Saturday, June 16, 2018

ಪೂರ್ವ ಜನ್ಮದ ಪಾಪಿ



ಭೂಮಿಯಷ್ಟನ್ನೂ ಎಷ್ಟಕ್ಕೆ ಕೊಡುವೆ ?
ಎಂದು ಕೇಳಿ ಕಿಸೆ ಮುಟ್ಟಿ ನೋಡಿಕೊಂಡ
ಹೀಗೇ ಮಾಡಬೇಕೆಂದವನಿಗೆ, ಹಾಗೆ ಮಾಡಿ ತೋರಿಸಿ 
ಕಣ್ಣಲ್ಲೇ ಕಲೆ ಮಾಡಿ ಒಡಮೂಡಿಕೊಂಡ.

ಕೊಳೆಯಾದರೆ ಆದೀತು ಒಮ್ಮೆ ಇಳಿದು ಬಿಡುವಾ
ಕೆಸರಿನಲ್ಲಿ ಕಮಲವ ಹುಡುಕಿ, ಬರಿ ಮೂಸಿ ನೋಡಿ ನಗುವಾ
ಕಣ್ಣನ್ನು ಹಿಸುಕಿ ಕನ್ನಡಕವ ಅಗಲಿಸಿ
ದೂರದ ಒಂದನ್ನು ತಾನೊಬ್ಬನ್ನೆ ಕಂಡಂತೆ ದಿಟ್ಟಿಸಿ ನೋಡುವ.

ಜೀವನವೆಂದರೆ... ಎಂದು ತಾನೇ ಕೇಳಿಕೊಂಡು
ಉತ್ತರದ ಉತ್ತರದುದ್ದಕ್ಕೂ ದಕ್ಷಿಣವ ಹುಡುಕಿ,
ಮೆದುಳಿನಲ್ಲಿ ಸಾಕಿಕೊಂಡ ಪೆಂಡ್ಯುಲಮ್ ನ ಅಲುಗಾಡಿಸಿ
ತಾನೂ ಅದರೊಡನೆ ಒಮ್ಮೆ ಅಲ್ಲಿಂದಿಲ್ಲಿಗೆ ಜೀಕಿ,
ಅದೆಲ್ಲ ಬೇಕಾಗಿಲ್ಲ, ಇದ್ದಿದ್ದನ್ನ ಕಳೆದುಕೊಂಡ ಮೇಲೆ
ಮತ್ತೆ ಅದೇನೋ ಸಿಕ್ಕುತ್ತದೆ; ಅದೇ ಬಹುಷಃ ಅದು - ಎಂದುಕೊಳ್ಳುವ ಪಾರ್ಟಿ!  

ಓಡುವವನಿಗೆ ಕಾಲುಗಳೇ ಮನೆ,
ಓದುವವನಿಗೆ ಕಾಗದಗಳೇ ಕೊನೆ
ಅಂತೆಲ್ಲ ಮಾತಾಡಿ ಮಾತನಾಡದಂತೆಯೇ ಸುಮ್ಮನಾಗಿ,
ಸುಖಾ ಸುಮ್ಮನೆ ಕುಡುಕನಂತೆ ಮಾಡುವ, ನೋಡುಗರಿಗೆ ಆಡುವ.

ಚೋಟುದ್ದ ದೇಹ, ಅರ್ಧ ಕಾಣುವ ಕಣ್ಣು 
ಅಷ್ಟಿದ್ದೂ ಸಮುದ್ರವ ಒಮ್ಮೆಲೇ ಬಾಚುವ ಹಪಾಪಿ.
ಹೇಳದೆಯೇ ಕೇಳಿಸುವ, ಕೇಳಿದರೂ ಹೇಳದಿರುವ
ಫಿಲಾಸಫಿ ಬೊಗಳಿ, ಕಣ್ಣು ಮಿಟುಕಿಸಿ ತರ್ಲೆ ನಗುವ ನಗುವ ಪೂರ್ವ ಜನ್ಮದ ಪಾಪಿ!  

-ಗೆಳೆಯನೊಬ್ಬನ ಮೇಲೆ ಬರೆದದ್ದು. 


No comments:

Post a Comment

ರಾವಣನ ಕಥೆಯಲ್ಲಿ ರಾಮನೇ ರಾಕ್ಷಸ

 ರಾಕ್ಷಸ ರಾವಣನ ವಿರುದ್ಧ ಧರ್ಮಯುಧ್ಧಕ್ಕೆ ಹೋಗುವ ಮುನ್ನ ರಾಮನು ಯಜ್ಞ ಮಾಡಬೇಕು, ಆ ಯಜ್ಞವನ್ನು ಒಬ್ಬ ಶ್ರೇಷ್ಠ ಬ್ರಾಹ್ಮಣನು ನೆರವೇರಿಸಿ ಕೊಡಬೇಕು ಅಂತ ಗುರುಗಳು ಪ...