Saturday, October 27, 2018

ಊರ ಉಸಾಬರಿ, ತಪ್ಪು ಯಾವುದು, ಯಾವುದು ಸರಿ.

   
             ಚಿಕ್ಕವನಿದ್ದಾಗ ತರಕಾರಿ ಹೆಚ್ಚುವ ಚಾಕುವನ್ನು ನಾನು ಮುಟ್ಟದೇ ಇರಲಿ ಅಂತ ಅವ್ವ ನನಗೆ 'ಅದ್ರಾಗ ಬವ್ವಾ ಐತಿ, ಮುಟ್ಟಬ್ಯಾಡ' ಅಂತ ಹೇಳಿದ್ದಳು. ಅವ್ವ ಹೇಳಿದರೆ ಆಯ್ತು, ಇದ್ದರೂ ಇರಬಹುದು ಅಂತ ನಾನು ಹೆದರಿಕೊಂಡು ಹದಿನೆರಡು ವಯ್ಯಸ್ಸಿನವರೆಗೂ ಆ ಚಾಕುವಿನ ಹತ್ತಿರ ಹೋಗಿರಲೇ ಇಲ್ಲ. ಆಮೇಲೆ ಅಲ್ಲಿ ಇಲ್ಲಿ ನೋಡಿ, ಕೇಳಿ, ತಿಳಿದ ನಂತರ ಅನಿಸಿದ್ದು ಆಕೆ ಹಾಗೆ ಹೇಳುವುದಕ್ಕೆ ಬೇರೆಯೇ ಕಾರಣ ಇತ್ತು ಅಂತ. ಅಕಸ್ಮಾತ್ ಅದನ್ನೇ ನಂಬಿಕೊಂಡು ನಮ್ಮಮ್ಮ ಹೇಳಿದ್ದೇ ಸರಿ, ಆಕೆ ನನಗೋಸ್ಕರ ಇಷ್ಟೆಲ್ಲಾ ಮಾಡಿದ್ದಾಳೆ ಅವಳ ಮಾತು ಹೇಗೆ ಸುಳ್ಳಾದೀತು? ಅವಳು ತಪ್ಪು ಮಾಡಲು ಸಾಧ್ಯವೇ ಇಲ್ಲ, ಅವಳು ದೇವರು ಅಂತ ಪ್ರಾಕ್ಟಿಕಲ್ ಆಗುವಲ್ಲಿ ಭಾವೂಕನಾಗಿ ಆ ಚಾಕುವಿನಿಂದ ಇನ್ನೂ ದೂರವೇ ಉಳಿದಿದ್ದರೆ ಈಗ ತರಕಾರಿ ಹೆಚ್ಚಲಾಗದೇ ನನ್ನ ಹೆಂಡತಿಯ ಕಯ್ಯಲ್ಲಿ ಶಾಸ್ತಿಯಾಗುತ್ತಿದ್ದಿದ್ದು ಖಂಡಿತ. ಅಂದರೆ, ಇಲ್ಲಿ ಮಾತು ನಾವು ವ್ಯಕ್ತಿಯನ್ನು ಅಥವಾ ವಸ್ತುವನ್ನು ಗೌರವಿಸುವುದರ ಬಗ್ಗೆ ಅಲ್ಲ, ಅದನ್ನು ಮೀರಿ ವಿಷಯವನ್ನು ಕಾಣುವುದರ ಬಗ್ಗೆ. ಇಲ್ಲಿ ಚಾಕುವಿನ ಪರಿಣಾಮಗಳು  'ವಿಷಯ', ಅಮ್ಮ ವ್ಯಕ್ತಿ ಅಥವಾ ಅಮ್ಮನ ಮಾತು ಒಂದು ವಸ್ತು.

ಕೆಲವು ಸಂಬಂಧವಿರದ ಹೇಳಿಕೆಗಳನ್ನು ಹೇಳುತ್ತೇನೆ, ಸಂಬಂಧ ಕಂಡಲ್ಲಿ ಹೆಮ್ಮೆ ಪಡಿ.
ನಾನಾ ಪಾಟೇಕರ್ ಒಬ್ಬ ಉತ್ತಮ ಕಲಾವಿದ, ಸರಳ ಜೀವಿ, ಅನೇಕ ಪ್ರಶಸ್ತಿಗಳ ಸರದಾರ, ಅಂಥವರಿಂದ ಕಲಿಯುವುದು ಬೆಟ್ಟದಷ್ಟಿದೆ; ಆದರೆ ಕೆಲ ಮಹಿಳೆಯರು ಅವರ ಸ್ವಭಾವದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ದೀಪಾವಳಿ ಕತ್ತಲಿನ ಮೇಲೆ ಬೆಳಕಿನ ವಿಜಯದ ಪ್ರತೀಕ, ಅದಕ್ಕೆ ಸಿಕ್ಕಾಪಟ್ಟೆ ಮದ್ದು ಸಿಡಿಸಿ ಬೆಳಕು ತರುವ ಪ್ರಯತ್ನ ನಮ್ಮೆಲ್ಲರದ್ದು. ಬಕ್ರಿ ಈದ್ ಹಬ್ಬವು ತ್ಯಾಗದ ಪ್ರತೀಕ, ಅದಕ್ಕೆಂದೇ ನಾವು ಎಲ್ಲಕ್ಕಿಂತ ಹೆಚ್ಚು ಪ್ರೀತಿಯ ಒಂದನ್ನು ತುಂಬಾ ದೇವರಿಗೆ ಬಲಿ ಕೊಡುತ್ತೇವೆ. ಬಸವಣ್ಣನವರು ಜಾತಿ ಬಿಡಿ ಅಂತ ಹೇಳಿದರು,ಅದನ್ನು ಪಾಲಿಸುವ ನಿಟ್ಟಿನಲ್ಲಿ ನಾವು ಅವರ ಹೆಸರಿನಲ್ಲೇ ಒಂದು ಜಾತಿಯನ್ನು ಸೃಷ್ಟಿಸಿ ಅವರ ದಾರಿಯಲ್ಲಿ ನಡೆಯುವ ಪ್ರಯತ್ನದಲ್ಲಿದ್ದೇವೆ. ಅರ್ಜುನ್ ಸರ್ಜಾ ಒಬ್ಬ ಅಪ್ರತಿಮ ನಟ, ನಮಗೆಲ್ಲ ಅವರೆಂದರೆ ಪ್ರೀತಿ, ಹೆಮ್ಮೆ  ಜೊತೆಗೆ ಅವರು ಹನುಮಂತನ ಕಟ್ಟಾ ಭಕ್ತರೂ ಹೌದು. ಶೃತಿ ಹರಿಹರನ್ ಕೂಡ ಒಬ್ಬ ಉತ್ತಮ ನಟಿ, ಬಹುಭಾಷಾ ಚಿತ್ರಗಳಲ್ಲಿ ಗುರುತಿಸಿಕೊಂಡವರು; ಆದರೆ ಆದ್ಯಾವುದೋ ಇಂಟರ್ವ್ಯೂ ನಲ್ಲಿ ಅವರು ಸೆಕ್ಸ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ, ಛೆ ಛೆ ಬ್ರಹ್ಮಾಂಡ ತಪ್ಪು! ನರೇಂದ್ರ ಮೋದಿ ಒಬ್ಬ ಆಕರ್ಷಕ ಭಾಷಣಕಾರ, ಅವರು ಎಷ್ಟು ಮಾತನಾಡಿದರೂ ಕೇಳಬೇಕೆನಿಸುತ್ತದೆ, ಅದಕ್ಕೆಂದೇ ಅವರು ಬಹುಷಃ ಅಷ್ಟು ಮಾತನಾಡುತ್ತಾರೆ. ಜೀಸಸ್ ಕ್ರೈಸ್ಟ್ ದೇವರ ಮಗ, ಅವರಷ್ಟೇ ಸತ್ಯ, ಅವರಿಗೆ ಎರಡು ಬಗೆದರೆ ದೇವರು ಕ್ಷಮಿಸುವುದಿಲ್ಲ. ಶಿವರಾಜಕುಮಾರ್ ಅಣ್ಣಾವ್ರ ಮಗ ಅವರಿಗೆ ಯಾರಾದರೂ ಸಿನಿಮಾದಲ್ಲೂ ಹೊಡೆದರೆ ಅಭಿಮಾನಿ ದೇವರುಗಳು ಕ್ಷಮಿಸುವುದಿಲ್ಲ.

         ಮೇಲೆ ಹೇಳಿದ ಎಲ್ಲಾ ವಾಕ್ಯಗಳ್ಲಲೂ ವಸ್ತು ಹಾಗು ಕೆಲ ವಿಷಯಗಳಿವೆ. ನಾನಾ ಪಾಟೇಕರ್ ಮಾತಿನ ವಸ್ತುವಾದರೆ ಅವರ ಮೇಲೆ ಹಾಕಲಾದ ಅಪವಾದಗಳು ವಿಷಯ. ದೀಪಾವಳಿ ಮಾತಿನ ವಸ್ತುವಾದರೆ, ಮದ್ದು ಸಿಡಿಸಿ ಪರಿಸರ ಮಾಲಿನ್ಯ ಮಾಡುವುದೊಂದು ವಿಷಯ. ಬಕ್ರಿ ಈದ್ ಮಾತಿನ ವಸ್ತುವಾದರೆ, ಸಾಮೂಹಿಕ ಪ್ರಾಣಿ ಹತ್ಯೆ  ಒಂದು ವಿಷಯ. ಅರ್ಜುನ್ ಸರ್ಜಾ ವಸ್ತು, ಅವರ ಮೇಲಿದ್ದ ಆಪಾದನೆಗಳು ವಿಷಯ. ಶೃತಿ ಹರಿಹರನ್ ವಸ್ತು,ಅವರಾಡಿದ ಮಾತುಗಳು ವಿಷಯ. ನರೇಂದ್ರ ಮೋದಿ ಮಾತಿನ ವಸ್ತುವಾದರೆ, ಅವರ ಭಾಷಣದ ಹವ್ಯಾಸ ಒಂದು ವಿಷಯ. ಜೀಸಸ್, ಶಿವಣ್ಣ ಮಾತಿನ ವಸ್ತುವಾದರೆ, ಅವರ ಅಭಿಮಾನದಲ್ಲಿ ನಡೆಯಬಹುದಾದ ಮೂಢ ಆಚರಣೆಗಳು ವಿಷಯ. ಈ ಬರಹವೂ ಒಂದು ವಸ್ತು, ವಿಷಯವೇನೆಂದರೆ ನಾವು ಒಂದು ಸೃಜನಶೀಲ ಸಮಾಜವಾಗಿ ಇಂತಹ ನೂರೆಂಟು ದೈನಂದಿನ  'ವಸ್ತು' ಹಾಗು 'ವಿಷಯ'ಗಳ ನಡುವೆ ಇರುವ ಅಂತರವನ್ನು ಎಷ್ಟು ಸ್ಪಶ್ಟವಾಗಿ ಗುರುತಿಸಿ ಪ್ರತಿಕ್ರಯಿಸುತ್ತಿದ್ದೇವೆ ಹಾಗೂ ಸ್ಪಂದಿಸುತ್ತಿದ್ದೇವೆ ಎಂಬುದು. ಎಷ್ಟೋ ಬಾರಿ ಒಂದು ಪರಿಸ್ಥಿತಿ/ಘಟನೆಯಲ್ಲಿ ನಾವು ವಸ್ತು ವಿಷಯಗಳನ್ನ ಬೇರ್ಪಡಿಸದೇ ಭಾವೂಕರಾಗಿ, ಯಾವುದೋ ಮೂಢ ನಂಬಿಕೆಯ ಕಾರಣದಿಂದಾಗಿ, ಹುಚ್ಚು ಅಭಿಮಾನದಿಂದಾಗಿ ಹಠಾತ್ತನೇ ನಿರ್ಣಯಿಸಿಬಿಡುತ್ತೇವೆ. ಗುಪ್ತರ ಆಳ್ವಿಕೆಯವರೆಗೂ ನಾವು ಭೂಮಿ ಸಪಾಟಾಗಿದೆ ಅಂತಲೇ ನಂಬಿದ್ದೆವು, ಭೂಮಿ ಗೋಲಾಕಾರದಲ್ಲಿದೆ ಅಂತ ಹೇಳಿದವರಿಗೆಲ್ಲ ತಲೆ ತಿರುಕನ ಪಟ್ಟ ಕಟ್ಟಿ ನೇಣು ಹಾಕಿದ್ದೂ ಉಂಟಂತೆ. ಜಗತ್ತಿಗೆ ಒಂದೇ ಸತ್ಯ ಅಂತ ನಂಬಿದ ಒಂದು ಸಮಾಜಕ್ಕೆ, ಇಲ್ಲ! ಇನ್ನೊಂದೇನೋ ಬೇರೆ ಇದೆ/ಇರಬಹುದು ಅಂತ ಒಬ್ಬ ಹೇಳಿದರೆ ಒಪ್ಪಿಕೊಳ್ಳುವುದು ತುಸು ಹೊತ್ತಾಗಲಿ ಆದರೆ ಅವನನ್ನು ಎಳೆದು ನೇಣು ಹಾಕಿತೆಂದರೆ? ಎಷ್ಟು ಭಯಾನಕ ಪರಿಸರವದು? ಅಂತಹ ಪರಿಸರದಲ್ಲಿ ಹೊಸತು ಹುಟ್ಟುವುದೆಷ್ಟು ದುರ್ಲಭ. ನಮ್ಮ ಸೌಭಾಗ್ಯ, ಎಲ್ಲೋ ಒಂದು ಕಡೆ ಯಾರೋ ಒಬ್ಬರು ಕಿವಿ ಕೊಟ್ಟು, ನಿನ್ನ ವಿಷಯವನ್ನಾದರೂ ಹೇಳು ಅಂತ ಅಂಥದ್ದೇ  ಒಬ್ಬ 'ತಲೆ ತಿರುಕ'ನಿಗೆ ಹೇಳಿರಬಹುದು. ಆಗ ಭೂಮಿಯ ಆಕಾರದ ಬಗ್ಗೆ ಚರ್ಚೆಗಳು ಶುರುವಾಗಿ ಈಗ ನಮಗೆ ಯಾವುದು ಗೋಲು, ಯಾವುದು ಓಳು ಎಂದು ತಿಳಿದಿದೆ.

ವಿಷಯ ಇಷ್ಟೇ, ಯಾರ ಬಗ್ಗೆ ಯಾರು ಹೇಳಿದರು ಹೇಳಿದರು ಅಂತ ಭಾವೂಕರಾಗಿ, ಹುಚ್ಚು ಅಭಿಮಾನದಿಂದಾಗಿ, ಸಾಮೂಹಿಕವಾಗಿ ಒಮ್ಮೆಲೇ ನಿರ್ಧಾರಗಳಿಗೆ ಬಾರದೇ, ಏನು ಹೇಳಿದರು? ಯಾಕೆ ಹೇಳಿರಬಹುದು ಎಂದು ತುಸು ಪ್ರಾಕ್ಟಿಕಲ್ ಆಗಿ, ತಾಳ್ಮೆಯಿಂದ ಯೋಚಿಸೋಣ. ಕಣ್ಣಲ್ಲಿ ಕಂಡು, ಕಿವಿಯಲ್ಲಿ ಕೇಳಿ input ತೆಗೆದುಕೊಂಡರೆ ಮಾತ್ರ ಮೆದುಳು ಅದನ್ನು analyse ಮಾಡಿ ಒಂದು output ನೀಡಬಲ್ಲದು. ಬಾಯಿಯಿಂದ ತಿಂದು, ಹೊಟ್ಟೆಯಲ್ಲಿ ಜೀರ್ಣಿಸಿದರೆ ಮಾತ್ರ ಬರಬೇಕಾದ ಜಾಗದಿಂದ ಮಲವು ಹೊರಬಂದು ದೇಹ ಶುಚಿಯಾರುವುದು. Input ಇರದೆಯೇ ನಮ್ಮ ತಲೆಯಲ್ಲಿ ಇದ್ದಿದ್ದನ್ನೇ ಹೊರ ಹಾಕುತ್ತ ಕುಳಿತರೆ ಅದು ಬಾಯಿಂದ ಸರಿಯಾಗಿ ತಿನ್ನದೇ ಬಾಯಿಂದಲೇ ಹೊರಹಾಕಿದ ವಾಂತಿಯಂತೆ, ಇದರಿಂದ ದೇಹಕ್ಕೆ ಬರುವುದು ರೋಗ ರುಜಿನಗಳಷ್ಟೇ. ಸಮಾಜವೂ ಒಂದು ಸದಾ ವಿಕಸಿತಗೊಳ್ಳಬೇಕಾದ ದೇಹ, ಸಮಯಕ್ಕೆ ತಕ್ಕಂತೆ ಊಟ ಮಾಡಿ, ಜೀರ್ಣಿಸಿ, ಮಲವನ್ನು ಹೊರಹಾಕುತ್ತಲೇ ಇರಬೇಕು, ಇಲ್ಲವಾದರೆ ಆ ಸಮಾಜದ ಬೆಳವಣಿಗೆ ಕಷ್ಟ. ಊಟ ಯಾವುದು, ಮಲ ಯಾವುದು ಅಂತ ಗುರುತು ಸಿಗುವುದು ನೋಡುವುದರಿಂದ, ಕೇಳುವುದರಿಂದ, ಸಮಾಧಾನದಿಂದ ತಿಳಿದುಕೊಳ್ಳುವುದರಿಂದ. ಊಟದ ಮೇಲಿರಬೇಕಾದ ಪ್ರೀತಿ ಮಲದ ಮೇಲೆ ಆಗಿಹೋದರೆ ಏನನ್ನೂ ಹೊರಹಾಕಬೇಕೆಂದು ತಿಳಿಯದೇ confuse ಆಗಿ ಹಾಳಾಗಿ ಹೋಗುತ್ತದೆ.

ಒಂದೋ ಸುದ್ದಿಯಲ್ಲಿರುವ ಯಾವುದೇ ವಸ್ತು ಅಥವಾ ವಿಷಯಗಳ ಬಗ್ಗೆ ಗಮನ ಕೊಡಬೇಡಿ, PUBG ಆಡಿಕೊಂಡು, ಸುದೀಪ್-ಶಿವಣ್ಣ ಕಟ್ ಔಟ್ ಗಳಿಗೆ ಅರ್ಧ ಲೀಟರ್ ಹಾಲು ಸುರಿದು ಜಮ್ಮಂತ ಇದ್ದುಬಿಡಿ. ಇಲ್ಲವೋ 'ವಸ್ತು' ಹಾಗೂ 'ವಿಷಯ' ಎರಡಕ್ಕೂ ಸಮನಾದ ಗಮನ ಕೊಡಿ. ನಾನಾ ಪಾಟೇಕರ್, ಅರ್ಜುನ್ ಸರ್ಜಾ ದೊಡ್ಡವರೇ, ಹಾಗಂತ ಅವರು ತಪ್ಪೇ ಮಾಡಿಲ್ಲ ಅಂತ ಮೂಢವಾಗಿ ನಂಬಿ ಕುಳಿತರೆ ಆಗದು, ಹಾಗೆಯೇ ಶ್ರುತಿ ಹರಿಹರನ್ ತನುಶ್ರೀ ದತ್ತ ಒಳ್ಳೆಯವರು ಅಥವಾ ಕೆಟ್ಟವರು ಅಂತ ಒಂದೇ ಉಸಿರಲ್ಲಿ ಹೇಳಲಾಗುವುದಿಲ್ಲ, ಎಲ್ಲರೂ ಹೇಳುವುದನ್ನು  ಕೇಳಿ ತಿಳಿದುಕೊಂಡಮೇಲೆಯೇ ಪರಿಶೀಲನೆಗೆ ದಾರಿ. ಹಾಗೆಯೇ ನಾವು ಆಚರಿಸುವ ಹಬ್ಬಗಳು, ನಮ್ಮ ಆಚರಣೆಗಳು ತುಂಬಾ ಹಳೆಯ ಕಾಲದಿಂದ ನಡೆದು ಬಂದ ಮಾತ್ರಕೆ ಅವುಗಳು ನೂರಕ್ಕೆ ನೂರು ಸರಿ ಅಂತಲೂ ಹೇಳಲಾಗುವುದಿಲ್ಲ, ಭೂಮಿ ಸಪಾಟಾಗಿ ಇರದೇ ಇರಬಹುದು ಎಂಬ ಸಣ್ಣ ಸಾಧ್ಯತೆಯ ಅರಿವು ನಮಗೆ ಸಕಾಲದಲ್ಲಿ ಬಂದಿದ್ದಕ್ಕೇ ನಾವು ಈಗ ಜಿಯೋ ಇಂಟರ್ನೆಟ್ ನಲ್ಲಿ ಬಿಗ್ ಬಾಸ್ ನೋಡುತ್ತಿರುವುದು. ಗಣೇಶನ ಶಿರ ಕಡಿದು ತಾನು ತಪ್ಪು ಮಾಡಿದೆ ಎಂದು ಶಿವ ಅರಿತಮೇಲೆಯೇ ನಮಗೆ ಗಣೇಶನ ಹಬ್ಬ ಹುಟ್ಟಿದ್ದು. ಆಡುವುದಕ್ಕೆ ಬಾಯಿ ಒಂದೇ, ಆದರೆ ಕೇಳುವುದಕ್ಕೆ ಎರಡು ಕಿವಿಗಳು, ಎರಡರಷ್ಟು ಕೇಳಿಸಿಕೊಳ್ಳೋಣ. ಅಮ್ಮನ ಆ ಪುಟ್ಟ ಸುಳ್ಳನ್ನು ಧನಾತ್ಮಕವಾಗಿ ಕಂಡು, ಅರಿತುಕೊಂಡ ಮೇಲೆಯೇ ನಾವು ಚಾಕುವಿನಿಂದ ಅನಾಹುತಗಳಿಂದ ದೂರ ಉಳಿದೆವು, ಕಲಿಯಬೇಕಾದ ಸಮಯದಲ್ಲಿ ತರಕಾರಿ ಹೆಚ್ಚುವುದನ್ನೂ ಕಲಿತೆವು. ಇನ್ನೂ ಕಲಿಯದೇ ಇರುವವರು ಬೇಗ ಕಲೀರಪ್ಪಾ, ಹೆಂಡತಿಯಿಂದಾಗಬಹುದಾದ ಅನಾಹುತಗಳಿಂದ ಉಳಿಯಬಹುದು.      


Thursday, October 18, 2018

ಒಂಭತ್ತು ದಿನಗಳ ದುರ್ಗಿ


 
 
             ಆಫೀಸಿಗೆ ತಡವಾಯಿತೆಂದು ಅವಸರದಿ ಓಡುತ್ತ ಕ್ಯಾಬ್ ಹತ್ತುವಾಗ ತನ್ನ ಆರು ವರ್ಷದ ಮಗ ಕಿಟಕಿಯಿಂದಲೇ ಅಮ್ಮ..ಬಾಯ್! ಎಂದು ಕೂಗಿಕೊಂಡನು. 'ಬಾಯ್ ಪುಟ್ಟು' ಎಂದು ಕೈ ಮಾಡುತ್ತಾ ಕಯ್ಯಲ್ಲಿದ್ದ ಲ್ಯಾಪ್ಟಾಪ್ ಬ್ಯಾಗ್ ಅನ್ನು ಗಾಡಿಯಲ್ಲಿ ಇಟ್ಟು ಕುಳಿತುಕೊಂಡಳು ಗಂಗೆ. ತಾನು ಹಾಗೂ ತನ್ನ ಗಂಡ ಇಬ್ಬರೂ ಕಂಪನಿ ಕೆಲಸಗಳಿಗೆ ಹೋಗುತ್ತಾರೆ. ಆರು ವರ್ಷದ ಮಗುವನ್ನು ನೋಡಿಕೊಳ್ಳಲು 'ಬಾಯೀ' ಯನ್ನು ನೇಮಿಸಿದ್ದಾರೆ, ಆಗಾಗ ಅತ್ತೆ- ಮಾವ ಕೂಡ ಬಂದು ನೆರವಾಗುತ್ತಾರೆ. ಗಂಗೆಯ ಅಪ್ಪ- ಅಮ್ಮ ಬರುವುದಿಲ್ಲ. ಗಂಡನ ಮನೆಯಿಂದ ಆದ ಕೆಲ ಪುಡಿ ಜಗಳಗಳಿಂದ ನೊಂದ ಅವರನ್ನು ತಾನೂ ಸಹ ದೂರವೇ ಇರಿಸಿದ್ದಾಳೆ. ಆಗಾಗ ಗಂಗೆಗೆ ಅಮ್ಮನ ನೆನಪಾಗುತ್ತದೆ. ಕೆಟ್ಟವನಲ್ಲದೇ ಇದ್ದರೂ ಗಂಡ ಯಾಕೋ ತನ್ನ ತವರು ಎಂದರೆ ತುಸು ರೇಗಾಡುತ್ತಾನೆ, ಇದರಿಂದ ತನ್ನ ತವರು ಮನೆಯವರಿಗೆ ಆಗುವ ತೊಂದರೆಗಳನ್ನ ನೋಡಿ ತನಗೆ ಬೇಜಾರಾಗುತ್ತದೆ. ಹೋದ ವಾರದಿಂದ ತಮ್ಮಮ್ಮನಿಗೆ ಬೆನ್ನು ನೋವು ಜೋರಾಗಿದೆಯಂತೆ, ಎರಡು ದಿನ ಆಸ್ಪತ್ರೆಗೂ ಸೇರಿಸಿ, ಅಪ್ಪ ಒಬ್ಬನೇ ಪೇಚಾಡುತ್ತಿದ್ದನ್ನು ನೆನೆದು ದಿನವೂ ನೋಯುತ್ತಾಳೆ. ಆಫೀಸಿನಿಂದ ತಾಸಿಗೊಮ್ಮೆ ಅಪ್ಪನಿಗೆ ಫೋನ್ ಮಾಡಿ ಅಮ್ಮನ ಆರೋಗ್ಯ ವಿಚಾರಿಸುತ್ತಾಳೆ. ತನ್ನೂರಿನ ಡಾಕ್ಟರ್ ನೀಡಿದ ಗುಳಿಗೆಗಳ ವಿವರಗಳನ್ನು ಫೋನಿನಲ್ಲೇ ಅಪ್ಪನಿಂದ ಕೇಳಿ ಬೆಂಗಳೂರಿನ ತನ್ನ ಡಾಕ್ಟರ್ ಸ್ನೇಹಿತರಲ್ಲಿ ವಿಚಾರಿಸಿದ್ದಾಳೆ. ಕೆಲಸದ ನಡು ನಡುವೆ ಗೂಗಲ್ ನಲ್ಲಿ ಬೆನ್ನು ನೋವಿಗೆ ಏನೇನು ಮಾಡಬೇಕು, ಏನು ಮಾಡಬಾರದೆಂದು ಹುಡುಕಿ ತಿಳಿದುಕೊಂಡು ಅಮ್ಮನಿಗೆ ಅವುಗಳನ್ನು ತಿಳಿಹೇಳುತ್ತಾಳೆ.  ಮನೆಯಲ್ಲಿ ತನ್ನ ಗಂಡ ಇಲ್ಲದ ವೇಳೆ ಮಗನಿಂದ ಅಜ್ಜ-ಅಜ್ಜಿಯರಿಗೆ ಫೋನು ಮಾಡಿಸಿ ಮಾತನಾಡಿಸುತ್ತಾಳೆ. ಮೊಮ್ಮಗ ಅಂದರೆ ಅಜ್ಜ-ಅಜ್ಜಿಯರಿಗೆ ಬ್ರಹ್ಮಾಂಡ ಪ್ರೀತಿ. 'ಅಜ್ಜಿ, ನೀ ಜಲ್ದಿ ಅರಾಮ್ ಆಗು, ನನ್ನ ಜೊತಿ ಆಟ ಆಡುವಂತಿ ಈಸಾರಿ ಊರಿಗೆ ಬಂದಾಗ' ಅಂತ ಮೊಮ್ಮಗ ಫೋನಿನಲ್ಲಿ ಹೇಳಿದರೆ ಖುಷಿಗೆ ಮರುಕ್ಷಣವೇ ಅಜ್ಜಿಯ ಬೆನ್ನು ನೋವು ಮಾಯ.

ಎರಡು ತಿಂಗಳ ಹಿಂದೆ ಗಂಡ ತನ್ನ ಹುಟ್ಟುಹಬ್ಬಕ್ಕೆಂದು ಮೊಬೈಲ್ ಗಿಫ್ಟ್ ಮಾಡಿದ್ದ. ತನ್ನ ಪಗಾರ ಜಾಸ್ತಿ ಆದ ನಂತರ ಪ್ರತಿ ತಿಂಗಳು ಎಕ್ಸ್ಟ್ರಾ ಬರುವ ಆ ಮೂರು ಸಾವಿರ ರೂಪಾಯಿಗಳನ್ನು ಕೂಡಿಟ್ಟು ಕೆಲ ತಿಂಗಳಾದ ಮೇಲೆ ಕಂತಿನಲ್ಲಿ ಒಂದು ಗೇರ್ ಲೆಸ್ ಬೈಕ್ ಖರೀದಿಸಿ ಗಂಡನಿಗೆ ಸರ್ಪ್ರೈಸ್ ಕೊಡುವುದೆಂದು ಲೆಕ್ಕ ಹಾಕುತ್ತಿದ್ದಾಳೆ. ಮನೆಗೆ ಒಂದು ಬೈಕ್ ಅಂತ ಆದರೆ ತನಗೆ ಹಾಗು ಗಂಡನಿಗೆ ಸಹಾಯವಾದೀತು. ಮನೆಯ ಖರ್ಚು, ಅತ್ತೆ ಮಾವರ ಜೀವನೋಪಾಯ ಮತ್ತು ದವಾಖಾನೆ ಖರ್ಚು, ಹಳೆಯ ಸಾಲದ ಈ.ಎಂ.ಐ ಗಳು, ಭವಿಷ್ಯದ ಪುಟ್ಟುವಿನ ಶಾಲೆಗೆಂ ಕೂಡಿಕೆಯೆಂದು ಗಂಡ ಹಗಲೂ ರಾತ್ರಿ ದುಡಿಯುತ್ತಾನೆ. ಅವನಿಗೂ ಬಹಳ ಕಷ್ಟಗಳಿವೆ, ಈ ಎಲ್ಲಾ ಗೋಜು ದುಗುಡಗಳಿಂದ ಧೈರ್ಯ ಸಾಲದೇ ಆಗಾಗ ಅವನು ಧೃತಿಗೆಟ್ಟು ತನ್ನ ಮೇಲೆ ರೇಗಾಡುವುದನ್ನು ಗಂಗೆ ಇಂದಿಗೂ ಯಾರ ಮುಂದೆಯೂ ಹೇಳಿಕೊಂಡಿಲ್ಲ. ಅವನ ವಯ್ಯಸ್ಸಿಗೆ ಅವನಿಗೆ ಜವಾಬ್ದಾರಿಗಳು ಜಾಸ್ತಿ, ಸಮಾಧಾನ ಕಡಿಮೆ, ಮುಂದೆ ಹೋಗ್ತಾ ಎಲ್ಲ ಸರಿ ಹೋಗುತ್ತೆ ಎಂಬ ನಂಬಿಕೆ ಅವಳದು. ಹಿಂದೊಮ್ಮೆ ಹೀಗೆ ಯಾವುದೋ ಆಫೀಸ್ ಟೆನ್ಶನ್ ನಿಂದ ರೇಗಿಹೋಗಿದ್ದ ಅವನು ಸಿಟ್ಟಾಗಿ ಯಾವುದೋ ಮಾತಿಗೆ ತನ್ನನ್ನು ಹೊಡೆದಿದ್ದ. ತನ್ನ ಮುಖದ ಮೇಲೆ ಮೂಡಿದ ಹೆಪ್ಪು ಗಟ್ಟಿದ್ದ ರಕ್ತದ ಗುರುತನ್ನು ಕಂಡು ಮಗ ಪುಟ್ಟು ರಾತ್ರಿ ಅಳುತ್ತ ಬಂದು 'ಅಮ್ಮಾ.. ನೋವಾಗಕತ್ತೇತಿ?' ಅಂತ ಕೆನ್ನೆ ಸವರಿ ಕೇಳಿದಾಗ ತನಗೆ ಅಳು ತಡೆಯಲಾರದೆ ಪುಟ್ಟುವನ್ನು ತಬ್ಬಿ ಅತ್ತಿದ್ದಳು. ಅದಾಗಿ ಸ್ವಲ್ಪ ದಿನಕ್ಕೇ ಗಂಡನ ಬಿ.ಪಿ ಜಾಸ್ತಿಯಾಗಿ ಬಿದ್ದಾಗ ಅವನನ್ನು ಆಫೀಸಿನಿಂದಲೇ ಆಸ್ಪತ್ರೆಗೆ ಕರೆತಂದಿದ್ದೇವೆ ಎಂದೊಂದು ಫೋನ್ ಕರೆ ಬಂದಾಗ ತಾನು ಅರೆಹುಚ್ಚಿಯಂತೆ ಒಬ್ಬಳೇ ಆ ಆಸ್ಪತ್ರೆಗೆ ಓಡಿದ್ದಳು. ಬೆಡ್ ಮೇಲೆ ಮಗುವಿನಂತೆ ಮಲಗಿದ್ದನವನು ಪಾಪ. ಒಂದು ವಾರ ತನ್ನ ಆಫೀಸಿಗೆ ರಜೆ ಹಾಕಿ ಗಂಡನನ್ನು ತಾಯಿಯಂತೆ ನೋಡಿಕೊಂಡಿದ್ದಳು, ಆಗ ಹೋಗಿ ತುಸು ಹುಷಾರಾಗಿದ್ದ. ಅವನ ಆರೋಗ್ಯದ ಬಗ್ಗೆ ಅತ್ತೆ ಮಾವರಲ್ಲಿ ಹೇಳಿಕೊಳ್ಳುವುದು ಬೇಡ, ಅವರಿಗೂ ಚಿಂತೆಯಾಗುತ್ತದೆ ಎಂದು ಗಂಡನಿಗೆ ಹೇಳಿಕೊಟ್ಟದ್ದೂ ತಾನೇ. ಆಗಿನಿಂದ ಗಂಡನ ಊಟ, ನಿದ್ದೆ, ಆಚಾರ ವಿಚಾರಗಳಲ್ಲಿ ಏರುಪೇರಾಗದಂತೆ ತೀರಾ ನಿಗಾ ವಹಿಸುತ್ತಾಳೆ. ಆಫೀಸಿನಲ್ಲಿ ಮೊನ್ನೆ ಸೆಲ್ಫ್-ಹೆಲ್ಪ್ ಸೆಶನ್ ನಲ್ಲಿ ಒಳ್ಳೆ ಆರೋಗ್ಯ-ಅಭ್ಯಾಸಗಳೆಂದು ಆ ಟ್ರೈನರ್ ಹೇಳಿದ ಚಿಕ್ಕ ಪುಟ್ಟ ಟಿಪ್ಸ್ ಗಳನ್ನು ಬರೆದಿಟ್ಟುಕೊಂಡು ಅಲ್ಲಲ್ಲಿ ಅಳವಡಿಸಿಕೊಳ್ಳುತ್ತಾಳೆ.

ಸಂಜೆ ಆಫೀಸ್ ನಿಂದ ವಾಪಸ್ಸು ಮನೆಗೆ ಹೋಗುವಾಗ ತಾನು ಪ್ರಯಾಣಿಸುತ್ತಿದ್ದ ಬಾಡಿಗೆ ಓಲಾ ಕ್ಯಾಬ್ ರಸ್ತೆಯಲ್ಲಿ ನಡೆಯುತ್ತಿದ್ದ ದುರ್ಗಾ ದೇವಿ ಮೆರವಣಿಗೆಯನ್ನು ದಾಟಿಕೊಂಡು ಹೋಗಬೇಕಿತ್ತು. ದೈತ್ಯಾಕಾರದ ಪ್ರಸನ್ನ ದುರ್ಗೆಯ ಮೂರ್ತಿ, ಅವಳ ಮೈ ತುಂಬಾ ಅಲಂಕಾರದ ಒಡವೆಗಳು, ಸುತ್ತ ಮುತ್ತಲೂ ಸಾವಿರ ಜನ ಹಾಡಿ ಕುಣಿದು ಆಚರಿಸುತ್ತಿರುವುದನ್ನು ಗಂಗೆಯು ಕಾರಿನ ಕಿಟಕಿಯಿಂದಲೇ ತದೇಕಚಿತ್ತದಿಂದ ನೋಡುತ್ತಿದ್ದಳು. ದುರ್ಗೆಯ ಮೂಗಿನ ನತ್ತನ್ನು ಗಮನಿಸಿದಾಗ, ತಾನು ಮದುವೆಯಾದ ಹೊಸತರಲ್ಲಿ ಅಪ್ಪ ತನಗೆ ಮಾಡಿಸಿ ಹಾಕಿದ್ದ ಬಂಗಾರದ ನತ್ತುನೆನಪಾಯಿತು. ಅರೆ! ತಾಯಿಯ ನತ್ತು ಕೂಡ ನನ್ನ ನತ್ತಿನಂತೆಯೇ ಮೂರು ಮುತ್ತಿನದ್ದಿದೆ ಎಂದು ಖುಷಿಪಟ್ಟಳು. ಡೋಲು ಡಂಗುರದ ನಡುವೆ ಧೂಪ ಹಾಕಿ, ಬಣ್ಣಗಳ ಬಳಿದುಕೊಂಡು ಕುಣಿಯುತ್ತಿದವರನ್ನು ನೋಡಿ ಮೈಮರೆತು ಕುಳಿತವಳಿಗೆ ತನ್ನ ಕ್ಯಾಬ್ ಡ್ರೈವರ್ ನ ಹಾರ್ನ್ ಶಬ್ದದಿಂದ ಟ್ರಾಫಿಕ್ ನ ಅರಿವಾಯಿತು. ಕ್ಯಾಬ್ ತುಸು ಮುಂದೆ ಹೋಗುತ್ತಿದ್ದಂತೆ ತನ್ನ ಕಿಟಕಿಯ ಗಾಜನ್ನು ಚೂರು ಕೆಳಗಿಳಿಸಿ ಅಂಗೈ ಹೊರ ಹಾಕಿ ಕೈ ಮುಗಿದರೆ, ಮೆರವಣಿಗೆಯಲ್ಲಿದ್ದ ಯಾರೋ ಒಬ್ಬರು ಎರಡು ಹೂವುಗಳನ್ನು ಅವಳ ಕೈಗಿಟ್ಟರು. ಹೂವುಗಳು ಕೈಗೆ ಬಿದ್ದಂತೆಯೇ ಗಂಗೆಗೆ ಆ ಕ್ಷಣದಲ್ಲಿ ಖುಷಿ, ಸಮಾಧಾನ ಹಾಗೂ ತನ್ನ ಸಾವಿರ ದುಃಖಗಳು ಒಮ್ಮೆಲೇ ನುಗ್ಗಿಬಂದು ಅವಳ ಕಣ್ಣಲ್ಲಿ ನೀರಾಗಿ ಹೋದವು. ಅವಳಿಗೆ ದುರ್ಗೆ ಇನ್ನೂ ಹತ್ತಿರ ಕಂಡಳು. ಕ್ಯಾಬ್ ನ ಡ್ರೈವರ್ ಹಿಂದೆ ತಿರುಗಿ 'ಕ್ಯಾ ಮೇಡಂ? ಮಾ ಕಾ ಆಶೀರ್ವಾದ್ ಮಿಲ್ಗಯಾ ಆಪ್ಕೋ' ಅಂತ ನಗುತ್ತಲೇ ಹೇಳಿದ. ಅರೆನಗುವಲ್ಲಿ 'ಹೌದು, ಪುಣ್ಯ ನಂದು' ಅಂದಳು. 'ಒಹ್, ನೀವು ಕನ್ನಡದವರಾ!' ಅಂತ ಅಂದು ಡ್ರೈವರ್ ಮತ್ತೊಂದು ಹಾರ್ನ್ ಹಾಕಿ ಗಾಡಿ ಮುನ್ನಡೆಸಿದ. ಆ ಇಪ್ಪತ್ತು ನಿಮಿಷಗಳಲ್ಲಿ ದುರ್ಗೆ ಹಾಗೂ ತನ್ನ ನಡುವೆ ಅದ್ಯಾವುದೋ ಮಾತಿರದ ಸಂಭಾಷಣೆ ಆಯಿತೆಂಬ ಭಾವನೆ ಗಂಗೆಯದ್ದು. ದೇವಿಯ ಕಣ್ಣಲ್ಲಿ ಕಣ್ಣಿಟ್ಟು ಅವಳಿಂದ ಧೈರ್ಯ ಪಡೆದುಕೊಂಡವಳಂತೆ, ಬಂದ ಕಣ್ಣೀರನ್ನು ನುಂಗಿಕೊಂಡಳು. ಹೇಗೋ ಇನ್ನು ತುಸು ದಿನ ಕಳೆದರೆ ಎಲ್ಲವೂ ಸರಿ ಹೋಗಿ, ಮತ್ತೆ ಹೊಸತಾಗಿ ಎಲ್ಲಾ ಚಂದವಾಗುತ್ತದೆ ಎಂಬ ಹುಚ್ಚು ನಂಬಿಕೆ ಅವಳನ್ನು ಆವರಿಸಿತು. ಬ್ಯಾಗಿನಲ್ಲಿನ ಪುಟ್ಟ ಕನ್ನಡಿಯ ಹೊರತೆಗೆದು ತನ್ನ ಕಣ್ಣ ಕಾಡಿಗೆಯನ್ನೊಮ್ಮೆ  ಸರಿಮಾಡಿಕೊಂಡಳು. ಗೋಜು ಗದ್ದಲ ಸರಿದಂತೆ ಅವಳ ಗಾಡಿ ಮುನ್ನಡೆಯಿತು.    

           ಅಂದಹಾಗೆ, ಇಂತಹ ನೂರು ಗಂಗೆಯರನ್ನು ನಾವು ದಿನವೂ ನೋಡುತ್ತೇವೆ. ಒಮ್ಮೊಮ್ಮೆ ಆಫೀಸಿನಲ್ಲಿ ನೀರು ಕುಡಿಯುತ್ತ ನೇಪಥ್ಯದಲ್ಲಿ ಯಾವುದೋ ಟ್ಯಾಬ್ಲೆಟ್ ತಗೆದುಕೊಳ್ಳುತ್ತಿರುತ್ತಾಳೆ, ಮರುದಿನ ಏನೂ ಆಗದವರಂತೆ ರಂಗೋಲಿ ಕಾಂಪಿಟಿಷನ್ ನಲ್ಲಿ ಸಂಭ್ರಮದಿಂದ ಆಚರಿಸುತ್ತಿರುತ್ತಾಳೆ. ಒಮ್ಮೊಮ್ಮೆ ಯಾರಿಗೋ  'ಏನ್ರೀ? ಮದುವೆಯಾದಾಗಿಂದ ಆಫೀಸಲ್ಲಿ ಜಾಸ್ತಿ ಕಾಣೋದೇ ಇಲ್ಲ ನೀವು?' ಎಂದು ಕೇಳಿ ನಕ್ಕರ, ಒಮ್ಮೊಮ್ಮೆ  ಎಲ್ಲರೂ ನಗುವಾಗ ಒಬ್ಬಳೇ ಎಲ್ಲೋ ಕಳೆದು ಹೋದವರಂತೆ ಕೂತಿರುತ್ತಾಳೆ.  ಒಮ್ಮೊಮ್ಮೆ ಎರಡು ದಿನ ಹುಷಾರಿಲ್ಲ ಎಂದು ಯಾರಿಗೂ ಸಿಗದೇ ಇದ್ದುಬಿಡುತ್ತಾಳೆ, 'ಆಕೆಗೆ ಮನೇಲಿ ಏನೋ ಪ್ರಾಬ್ಲಮ್ ಇದೆ ಪಾಪ' ಅಂತ ಜನ ಮಾತನಾಡಿಕೊಳ್ಳುತ್ತಾರೆ. ಒಮ್ಮೊಮ್ಮೆ ರಸ್ತೆಯ ಬದಿ ಕಾಯಿಪಲ್ಯ ಮಾರುತ್ತ 'ತಗೋರಿ ಯಪ್ಪಾ.. ಎರಡು ರೂಪಾಯಿ ಕಮ್ಮಿಗೆ ಕೊಡ್ತೀನಿ' ಅಂದರೆ, ಒಮ್ಮೊಮ್ಮೆ ಊರಿನಿಂದ ಫೋನು ಮಾಡಿ 'ಮಗಾ.. ನಿನ್ನೆ ರಾತ್ರಿ ನನಗ ಕೆಟ್ಟ ಕನಸು ಬಿದ್ದಿತ್ತು, ಅರಾಮ್ ಆದಿ ಹೌದಿಲ್ಲಾ ಅಲ್ಲೆ ನೀ?' ಎಂದು ಭಾರವಾದ ಧ್ವನಿಯಲ್ಲಿ ಕೇಳುತ್ತಾಳೆ. ಒಮ್ಮೊಮ್ಮೆ ಪುಟ್ಟ ಮಗುವನ್ನು ಮೈಗೆ ಬಿಗಿದುಕೊಂಡು ಝಾನ್ಸಿ ರಾಣಿಯಂತೆ ದಟ್ಟ ಟ್ರಾಫಿಕ್ ನಲ್ಲಿ ಬೈಕು ಚಲಾಯಿಸಿಕೊಂಡು ಹೋಗುತ್ತಾಳೆ, ಆಗಾಗ ಅವಳನ್ನು ರೋಡಲ್ಲಿ ಯಾರೋ ಪುಢಾರಿಗಳು ಕೆಟ್ಟದಾಗಿ ಛೇಡಿಸುತ್ತಾರೆ. ಅವಳ ಮದುವೆಯಾಗುತ್ತಿಲ್ಲ ಎಂದು ಅಪ್ಪ ಸಿಟ್ಟು ಸಿಡುಕು ಮಾಡಿಕೊಂಡು ಓಡಾಡುತ್ತಾರೆ, ಮಕ್ಕಳಾಗುತ್ತಿಲ್ಲ ಎಂದು ಅತ್ತೆ ಹೀಯಾಳಿಸುತ್ತಾಳೆ, ಗಂಡನ ಬಿಟ್ಟವಳೆಂದು ಸಮಾಜ ಕಥೆ ಮಾಡಿ ಆಡಿಕೊಂಡು ಸಮಾಧಾನವಾಗುತ್ತದೆ. ಆಗಾಗ ದೇವಸ್ಥಾನಗಳಲ್ಲಿ ದೇವರೊಡನೆ ಮೌನ ಸಂಭಾಷಣೆಯಲ್ಲಿ ತೊಡಗಿದವರಂತೆ ಮೂಲೆಯಲ್ಲಿ ನಿಂತಿರುತ್ತಾಳೆ. ಆಫೀಸು, ಮನೆ, ರಸ್ತೆ, ಊರು, ಜವಾಬ್ದಾರಿ ಹಾಗೂ ಕನಸುಗಳ ನಡುವೆ ಸಿಕ್ಕಿ ಒದ್ದಾಡಿ, ಮತ್ತೆ ನಗುತ್ತಲೇ ಹಬ್ಬಗಳಲ್ಲಿ ಅವಳು ದುರ್ಗೆ, ಕಾಳಿ, ಲಕ್ಷ್ಮೀಯಾಗುತ್ತಾಳೆ.


ನಮ್ಮ ಜೊತೆಗಿರುವ ಇಂತಹ ಗಂಗೆಯರನ್ನು ಗ್ರಾಂಟೆಡ್ ಆಗಿ ತೆಗೆದುಕೊಳ್ಳದೇ ಅವರನ್ನು ಅಂಗೀಕರಿಸೋಣ. ಅದಷ್ಟೇ ಸಾಕು! ಬೇರೆಲ್ಲ ದುನಿಯಾ ನಮ್ಮಪ್ಪರಿಗಿಂತಲೂ ಚನ್ನಾಗಿ ಅವರಿಗೆ ಗೊತ್ತು. 
ಗಂಡಸರಿಗೆಲ್ಲ ಹಿಂದೆ ಹೋದ ಹಾಗೂ ಮುಂದೆ ಬರುವ ವಿಶ್ವ ಮಹಿಳೆಯರ ದಿನಗಳ ಶುಭಾಷಯಗಳು!    


Monday, October 15, 2018

ಮನುಷ್ಯರು ಓದಲೆಂದು ಹುಟ್ಟಿದವರಲ್ಲ... ನೀವು ಮನುಷ್ಯರಾಗಿದ್ದಲ್ಲಿ ಇದನ್ನು ಓದಬೇಡಿ !





ದೇಶ ಸುತ್ತು ಇಲ್ಲ ಕೋಶ ಓದು! ಈ ಗಾದೆ ಮಾತನ್ನ ಒಂದು ಸಾವಿರ ಸಾರಿನಾದ್ರೂ ಕೇಳಿರಬೇಕು ಇಲ್ಲಿವರೆಗೂ ನಾವು. ಇಂಥ ಸಾಕಷ್ಟು ಮಾತುಗಳಿವೆ, ಅಷ್ಟು ಬಾರಿ ಕೇಳಿಯೂ ಅವನ್ನ ತಲೆಗಲ್ಲದೆ ಬರೀ ಕಿವಿಗಷ್ಟೇ ಹಾಕಿಕೊಂಡಿರುತ್ತೇವೆ ನಾವು. ಹಾಗೆ ನೋಡಿದರೆ ಕಿವಿಗೆ ತಲೆಗಿಂತ ಜಾಸ್ತಿ ತಾಳ್ಮೆ ಇದೆ, ಪಾಪ ಏನೇ ಇದ್ದರೂ ಕೇಳಲೇಬೇಕು ಅದು. ಕಣ್ಣಿಗೆ ರೆಪ್ಪೆ ಇದೆ, ಮಿದುಳು ತನಗೆ ಬೇಕಾದ್ದನ್ನು ಮಾತ್ರ ಒಳ ಬಿಡುತ್ತದೆ. ಕಿವಿಗೆ ಆ options ಇಲ್ಲ. ಕೋಶ ಓದುವುದು ಅಂದರೆ ಏನನ್ನೋ ಓದಿ ಪಂಡಿತರಾಗಿ, ಕಾವಿ ಬಟ್ಟೆ, ಮರದ ಚಪ್ಪಲಿ ಹಾಕಿಕೊಂಡು ಊರು ಬಿಟ್ಟು ದೇಶಾಂತರ ಹೋಗಿ ಎಂಬುದಲ್ಲ. ನಾನು ಪ್ರಸ್ತಾಪಿಸುತ್ತಿರುವುದು ಓದುವ ಹವ್ಯಾಸದ ಬಗ್ಗೆ. 21 ನೇ ಶತಮಾನದ busy ಪೀಳಿಗೆಯಾದ ನಾವು ಯಾಕೆ 'e-ಲೋಕ' ದಿಂದ ಸ್ವಲ್ಪ ಹೊರಬಂದು ಆ-ಲೋಕ ಗಳಿಗೆ ಹೋಗಿ ಬರಬೇಕೆಂದು. 'ಆ ಲೋಕ' ಎಂದರೆ ಆಯಾ ಪುಸ್ತಕಗಳ ಆಯಾ ಕಥೆ-ಕಾದಂಬರಿಗಳ ಲೋಕಗಳು ಎಂದು ಭಾವಿಸಬಹುದು. ದಯವಿಟ್ಟು ಓದಿ ಎಂದು ಕೇಳಿಕೊಂಡೇ ಒಂದು ಓದನ್ನು ಬರೆಯುವುದು 'ಓದಿಗೆ' ವ್ಯಂಗ್ಯ ಮಾಡಿದಂತೆ.

ಮೊನ್ನೆ ನಮ್ಮ ಆಫೀಸ್ ನಲ್ಲಿ straight-hairs, ಕಡುಗೆಂಪು-lipstick ಹಾಗು ಮೈಗಂಟಿದ ಬಟ್ಟೆಯ (ಹೆಸರು ಹೇಳಬಾರದೆಂದು ಈ ವಿಶ್ಲೇಷಣೆ, ನಾನು ಸ್ತ್ರೀ-makeup ವಿರೋಧಿಯಲ್ಲ!) ಒಂದು ಹುಡುಗಿ ಹೇಳ್ತಾ ಇತ್ತು ... 'ನಂಗೆ ಬುಕ್ಸ್ ಅಂದ್ರೆ ಬಹಳ ಇಷ್ಟ ಕಣೇ , ಬುಕ್ಸ್ ಓದದೆ ಇದ್ರೆ ನಂಗೆ ನಿದ್ದೆ ನೇ ಬರಲ್ಲ ಗೊತ್ತಾ?'. ಮರುಭೂಮಿಯಲ್ಲಿ ನೀರು ಕಂಡಂತಾಗಿ ನಾನು ತಿರುಗಿ ನೋಡಿ ಕೇಳಿದೆ, ಸಧ್ಯಕ್ಕೆ ಯಾವ ಪುಸ್ತಕ  ಓದ್ತಾ ಇದ್ದೀರಾ ?? ಅವಳಿಂದ ಉತ್ತರ ಬಂತು 'ಹಾಫ್ ಗರ್ಲ್ಫ್ರೆಂಡ್ '. ಇದಕ್ಕೂ ಮುಂಚೆ ಅವಳು ಇಂಥದ್ದೇ ಎರಡನ್ನು ಓದಿದ್ದಾಳಂತೆ, ಮುಂದೆ ನಾನೇನೂ ಕೇಳಲಿಲ್ಲ. ಕುಡ್ದುಗಣ್ಣಲ್ಲಿ ಮೆಳ್ಳುಗಣ್ಣು ಲೇಸು ಎಂದು ಸುಮ್ಮನಾದೆ. ಕಾಲೇಜ್ ದಿನಗಳಲ್ಲಿ ಇಂಥ ಸಾವಿರ ಪುಸ್ತಕಗಳನ್ನ ನಾವೂ ಸಹ ಓದಿರುತ್ತೇವೆ ಆದರೆ ಅದೆಲ್ಲ ಮನರಂಜನೆಗಷ್ಟೆ ಸೀಮಿತವಾಗಿತ್ತು, ಯಾವುದೋ ಕಥೆಗೆಂದೋ, ಯಾರೋ ಹೇಳಿದರೆಂದೋ ಓದಿದ್ದು. ಸರಿ, ತಪ್ಪೇನಿಲ್ಲ... ಆದರೆ ಅದನ್ನೇ ಒಂದು ಹವ್ಯಾಸವನ್ನಾಗಿ ಏಕೆ ಮಾಡಬಾರದು. ಅಂತಹ tailor-made for entertainment ಪುಸ್ತಕವೇ ನಮ್ಮನ್ನು ಅಷ್ಟು ತನ್ನಲ್ಲಿ ಹಿಡಿದಿಟ್ಟಿತ್ತು ಎಂದಾದರೆ ಒಂದು ಒಳ್ಳೆಯ ಸದಭಿರುಚಿಯ, ರಚನಾತ್ಮಕ ಪುಸ್ತಕ ನಮ್ಮನ್ನು ಎಷ್ಟು ಕೂಡಿಟ್ಟುಕೊಳ್ಳಬಹುದು.  ಕೂಡಿಟ್ಟು ಕೊಳ್ಳುವುದರ ಬಗ್ಗೆ ಹೇಳುವುದು ಯಾಕೆ ಎಂದರೆ ನಮ್ಮ ಮನಸೂ ಸಹ ರುಪಾಯಿ ನೋಟಿನಂತೆ, ಎಷ್ಟು ಹೊರಗಡೆ ಓಡಾಡುವುದೋ ಅಷ್ಟು ಸವೆದು, ಹಳೆದಾಗಿ ಹರಿದು ಹೋಗುವುದು. ಅದನ್ನೇ ಯಾವುದೋ ಒಳ್ಳೆಯ ಪುಸ್ತಕವೆಂಬ ಬ್ಯಾಂಕ್ ನಲ್ಲಿ ಇನ್ವೆಸ್ಟ್ ಮಾಡಿದರೆ ಬಡ್ಡಿನೂ ಬಂದೀತು, ಬುದ್ಧಿನೂ ಬೆಳದೀತು. ಬಡ್ಡಿ ಎಂದರೆ ಮೈ ಕರಗಿಸದೇ ಬಂದು ಬೀಳುವ ದುಡ್ಡು, ಹಾಗೆಯೇ ಎಲ್ಲೂ ಅಡ್ದಾಡದೇ ನೋಡದೇ ನಮ್ಮೊಡನೆಯೇ ನಡೆದ ಅನುಭವದಂತೆ ಒಂದು ಪರಿಸ್ಥಿತಿ/ಕಥಾನಕವನ್ನು ಅನುಭವಿಸಿದಾಗ ಅಂಥವುಗಳಿಂದ ದೊರಕುವ ಪ್ರಬುದ್ಧತೆಯೂ ಸಿಗುತ್ತದೆ. ಆಯ್ತಲ್ಲವೆ ಬಿಟ್ಟಿ ಲಾಭ!

ಸಿನಿಮಾ ನೋಡಿಯೂ ಈ ಅನುಭವಗಳನ್ನು ಪಡೆಯಬಹುದಲ್ಲವೆ? ಅದಕ್ಕೆ ಪುಸ್ತಕವನ್ನು ಓದಿ ಬೋರ್ ಯಾಕೆ ಆಗಬೇಕು ಎಂದು ನನ್ನ ಮಿತ್ರ ಮಹಾಶಯನೊಬ್ಬ ಕೇಳಿದ. ನಿಜ, ಅದು ಒಂದು ರೀತಿಯ ಕನಸಿನ ಲೋಕವೇ, ಆದರೆ ಅದಕ್ಕೆ ಅದರದೇ ಆದ ಕೆಲ ಲಿಮಿಟ್ಸ್ ಗಳಿವೆ. ಅಲ್ಲಿ ನಿರ್ದೇಶಕ ತೋರಿಸಿದಂತೆಯೇ ನಾವು ನೋಡಬೇಕಾಗಬಹುದು. ಪುಸ್ತಕ ಓದುವುದರಲ್ಲಿ ಹಾಗಲ್ಲ, ಅಲ್ಲಿದ್ದ ಪ್ರತಿಯೊಂದು ಪುಟವನ್ನೂ ನಾವು ನಮ್ಮಲ್ಲೇ ಕಟ್ಟುತ್ತ ಹೋಗುತ್ತೇವೆ, ಮನಸಿನಲ್ಲೇ ಅದರ ಸೆಟ್ ಒಂದನ್ನು ಹಾಕಿ ಅಲ್ಲಿ ಪಾತ್ರಗಳನ್ನೂ ನೋಡುತ್ತೇವೆ. ಕಥೆಯ ವೇಗವೂ ನಮ್ಮ ಓದಿನ ಕಯ್ಯಲ್ಲಿ ಇರುವುದರಿಂದ ಪ್ರತಿ ಪಾತ್ರ-ಪ್ರಸಂಗ-ಪರಿಹಾರವನ್ನೂ ನಾವು analyse ಮಾಡಿಕೊಳ್ಳಬಹುದು. ಇದರಿಂದ ಮೆದುಳಿನ ಅದೆಷ್ಟೋ unused ಭಾಗಗಳನ್ನು ಮುಟ್ಟಿ ವ್ಯಾಯಾಮಿಸುತ್ತೇವೆ. ಇಲ್ಲವಾದರೆ ಆ ಆಯಾಮಗಳನ್ನು ನಮ್ಮ ಮನಸಿಗೆ ನಿಜ ಜೀವನದಲ್ಲಿ ಕಾಣಲು ಸಾಧ್ಯವೇ ಆಗಿರಲಿಕ್ಕಿಲ್ಲ. ಉದಾಹರಣೆಗೆ fiction, historic ಪುಸ್ತಕಗಳು ನಮ್ಮ ಕಲ್ಪನೆ, ಕ್ರಿಯಾಶೀಲತೆಯನ್ನು ಬಹಳಷ್ಟು ವೃದ್ಧಿಸುತ್ತದೆ.

ಮಾತನಾಡುವ ಹಾಗು ಅರ್ಥೈಸಿಕೊಳ್ಳುವ ಶಕ್ತಿಗಳಂತೆ ಓದುವ ಸಾಮರ್ಥ್ಯವು ಪ್ರತಿಯೊಬ್ಬರಿಗೆ ತಳೀಯವಾಗಿ ಬಂದಿರುವುದಿಲ್ಲ. ಅದು ಒಂದು ಅಬ್ಯಾಸ, ಅದನ್ನು ಮಾನವ ಮೆದುಳು ಅಭ್ಯಸಿಸಿರಬೇಕು. ಮನುಷ್ಯನ ಮೆದುಳು ಓದಿಗಾಗಿ ಮಾರ್ಪಟ್ಟೇ ಇಲ್ಲ, ಮನುಷ್ಯರು ಓದಿಗಾಗಿ ಹುಟ್ಟಿದವರೇ ಅಲ್ಲ ಎಂದು ಟಫ್ಟ್ಸ್ ಯೂನಿವರ್ಸಿಟಿ ಯ ಸೆಂಟರ್ ಫಾರ್ ರೀಡಿಂಗ್ ಅಂಡ್ ಲ್ಯಾಂಗ್ವೇಜ್ ರಿಸರ್ಚ್ ನಿರ್ದೇಶಕ ಮರ್ಯಾನ್ ವೂಲ್ಫ್ ಬರೆಯುತ್ತಾರೆ. ಬಹಳ ವೇದನೆಯಿಂದಲೇ ಓದುವ ಹವ್ಯಾಸವನ್ನು ಮಾನವ ಮೆದುಳು ರೂಢಿಸಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ. ಓದಲು ಮೆದುಳಿನಲ್ಲಿ ಉಪಯೋಗವಾಗುವ reading circuits ಗಳು ವಾಸ್ತವವಾಗಿ ಬೇರೆ ಕೆಲಸಗಳಿಗಾಗಿ ವಿಕಸನಗೊಂಡಿರುವಂಥವು, ಅವುಗಳನ್ನು ಪಳಗಿಸಿ ತನ್ನ ಓದಿನ ಹತೋಟಿಗೆ ಉಪಯೋಗಿಸಿಕೊಂಡವನು ಪ್ರೀತಿಯಲ್ಲಿ ಬಿದ್ದಂತ ಒಂದು ಸುಂದರ ಅನುಭವವನ್ನು ಪ್ರತಿ ಸಾಲಿನಲ್ಲೂ ಕಟ್ಟಿಕೊಳ್ಳುತ್ತಾನೆ. ಪ್ರೀತಿಯಲ್ಲಿ ಬೀಳುವ ಆ ಅನುಭವಕ್ಕಿಂತ ಮನುಷ್ಯನ ಮನಸಿಗೆ ಮುದ ನೀಡುವ ವಿಷಯ ಇನ್ನಾವುದು ಇರಲು ಸಾಧ್ಯ ಎಂದು ವೂಲ್ಫ್ ಹೇಳುತ್ತಾನೆ.         

ಕೆನೆಡಾ ದ ಯಾರ್ಕ್ ಯೂನಿವರ್ಸಿಟಿ ಯ ಮನಶ್ಯಾಸ್ತ್ರಜ್ಞ ರೇಮಂಡ್ ಮಾರ್ಸ್ ಪ್ರಕಾರ ಕಾದಂಬರಿ, ಕಥೆಗಳ  ಓದುಗರ ತಿಳುವಳಿಕೆ ಶಕ್ತಿಯು ಹಾಗೂ ಅನ್ಯರೊಡನೆ ಅವರ ಅನುಭೂತಿಯು ಬೇರೆ ಜನರಿಗಿಂತ ಒಂದು ಕೈ ಮೇಲೆಯೇ ಇರುತ್ತದಂತೆ. ಆಳವಾದ ಓದು (Deep-reading ) ಅಳಿವಿನಂಚಿನಲ್ಲಿರುವ ಹವ್ಯಾಸ ಆಗಿದ್ದರಿಂದ ನಮ್ಮ ಸಧ್ಯದ ಪೀಳಿಗೆಯ  ಬೌದ್ಧಿಕ ಹಾಗು ಭಾವನಾತ್ಮಕತೆಯ ಬೆಳವಣಿಗೆಯನ್ನುಕುಂಠಿತಗೊಳಿಸಿದೆ. ಯಾರ ಮನಸು ಆಳವಾದ ಓದಿಗೆ ತರಬೇತಿಗೊಳಿಸಲಾಗಿದೆಯೋ ಅವರಿಗೆ ಮಾತ್ರ ಕಾದಂಬರಿ, ಕಾವ್ಯಗಳನ್ನು ಮನಸಾರೆ ಸವಿಯಲಾದೀತು. ನಿಜ ಜೀವನದಲ್ಲಿ ಒಂದು ಘಟನೆ ನಡೆದರೆ ಮೆದುಳಿನ ಯಾವ ಭಾಗಗಳಿಗೆ ಸ್ಪಂದನೆ ಆಗುವುದೋ ಪುಸ್ತಕ-ಕಾದಂಬರಿಗಳನ್ನು ಓದುವಾಗ ಆಗುವ ನಮ್ಮ ಒಳಗೊಳ್ಳುವಿಕೆಯಿಂದ  ಅದೇ ಮೆದುಳಿನ ಭಾಗಗಳು ಚೈತನ್ಯವಾಗುತ್ತದಂತೆ. ಇದರಿಂದ ಮನಸಿನ ಗ್ರಹಿಕೆ ಶಕ್ತಿ ಹಾಗು ಒಂದು ಅಂಶವನ್ನು ಆನಂದಿಸುವ ಸಾಮರ್ಥ್ಯವು ಹೆಚ್ಚುಗೊಳ್ಳುತ್ತದೆ. ಮನುಷ್ಯನ ಜೀವನದ ಮುಖ್ಯ ಅಂಶವೇ ತನ್ನದಾದ ಪ್ರತಿ ಕ್ಷಣವನ್ನು ಆನಂದಿಸುವುದಲ್ಲವೇ?        

ಕುವೆಂಪು , ಬೇಂದ್ರೆ, ಕಾರಂತ, ಅಡಿಗ, ಶಿವರುದ್ರಪ್ಪ, ಭೈರಪ್ಪ ಇಂತಹ ಸಾವಿರಾರು ರಸ ಋಷಿಗಳು ನಮ್ಮಲ್ಲೇ ಇರುವಾಗ, ಎಂಟು ಜ್ಞಾನಪೀಠಗಳು ಕನ್ನಡದ ಸಾಹಿತ್ಯಿಕ ಚರಿತ್ರೆಯನ್ನು ಮೆರೆದಾಗ ನಮಗೆ ಅದರಲ್ಲೊಂದಿಷ್ಟನ್ನು ಓದಿ ಆನಂದಿಸಲು ಏನು ಅಡ್ಡಿ ಇದ್ದೀತು. ಸಿನಿಮಾ, ಕ್ರಿಕೆಟ್, ಮೊಬೈಲ್ ಗೇಮ್ಸ್, ಇಂಗ್ಲಿಷ್ ಸೀರಿಯಲ್ ಗಳು ಹೀಗೆ ಸಾವಿರ ಅಭ್ಯಾಸಗಳು ಇರಲಿ ಆದರೆ ಒಂದಷ್ಟನ್ನು ಓದಿ ನೋಡಿ, ಪುಸ್ತಕಗಳೇ ಆಗಲಿ, ಕವನ-ಕಥನಗಳೇ ಆಗಲಿ. ಮನಸಿನ ವಿಕಸನವನ್ನು ಒಂದು ಪುಸ್ತಕ ಮಾಡಿದಷ್ಟು ಯಾರೂ ಮಾಡಲಾರರು. ಬೇರೆ ಭಾಷೆಯಲ್ಲಿ ಓದುವ ಮುನ್ನ ಒಮ್ಮೆ ಮಾತೃಭಾಷೆಯಲ್ಲಿ ಓದುವುದು ಸೂಕ್ತ, ಓದಿದ್ದೆಲ್ಲ ಪೂರ್ತಿ ತಿಳಿದಾಗ ಆಗುವ ಆ ಸಂತೋಷವೇ ಬೇರೆ. ಒಂದು ಪುಸ್ತಕವನ್ನು ಪೂರ್ತಿ ಓದಿ ಮುಗಿಸಿದ ಮೇಲೆ ಆಗುವ ಖುಷಿಯನ್ನು, ಒಂದು ತೀರಾ ವಯಕ್ತಿಕ ಪ್ರಯಾಣವನ್ನು ಒಬ್ಬರೇ ಮಾಡಿ ಬಂದಾಗ ಆಗುವ ತನ್ಮಯತೆಗೆ ಹೋಲಿಸುತ್ತಾರೆ. ಸುಂದರ ಸೃಜನಶೀಲ ಬದುಕಿಗೆ ಓದು ತೀರಾ ಮುಖ್ಯ. ಮೂಕಜ್ಜಿಯೊಡನೆ ಒಮ್ಮೆ ಕನಸು ಕಂಡು ನೋಡಿ, ಮಲೆಗಳಲ್ಲಿ ಮಧುಮಗಳನ್ನೊಮ್ಮೆ ಹುಡುಕಿ ನೋಡಿ, ಬದುಕನ್ನು ಪ್ರೀತಿಸುವವರು ನೀವು, ಜೀವನವನ್ನು ಇನ್ನೂ ಹತ್ತಿರದಿಂದ ಸವೆದು ನೋಡಿ.

ಕಟ್ಟ ಕಡೆಯಲ್ಲಿ ನನ್ನದೊಂದು ವಯಕ್ತಿಕ ಸಲಹೆ, ಕನ್ನಡ ಸಾಹಿತ್ಯದ ಅರಿವಿಲ್ಲದೆ ಇಂಗ್ಲೀಷು, ಕಂಗ್ಲೀಷಿನ ಬೆನ್ನು ಚಪ್ಪರಿಸುವ ಇವತ್ತಿನ ನಮ್ಮ ಯುವಕ/ಯುವಕಿಯರಲ್ಲಿ ಒಂದು ವಿನಂತಿ, ದಯವಿಟ್ಟು ನಿಮ್ಮಮ್ಮನ ಮುಂದೆ ಪಕ್ಕದ್ಮನೆ ಆಂಟಿಯನ್ನು ಹೊಗಳಬೇಡಿ! ಅಮ್ಮ ಊಟದಲ್ಲಿ ವಿಷ ಹಾಕದೆ ಇರಬಹುದು ಆದರೆ ಲಟ್ಟಣಿಗೆಯಲ್ಲಿ ಪೆಟ್ಟು ಸರಿಯಾಗೇ ನೀಡಬಲ್ಲಳು ;).              


ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...

ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು,...