Thursday, September 11, 2014

ತೀರಾ bore ಆದಾಗ..


ಬರವಣಿಗೆ 

ಕಂಗಳೆಂಬ ಧಣಿಯ ಅರಸಿ 
ನೋಟವೆಂಬ ಕೂಲಿಯ ಪಡೆಯಲು 
ಹೊರಟು ನಿಂತಿರುವ ಪದಗಳೆಂಬ ಆಳಿನ ದಂಡು 


ಓದು 

ಕಣ್ಣಿನ ಭಿಕ್ಷೆ 


ಬರೆದವನು 

ಹೆದರಿ ಕೂತ ಕಳಕಳಿ


ಓದುವವನು 

ಪದಗಳಿಗೆ ಮುಕ್ತಿ ಕೊಡುವಾತ... ಯಮಧರ್ಮ.


ಕಾಗದ 

ಲೆಕ್ಕವಿರಿಸೋ ಚಿತ್ರಗುಪ್ತ 


ಲೇಖನಿ 

ಆಸೆ, ಕಾಮ, ಲೋಭ, ಕ್ರೋಧ, ಮಾತ್ಸರ್ಯ ಇತ್ತ್ಯಾದಿ. 


ನೆಮ್ಮದಿ 

ಬರೆಯಲಾಗದ ಕಥೆ. ಬರೆಯಬೇಕಿರುವ ಕಥೆ  


ನಾನು 

ಕಾಶ್ಮೀರಕ್ಕೆ ಗಾಳ ಹಾಕಿ ಕಪ್ಪೆ ಹಿಡಿದ ಬೆಸ್ತ 


ನೀವು 

ಇದೆಲ್ಲಕಿಂತ ಬೇರೆ ಏನೋ ಇದೆ... ಇವನಿಗದು ಗೊತ್ತಿಲ್ಲ. ಇನ್ನೂ ಪಳಗಬೇಕು, ಎಂದು ಲೆಕ್ಕ ಹಾಕುತ್ತಿರುವ ಸಿದ್ಧಾಂತಿ; ಇರಬಹುದು.  




Wednesday, September 10, 2014

ಉಳಿದವುಗಳು


ಸೂಕ್ಷ್ಮ 


ತನ್ನ ಹೊಟ್ಟೆಯನ್ನೇ ಗಾದೆಯಾಗಿಸಿದ್ದ ಮಗಳಿಗೆ
ಇಂದು ಹದಿನಾರು. ಅದ್ಹೇಗೆ ಹೇಳಿಯಾನು ಬಿಡಲು ಆ ಸಲಿಗೆ
ಅಮ್ಮನ ಮಾತೊಂಚೂರು, ಅಪ್ಪನ ಮಾತೊಂಚೂರು
ಹತ್ತಿರವ ದೂರವಾಗಿಸಲು ಅದೇನು ಹೇಳಿದರೋ ಸೂಕ್ಷ್ಮಕೆ.

ಬಿಡೆ


ಸಿಟ್ಟಾದನೇ, ಮಗ
ತಪ್ಪಾಗಿ ತಿಳಿದನೇ ತನ್ನ...
ಕಟ್ಟಾದ ಫೋನಿನಲ್ಲಿ  ಅದೇನೋ ಹೇಳಲು ತಡವರಿಸಿ
ಅವನ ಸಮಯಕ್ಕೆ ಭಾರವಾದಂತೆ ಮನದಲ್ಲಿ ತಳಮಳಿಸಿ

ವೀರು...
ಹಾಂ ಹೇಳು..
ಈ ವಾರ ನಿನ್ನಲ್ಲಿ ಇದ್ದರೆ ಸ್ವಲ್ಪ ಹಣ...

ನಾಳೆ ಅವನು ಮರಳಿ ಫೋನಿಸದಿದ್ದರೆ ?
ತಿಂಗಳ ಕೊನೆಗೆ ತನ್ನ ಮರೆತರೆ ?
ಬರಲಿರುವ ಜಾತ್ರೆಗೆ ಬರದೆ ಹೋದರೆ?

ಅತ್ತು ನೀರಾಗಿ ಹರಿಯುವ ಮುನ್ನ ಮತ್ತೆ ರಿಂಗಣಿಸಿತಾ ಫೋನು...
ಅಮ್ಮ ??
ಹೇಳು ವೀರು !
ಅಳ್ತಾ ಇದ್ದೀಯ?
ಇಲ್ಲಪ್ಪ... ಸುಮ್ನೆ ಕಣ್ಣಲ್ಲಿ ನೀರು...  


ಹೊಟ್ಟೆ- ಹೃದಯ 


ಯಾರೋ ಹೇಳಿದರು ಕೆಲಸದಲ್ಲಿ ಪ್ರೇಮವ ಹುಡುಕು
ಸ್ವಾಮೀ... ಹೃದಯಕೂ ಹೊಟ್ಟೆಗೂ ಎತ್ತಣ ಸಂಬಂಧ
ಬರೀ ಎರಡು ಅಂಗಾಂಗಗಳ್ಳಲದೆ
ಸರೀ ಎರಡು ಫಿಲಾಸಫಿಗಳವು


Wednesday, September 3, 2014

ಸ್ವರ- ವ್ಯಂಜನಾಭರಣೆಗೆ...



ಹೀಗೇನಾದರೂ ಅಪ್ಪ ಅಮ್ಮನಿಗೆ ಒಂದು ಕಾಗದ ಬರೆದಿರಬಹುದಾ? ಇಪ್ಪತ್ತೇಳು ವರ್ಷಗಳ ಹಿಂದೆ, ಮದುವೆಯಾದ ಹೊಸತರಲ್ಲಿ.

ನಿನ್ನ ಮೇಲೊಂದು ಕವಿತೆಯ ಕೇಳಿದ್ದೆ ನೀನು
ಮೇಲಾಗಲಿಲ್ಲ,  ಸುತ್ತಲು ಬಿಡಿಸಿರುವೆ ನೋಡು

ನಿನ್ನ ಮೂಗಿನ ನೇರಕ್ಕೆ ಓದದೆ
ನನ್ನ ಮೂಗಿನ ಸೊಟ್ಟತನಕ್ಕೆ ಓದು, ತಿಳಿದೀತು

ಕಾಗದದ ಅರಿವಿರದೆ ಭಾವನೆಯು ಹರಿದಿತ್ತು
ಡೊಂಕಾಗಿ ಕಂಡ ಸಾಲಿನಲ್ಲಿ ಬಯ್ಯದೆಲೆ ಓದು

ಮಗುವಿನಂತೆ ಪದಗಳ ಜೋಡಿಸಿ ಒದದಿರು,
ಅರ್ಥವಾಗುವುದಿಲ್ಲ ಎಂದಲ್ಲ, ಯಾರಿಗೋ ಕೇಳಿಸಿ ನಿನಗೆ ದೃಷ್ಟಿಯಾದೀತು

ಅಂದಾದ ಭೇಟಿಯ ಸೆರೆ ಹಿಡಿಯಲಾಗಲಿಲ್ಲ
ಮನಸಿಗೂ ಹೃದಯಕೂ ಇಂದು ಭಾರಿ ಜಗಳ, ಸ್ವರ-ವ್ಯಂಜನಾದಿಯಾಗಿ.

ಅಂದಹಾಗೆ ಅಂದು ಅದೇಕೆ ನಿನ್ನ ಕೊಡವಿದೇನೋ
ಇಂದಿಗೂ ತಿಳಿಯಲಿಲ್ಲ... ಸುಮ್ಮನಿರಬಹುದಿತ್ತು, ಬದಲಿಗೆ ಮರುಳಾದೆ. ಇನ್ನೂ ಹಾಗೆ.

ಅವಳನ್ನು ಎಲ್ಲೆಡೆ ಕೂಡಿ ತಿರುಗಬೇಡ, ಸ್ನೇಹಿತೆಯಾದರೇನು
ನಿನ್ನ ಕಿವಿಗಷ್ಟೇ ಕೆಲವನ್ನು ತೆಗೆದಿರಿಸಿದ್ದೇನೆ ಖಾಸಗಿ ಪದಗಳ... ಕಟ್ಟಲಾಗದೆ ಇಲ್ಲಿ ಸಾಲನು

ಕವಿತೆಯ ಸೇವೆಗೆ ಸಂಬಳವಾಗಿ
ಗುಟ್ಟಿನಲ್ಲಿ ನನಗಾಗಿ ನಕ್ಕುಬಿಡು ಓದಿ

ಈ ಸಾರಿ ಊರಿಗೆ ಬಂದಾಗ ಅವಳಿರಕೂಡದು ನಿನ್ನೊಡೆ
ಅವರಿವರೆಲ್ಲರ ಸಂಭಾಳಿಸಿಡು. ಬರೀ ನಾನು ನೀನಷ್ಟೇ, ಮತ್ತೆ ಮಧುಕೆರೆಯ ದಂಡೆ.

ಕಡಿಮೆ ಬರೆದಿರುವೆ ಜಾಸ್ತಿ ಕಾಣು
ಹೇಗೆ ಕಂಡರೂ ಒಪ್ಪಿಕೋ. ಬಡಪಾಯಿಯ ಹಾಡು


ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...

ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು,...