Saturday, March 1, 2014

ಪ್ರೀತಿ ಗೀತಿ ಇತ್ಯಾದಿ!



'ನಿನ್ನ ಕಥೆಗಳಲ್ಲಿ ಬರೀ ಹುಡಗೀರನ್ನ ಸಾಯಿಸ್ತಿಯ ಯಾಕೋ ? '- ಗೌರಿ

'ಹೆಣ್ಣು ಮಾಯೆ, ಯಾರ ಕೈಗೂ ಸಿಗಲ್ಲ ಅಂತ ತೋರಿಸೋಕೆ '- ಹೇಳಿ ನಕ್ಕ ಶರಣ.

'ಓಹೋ!! ಅದಿಕ್ಕೆ ತಾವು ಶಾಶ್ವತವಾಗಿ ಯಾರ ಕೈಗೂ ಸಿಗದೇ ಇರೋ ಹಾಗೆ ಮಾಡಿಬಿಡ್ತೀರಿ' - ಗೌರಿ

'ಹಃ ಹಃ.. ಹಾಗೇನು ಇಲ್ಲ, ಒಂದೊಂದ್ಸಾರಿ ಹಂಗಾಗತ್ತೆ. ಯಾಕೆ ಅಂತ ಗೊತ್ತಿಲ್ಲ ಕಥೆ ಬರಿಯೋಕೆ ಕುಂತಾಗ ನನ್ನ ಕೈಲಿ ಕಥೆ ಇದೆಯೋ ಅಥವಾ ಕಥೆಯ ಕೈಯಲ್ಲಿ ನಾನು ಇದ್ದೀನೋ ಅಂತ ಗೊತ್ತಾಗಲ್ಲ. ಕೆಲುವು ಸಾರಿ ಬರೀ  ಪ್ರೇಕ್ಷಕನ ಹಾಗೆ ಆಗಿರ್ತೀನಿ ಅನ್ಸತ್ತೆ. ಕೇಳೋಕೆ unconvincing ಅನ್ನಿಸಿದ್ರೂ ನಾನು ಇದನ್ನ ಕೆಲುವು ಸಾರಿ feel  ಮಾಡಿದಿನಿ'.

'ಅಪ್ಪಾ.. ಮಾರಾಯ!! ಏನು ಕೇಳಿದರೂ ಕಥೆ ಹೇಳ್ತಿಯಲ್ಲೋ..!! ಆಯ್ತು ಬಿಡಪ್ಪ ಸತ್ತರೆ ಸತ್ತರು ನನಗೇನು' ಮಾತು ಮುಗಿಸಿದಳು ಗೌರಿ.

'ಎಷ್ಟು ಚನ್ನಾಗಿ ಕಥೆ ಬರೀತಿಯಲ್ಲೋ..' ಅಂತ ಹೊಗಳೋ  ಸ್ನೇಹಿತರು ಈಗೀಗ 'ಬರೀ ಕಥೆ ಹೇಳಬೇಡ ಕಣೊಲೋ..!!' ಅನ್ನುವ ಲೆವೆಲ್ ಗೆ ಬಂದಿದ್ದ ಶರಣ .

ಗೌರಿ ಶರಣನ ಸ್ನೇಹಿತೆ. ಗೌರಿನು ಶರಣಾನು ಜೊತೆಗೆ ನಡ್ಕೊಂಡ್ ಹೋದರೆ ರೋಡಲ್ಲಿ ಅಡ್ದಾಡೋರು ನೋಡಿ 'ಛೆ! ಎಂಥ ಹುಡುಗೀಗೆ ಎಂಥ ಹುಡುಗನಪ್ಪ' ಅಂತ ಶರಣನಿಗೆ ಬಯ್ಯೋವಷ್ಟು ಸುಂದರವಾಗಿದ್ದಳು.

'ಲೇ.. ಈ ಲವ್ವು, ಹುಡುಗೀರು, ಸೀರೆ, ಬ್ಲೌಸು  ಇವೆಲ್ಲ ಬಿಟ್ಟು ಬೇರೆ ಏನಾರಾ ಬರಿಯಪ್ಪ ನೀನು. ಅದೇನು ಪ್ರೀತಿನೋ, ಅದೇನು ಮಾತೋ. ಹುಡುಗ ಹುಡುಗಿ ಲವ್ ಯಾಕ್ ಮಾಡಬೇಕು ಅಂತೀನಿ. ಮನೇಲಿ ಒಂದು ಕಟ್ಟತಾರೆ, ಮದುವೆಯಾಗಿ ಮಕ್ಕಳನ್ನ ಮಾಡಿ, ಮತ್ತೆ ಆ ಮಕ್ಕಳಿಗೆ  ಮದುವೆ ಮಾಡಿಬಿಡೋದು. ಇಷ್ಟೇ ನಮ್ಮ ಲವ್ ಲೈಫ್. ಲೇ ಶರಣ, ನಿನಗೆ ಒಂದು challenge ಕಣೋ ಇವತ್ತು.. ನೀನು ಗಂಡಸೇ ಆಗಿದ್ದರೆ ಇದನ್ನೆಲ್ಲಾ ಬಿಟ್ಟು ಆ ಹಿಮಾಲಯಕ್ಕೆ ಸೆಕೆ ಆಗೊ ಹಂಗೆ ಏನಾದ್ರೂ matter  ಬರಿ ನೋಡೋಣ. ಅವಾಗ ನಿನ್ನ blog, ಕಥೆಗಳನ್ನ ಓದ್ತೀನಿ..  ' - ಆದಿತ್ಯ.

ಆದಿತ್ಯ ನು ಶರಣನ ಸ್ನೇಹಿತ. ಹುಡುಗೀರು, ಪ್ರೀತಿ ಇದೆಲ್ಲ ಯಾಕೋ ಆಗ್ತಾ ಇರ್ಲಿಲ್ಲ. ೨೫ ವರ್ಷ ಆದರೂ ಒಂದು ಹುಡುಗಿಯ flashback ನು ಇಲ್ಲದ ಅಪ್ಪಟ ಬ್ರಹ್ಮಚಾರಿ. ಆಧ್ಯಾತ್ಮ, ಸಂಸ್ಕೃತಿ, ಯೋಗಿಗಳ ಬಗ್ಗೆ ತುಂಬಾ ಆಸಕ್ತಿ. ಜೀವನದ ಬಗ್ಗೆ ತುಂಬಾ ತಿಳಿದವರಂತೆ ಮಾತನಾಡುತ್ತಿದ್ದ.

ಶರಣನಿಗೆ ಇನ್ನೊಬ್ಬ ಸ್ನೇಹಿತನಿದ್ದ... ಶಾಮ!

'ಪಕ್ಕದ ಮನೆ ಆಂಟಿ ನೋಡಿದೆನೋ ಶರಣ..?? ಏನ್ ಇದಾಳೆ ಗೊತ್ತ!  ನೈಟಿ ಹಾಕಿದರೂ ಸಕ್ಖತ್ತಾಗಿ ಕಾಣ್ತಾಳೆ.  ಮೇಲಿಂದ ಕೆಳಗೆ ಒಂದೇ ಒಂದು ಸರ್ತಿ ನೋಡಿದರೂ ಜೀವನ ಪೂರ್ತಿ ಹಾಳು ಆದಂತೆ !! ಕಣ್ಣಲ್ಲಿ ಕೊಡೊ ಆ ಲುಕ್ ನೆನಸಿಕೊಂಡ್ರೆ.... ಆಹಾ!!. ಅವಳ  ಗಂಡ ಆರ್ಮಿ ಲಿ ಇದಾನಂತೆ, ಪಾಪ ಮದುವೆಯಾಗಿ ವರ್ಷ ನು ಆಗಿಲ್ಲ  ಅದೇನು ಕಷ್ಟನೋ ಏನೋ ಅವಳಿಗೆ.. ಪಕ್ಕ ನಮ್ಮಂಥವರು ಇದ್ದ್ಕೊಂಡು ಏನಾರಾ ಸಹಾಯ ಮಾಡ್ಬೇಕು ಕಣೋ... ' ಅಂದು ನಕ್ಕಿದ್ದ.

'ಲೇ ಮಗನೆ ಶಾಮ ... ಅವಳು ಇರೋ ರೇಂಜ್ ಗೆ ಒಮ್ಮೆ ಗುದ್ದಿದರೆ ಸಾಯ್ತಿಯ ನೀನು. ಮೊದಲೇ  apartment secretary ಕಣ್ಣಿದೆ ಅವಳ ಮೇಲೆ. ಅವಳೂ ಒಂಥರಾ ಇದಾಳೆ .  ಏನಾರ ಮಾಡೋಕೆ ಹೋಗಿ ಅನಾಥ ಶವ ಆಗೀಯ ಅಂತೀನಿ.. ಹ ಹ!! ' - ಶರಣ.

ಶಾಮ ಆ ವಿಷಯದಲ್ಲಿ ಸ್ವಲ್ಪ ವೀಕು.. ಪೂರ್ತಿ ಶ್ರೀಮಂತನ ಅರ್ಧ ಹಾಳಾದ ಮಗ. ಅಪ್ಪ ಊರಲ್ಲಿ MLA. ಇವನು ಇಲ್ಲಿ M.B.A ಮಾಡ್ತಾ ಇದಾನೆ. ಅವಾಗವಾಗ ಶರಣ, ಶಾಮ ಹಾಗು ಆದಿತ್ಯ ಸೇರೋ ಜಾಗ ಅದೇ ಶಾಮನ apartment ನ flat.

ಆವತ್ತು ಶನಿವಾರ ಶರಣ ತನ್ನ ಕಥೆಯ ಹುಡುಕಾಟದಲ್ಲಿ ಹೊರಟಿದ್ದ. BMTC ಬಸ್ ಪಾಸು ತಗೆಸಿ ಊರು ಸುತ್ತೋ ಚಾಳಿ, ಕಥೆಗೆ ಸ್ಫೂರ್ತಿಯಾಗೋ ವಂಥದ್ದು ಏನಾದರೂ ಸಿಗುತ್ತೇನೋ ಅಂತ.

ಬೆಳಿಗ್ಗೆ ಏಳು ಘಂಟೆಗೆ ಆಗಲೇ ಆದಿತ್ಯ ಸಾವನದುರ್ಗ ತಲುಪಿದ್ದ. ಹೆಗಲಿಗೆ ಒಂದು ಬ್ಯಾಗ್ ಹಾಕಿ, ಕೈಲಿ ವಾಟರ್ ಬಾಟಲಿ ಹಿಡಿದುಕೊಂಡು ಗುಡ್ಡದ ತುತ್ತ ತುದಿಯಲ್ಲಿ ಕಣ್ಣು ಮುಚ್ಚಿ ಕೈ ಚಾಚಿ ನಿರಾಳವಾಗಿ ನಿಂತಿದ್ದ . ರಭಸವಾದ ಗಾಳಿ trekking ಮಾಡಿ ಬೆವರಿದ ಮೈಗೆ ಚಳಿ ತರುತ್ತಿತ್ತು . ಕಾರ್ಮೋಡಗಳ ಊರಿನಿಂದ ದೂರ ಬಂದು ಹೊಸ ಆಕಾಶಕ್ಕೆ ನಗು ಮುಖ ಮಾಡಿ ನಿಂತಿದ್ದ.

 CCD  ನಲ್ಲಿ ಇಬ್ಬರೂ ಕುಳಿತಿದ್ದಾರೆ, ಅವಳು DBC ಕೇಕ್ ಅನ್ನು ಕೈಯ್ಯಾರೆ ಅವನಿಗೆ ತಿನಿಸಿದಳು.

'ಇನ್ನು ಎಷ್ಟು ದಿನ ನೋ? ನಮ್ಮ ಬಗ್ಗೆ ಮನೇಲಿ ಮಾತಡೋಣವಾ ??' - ಗೌರಿ

'ಅಷ್ಟೇನೆ ಅರ್ಜೆಂಟ್ ನಿಂಗೆ  ಮದುವೆ  ಮಕ್ಕಳು  ಮಾಡೋಕೆ?  ನಿಲ್ಲೇ ಆರಾಮಾಗಿ ಆಗಲಿ.. ಅಣ್ಣ US ನಿಂದ ಬಂದಮೇಲೆ ಮಾತಾಡೋಣ.' - ಅವನು ಅಂದ.

'ಅಣ್ಣನ ಹತ್ತಿರ ಫೋನ್ ನಲ್ಲೂ ಮಾತಾಡಬೋದಲ್ಲ.. '-ಗೌರಿ.

'ನಿಂಗೆ ಅಷ್ಟೇ ಅರ್ಜೆಂಟ್ ಇದ್ದರೆ ಹೇಳು, ಮಕ್ಕಳು ಮಾಡಿನೇ  ಮದುವೆ ಆಗೋಣ ' - ನಗುತ್ತಲೇ ಹೇಳಿದ ಅವನು.

ಅವಳ ಗಂಭೀರ ಮಾತಿಗೆ ಅವನ ಉಡಾಫೆಯ ಉತ್ತರ ಅವಳಿಗೆ ಸರಿ ಕಾಣದೆ ಇದ್ದರೂ ಮುಂದೆ ಹೇಳಿದಳು 'ಅಪ್ಪ ನನ್ನ ಮದುವೆ ತಯಾರಿ ನಡೆಸಿದ್ದಾರೆ , ಬರೋ ಶನಿವಾರ ಹುಡುಗ ನೋಡೋಕೆ ಬರ್ತಾ ಇದಾನೆ'

'ಜಾಸ್ತಿ ತಲೆ ಕೆಡಸಿಕೊಬೇಡ ಗೌರಿ, ಆಗೋದು ಆಗೇ ಆಗತ್ತೆ, ಈಗ ನಡಿ ಸಿನಿಮಾ ಕೆ ಲೇಟ್ ಆಗತ್ತೆ  ' ಅವಳ ಕೈ ಹಿಡಿದು ಎಬ್ಬಿಸಿ, ನಡೆಯುವಾಗ ಅವಳ ಸೊಂಟವ ಬಾಚಿ ನಡೆದ.

ರವೀಂದ್ರ ಕಲಾಕ್ಷೇತ್ರ ದ ಮುಂದೆ ಟ್ರಾಫಿಕ್ ಗೆ ಸಿಕ್ಕಿ ನಿಂತಿದೆ ಬಸ್. ಕಿಟಕಿಯಿಂದ ಅತ್ತ ಇತ್ತ ನೋಡಿ ಮನಸಲ್ಲೇ ಅಂದುಕೊಂಡ ಶರಣ ಈ ಬೆಂಗಳೂರಲ್ಲಿ ಟ್ರಾಫಿಕ್ ಇಷ್ಟು ಇರದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು. ಅಷ್ಟರಲ್ಲಿ ಬಸ್ ಮತ್ತೆ ಹೊರಟಿತು.. ಶರಣನ ಕಥೆಯ ಹುಡುಕಾಟಕ್ಕೆ ಇನ್ನು ಯಾವುದೇ ದಡ ಸಿಕ್ಕಿಲ್ಲ.

ಸಣ್ಣಗೆ  ಘಲ್  ಘಲ್  ಅಂತ ಕೇಳಿದ ಪಕ್ಕದ ಮನೆ ಆಂಟಿ ಯಾ ಬಳೆಗಳ ಸದ್ದಿಗೆ ಶಾಮನ ಕಿವಿ ನಿಮಿರಿದವು. ತನ್ನ ಬಾಗಿಲಿಂದ ಕಣ್ಣು ಹಾಯಿಸಿ ಅವಳನ್ನು ನೋಡಿದ್ದು ಅವಳಿಗೆ ಗೊತ್ತಿರುವಂತಿತ್ತು. ವಗೆದ ಕೆಲ ಬಟ್ಟೆಗಳನ್ನು ತಂತಿಗೆ ಹಾಕಿ, ಕೂದಲನ್ನು ಬಿಚ್ಚಿ ಸೂರ್ಯನಡೆ ನೋಡುತ್ತಾ ನಿಂತಿದ್ದಾಳೆ. ಸೂರ್ಯನ ಕಿರಣಗಳು ಅವಳ ಮೈಗೊತ್ತಿ ಮಲಗಿದ್ದ ನೈಟಿ ಇಂದ ಹಾದು  ನೆಲವ ಮುಟ್ಟುವ ಹಠದಲ್ಲಿ ಅವಳ ಮೋಹಕ ಮೈ ಮಾಟವನ್ನು ಬಯಲಾಗಿಸಿತ್ತು. ಅದನ್ನು ನೋಡಿ ಹಣೆ ಮೇಲಿನ ಬೆವರನ್ನು ನಡುಗುವ ಕೈಗಳಿಂದ ಒರೆಸುತ್ತಾ ಕಣ್ಣುಗಳನ್ನು ಸಾಧ್ಯವಾದಷ್ಟು ಆಗಲು ಮಾಡಿದ ಶಾಮ. ಥಟ್ಟನೆ ತಿರುಗಿ ಶಾಮನ ವಾರೆಗಣ್ಣಿಂದ ನೋಡಿ ಮತ್ತೆ ಕೂದಲು ಹರಡುತ್ತಾ ನಿಂತಳು. ಶಾಮ ಹಾಗು ಅವಳ ಕಣ್ಣುಗಳು ಯಾವುದೋ ಒಂದು ಭಾಷೆಯ ಮಾತನಾಡುತ್ತಿದ್ದರೆ ಶಾಮನ  ಯೌವ್ವನ  ತನ್ನ ಇರುವಿಕೆಯ ಭಾಸವಾಗಿ ಹಿಗ್ಗಿನಲ್ಲಿ  ಅರಳುತ್ತಿದೆ . ಅಷ್ಟರಲ್ಲಿ ಶಾಮನ ಸಾಕುನಾಯಿ ಬೊಗಳಿತು.
ಕೆಲುವು ದಿನಗಳಿಂದ ಹೀಗೆ, ವಿಪರೀತ ಬೊಗಳುತ್ತಿದೆ. ರಸ್ತೆಯಲ್ಲಿ ಯಾವ ನಾಯಿ ಕಂಡರೂ ಕಾಲೆತ್ತಿ ಬಾಲವಾಡಿಸುತ್ತ ಹುಚ್ಚು ಆವರಿಸಿದಂತೆ ಬೊಗಳುತ್ತದೆ. ಅದರ ಶಬ್ದಕ್ಕೆ ಬಾಗಿಲಿಂದ ಪೂರ್ತಿ ಹೊರಬಂದ ಶಾಮನ ನೋಡುತ್ತಲೇ ಒಳ ಹೋದಳು ಆಂಟಿ. ಕಣ್ಣಲ್ಲೇ ಏನನ್ನೋ ಹೇಳಿದಂತೆ ಅನ್ನಿಸ್ತ್ತು ಶಾಮನಿಗೆ. ನಾಯಿಗೆ ಯವ್ವನದ ವಯ್ಯಸ್ಸು, ಹೆಣ್ಣು ನಾಯಿಯ ಸಂಗತಿ ಬೇಕಾಗಿ ಹೀಗೆ ಮಾಡುತ್ತದೆ ಎಂದು ಹೋದ ವಾರ ಹೇಳಿದ ಡಾಕ್ಟರ ಮಾತಿನಂತೆ ಅದನ್ನು mating ಮಾಡಿಸಿದ್ದ, ಅಷ್ಟಾದರೂ ಮತ್ತೆ ಅದೇ ಕಥೆ.. ತಿಂಗಳಲ್ಲಿ ಮೂರು ಸಾರಿ  ಹಾಗೆ ಮಾಡಿಸಿದ ಮೇಲೇನು ಆಸೆ ತೀರಿಲ್ಲ ನನ್ನ ಮಗಂದು, ಯಾವಾಗ ನೋಡಿದರೂ ಬರೀ ಅದೇ ಚಿಂತೆ!  ಅಂತ ಬಯ್ಯದು ಒಳ ಹೋಗೋವಾಗ ಕಂಡ ಆಂಟಿ ಯಾ ಅರ್ಧ ತೆರೆದ ಬಾಗಿಲನ್ನು ನೋಡಿ ಮೈ ನವಿರೆದ್ದಿತು. ತಿರುಗಿ ನಿಂತಾಗ ಕಂಡ ಅವಳ ತೊಂಡೆ ಹಣ್ಣಿನಂತಹ ತುಟಿಯ ನೆನಸಿ ಪುಳಕಿತನಾದ.. ತನ್ನ ಬಾಗಿಲನ್ನು ಸಹ ಅರ್ಧ ತೆರೆದು ಒಳ ಹೋಗಿ T V ನೋಡುತ್ತಾ ಕುಳಿತ.

'Excuse me.. ' - ಕರೆದ ಹುಡುಗಿಯ ಧ್ವನಿಗೆ ಹಿಂದೆ ತಿರುಗಿ ನೋಡಿದ ಆದಿತ್ಯ.

'ನಿಮ್ಮ ಹೆಸರು ??' - ಕೇಳಿದಳು

'ಆದಿತ್ಯ.. .ಯಾಕೆ? '

'ನೀವು ಉಡುಪಿ ಕಡೆಯೋರಾ ??' - ಮತ್ತೆ ಕೇಳಿದಳು

'ಹೌದು ನಿಮಗೆ ಹೇಗೆ ಗೊತ್ತು?? ' - ಆದಿತ್ಯ

'ರೂಪಾ  ಮದುವೆಗೆ ಬಂದ್ದಿದ್ರಲ್ವಾ ನೀವು?? ' - ಅವಳು

ಸ್ವಲ್ಪ ಯೋಚನೆ ಮಾಡಿ ಹೇಳಿದ 'ಹಾಂ! ಹೌದು .. ನೀವು ಇದ್ದರಾ ಅಲ್ಲಿ?? '

'ರೂಪಾ ನನ್ನ ಬೆಸ್ಟ್ ಫ್ರೆಂಡ್! ನೀವು ಅವಾಗ್ಲೂ ಇದೆ ಶರ್ಟ್ ಹಾಕಿದ್ರಿ.. ಅದರಿಂದಲೇ ನಿಮ್ಮನ ಗುರುತಿಸೋಕೆ easy ಆಯಿತು' -ನಕ್ಕಳು

ಮುಜುಗುರವಾದಂತಾಗಿ ಕೇಳಿದ 'Trekking  ಬಂದಿದ್ದರಾ.. ಒಬ್ಬರೇ ಕಾಣಿಸ್ತಾ ಇದ್ದೀರಾ..  '

'ಹಾಂ..  ಹೌದು. ಫ್ರೆಂಡ್ಸ್ ಎಲ್ಲರನು ಕೇಳಿದೆ ಯಾರು ಬರಲಿಲ್ಲ, ಶನಿವಾರ ಭಾನುವಾರ ರೂಮಲ್ಲೇ ಇದ್ದರೆ  ಅದು ಮಹಾಪಾಪ.. ಹ ಹ.. ಅದಕ್ಕೆ ಒಬ್ಬಳೇ ಬಂದ್ಬಿಟ್ಟೆ. '

'ಅಂದಹಾಗೆ ನಿಮ್ಮ ಹೆಸರು??' ಆದಿತ್ಯ ಕೇಳಿದ

'ಅದಿತಿ!! ' ಬಹುಮಾನ ಗೆದ್ದವರ ಹಾಗೆ ಖುಷಿಯಿಂದ ಹೇಳಿದಳು.

'I am Aditya.. ' ಕೈ ಮುಂದೆ ಮಾಡಿ ಥ್ಯಾಂಕ್ಸ್ ಕೊಡುತ್ತ ಹೇಳಿದ.

'ಆಗಲೇ ಹೇಳಿದರಲ್ಲ ' ಅಂತ ನಕ್ಕು shake hand ಕೊಟ್ಟು 'okay ಹಾಗಾದ್ರೆ.. enjoy the trek ' ಅಂತಂದು 'ನನಗೆ ತುಂಬಾ ಚಿಟ್ಟೆ ಹಿಡಿಯೋದಿದೆ ' ಅಂತ ತಿರುಗಿ ಕೆಳಗೆ ಜಿಂಕೆಯಂತೆ ಇಳಿಯತೊಡಗಿದಳು.

ಚಿಟ್ಟೆನಾ ?? ಅದೂ ಗುಡ್ಡದ ಮೇಲೆ ?? ಅಂತ ಅನ್ಕೊಂಡು..  'Okay.. you have good time ' ಅಂತ ಜೋರಾಗಿ ಹೇಳಿದ..

ಅವಳು ಹಿಂದೆ ನೋಡದೇನೆ ಜಿಗಿಯುತ್ತ 'I  will.. I  will ' ಅಂತ ನಗುತ್ತ  ಮುಂದೆ ಹೋದಳು.

ಮತ್ತೆ ಗುಡ್ಡವ ನೋಡುತ್ತಾ ಬ್ಯಾಗ್ ನಲ್ಲಿನ ಕ್ಯಾಮೆರಾ ತೆಗೆದು ಗುಡ್ಡಗಳನ್ನು ಅದರಲ್ಲಿ ತುಂಬತೊಡಗಿದ.

ಕೈ ಕೈ ಹಿಡಿದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗೌರಿ ಕೇಳಿದಳು.. 'ಸಂತು.. ನನ್ನನ್ನ ಎಷ್ಟೋ ಪ್ರೀತಿಸ್ತಿಯ ನೀನು??'

'ಹೇಳೋಕಾಗದಿರೋವಷ್ಟು! ಈ ರೋಡ್ ಎಷ್ಟುದ್ದ ಇದೆಯೋ ಅಷ್ಟು. ' ಅವನ ಉತ್ತರ.

'ನಮ್ಮಪ್ಪ ನನ್ನ ಪ್ರೀತಿಸೋ ಕಿಂತ ಜಾಸ್ತಿ ಪ್ರೀತಿಸ್ತಿಯ ನನ್ನ ??'

'ನಿಮ್ಮಪ್ಪ ನೀನು ಹುಟ್ಟಿದ ಮೇಲೆ ಪ್ರೀತ್ಸೋಕೆ ಶುರು ಮಾಡಿದ್ರು, ನಾನು ನಿನ್ನನ್ನ ನೀನು ಹುಟ್ಟೋಕೆ ಮುಂಚಿನಿಂದಲೂ ಪ್ರೀತಿಸ್ತ ಇದೀನಿ.. '

'ಹಾಂ?? ಅಧೆಂಗೊ  ಹಂಗೆ??' - ಗೌರಿ

'ಹುಚ್ಚಿ! ನನ್ನ birthdate 87 ನಿಂದು 88. ಹಂಗೆ!' ನಕ್ಕನು

'ಏನೋ ಒಂದು ಹೇಳ್ತಿಯಾ ನೀನು. ನನ್ನನ್ನ ಹೇಗೋ ಕೇಳ್ತಿಯ ನಮ್ಮಪ್ಪನ ಹತ್ತಿರ?' - ಗೌರಿ

'ನೋಡಿ ಸಾರ್ ಹಿಂಗಿಂಗೆ... ಇದೆಲ್ಲ ಆಗಿದೆ.. ಮತ್ತೆ ನೀವು ಸುಮ್ನೆ ಹ್ಞೂ ಅಂದುಬಿಡಿ ಅಂತೇನೋ ಒಂದು ಹೇಳಣಾ  ಬಿಡು.. ಯಾಕೆ ತಲೆ ಕೆಡ್ಸಕೋತಿಯ  ನಾನಿದೀನಲ್ಲ ಮಾಡ್ತೀನಿ ಎಲ್ಲ ' ಅಂತ ಹೇಳಿ ಅವಳನ್ನೇ ನೋಡುತ್ತಾ ಅವಳ ಸೊಂಟಕ್ಕೆ ಕೈ ಹಾಕಿ ಇನ್ನೂ ಸಮೀಪಕ್ಕೆ ಎಳೆದನು.

ಅವನು ಮಾಡಿದ್ದಕ್ಕೆ ಮುಜುಗರವಾಗಿ ಅತ್ತ ಇತ್ತ ನೋಡಿದಳು..  ಆಚಿನ ರಸ್ತೆಯ ಬದಿಯಲ್ಲಿ ಅಪ್ಪನ ಸ್ಕೂಟರ್. signal ನಲ್ಲಿ ಅಪ್ಪ ನಿಂತಿದ್ದಾರೆ.

''ಅಯ್ಯೋ!! ಅಪ್ಪ!!!' ಹೆದರಿದ ಉದ್ಘಾರದಲ್ಲಿ ಗೌರಿ

ಇನ್ನೇನು ಸತ್ತೇ ಹೋದೆನೆಂದು ಅವರನ್ನೇ ನೋಡುತ್ತಾ ನಿಂತಳು.. ಇವಳನ್ನು ಕಂಡ ಅಪ್ಪ ಆ ಬದಿಯಿಂದ ಕೈ ಮಾಡುತ್ತಿದ್ದಾರೆ.. ಅಯ್ಯೋ ನನ್ನನು ನನ್ನನು ನೋಡಿದರೆ??  ಗೌರಿ ಮೈಯೆಲ್ಲಾ ಬೆವರಾಗಿ ಪಕ್ಕ ನೋಡಿದರೆ... ಅವನಿಲ್ಲ!!
ಹಿಡಿದ ಕೈಯ್ಯನ್ನು ಒಮ್ಮೆಲೇ ಹೇಳದೆ ಕೇಳದೆ ಬಿಟ್ಟು ಮಾಯವಾದದ್ದು ಮನಸಿಗೆ ನೋವಾದರೆ, ಅಪ್ಪ ನೋಡದಿದ್ದರೆ ಸಾಕು ಎಂದು ಹೆದರುತ್ತ ಅಪ್ಪನೆಡೆ ಹೊರಟಳು.

'ಏನಮ್ಮ ಗೌರಿ.. ದೇವಸ್ಥಾನಕ್ಕೆ ಹೋಗಿ ಎಷ್ಟು ಹೊತ್ತಾಯ್ತು.. ಆ ರೋಡಲ್ಲಿ ಎಲ್ಲಿ ಹೊರಟಿದ್ದೆ ಅದು ದುರಸ್ಥಿಯಲ್ಲಿದೆ ಮುಂದೆ ' ಎಂದರು

ನಿಜ! ಆ ರಸ್ತೆ ಅಲ್ಲಿಗೆ ಮುಗಿದಿತ್ತು,  ಸಧ್ಯದ ಮಟ್ಟಿಗೆ. ಏನನ್ನೋ  ಯೋಚಿಸಿ ಮೌನಿಯಾದಳು. ಅಪ್ಪನ ಹೆಗಲ ಮೇಲೆ ಕೈ ಹಾಕಿ ಸ್ಕೂಟರ್ ಹತ್ತಿದಳು.

ಹೆಗಲ ಮೇಲಿಟ್ಟ ಕೈ ನೋಡಿ ಅಪ್ಪ, 'ಏನಮ್ಮ.. ಕೈ ಬರಡಾಗಿ ಕಾಣ್ತಿದೆ ಗೌರಿ? ಬಳೆನಾದ್ರು ಹಾಕ್ಕೊಬಾರ್ದೆ' ಅಂತಂದ್ರು.  ಬರಡಾದ ಕೈಯನ್ನು ನೋಡಿ ರಸ್ತೆಯಷ್ಟೇ ಇದ್ದ ಅವನ ಪ್ರೀತಿಯ ಕೊಟ್ಟು ಮಾಯವಾದವ ನೆನಪಾದ ಗೌರಿಗೆ.

ಸೋಫಾ ಮೇಲೆ ಮಲಗಿದ್ದ ಶಾಮನಿಗೆ ಬಾಗಿಲತ್ತ ಶಬ್ದ ಕೇಳಿ ಎಚ್ಚರವಾಯ್ತು.. ಅದೇ ಆಂಟಿ ಆಸೆಯಿಂದ  ಓಡೋಡಿ ಬಂದು ನೋಡಿದರೆ . ಅವನ ನಾಯಿ..

ಸತ್ತು ಬಿದ್ದಿದೆ!!

ಹರಕು ರಕ್ತಸಿಕ್ತ ವಾದ ಚೀಲದ ಮೇಲೆ ಅದರ  ದೇಹವನ್ನು ಇಬ್ಬರು ಎಳೆದು ತಂದಿದ್ದಾರೆ.

ಬಿದ್ದು ಹೋದ ದನಿಯಿಂದಲೇ ಶಾಮ ಕೇಳಿದ  '?ಏನಾಯ್ತು ಸಾರ್ ? '

'chain ಬಿಚ್ಕೊಂಡು ಜೋರಾಗಿ ಓಡಿ ಬರುತ್ತಾ ರಸ್ತೆ ದಾಟುವಾಗ ಆ  ಲಾರಿಗೆ ಸಿಕ್ಕಿ ಸತ್ತೆ ಹೋಯಿತು ಸಾರ್ಪಾ. ಪಾಪ, ನೋಡಿ ಅದೇನಾಗಿ ಬಿದ್ದಿದೆ ' ಅಂತ ಅಂದ ಎಳೆದು ತಂದವ.

ಅದರ ಅವಸ್ಥೆಯನ್ನು ನೋಡಲಾಗದೆ ನಿಂತಲ್ಲಿಯೇ ಕುಂತುಬಿಟ್ಟ ಶಾಮ.. ಅದರ ಕರಳುಗಳು ಹೊರಕ್ಕೆ ಬಂದಿವೆ, ರಕ್ತವು ಸುತ್ತಲು ಚೆಲ್ಲಿದೆ, ಅವನು ಹಾಕಿದ ಕೊರಳಿನ ಘಂಟೆಯೂ ಕೊರಳಿಲ್ಲದೆ ಅನಾಥವಾಗಿ ಜೋತಾಡುತ್ತಿದೆ. ಸಿಂಹನಂತೆ ಇದ್ದ ಮುಖವು ಅದಾವುದೋ ಕಾಣದ ಮಾಟಕ್ಕೆ ಸಿಕ್ಕಿ ಹಣ್ಣಾಗಿ ಮಲಗಿದೆ. ಒಬ್ಬನೇ ಇದ್ದ ಶಾಮನಿಗೆ ಬಂಧು ಬಳಗವೆಲ್ಲ ಅದೇ ಆಗಿತ್ತು, ಕುಡಿದು ಅದರ ಮುಂದೆ ಕುಳಿತು ರಾತ್ರಿಯಿಡೀ ಕಥೆ ಹೇಳುತ್ತಿದ್ದ. ಅದ್ಯಾಕೆ ಚೈನ್ ಅನ್ನು ಕೊಸರಿ ಓಡಿ ಹೋಯಿತೋ ಎಂದು ಅದರ ರಕ್ತವಾದ ಹಣೆಯನ್ನು ಮುಟ್ಟಲಾಗದೆ ಕೈಯ ಹಿಂದೆ ತೆಗೆದು ಕಣ್ಣೀರು  ಹಾಕತೊಡಗಿದ.  ಮತ್ತೆ ಯಾವುದೋ ನಾಯಿಯ ಶಬ್ದವನ್ನು  ಕೇಳಿ ನೋಡಲೆಂದು ಮುಖವೆತ್ತಿದರೆ ರಸ್ತೆಯಾಚೆ ಒಂದು ನಾಯಿಗಳ ಗುಂಪು.

ಅಲ್ಲಿ ಒಂದು ಹೆಣ್ಣು ನಾಯಿಯ ಬೆನ್ನು ಹತ್ತಿ ಉಳಿದ ನಾಯಿಗಳು ಆಟವಾಡಿದಂತೆ ಮಾಡುತ್ತಿವೆ. ಸುಮ್ಮನೆ ಇತ್ತ ಹಾಗೆ ಇರದೇ ಆ ಹೆಣ್ಣು ನಾಯಿಯ ಸಾಂಗತ್ಯ ಬಯಿಸಿ ಬೇಲಿ ದಾಟಿ ಹಾರಿದೆ ತನ್ನ ನಾಯಿ , ಕಾಮನೆಯ ಕಣ್ಣಿಗೆ ಬೇರೆ ಏನನ್ನೂ ಕಾಣದೆ  ಅವಘಡಕ್ಕೆ ಸಿಕ್ಕಿ ಈ ಸ್ಥಿತಿಗೆ ಬಂದಿದೆ. ತನ್ನ ಮನಸ್ಥಿತಿಯನ್ನು ಬಿಂಬಿಸುವ  ಯಾವುದೊ ಅಂಶವನ್ನು  ಅದರಲ್ಲಿ ಕಂಡು ಶಾಮ ಮತ್ತೆ ಸತ್ತ ನಾಯಿಯನ್ನು ನೋಡಿ ಅದೇನೋ ತಿಳಿದವರಂತೆ ಗೋಣು ಹಾಕಿ ಅತ್ತು ತನ್ನ ಸ್ನೇಹಿತನ ಬೀಳ್ಕೊಟ್ಟ.

ತುಸು ದೂರ ಹೋಗಿ ಗಾಡಿ ನಿಲ್ಲಿಸಿ  ಅಪ್ಪ ಬಳೆ ಅಂಗಡಿಗೆ ಕರೆದೊಯ್ದು ಅವಳಿಗೆ ಬಳೆಗಳನ್ನು ತೊಡಿಸಿ ಹಣೆಗೆ ಮುತ್ತಿಟ್ಟರು, ಗಲ್ಲ ಸವರಿ.. 'ನನ್ನ ಲಕ್ಷ್ಮೀ!'  ಅಂತಂದು ಖುಷಿಪಟ್ಟರು. ಬೆಳಿಗ್ಗೆ ಗಲ್ಲಕ್ಕೆ ಅವನಿಟ್ಟ ಮುತ್ತಿಗೂ, ಅಪ್ಪನ ಮುತ್ತಿಗೂ ವ್ಯತ್ಯಾಸ ಇತ್ತು. ಆಗ ಅವನಿಟ್ಟ ಗಲ್ಲದ ಮುತ್ತಿಗೆ ಮನದ ಯಾವುದೋ ಮೂಲೆಯಲ್ಲಿ ಬಂದ guilt  feel ಅನ್ನು ಅಪ್ಪ ಗಲ್ಲ ಸವರಿ ವರೆಸಿ ಹಾಕಿದ್ದರು. ಬರಡಾದ ಭಾವಗಳಿಂದ ಏನನ್ನೋ ಹುಡುಕ ಹೋದ ಗೌರಿಯನ್ನು ಮತ್ತೆ ಲಕ್ಷ್ಮೀ ಯಂತೆ ಅಪ್ಪ ತಮ್ಮ  ಮನೆಗೆ ಕರೆದೊಯ್ದಿದ್ದರು.

ಸಂಜೆ ೫:೩೦ ವೇಳೆಗೆ ಬಸ್ ನ ಹಿಂದಿನ ಸೀಟ್ ನಲ್ಲಿ ಕುಳಿತ ಆದಿತ್ಯ ನ ಪಕ್ಕ ಬಂದು ಕುಳಿತಿದ್ದು ಅದಿತಿ.

'ಅರರೆ.. ಅದಿತಿ? ನೀವೂ  ಈಗ ಹೋಗ್ತಿದೀರಾ ??' ಅಂದ ಆದಿತ್ಯ

'Hey  ಆದಿತ್ಯ!!.. ಹಾಂ..  ಈಗ ಹೊರಟೆ  ' ಅದಿತಿ

'ಅಂದಹಾಗೆ ರೂಪಾ ನಂಬರ್ ಇದ್ದಾರೆ ಕೊಡಿ, ಕಳೆಧೋಗಿದೆ ' ಅಂತ ನಂಬರ್ ಕೇಳಿದ ಆದಿತ್ಯ

'ಫ್ರೆಂಡ್ ಅಂತೀರಾ ನಂಬರ್ ಇಲ್ವಾ? ಬರ್ಕೊಳಿ ನನಗೆ ಬಾಯಿಪಾಠವಿದೆ.. 88842-44469' ನಂಬರ್ ಕೊಟ್ಟಳು

'ಒಂದು ನಿಮಿಷ ಆದಿ! ಒಂದ್ ಕೆಲಸ ಮಾಡೋಣ.. ಅವಳಿಗೆ ನಾನು ಕಾಲ್ ಮಾಡ್ತೀನಿ ಆದ್ರೆ ನನ್ನ ಮೊಬೈಲ್ ಇಂದ ನೀವೇ ಮಾತನಾಡಿ, ಮಜಾ ಇರತ್ತೆ' ನಗುತ್ತ ನಂಬರ್ ಡಯಲ್ ಮಾಡಿಯೇ ಬಿಟ್ಟಳು

ಆದಿತ್ಯ 'ಆದಿ'  ಆಗಿದ್ದನ್ನು ಗಮನಿಸಿ ನಕ್ಕ, ಅಷ್ಟರಲ್ಲೇ  ಅವನ ಕೈ ಲಿ  ಅದಿತಿಯ ಬಂತು..

'Hello ಅದಿತಿ!! what a surprise! ಎಲ್ಲಿದಿಯೇ out-of-syllabus?' ಅಂತಂದಳು ರೂಪಾ.

'ಹ ಹ.. ಏನೇ ಡುಮ್ಮಿ ಹೇಗಿದ್ದೀಯ ?' ಈಕಡೆ ಆದಿತ್ಯ

'Hello.. ಯಾರಿದು? ಇದು ಅದಿತಿ ಫೋನ್ ಅಲ್ವಾ?? ' - ರೂಪಾ

'ಹೌದು!! ಅದಿತಿ ದೇ ಫೋನು.. ನಾನ್ಯಾರು guess  ಮಾಡು ' ನಗುತ್ತ ಆದಿತ್ಯ

'Sorry.. ಗೊತ್ತಾಗ್ಲಿಲ್ಲ.. ಯಾರು '  ಸಣ್ಣ ಧ್ವನಿಯಲ್ಲೇ ಕೇಳಿದಳು ರೂಪಾ

'ನಾನೇ ರೂಪಾ.. ಆದಿತ್ಯ!! ಈಡಿಯಟ್ ಧ್ವನಿ ಗುರ್ತು ಸಿಗ್ಲಿಲ್ವಾ??' ನಗುವ ಮುಂದುವರೆಸಿದ

'ಆದಿತ್ಯ ??.. ಯಾವ ಆದಿತ್ಯ??'  ಆಕಡೆ ಆಶ್ಚರ್ಯದಿಂದ ರೂಪಾ

ಅವಳ tone ನಿಂದ  ಸ್ವಲ್ಪ doubt ಬಂದು ಕೇಳಿದ ' ಇದು ರೂಪಾ ರಾಜಶೇಖರ್ ಅಲ್ವಾ??'

'Sorry! ಅದು ನಾನಲ್ಲ.. I am ರೂಪಾ H M ' ಅಂತಂದ್ಲು

'ಒಹ್!! ನೀವು ಆ ರೂಪಾ ಅಲ್ವಾ??'  ಇಷ್ಟಂದು  ನಾಲಿಗೆ ಕಡಿದುಕೊಂಡ ಆದಿ.

ಮುಖದ ಮೇಲೆ ಒಂದು ದೊಡ್ಡ ಪ್ರಶ್ನಾರ್ಥಕ ಚಿನ್ಹೆಯೊಂದಿದೆ ಅದಿತಿಯನ್ನೇ ನೋಡುತ್ತಿದ್ದಾನೆ..

ಅದಿತಿ ಪಟ್ಟನೆ ಫೋನು ತಗೊಂಡು ರೂಪಾ ತನ್ನನ್ನು ಬಯ್ಯುವ ಮುಂಚೆಯೇ cut ಮಾಡಿದಳು. ಇಬ್ಬರೂ ಘೋಳ್ ಎಂದು ನಕ್ಕರು. ಅದಿತಿ ತನ್ನ ತಲೆಗೆ ತಾನೇ ಹೊಡೆದುಕೊಂಡು , ಮುಂಗುರುಳ ಸರಿಸುತ್ತ ನಗುತ್ತಿದ್ದಳು. ಆದಿತ್ಯ ತಮಗೆ ಗೊತ್ತಿದ್ದ ರೂಪಾ ಒಬ್ಬಳೇ ಅಲ್ಲ ಎಂದು ಅವಳ ನಂಬರ್ ಡಿಲೀಟ್ ಮಾಡುತ್ತಾ ಅದಿತಿ ಯನ್ನು ನೋಡುತ್ತಾ ನಗುತ್ತಿದ್ದ.

ಸ್ವಲ್ಪ ಹೊತ್ತಿನ ನಂತರ ಅದಿತಿಯನ್ನು ಕೇಳಿದ  'ಅದೇನೋ out-of-syllabus ಅಂದಂಗಿತ್ತು  ರೂಪಾ ನಿನ್ನ'

'ಒಹ್ ಅದಾ?.. ನಾನೇನೋ ಅವರೆಲ್ಲರಿಗಿಂತ ಬೇರೆ ಇದೀನಂತೆ.. ನನ್ನ ವಿಚಿತ್ರ  ಆಸೆಗಳು, ಕೆಲಸಗಳು, hobbies ಎಲ್ಲ ನೋಡಿ ಹಾಗೆ ಕರೀತಾರೆ ' ಅಂತ ಹೇಳಿ ನಕ್ಕಳು

ತನ್ನ ಫ್ರೆಂಡ್ಸ ತನಗೆ  'ವೈರಾಗಿ ' ಅಂತ ಕರೆವುದನ್ನು ನೆನಸಿ ತಾನು ನಕ್ಕ.

ಬಸ್ ಮುಂದೆ ಹೊರಟಿತು.. ತುಸು ಹೊತ್ತಿನ ನಂತರ ಎಲ್ಲವು ಶಾಂತವಾಗಿ ಇದ್ದಾಗ ಆದಿತ್ಯನ ಹೆಗಲ ಮೇಲೆ ತಲೆಯೊಂದು ಹಾಸಿಗೆಯ ಕಂಡಿತು.. ಅದಿತಿ ನಿದ್ದೆ ಹೋಗಿ ಅವನ ಹೆಗಲಿಗೆ ತಲೆ ಹಾಕಿ ಮಲಗಿದ್ದಳು.. ಕಿಟಕಿಯಿಂದ ಜೋರಾಗಿ ಬರುತ್ತಿದ್ದ ಗಾಳಿಯನ್ನು ಮೆಲ್ಲಗೆ ಬರುವಂತೆ ತುಸು ಕಿಟಕಿ ಹಾಕಿದ. ಅವಳ ಹಾರುವ ಮುಂಗುರುಳ ಹಿಡಿಯುವ ಆದಿತ್ಯ ಆಸೆಗೆ ಅಲ್ಲೇ ಬಲಿಯಾದ.

ರಾತ್ರಿ ಎಂಟೂವರೆ ಘಂಟೆಗೆ ಶರಣ ಮನೆಗೆ ಬಂದ.. ಅಂದು ಅವನಿಗೆ ಯಾವ ಕಥೆಯು ಸಿಕ್ಕಿರಲಿಲ್ಲ.. ಫೋನ್ ನಲ್ಲಿ ಬಂದ message ನೋಡಿದ.. ಆದಿತ್ಯನದ್ದು.. 'ಲೋ ಮಗ.. ಇವತ್ತು ನಿನ್ನ blog ನಲ್ಲಿ ಇದ್ದ "ಅವಳ ರಂಗೋಲಿ" ಕಥೆ ಓದಿದೆ, ಸಖತ್ತಾಗಿದೆ!, ನಿಂಗೆ ಏನೋ ಹೇಳ್ಬೇಕು.. meet me at shaam's place' ಅಂತಿತ್ತು. ಹಾಂ?? ಆದಿತ್ಯ ನನ್ನ ಕಥೆ ಓದಿದನಾ?? ಅಷ್ಟೆಲ್ಲ ಬಯ್ತಿದ್ದ ಪ್ರೀತಿ, ಹುಡುಗಿ ಅಂತೆಲ್ಲ ಬರೀಬೇಡ ಬರೀ ಅಂತ ಅಂದುಕೊಂಡ ಶರಣ.  ಅಷ್ಟರಲ್ಲಿ ಗೌರಿಯ call ಬಂತು.. 'ಶರಣ, ನಿನ್ನ ಹತ್ತಿರ ಏನೋ ಹೇಳ್ಬೇಕು.........'



ಶುಭಂ!!


ಸಹಾಯ:
ಕಾಮನೆಯ ಬಯಕೆಗೆ ಬಲಿಯಾಗಿದ್ದ ಶಾಮನಿಗೆ  ಅವನ ನಾಯಿಯ ಸಾವು ಬುದ್ಧಿ ಬರುವಂತೆ ಮಾಡಿತ್ತು. ಪ್ರೀತಿ ಎಂದು ತಿಳಿದು ಯಾವುದೋ ಹುಡುಗನ ತಪ್ಪು ಸಾಂಗ್ಯತಕ್ಕೆ ಬಿದ್ದ ಗೌರಿಯು ಅದರಿಂದ ಹೊರಬರುವ ಯೋಚನೆಗೆ ಬಂದಳು. ಪ್ರೀತಿಯೆಂದರೆ ಆರು ಮೈಲಿ ಓಡುತ್ತಿದ್ದ ಆದಿತ್ಯ, ಅದಿತಿ ಪ್ರೀತಿಯಲ್ಲಿ ಬೀಳುವಂತೆ ಕಂಡ. ಕಥೆಗಳೇ ಸಿಗದ ಶರಣನಿಗೆ ರಾತ್ರಿ ಒಮ್ಮೆಲೇ ಮೂರು ಕಥೆಗಳು ಸಿಕ್ಕವು (ಕಥೆಯ ಕೊನೆ ಪ್ಯಾರಾಗ್ರಾಫ್ ನಲ್ಲಿ ಹೇಳಿದ ಹಾಗೆ ಶರಣ ರಾತ್ರಿ ಶಾಮನ ಮನೆಗೆ ಹೋಗುತ್ತಾನೆ ಎಂದು ಕಲ್ಪಿಸಬಹುದು , ಶಾಮ ತನ್ನ ಕಥೆಯನ್ನು  ಹಾಗು ಆದಿತ್ಯ ತನ್ನ ಟ್ರೆಕಿಂಗ್ ಅನುಭವ ಹೇಳಿಕೊಳ್ಳುತ್ತಾನೆ, ಹಾಗೆ ಗೌರಿಯು ಶರಣನಿಗೆ ಮಾಡಿದ ಫೋನ್ ಕಾಲ್ ನಲ್ಲಿ ತನ್ನ ನಿರ್ಧಾರವನ್ನು ಹೇಳಿಕೊಳ್ಳುತ್ತಾಳೆ ). ಹೀಗೆ ಬೆಳಿಗ್ಗೆ ವರೆಗೂ ತಮ್ಮದೇ ಒಂದು ನಿಲುವನ್ನು, state of mind ಅನ್ನು ಹೊಂದಿದ್ದ ಮೂವರು ಸಂಜೆ ವರೆಗೆ ಬದಲಾಗುತ್ತಾರೆ. ಆಡಿತ್ಯನದ್ದು 'ಪ್ರೀತಿ' ಎಂದಾದರೆ, ಗೌರಿಯದು 'ಗೀತಿ', ಹಾಗು ಶಾಮನದ್ದು 'ಇತ್ಯಾದಿ'.
ಇದು ಕಥೆಯ ಸಾರಾಂಶ. ಕಥೆ ಓದಿದ ಕೆಲ ಸ್ನೇಹಿತರು ಸಾರಾಂಶವನ್ನು ಬರೆ, ಅಂದರೆ ಕಥೆಯ 'completeness ' ಫೀಲ್ ಆಗತ್ತೆ, ಇಲ್ಲಾಂದ್ರೆ ಕಥೆ incomplete ಅನ್ಸತ್ತೆ ಅಂದ್ರು. ಅದಕ್ಕೆ ಇದು. ಇದು ನಿಮಗೆ ಬೇಡವಾಗಿತ್ತು ಎನಿಸಿದ್ದರೆ  ನಾನು ಕಥೆ ಬರೆದದ್ದು ಸಾರ್ಥಕವಾಯಿತು  :)
ಅಂದಹಾಗೆ, ಈ ಕಥೆಯಲ್ಲಿನ ಶರಣ ನಾನೇ ಎಂದರೆ ಇಲ್ಲಿ ಯಾರೂ ನಂಬುತ್ತಿಲ್ಲ ;). 


  

2 comments:

ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...

ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು,...