Tuesday, August 14, 2018

ನಾನೇ ಇವತ್ತಿನ ಭಾರತ!



ನಿಮಗೆ ಗೊತ್ತೆ? ಭಾರತ ಸ್ವತಂತ್ರವಾಗಿ ಹದಿನಾಲ್ಕು ವರ್ಷಗಳಾದ ಮೇಲೆ ಗೋವಾ ಭಾರತಕ್ಕೆ ಸೇರ್ಪಡೆ ಆಗಿದ್ದಂತೆ, ಅಲ್ಲಿವರೆಗೂ ಅದು ಭಾರತಕ್ಕೆ ಸೇರಿರಲಿಲ್ಲ. ಸ್ವಾತಂತ್ರ್ಯ ಎಂದೊಡನೆ ಗೋವಾ ಯಾಕೆ ಮನಸಿಗೆ ಬಂತೋ ಅಂತ ಇನ್ನು ಪೂರ್ತಿಯಾಗಿ ಅರ್ಥ ಆಗಿಲ್ಲ, ಆಗದೆಯೇ ಇರಲಿ. ಅಂದಹಾಗೆ ಭಾರತಕ್ಕೆ ಹೊರಗಿನವರಿಂದ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ವರ್ಷಗಳ ಮೇಲಾಯಿತು, ಒಳಗಿನ ನಮಗೆಲ್ಲ ಶುಭಾಶಯ. ಬೇಗ ಎದ್ದರೆ ಧ್ವಜಾರೋಹಣ ಅಟೆಂಡ್ ಮಾಡಿ, ಲೇಟ್ ಆಗಿ ಎದ್ದರೆ #flag-ಸೆಲ್ಫಿ ತಕ್ಕಳಿ,  ಯಾರೋ ಒಬ್ಬ ಬಿಳಿ ಬಟ್ಟೇಲಿ ಭಾಷಣ ಮಾಡಿದ್ರೆ ಕಿವಿ ಮುಚ್ಕೊಂಡು ಕೇಳಿ,  ಸ್ವೀಟ್ ತಿನ್ನಿ. ಮರುದಿನ ಮತ್ತೆ ಈ ದೇಶ ಯಾಕೆ ಉದ್ಧಾರ ಆಗಲ್ಲ, ಹೆಂಗ್ ಹೆಂಗೆ ಉದ್ಧಾರ ಆಗಲ್ಲ ಅಂತ ರಿವಿಶನ್ ಮಾಡ್ಕೊಳಿ, ಫೇಸ್ಬುಕ್ ನಲ್ಲಿ ಹೊಟ್ಟೆ ಹಿಂದೆ ತಗೊಳ್ಳಿ, ಇನಸ್ಟಾಗ್ರಾಮ್ ನಲ್ಲಿ ತುಟಿ ಮುಂದೆ ತನ್ನಿ, ಟ್ವಿಟ್ಟರ್ ನಲ್ಲಿ ಯಾವಂದೋ ಜೊತೆ  ಜಗಳಾಡಿ ಬ್ಲಾಕ್ ಮಾಡಿ... ಅಲ್ಲಿಗೆ ನಿಮ್ಮ ಜೊತೆ ಭಾರತಮಾತೆನೂ ಸುಸ್ತು. ಮೊನ್ನೆ ಅಂಕಲ್ ಒಬ್ರು ಬಸ್ ಸ್ಟಾಪ್ ನಲ್ಲಿ ಹೇಳ್ತಾ ಇದ್ರು, 'ನಮ್ಮ ಪುಣ್ಯ ಬ್ರಿಟಿಷರು ಮತ್ತೆ ನಮ್ಮ ಮೇಲೆ ದಾಳಿ ಮಾಡೋ ಯೋಚನೆ ಮಾಡಿಲ್ಲ. ಮಾಡಿದ್ರೆ ಈಗ ನಮ್ಮ ಕಥೆ ಅಷ್ಟೇ' ಅಂತ. ಇಂದಿನ ಯುವಕರ ಮೇಲೆ ಅವರ ವ್ಯಂಗ್ಯ. ಸುತ್ತ ಇದ್ದ ಕಾಲೇಜು ಹುಡುಗ ಹುಡುಗಿಯರೆಲ್ಲ ಒಮ್ಮೆ ಅವರನ್ನ ನೋಡಿ ಮತ್ತೆ ತಮ್ಮ ತಮ್ಮ ಫೋನಿನಲ್ಲಿ ಸೇರಿಕೊಂಡರು. ಫೋನ್ ಬ್ಯಾಟರಿ ಖಾಲಿಯಾಗಿದ್ದ ನನಗೆ ನಿಜವಾಗಿಯೂ ಹಾಗೇನಾದರೂ ಆದ್ರೆ? ಅಂತ ಯೋಚನೆ ಬಂತು. ಕಿಟಕಿಯಲ್ಲಿ ಭಾರತೀಯ ಪ್ರವಾಸಿ ಜಾಹೀರಾತಿನ ಪೋಸ್ಟರ್ ಕಂಡಿತು 'ಒಮ್ಮೆ ಭಾರತಕ್ಕೆ ಬನ್ನಿ, ನಮ್ಮಲ್ಲೊಬ್ಬರಾಗಿ'.

ಸಮಯ ತುಂಬಾ ಬದಲಾಗಿದೆ, 'ಭಾರತ ಬಿಟ್ಟು ತೊಲಗಿ' ಅಂತ ಅಂದವರನ್ನೆಲ್ಲಾ 'ಭಾರತಕ್ಕೆ ಬನ್ನಿ' ಎಂದು ಆತಿಥ್ಯಕ್ಕೆ ಕರೆಯುತ್ತಿದ್ದೇವೆ. ಸಮಯದ ಜೊತೆಗೆ ಭಾವನೆಗಳು, ಲಕ್ಷ್ಯಗಳು, ನಿಲುವುಗಳೆಲ್ಲವೂ ಬದಲಾಗಿದೆ. ಇತಿಹಾಸವನ್ನು ಕಯ್ಯಲ್ಲಿ ಹಿಡಿದುಕೊಂಡು ಭವಿಷ್ಯತ್ತನ್ನು ನೋಡದೇ ಇರುವುದು ಬರೀ ಅಜ್ಞಾನವೇ ಅಲ್ಲ, ಅಪರಾಧವಾಗಿದೆ. ಗಾಂಧೀಜಿ ಸರೀನಾ, ಗೋಡ್ಸೆ ಸರೀನಾ, ನೆಹರುಗೆ ಏನೇನು ಕೆಟ್ಟ ಚಟಗಳಿದ್ದವು, ಟಿಪ್ಪು ಸುಲ್ತಾನ್ ನಿಜವಾಗಲೂ ಹುಲಿಯ ಬಾಯಲ್ಲಿ ಕೈ ಹಾಕಿದ್ನಾ? ಅಂತ ಇನ್ನೂ ಚರ್ಚೆ ಮಾಡುತ್ತಾ ಕುಳಿತರೆ ಸಮಯ ಪೋಲು ಅಷ್ಟೇ. ಅವರೆಲ್ಲ ಅವರವರ ಸಮಯಕ್ಕೆ ಅವರಿಗೆ ಸರಿ ಅನಿಸಿದ್ದನ್ನ ಮಾಡಿ ಹೋಗಿಯಾಗಿದೆ. ನಮ್ಮ ಸಮಯಕ್ಕೆ ನಾವು ಮಾಡಬೇಕು, ಮಾಡದೇ ಬರೀ ಆಡಿದರೆ ಏನು ಬಂತು. ದೇಶ, ಪ್ರೇಮ, ದೇಶಪ್ರೇಮ ಗಳ ಅರ್ಥಗಳೂ ವಿಕಸಿತಗೊಂಡಿವೆ. ದೇಶವೆಂದರೆ ಬರೀ ಭಾರತದ ಭೂಗೋಳ ಅಲ್ಲ, ಜಿಯೋ ಇಂಟರ್ನೆಟ್ ಫ್ರೀ ಆಗಿದೆ ಅಂತ ಹೇಳಿ ಫೇಸ್ಬುಕ್ ನಲ್ಲಿ 'ಅಖಂಡ ಬಾರತ್' ಅಂತ ಹಗಲೂ-ರಾತ್ರಿ ಕೇಸರಿ ಬಣ್ಣ ಬಳಿದು ಕೂತರೆ ಟೈಮ್ ವೇಸ್ಟ್ ಅಷ್ಟೇ. ಪ್ರೇಮ ಅಂತ ಹೇಳಿ ಈಗ ಕೈ ಕುಯ್ದುಕೊಂಡು, ಹುಡುಗಿ ಹಿಂದೆ ಹೋಗಿ 'ಒಲವಿನ ಉಡುಗೊರೆ ಕೊಡಲೇನು, ರಕುತದಿ ಬರೆದೇನು ಇದ ನಾನು' ಅಂತ ಹಾಡಿದರೆ infection ಆದೀತು ಹೋಗಪ್ಪ ರೋಮಿಯೋ ಅಂತಾರೆ ಹುಡುಗೀರು. ಪಾಯಿಂಟ್ ಏನಪ್ಪಾ ಅಂದ್ರೆ, ಆಯಾ ಕಾಲದ ಭಾವಗಳು, ನಂಬಿಕೆಗಳು ಆಯಾ ಕಾಲಕ್ಕೆ ಸೂಕ್ತ. ದೇಶಪ್ರೇಮವೂ ಹಾಗೆ. ಜಾತಿ, ಧರ್ಮ, ಭೂಗೋಳ, ಇತಿಹಾಸ ಇಂತಹ ವಿಷಯವಾಗಿ ಆಗುವ ಹೊಡೆದಾಟ, ಗುದ್ದಾಟ ಗಳು ಈಗ ತೀರಾ irrelevant. ಎತ್ತಣ ಮಂಗಳ ಗ್ರಹಯಾನ, ಎತ್ತಣ ಹಜ್ ಸುಬ್ಸಿಡಿ!

ಬದಲಾಗುತ್ತಿರುವ ಅರ್ಥಗಳ ನಡುವೆ ಹೊಸ ಅರ್ಥಗಳನ್ನು ಅರಿತುಕೊಳ್ಳಲು, ಆಯ್ದುಕೊಳ್ಳಲು ಬೇಕಿರುವುದು ಸ್ವಾತಂತ್ರ್ಯ. ಈಗಿನ ಪೀಳಿಗೆಯ ಸ್ವಾತಂತ್ರ್ಯವದು. ನಮಗೆ ಬೇಕಾದುದನ್ನು ನೋಡಲು, ಕೇಳಲು, ಪರೀಕ್ಷಿಸಲು ಹಾಗೂ ಮಾಡಲು ಬೇಕಿರುವ ಸ್ವಾತಂತ್ರ್ಯ.  ಎಡ ಪಂಥ, ಬಲ ಪಂಥ ಗಳ ಆಚೆ, ಜಾತಿ-ಧರ್ಮ, ಬಣ್ಣಗಳಾಚೆ,  ಸಾವಿರಾರು ದೇವರುಗಳ ಆಚೆ. ನಾನು ನಾನಾಗಿರಲು, ನೀನು ನೀನಾಗಿರಲು, ಬೇಕಿರುವ ಸ್ವಾತಂತ್ರ್ಯ. ಇದನ್ನು ಯಾರು ಯಾರಿಗೂ ಕೊಡಲಾಗುವುದಿಲ್ಲ, ಕೊಟ್ಟರದು ಭಿಕ್ಷೆ, ಸ್ವಾತಂತ್ರ್ಯ ಹೇಗಾದೀತು. ಬೇಡವೆಂದು ಬಿಟ್ಟರದು ಅಜ್ಞಾನ, ಬೆಳವಣಿಗೆ ಹೇಗಾದೀತು. ಜಗತ್ತಿಗೆಲ್ಲ ಒಂದೇ ಸತ್ಯ ಇದೆ ಎಂದರೆ ಶುದ್ಧ ಸುಳ್ಳು, ಅವರವರಿಗೆ ಅವರವರ ಸತ್ಯ. ಆ ಸತ್ಯ ಶೋಧನೆಗೆ ಬೇಕಿರುವ ಆಂತರಿಕ ಸ್ವಾತಂತ್ರ್ಯ. ಈ ಸ್ವಾತಂತ್ರ್ಯಕ್ಕೆ ಇನ್ನೊಂದು ಹೆಸರಿದೆ, 'ಜವಾಬ್ದಾರಿ'. ಜವಾಬ್ದಾರಿಯೇ ನಿಜವಾದ ಸ್ವಾತಂತ್ರ್ಯ.

ನಾನು ಕೇಸರಿಯಲ್ಲ, ನಾನು ಹಸಿರೂ ಅಲ್ಲ, ನಾನು ಬರೀ ವಾಟ್ಸ್ ಅಪ್, ಫೇಸ್ಬುಕ್, ಟ್ವಿಟ್ಟರ್ ಅಲ್ಲ, ನಾನು ಹಾಕಿಕೊಳ್ಳುವ ಬಟ್ಟೆಯಲ್ಲ, ನಾನು ಬರೀ ಒಂದು ನಂಬಿಕೆಯಲ್ಲ, ಬರೀ ಮಸಾಲೆಗಳಲ್ಲ, ನಾಲ್ಕು ನದಿಗಳಲ್ಲ, ಐವತ್ತೆರಡು ಸೆಕೆಂಡ್ ಗಳ ಒಂದು ಹಾಡಲ್ಲ, ಮೂವತ್ತು ಸಾವಿರ  ದೇವರುಗಳಲ್ಲ, ಕಳೆದು ಹೋದ ಇತಿಹಾಸವಲ್ಲ, ಅಳೆದು ನೋಡಬಲ್ಲ ಭವಿಷ್ಯವಲ್ಲ, ನಾನು ಸರಿಯಾಗಿದ್ದರೆ ನನ್ನ ಊರು, ದೇಶ ಸರಿ. ನಾನು ನಿನ್ನೆ ಕಂಡುಕೊಂಡು ಇವತ್ತು ಮರಳಿ ಬದಲಿಸಿದ ಸತ್ಯವೇ ನನಗೆ ಇವತ್ತಿನ ಧರ್ಮ. ನಾನು ಪರಿಶೀಲಿಸಿ, ಪ್ರಯತ್ನಿಸಿ, ಬಿದ್ದು ಮತ್ತೆ ಎದ್ದು ನಿಂತ ಪಾಠಗಳೇ  ನನಗೆ ಧರ್ಮ ಗ್ರಂಥಗಳು. ನಾನು ಭಾರತ. ನಾನೇ ಇವತ್ತಿನ ಭಾರತ.             


No comments:

Post a Comment

ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...

ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು,...