Saturday, June 15, 2013

ಅವಳ ರಂಗೋಲಿ

ಬಸವೇಶ್ವರ ನಗರದ ರೋಡಲ್ಲಿ ಸುಮ್ನೆ ನಡ್ಕೊಂಡ್ ಬರೋದು ಒಂದ್ ಪ್ಲೆಸೆಂಟ್ ವಾಕ್ ಗಿಂತ ಕಡಿಮೆ ಏನಿಲ್ಲ ನೋಡಿ. ಅದೇನು ಕಸ ನೇ ಬೀಳೋದಿಲ್ವೋ ಅಥವಾ ಅಲ್ಲಿ ಕಸ ಹೊಡಿಯೋ ವರ್ಕರ್ಸ್ ಅಷ್ಟು ಪ್ರಾಮಾಣಿಕ ನೋ ಗೊತ್ತಿಲ್ಲ. ಮೇಲಾಗಿ ಆ ರೋಡ್ ಅಕ್ಕ ಪಕ್ಕ ಬೆಳದಿರೋ ಆ ಗಿಡಗಳು, ಒಂಥರಾ ಪೇಡ್  ಸರ್ವಿಸ್ ಮಾಡೋ ಹಾಗೆ ರೋಡ್ ಕಡೆನೆ ಬಾಗಿ ನೆರಳು ಕೊಡತ್ತೆ. ಎಂಥ ಬಿಸಿಲಲ್ಲೂ ಒಂದ್ ಕಪ್ ಕಾಫಿ ಕುಡ್ಕೊಂಡು ಅಡ್ಡಾಡಿ ಬಿಡಬೋದು. ಸಂಜೆ ಹೊತ್ತು ಕಾಫಿ ಕುಡಿಯೋಕೆ ಒಬ್ಬನೇ ಹೊರಟಿದ್ದೆ. ವೈಟ್ ಕಲರ್ ಟೀಶರ್ಟ್, 3/4th ಹಾಕೊಂಡು ಕಿವಿಲಿ earphones ಸಿಗ್ಸಿದ್ದೆ. ಬೆಂಗಳೂರಲ್ಲಿ ನೀವು ಚಡ್ಡಿ ಹಾಕದೆ ಇದ್ರೂ ಪರವಾಗಿಲ್ಲ, ಆದ್ರೆ ಈ ಇಆರ್-ಫೋನ್ ಗಳ್ನ ಹಾಕಿರಬೇಕು, ಇಲ್ಲಾಂದ್ರೆ ಹೊಸಬ ಅನ್ನೋ ಥರ ನೋಡ್ತಾರೆ ಜನ ರೋಡಲ್ಲಿ. ಒಂಥರಾ un-announced requirement ಅದು. ನಾನು ಕಿವಿಲಿ ಸಿಗ್ಸಿದ್ದು ಹಾಡು ಕೆಳೋಕಲ್ಲ ಮನೆಗೆ ಕಾಲ್ ಮಾಡೋಕೆ. ಕೈಯ್ಯಲ್ಲೇ ಫೋನ್ ಹಿಡ್ಕೊಂಡು ಮಾತಾಡೋಕೆ ನಮ್ಮ ಕೈ ಯಾವಾಗಲು ವೀಕು. Escapism ಗೆ ಒಗ್ಗಿರೋ ಕಾಲು ಸ್ಟ್ರಾಂಗ್, ಕೆಲಸ ಮಾಡ್ಬೇಕಾಗಿರೋ ಕೈ ವೀಕು, ನಾವು youth.  

ದೂರದಲ್ಲಿ ಒಬ್ಬಳು  ಬರ್ತಿದ್ಲು, light-brown ಮತ್ತು ಹಳದಿ  ಕಲರ್ ನ ಮಿಕ್ಸ್ ಮಾಡಿ ಒಂದ್ ಒಳ್ಳೆ ಕಲರ್ ನ ಕಂಡು ಹಿಡಿದು ಆ ಕಲರ್ ನಿಂದ ಆ ಸಲ್ವಾರ್-ಕಮೀಜ್ ನ ತಯಾರಿಸಿದ್ರು ಅನ್ಸತ್ತೆ, ಅಂದ ಅವಳಿಗಾಗೆ ಮಾಡಿಸಿದಂಗೆ ಇತ್ತು. ಇತ್ತೀಚಿಗೆ ಒಂದೇನೋ ರೋಗ ಬಂದಂಗಿದೆ ಮಯ್ಯಿಗೆ, ಮನಸಿಗೆ ಅನ್ಕೊಳಿ, ಯಾವ್ ಹುಡುಗಿ ನೋಡಿದರು ಚೆನ್ನಾಗೆ ಕಾಣ್ತಾಳೆ.. ಮುಂದಿಂದ ಓಕೆ ಅನ್ಸಿದ್ರು ಮತ್ತೆ ತಿರುಗಿ ನೋಡಿದಾಗ ಚೆನ್ನಾಗೆ ಕಾಣ್ತಾರೆ. ಕಾಣ-ಸಿಗೋ ಪ್ರತಿ ಹುಡುಗಿನು ಲವ್ ಮಾಡಿಬಿಡೋ range-ಅಲ್ಲಿ ತಯಾರು ಮನಸು. ಒಂಥರಾ ವಸಂತ ಋತು ಥರ ಇದೆ ಮನಸಿನಲ್ಲಿ. ಅಥವಾ ವಯ್ಯಸ್ಸಿನ helplessness ಆಗಿರಬಹುದು. 

ಈ ಹುಡುಗೀನು ಕಿವಿಲಿ ಇಟ್ಕೊಂಡಿದ್ಲು, ಒಂದು ಸ್ಟೈಲಿಶ್ ಬ್ಯಾಗ್ ನ ಹಾಕೊಂಡು, ನಗ್ತಾ ನಗ್ತಾ ನಡೆದಿದ್ಲು. ಅವ್ಳು ನಗ್ತಿರೋದು FM ನ ಯಾವುದೋ RJ ಮಾತಿಗೆ ಇರ್ಬೆಕು. ಸುಮ್ನೆ ಹುಡ್ಗೀರ ನಗು ನ misunderstand ಮಾಡ್ಕೊಂಡು ಅವ್ರ ಸ್ಮೈಲ್ ಕಥೆ ಹಿಡ್ಕೊಂಡ್ ಹೋದರೆ ಮೆಟ್ಟಲ್ಲಿ ಬೀಳತ್ತೆ, ಮೊದಲೇ residential ಏರಿಯ. ಸುಮ್ನೆ ಒಮ್ಮೆ ಅವಳನ್ನ ಒಮ್ಮೆ ರೋಡ್ ನ ನೋಡ್ಕೊಂಡು ಹೊರಟೆ. ಅವ್ಳು ಹಂಗೆ ಬರ್ತಿದಾಳೆ. ಮನಸಿನಲ್ಲಿ situational imaginations, ಮನಸು ತನಗೆ ತಾನೇ ಕೊಟ್ಕೋಳೋ possible surprises.. ಅಕಸ್ಮಾತ್ ಇವ್ಳು ಪಕ್ಕ ಪಾಸ್ ಆಗ್ತಾ ಆಗ್ತಾ ನಂಗೆ ಕೈ  ತಾಗಿಸಿ ನಕ್ರೆ? ಅಕಸ್ಮಾತ್ ಇವ್ಳು ನನ್ನ ಹಳೆ ಸ್ಕೂಲ್-ಮೇಟ್ ಇದ್ದು ಮಾತಡ್ಸಿದ್ರೆ? ಬೈ-ಚಾನ್ಸ್ ಇವ್ಳು ನಮ್ಮ ಮನೆ ಹಿಂದೆ ಮುಂದೆ ನೆ ಇರೋಳು ಆಗಿ, ದಿನ ಹಿಂಗೆ ಸಿಕ್ಕು ಪರಿಚಯ ಆಗಿ, ಒಮ್ಮೆ ಲವ್ ಆಗಿ ಆಮೇಲೆ ಮದುವೆ, ಮಕ್ಳು ಆಗಿಬಿಟ್ರೆ?.. ಅರ್ಧ ನಿಮಿಷದಲ್ಲಿ ಮನಸು ಎಷ್ಟೆಲ್ಲ ಸ್ಕೆಚ್ ಹಾಕ್ಕೊಳತ್ತೆ. ಇದರಲ್ಲಿ ಒಂದಾದರೂ ಆದ್ರೆ ನಾನ್ ಲಕ್ಕಿ, ಯಾಕಂದ್ರೆ ಅಷ್ಟು ಸುಂದರವಾಗಿದಾಳೆ ಆ ಹುಡುಗಿ. 

ಸಲ್ವಾರ್-ಕಮೀಜ್ ಹಾಕಿರೋ ಹುಡುಗೀರು ನಂಗೆ ತುಂಬಾ ಇಷ್ಟ. ಈ ಹುಡುಗಿ ನನ್ನ ಪರಿಚಯ ಇಲ್ದೇನೆ ನನ್ನನ್ನಾ  ತಿಳ್ಕೊಂಡಿದಾಳೆ ಅನ್ನಿಸ್ತು. ಪರಿಚಯ ಹಿಂಗೆ ಅಂತ  ಹೇಳೋಕಾಗಲ್ಲ ನೋಡಿ, ಮಾತಿಂದ ನು ಆಗ್ಬೋದು ಬರಿ ಕಣ್ಣಿಂದ ನು ಆಗ್ಬೋದು.. ಆದರೆ ಇದು ಮಾತ್ರ ಮನಸಿಂದ ಅಂತ ಕಾಣತ್ತೆ. ಇಲ್ಲಾಂದ್ರೆ ಇವಳಿಗೆ ಹೇಗ್ ಗೊತ್ತು ನಂಗೆ ಸಲ್ವಾರ್-ಕಮೀಜ್ ಇಷ್ಟ, ನಂಗೆ ಆ ಮುಖದ ಮೇಲೆ ಬೀಳೋ ಮುಂಗುರುಳು ಇಷ್ಟ ಅಂತ. ಬಿಸಿಲಿಗೆ ಹೊಳೆಯೋ ಕಿವಿಯೋಲೆ ಗಾಳಿಗೆ ರೋಮ್ಯಾನ್ಸ್ ಕಲಿಸ್ತಿರೋ ಆ ಓಢನಿ, ಕೆಂಪಗೆ ನೆರಳಲ್ಲೂ ಮಿಂಚುವ ಆ ತುಟಿಗಳು. ರಾಮನೂ ಸೀತೆಗೆ ಒಂದ್ಸಾರಿ second-thought ಕೊಡೋ ಹಾಗೆ ಮಾಡೋ ಆ ಸ್ಮೈಲ್. ನಾನಂತೂ ಕ್ಲೀನ್ ಬೌಲ್ಡ್!! ಇನ್ನೇನು ಹತ್ರ ಬರಬೇಕು ಅವ್ಳು, ಏನಾದ್ರು ಒಂದು ಆಗ್ಬೇಕು ಅನ್ನೋವಷ್ಟರಲ್ಲಿ ಗ್ಯಾಪ್-ಅಲ್ಲಿ ಪಾಸ್ ಆಗೊದ್ಲು. ನಾನು ರೂಢಿಯಂತೆ ಒಮ್ಮೆ ಹಿಂದಿ ತಿರುಗಿ ನೋಡಿದೆ ಅವಳನ್ನ, ಹುಚ್ಚು ಆವರಿಸಿದಂಗೆ ಆಯ್ತು. ಹುಡ್ಗೀರು ಫರ್ಸ್ಟ್ ಟೈಮ್ ಎಷ್ಟು ಚೆನ್ನಾಗಿ ಕಾಣ್ತಾರೋ ಸೆಕೆಂಡ್ ಟೈಮ್ ನೀವು ನೋಡಿದಾಗ ಒಂದಿಷ್ಟ್ percentage ಜಾಸ್ತಿನೆ ಚೆನ್ನಾಗಿ ಕಾಣ್ತಾರೆ. ನಾವು ಹುಡುಗ್ರು ಜಾಸ್ತಿ ನೋಡಬಾರದು, ಆಮೇಲೆ ರವಿಚಂದ್ರನ್ ಹಾಡು ಕೇಳಬೇಕಾಗತ್ತೆ. ಇಷ್ಟೆಲ್ಲಾ ಗೊತ್ತಿದ್ದೂ ನಾನು ಅವಳನ್ನ ತಿರುಗಿ ತಿರುಗಿ ನೋಡಿದೆ, ಅವಳೇನು ನೋಡಲಿಲ್ಲ ನನ್ನ. 

ವಾಲೆಟ್ ಅದು-ಇದು ಅಂತನಾದ್ರೂ ಬೀಳಿಸ್ಬೇಕಿತ್ತು, 

ರೀ..ನಿಮ್ಮ ವಾಲೆಟ್ ಅಂತ ಕೂಗಿರೋಳು. 

ಅವಾಗ ನಾವು oh!! i didn't notice, thank you so much ಅಂತ ಹೇಳಿ ಕಣ್ಣ-ಪರಿಚಯ ನಾದ್ರೂ  ಮಾಡ್ಕೊಬೋದಿತ್ತು, ಮತ್ತೆ ಸಿಕ್ಕಿದ್ರೆ ನಕ್ಕಿರೋಳು, ಇನ್ನೊಮ್ಮೆ ಮಾತಾಡಿರೋಳು. ಅಷ್ಟಾಯ್ತು ಅಂದ್ರೆ ನಮ್ಮ ಹೆಗಲು ತಲೆ ಮೇಲೆ ಬಂದು ಕೂತುಬಿಟ್ಟಿರೋವು. ಯಾವುದೂ ಆಗ್ಲಿಲ್ಲ. ಇರ್ಲಿ. ಇದೇನು ಹೊಸತೆ ನಮಗೆ ಅನ್ಕೊಂಡು ಒಮ್ಮೆ ಆಕಾಶ ನೋಡಿ ಮುಂದೆ ನಡೆದೆ..

ರೀ.. 

ಹೆಲೋ... 

ನಿಮ್ಮನ್ನೆ.. ವೈಟ್-ಶರ್ಟ್!!

ಹುಡುಗಿ ಧ್ವನಿ!!!..

ವೈಟ್-ಶರ್ಟ್??    ನಂದೇ!!

ಆ ಒಂದೇ ಒಂದು ಸೆಕೆಂಡ್ ನಲ್ಲಿ ಮತ್ತೆ ಕನಸುಗಳು ಶುರು ಆದಂಗೆ, ಏನೇನೋ ಇಮ್ಯಾಜಿನ್ ಮಾಡ್ಕೊಂಡು ಬಿಟ್ಟೆ . ಇಷ್ಟು ಬೇಗ ಭಗವಂತನಿಗೆ ನನ್ನ ಕಷ್ಟ ಕೆಳಸ್ತಾ?? ಕರದೇ ಬಿಟ್ಲು ಹುಡುಗಿ! ಖುಷಿಯಿಂದಲೇ ತಿರುಗಿ ನೋಡಿದೆ..

ಆ ಸಲ್ವಾರ್-ಕಮೀಜ್ ಹುಡುಗಿ ತನ್ನ ಪಾಡಿಗೆ ತಾನು ಹೋಗ್ತಿದಾಳೆ, ತುಂಬಾ ದೂರಾನೂ ಇದಾಳೆ .. ಹಾಗಾದ್ರೆ ಕರೆದಿದ್ದು ಅವ್ಳಲ್ಲ..

ರೀ.. ಕಿವಿ ಕೇಳಿಸಲ್ವ ನಿಮ್ಗೆ.

ಇಲ್ಲಿ!!

ಸ್ವಲ್ಪ ಬಲಗಡೆ ತಿರುಗಿ ನೋಡಿದ್ರೆ ಬೇರೆ ಹುಡುಗಿನೇ.. 

ರಂಗೋಲಿ ನ ಹಾಗೇ ತುಳ್ಕೊಂಡು ಹೊಗ್ತಿದೀರಲ್ಲ.. ಈಗ ತಾನೇ ಹಾಕಿದಿನಿ.. ಕಣ್ಣು ಕಾಣ್ಸಲ್ವ ನಿಮ್ಗೆ??

ಕೆಳಗೆ ನೋಡಿದ್ರೆ ಇಷ್ಟು ದೊಡ್ಡದಾಗಿ ರಂಗೋಲಿ. ಒಂದ್ 25 percent ಭಾಗಾನ ನಾವು ಕಾಲಿಂದ ತುಳಿದು ಹಾಳು ಮಾಡಿದ್ವಿ. ಇದ್ದಬದ್ದ ಕಲರ್ ನ ಹಾಕಿ ಜಾತ್ರೆ ಮಾಡಿದಂಗಿತ್ತು, ರೋಡ್ ಸಾಲದಷ್ಟು ದೊಡ್ದದು. 

Oops!! ನೊಡ್ಲಿಲ್ಲ.. 

ಹಾಂ?? ಇಷ್ಟುದ್ದ ಹಾಕಿದಿನಿ ಅಷ್ಟು ಕಾಣ್ಲಿಲ್ವ ನಿಮ್ಮ ಕಣ್ಣಿಗೆ? ಆಕಾಶ ನೋಡ್ಕೊಂಡ್ ಹೋದ್ರೆ ಏನ್ ಕಾಣಬೇಕು ಮಣ್ಣು.. 

ಅಲಾ ಇವಳಾ!! ನಮಗೆ ರೋಪಾ?? ಹುಡುಗಿ ಪಾಪ ಅಂತ ಸುಮ್ನಿದ್ರೆ ಇವರಪ್ಪನ ರೋಡ್ ಥರ ಮಾತಾಡ್ತಾಳೆ. ಬಿಟ್ನಾ ಸುಮ್ನೆ.. ದಬಾಇಸಿದೆ ನಾನು.. 

ಹಲೋ..ನೊಡ್ಲಿಲ್ಲ ಅಂದ್ನಲ್ಲ.. ಏನ್ ದೊಡ್ಡ museum-piece ನಿಮ್ಮ ರಂಗೋಲಿ. ಅದನ್ನೇ ನೋಡ್ತಾ ಅಡ್ದಾಡ್ತಿವಿಲ್ಲಿ.. ಮನೆ ಮುಂದೆ ಹಾಕೊಳಿ ಅಂದ್ರೆ ರೋಡ್ ತುಂಬಾ ಹಾಕೊಂಡು..ನಾವೇನ್ ಆಕಾಶದಲ್ಲಿ ನಡಿಬೇಕಾ??

ತುಳಿಯೋದ್ ತುಳದು ನಂಗೆ ರೆಗ್ತೀರಲ್ಲ.. ಎಷ್ಟ್ ಸೊಕ್ಕು ಇರಬೇಡ ನಿಮ್ಗೆ.. ಒಂದ್ sorryನು ಹೇಳ್ದೆ...  ಅಲ್ಲಾ ನಿಮ್ಮ ಮೋತಿಗೇ ...

ಅಮ್ಮ ದಿವ್ಯ..!!! ( ಮನೆ ಒಳಗಿಂದ ಒಂದು ವಾಯ್ಸ್ ಬಂತು)

ಬಂದೆ ಅಪ್ಪ.. 

ಸಿಟ್ಟಿಂದ  ಒಮ್ಮೆ ನನ್ನ ನೋಡಿ ಮನೆ ಒಳಗೆ ಓಡಿದಿದಳು ಹುಡುಗಿ.. 

ಮೊದಲೇ ಹೇಳಿದ್ದೆ.. ಇತ್ತೀಚಿಗೆ ಯಾವ್ ಹುಡುಗಿನ ನೋಡಿದರು ಚೆನ್ನಾಗೆ ಕಾಣಿಸ್ತಾಳೆ ಅಂತ . ಇವಳೇನು ಅದಕ್ಕೆ ಹೊರತಲ್ಲ. ಹಳದಿ ಬಣ್ಣದ ಲಂಗ-ದಾವಣಿ ಹಾಕೊಂಡು ತಲೆಗೆ ಒದ್ದೆ ಅರಿವೇ ಕಟ್ಕೊಂಡು, ಹಣೆಗೆ ವಿಭೂತಿನೂ ಬಡ್ಕೊಂಡಿದ್ಲು..ಚೆನ್ನಾಗೇ ಕಂಡಳು. ಅವಳು ನಂಗೆ ಥೂ ಅಂತ ಅನ್ಕೊಂಡು ಲಂಗ ನಾ ಕೈಇಯ್ಯಲ್ಲಿ ಎತ್ಕೊಂಡು ಮನೆ ಒಳಗೆ ಓಡಿ  ಹೋಗಿದ್ದನ್ನ ನೋಡಿ ನಗು ಬಂತು. ನನ್ನಷ್ಟಕ್ಕೆ  ನಕ್ಕೊಂಡು ಒಮ್ಮೆ ಆ ರಂಗೋಲಿ ನ ನೋಡಿದೆ. ಈಗ ಯಾಕೋ ಮೊದಲಿಗಿಂತ ಚೆನ್ನಾಗಿ ಕಂಡಿತು ರಂಗೊಲಿ. ಅದೇನು ಫ್ರೆಶ್ ಬಣ್ಣಗಳು, ಅದೇನು ಅಚ್ಚುಕಟ್ಟು ಚುಕ್ಕಿಗಳು, ಆ ಚುಕ್ಕಿಗಳನ ಸೇರಿಸೋ ಆ ನೇರ ಗೆರೆಗಳು, ಎಲ್ಲೂ ಸ್ವಲ್ಪನೋ ಲೋಪ ಇಲ್ಲ..ಇದ್ದರೆ ನಾನು ಕಾಲಿಟ್ಟಲ್ಲಿ ಮಾತ್ರ. ಒಂದೆರಡು ನಿಮಿಷ ಅಲ್ಲೇ ನಿಂತು ಹೋದೆ. ಅಂದಹಾಗೆ ಕಾಫಿ ಕುಡಿಯೋಕೆ ಹೊರಟಿದ್ದು ನಾನು, ನೆನಪಾಯ್ತು. 'ಶಿವ condiments' ಗೆ ಹೋಗಿ ಒಂದು ಬಿಸಿ ಕಾಫ್ಫೀ ಕುಡೀತಾ ಒಂದೇ ಒಂದು ಸಿಗರೆಟ್ ಹಚ್ಚಿ ನಿಂತೆ. ಆ ಸಂಜೆ ಏನೋ ಶುರು ಆಗೋ ಥರ ಇತ್ತು.. 

ಮರುದಿನ ಸಂಡೇ-ಭಾನುವಾರ. ಫ್ರೆಂಡ್ ಬಾ ಅಂದಿದ್ದ, ಅವನ ರೂಂ ಗೆ  ಹೋಗ್ಬೇಕು ಅಂತ ಬಸ್-ಸ್ಟಾಪ್ ನಲ್ಲಿ ಬಸ್ ಗಾಗಿ ಕಾಯ್ತಿದ್ದೆ., ಹಾವನೂರು ಸರ್ಕಲ್ ಹತ್ತಿರ. ಒಂದು ವೋಲ್ವೋ ಬಸ್ ಬಂತು, ಆದರೆ ಅದು ನವರಂಗ್ ಮೇಲೆ ಹೋಗಲ್ಲ. ನಾನು ಹೋಗಬೇಕಾಗಿರೋದು ಸುಬ್ರಮಣ್ಯ  ನಗರ. ಆ ಬಸ್ಸು, ನಾನು, ಸ್ವಲ್ಪ ಜನ, ಎಲ್ಲ  ಸ್ಟಾಪ್ ನಲ್ಲಿ ಇರ್ಬೇಕಾದ್ರೆ ದೂರದಿಂದ ಒಂದು ಹುಡುಗಿ ಓಡಿ ಬರೋ ಥರ ಇತ್ತು. 

ಬಹುಷಃ ಈ ಬಸ್ ಗಾಗೇ ಬರ್ತಾ ಇದಾಳೆ. ಕೈ ಸನ್ನೆ ಮಾಡ್ತಿದಾಳೆ.. ಬಸ್ ನಿಲ್ಸಿ ಅಂತ ಇರ್ಬೇಕು.. ಹೌದು! 

ಎರಡು ಸಾರಿ ಬಸ್ ನ ಬಾರಿಸಿ ನಿಲ್ಲಿಸ್ದೆ.. ಒಂದ್ ನಿಮಿಷ ಅಂತ ಕಂಡಕ್ಟರ್ ಗೆ ಕೈ ಮಾಡಿ. 

ಅರೆರೆ.. ಇದು ರಂಗೋಲಿ ಪಾರ್ಟಿ!!

ಅದೇ ರಂಗೋಲಿ ಹುಡುಗಿ ಇವಳು. ಓಡಿ ಬರ್ತಿದ್ಲು ಬಸ್ ಗಾಗಿ. ಇವತ್ತು ಇವಳು ಹಾಕಿದ್ದು ಸಲ್ವಾರ್-ಕಮೀಜ್. ನಿನ್ನೆಗಿಂತ ಜಾಸ್ತಿ ಅಂದವಾಗಿ ಕಾಣ್ತಿದಾಳೆ . ಅಥವಾ ಇದು ಆ "ಹುಡುಗೀರ ಎಫೆಕ್ಟ್ " ಇರಬೇಕು.  ಏನಾರಾ ಆಗ್ಲಿ,ಆ ಒದ್ದೆ ಕೂದಲು, ಗಾಳಿಯ ರಭಸಕ್ಕೆ ಮಯ್ಯಿಗೆ ಅಂಟಿರೋ ಸಲ್ವಾರ್, ಹಾರ್ತಿರೋ ಆ ಓಢನಿ.. ಒಂಥರಾ ಯಶ್ ಚೋಪ್ರ ಫಿಲಂ ನಲ್ಲಿ ಹಿರೋಯಿನ್ ಓಡಿ ಬರೋ ಹಾಗೆ.. ಅಥವಾ ನಮ್ಮ ಜಯಂತ್ ಕಾಯ್ಕಿಣಿ ಬರೆದಿರೋ ಒಂದು ರೋಮ್ಯಾಂಟಿಕ್ ಸಾಲು ರೋಡ್ ಅಲ್ಲಿ ಹಂಗೇ ತೇಲಿ ಬಂದಂಗೆ.

ಬಂದಳು ಬಸ್ ಹತ್ತಿರ, ನನ್ನೇ ನೋಡ್ತ ನಡೆದು. ಬಸ್ ಹತ್ತೇ ಬಿಟ್ಲು!

ಹತ್ತಿ ಮತ್ತೊಂದ್ ಸಾರಿ ನೋಡೋದಾ  ಕಿಡಕಿ ಇಂದ?? ಛೆ!! ಒಂದ್ thanks ನು ಹೇಳಿಲ್ಲ! ಮನಸಿನಲ್ಲಿ ಅನ್ಕೊಂಡೆ. 

ನೀನ್ ಮಾತ್ರ.. ರಂಗೋಲಿ ತುಳಿದು ಸಾರೀ ಕೇಳಿದ್ಯ? ಅಂತ ಅವ್ಳು ಮನಸಲ್ಲಿ ಅನ್ಕೊಂಡಿರ್ಬೋದು. 

ಹೌದು.. ಸ್ವಲ್ಪ ರೂಡ್ ಆಗೇ ನಡ್ಕೊಂಡಿದ್ದೆ ನಿನ್ನೆ.. ಸಾರೀ ಕೆಳ್ಬೋದಿತ್ತು ಅನ್ಕೊಂಡೆ. 

ಬಸ್ ಹೊಯ್ತು.. ಅವಳು ಹೊದ್ಲು.. ಕಿಡಕಿ ನೆ ನೋಡ್ತಿದ್ದೆ ನಾನು.. ಅವಳು ಮತ್ತೆ ನೋಡಲಿಲ್ಲ ನನ್ನ. 

ಸರಿ ನನ್ನ ಬಸ್ ನು ಬಂತು, ಹತ್ತಿದೆ. ಅವಳ ಬಗ್ಗೆ ನೆ ಯೋಚನೆ ಮಾಡ್ತಾ ಹೊರಟೆ . FM ಆನ್ ಮಾಡಿದ್ರೆ ಹಾಡು.. "ನಿನ್ನಿಂದಲೇ..ನಿನ್ನಿಂದಲೇ.. ಕನಸೊಂದು ಶುರುವಾಗಿದೆ.. ". ಅರ್ಧ youth ನ ಈ FM ನೋರೆ ಹಾಳು ಮಾಡಿದಾರೆ ಅನ್ನಿಸಿ ನಕ್ಕೆ.

ಇಷ್ಟಾದ ಮೇಲೆ ಅವಳು ಅಲ್ಲಿ ನಂಗೆ ದಿನ ಸಿಗೋಳು, ಮೊದಮೊದಲು ಬರಿ 
ಕಣ್ಣ-ಸಲಿಗೆ, ಅವಾಗೆಲ್ಲ ನಾನು ಅವರ ಮನೆ ಮುಂದೆನೆ ತಿರ್ಗಾಡ್ತಿದ್ದೆ ಅವಳಿಗೂ ಅನ್ನಿಸಿರತ್ತೆ ಇವ್ನು ನಮ್ಮ ಮನೆ ಸುತ್ತ ನೆ ಚಕ್ಕರ್ ಹಾಕೊಂಡು ಇದಾನೆ ಅಂತ. IT ಕಂಪನಿ ಲಿ ಕೆಲಸ ಮಾಡ್ತಿದ್ದ ನಾನು ಕಥೆ-ಕವನಗಳಲ್ಲಿ ಆಸಕ್ತಿ ಹೊಂದಿದ್ದೆ, ಆ ಒಂದೇ ಒಂದು ವಾರದಲ್ಲಿ ಅವಳ ಮೇಲೆ ಅದೆಷ್ಟೋ ಕವನಗಳನ ಗೀಚಿದ್ದು ಉಂಟು. 

ಒಂದ್ ವಾರ ಕಳೆದಿತ್ತು ಬಸ್-ಸ್ಟಾಪ್ ಘಟನೆ ಆಗಿ. ಮತ್ತೆ ಸಿಕ್ಲು ಅವ್ಳು . ಈ ಸಾರಿ ಸುಬ್ರಮಣ್ಯ ದೇವಸ್ಥಾನದ ಮುಂದೆ. ನನ್ನ ಫ್ರೆಂಡ್ಸ್ ಕರ್ಕೊಂಡು ಹೋಗಿದ್ರು ನನ್ನ.. ನಾನು ದೇವರಲ್ಲಿ ಅಷ್ಟಾಗಿ ನಂಬಿಕೆ ಇಲ್ಲದಿರೋ ಕಾರಣ ಹೊರಗಡೆ ನೆ ಕೂತಿದ್ದೆ, ಮೊಬೈಲ್ ಹಿಡ್ಕೊಂಡು . ದೇವರು ಎಲ್ಲ ಕಡೆನು ಇರ್ತಾನೆ ಅಂತ ಪ್ರಹ್ಲಾದ ಹಿರಣ್ಯಕಷ್ಯಪು ಗೆ ಹೇಳಿದಾಗ ಉಗ್ರ ನರಸಿಂಹ ಕಂಬದಿಂದ ನೆ ಹೊರಗಡೆ ಬಂದಿದ್ದ ಅಂತ ಕಥೆ ಹೇಳಿದ ನಮ್ಮ ಅಜ್ಜಿನೆ ದೇವರನ್ನ ದೇವಸ್ಥಾನದಲ್ಲಿ ಹುಡುಕುತ್ತಾಳೆ. ಜನ ದೇವರು ಎಲ್ಲಡೆ ಇರ್ತಾನೆ ಅಂತ ಹೇಳಿನೂ ಗುಡಿಲೇ ಪೂಜೆ ಮಾಡಿಸ್ತಾರೆ, ಪೂಜಾರಿನೇ ಮಿಡ್ಲ್ ಮ್ಯಾನ್ ಥರ ನೋಡ್ತಾರೆ. ನನ್ನ ಪ್ರಕಾರ ದೇವರು ನಮ್ಮಲೇ ಇರ್ತಾನೆ, ಒಳ್ಳೆ ಕೆಲ್ಸಗಲ್ನ ಮಾಡಿದ್ರೆ ನಾವೇ ದೇವರು, ಕೆಟ್ಟ ಕೆಲಸ ಮಾಡಿದ್ರೆ ರಾಕ್ಷಸರು. ಶಿವಾನೆ ಹೇಳಿಲ್ವೆ 'ಹರ ಹರ ಮಹಾದೇವ್' ಅಂತ. ಎಲ್ಲರೂ ಧರ್ಮ ಮಾಡಿದ್ರೆ ಮಹಾದೇವರೆ. ಪರಮಾತ್ಮ ಒಬ್ಬನೇ ಸತ್ಯ. ಇದ್ನೆಲ್ಲ ಸ್ನೇಹಿತರ ಬಳಿ ಹೇಳಿದ್ರೆ ಒದೆ ಬೀಳತ್ತೆ, ಅದ್ಕೆ ನಮಗೆ ಇರ್ಲಿ ನಮ್ಮ ಫಿಲಾಸಫಿ  ಅಂತ ಹೊರಗಡೆ ಕೂತಿದ್ದೆ. ಹೀಗಿರುವಾಗ ಅಲ್ಲಿ ಸಾಕ್ಷಾತ್ ದೇವಿನೆ ಬಂದಳು ಮುಂದೆ.. ಅವರ ಅಮ್ಮನ ಜೊತೆ. 

ಅದೇ ರಂಗೋಲಿ ಹುಡುಗಿ.. ದೇವಸ್ಥಾನದ ಹೊರಗೆ ಇರೋ ನಲ್ಲಿ ನೀರಲ್ಲಿ ಅಂಗಾಲನ್ನು ತೊಳೆದ ರೀತಿ ಅವಳ ಮುಗ್ಧತನ ಕಂಡಿತ್ತು ನನಗೆ. ಕಾಲು ತೊಳೆದು ಅವರ ಅಮ್ಮನ ಹುಡುಕುತ್ತಿತ್ತು ಕಣ್ಣು, ಅಷ್ಟರಲ್ಲಿ ಅವರ ಅಮ್ಮ ಕೂಗಿದ್ರು.. 

ದಿವ್ಯಾ.. ಇಲ್ಲಿ ಕಣೇ.. 

ದಿವ್ಯ!! ಹೌದು.. ಹೆಸರು ದಿವ್ಯ. ಆವತ್ತು ಅವ್ರ ಅಪ್ಪ ಕರೆದಿದ್ರು, ನೆನಪೇ ಇರ್ಲಿಲ್ಲ, ದಡ್ಡ ದಡ್ಡ ಅಂತ ನಂಗೆ ನಾನೇ ಅನ್ಕೊಂಡೆ. ಒಂದು ಕ್ಷಣ ದಿವ್ಯ-ವಾಗೆ ಕಾಣಿಸ್ತು ಯೆಲ್ಲ. ನೋಡಿ..ಗುಡಿ ಮುಂದಿರೋ ಮಲ್ಲಿಗೆ ಬಳ್ಳಿ ಅಲುಗಾಡಿತು ಒಂದಷ್ಟು ಹೂವು ಬಿತ್ತು ಕೆಳಗೆ.. ಅವಳು ಬರುವ ದಾರಿಯಲ್ಲಿ. ಪೂಜಾರಿ ಇಷ್ಟೊತ್ತು ಸಿಟ್ಟಿoದಾನೆ ಮಂತ್ರ ಅಂತಿದ್ದ, ಈಗ ನಗ್ತಿದಾನೆ.  ಘಂಟೆ ಶಬ್ದ ಇಷ್ಟೊತ್ತು ಕಿರಿಕಿರಿ ಮಾಡ್ತಿತ್ತು ಈಗ ಎಷ್ಟು smooth ಅನ್ನಿಸ್ತಿದೆ. ನನ್ನ ಫ್ರೆಂಡ್ಸ್ ದೇವಸ್ಥಾನದಿಂದ ಒಮ್ಮೆ ಮಾಯಾ ಆಗೋದ್ರು, ಅವರ ಅಮ್ಮ ನು ಕಾಣ್ತಿಲ್ಲ. ದೈವಿಕತೆ ಈಗ ತಾನೇ ಇಲ್ಲಿ ಎದ್ದು ಬಂದಂಗೆ.. ಎಲ್ಲವೂ ದಿವ್ಯ!! ಈಗ ಬರಿ ಅವಳೇ ಅಲ್ಲಿ. 

ಒಬ್ಬ ಸ್ನೇಹಿತ ಒಳಗಿಂದ ಕೂಗಿದ.. ಲೋ ಶರಣ!, ತೀರ್ಥ ನಾದ್ರೂ ತಗೋ ಬಾರೊಲೊ. ಯಾವಾಗ್ ಬಂದ್ರು ಇದೆ ನಿಂದು, ಗುಡಿಗೆ ಬರ್ತೀಯ ಮಾತ್ರ ಒಳಗೆ ಬರಲ್ಲ.. ಲೇ ನಿನ್ನ!! ಸುಮ್ನಿರೋ ಅಂತ ಒಳಗಡೆ ಒಡಿದೆ. ಆ ಸುಬ್ರಮಣ್ಯ ಸ್ವಾಮಿ ಆವತ್ತು ನಾನ್ ಒಳಗಡೆ ಬಂದಿದ್ದಕ್ಕೆ ಖುಷಿ ಆದ್ನೋ ಅಥವಾ ನನ್ನ ಮಗನೆ ಹುಡುಗಿ ಗೋಸ್ಕರ ಡವ್ ಮಾಡ್ತೀಯ..ಇದೆ ನಿಂಗೆ ತಾಳು ಅಂತ ಸ್ಕೆಚ್ ಹಾಕಿದನೋ ಗೊತ್ತಿಲ್ಲ. ಒಳಗಡೆ ಹೋದೆ, ಅಷ್ಟರಲ್ಲಿ ಆ ನನ್ನ ಮಗ ನನ್ನ ಫ್ರೆಂಡ್ ಹೇಳಿದ್ದು ಕೇಳಿ ಆಗ್ಲೇ ದಿವ್ಯ ಒಂದ್ಸಾರಿ ನನ್ನ ಮುಖ ನೋಡಿ ನಕ್ಕಿದ್ಲು. ಛೆ.. ಈ ಫ್ರೆಂಡ್ಸ್ ಯಾಕಾದ್ರು ಇರ್ತಾರಪ್ಪ ಅನ್ನಿಸ್ತು, ಆಮೇಲೆ ಒಳ್ಳೇದೆ ಆಯ್ತು ಇದೆ ನೆಪದಲ್ಲಿ ಅವ್ಳು ನನ್ನ ನೋಡಿ ನಕ್ಕಾರು ನಕ್ಕಲು ಅಂತ ಅನ್ನಿಸಿ ಖುಷಿ ಆದೆ. ಅವಳು ದೇವರಿಗೆ ಕೈ ಮುಗಿದು ನಿಂತ ರೀತಿ ನೋಡಿ ದೇವರು ಎಷ್ಟು ಕಟೋರನಪ್ಪ ಅನ್ನಿಸ್ತು, ನಾನ್ ಆಗಿದ್ರೆ ಪ್ರತ್ಯಕ್ಷ ಆಗಿ ಅಲ್ಲೇ ತಗೋಮಾ ದಿವ್ಯ ನಿನಗೇನೂ ಬೇಕು ಅಂದುಬಿಡ್ತಿದ್ದೇ. ಅಷ್ಟು ಪ್ರಾಮಾಣಿಕ ಆ ಭಕ್ತಿ. ಪೂಜಾರಿ ಕೊಟ್ಟ ಹೂವು ತೀರ್ಥ ನ ತಗೊಂಡು ಮತ್ತೊಮ್ಮೆ ಕೈ ಮುಗಿದು ಹೊರಟಳು ದಿವ್ಯ. ತಿರುಗಿ ನೋಡಿದಂಗಾಯ್ತು, ನನ್ನ ನೋಡಿದಳಾ?? ಹೌದು ನನ್ನೆ. ಇಲ್ಲ ದೇವರನ್ನ ನೋಡಿರ್ಬೇಕು. ಇಲ್ಲ ನನ್ನೇ. confusion!. ಅದೇ ತಾನೇ ನಮಗೆ ಕಡೆಗೆ ಉಳಿದಿರೋದು ಹುಡುಗೀರ ಹಿಂದೆ ಬಿದ್ದರೆ. So, from that day i was a confused fellow. ಇಲ್ಲಿ ನಿಜವಾಗ್ಲೂ ಏನಾದ್ರು ಶುರು ಆಗಿದೆಯ ಅಥವಾ ಅದೇ ಹಳೆ infatuation ನಾ. ಇರ್ಲಿ. ಒಂದಷ್ಟು ದಿನ ಹೀಗೆ track ಮೇಲಿರೋಣ. ಆಮೇಲೆ ನೋಡೋಣ ಅನ್ಕೊಂಡೆ. 

ಅಪ್ಪಾ!! track ಅಂದ್ರೆ ಏನಪ್ಪಾ ರೈಲ್ವೆ  ಟ್ರ್ಯಾಕ್ ಆ? ಅದು ಗುಡಿಯಲ್ಲಿ ಹೇಗೆ ಬಂತಪ್ಪಾ? 

ನನ್ನ ಮಗಳು!!. ನಾನು ೧೦ ವರ್ಷದ ಹಿಂದೆ ಬರೆದಿಟ್ಟಿರೋ ಕಥೆ ನ ಓದ್ತಾ ಇದಾಳೆ. ಮೇಲೆ ಇರೋ ರಂಗೋಲಿ ಕಥೆ. ಅವಳಿಗೆ ಓದೋಕೆ ಬಂದಾಗಿನಿಂದ  ಹೀಗೆ.. ನನ್ನ ಹಳೆ ಬರಹ ಗಳನ್ನ ಹುಡ್ಕಿ ಹುಡ್ಕಿ ಓದ್ತಾಳೆ. 

ದಿಶಾ!! ಅದನ್ನ ಓದಬಾರದು.. ಎಲ್ಲಿ ಕೊಡು ಅದ್ನ. ಅಂತ ಆ ಪೇಪರ್ ಗಳನ್ನ ಇಸ್ಕೊಂಡೆ .. ಕಸ್ಕೊಂಡೆ actually.

ಅಪ್ಪಾ.. ಅದು ಅಮ್ಮ ಅಲ್ವಾ ಗುಡಿಯಲ್ಲಿ.. ಗೊತ್ತಾಯ್ತು ನಂಗೆ. 

'ಹಾಂ ದಿಶಾ.. ಅದು ಅಮ್ಮಾನೇ..' ಅಂದೆ 

ಇಷ್ಟೆಲ್ಲಾ ಹಾಳು-ಮೂಳು ಬರಿತಿಯ ನಮ್ಮ ಪ್ರೀತಿ ಬಗ್ಗೆ ಏನಾದ್ರೂ ಬರಿಬಾರ್ದ? ನಾವು ಭೇಟಿ ಆಗಿದ್ದು, ಪ್ರೀತಿ ಆಗಿದ್ದು, ನೀನು ಬಂದು ನಮ್ಮಪ್ಪನ್ನ ಕಾಲು ಹಿಡಿದು ನನ್ನ ಬೇಡಿದ್ದು ಎಲ್ಲ ಬರಿಯೋ ಶರಣ್ ಪ್ಲೀಸ್ ಅಂತ ಕೇಳಿದ್ಲು ದಿವ್ಯ . ಮೇಲೆ ಇರೋ ಕಥೆ ಅದೇ. 

ದಿಶಾ ಕೈಗೆ ಈ ಹಳೆ ಕಥೆ ಹೇಗೆ ಸಿಕ್ತೋ ಗೊತ್ತಿಲ್ಲ.. 

ಅಪ್ಪಾ.. ಪ್ಲೀಸ್ ಕೊಡಪ್ಪ.. ಕಥೇನ ಪೂರ್ತಿ ಓದಬೇಕು ಅಂದ್ಲು ದಿಶಾ. 

ಬೇಡ ದಿಶಾ.. ಈಗ ಲೇಟ್ ಆಯ್ತು ಹೋಗಿ ಊಟ ಮಾಡಿ ಮಲಗಮ್ಮ.. 

'ಏ.. ಇವಳನ್ನ ಮಲಗಿಸಬಾರದೆನೇ..' ಅಂದೆ. 

ದಿಶಾ ಗೆ ಈಗ ಎಂಟು ವರ್ಶ. ನಮ್ಮಿಬ್ಬರ ಪ್ರೀತಿಯ ಮಗಳು. ಶರಣ ಮತ್ತೆ ದಿವ್ಯ ಎರಡು ಬರಬೇಕು ಹೆಸರಲ್ಲಿ, ಅವಳು ನಮ್ಮ ಪ್ರೀತಿಯ ಸಂಕೇತ ಅಂತ ಏನೇನೋ ಯೋಚನೆ ಮಾಡಿ ದಿಶಾ ಗೆ ಹೆಸರು ಇಟ್ಟಿದ್ದು ದಿವ್ಯ ನೇ. ದಿವ್ಯ ಒಳಗಿನ 'ದಿ' ಮತ್ತು ಶರಣ ಒಳಗಿನ 'ಶ' ಎರಡು ಬರುತ್ತೆ  'ದಿಶಾ' ದಲ್ಲಿ. ಪ್ರತಿ ಸಾರಿ ದಿಶನ್ನ ಕರೆದಾಗ ನಿಂಗೆ ನನ್ನ ನೆನಪು ಆಗ್ಬೇಕು ಅಂತಿದ್ಲು. 
ಅಲ್ಲ ಕಣೇ..  ಮಗ ಆದ್ರೆ ಏನ್ ಹೆಸರು ಅಂದಿದ್ದಕ್ಕೆ 
ಇಲ್ಲ.. ನಮಗೆ ಮಗಳೇ ಆಗೋದು.. she will be an angel.  ಮಗ ಆದ್ರೆ ನಿಮ್ಮ ಥರ ತರ್ಲೇನೆ ಹುಟ್ಟೋದು ನಂಗೆ ನೀವೊಬ್ಬ ತರ್ಲೆ ಸಾಕು, ಇನ್ನೊಬ್ಬನ್ನ ಹಿಡಿಯೋಕೆ ಆಗಲ್ಲ ಅಂದಿದ್ಲು. 

ದಿಶಾ ಹತ್ರ ಇಸ್ಕೊಂಡ ಪೇಪರ್ ಗಳನ್ನ ಮತ್ತೆ ಓದಬೇಕು ಅನ್ನಿಸ್ತು ನಂಗೆ.. ಒದಿದೆ.. 

ಆ ದಿನದಿಂದ ನಾನು ಪರ್ಮನೆಂಟ್ ಭಕ್ತ ಸುಬ್ರಮಣ್ಯ ನಿಗೆ. ಕೈ ಮುಗಿಲಿಲ್ಲ ಅಂದ್ರು ಡೈಲಿ ಗುಡಿಗೆ ಹೋಗ್ತಿದ್ದೆ. ಅವಳೂ ದಿನ ಬರ್ತಿದ್ದ್ಲು. ದಿನ ಅದೇ, ನೋಡೋದು, ನಗೋದು ಅವಳು ನಗಲಿ ಅಂತಾನೆ ನಾನು ಏನೇನೋ ಮಾಡೋದು. ನನ್ನ ಕಪಿಚೇಷ್ಟೆ ಗಳು ಇಷ್ಟ ಅನ್ನೋ ಥರ ಅವಳು  ವಾರೆಗಣ್ಣಿನಿಂದ ನೋಡಿ ನಗ್ತಿದ್ಲು. ಒಂದು ದಿನ ದೇವಸ್ಥಾನದಲ್ಲೇ ಅವಳ ಹತ್ರ ಹೋಗಿ ಮಾತಾಡಿಸಿದೆ.. ಅವಳು ಮನೆಗೆ ಹೋಗ್ತಿರ್ಬೇಕಾದ್ರೆ.. 

Excuse me.. Divya..

ಒಮ್ಮೆ ತಿರುಗಿ ನೋಡಿ.. 'ಯೆಸ್.. ಹೇಳಿ' ಅಂದ್ಲು. 

'ಅದೇ.. ನಾನು ಶರಣ್ ಅಂತ.. ' ಶರಣಬಸವರಾಜು ಅಂತ ಪೂರ್ತಿ ಹೆಸರು ಯಾಕೆ ಹೇಳಲಿಲ್ವೋ.. 

' ಹಾಂ' ಅಂದ್ಲು. 

ಬರಿ 'ಹಾಂ' ನಾ?? ಎಷ್ಟು ಸೊಕ್ಕು ಇವಳಿಗೆ ಅನ್ಕೊಂಡೆ. 

ಮತ್ತೆ ಹೇಳಿದೆ ' ನಮ್ಮ ಮನೆ ಇಲ್ಲೇ.. ದೇವಸ್ಥಾನದ ಹಿಂದೆ' 

ಅದಕ್ಕೆ ನಾನ್ ಏನ್ ಮಾಡ್ಲಿ ಅನ್ನೋ ಥರ ನೋಡಿದಳು..

'ನಿಮ್ಮನೆ ನೂ ಇಲ್ಲೇ ಅಲ್ವಾ?..' 

ಥೂ ಏನೇನೋ ಹೇಳ್ತಾ ಇದೀನಿ.. ಇರಲಿ.. ಮತ್ತೆ ಚಾನ್ಸ್ ಸಿಗುತ್ತೋ ಇಲ್ವೋ.. ಇಗಲೇ ಎಲ್ಲ ಹೇಳಿಬಿಡ್ತೀನಿ, ದಿನ ಸಿಗ್ತೀವಿ, ಪರಿಚಯ ಆದಂತಿದೆ. ಏನು ಆಗಲ್ಲ, ಅಂತ ಧೈರ್ಯ ತಗೊಂಡು ಡೈರೆಕ್ಟ್ ಆಗೇ ಮಾತಾಡಿದೆ.

'ದಿವ್ಯ, ನಾನು ಈ ದೇವಸ್ಥಾನಕ್ಕೆ ಬರೋದು ಬರಿ ನಿಮ್ಮನ್ನ ನೋಡೋಕೆನೆ, ಎಲ್ಲೇ ಹೋಗಬೇಕಾದರೂ ನಿಮ್ಮ ಮನೆ ಮುಂದೇನೆ ಹಾದು ಹೊಗ್ತಿನಿ.  ರಂಗೋಲಿ ನ ತುಂಬಾ ಚೆನ್ನಾಗಿ ಹಾಕ್ತಿರ.. ಆಮೇಲೆ.. ಹಾಂ.. ಆವತ್ತು ನೀವು ಹಾಕಿದ್ದ ರಂಗೋಲಿ ನ ತುಳಿದಿದ್ದಕ್ಕೆ sorry ಅಂದೇ' ಮುಂದೆ ಏನು ಹೇಳೋಕು ಧೈರ್ಯ ಸಾಲಲಿಲ್ಲ.

ನನ್ನೇ ನೋಡುತ್ತಾ.. 'ಒಂದು sorry ಹೇಳೋಕೆ ಇಷ್ಟು ದಿನ ಬೇಕಾಯ್ತ? ಕೊನೆಗೂ ಹೇಳಿದ್ಯಲ್ಲ! It's Ok' ಅಂದು ಹೊರಟೇ ಬಿಡೋದ??

ಅಲ್ಲಾ.. ಸಾರೀ ಕಿನ ಮೊದಲು ಹೇಳಿದ್ದು ಇವಳಿಗೆ ಏನು ಕೇಳಲೇ ಇಲ್ವಾ? ಬರಿ ಸಾರೀ ಗಷ್ಟೇ ಉತ್ತರ ಹೇಳಿ ಹೊಗ್ತಾಳಲ್ಲಾ.. ಅಂತ ಯೋಚನೆ ಮಾಡ್ತಾ ನಿಂತೆ . 

ಎರಡು ಹೆಜ್ಜೆ ಮುಂದೆ ಹೋಗಿ.. ದಿವ್ಯ ಮತ್ತೆ ತಿರುಗಿ ನೋಡಿದಳು..

'ಅಂದಹಾಗೆ ಆವತ್ತು ಬಸ್ ನ ನಿಲ್ಲಿಸಿದ್ದಕ್ಕೆ Thanks' ಅಂತ ಅಂದು ನಕ್ಲು. 

ನಕ್ಲಾ?? ಹಾಗಾದ್ರೆ ನಾನು ಹೇಳಿದ್ದಕ್ಕೆ ಏನು ಅನ್ಕೊಂಡಿಲ್ಲಾ.. ಅಂದ್ರೆ ಅವಳಿಗೆ ಏನು ಪ್ರಾಬ್ಲಮ್ ಇಲ್ವಾ?.

ಮಳೆ ಇಲ್ಲದೇನೆ ಕಾಮನಬಿಲ್ಲು ಕಾಣಿಸ್ತು ರೋಡ್ ಅಲ್ಲಿ. ಒಂದ್ಸಾರಿ ಸುಬ್ರಮಣ್ಯ ನ ನೋಡಿ, ಚಪ್ಪಲಿ ನೂ ಹಾಕದೆ  ಹೋದೆ ಮನೆಗೆ. ಆವತ್ತು ಫುಲ್ ಖುಶಿ. ಒಂದು ತಿಂಗಳಿನಿಂದ ಅನ್ಕೊಂಡಿರೋದನ್ನ ಆವತ್ತು ಮಾಡಿದ್ದೆ. ಅವಳನ್ನ ಮಾತದಡಿಸಿದ್ದೆ (ಮತ್ತೆ ). 

ಮರುದಿನ ಬೆಳಿಗ್ಗೆ ಮತ್ತೆ ನಾನು ಗುಡಿ ಮುಂದೆ ಹಾಜರ್!!

ಅವಳು ಬಂದ್ಲು, ನೋಡಿದ್ಲು, ನಕ್ಳು.. ನಾನು ಅವಳನ್ನ್ನೇ ನೋಡ್ತಾ ಆರಾಧನೆ ಮಾಡ್ತಿದ್ದೆ. ಆ ದೇವರು ಎಷ್ಟು ಜೆಲಸ್ ಆಗಿರಬೇಡ ನನ್ನ ಆರಾಧನೆ ನೋಡಿ . ಏನನ್ನೋ ಹುಡುಕುತ್ತಿರುವ ಹಾಗೆ ಕಂಡಳು, ಜೀವ ತಡಿಬೇಕಲ್ಲ ನಮ್ದು, ಮೆಲ್ಲಕೆ  ಹೋದೆ.. 

ಸ್ವಲ್ಪ ಹತ್ತಿರ ಹೋಗಿ 'ದಿವ್ಯ, any problem?' ಅಂದೆ. 

'Hey.. Sharan!.. ಏನಿಲ್ಲ' ಅಂದ್ಲು..

'ಪರವಾಗಿಲ್ಲ ಹೇಳು ದಿವ್ಯ, ಐ ಕ್ಯಾನ್ ಹೆಲ್ಪ್ ಯು ' ಅಂದೇ..

'ಚಪ್ಪ್ಲಿ!!' ಅಂತ ಒಂದು 10 percent sad face ನ ಮಾಡ್ಕೊಂಡು ಹೇಳಿದಳು ..

ಅರೆರೆರೇ ಪಾಪ .. ಆ ಮುಖ ನೋಡಬೇಕಿತ್ತು .. ಚಿಕ್ಕ ಮಕ್ಕಳು ಏನಾದ್ರು ಕಳಕೊಂಡಾಗ ಮಾಡೋಥರ . ಮಗು ಏನನ್ನಾದರೂ ಕಳಕೊಂಡ್ರೆ  ಅವ್ರ ಅಪ್ಪ ಅಮ್ಮನ ಹತ್ರ ಅಷ್ಟೇ ಕೇಳುತ್ತೆ, ಇವಳು ನಂಗೆ ಕೇಳಿದ್ದು ಹಂಗೆ ಅನ್ನಿಸ್ತು ನಂಗೆ. ಅವಳು ಕೇಳಿದ್ದು ಚಪ್ಪ್ಲಿ ಆದ್ರೂ 'ಚಪ್ಪ್ಲಿ' ಅನ್ನೋ ಪದ ಬಿಟ್ಟರೆ ಎಲ್ಲ ಸ್ವೀಟ್ ಆಗೇ ಕೇಳಿಸ್ತು. 

'ಒಹ್! ಕಳೆದೋಯ್ತಾ.. ಇಲ್ಲೇ  ಇರ್ಬೇಕು ನಿಲ್ಲು' ಅಂತ ಹುಡುಕೋಕೆ ಸ್ಟಾರ್ಟ್ ಮಾಡಿದೆ. 

'Thank youuuu'  ಅಂತ ತೀರಾ ಪ್ರೀತಿ ಇಂದ ನೇ ಅಂದು ಪಕ್ಕ ನಿಂತಳು.. 

ಚಪ್ಪ್ಲಿ ಹುಡುಕೋ ಕೆಲಸಾನೆ ಹುಡುಗರಿಗೆ, ಹುಡುಗೀರ ಹಿಂದೆ ಬಿದ್ರೆ. ಈ ಹುಡುಗೀರಿಗು ಚಪ್ಪ್ಲಿ ಗು ಏನೋ ನಂಟು ಇದೆ ರೀ ಅಂತ  ಮುಂಗಾರು ಮಳೇಲಿ ಗಣೇಶ ಹೇಳಿದ್ದ ನೆನಪು. ನನ್ನ ಮ್ಯಾಟರ್ ನಲ್ಲಿ ಹುಡುಕೋ ಕೆಲಸ ಚಪ್ಪಲಿ ನ, ಸಧ್ಯ ಅದರಿಂದ ಏಟು ತಿನ್ನೋದಲ್ಲ ಅನ್ನೋದೇ ಸಮಾಧಾನ. 

ಚಪ್ಪ್ಲಿ ಸಿಗಲಿಲ್ಲ.. 

'ಶರಣ್, ಇರಲಿ ಬಿಡು.. ಕಳೆದೋಗಿರಬೇಕು'

'ಅಲ್ಲಾ ದಿವ್ಯ.. ಒಂದ್ ನಿಮಿಷ ಸಿಕ್ಕಿಬಿಡುತ್ತೆ' 

'ಇರ್ಲಿ ಬಿಡೋ ಲೇಟ್ ಆಯ್ತು, ಹೋಗ್ತೀನಿ ಅಪ್ಪ ಕಾಯ್ತಿರ್ತಾರೆ'

'ಒಂದ್ ಕೆಲಸ ಮಾಡು ಹಾಗಾದ್ರೆ ನನ್ನ sandals ಹಾಕೊಂಡ್ ಹೋಗು ಮನೆಗೆ, ಬರಿಗಾಲಲ್ಲಿ ಹೋಗಬೇಡ' ಅಂದೇ. 

'ಹುo.. ಆದ್ರೆ ವಾಪಾಸ್ ಹೇಗೆ ಕೊಡೋದು ನಿಂಗೆ '

'ನಾಳೆ ಹೇಗಾದ್ರು ಮತ್ತೆ ಬರ್ತಿಯಲ್ಲ ದೇವಸ್ಥಾನಕ್ಕೆ, ಅವಾಗ ನನ್ನ ನಂಬರ್ ಗೆ ಮಿಸ್ ಕಾಲ್ ಕೊಡು . ನಾನೇ ಬಂದು ಇಸ್ಕೊಂಡು ಹೋಗ್ತಿನಿ'

Engineering  ಮಾಡಿದೋರು ನಾವು, ಹುಡುಗೀರ ಫೋನ್ ನಂಬರ್ ನ ಹೇಗೆ ಇಸ್ಕೊಳೋದು ಅಂತ ಗೊತ್ತಿಲ್ಲದೇ ಇದ್ರೆ ಹೇಗೆ. ನಾನು ಅಂದಿದ್ದನ್ನ ಕೇಳಿ ನಕ್ಳು .. ಆದ್ರೆ ನಂಬರ್ ನು ಕೊಟ್ಳು.. 8884244469. ಫೀಡ್ ಮಾಡ್ಕೊಂಡೆ ನಂಬರ್ ನ, ಮೆಸೇಜ್ ಹಾಕ್ತೀನಿ ಅಂದೇ. ಓಕೆ ಅಂತ ನನ್ನ sandals ನಾ ಹಾಕೊಂಡು ಹೊರಟಳು. 

ಅದೇನು ಪುಣ್ಯ ಮಾಡಿತ್ತೋ ಆ ನನ್ನ ಚಪ್ಪ್ಲಿಆ ಪಾದ ನ ಮುಟ್ಟೋಕೆ. ಅಷ್ಟು ಮೃದು ಪಾದ ನ ಸೋಕಿ ಧನ್ಯ ಆಗೋಯ್ತು ಆವತ್ತು . ಇನ್ಮೇಲೆ ಆ ಚಪ್ಪ್ಲಿ ನ ಕಾಲಲ್ಲಿ ಮುಟ್ಟಿದರೆ ಕೇಳು ನಾನು. Laminate ಮಾಡಿಸಿ ಇಟ್ಟುಬಿಡೋದೇ. 

'Hi Divya, It's time now.. Subramanya kaayta irtaane' ಅಂತ ಅವಳ ನಂಬರ್ ಗೆ ಮೆಸೇಜ್ ಹಾಕಿದೆ ಮರುದಿನ ಅದೇ ಟೈಮ್ ಗೆ. 

'On d way :)' ಉತ್ತರ ಬಂತು. 

ಅವಳ reply ನಲ್ಲಿರೋ ಆ smiley ಜಾಸ್ತಿ realistic ಆಗಿ ಕಾಣಿಸ್ತು . ಅವಳ ನಗು ಕಂಡಿತು ಅದರಲ್ಲಿ. ಮೊದಲೇ ಕವಿ, ಕೇಳ್ಬೇಕಾ.. ಅಲ್ಲೇ ನಿಂತಲ್ಲೇ ಎರಡು ಸಾಲು ಬರೆದೆ. 

ನಿನ್ನ ಕೆನ್ನೆಯ ದಿಣ್ಣೆ ನಗುವಿನ ಮನೆ 
ನೀ ನಕ್ಕರೆ ಸಾಕು ಮಗುವೆ ಕಣೆ.. 

Yes!! ಅವಳು ನಕ್ಕಾಗ ಗುಳಿ ಬೀಳ್ತಿತ್ತು. ತುಂಬಾ familiar ಅನ್ನೋ ಥರ ಇತ್ತು ಆ ನಗು. 'ಬಂಧನ' ಫಿಲಂ ನಲ್ಲಿ ಸುಹಾಸಿನಿ ನಕ್ಕಂಗೆ.

ಚಪ್ಪಲಿ ನ ಕವರ್ ನಲ್ಲಿ ಹಾಕೊಂಡು ತಗೊಂಡ್ ಬಂದ್ಲು. 

'Thanks for this, You know what.. ಅಪ್ಪ noticed these sandals. ಏನಮ್ಮ ಚಪ್ಪಲಿ ಬದಲಾಗಿರೋ ಥರ ಇದೆ' ಅಂತಂದ್ರು. 

ನಾನು 'ಹೌದಾ??, ನೀನ್ ಏನ್ ಹೇಳಿದೆ ' ಅಂದೆ ಸ್ವಲ್ಪ curious ಆಗಿ. 

'ನಾನಾ? ನಿನ್ನೆ ಆಗಿದ್ದನ್ನೆಲ್ಲ ಹೇಳಿದೆ, So, now he knows you!' ಅಂತ ತೀರ ಪೋಲಿ ನಗು ನಗ್ತಾ ಹೇಳಿದಳು.

ನಕ್ಕಂಗೆ ಮಾಡಿದೆ ನಾನು.. ಇನ್ನು ಏನು ಶುರು ನೆ ಆಗಿಲ್ಲ ಆಗ್ಲೇ ಅಪ್ಪ ಬಂದರಲ್ಲಪ್ಪ ಅನ್ಕೊಂಡೆ .  

ಮುಂದುವರೆಯುತ್ತದೆ.. . .    

3 comments:

  1. Anonymous15 June

    Bhat alla. Aadare aa rangige beleyodralli en doubt illa... Guruprasaad alla. Aadare evanalliro kathegaar en kammi illa... Shaaradeya eshtane sutano gottilla, aadare kannadiga nija, Ee nimma "Shokiya Kanasiga"...!!!

    ReplyDelete
  2. Deepak Naik: Tumba dodda maryaade. Bareyoru enannoo baribodu, aadare adanna odoru doddoru. Naavu melina padagalige runi.

    ReplyDelete
  3. Kasturi channel nalli "moun maatadag" program barutte, manasina bhavanegalannu real aagi mudiso kathe. nimge help aagabahudu nimma ee kathe complete madoke....:) chennagittu....!!! kadak contunue madu... all the best...:)

    ReplyDelete

ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...

ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು,...