್ಮೊಮ್ಮೆ ಊರಿನಿಂದ ಫೋನು ಮಾಡಿ 'ಮಗಾ.. ನಿನ್ನೆ ರಾತ್ರಿ ನನಗ ಕೆಟ್ಟ ಕನಸು ಬಿದ್ದಿತ್ತು, ಅರಾಮ್ ಆದಿ ಹೌದಿಲ್ಲಾ ಅಲ್ಲೆ ನೀ?' ಎಂದು ಭಾರವಾದ ಧ್ವನಿಯಲ್ಲಿ ಕೇಳುತ್ತಾಳೆ. ಒಮ್ಮೊಮ್ಮೆ ಪುಟ್ಟ ಮಗುವನ್ನು ಮೈಗೆ ಬಿಗಿದುಕೊಂಡು ಝಾನ್ಸಿ ರಾಣಿಯಂತೆ ದಟ್ಟ ಟ್ರಾಫಿಕ್ ನಲ್ಲಿ ಬೈಕು ಚಲಾಯಿಸಿಕೊಂಡು ಹೋಗುತ್ತಾಳೆ, ಆಗಾಗ ಅವಳನ್ನು ರೋಡಲ್ಲಿ ಯಾರೋ ಪುಢಾರಿಗಳು ಕೆಟ್ಟದಾಗಿ ಛೇಡಿಸುತ್ತಾರೆ. ಅವಳ ಮದುವೆಯಾಗುತ್ತಿಲ್ಲ ಎಂದು ಅಪ್ಪ ಸಿಟ್ಟು ಸಿಡುಕು ಮಾಡಿಕೊಂಡು ಓಡಾಡುತ್ತಾರೆ, ಮಕ್ಕಳಾಗುತ್ತಿಲ್ಲ ಎಂದು ಅತ್ತೆ ಹೀಯಾಳಿಸುತ್ತಾಳೆ, ಗಂಡನ ಬಿಟ್ಟವಳೆಂದು ಸಮಾಜ ಕಥೆ ಮಾಡಿ ಆಡಿಕೊಂಡು ಸಮಾಧಾನವಾಗುತ್ತದೆ. ಆಗಾಗ ದೇವಸ್ಥಾನಗಳಲ್ಲಿ ದೇವರೊಡನೆ ಮೌನ ಸಂಭಾಷಣೆಯಲ್ಲಿ ತೊಡಗಿದವರಂತೆ ಮೂಲೆಯಲ್ಲಿ ನಿಂತಿರುತ್ತಾಳೆ. ಆಫೀಸು, ಮನೆ, ರಸ್ತೆ, ಊರು, ಜವಾಬ್ದಾರಿ ಹಾಗೂ ಕನಸುಗಳ ನಡುವೆ ಸಿಕ್ಕಿ ಒದ್ದಾಡಿ, ಮತ್ತೆ ನಗುತ್ತಲೇ ಹಬ್ಬಗಳಲ್ಲಿ ಅವಳು ದುರ್ಗೆ, ಕಾಳಿ, ಲಕ್ಷ್ಮೀಯಾಗುತ್ತಾಳೆ.


ನಮ್ಮ ಜೊತೆಗಿರುವ ಇಂತಹ ಗಂಗೆಯರನ್ನು ಗ್ರಾಂಟೆಡ್ ಆಗಿ ತೆಗೆದುಕೊಳ್ಳದೇ ಅವರನ್ನು ಅಂಗೀಕರಿಸೋಣ. ಅದಷ್ಟೇ ಸಾಕು! ಬೇರೆಲ್ಲ ದುನಿಯಾ ನಮ್ಮಪ್ಪರಿಗಿಂತಲೂ ಚನ್ನಾಗಿ ಅವರಿಗೆ ಗೊತ್ತು. 
ಗಂಡಸರಿಗೆಲ್ಲ ಹಿಂದೆ ಹೋದ ಹಾಗೂ ಮುಂದೆ ಬರುವ ವಿಶ್ವ ಮಹಿಳೆಯರ ದಿನಗಳ ಶುಭಾಷಯಗಳು!    


No comments:

Post a Comment

ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...

ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು,...