Sunday, February 23, 2014

ನಾಯಿ ಮಗ



ಶರಣನ ಟೇಬಲ್ ಮೇಲಿದ್ದ ಒಂದು ಕಥೆ ಯಾರಿಗೋ ಕಂಡದ್ದು ಹೀಗೆ..

ಮೂಗನ ಕೇಕೆಯ ಕೇಳದಷ್ಟು ಕಿವುಡು,
ಕಿವಿಯಿರದ ವಾದ್ಯಕ್ಕೆ ಹಾಡಿದ್ದೆಲ್ಲ ಸೊಗಡು 
ಕನಸಿನ ಕಾಲ್ತುಳಿತಕ್ಕೆ ಹಣ್ಣಾದ ದೇಹಕೆ.. 
ಕಣ್ಣೀರ ಬಣ್ಣದಲ್ಲಿ ಕಂಡೀತೆ ಗೂಡು. 

ಯಾವ ಬೇಲಿಯ ಹಂಗಿಲ್ಲದೆ, ಯಾವ ಕಾಗದದ ಅಧಿಪತ್ಯವಿಲ್ಲದೆ ಕಾಲು ಸೋತಲ್ಲಿ ಮನೆ ಮಾಡಿದ ಅವನಿಗೆ ಇವರಿಟ್ಟ ಹೆಸರು ಭಿಕ್ಷುಕ. 


ಬೆತ್ತಲೆ ಕಣ್ಣುಗಳಿಂದಲೇ ಎಲ್ಲವನ್ನು ನೋಡಿ, ವೇಷವನ್ನು ಭೇದಿಸಿ  ನಗ್ನವ ಕಂಡು ಅಪ್ಪಿ ನಕ್ಕವನಿಗೆ ಇವರಿತ್ತ ಹೆಸರು ಹುಚ್ಚನೆಂದು. 


ಕೆಲುವು ಪದಗಳಿಗೆ ಆಳಾಗಿರದೆ, ಯಾವ ವ್ಯಾಕರಣಕ್ಕು ಬಗ್ಗದೆ, ಮನಸಿನ ಭಾಷೆಯನಾಡಿ ಆ ಬೀದಿ ನಾಯಿಗೂ ಆಪ್ತನಾದವನ ಇವರು ಕರೆವುದು ನಾಯಿ-ಮಗ ಎಂದು. 


ಅಪ್ಪ ಅಂದು ಅಮ್ಮನೊಡನೆ ಜಗಳವಾಡಿ ಕೆಲಸಕ್ಕೆ ಹೋಗೋವಾಗ ಅವರನ್ನು ನೋಡಿ ಈತ ನಕ್ಕಿದ್ದನಂತೆ, ಪಕ್ಕದ್ಮನೆ ಆನಂದಿ ಅವಳ boyfriend ಜೊತೆ ಬೈಕ್ ಮೇಲಿದ್ದಾಗಲೂ ನೋಡಿ ಮುಗುಳ್ನಕ್ಕಿದ್ದ ನಂತೆ. ಮೊನ್ನೆ ಆಂಟಿ ಹಳಸಿದ ಅನ್ನವನ್ನು ಬೀದಿಗೆ ಚೆಲ್ಲಿದಾಗ ಅದನ್ನು ತಗೊಂಡು ತಿಂದಿದ್ದನಂತೆ. ಇವನಿಗೆ ಹಳಸು, ಹೊಲಸು, ಜಗಳ, ಮುಚ್ಚು-ಮರೆ, ದುಖ್ಖ ಇದೆಲ್ಲ ತಿಳಿಯುವುದಿಲ್ಲ ಪಾಪ. ಒಂಥರಾ ಮನಸ್ಸಿನಿಂದ ಅಂಗವಿಕಲ ಇದ್ದಂತೆ ಎಂದು ಹೇಳುತ್ತಾರೆ. ಮಳೆಯಲ್ಲಿ ತೋಯಿದ ಇವನ ಚಾದರ ಬಿಸಿಲಲ್ಲಿ ಒಣಗುತ್ತೆ, ಸೂರ್ಯ ಕಣ್ಣಲ್ಲಿ ಮೂಡಿ ಕುಕ್ಕಿ ಎಬ್ಬಿಸಿದಾಗ ಆದ ಇವನ ಬೆಳಗು ರಾತ್ರಿಯ ಥಂಡಿ ಗೆ ಮುಗಿಯುತ್ತದೆ. ಅವನ ಹೆಸರು ಬಂದಿದ್ದು ಅವನೊಡನೆ ಇರುವ ಆ ಮುಪ್ಪಾದ ನಾಯಿಯಿಂದ. ಅಡಪು ಹತ್ತಿದ್ದ ನಾಯಿಯ ಮೈ ಕಾಣದಷ್ಟು ಕುರುಡು ಅವನದ್ದು.   ಅಗಸ್ತ್ಯ ನ ಪ್ರಕಾರ ತನ್ನ ಇಡೀ apartment ನಲ್ಲಿ ಸದಾ ನಗುತ್ತ, ಖುಷಿಯಿಂದ ಇರುವವ ಇವನೊಬ್ಬನೇ. 


ಸಂಜೆ ೪:೩೦ ವೇಳೆಗೆ ಹಠಾತ್ತನೆ ಶುರುವಾದ ಮಳೆಗೆ ಅಗಸ್ತ್ಯನ ಕಿಟಕಿಯು ಕನಸಿನ ಬಾಗಿಲಾಗಿತ್ತು. ಕಯ್ಯಲಿ ಲೇಖನಿ ಹಿಡಿದು ಕಿಟಕಿಯ ಪಕ್ಕ ಕುಂತರೆ ಖಾಲಿ ಕಾಗದಗಳು ಸಾಲು ಸಾಲಾಗಿ ಮುಕ್ತಿ ಹೊಂದುತ್ತಿದ್ದವು, ತಮ್ಮ ಇರುವಿಕೆಯ ಭಾಸವಾಗಿ ಖುಷಿಯಿಂದ ಮಡಿಯುತ್ತಿದ್ದವು, ಪ ಅಸಂಖ್ಯ ಪದಗಳಾಗಿ ಮರುಜನ್ಮಿಸುತ್ತಿದ್ದವು. ಆವತ್ತು ಕಿಟಕಿಯಲ್ಲಿ ಅವನಿಗೆ ಕಂಡದ್ದು ಆ ನಾಯಿ-ಮಗ. 


ಮುಪ್ಪಾಗಿ ಬಸವಳಿದು ಇನ್ನೇನು ಭೂಮಿಯಾಗಬೇಕು ಎನ್ನುವ ವಯ್ಯಸ್ಸಲ್ಲಿದ್ದ ಆ ಭವ್ಯವಾದ ಆಳದ ಮರದ ಕೆಳಗೆ ಕುಳಿತ್ತಿದ್ದ ಆ ನಾಯಿ-ಮಗ. ಪಕ್ಕದ ರಸ್ತೆಯಲ್ಲಿ ಬ್ಯಾಗ್ ತಲೆಗೆ ಹಿಡಿದು ಓಡಿ ಬರುತ್ತಿದ್ದರು ಅಪ್ಪ. ಈ ಚಿತ್ರವೂ ಎರಡು ನಿಮಿಷ ಸ್ಟಿಲ್ ಪಿಕ್ಚರ್ ನಂತೆ ಅಗಸ್ತ್ಯನ ತಲೆಯಲ್ಲಿ ನಿಂತಿತು.. ಕಡುಗಪ್ಪಾದ ಆಕಾಶ, ನಾಚಿ ನೀರಾಗಿ ಹೊಳೆಯಾಗುತ್ತಿದ್ದ ಭೂಮಿ, ಈ ಅಪೂರ್ವ ಸರಸಕ್ಕೆ ಸಾಕ್ಷಿಯಾದ ಭವ್ಯ ಆಲದ ಮರ. ಜೊತೆಗೆ ಅದೆಲ್ಲವನ್ನು ತನ್ನೊಳಗೆ ಹೀರಿಕೊಳ್ಳುತ್ತ ನಿಶ್ಚಲನಾಗಿ, ನಿರ್ವಿಕಾರನಾಗಿ ಕುಳಿತ ನಾಯಿ ಮಗ. ಪಕ್ಕ ನಿಂತ ಅವನ ನಾಯಿ. ಈ ಸುಂದರ ಚಿತ್ರದಲ್ಲಿ ಕಲಾವಿದನ ಕುಂಚದ ಉಡಾಫೆಯ ಪರಿಣಾಮವಾಗಿ ಮೂಡಿದ ಅಪ್ಪ. ಈ scene ನಲ್ಲಿ ಅಪ್ಪನನ್ನು photoshop ಮಾಡಿ ಬಿಸಾಕಿದರೆ ಈ ಚಿತ್ರ complete ಆಗತ್ತೆ ಎಂದುಕೊಂಡನು ಅಗಸ್ತ್ಯ. ಮಳೆ, ಗಾಳಿ, ಮರ, ಮಾನವ, ಪ್ರಾಣಿ... ಈ ಪ್ರಕೃತಿಯಲ್ಲಿ alien ಥರ ಕಂಡಿದ್ದರು ಅಪ್ಪ. ಅದರೊಳಗೆ ಒಂದಾಗಿರಲಿಲ್ಲ ಅವರು, ಬದಲಾಗಿ ಅದರಿಂದ escape ಆಗೋ ಥರ ಕಂಡರು. 


ಅಗಸ್ತ್ಯ ತನ್ನ ಖಾಲಿ ಕಾಗದಗಳನ್ನ ನೋಡಿದ, ಒಂದು ಕಾಗದ ಹೇಳಿಕೊಂಡಿತು.. 


ಭೂಮಿಯ ಮೋಹದಲಿ ಸಂಕುಚಿತವಾದ ನೋಟಕೆ 

ದೂರದ ಸೂರ್ಯನು ತೀರ ಸಣ್ಣ 
ಹಗಲಿನ ಬೆಳಕನು ಮೈಗೂಡಿಸಿಕೊಂಡ ಕಣ್ಣಿಗೆ 
ರಾತ್ರಿಯ ನೀರವ ಕಡುಗಪ್ಪು ಬಣ್ಣ. 

ರಾತ್ರಿಯಿಡಿ ಸುರಿದ ಮಳೆಗೆ ಅಗಸ್ತ್ಯನ ಕಿಟಕಿಯು ಅವನ ಕಣ್ಣಾಗಿತ್ತು. 'ಪಾಪ ಆ ಹುಚ್ಚನಿಗೆ ಯಾರಾದರು ನೆರಳು ಕೊಡಬಾರದೇ, ರಾತ್ರಿಯೆಲ್ಲ ಮಳೆಯಲ್ಲಿ ನಡುಗುತ್ತ ಕೂರಬೇಕು ' ಅಂತ ಹೇಳಿದ ಅಮ್ಮನ ಮಾತಿಗೆ ಆ ಆಲದ ಮರ ಉತ್ತರವಾಗಿ ಕಂಡಿತ್ತು. ಪಾಪ ಆ ಹುಚ್ಚನೋ ಅಥವಾ ನಾವೋ ಎಂದು ಯೋಚಿಸಿದ್ದ. ಮಳೆ ಗಾಳಿಗಳನ್ನೇ ಮನೆಯಾಗಿಸಿದ್ದ ಅವನು ಒಂದೆಡೆಯಾದರೆ ಇಟ್ಟಿಗೆ ಕಲ್ಲುಗಳಲ್ಲಿ ಮನೆಯನ್ನು ಕಂಡು, ಪ್ರಪಂಚಕ್ಕೆ ಕುರುಡಾದ ನಾವು ಒಂದೆಡೆ.  


ಕಂಡದ್ದಕ್ಕೆಲ್ಲ ಒಂದು ಹೆಸರು, ಕಾಣದ್ದು ಸುಳ್ಳು

ಕಾಡು ಕಲ್ಲಲಿನ  ಆಕೃತಿಯ ಮನಸಲ್ಲೇ ಕಂಡವ 
ಕೆತ್ತಿದಾ ಮೇಲೆ ಮತ್ತೇಕೆ ಅಂಧನು, ಕೈ ಏಕೆ ಮುಗಿದನು.. 
ಚಿಟ್ಟೆಯ ಕಣ್ಣಿಗೆ ಹೂವಷ್ಟೇ ಕಂಡಿತ್ತು , ನಿನಗೇಕೆ ಕಂಡಿತು ನೂರೆಂಟು ಮುಳ್ಳು. 

 ಅಗಸ್ತ್ಯನ ಬರಹಗಳನ್ನು ಕಂಡ ಅಪ್ಪನಿಗೆ ಒಂಥರಾ ಹೆದರಿಕೆ. ಮೂರು ವರ್ಷ ಬೆಂಗಳೂರಿನಲ್ಲಿ IT ಕೆಲಸ ಮಾಡಿ ಅದೇಕೋ ಸರಿ ಹೋಗುತ್ತಿಲ್ಲ ಎಂದು ಬಿಟ್ಟು ಊರಿಗೆ  ಬಂದ ಹಿನ್ನೆಲೆ ಹಾಗು ಇತ್ತೀಚಿನ ಅವನ ನಡುವಳಿಕೆಗಳು ಅಪ್ಪನ  ಹೆದರಿಕೆಯ ರೂವಾರಿಗಳು .

ಶಿವಶರಣ ಬಸವಣ್ಣನವರ ಫೋಟೋ ಪೂಜೆ ಮಾಡುತ್ತಿದ್ದ ಅಮ್ಮನಿಗೆ  ' ಅಮ್ಮ, ಬಸವಣ್ಣನವರು ತಮ್ಮ ಜೀವನವಿಡೀ ಜಾತಿ ಬೇಧ ಗಳನ್ನೂ ತೊರೆಯಲು ಹೋರಾಡಿದರು, ಇಷ್ಟಲಿಂಗದ ಧೋರಣೆ ಮಾಡಿದವರು.. ಅವರ ಹೆಸರಲ್ಲೇ ಒಂದು ಜಾತುಯಾಯ್ತಲ್ಲ' ಅಂತ ನಕ್ಕಿದ್ದ. ಅಮ್ಮ ಅವನನ್ನು ignore ಮಾಡಿದ್ದು ಬೇರೆ ವಿಷಯ. ಮುಂಜಾನೆ ಪೂಜೆ ಹೊತ್ತಲ್ಲಿ ಮನೆ ನಾಯಿಯನ್ನು ಕಾಲಿಂದ ವದ್ದು ತುಳಿಸಿ ಪೂಜೆ ಮಾಡುವ ರಾವ್ ಅಂಕಲ್ ರಾತ್ರಿ ತೀರ್ಥ ಸೇವನೆ ಮಾಡಿ ಬಂದಾಗ ಅದೇ ನಾಯಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಮಾತನಾಡುತ್ತಾರೆ. ವಿಷ್ಣುವಿನ ಭಕ್ತರಾದ ರಾಘವೇಂದ್ರ ಸ್ವಾಮಿಯನ್ನೆ ಒಬ್ಬ ದೇವರನ್ನಾಗಿ ಮಾಡುತ್ತಾರೆ. ಪ್ರಾಣಿ ಹಿಂಸೆ ಮಹಾಪಾಪ ಎಂದರು ಅದ್ಯಾಕೆ ಅಷ್ಟು ದೊಡ್ಡ ದೇಹದ ಗಣೇಶ ಇಲಿಯ ಮೇಲೆ ಸವಾರಿ ಮಾಡುತ್ತಾನೆ.. ಹೀಗೆ ಏನೇನೋ ಮಾತನಾಡಿ ಮನೆಯಲ್ಲಿ foreigner ಆಗಿದ್ದನು. ಎಲ್ಲವು ಒಮ್ಮೆ ನಿರರ್ಥಕ ಎನಿಸುತ್ತಿತ್ತು. 


ಸಾಕಷ್ಟು ಓದಿಕೊಂಡಿದ್ದ, ಸಾಕಷ್ಟು ತಿಳಿದವರಂತೆ ಮಾತನಾಡುತ್ತಿದ್ದ ಅಗಸ್ತ್ಯ .ಕಿಟಕಿಯಲ್ಲಿ ಕಾಣುವ ನಾಯಿ ಮಗನ ಮೇಲೆ ಲೆಕ್ಕವಿರದಷ್ಟು ಕಥೆ ಗಳನ್ನು ಬರೆದಿದ್ದ. ಅಪ್ಪ, ಅಮ್ಮ, ಸಮಾಜ, ದುಡ್ಡು, ಖುಷಿ ಇದೆಲ್ಲದರ ಬಗ್ಗೆ ಬೇರೆ ನಿಲುವನ್ನೇ ಹೊಂದಿದ್ದ. ಸ್ಥಾವರಕ್ಕಳಿವ್ವುಂಟು, ಜಂಗಮಕ್ಕಳಿವಿಲ್ಲ ಎಂದು ಪುಸ್ತಕದ ಮೊದಲನೇ ಪುಟದಲ್ಲಿ ಬರೆದಿದ್ದ. ಯಾಕೆ ನನ್ನನ್ನ ಯಾರಾದರು ಮೆಚ್ಚಬೇಕು,  ಯಾಕೆ ನಾನು ಆ ಡಿಗ್ರಿ ಮಾಡಿದೆ, ಮಾಡಿದ ಮೇಲೆ ನನ್ನಲ್ಲಿ ಏನು ಬದಲಾವಣೆಯಾಗಿದೆ ಮಹ, ದುಡ್ಡು  ಸಂಪಾದಿಸಿದ ಮೇಲೆ ಏನು? ಮುಂದೆ ಮತ್ತೇನು? ಹೀಗೆ ಪ್ರಶ್ನೆಗಳು ಬರಿ ಹುಟ್ಟಿ ಸಾಯುತ್ತಿರಲಿಲ್ಲ, ಬೆಳೆದು ಹೆಮ್ಮರವಾಗಿದ್ದವು. ಅಪ್ಪ ಅಮ್ಮನ ಜೀವನದ ಜಂಜಾಟಗಳು, ತಂಗಿಯ ಮದುವೆ ಗೋಳು, ಸ್ನೇಹಿತರ career ಸೆಣಸಾಟ, ಖುಷಿಗೆ ಹಾಕಿದ ದುಡ್ಡಿನ ಮೂಗುದಾಣ. ಇವೆಲ್ಲವ ನೋಡಿ ಒಂದೊಮ್ಮೆ ಯೊಗಿಯಾಗಬೆಕು ಸುಮ್ಮನೆ ಅಂದುಕೊಳ್ಳುತ್ತಿದ್ದ. ಎಲ್ಲವ ಮೀರಿ ಅದೇನೋ ಒಂದು ಇದೆ, ಅದನ್ನು ಸಾಧಿಸಬೇಕು. ಮುಖದ ಮೇಲೆ ಸದಾ ನಗುವಿರಬೇಕು, ಸತ್ತರು ತುಟಿಗಳು ಹಿಗ್ಗಿಯೆ ಇರಬೇಕು... ಎಲ್ಲಕ್ಕಿಂತ ದೊಡ್ಡದು ನೆಮ್ಮದಿ.. ಅದನ್ನು ಪಡೆಯಬೇಕು. ಹೀಗೆ philosophical ಆಗಿ ಮಾತನಾಡುತ್ತಿದ್ದ. ಅದೆಲ್ಲವನ್ನು ಪಡೆಯಲು ಈ materialistic ವರ್ಲ್ಡ್ ನಲ್ಲಿ ಆಗುವುದಿಲ್ಲ, ಅದಕ್ಕೆ ಎಲ್ಲ ಬಿಟ್ಟು ಬೇರೆ ಎಲ್ಲೊ ಹೋಗಬೇಕು, ಒಬ್ಬನೇ ಮಾತಾಡಬೇಕು... ಪ್ರಶ್ನಿಸಬೇಕು, ಪ್ರೀತಿಸಬೇಕು..


ಕೆಳಗೆ ಹೆಸರು  - ಶರಣ, ನವೆಂಬರ್ ೦೯, ೨೦೧೩.

ಅಗಸ್ತ್ಯನ ಒಂದು ದಿನದ ದಿನಚರಿಯಿದ್ದಂತೆ ಇದ್ದ ಈ ಕಥೆಯನ್ನು ಓದಿದ್ದು ಉಪ್ಪಾರಪೇಟೆಯ ಪೋಲಿಸ್ S.P ಅಖಿಲ್ ಶೇಷಾದ್ರಿ ಯವರು.

ಶರಣ ಮೂರು ದಿನಗಳಿಂದ ಕಾಣುತ್ತಿಲ್ಲ ಅಂತ ಅಪ್ಪ complaint ಮಾಡಿದಾಗ ವಿಚಾರಣೆ ಶುರುವಾಗಿದ್ದು. ಅವನು ಬರೆದಿಟ್ಟ ಕಥೆ-ಕವನಗಳು, ಅವನ ಖಾಲಿ ಬಿದ್ದ wallet, ಮುರಿದು ಬಿಸಾಕಿದ್ದ ಕ್ರೆಡಿಟ್ ಹಾಗು ಡೆಬಿಟ್ ಕಾರ್ಡ್ ಗಳು, ಹಾಗು ಅವನ ಮೊಬೈಲ್ ಫೋನ್ ಇಷ್ಟು ಬಿಟ್ಟು ಬೇರೇನೂ ಇರಲಿಲ್ಲ ಅವನ ರೂಮಿನಲ್ಲಿ. ಬಟ್ಟೆ ಬರೆಗಳು, ಕೆಲುವು ಪುಸ್ತಕಗಳೂ ಇದ್ದವು. ಒಂದೆರಡು ಜತೆ ಬಟ್ಟೆ, ಒಂದು ನೀರಿನ bottle, ಅವನ ಪರ್ಸನಲ್ ಡೈರಿ ಗಳು ಶರಣನ ಜೊತೆ ಮಾಯವಾಗಿದ್ದವು. ಟೇಬಲ್ ಮೇಲೆ ತೆರೆದ ಪುಸ್ತಕ ಒಂದಿತ್ತು. 'ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ'. ಅದರ ಕೊನೆಯ ಪುಟಕ್ಕೆ ಬಂದು ನಿಂತಿತ್ತು ಅವನಿತ್ತ page-marker. ಶೇಷಾದ್ರಿ ಒಮ್ಮೆ ಶರಣನ ರೂಮಿನ ಕಿಟಕಿಯಲ್ಲಿ ಬಾಗಿ ನೋಡಿದರು, ಮತ್ತೆ ಕಂಡದ್ದು ಆ ನಾಯಿ ಮಗ.

Note : ಈ ಲೇಖನದಲ್ಲಿ ನಿಮಗೆ ಕಥೆ ಕಾಣದೆ ಇದ್ದಲ್ಲಿ, ನಿಮ್ಮ ಸಮಯ ವ್ಯರ್ಥ ಮಾಡಿದ್ದಕೆ ನನ್ನನು ಕ್ಷಮಿಸಿ. ಶರಣನ ಮನದ ಮಾತನ್ನು ಅವನು ಅಗಸ್ತ್ಯನ ಮೂಲಕ ಕಥೆಯಲ್ಲಿ ಬರೆದಿಟ್ಟಿದ್ದ. ನನ್ನ ಮಾತುಗಳನ್ನು ನಾನು ಶರಣನ ರೂಪದಲ್ಲಿ ನಿಮಗೆ ಕೊಡಲೆತ್ನಿಸಿದ್ದೇನೆ. ಶರಣ ಬರಹಗಾರ, ನಾನಲ್ಲ.. ನನ್ನ ಕಥೆ ವೀಕು. ;) ಧನ್ಯವಾದ.   




ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...

ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು,...