Wednesday, July 30, 2014

ಶಿವನ ಗೆದ್ದ ಕಾಮ



ಪಕ್ಕದ ಮನೆಯ ಆಂಟಿಯ ಶಿಫಾರಸ್ಸಿನ ಮೇರೆಗೆ ಖಾಲಿ ಕೂರಲಾಗದೆ ನಮ್ಮಮ್ಮ ಆವತ್ತು ನನ್ನನ್ನು ಒಬ್ಬ ಸ್ವಾಮೀಜಿ ಹತ್ತಿರ ಕರೆದುಕೊಂಡು ಹೋಗಿದ್ದರು. ನಾನೆಷ್ಟೇ ಬೇಡ ಎಂದರೂ ಬಿಡದೆ. 

ನನ್ನ ಹೆಸರು, ಕುಲ- ಗೋತ್ರಗಳ ಕೇಳಿದ ಮೇಲೆ ಆ ಬಿಳಿ ಗಡ್ಡದ ಕನ್ನಡಕಧಾರಿ ಸ್ವಾಮಿಜಿ ಹೇಳಿದ್ದು ನನಗೆ ಸರ್ಪ ದೋಷವಿದೆಯೆಂದು. ಒಂಭತ್ತು ತಿಂಗಳು ನಾನು ಯಾವುದೇ ಕಾರ್ಯಕ್ಕೆ ಕೈ ಹಾಕಬಾರದು, ಹಾಗೊಂದು ವೇಳೆ ಅಂತ ಕೆಲಸ ಮಾಡಿದರೆ ಸಿದ್ಧಿಯಾಗುವುದಿಲ್ಲ ಎಂದು. ಪರಿಹಾರ ಕೇಳಿದ ಅಮ್ಮನಿಗೆ ಆಟ ಕೇಳಿದ್ದೊಂದು ಪ್ರಶ್ನೆ 'ನಿಮ್ಮ ಪೂಜಾ ಕೊಠಡಿಯಲ್ಲಿ ಎಷ್ಟು ದೇವರ ಮೂರ್ತಿಗಳಿವೆ?'

ಅಮ್ಮ : ಸುಮಾರಿದೆ ಸ್ವಾಮಿಜಿ, ಶಿವ ಲಿಂಗು, ಕೃಷ್ಣ, ವಿಠಲ, ನಾಗರಾಜ, ಲಕ್ಷ್ಮಿ, ಹೀಗೆ.. 

ಸ್ವಾಮಿಜಿ : ಹಾಂ!! ಅಲ್ಲೇ ದೋಷವಾಗಿರುವುದು. ಹಾಗೆ ಒಂದೇ ಜಗಲಿಯ ಮೇಲೆ ಬೇರೆ ಬೇರೆ ಸಿದ್ಧಿ ಶಕ್ತವಾಗಿರುವ ದೇವರುಗಳನ್ನು ಇಡ ಕೂಡದು. ಪ್ರತಿ ಒಂದು ದೇವರ ಅನುಭೂತಿಗು ಒಂದೊಂದು ಫೀಲ್ಡ್ ಇರುತ್ತದೆ, ಅದು ಒಂದೇ ಜಗಲಿಯ ಮೇಲೆ ಪ್ರತಿಷ್ಟಾಪಿಸಿದಾಗ clash ಆಗುವ ಸಂಭವ ಜಾಸ್ತಿ. ನೋಡಿ ತಾಯಿ... ನೀವು ನಿಮ್ಮ ಜಗಲಿಯನ್ನು ಒಂದೇ ಕಲ್ಲಿನ ಲೆವೆಲ್ ಬದಲಾಗಿ ಸ್ಟೆಪ್ಸ್ ನಂತೆ ಮಾಡಿಸಿ. ಒಂದು ದೇವರಿಗೂ ಇನ್ನೊಂದಕ್ಕೂ height ಹೆಚ್ಚು ಕಡಿಮೆ ಮಾಡಿಸಿ. ಹಾಗಾದರೆ ಸರಿ ಹೋಗಬಹುದು, ನೀವು ಆಗ ಎಲ್ಲ ದೇವರನ್ನು ಅಲ್ಲಿ ಇಡಬಹುದು. 

ಸ್ವಾಮೀಜಿಯ ಉಪಾಯದಿಂದ ಅಮ್ಮನ ಮುಖ ಅರಳಿತ್ತು. ನನ್ನ ತಲೆ ಸವರಿ ಕೈ ಗೆ ೫೦ ರುಪಾಯಿ ಇತ್ತು ಸ್ವಾಮಿಜಿಗೆ ಕೊಟ್ಟು ಕಾಲು ಮುಗಿಯಲು ಸನ್ನೆ ಮಾಡಿದರು. ಸ್ವಾಮೀ ನನ್ನ ತಲೆ ಮುಟ್ಟಿ ಮನಸಲ್ಲೇ ತುಟಿ ಆಡಿಸುತ್ತ ಬೈದುಕೊಂಡ.. ಬಹುಷಃ ಬರೀ ಐವತ್ತೇ ರುಪಾಯಿ ಕೊಟ್ಟಿದ್ದಕ್ಕಿರಬಹುದು. ಅಮ್ಮನಿಗೆ ಆ ಬೈಗುಳಗಳು ಮಂತ್ರದಂತೆ ಕಂಡಿದ್ದವು. 

ಅಂದು ಸಂಜೆ ಆ ಸ್ವಾಮೀಜಿಗೆ ಲೇವಡಿ ಮಾಡಿದ್ದಕ್ಕೆ ಅಮ್ಮನ ಹತ್ತಿರ ಬಯ್ಯಿಸಿಕೊಂಡು ಒಬ್ಬನೇ ಟೀ ಹೀರುತ್ತಾ ಕುಳಿತಾಗ ಅನ್ನಿಸಿತು, ನಿಜವಾಗಲೂ ದೇವರುಗಳ ನಡುವೆ ಆ ಬುರುಡೆ ಸ್ವಾಮೀ ಹೇಳಿದಂತೆ clashes ಆದರೆ ಗತಿಯೇನು ಎಂದು. ಆಗ ಹೊಳೆದ ಒಂದು ಕಥೆ ಕೆಳಗಿದೆ... 

ಅಂದು ಕೈಲಾಸದಲ್ಲಿ ಪಾರ್ವತಿಯು ಏರ್ಪಡಿಸಿದ get-together  ಅಟೆಂಡ್ ಮಾಡಲು ವಿಷ್ಣು, ಬ್ರಹ್ಮ, ನಾರದರೆಲ್ಲರೂ ಸೇರಿರುತ್ತಾರೆ. ಹಾಡಿ, ಕುಣಿದು ಶಿವನ ಗುಣಗಾನ ಮಾಡುತ್ತಾರೆ. 

ತುಸು ಹೊತ್ತಿನ ನಂತರ ನಾರದ ಮುನಿಗಳು ನಾಲ್ಕು bottle down  ಆಗಿ ಅಲ್ಲಿಯೇ ಮಲಗಿದಂತಿದೆ. ವಿಷ್ಣು ಹಾಗು ಬ್ರಹ್ಮನಿಗೆ ಯಾವುದೋ ಮಾತಿಗೆ ದೂರದಲ್ಲಿ ಕೊಂಚ debate ನಡೆದಿದೆ. ಲಕ್ಷ್ಮೀ ತನ್ನ necklace ತೋರಿಸಿ ಎಲ್ಲರನ್ನು ಮೆಚ್ಚಿಸುತ್ತಿದ್ದರೆ ಪಕ್ಕದಲ್ಲಿ ಸರಸ್ವತಿ ಸ್ವಲ್ಪ embarrass ಆದಂತಿದೆ. 

ಶಿವ ಪಾರ್ವತಿ ಇದೆಲ್ಲವನ್ನು ಗಮನಿಸುತ್ತ ಕುಳಿತ ಕಡೆ ಗಣೇಶ ಮತ್ತು ಕಾರ್ತಿಕೇಯ ಬರುತ್ತಾರೆ. ಅವರಿಬ್ಬರದು ಆ ದಿನ ಮತ್ತ್ಯಾವುದೋ ಹುಸಿ ಜಗಳ ಶುರುವಾಗಿದೆ. 

ಗಣೇಶ: ಅಣ್ಣಾ.. ಅದು ಹೇಗೆ ಆಗತ್ತೆ ... ಅಮ್ಮ ನೇ ಶಕ್ತಿಶಾಲಿ ಅಲ್ಲವೆ. ಅದಕ್ಕೆ ಅವಳನ್ನು ಮಹಾ ಶಕ್ತಿ ಎಂದು ಕರೆಯುವುದು 

ಕಾರ್ತಿಕ : ಇಲ್ಲ ಗಣೇಶ. ತ್ರಿಲೋಕ ಸ್ವಾಮಿ ಎಂದೂ ಅಪ್ಪ ನೇ. ಅವನೇ ಶಕ್ತಿಶಾಲಿ, ಅಮ್ಮ ಕೂಡ ಅಪ್ಪನಿಗೆ ದಿನವೂ ಸ್ವಾಮೀ ಎಂದು ಸಂಭೋದಿಸುವುದಿಲ್ಲವೆ ?

ಗಣೇಶ : ಆದರೆ ಆ ಮಹಿಷಾಸುರ ಎಲ್ಲರನ್ನು ಮೀರಿ ಅಟ್ಟಹಾಸ ಮೆರೆದಾಗ ಅವನ ಸಂಹಾರ ಮಾಡಿದ್ದು ಅಮ್ಮನೇ ನೆನಪಿಲ್ಲವೆ ನಿನಗೆ ?

ಕಾರ್ತಿಕ: ನೆನಪಿದೆ, ಹಾಗೆ ಆ ಕೋಲಾಹಲವನ್ನೇ ಕುಡಿದು ಭಯಂಕರ ವಿಷದಿಂದ ಎಲ್ಲ ಲೋಕಗಳನ್ನು ಕಾಪಾಡಿದ್ದು ಅಪ್ಪ ಎಂದು ನೀನು ಮರೆತಂತಿದೆ. 

ಗಣೇಶ : ಮಹಾ ಕಲಿ ಆಗಿ ಸುರರನ್ನು ನಾಶ ಮಾಡಿದ್ದು ಯಾರು ಅಣ್ಣ??

ಕಾರ್ತಿಕ : ಕೊನೆಗೆ ಅದೇ ಮಹಾಕಾಳಿಯ ಕ್ರೋಧವನ್ನು ಶಮನ ಮಾಡಿದ್ದು ಯಾರು ಭ್ರಾತಾ ?

ಗಣೇಶ : ನೀನು ಅಪ್ಪ ನಿನ್ನನ್ನು ಪ್ರೀತಿಸುತ್ತಾರೆಂದು ಅವರೆಡೆಗೆ ಹೇಳುತಿರುವೆ ಬಿಡು 

ಕಾರ್ತಿಕ: ಓಹೋ!! ಹಾಗಿದ್ದರೆ ಅಮ್ಮನ ಮುದ್ದಿನ ಮಗ ನೀನೆಂದು ಇಲ್ಲಿ ಎಲರಿಗೂ ಗೊತ್ತು, ಅದಕ್ಕಾಗಿಯೆ ತಾನೇ ನೀನು ಅಮ್ಮನ ಪರವಾಗಿದ್ದು 

ಕಾರ್ತಿಕ : ಬೇರೆಲ್ಲ ಯಾಕೆ ಗಣೇಶ ಒಂದೇ ಮಾತಿನಲ್ಲಿ ಹೇಳುವುದಾದರೆ ಇಡೀ ಬ್ರಹ್ಮಾಂಡದಲ್ಲಿ  ಆ ಕಾಮನ ಗೆದ್ದವ ಶಿವ ನೊಬ್ಬನೇ, ಹರನೊಬ್ಬನೆ. ಹಾಗಾಗಿ ಅಪ್ಪನೇ ಶಕ್ತಿಶಾಲಿ. 

ಮಕ್ಕಳ ಈ ಜಗಳವನ್ನು ಕೇಳಿಸಿಕೊಂಡು ಮುಗುಳ್ನಗುತ್ತ ಕುಳಿತ ಪಾರ್ವತಿಯು ಶಿವನತ್ತ ನೋಡುತ್ತಾಳೆ. ಶಿವನು ಕಣ್ಣು ಮುಚ್ಚಿ ಧ್ಯಾನಿಯಾಗಿ ಕುಳಿತಿದ್ದಾನೆ. ಆ ಪ್ರಶಾಂತ ಮುಖವನ್ನೊಮ್ಮೆ ನೋಡಿ ಪಾರ್ವತಿ ನಗಲು ಅದರ ಪ್ರತಿಯಾಗಿ ಶಿವನ ತುಟಿಗಳು ಹಿಗ್ಗುತ್ತವೆ. ಶಿವನು ಅಂತರ್ಯಾಮಿ ಎಲ್ಲವೂ ಕೇಳಿದರೂ ಕೇಳದಂತೆಯೇ ಇರುವ ಎಂದು ಪಾರ್ವತಿ ಮನಸ್ಸಿನಲ್ಲಿ ಎಂದುಕೊಳ್ಳುತ್ತಾಳೆ. 

ಪಾರ್ವತಿ: ಗಣೇಶ.. ಕಾರ್ತಿಕೇಯ.. ಬನ್ನಿ ಇಲ್ಲಿ. ನಾವೆಲ್ಲರೂ ಶಕ್ತಿಶಾಲಿಗಳೇ, ಸಮಯದಾನುಸಾರವಾಗಿ ಆ ಶಕ್ತಿಗಳನ್ನು ಉಪಯೋಗಿಸಿದರೆ ಸೂಕ್ತವಷ್ಟೇ. ಈಗ ಜಗಳವಾಡುವುದನ್ನು ಬಿಟ್ಟು ಗುರುಕುಲಕ್ಕೆ ಹೋಗಿ, ಸಮಯವಾಯಿತು. 

ಅವರಿಬ್ಬರೂ ಅಮ್ಮನ ಮಾತಿನಂತೆ ಶಾಲೆಗೆ ತೆರಳಿದರು. ನಂದಿ, ಶಿವ ಗಣ ವೆಲ್ಲವೂ ನಕ್ಕು ಅವರನ್ನು ಬೀಳ್ಕೊಟ್ಟು ಮತ್ತೆ ಶಿವನ ಸನ್ನಿಧಿಯಲ್ಲಿ ಬಂದು ನಿಂತರು. 

ತುಸು ಹೊತ್ತಿನ ನಂತರ ಕಣ್ಣು ತೆರೆದ ಶಿವ ಪಾರ್ವತಿಯತ್ತ ನೋಡುತ್ತಾ ಹೇಳಿದ 

ಕಡೆಗೂ ಗೆದ್ದಿದ್ದು ನನ್ನ ಮಗನೇ ಅಲ್ಲವೇ ?

ಪಾರ್ವತಿ: ಗಣೇಶ ಎನೂ ಕಡಿಮೆ ಇಲ್ಲ.. ಅವನ ವಯ್ಯಸ್ಸಿಗೆ ಚೆನ್ನಾಗೆ ಮಾತನಾಡಿದ್ದಾನೆ

ಶಿವ: ಆದರೂ ಕಾರ್ತಿಕೇಯನ ಮಾತಿನಲ್ಲಿ ಅಂಶಗಳು ಜಾಸ್ತಿ ಇದ್ದವು ಎಂದು ನಮ್ಮ ಅನಿಸಿಕೆ, ಏನು ನಂದಿ? (ಸ್ವಾಮಿಯ ಮಾತಿಗೆ ಅಹುದು ಎಂದು ಗೋಣು ಹಾಕಿದ ನಂದಿ )

ಪಾರ್ವತಿ ನಂದಿಯನ್ನೊಮ್ಮೆ ಸಿಟ್ಟಿನಿಂದ ನೋಡಿ : ನೀವು ಕಾರ್ತಿಕೇಯನ ಹೊಗಳುತ್ತಿದ್ದೀರೋ ಅಥವಾ ನಿಮ್ಮ ಶಕ್ತಿಗಳ ಬಗ್ಗೆ ಜಂಭ ಕೊಚ್ಚಿಕೊಳ್ಳುತ್ತಿದ್ದೀರೋ ? 

ಶಿವ: ಏನೇ ಇರಲಿ... ಅವನು ಹೇಳಿದ್ದು ಮಾತ್ರ ಸರಿಯಾಗಿಯೇ ಇತ್ತು. ಅವನೇ ಗೆದ್ದದ್ದು ಅಂತ ನಮ್ಮ ಅಭಿಪ್ರಾಯ 

ಶಿವನ ಮಾತಿನಿಂದ ಸ್ವಲ್ಪ offend ಆದ ಪಾರ್ವತಿ ಹೇಳಿದಳು : ನೀವು ಹೇಳುತ್ತಿರುವುದು ಸರಿ ಇಲ್ಲ. ಸಿದ್ಧಿ ಶಕ್ತಿಗಳನು ಮಕ್ಕಳಂತೆ ಹೋಲಿಸಿ ನೋಡುವುದು ಸೂಕ್ತ ಅಂತ ನನಗನಿಸುವುದಿಲ್ಲ. ಒಬ್ಬರ ಮೇಲೆ ಒಬ್ಬರಿಗೆ ಆದರವಿದ್ದರೆ ಇದೆಲ್ಲವೂ ಲೆಕ್ಕಕ್ಕೆ ಬರುವುದಿಲ್ಲ. ಆಗ ಎಲ್ಲರೂ ದೊಡ್ದವರೇ 

ಶಿವ: ನಿನ್ನ ಮಾತು ಸುಳ್ಳಲ್ಲ ಆದರೆ ನಿಜ ಎಂದಿಗೂ ನಿಜವೇ ತಾನೇ? ನೀನು ಒಪ್ಪಿಕೊಳ್ಳಲೇ ಬೇಕು ತ್ರಿಲೋಕವು ತಲೆಬಾಗುವುದು ನಮಗೆ ಅಲ್ಲವೇ. ನೀನು ನಮ್ಮ ಅರ್ಧಾಂಗಿ, ಹಾಗಿದ್ದಲ್ಲಿ ನಮ್ಮ ಶಕ್ತಿ, ಯಶ್ಶಸ್ಸಿನಲ್ಲಿ ನಿನಗೂ ಅರ್ಧ ಪಾಲು ಇರುವುದೇ. (ಮಂದಹಾಸದಿಂದಲೇ ಇಷ್ಟನ್ನು ಹೇಳಿ ಮತ್ತೆ ಧ್ಯಾನಕ್ಕೆ ಅಣಿಯಾದ ಶಿವ )

ನೆರೆದ ಶಿವಗಣವೆಲ್ಲವೂ ಭೋಲೆನಾಥನಿಗೆ ಜೈ!! ತ್ರಿಲೋಕ ಸ್ವಾಮಿಗೆ ಜೈ!! ಎಂದು ಜೋರಾಗಿ ಜೈ ಕಾರ ಹಾಕಿ ಖುಷಿ ಪಟ್ಟರು.  

ಪಾರ್ವತಿ ಇನ್ನು ಮಾತನಾಡಬೇಕೆಂದು ಇದ್ದರೂ ತುಟಿಗೆ ಬಂದ ಮಾತುಗಳನ್ನು ನುಂಗಿದಳು. ನಗುತ್ತಲೇ ಎಲ್ಲರನ್ನು ಬೀಳ್ಕೊಟ್ಟು ಕೈಲಾಸಪತಿಯ ಪಕ್ಕಕ್ಕೆ ಬಂದು ಕುಳಿತುಕೊಂಡಳು. 

ಶಿವನು ಧ್ಯಾನದಲ್ಲಿ ಇರುವಾಗಲೇ ಪಾರ್ವತಿಯು ಮತ್ತೆ ಮಾತಿಗೆ ನಿಂತು 

'ಪರಮೇಶ್ವರ... ವಾದ ಇನ್ನು ಮುಗಿದಿಲ್ಲ. ಅದ್ಯಾವ ಪುರಾವೆ ಇಂದ ನೀವು ನನಗಿಂತ ಶಕ್ತಿಶಾಲಿ ಎಂದು ಹೇಳಿದಿರಿ.. ಹೇಳಿ ಈಗ '

ನಗುತ್ತಲೇ ಕಣ್ಣು ತೆರೆದು ಶಿವ ಉತ್ತರಿಸುತ್ತ 

'ದೇವಿ... ನಿನಗೆ ಸೂಕ್ತವೆನಿಸುವಂತೆ ಒಂದೇ ಮಾತಲ್ಲಿ ಹೇಳುವೆ. ಕಾರ್ತಿಕೇಯ ಹೇಳಿದ  ಮಾತನ್ನೇ ತಗೆದುಕೋ. ಕಾಮನನ್ನು ಗೆದ್ದವ ಬ್ರಹ್ಮಾಂಡದಲ್ಲೇ ಯಾರೂ ಇಲ್ಲ. ಅದು ನಾನೊಬ್ಬನೇ. ಕಾಮನನ್ನು ಗೆದ್ದವನೆಂದರೆ ಆತ ಎಲ್ಲರಲ್ಲೂ ಶ್ರೆಷ್ಟನೆಂದರೆ ನೀನು ನಂಬುತ್ತೀಯ. ನನಗಾರು ಸಾಟಿಯಿಲ್ಲವೆಂದು ಈಗಲಾದರೂ ಒಪ್ಪಿಕೊಳ್ಳುವೆಯಾ?

ಪಾರ್ವತಿ : ಓಹೋ!! ಈ ಮಾತಿಗಾಗಿಯೇ ನಿಮ್ಮ ಜಂಭ ??

ಶಿವ: ಜಂಭವಲ್ಲ, ಸತ್ಯ! ಇದೊಂದೇ ಸಾಕು (ದಿಗ್ವಿಜಯದ ನಗುವ ಬೀರುತ )

ಪಾರ್ವತಿ : ಆಗಲೇ ಎಲ್ಲರ ಮುಂದೆ ಹೇಳುವುದು ಬೇಡವೆಂದು ಸುಮ್ಮನಿದ್ದೆ. ತಿಳಿಯದೇ ಕೇಳುತ್ತಿರುವೆ ಎಂದುಕೊಳ್ಳಿ... ಕಾಮನನ್ನು ನೀವು ಗೆದ್ದಿರೋ? ಅಥವಾ ನಿಮ್ಮನ್ನು ಕಾಮ ಗೆದ್ದನೋ??

ಶಿವ : (ಆಶ್ಚರ್ಯದಿಂದ )ಹಾಂ ?? ಅದೇನು ಕೇಳುತ್ತಿರುವೆ ಸತಿ! ನನ್ನನ್ನು ಕಾಮ ಗೆಲ್ಲುವುದೇ ? ಹಿಂದೆ ಅವನು ನನ್ನ ತಪೋಭಂಗ ಮಾಡಲು ಇಚ್ಚಿಸಿದಾಗ ಅವನನ್ನು ನನ್ನ ಮೂರನೇ ಕಣ್ಣಿಂದ ಸುಟ್ಟು ಭಸ್ಮ ಮಾಡಿದ್ದು ನಿನಗೆ ನೆನಪಿನಲ್ಲಿ ಇಲ್ಲವೇ? ಸಕಲ ಜೀವಿಗಳಲ್ಲೂ ಕಾಮನಿಗ್ರಹ ಆಗಬೇಕೆಂದಾಗ ಅವರು ನನ್ನನ್ನು ನೆನೆಯುವುದಿಲ್ಲವೆ ?

ಪಾರ್ವತಿ: ಕಾಮನನ್ನು ಅಂದು ನೀವು ಸುಟ್ಟಿದ್ದು ನಿಜ, ಆದರೆ ನಿಜವಾಗಲೂ ಕಾಮ ನಿಮ್ಮನ್ನು ಗೆದ್ದಿರುವ ಎಂದು ನಾನು ಹೇಳಿದರೆ? ನೀವು ಸೋತೆನೆಂದು ಒಪ್ಪುತ್ತೀರಾ ??

ಶಿವ: ಸಿಟ್ಟಿನಿಂದ ಎದ್ದು ನಿಂತು... ಸತಿ!!! ಅದೇನು ಆಡುತ್ತಿರುವೆ. ಕಾಮ ಗೆದ್ದ ಎನ್ನುವುದಕೆ ನಿನ್ನಲ್ಲೇನಿದೆ ಸಾಕ್ಷಿ?? 

ಪಾರ್ವತಿ ಶಿವನಿಂದ ದೃಷ್ಟಿ ಕಿತ್ತು ಬಲಗಡೆ ನೋಡುತ್ತಾಳೆ... ದೂರದಲ್ಲಿ ಗಣೇಶ, ಕಾರ್ತಿಕೇಯ ಓಡೋಡಿ ಬರುವುದು ಕಾಣಿಸುತ್ತದೆ.. 

ಅಮ್ಮಾ... ಅಪ್ಪಾ.. ಇವತ್ತು ಗುರುಗಳಿಗೆನೋ tonsils ಆಗಿದೆಯಂತೆ... ಅದಕ್ಕೆ ಗುರುಕುಲಕ್ಕೆ ರಜೆ. 

ಪಾರ್ವತಿ ಅವರಿಬ್ಬರನ್ನು ತೋಳಲ್ಲಿ ಬಳಸಿ ಒಮ್ಮೆ ಶಿವನನ್ನು ನೋಡುತ್ತಾಳೆ.  ಅವಳ ಮುಖದಲ್ಲಿ ಮೂಡಿದ ನಗುವನ್ನು ಗ್ರಹಿಸಿದ ಶಿವನು ಒಮ್ಮೆ ನಕ್ಕು ಮತ್ತೆ ಕೂರುತ್ತಾನೆ. ತನ್ನ ಪ್ರಶ್ನೆಗೆ ಅವರಿಬ್ಬರನ್ನು ಸನ್ನೆಯಿಂದಲೇ ಉತ್ತರವಾಗಿ ತೋರಿಸಿ ತನ್ನ ಜಂಭವ ಮುರಿದ ಆ ಶಕ್ತಿಯ ನೋಡಿ ಧನ್ಯನಾದವನಂತೆ ಕಾಣುತ್ತಾನೆ. ಶಕ್ತಿಯಿಲ್ಲದೆ ಶಿವನಿಲ್ಲ ಎಂದು ನೆನಪಿಸಿಕೊಳ್ಳುತ್ತಾನೆ. 





ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...

ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು,...