Saturday, June 3, 2017

ಕರೆಂಟು ಹೋದಾಗ ಕಳೆದ್ಹೋದವರು



ಕನಸಲ್ಲಿ ಮಾತು ಮುಗಿಯುವ ಹೊತ್ತಿಗೆ
ಹೆಸರು ನೆನಪಾಗದೆ ಕಾಡಿದರೆ,
ಮುಖವುಂಟು ನೆನಪಿಗೆ
ಆದರೆ ಏನಂತ ಕರೆಯುತ್ತಿದ್ದೆನೋ ಅವನ
ಆಗಾಗ ಹೀಗೆ ಅರೆಗನಸಾಗುತ್ತಾನೆ
ಏಳುವ ಹೊತ್ತಿಗೆ

ಹಗಲು ಜೊತೆಗಿದ್ದು
ರಾತ್ರಿ ಅಮ್ಮನ ಪ್ರಶ್ನೆಯಾಗುತ್ತಿದ್ದ
ಏನಂದ ಇವತ್ತು ಕರಿಯ?
ಅಲ್ಲ, 'ಕರಿಯ' ಇರಲಿಕ್ಕಿಲ್ಲ
ಅಕ್ಕ ಪಕ್ಕವೇ ಏನೋ ಆಗಿದ್ದ, ಕರಿಯನಾಗಿರಲೂಬಹುದು

ಮುಂಗೈಗೆ ಉಗುಳು ಹಚ್ಚಿಕೊಂಡು
ತ್ಯಾಂಪಿಲೀಸ್ ಎಂದವನೆ
ಹೊಸ ರೂಲ್ಸ್ ಹೇಳುತ್ತಿದ್ದ
ಮರುಕ್ಷಣವೇ ಚೋರಿಂದ ಪಾರಾಗುತ್ತಿದ್ದ
ತಿಳಿಯದೆ ಮಂಕಾಗುತ್ತಿದ್ದೆ ನಾ,
ಅಮ್ಮನ ಬಳಿ ರಾತ್ರಿ ಹೇಳಲೊಂದು ಕಥೆ ಮಾಡಿಕೊಂಡು

ಕರೆಂಟು ಹೋದರೂ ಕಾಣಿಸುತ್ತಿದ್ದ
ನಾಶಿಪುಡಿ ಅಂಗಡಿಯ ಬಳಿ
ಜೀ..ssS .. ಎಂದು ಅರ್ಧ ಊರು ಸುತ್ತಿಸಿ
ನಡು ನಡುವೆ 'ಡೇಂಜರ್!' ಎಂದು ಕೂಗುತ್ತ ಕತ್ತಲಲಿ

ಅಂಗಾಲಿಗೆ ನಟ್ಟ ಜಾಲಿ ಮುಳ್ಳಿನ ನೆನಪಿಗೆ ಸಿಕ್ಕಿ
ಉಡದಾರದ ಪಿನ್ ನಿಂದ ಹೆಕ್ಕಿ ತೆಗೆದು
ನೋವಲ್ಲಿ ಕಣ್ಣು ಮುಚ್ಚಿದಾಗ
ಮುಳ್ಳಿನ ಸಮೇತ ಮಾಯವಾದವಾ.


- ಕಳೆದು ಹೋದ ಕೆಲ ಹಳ್ಳಿ ಗೆಳೆಯರ ನೆನಪಿನಲ್ಲಿ.
         

ರಾವಣನ ಕಥೆಯಲ್ಲಿ ರಾಮನೇ ರಾಕ್ಷಸ

 ರಾಕ್ಷಸ ರಾವಣನ ವಿರುದ್ಧ ಧರ್ಮಯುಧ್ಧಕ್ಕೆ ಹೋಗುವ ಮುನ್ನ ರಾಮನು ಯಜ್ಞ ಮಾಡಬೇಕು, ಆ ಯಜ್ಞವನ್ನು ಒಬ್ಬ ಶ್ರೇಷ್ಠ ಬ್ರಾಹ್ಮಣನು ನೆರವೇರಿಸಿ ಕೊಡಬೇಕು ಅಂತ ಗುರುಗಳು ಪ...