Wednesday, September 3, 2014

ಸ್ವರ- ವ್ಯಂಜನಾಭರಣೆಗೆ...



ಹೀಗೇನಾದರೂ ಅಪ್ಪ ಅಮ್ಮನಿಗೆ ಒಂದು ಕಾಗದ ಬರೆದಿರಬಹುದಾ? ಇಪ್ಪತ್ತೇಳು ವರ್ಷಗಳ ಹಿಂದೆ, ಮದುವೆಯಾದ ಹೊಸತರಲ್ಲಿ.

ನಿನ್ನ ಮೇಲೊಂದು ಕವಿತೆಯ ಕೇಳಿದ್ದೆ ನೀನು
ಮೇಲಾಗಲಿಲ್ಲ,  ಸುತ್ತಲು ಬಿಡಿಸಿರುವೆ ನೋಡು

ನಿನ್ನ ಮೂಗಿನ ನೇರಕ್ಕೆ ಓದದೆ
ನನ್ನ ಮೂಗಿನ ಸೊಟ್ಟತನಕ್ಕೆ ಓದು, ತಿಳಿದೀತು

ಕಾಗದದ ಅರಿವಿರದೆ ಭಾವನೆಯು ಹರಿದಿತ್ತು
ಡೊಂಕಾಗಿ ಕಂಡ ಸಾಲಿನಲ್ಲಿ ಬಯ್ಯದೆಲೆ ಓದು

ಮಗುವಿನಂತೆ ಪದಗಳ ಜೋಡಿಸಿ ಒದದಿರು,
ಅರ್ಥವಾಗುವುದಿಲ್ಲ ಎಂದಲ್ಲ, ಯಾರಿಗೋ ಕೇಳಿಸಿ ನಿನಗೆ ದೃಷ್ಟಿಯಾದೀತು

ಅಂದಾದ ಭೇಟಿಯ ಸೆರೆ ಹಿಡಿಯಲಾಗಲಿಲ್ಲ
ಮನಸಿಗೂ ಹೃದಯಕೂ ಇಂದು ಭಾರಿ ಜಗಳ, ಸ್ವರ-ವ್ಯಂಜನಾದಿಯಾಗಿ.

ಅಂದಹಾಗೆ ಅಂದು ಅದೇಕೆ ನಿನ್ನ ಕೊಡವಿದೇನೋ
ಇಂದಿಗೂ ತಿಳಿಯಲಿಲ್ಲ... ಸುಮ್ಮನಿರಬಹುದಿತ್ತು, ಬದಲಿಗೆ ಮರುಳಾದೆ. ಇನ್ನೂ ಹಾಗೆ.

ಅವಳನ್ನು ಎಲ್ಲೆಡೆ ಕೂಡಿ ತಿರುಗಬೇಡ, ಸ್ನೇಹಿತೆಯಾದರೇನು
ನಿನ್ನ ಕಿವಿಗಷ್ಟೇ ಕೆಲವನ್ನು ತೆಗೆದಿರಿಸಿದ್ದೇನೆ ಖಾಸಗಿ ಪದಗಳ... ಕಟ್ಟಲಾಗದೆ ಇಲ್ಲಿ ಸಾಲನು

ಕವಿತೆಯ ಸೇವೆಗೆ ಸಂಬಳವಾಗಿ
ಗುಟ್ಟಿನಲ್ಲಿ ನನಗಾಗಿ ನಕ್ಕುಬಿಡು ಓದಿ

ಈ ಸಾರಿ ಊರಿಗೆ ಬಂದಾಗ ಅವಳಿರಕೂಡದು ನಿನ್ನೊಡೆ
ಅವರಿವರೆಲ್ಲರ ಸಂಭಾಳಿಸಿಡು. ಬರೀ ನಾನು ನೀನಷ್ಟೇ, ಮತ್ತೆ ಮಧುಕೆರೆಯ ದಂಡೆ.

ಕಡಿಮೆ ಬರೆದಿರುವೆ ಜಾಸ್ತಿ ಕಾಣು
ಹೇಗೆ ಕಂಡರೂ ಒಪ್ಪಿಕೋ. ಬಡಪಾಯಿಯ ಹಾಡು


1 comment:

ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...

ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು,...