Saturday, April 1, 2023

ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...




ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು, 'ನೀವು ಏನು ತೋರಿಸ್ತೀರೋ ತೋರಿಸಿ, ನಾನು ಮರುಳನಂತೆ ಕಾಯ್ದು ನೋಡ್ತೇನೆ' ಅನ್ನುವ ಭಾವನೆಯೊಂದಿಗೆ ಕುಳಿತಿರುತ್ತೇವೆ. ಮಾಸು, ಕ್ಲಾಸು, ಪಾನ್ ಇಂಡಿಯಾ, ಕಮರ್ಷಿಯಲ್, ಈ ಥರದ ಶಬ್ದಗಳಿಗೆ ಅಲ್ಲಿ ಜಾಗ ಇಲ್ಲ. ಆಗಿನ ನಮ್ಮ ಮನಸ್ಥಿತಿಗೆ/ಪರಿಸ್ಥಿತಿಗೆ ಆ ಸೀನ್ ಗಳು, ಆ ಭಾವನೆಗಳು, ಆ ಡ್ರಾಮಾ  ಪ್ರಸ್ತುತವಾದರೆ, ಆ ಎರಡೂವರೆ ಘಂಟೆ ನಮ್ಮನ್ನ ತೊಡಗಿಸಿಕೊಂಡರೆ ಹಿತ. ಸಿನೆಮಾ ಹಾಲಿನಲ್ಲಿ ಚಿತ್ರ ನೋಡುವುದು ಸಾಮೂಹಿಕ ಕ್ರಿಯೆಯಾದರೂ, ಚಿತ್ರವನ್ನು ಗ್ರಹಿಸುವುದಂತೂ ವಯಕ್ತಿಕ ಕ್ರಿಯೆಯೇ ಅಂತ ನನಗನಿಸುತ್ತದೆ.  


'ಗುರುದೇವ್ ಹೊಯ್ಸಳ' ಚಿತ್ರ ಟೈಲರ್ ಮೇಡ್ ಕಮರ್ಷಿಯಲ್ ಅಂತೆ, ಧನಂಜಯರದ್ದು ಟಫ್ ಕಾಪ್ ಪ್ರೊಜೆಕ್ಷನ್ ಅಂತೆ,  ನವೀನ ಶಂಕರ ಫುಲ್ ರಾ ಅಂತೇ.. ಇವೆಲ್ಲ ಅಷ್ಟಿಷ್ಟು ಕಿವಿಗೆ ಬಿದ್ದಿದ್ದರೂ ಒಳಗೆ ಇಳಿಯುವಷ್ಟು ಸಮಯ ನಮ್ಮಲ್ಲಿ ಬಹುತೇಕರಿಗೆ ಇರುವುದಿಲ್ಲ. ನನಗೆ ಶುಕ್ರವಾರ ಸಂಜೆವರೆಗೂ ಆಫೀಸಿನಲ್ಲಿ ಬರೋಬರಿ ಕೆಲಸ, ಶನಿವಾರ ಅರ್ಧ ದಿನ ಮನೆಗೆಲಸ, ಆಮೇಲೆ ಇನ್ನೆಲ್ಲೋ ಹೋಗುವುದು, ಸಂಜೆಗೆ ಚೂರು ಪುರುಸೊತ್ತು ಒದಗಿದರಿಂದ ಈ ಸಿನಿಮಾ ನೋಡಲೇಬೇಕೆಂದು ಬ್ರೂಕ್ ಫೀಲ್ಡ್ ಮಾಲ್ ಹೊಕ್ಕೆ. ಇದೆಲ್ಲ ಯಾಕೆ ಹೇಳಿದ್ದು ಅಂತಂದರೆ, ಇದೇ ಆರೇಳು ವರ್ಷಗಳ ಹಿಂದ ಪ್ರತೀ ವೀಕೆಂಡ್ ತಪ್ಪದೇ ಕನ್ನಡ ಸಿನಿಮಾಗಳನ್ನು ನೋಡಿ, ಕ್ಯಾಸ್ಟ್ ಮತ್ತು ಕ್ರೂ ಗಳಿಗೆ ಸೋಶಿಯಲ್ ಚಾನೆಲ್ ಗಳಲ್ಲಿ ದುಂಬಾಲು ಬಿದ್ದು ಹಿಂಗಿಂಗೆ-ಚೆನ್ನಾಗಿತ್ತು ಅಂತೆಲ್ಲ ಮೆಸೇಜ್ ಮಾಡಿಕೊಂಡು, ಕನ್ನಡ ಸಿನಿಮಾಗಳನ್ನ ನಾವಲ್ಲದೇ ಯಾರು ನೋಡಬೇಕು ಎಂದು ಜಗಳಾಡುತ್ತಿದ್ದ ನನಗೇ ಈಗ ಈ  ಪರಿಸ್ಥಿತಿಯಾದರೆ ಇನ್ನ ಕ್ಯಾಶುಯಲ್ ಮೂವಿ ವೀವರ್ಸ್ ಗಳ ಕಥೆ ಹೇಗೋ. ನನಗೀಗ ವಯ್ಯಸ್ಸು ಮೂವತ್ತನಾಲ್ಕು. 'ಹಂಡ್ರೆಡ್ ಡೇಸ್!', 'ಪಕ್ಕಾ ಹಿಟ್ಟು'... ಎಂದು ಚೀರಾಡಿಕೊಂಡು ಥೇಟರಿನಿಂದ ಹೊರಬರುವಷ್ಟು ಈಗ ಎನರ್ಜಿನೂ ಇಲ್ಲ, ಆಸಕ್ತಿ ನೂ ಇಲ್ಲ. ನಾನು ಚೀರಿಕೊಳ್ಳುವುದರಿಂದ ಏನೂ ಆಗಲ್ಲ, ನನಗೆ ಇಷ್ಟ ಆದ್ರೆ ಗುಡ್, ಆಗಿಲ್ಲ ಅಂದ್ರೆ ಹೋಯ್ತು. ಯಾವುದೋ ಒಂದು ಬ್ಯಾಕ್-ಥಾಟ್ (expectation) ಇಟ್ಟುಕೊಂಡುಒಳ ಹೋಗಿ, ಥೇಟರಿನಿಂದ ಹೊರ ಬಂದಾಗ ಮನಸಿನಲ್ಲಿ ಆ ಥಾಟ್ ನ against ಆಗಿ ಆ watching experience ಕೂರುತ್ತದೆ ಅಷ್ಟೇ. ಇನ್ನೊಬ್ಬರು ಏನು ಹೇಳಿದರು, ಮಾಸ್ ಏನು ಹೇಳುತ್ತೆ, ಬಾಕ್ಸ್  ಆಫೀಸು ಹೇಗೆ ಅಂತೆಲ್ಲ ಯೋಚಿಸುವುದು ಅಸಂಬದ್ಧ. ನಾ ನೋಡಿದ 'ಗುರುದೇವ್ ಹೊಯ್ಸಳ' ಚಿತ್ರ ನನ್ನ ಅನುಭವವಷ್ಟೇ. ಹೇಳುವುದಾದರೆ, ನನಗೆ ಈವತ್ತು ಸಂಜೆ ಈ ಸಿನಿಮಾ ತುಂಬಾನೇ ಹಿಡಿಸಿತು. 


 'ದಯವಿಟ್ಟು ಅಂಗಡಿಗಳನ್ನ ಕ್ಲೋಸ್ ಮಾಡಬೇಡಿ, ಸತ್ತವನು ಯಾವುದೋ ಕಲಾವಿದನೋ, ಬಾಳೆವಂತನೋ, ಹುತಾತ್ಮಾನೋ ಅಲ್ಲ, ಅವನೊಬ್ಬ ಬೇವರ್ಸಿಯಷ್ಟೇ!' ಎನ್ನುವ ನಾಯಕನ ಪ್ರಕಟಣೆ ಈ ಸಿನಿಮಾದ ಪ್ರಬುದ್ಧತೆಯನ್ನು ತೋರಿಸುತ್ತದೆ ಎನಿಸಿತು. ಸಮಾಜದ ಸ್ವಯಂಘೋಷಿತ/ಕಲ್ಪಿತ 'ಗಣ್ಯ ವ್ಯಕ್ತಿ'ಗಳಿಗೆ ಜೈಲಾದಾಗ, ಅವರು ಸತ್ತಾಗ, ಗೆದ್ದಾಗ, ಆಗುವ ಮೆರವಣಿಗೆಗಳಲ್ಲಿ ಹೀಗೊಬ್ಬರು ಹೇಳಿದ್ರೆ ಚಂದ ಇರ್ತಿತ್ತು ಅನಿಸಿತು, ಅಂದರೆ - 'ಲೇ ಹುಚ್ಚಪ್ಪಗಳಿರಾ, ನಿಮ್ದೂ ಒಂದು ಬದುಕಿದೆ, ನಿಮ್ಮ ಹೆಂಡ್ತಿ ಮಕ್ಳನ್ನ ನೋಡ್ರಿ, ಟ್ಯಾಕ್ಸ್ ಕಟ್ರಿ, ಕಟ್ಟಿದ ಟ್ಯಾಕ್ಸಿಗೆ- ಆದ ಕೆಲಸಗಳಿಗೆ ಹೋಲಿಕೆ ಮಾಡಿ ವೋಟ್ ಹಾಕ್ರಿ, ಇದೇ ಈಗಿನ ಕಾಲದ ದೇಶ ಭಕ್ತಿ. ಅದೆಲ್ಲಾ ಬಿಟ್ಟು ಇಂಥ ಹುಚ್ಚು ನಾಯಿಗಳ ಪ್ರಚೋದನೆಗೆ ಬಿದ್ದು ಜಾತಿ, ಧರ್ಮ, ಸ್ವಾಮೀ ಭಕ್ತಿಗಳನ್ನ ಸಾಕಿಕೊಂಡು ಕಳೆದು ಹೋಗಬೇಡಿ' ಎಂದು.  cinema reflects society, society reflects cinema ಅಂತೇನೋ ಹೇಳ್ತಾರಲ್ಲ ಹಾಗೆ, ಇದು ಸಮಾಜದಿಂದ ಬಂದ ಸಮಾಜಕ್ಕೆ ತಿರುಗಿ ಹೋಗಬೇಕಾದಂಥ ಮಾತೂ ಸರಿಯೇ.


ಸಮಯ ಪೋಲು ಮಾಡದೇ, ಸಿನಿಮಾ ಶುರುವಾದ ಘಳಿಗೆಯಲ್ಲೇ ಕಥೆ ಅನಾವರಣ ಮಾಡಿದ್ದು ಹಿಡಿಸಿತು. ಅದೊಂದೇ ಕಥೆಯ ಎಳೆಯನ್ನು ಸಿನಿಮಾದ ಕೊನೆಯವರೆಗೂ ಅಚ್ಚುಕಟ್ಟಾಗಿ ಸಾಕಿಕೊಂಡು ಬೆಳೆಸಿದ ರೀತಿಯೂ ಹಿಡಿಸಿತು. ದೂರದಿಂದ ನೋಡಿದರೆ 'ಇಷ್ಟೇ ನಡೆದಿದ್ದು' ಎನ್ನುತ್ತ ಶುರುವಾಗುವ ಸಿನಿಮಾ ಅಷ್ಟಕ್ಕೇ ಇನ್ನಷ್ಟಷ್ಟನ್ನು ಬೆರೆಸುತ್ತ ಹೋಗುವ ಆಟದಲ್ಲಿ ಪ್ರೇಕ್ಷಕರಾದ ನಾವೂ ಮನಸಾ ಭಾಗಿ. ಕ್ವೆಂಟಿನ್ ಟರಾಂಟಿನೋ ನ 'Inglorious Basterds', 'Once upon a time in hollywood', ಅಷ್ಟು ದೂರ ಯಾಕೆ ಇಲ್ಲೇ ರಾಜಮೌಳಿಯ 'RRR' ಸಿನಿಮಾಗಳಲ್ಲಿಯೂ ನೋಡಿದರೆ ಒಂದು ಪುಟ್ಟ ಕಥೆಯನ್ನು ಇಟ್ಟುಕೊಂಡು ಅದರ ಸುತ್ತ ಕೆಲ ಪಾತ್ರಗಳನ್ನು, ಸಿನಿಮೀಯ ಅಂಶಗಳನ್ನ ಹೆಣೆದಿದ್ದೇ ಕಾಣಿಸುತ್ತದೆ.  ಈ ಕ್ಷಣಕ್ಕೆ ನೆನಪಾಗಿದ್ದನ್ನು ಹೇಳಿದೆ. ಅಂತಂದರೆ - ಗುರುದೇವ ಯಾರು, ಅವನು ಎಷ್ಟು ಭಾರಿ ಎಂದು ಹೇಳಿಕೊಂಡು ಕೂರದೇ ಕಥೆಯಲ್ಲೇ ಅದನ್ನು ಪೋಣಿಸಿದ ರೀತಿ.


'ಭೂಮಿ'ಯ ಅಪ್ಪನಿಗೆ ವಿಲ್ಲನ್ ನಂತೆ ಕಾಣಿಸಿಕೊಳ್ಳಲು ಇದ್ದ ಕಾರಣಗಳು ಸಮಂಜಸವೆನಿಸಿದವು (relatable ಅಥವಾ acceptable ಅಲ್ಲ, ಆ ಪಾತ್ರಕ್ಕೆ ಸಮಂಜಸವೆನೋ ಅಂತ).  ನಾನಾ ಮತ್ತು ಬಲಿಯ 'ದುರ್ಯೋಧನ - ಕರ್ಣನ' ಪಾತ್ರ ಹೊಂದಾಣಿಕೆಯ ಘಳಿಗೆಯನ್ನು opportunistic ಆಗಿ ಉಪಯೋಗಿಸಿಕೊಂಡಿದ್ದಾರೆ ಎನಿಸಿತು. ಅದೊಂದರಲ್ಲಿ ಅವರಿಬ್ಬರೂ ಚೂರು ನಮಗೆ ಹತ್ತಿರವಾಗಿ ಮತ್ತೆ ದೂರ ಸರಿದರು. ಇನ್ನೊಂಚೂರು ಅವರಿಬ್ಬರನ್ನು ಮಾನವೀಯವಾಗಿ ತೋರಿಸಿದ್ದರೆ... ಎಂದೆನಿಸದೇ ಇರಲಿಲ್ಲ. ಬಲಿಯ ಕಣ್ಣಲ್ಲಿ ಭೂಮಿಗಾಗಿ ಇರುವ ಪ್ರೀತಿಗಿಂತ 'ನಾನಾ' ನಿಗಾಗಿ ಇರುವ ಸ್ನೇಹವೇ ಜಾಸ್ತಿ ಕಂಡಿತು, ಬಹುಷಃ ಅದೇ ಪ್ಲಾನ್ ಇದ್ದಿರಬಹುದು. ಕೊನೆಯಲ್ಲಿ ನಾನಾ ನ ದುಃಖದಲ್ಲಿ ಆದ ಬಲಿಯ ಸರಣಿ ಬಲಿಗಳಿಗೆ ಇದು ಹೊಂದಿಕೊಂಡೂ ಹೋಗುತ್ತದೆ. ಭೂಮಿಯ ಬಗ್ಗೆ ಬಲಿಗೆ ಯಾವ ಭಾವನೆಗಳು ಇರಲಿಲ್ಲವಾಗಿದ್ದರೂ ಚೆನ್ನಾಗಿರ್ತಿತ್ತೇನೋ ಎಂದೆನಿಸಿತು. ಚಿಕ್ಕವನಿದ್ದಾಗ ತನಗೆ ನಾನಾ ಕೊಟ್ಟ  ಶರ್ಟನ್ನು (ಹಾಗೇ ಕಾಣುವ) ಬಿಟ್ಟು ಬಲಿ ಆಗಾಗ ಬೇರೆ ಬಟ್ಟೆಯನ್ನೂ ತೊಡಬಹುದಿತ್ತೇನೋ ಅಂತಲೂ ಅನಿಸಿತು. ನನಗೆ ಅನಿಸವುದರಲ್ಲೇನಿದೆ. ಬಲಿಯನ್ನು ನಾನು ಮೂರು ತಾಸುಗಳಿಂದ ಬಲ್ಲೆ, ಕಥೆಗಾರರಿಗೆ/ನಿರ್ದೇಶಕರಿಗೆ ಬಲಿ ಎಷ್ಟು ವರ್ಷಗಳಿಂದ ಪರಿಚಯವೋ. ನಾವು ಹಂಗೆಲ್ಲಾ ಪಾತ್ರಗಳ ಇಂಟೆಂಷನ್, ಬಿಹೇವಿಯರ್ ನ  judge ಮಾಡಂಗಿಲ್ಲ. ಅದು ಕ್ರಿಯೇಟಿವ್ ಅಭಿವ್ಯಕ್ತಿ.    


ಭೂಮಿಯ ಹುಡುಗ ರವಿಯ ಪಾತ್ರ relate ಆಯಿತು. ಸರಿ ತಪ್ಪುಗಳ ದಾಟಿ, ಒಂದು ಶೇಡಿನಲ್ಲೇ ಆ ಪಾತ್ರವನ್ನು ಹೆಣೆದಿರುವುದು ಅನೂಹ್ಯ.ರವಿಯ ದೇಹದ ಮುಂದೆ ಅವರ ಕುಟುಂಬದವರಾಡುವ ಮಾತುಗಳು, ಅದಕ್ಕೆ ಗುರುದೇವನ ಪ್ರತಿಕ್ರಿಯೆ (ಏನೇನೋ ಹೇಳಿ ಹೀರೋ ಆಗದೇ ಸುಮ್ಮನಿದ್ದಿದ್ದು) ಈ ಚಿತ್ರದ ಮುಖ್ಯ ಅಂಶಗಳಲ್ಲೊಂದು ಅನಿಸುತ್ತದೆ. ರವಿಯ ಅಮ್ಮ ಅಷ್ಟು ಸಿನಿಮೀಯವಾಗದೆ ಚೂರು ಸಹಜವಾಗಿ ಅದನ್ನ ಹೇಳಿದ್ದರೆ ಚಂದವಿತ್ತೇನೋ ಅಂತಲೂ ಅನಿಸುತ್ತದೆ. 


ಹೀರೋಯಿಸಂ ಫ್ಲೋ ನಲ್ಲಿ ತಾನು ಮಾಡಿದ ಒಂದು ಕೆಲಸದಿಂದ ಆದ ಬೆಳವಣಿಗೆಗಳಿಗೆ ಆಯಾ ಸ್ಟೇಜು ಗಳಲ್ಲಿ ತಾನೂ ಬದಲಾಗುತ್ತ ಹೊಂದಿಕೊಳ್ಳುವ ನಾಯಕನ ಸಹಜತೆ ಶ್ಲಾಘನೀಯ. ಅಂತಂದರೆ - ಮೊದಲು 'ಪ್ರೀತಿಸೋರನ್ನ ಒಂದು ಮಾಡಿದ್ದೇ ತಪ್ಪಾ?' ಎಂದು ಹಾರಾಡುವವನು, ವಿಲನ್ ಮನೆಗೆ ಹೋದಾಗ 'ನನ್ನಿಂದ ತಪ್ಪಾಗಿದೆ' ಎಂದು ಹೇಳಿಕೊಳ್ಳುತ್ತಾನೆ (ನಡುವೆ ಇಪ್ಪತ್ತೆರಡು ಜನಕ್ಕೆ ಹೊಡಿದುಕೊಂಡು ಹೋದರೂ ಅದು ಸಿನಿಮೀಯ ಕಾರಣಗಳಿಗೆ ಎಂದು ನಾನು ಹೂಂಗುಡುತ್ತೇನೆ). ನಂತರ ತನ್ನ ಆ ಕೆಲಸದಿಂದ ಅನ್ಯರಿಗೆ (ವಿಲ್ಲನ್ ಗಳನ್ನೂ ಒಳಗೊಂಡು) ಆಗಬಹುದಾದ ಪರಿಣಾಮಗಳನ್ನು ತಡೆಯಲು ಊರೂರುಗಳಿಗೆ ಗುಳೇ ಹೋಗುವ ನಾಯಕನ ಪಾಡು ಮತ್ತು ಪಟ್ಟು ಹೌದೆನಿಸುತ್ತದೆ. ದನದ ಜಾತ್ರೆಯ ದೃಶ್ಯಗಳ್ಳನ್ನು ಇನ್ನಷ್ಟು ವಿಜೃಂಭಣೆಯಿಂದ ನನ್ನ ತಲೆಯಲ್ಲೇ ನಾನು ಕೊರಿಯೋಗ್ರಾಫ್ ಮಾಡಿಕೊಂಡದ್ದು, expect ಮಾಡಿದ್ದು ನನ್ನ ತಪ್ಪೇ ಇರಬಹುದು.  ಆದರೆ ಅದೇ ದೃಶ್ಯದಲ್ಲಿ ಆಗುವ ಗುರುದೇವ-ಬಲಿಯ ಮುಖಾಮುಖಿ ಚಂದ. ಅಚ್ಯುತ್ ರಾವ್ ಪಾತ್ರ sketchy ಅನಿಸುತ್ತದೆ, ಅವರ ತಪ್ಪೊಪ್ಪಿಗೆಯು ಸ್ವಲ್ಪ ವಾಚ್ಯವೆನಿಸಿತೇನೋ. ಕಡೆಯ ಕ್ಲೈಮಾಕ್ಸ್ ನಲ್ಲಿ ನಾಯಕ ಎಲ್ಲರಿಗೂ ಗುಮ್ಮುವಾಗ ಗುಮುಗುಡುವ 'ಸಳ ಸಳ ಸಳ!' background ಸ್ಕೋರ್, ಬಲಿ ಎಂಟರ್ ಆದಕೂಡಲೇ ಪರತ್ ನಿಲ್ಲುತ್ತದೆ. ಅದು ಜಾಸ್ತಿನೇ ಹಿಡಿಸಿತು. ಅಂತಂದರೆ - ಬಲಿಯ ಮುಂದೆ ಗುರುದೇವನನ್ನು ಹೊಗಳಲುಮ್ಯೂಸಿಕ್ ಡೈರೆಕ್ಟರ್ ಗಳೂ ಹೆದರಿ ಸುಮ್ಮನಾದರೇನೋ. 


ಆರಂಭದಲ್ಲಿ ತಾನು ಬೇಟೆಯಾಡಿದ ಹಂದಿಯಂತಲೇ ಇಡೀ ಚಿತ್ರದಲ್ಲಿ ನುಗ್ಗುತ್ತ ಕಾಣಸಿಗುವ ಬಲಿಗೂ, ಆ ಹಂದಿಗೂ ನಡುವೆ ಒಂಥರಾ symbolism ಕಂಡಿದ್ದು ಹೌದಾ? ಮೇಕ್ ಅಪ್ಪು, ಡ್ರೆಸ್ಸಿಂಗ್ ಸೆನ್ಸ್, ಜಾತಿ - ಆದಿಯಾಗಿ. ಬಲಿ ಮತ್ತು ಅವಿನಾಶರ ಪಾತ್ರದ ನಡುವೆ ಆಗುವ ಸಣ್ಣ  'agree to disagree' ಮೊಮೆಂಟ್  ಹೊಸತೆನಿಸಿತು (ಅಬ್ಬಾ ಭೂಮಿ ಬಳಿಯಿಂದಲಂತೂ ಸೇಫ್ ಎಂದೆನಿಸಿತು). ಕೊನೆಗೆ, ಬಲಿಗೆ ಇನ್ನೊಂಚೂರು 'ಗಟ್ಟಿ' ಸಾವು  ಸಿಗಬಹುದಿತ್ತೇನೋ ಅಂತನಿಸಿ ಪಾಪ ಅಂತಂದೆ. ಮುಂದಿನ 'ಭೂಮಿಯ ತುಳಿತದ' ದೃಶ್ಯಕ್ಕೆ ಮಣೆ ಹಾಕಲು, ನಮ್ಮ ಗಮನವನ್ನು ಇನ್ನೊಂದು ಮುಖ್ಯ ತಿರುವಿನತ್ತ ಸೆಳೆಯಲೆಂದೋ  ಬಹುಷಃ ಬಲಿಯನ್ನುಅಲ್ಲಿಗಲ್ಲಿಗೇ ಬಲಿ  ತೆಗೆದುಕೊಂಡಿರಲೂಬಹುದು.  


ಹಾಡುಗಳು, ಮ್ಯೂಸಿಕ್ ಹೇಗಿದೆ ಅಂತ ನನಗಷ್ಟು ತಿಳಿಯುವುದಿಲ್ಲ.  ಆಕ್ಟಿಂಗ್, ಪರ್ಫಾರ್ಮೆನ್ಸ್ ಅಂತ ಹೇಳಲೂ ತಿಳಿಯುವುದಿಲ್ಲ, ಒಟ್ಟಿನಲ್ಲಿ ನನ್ನನ್ನ ಎಲ್ಲರೂ ಸೇರಿ ಕನ್ವಿನ್ಸ್ ಮಾಡಿದರು- ಧನಂಜಯ, ನವೀನ ಶಂಕರ್,  ರವಿ, ಅವಿನಾಶರ ಪಾತ್ರಗಳು ಮುಂಚೂಣಿಯಲ್ಲಿ ಬಂದು ತುಸು ನೆನಪಲ್ಲಿ ಉಳಿಯಬಹುದು. ಈ ಚಿತ್ರ ನನ್ನನ್ನು ಕಾಂತಾರಾಗಿಂತಲೂ ಜಾಸ್ತಿ ಎಂಗೇಜ್ ಮಾಡಿತು.ಇದರಲ್ಲಿ ನಡೆದಿದ್ದೆಲ್ಲವನ್ನೂ ಹೌದೆನ್ನುವಂತೆ ನಾನು ನಂಬಿದೆ, ನಕ್ಕೆ, ಸಿಟ್ಟಾದೆ, ಚೂರು ಅತ್ತಿರಬಹುದು.  


ಕಥೆ, ಬದುಕು ಎರಡೂ ದೊಡ್ಡವೇ, ಸಣ್ಣವನು ಅಂದರೆ ಕಥೆಗಾರ. ಇದ್ದದ್ದು- ಇಲ್ಲದ್ದು ಸೇರಿ ಹೇಳೋ ಅಭ್ಯಾಸ ಬಹಳ ಹಳೆಯದು. ಬಲ್ಲವರಿಗೆ ಕರುಣೆ ಇದ್ದರೆ ಆಯಿತು. ಕನ್ನಡದ ಅಪರೂಪದ ಕಥೆಗಾರ ಕೇಶವ ಮಳಗಿಯವರ ಒಂದು ಕಥೆಯಲ್ಲಿನ ಈ ಮೇಲಿನ ಸಾಲುಗಳಂತೆ, ಸಿನಿಮಾ ಪ್ರೇಕ್ಷಕರಿಗೂ ತಮ್ಮ ಮುಂದೆ ಜರುಗುವ ಗೊಂಬೆಯಾಟದ ಬಗ್ಗೆ ಒಂದಿಷ್ಟು ಕರುಣೆ ಇದ್ದರಾಯಿತು. ಕಥೆಯಾದರೆ ಒಬ್ಬನೇ ಹೆಣೆಯುವುದು, ಸಿನಿಮಾ ಎಂದರೆ ಎಷ್ಟು ಜನರ ಇಷ್ಟ ಕಷ್ಟಗಳ ಬಿಡುಗಡೆಯೋ.   



 

ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...

ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು,...