Thursday, December 10, 2015

ಇವತ್ತಿಗಿಷ್ಟು



ಕನಸುಗಳು:

ಊರುಗಳನು ಊರುಗುಳನು
ಹುಟ್ಟಿಂದಲೇ ಹೊದ್ದು ನಿಂತು
ಹೆಗಲ ನೋವಿಗೊಂದು, ಬಗಲ ಕಾವಿಗೊಂದರಂತೆ
ದಿನಗಳನ್ನು ರಾತ್ರಿಗಳಲ್ಲಿ ಸುತ್ತುತಿರುವೆ

ಆಗಲಿಲ್ಲಗಳ ಕೊರೆವಿಗೊಂದು
ಆಗಲಿಕ್ಕಿಲ್ಲಗಳ ಅಸಡ್ದೆಗೊಂದರಂತೆ
ಕೆಲಗಳನ್ನು ಕೆಲಗಳಲ್ಲಿ ಬಚ್ಚುತಿರುವೆ

ಆಗೊಮ್ಮೆ ಈಗೊಮ್ಮೆ ನೆನಪಾದಾಗ
ಹೀಗೊಮ್ಮೆ  ಹಾಗೊಮ್ಮೆ ಮರೆತುಬಿಡುವೆ.


ವಾಂತಿ :
ಹೆಗಲ ನೋವು = Commitments (EMI, ಅದು, ಅವರಪ್ಪ ) ,
ಬಗಲ ಕಾವು = ಆಸೆಗಳು (ಮದುವೆ, ಮಡದಿ ಇತ್ತ್ಯಾದಿ)


ಪ್ರೀತಿಗಳು: 

ಒಂದಷ್ಟು ರಾತ್ರಿಗಳ ಕೊಡು
ಚುಕ್ಕಿಗಳ ಎಣಿಸಿ ಲೆಕ್ಕ ಒಪ್ಪಿಸುವೆ
ದಿನಕ್ಕಿಷ್ಟು smile-u ಗಳ ಬಿಡು
ಒಂದೊಂದಾಗಿ ಬಾಚಿ ಕೂಡಿಡುವೆ
ನೀನಿದ್ದಷ್ಟೇ ದಿನ ದಿನಗಳೆಂದು ಬಾಳಿ ಬಿಡಲು,
ನೀನಿಲ್ಲದ್ದೆಲ್ಲ ರಾತ್ರಿಗಳ ಕತ್ತಲು
ಬಂದಷ್ಟೇ ದಿನ ಬಳಲಿ ಬಿಡುವೆ ಮನಸಾರೆ ನಿನ್ನ ಸೆರೆಯಲ್ಲಿ... ಸಂದಷ್ಟೇ ಪ್ರೀತಿ ಕೊಡು ಮೊದಲು ಮಾಡಿ ಈಗಿನಿಂದ.
ತುಂಬಾ ಯೋಚನೆ ಮಾಡಿ ಕೆಟ್ಟು ಶರಣಾಗಿರುವೆ ನಿನ್ನಲ್ಲಿ... ರವಷ್ಟೇ ಕ್ಷಣಕಾಗಲಿ, ನನ್ನ ಜೊತೆ ಹೋಗಿಬಿಡು ಎಲ್ಲಾದರೂ!

Sunday, August 2, 2015

ಕಿರು ನಾಟಕ





Scene 1: 

(ವೇದಿಕೆಯ ಮೇಲೆ ಕತ್ತಲಿದೆ, left-top cornerನಲ್ಲಿ ಚಂದ್ರನ ಆಕೃತಿ ಜೋತು ಬಿದ್ದಿದೆ ಕಟ್ಟು-ಕರೀ ಆಕಾಶದಲ್ಲಿ ಕಾಣಸಿಗುವ ಚಂದ್ರನಂತೆ ).

Right-bottom cornerನಲ್ಲಿ ದುಂಡಾಗಿ ಬೆಳಕು ಬಿದ್ದಿದೆ . ಅಲ್ಲಿ ಅವಳು ಗೋಡೆಗೆ ಒಂದು ಕಾಲು ಆಣಿಸಿ ನಿಂತಿದ್ದಾಳೆ.

Background voice echoes... "ಅವಳ ಹೆಸರು ಪ್ರಿಯ! ಅವಳ ಹೆಸರು ಪ್ರಿಯ!"

(ಅವಳ ಮೇಲಿದ್ದ ಬೆಳಕು ಅಳಿಸಿ ಹೋಗಿ ಕತ್ತಲಾಗುತ್ತದೆ )

ಅವಳು : ನಾನಿಲ್ಲೇ ಇದ್ದೀನಿ, ಚಂದ್ರನಿಗೆ diagonally opposite directionನಲ್ಲಿ. ಹುಡುಕಿದವರಿಗೆ ಸಿಕ್ಕೆ.

(ಮತ್ತೆ ಅವಳ ಮೇಲೆ ಬೆಳಕು ದುಂಡು ಬೀಳುತ್ತದೆ)          

ಅವಳು ಅಲ್ಲಿಂದ ನಡೆದು ಬಂದು, ಪ್ರೇಕ್ಷಕರತ್ತ ಮುಖ ಮಾಡಿ ಕೇಳಿದಳು : 'ನಿನ್ನದು ಯಾವುದಾದರೂ ಒಂದು ಸುಂದರವಾದ ಕಥೆ ಹೇಳು, ತುಂಬಾ ಬೇಜಾರಾಗಿದೆ'.

Background voice  : 'ಪ್ರಿಯಾ! '

ಅವಳು : ಹುಂ.. ಈಡಿಯಟ್! ಕೇಳ್ತಾ ಇದ್ದೀನಿ, ಹೇಳು.

(ಅರ್ಧ ಸೆಕೆಂಡ್ ಮೌನ )

ಅವಳು : ಹ್ಹ ಹ್ಹ! ಒಹ್ ಈಗ ಅರ್ಥ ಆಯ್ತು! ' ಪ್ರಿಯಾ'. ಅಂದ್ರೆ ನಾನೇ ನಿನ್ನ ಸುಂದರವಾದ ಕಥೆಯೋ?? ಅದನ್ನ ಯಾವಾಗ ಬರೆದೆ?

BG Voice : ಬರೆಯಲಿಲ್ಲ, ಓದಿದೆ.

ಪ್ರಿಯಾ : ಮಾತು ಒಂದು ಇರದಿದ್ದರೆ ಈ ಭೂಮಿ ಮೇಲೆ ಅತೀ unattractive, uninteresting ಹುಡುಗ ನೀನೇ ಆಗಿರ್ತಿದ್ದೆ, ಗೊತ್ತಾ ನಿಂಗೆ? ಅಂದಹಾಗೆ ಈ ಕಥೆ ಕವಿತೆ ಬರಿಯೋದು ಯಾವಾಗಿಂದ ಶುರು ಮಾಡಿದ್ರು ಕವಿ ಸಾಹೇಬರು?

BG Voice :  ಆವತ್ತೊಮ್ಮೆ ನಿನ್ನ  ನೋಡಿದೆ, ಆಗಿಂದ ನಿನ್ನಂತಿರೋ ಒಂದು ಕವಿತೆ ಕೆತ್ತೋ ಪ್ರಯತ್ನವೇ ಫುಲ್ ಟೈಮ್ ಡ್ಯೂಟಿ ಆಗಿದೆ .

ಪ್ರಿಯಾ  : ಹ್ಹ ಹ್ಹ ಹ್ಹ!! ಹಿಂಗೆ ನಗಿಸಿ ನಗಿಸಿ ನೇ ಹುಡುಗ್ರು ಕಾಳು ಹಾಕೋದು, ಹಾಳು ಆಗೋದು.

BG Voice: ನಿನ್ನನ್ನ ಪ್ರೀತಿಯಲ್ಲಿ ಬೀಳಿಸಲು ನಗಿಸಿದೆ, ಆದರೆ ನೀ ನಕ್ಕಾಗೆಲ್ಲ ನಾನೇ ಪ್ರೀತಿಯಲ್ಲಿ ಬೀಳ್ತಾ ಹೋದೆ .

ಪ್ರಿಯಾ: ಓಹೋ! ಹಂಗೆ! ಭಾರಿ cheesy ಪ್ರೇಮ! ಕರಣ್ ಜೋಹರ್ ಫಿಲಂಸ್ ನಲ್ಲಿ ಬರೋ shaved-chest ಹೀರೋ ಗಳ ಥರ! ಆದ್ರೆ ಕಿಡ್ನಿನಲ್ಲಿ ಅಷ್ಟೆಲ್ಲ ಇಟ್ಕೊಂಡು ಹೇಳೋಕೆ ಮಾತ್ರ ತಡ ಯಾಕೆ ಮಿ ಲಾರ್ಡ್! 

BG Voice: ಅವಳು ಒಂದು ಸಮುದ್ರದಂತೆ ನನ್ನ ಸೆಳೀತಾಳೆ, ನಾನ್ನೊಬ್ಬ ಅಮಾಯಕ ಹುಡುಗನಂತೆ ಅಲೆಗಳ ನೋಡುತ್ತಾ ನಿಂತು ಬಿಡುತ್ತೇನೆ, ಈಜಲು ಹೆದರಿಕೆಯಾಗಿ.

BG Voice: ಅವಳು ಒಂದು ಸುಂದರ, ನಿಗೂಢ  ಹೂ-ಬನದಂತೆ. ಅದರ ಗೋಡೆಗಳು ಮಾತ್ರ ಪಾರು ಮಾಡಲಾರದಷ್ಟು ದೊಡ್ಡವು.

BG Voice:  ಅವಳು ಒಂದು ಇರದಿರೋ ಬಣ್ಣಗಳಿಂದ ಚಿತ್ರಿಸಿದ ಕಲೆ , ನಾನು ಕ್ಯಾನ್ವಾಸ್.....  ನಾನು ಕುಂಚ.  ಅವಳ ಕೊಕ್ಕರೆ ಕಂಠಕ್ಕೆ ನಾನು... ನಾನು...   ಚುಂಚ. ಅವಳ ಕನಸುಗಳಿಗೆ ನಿದ್ರೆಯರಿಯಲು ನಾನು ಮಂಚ .        

ಪ್ರಿಯಾ : ಅದೇ, ನಟ್ಟು ಬೋಲ್ಟು ಲೂಸಾಗಿರೋದು .

BG Voice: ಏನು??

ಪ್ರಿಯಾ : ಮಂಚ!!

BG Voice: ಚಂದ್ರನು ಸಾಲ ಪಡೆದ ಸಾಲು ಅವಳು, ಕವಿತೆಯ. ಸೂರ್ಯನು ಬಾಕಿ ಬರಿಸಿದ ಲೆಕ್ಕ ಅವಳು, ಬೆಳಕಿನ. ನಾನು ಬಿಟ್ಟು ಕೆಟ್ಟ ನೆಪ ಅವಳು..

ಪ್ರಿಯಾ : ಹ್ಹಾಬ! ಹ್ಹಾಬ! ಸಮಾಧಾನ! ಉಸಿರಾಡ್ಲಿ ಜನ.

BG Voice: ಆಗ್ಲಿ.

ಪ್ರಿಯಾ : ನಾನು ಬಿಟ್ಟು ಕೆಟ್ಟ ನೆಪ ಅವಳು... ??

BG Voice: ಸಿಗರೇಟಿನ!

ಪ್ರಿಯಾ : ಥೂ!!

ಪ್ರಿಯಾ : ಆಗೋಗ್ಲಿ ಅದೆಲ್ಲ. ಸಧ್ಯಕ್ಕೆ ಏನು ಮಾಡ್ತಾ ಇದೀರೋ ?

BG Voice: ಬೀಯರ್ರು, ರಮ್ಮು, ವಿಸ್ಕಿ .

ಪ್ರಿಯಾ : ಜೀವನಕ್ಕೆ ಅಂತ ಕೇಳಿದ್ದು!

BG Voice: ಅದನ್ನೇ ಹೇಳಿದ್ದು.

ಪ್ರಿಯಾ : ಓಹ್ಹೋ! ದೇವದಾಸ!! ಅದೆಷ್ಟು ದೇವದಾಸಿ ಕನಸುಗಳನ್ನ ಕಂಡಿದಿರೋ  ಹುಡುಗಿ ನೆನಪಲ್ಲಿ?

BG Voice: ದೇವದಾಸಿ ಕನಸು? ಅರ್ಥ ಆಗ್ಲಿಲ್ಲ.

ಪ್ರಿಯಾ : ಅದೇ! ನಿಮ್ಮ 'ಪವಿತ್ರ ಪ್ರೇಮದ' ಗುಂಗಲ್ಲಿ ಅದೆಷ್ಟು potential ಅಂತಂದ್ರೆ ಸಂಭಾವ್ಯ ಮಕ್ಕಳನ್ನ ಪೋಲು ಮಾಡಿದಿರೋ ಬಾತ್ರೂಮ್ ನಲ್ಲಿ?

BG Voice: ಛೆ ಛೆ! ನಾನು ಶುದ್ಧ ಹಸ್ತ!

ಪ್ರಿಯಾ: ಪೂರ್ತಿ ನಂಬಿದೆ!

ಪ್ರಿಯಾ: ಏಯ್, ನಿನಗೆ ಗೊತ್ತಾ? ನಾನು ಯಾವಾಗಲೂ ಅನ್ಕೊಳ್ತಾ ಇದ್ದೆ, ನನಗೂ ಒಬ್ಬ ದೇವದಾಸ ಆಗಿರೋ ಹುಡುಗ ಇರಬೇಕು ಅಂತ. ನನ್ನ ನೆನಪಲ್ಲೇ ಗುಳೋ ಅಂತ ಅತ್ಕೊಂಡು ಬಾಟಲಿ ಮೇಲೆ ಬಾಟಲಿ ಖಾಲಿ ಮಾಡಿ , ನನ್ನ ನೆನಪಲ್ಲೇ ಗಡ್ಡ ಬಿಟ್ಕೊಂಡು ಕವಿತೆಗಳನ್ನ ಗೀಚಬೇಕು ಅವನು ಅಂತ.

BG Voice: ತಥಾಸ್ತು:!!

(ಒಂದು ಸೆಕೆಂಡ್ ಮೌನ)

ಪ್ರಿಯಾ : (ಮೆಲು ದನಿಯಲ್ಲಿ) ಒಂದು ಕವಿತೆ ಹೇಳೋ..

BG Voice: ಚಂದಿರನ ನೆನಪಿನಲ್ಲಿ ಬರಡಾದಂತೆ ಬಾನು.. ಯಾರೂ ಬರದಲ್ಲಿ ಬಂದವಳು ನೀನು.

ಪ್ರಿಯಾ : ಅಷ್ಟೇನಾ ?

BG Voice: ಅಷ್ಟೇ ಬಂದಿರೋದು, ಅಷ್ಟೇ ಉಳದಿರೋದು, ಅಷ್ಟೇ ನಿನಗಿರೋದು!
 
ಪ್ರಿಯಾ : ಹೇ.. ಒಂದು ಮುತ್ತು ಕೊಡೋ..


(ಮೆಲ್ಲಗೆ ಅವಳ ಮೇಲಿದ್ದ ಬೆಳಕು ಕಡಿಮೆ ಆಗುತ್ತಾ ಹೋಗುತ್ತದೆ. ವೇದಿಕೆ ಮೇಲೆ ಕತ್ತಲಾಗುತ್ತದೆ )

--------------------------------------------xxXXOXXxx------------------------------------------------


Scene 2: 

ಚಂದ್ರನ ಆಕೃತಿ ಇದ್ದ ಜಾಗದಲ್ಲಿ ಅದನ್ನು replace ಮಾಡಿ ಒಂದು ದೊಡ್ಡ ಬಿಯರ್ ಬಾಟಲಿಯನ್ನು ಹೋಲುವ ಆಕೃತಿ ಜೋತು ಬಿದ್ದಿದೆ.

"ಮೈ ಜಾನತಾ ಹುಂ ಕೆ ತು ಗೈರ್ ಹೈ ಮಗರ್ ಯುಹಿಂ... ಕಭೀ ಕಭೀ ಮೇರೆ ದಿಲ್ ಮೆ..." - ಹಾಡು ಕೇಳಿಸಿ ಹಗುರವಾಗಿ ಕ್ಷೀಣಿಸುತ್ತದೆ.

(Right-bottom cornerನಲ್ಲಿ  ದುಂಡಾಕಾರದಲ್ಲಿ ಬೆಳಕು ಬೀಳುತ್ತದೆ)

ಬೆಳಕಿನ ಕೆಳಗೆ ಒಬ್ಬ ಹುಡುಗ ಹರಿದ ಚಪ್ಪಲಿ ಕಯ್ಯಲ್ಲಿ ಹಿಡಿದುಕೊಂಡು ಪಿನ್ನು ಹಾಕುವ ಪ್ರಯತ್ನ ಮಾಡುತ್ತಿದ್ದಾನೆ.

ಹುಡುಗ : ಚಪ್ಪಲಿಗೆ ಪಿನ್ನು ಹಾಕೋದು ಮತ್ತು ಹುಡುಗೀರ ಹಿಂದೆ ಬೀಳೋದು ಎರಡು ಒಂದೇ ನೋಡಿ. ಹೇಗೆ ಅಂದ್ರಾ?
(ಪ್ರೇಕ್ಷಕರನ್ನು ನೋಡುತ್ತಾ ಹತ್ತು ಸೆಕೆಂಡ್ ಉತ್ತರಕ್ಕಾಗಿ ಕಾದು ) ಅನ್ಲಿಲ್ಲ್ವಾ?,  ಬಿಡಿ ಹೋಗ್ಲಿ.


(ಶರ್ಟ್ ಪ್ಯಾಂಟ್ ಜೆಬಿನಲ್ಲೆಲ್ಲ ಹುಡುಕಾಡಿ ಕಡೆಗೆ ಒಂದು ಚೀಟಿಯನ್ನು ತೆಗೆದು )
ಹುಡುಗ : ಅದೇನೋ ಬರೆದೆ ನಿನ್ನೆ, ಕೇಳಿ ಮನಸಲ್ಲೇ ಬಯ್ಯಿರಿ...

ಮುಗಿದು ಹೋದವಳೆಂದೆನಿಸುವವಳು, ಕನಸಿನಲ್ಲೂ ಸಿಗುವುದು ದುರ್ಲಭ.
ಮನದ ಕತ್ತಲು ಕೋಣೆಯಲ್ಲಿರುವವಳ ಇಲ್ಲವೆಂದೆನ್ನುವುದು ಸುಲಭ.

Background Voice : ಇಲ್ಲೆಲ್ಲಾ ಬೇಡ ಮುಂದೆ ಹೋಗು.. ಜಾಸ್ತಿ ದೂರವೇನಿಲ್ಲ ಶೌಚಾಲಯವು-ಸುಲಭ!

ಹುಡುಗ : ಹಾಂ? ಸುಲಭ ಶೌಚಾಲಯವೆ?

BG Voice: ಹುಂ!

ಹುಡುಗ : ಆಯ್ತು ಬಿಡಪ್ಪ. ಬೇರೆ ಹೇಳ್ತೀನಿ ಕೇಳು ..

ರಭಸವಾದ ಮಳೆಗೆ ಮನದ ಮರಳ ಬೇರಾವುದೋ ಲೋಕಕ್ಕೆ ಸಾಗಿಸುವ ಹೊಣೆ,
ಹೃದಯ ಅಂಜುವ ಗುಡುಗಿನ  ಸದ್ದಲಿ ಮಿಂಚಿನಂತೆ ಬಂದು ಹೋಗುವವಳು ನೀನೆ .

(ಅಷ್ಟು ಹೇಳಿ ಒಮ್ಮೆ ಏನನ್ನೋ expect ಮಾಡಿ ಕೇಳುವಂತೆ ಕಿವಿ ಕೊಟ್ಟು ಉತ್ಸುಕನಾಗಿ ನಿಲ್ಲುತ್ತಾನೆ.)

BG Voice: ಈ ಪಾಲ್ಟಿ ಸೊಬಗಾವ ಪ್ರೇಮದಲೂ ನಾ ಕಾಣೆ!

ಹುಡುಗ : ಹಾಂ!! ಇಷ್ಟ ಆಯ್ತು ಅನ್ಸತ್ತೆ (ಸ್ವಲ್ಪ ಖುಷಿಯಿಂದ )

BG Voice: ಅಂದಹಾಗೆ ಮಿಸ್ಟರ್! ಈ ನೇತಾಡುವ ಬಾಟಲಿ ಯಾತಕೆ?

ಹುಡುಗ : ಹುಡಗಿಯರ ಹಿಂದೆ ಬಿದ್ದು ಎಷ್ಟೇ ಫೋಕಸ್ಡ್  ಆಗಿ, ಮನಸಿಟ್ಟು  ವಲಿಸಿದರೂ ಕಡೆಗೆ ಚಪ್ಪಲಿಯದ್ದೇ ಪಾಡು ನಮ್ಮದು. ಜೀವನ ಪೂರ್ತಿ ಸವೆದು ಸಾಯಬೇಕು ನಾವುಗಳು. ಅದಕ್ಕೆ ಆಗ್ಲೇ ಅಂದಿದ್ದು, ಹುಡುಗಿಯರಿಗೂ ಚಪ್ಪಲಿಗೂ ಅವಿನಾಭಾವ ಸಂಬಂಧ ಅಂತ.

BG Voice: ನಾನು ಕೇಳಿದ್ದನ್ನು ನೀವು ಹೇಳಲಿಲ್ಲ. ಇರಲಿ, ತಮಗೆ ಯಾವಾ ಪ್ರೇಮ ಆಗಿದ್ದು ?

ಹುಡುಗ : ಅದೇನು ಹಿಂಗ್ ಕೇಳಿಬಿಟ್ರಿ ! ದೈನಂದಿನ ಚಟುವಟಿಕೆಗಳಲ್ಲಿ ಪ್ರೇಮವೂ ಒಂದು ನಮಗೆ. ಡೈಲಿ ಆಗ್ತಿರತ್ತೆ ಹೋಗ್ತಿರತ್ತೆ.

BG Voice:ಹೌದೇ?

ಹುಡುಗ : ಹೂಂ! ನಿನ್ನೇನು ಆಯ್ತು, ಇವತ್ತೂ ಆಯ್ತು.

BG Voice: ಏನು ನೋಡಿ ಆಯ್ತು?

ಹುಡುಗ : ಮೊದಲು physics,ಆಮೇಲೆ chemistry!

BG Voice: ಓಹೋಹೋ! physics! ಹೆಣ್ಣನ್ನು ಮೆಟ್ರಿಕ್ಸ್ ನಲ್ಲಿ ಅಳೆಯೋ ಪ್ರಯತ್ನ, ತಪ್ಪಲ್ಲವೇ ?

ಹುಡುಗ : ಪ್ರೀತಿಗಿಂತ ಮೊದಲು ಹುಟ್ಟಿದ್ದು ಕಾಮ, ಮಾನವನ ಮೊದಲ ಮಗನ ರೂವಾರಿ ಅದೇ ಅಲ್ಲವೆ!

BG Voice: ನಡೀಲಿ. ಪ್ರೀತಿಯನ್ನು ಬರೆಯುವುದಷ್ಟೇನೋ? ಬಳಸುವುದಿಲ್ಲ ಅನ್ಸತ್ತೆ!

ಹುಡುಗ : ಬಳಸಿದರೆ ತೋಳನ್ನು ಬಳಸಬೇಕು, ಪ್ರೀತಿಯ ಬಳಸಿದರೆ ಸವೆದು ಹೋಗುತ್ತದೆ..

BG Voice: ಏನು ?

ಹುಡುಗ : ಯೌವ್ವನ!

BG Voice: ನಾನು ನಿಮ್ಮನ್ನ ಪ್ರೇಮಿ ಅಂತ ತಿಳಿದಿದ್ದೆ.

ಹುಡುಗ : ನಾನೂ ಕೂಡ! ಆದ್ರೆ ನಿದ್ದೆಯಿಂದ ಈಗ ಎದ್ದೆ!

BG Voice: ಅಂದರೆ ಆ ನಿಮ್ಮ  ಪ್ರೀತಿ-ಪ್ರೇಮದ flashback ಬರೀ ಮೋಸವೇ ?

ಹುಡುಗ : ಉಹೂಂ! ಅಲ್ಲ. ಅವಳ ಮುಖದ ಮೇಲೆ ಒಂದಷ್ಟು ದಿನ ನಿಂತು ಹೋದ ಮೊಡವೆ!

BG Voice: ಅರ್ಥ ಆಗ್ಲಿಲ್ಲ      

ಹುಡುಗ : ಯಾರಿಗೆ?

BG Voice: ಎಲ್ಲರಿಗೂ ಆಗ್ಲಿಲ್ಲ!

ಹುಡುಗ : ಅದಕ್ಕೆ ಇದು.

BG Voice: ಯಾವುದು ?

ಹುಡುಗ : ನೀವು ಮೊತ್ತ ಮೊದಲಿಗೆ ಕೇಳಿದ್ದೆರಲ್ಲ ಅದು.

BG Voice: ಮತ್ತೆ ಅರ್ಥ ಆಗ್ಲಿಲ್ಲ.

ಹುಡುಗ : ಯಾವುದು

BG Voice: ಯಾವುದೂ!!

ಹುಡುಗ : ಈ ನೇತಾಡುವ ಬಾಟಲಿ ಯಾಕೆ ಅಂದ್ರಲ್ಲ ಅದಕ್ಕೆ ಇದು ಅಂದೆ.

BG Voice: ಇದು ಅಂದ್ರೆ?

ಹುಡುಗ : ಅದೇ!  ಅರ್ಥ ಆಗದೇ ಇರುವುದು!      

BG Voice: ಬಿಡಿ!

ಹುಡುಗ : ಬಿಟ್ಟೆ. ಅಂದೇ ಬಿಟ್ಟೆ. ಅವಳಾಗಲೇ ಮೂರು ತಿಂಗಳ ಬಸುರಿ

BG Voice: ಹಾಂ?? ಯಾರಿಗೆ ?

ಹುಡುಗ: ಸಮಾಜಕ್ಕೆ!

ವೇದಿಕೆಯ ಮೇಲೆ ಕಟ್ಟಲಾಗುತ್ತದೆ.

-------------------------------------------xxXXOXXxx---------------------------------------------------------

Conclusion Scene:

(ವೇದಿಕೆಯ ಮೇಲೆ ನಟ್ಟ ನಡುವೆ ಒಂದು ಪರದೆ, ವೇದಿಕೆಯನ್ನು ಅದು ಎರಡು ಹೋಳನ್ನಾಗಿ ಮಾಡಿದೆ )

ಕೋಳಿ ಕೂಗಿದ ಶಬ್ದ.  ಬೆಳಕಾಯಿತು ಪರದೆಯ ಬಲ ಬದಿಗೆ .

ಚಂದ್ರನ ಹೊತ್ತು ಮಲಗಿರೋ ಹುಡುಗಿ ಏಳುತ್ತಾಳೆ . ಅವಳ ಪಕ್ಕದಲ್ಲಿ ಇನ್ನೊಬ್ಬರು ಯಾರೋ ಚಾದರವನ್ನು  ಹೊದ್ದು ಮಲಗಿದ್ದಾರೆ .

ಹುಡುಗಿ : ರೀ! ನಿನ್ನೆ ರಾತ್ರಿ ಒಂದು ಕನಸು ಬಿದ್ದಿತ್ತು (ಪಕ್ಕದಲ್ಲಿ ಮಲಗಿದ್ದವರನ್ನು ಬಡೆಯುತ್ತ ). ಕನಸಲ್ಲೀ...

ಚಾದರದಲ್ಲಿ ಮಲಗಿದ್ದವರು : ಏನಾಯ್ತೇ  ಪ್ರಿಯಾ ಕನಸಲ್ಲಿ ??

ಹುಡುಗಿ : ಏನು ಇಲ್ಲ ಬಿಡಿ.

ಪ್ರಿಯಾ ಮತ್ತೆ ಆ ಚಾದರ ಮನುಷ್ಯ ಇಬ್ಬರೂ still ಆಗುತ್ತಾರೆ!!



ಅಷ್ಟರಲ್ಲಿ ಪರದೆಯ ಎಡ  ಬದಿಗೆ ಬೆಳಕಾಗುತ್ತದೆ.

ಅಲಾರ್ಮ್ ಬಡೆದುಕೊಳ್ಳುತ್ತದೆ-  "ಗಿರರ್........................ !! "

ಬಾಟಲಿ ಆಕಾರವ ಹೊದ್ದು ಮಲಗಿರೋ ಹುಡುಗ ಎದ್ದು ಅಲಾರ್ಮ್ ಆಫ್ ಮಾಡಿ, ಮತ್ತೆ ಹೊದ್ದು ಮಲಗುತ್ತಾನೆ.



Saturday, June 6, 2015

ಹಳೆ ಬೇಜಾರು



ನೀಲಿ ಹೂ :
ಕರ್ರಗಿದ್ದ ತುಟಿಗಳನ್ನು ಮುಟ್ಟಿ ಅವಳಂದಳು - 'ಬಹಳ ಕನಸು ಕಾಣುತ್ತೀಯ ನೀನು '.

'ಜಾಸ್ತಿ ಸಿಗರೇಟ್ ಸೇದಿದರೂ ತುಟಿಗಳು ಕರ್ರಗಾಗುತ್ತವೆ' - ನಾನೆಂದೆ.

'ಅಷ್ಟು ಸೇದಬೇಡ. ಕಣ್ಣುಗಳನ್ನು ನೋಡು ' - ಅವಳು

ನನ್ನ ಕಣ್ಣುಗಳನ್ನು ನೋಡಿಕೋ ಎಂದಿದ್ದಳು, ಅಷ್ಟು ಕಡುಗೆಂಪಾಗಿರುವುದಕ್ಕೆ.

'ನೋಡ್ತಾ ಇದ್ದೀನಿ ' -ನಾನು 

ನಸುನಕ್ಕು ನನ್ನ ಗಲ್ಲದ ಮೇಲಿದ್ದ ಅವಳ ಕೈ ಇಳಿಸಿ ಹೊರಟು ಹೋದಳು .
ಅವಳಿಗಿಂತ  ಅವಳ ಬೆನ್ನೇ ನನ್ನನ್ನ ಜಾಸ್ತಿ ಪ್ರೀತಿಸುತ್ತಿತ್ತು. ನನಗೂ ಅದೇ ಇಷ್ಟ, ಹಾಗೇ ಇದ್ದು ಬಿಟ್ಟಿದ್ದೆ. 



ಮುತ್ತು :
ಕೊಟ್ಟರೊಂದಾಗಿಬಿಡುತ್ತದೆ 
ಸುಮ್ಮನಿರು.  
ಕೊಡದೇ ಸಾವಿರವಾಗಲಿ, 
ಆಸೆಗಳು.  



ಸಾರ್ವಕಾಲಿಕ: 
ನೀ ಬರದ ಖಾತರಿಯಲಿ, ಇಂದು ಮತ್ತೆ  ಕಾಯುವೆ.  
ಒಲಿಯಬೇಡ ಇಂದಾದರೂ, ನಾಳೆ ಮತ್ತೆ ಸಾಯುವೆ. 
ಹೇಳಬೇಡ ನಾನು ಕೇಳಿದರೆ, 
ಹಂಗಿರದಿರಲಿ.  
ಕೇಳಬೇಡ ನಾನು ಹೇಳಿದರೆ,  
ಹಂಗಿರದಿರಲಿ.  
ಅಪರಿಚಿತರಂತೆ ನೋಡಿ,  
ಕೆಂದು ಮುಂಗುರುಳ ನಡುವಿಂದ.  
ಸದ್ದು ಮಾಡದೆ ಮೆಲ್ಲಗೆ ಜಾರಿಬಿಡು ಎಂದಿನಂತೆ,   
ಮುದ್ದಾದ  ಭಯಂಕರವಾಗಿ.



Thursday, May 7, 2015

ಆದದ್ದಾಗಲಿ ಬನ್ನಿ, ಲೈಫ್ ಅಲ್ಲಿ ಸ್ವಲ್ಪ unsettle ಆಗೋಣ!







You are never too old for a new dream, ದೊಡ್ಡವರು ಹೀಗೆ ಹೇಳಿದಾಗ ಅನುಭವದಿಂದಲೇ ಹೇಳಿರಬೇಕು ಎಂದೆನಿಸಿತು. ಇಪ್ಪತ್ತಾರು ಆಯ್ತಲ್ಲ, ಹುಡುಗಿ ಹುಡುಕುವುದು ಶುರು ಮಾಡೋಣಲ್ಲ? ಎಂದು ಅಮ್ಮನ-ತಮ್ಮ ನನ್ನ ಕೇಳಿದಾಗ ಖುಷಿ, ನಾಚಿಕೆ, ಆಸೆ ಎಲ್ಲವೂ ಆಯಿತು. ಸೇದು ಎಂದಿದ್ದಷ್ಟೇ ಕೇಳಿಸಿ ಸಿಗರೆಟ್ ನೋ ಅಥವಾ ಬಾವಿಯಲ್ಲಿನ ನೀರೋ ಎಂದು ಮನಸಾರೆ confuse ಆಗೋ ವಯ್ಯಸ್ಸು ಮೊನ್ನೆ ತಾನೇ ಕಳೆದುಹೋಗಿರಬಹುದು. ಅಪ್ಪನಿಗೇ ಬುದ್ಧಿ ಹೇಳುವ ಬುದ್ಧಿವಂತಿಕೆ ಹಠಾತ್ ಹುಟ್ಟಿದ್ದು ನಿನ್ನೆ ರಾತ್ರಿನೇ ಆದರೂ, ನನ್ನ ವಿಷಯದಲ್ಲಿ ಬುದ್ಧಿ ಹೇಳುವ ಅಪ್ಪಂದಿರಾರೂ ಕಾಣಿಸುವುದಿಲ್ಲ ಇವತ್ತು . ಇಂತಹ ಇಪ್ಪತ್ತಾರರಲ್ಲಿ ಕೆಲ ದಿನಗಳಿಂದ ಒಂದು ಪ್ರಶ್ನೆ ಬಹಳವೇ ಕಾಡುತ್ತಿದೆ.ನೀನು settle ಆಗೋದು ಯಾವಾಗ? ಎಂದು.

ನನ್ನ ಕಟ್ಟ ಕಡೆಯ ದಿವಂಗತ ಗರ್ಲ್ಫ್ರೆಂಡ್ (ದಿವಂಗತವನ್ನು ಇಲ್ಲಿ Ex ಎಂದು ಓದಿ ) ಹೇಳಿದ್ದೂ ಅದೇ. 'ಬೇಗ settle ಆಗೋ ನೀನು ಅಂದರೆ ಅಪ್ಪನ ಹತ್ತಿರ ಮಾತಾಡೋದು ಸುಲಭ ಆಗ್ತದೆ'. ನಾಲ್ಕು ವರ್ಷ IT ನಲ್ಲಿ ಕೆಲಸ ಮಾಡಿ, ನಡುವೆ ಆ ಕೆಲಸ ಬೇಜಾರೆಂದು ಮೂರು ತಿಂಗಳು ಕೆಲಸ ಬಿಟ್ಟು ರಾಜಾಜಿನಗರದ ಬಾಡಿಗೆ ರೂಮಿನಲ್ಲೇ 'settle' ಆಗಿ, ಈಗ ಮತ್ತೆ ಇನ್ನೊಂದು IT ಕೆಲಸವನ್ನು ಸೇರಿದ ನನಗೆ ಇವಳು ಹೀಗೆ ಹೇಳಬಹುದಾ ಎಂದು ಯೋಚಿಸಿದೆ ನಾನು. ನಿನ್ನ ಪರಕಾರ settle ಎಂದರೆ ಏನು ಎಂದು ಕೇಳಿದೆ ಅವಳನ್ನು . ಪ್ರಕಾರವನ್ನು ವಿಕಾರವಾಗಿ ಪರಕಾರವೆಂದ ನನ್ನ ಜೋಕ್ ಅವಳಿಗೆ ಕಾಣಲಿಲ್ಲ. ಹೇಳಿದಳು - 'ಇಂಜಿನಿಯರಿಂಗ್ ಮಾಡಿದ್ದು ಇಂಜಿನಿಯರ್ ಆಗೋಕೆ ಅಲ್ಲ, ಬರೀ ಡಿಗ್ರಿ ಗೋಸ್ಕರ ಅಂತೀಯ. ನಾಲ್ಕು ವರ್ಷ ಆದ್ರೂ IT ನಲ್ಲೇ ದುಡಿದು ಎನೂ ಸಾಧಿಸಲಾಗಲಿಲ್ಲ ಎಂದು ಒಂದು ದಿನ ಕೆಲಸ ಬಿಡ್ತೀಯ. ಮೂರು ತಿಂಗಳು ಜರ್ನಲಿಸಂ, ಮ್ಯಾಗಜಿನ್, ಫಿಲಂಸ್ ಅಂತ ಹೇಳಿ ಓಡಾಡಿ ಮತ್ತೆ ತಿರಗಾ IT ನೇ ಸೇರ್ಕೊತೀಯ. ಕೇಳಿದರೆ, ನನಗೆ ಇದು ಇಷ್ಟ ಇಲ್ಲ ಗೌರಿ... ನಾನು ಬೇರೆ ಏನೋ ಮಾಡಬೇಕು ಅಂತೀಯ . ಇದೆಲ್ಲವನ್ನೂ ಹೇಗೆ ಡೈಜೆಸ್ಟ್ ಮಾಡ್ಕೊಳೋದು ಅಂತಾನೆ ಅರ್ಥ ಆಗಲ್ಲ ನನಗೆ, ನಿನಗೆ ಏನಾದರೂ ಬೇಕೋ, ಅಪ್ಪನಿಗೆ ನಾನು ಏನು ಉತ್ತರ ಕೊಡುವುದು, ಮುಂದೆ ಮಕ್ಕಳನ್ನು ನೀನು ಹೇಗೆ ತಗೊತಿಯೋ, responsibilities ಗಳನ್ನ ಹೇಗೆ ಹ್ಯಾಂಡಲ್ ಮಾಡ್ತಿಯೋ ಅಂತ ಯೋಚನೆ ಆಗತ್ತೆ. ಅದಕ್ಕೆ ಕೇಳ್ತಾ ಇದ್ದೀನಿ, settle ಯಾವಾಗ ಆಗ್ತಿಯೋ ನೀನು ಅಂತ . ನಿನ್ನಲ್ಲೇ ನೀನು ತೀರಾ unsettled  ಆಗಿರ್ತೀಯ '.

ಮೇಲಿನದೆಲ್ಲ ಈಗ ನನ್ನ  ಭೂತ. ಕಾಲದ ಭೂತವು (past ), ಕಾಡುವ ಭೂತವೂ (demon) ಬೇರೆ ಬೇರೆಯಾಗಿದ್ದಷ್ಟು ಒಳ್ಳೇದು. ಎರಡೂ ಒಂದೇ ಆಗಿಬಿಟ್ಟರೆ ಭವಿಷ್ಯತ್ತನ್ನು ಬಿಡಿ, ವರ್ತಮಾನಕ್ಕೆ ಜಾಸ್ತಿ ಧಕ್ಕೆ. ಸಂಬಂಧವಿಲ್ಲದಿದ್ದರೂ ಒಂದು ಲೈನ್ ನೆನಪಾಗಿದ್ದಕ್ಕೆ ಹೇಳಿಬಿಡುವೆ ಇಲ್ಲಿ 'All the miracles in the world happened in present'. ಇದನ್ನು ನೀವೇ ಹೇಗಾದರೂ ಸಂಬಂಧಿಸಿಕೊಳ್ಳಿ. ಮೊನ್ನೆ ನಮ್ಮ ಪಕ್ಕದ್ಮನೆ ಅಂಕಲ್ ಹೇಳಿದರು ಈಗಿನ ಕಾಲದ ಹುಡುಗರು ಭಾರಿ ಚುರುಕು, ೨೫-೨೬ ವಯ್ಯಸಿನಲ್ಲೇ settled ಆಗಿಬಿಡ್ತಾರೆ, ನಮ್ಮ ಕಾಲದಲ್ಲಿ ಮೂವತ್ತೈದು ಆಗಿ ಒಂದೆರಡು ಮಕ್ಕಳು ಆಗೋ ವರೆಗೂ ನಾವು settle ಆಗಿರುತ್ತಿರಲಿಲ್ಲ- ಎಂದು. ನಾನು ಮತ್ತೆ ಅವರನ್ನು ಕೇಳಿದೆ ನಿಮ್ಮ ಅಧಿಕಪ್ರಸಂಗತನದ ಪ್ರಕಾರ settled ಅಂದರೆ ಏನು ಅಂಕಲ್ ?. 'ಅಧಿಕಪ್ರಸಂಗ' ವ ತುಸು ಅವಸರವಾಗಿ ಉಚ್ಚಾರಿಸಿದ್ದಕ್ಕೋ, ಅಥವಾ ಅವರ ಶಬ್ದ ಭಂಡಾರದ ಬಡತನಕ್ಕೋ ಅವರಿಗೆ ನನ್ನ ಕುಹಕ ತಿಳಿಯಲಿಲ್ಲ. ಅವರು ಒಮ್ಮೆ ಆಕಾಶವ ನೋಡಿ, ನನ್ನ ಹೆಗಲ ಮೇಲೆ ಕೈ ಇಟ್ಟು, ಭಗವದ್ಗೀತೆಯ ಕೃಷ್ಣನಂತೆ ಶುರುವಿಟ್ಟರು - 'ನೋಡು ಕಿರಣ್, ಮನುಷ್ಯ ಪ್ರಾಣಿ ಒಂದಕ್ಕೇ ಯೋಚಿಸುವ ಬುದ್ಧಿ ಇರುವುದು. ಉಳಿದೆಲ್ಲವುಗಳು ಇನ್ನೂ nomadic ಸಂಸ್ಕೃತಿಯಲ್ಲೇ ಇರುವಂಥವುಗಳು. ನಮಗಷ್ಟೇ ಒಂದು ಸ್ಥಳದಲ್ಲಿ ಬೇರೂರಿ ಅಲ್ಲೇ ನಮ್ಮವರನ್ನು, ನಮ್ಮತನವನ್ನು ಬೆಳೆಸಿಕೊಂಡು ನಿರಮ್ಮಳವಾಗಿ ಉಸಿರಾಡುವ ಆಸೆ, ಕ್ಷಮತೆ ಇರುವುದು. ಹುಟ್ಟುತ್ತಾ ಬೆತ್ತಲಾಗಿ ಹುಟ್ಟಿದರೂ ಬೆಳೆಯುತ್ತ ಬಣ್ಣವಾಗುತ್ತೇವೆ. ನಮಗೆ ಬೇಕಾದ ಬಣ್ಣಗಳನ್ನು ಆರಿಸಿಕೊಂಡು, ಬಳಿದುಕೊಂಡು ಸಂತೃಪ್ತಿ ಪಟ್ಟುಕೊಳ್ಳುವುದಕ್ಕೇ ಬಹುಷಃ settled ಅನ್ನುತ್ತಾರೆ . ಅಧಿಕಪ್ರಸಂಗತನವಾದರೂ ನಿನ್ನ ಕಾಳಜಿಗಷ್ಟೇ ನಿನ್ನೊಂದಿಗೆ ನನ್ನ ಪ್ರಶ್ನೆ ಹಾಗು ಉತ್ತರಗಳು ' ಎಂದುಬಿಟ್ಟರು!! ವಯ್ಯಸ್ಸು ಬರುವುದು ಹಾಗು ವಯ್ಯಸ್ಸು ಆಗುವುದರ ನಡುವಿನ ವ್ಯತ್ಯಾಸ ತಿಳಿದಂತಾಗಿ ಅವರ ಮುಖ ನೋಡಲಾಗದೆ ನೆಲವನ್ನು ನೋಡಿದೆ. ಕೆಳಗೆ ನೋಡಿದ್ದು ಅವರ ಸ್ಪೀಚ್ ನಿಂದಾಗಿ ಅಲ್ಲ, ಅದರ ಕೊನೆಯ ಸಾಲಿನಿಂದಾಗಿ!

 ಲೈಫ್ ನಲ್ಲಿ ಒಂದು ಮಟ್ಟಕ್ಕೆ ಸೆಟ್ಲ್ ಆಗಿದೀನಿ. ಇನ್ನೇನಿದ್ದರೂ ಆರಾಮವಾಗಿ ಮಕ್ಕಳು-ಮರಿ ಅಂತ ಇರೋದು ಅಂತೆಲ್ಲ ಮಾತನಾಡುತ್ತಾರೆ. ಈ ಸೆಟ್ಲ್ ಅನ್ನೋದು ತೀರಾ ರಿಲೇಟಿವ್ ವಿಷಯ, ಅಪ್ಪನ ಪ್ರಕಾರ ಸೆಟ್ಲ್ ಎಂದರೆ ಎರಡು ಸೈಟ್ ಮಾಡುವುದು, ಅಮ್ಮನ ಪ್ರಕಾರ ಹೆಂಡತಿ-ಮಕ್ಕಳನ್ನ ಮಾಡುವುದು, ಸ್ನೇಹಿತ ದೀಪಕ್ ನ ಪ್ರಕಾರ ನಾಲ್ಕು ಜನ ಅಪರಿಚಿತರಿಗೆ ನಮ್ಮ ಹೆಸರು ತಲುಪುವುದು, ಕಿಶೋರ ನಂತೆ ಪ್ರೀತಿಸಿದವಳ ತನ್ನವಳಾಗಿಸುವುದು, ನಮ್ಮ ಸಂಪಾದಕರು ಹಾಗು ನನ್ನ ಗುರುಗಳಾದ (ನನ್ನ ಸ್ವ-ಘೋಷಿತ ಗುರುಗಳು. ನಾನು ಏಕಲವ್ಯನಂತೆ, ಸುಮ್ನೇನಾ!) ಗಣಪತಿ ಸರ್ ಪ್ರಕಾರ ಸಾಯುವುದರೊಳಗೆ ಏನಾದರೂ ಕಡೆದು ಕಟ್ಟೆ ಹಾಕುವುದು.

ಮಳೆ ನಿಂತ ಮೇಲೆ ಗೂಡ ಬಿಡಬೇಕೆನ್ನುವ ಹಕ್ಕಿಗೆ, ಸಂಜೆಯಾದ ಮೇಲೆ ಕೊಂಬೆಗೆ ಜೋತುಬೀಳುವ ಬಾವಲಿಗೆ, ತಿರುಗಿ ಆಯಾಸವಾಗಿ ಧಸ್ಸೆಂದು ಕುಳಿತು ಬಿಡುವ ಗಾಣದೆತ್ತಿಗೆ, ಬೀಸುವ ಗಾಳಿಗೆ, ಉರಿಯೋ ಬೆಂಕಿಗೆ ಇದನ್ನು ಕೇಳಿ ನೋಡಿದೆ. ನೀವೆಲ್ಲ ಲೈಫ್ ಅಲ್ಲಿ settle ಆಗೋದು ಯಾವಾಗ ? ಜೋರಾಗಿ ಕಿರುಚಿ. ಅಕ್ಕಪಕ್ಕದಿಂದ ಕೆಲ ನಗುವಷ್ಟೇ ಕೇಳಿಸಿತು, ಪರಿಚಿತ ನಗುಗಳೇ ಅವು. ಅಪರಿಚಿತರೆಂದೂ ಕೇಳುವ ಹಾಗೆ ನಗುವುದಿಲ್ಲ, ಕೇಳುವುವು ಪರಿಚಿತರ ನಗುಗಳೇ. ಸಂಬಂಧಿಕರಲ್ಲೇ ವೈರಿಗಳಾಗುವ potential ಇರುವುದು ನೋಡಿ . ಇದನ್ನ್ಯಾಕೆ ಹೇಳಿದೆನೋ ಗೊತ್ತಿಲ್ಲ, ನೆನಪು ಹಾರಿಬಿಡಿ. ಹಾಂ! settled ಆಗುವುದು ಅನ್ನೋ ಮಾತು ಭಾರಿ ಲೌಕಿಕ, ವಾಂಛೆಯ ಪರಮಾವಧಿ ಎಂದು ನನ್ನ ಅನಿಸಿಕೆ. ತಿಂಗಳಕ್ಕೆ ೫೦ ಸಾವಿರ ದುಡಿಯುವ ನನಗೂ, ಹಾಗು ತಿಂಗಳಕ್ಕೆ ೩೦ ಸಾವಿರ ದುಡಿಯುವ ನನ್ನ ಆಫೀಸ್ ಕ್ಯಾಬ್ ಡ್ರೈವರ್ ಗೂ ಅಂತಹ ವ್ಯತ್ಯಾಸವೇನೂ ಇಲ್ಲ. ಅವನೂ ಹಂಸಲೇಖರ ಹಾಡುಗಳನ್ನು ಇಷ್ಟಪಟ್ಟು ಕೇಳುತ್ತಾನೆ FM ನಲ್ಲಿ , ದಿನಾಲೂ ಕ್ಯಾಬ್ ನಲ್ಲಿ ಬರುವ ಆ ಬಸವನಗುಡಿ ಹುಡುಗಿಯನ್ನು ಇಬ್ಬರೂ ಕದ್ದು ನೋಡುತ್ತೇವೆ, ಅವಳನ್ನು ನೋಡುವಾಗ ಆಗಾಗ ಒಬ್ಬರ ಕಯ್ಯಲ್ಲಿ ಇನ್ನೊಬ್ಬರು ಸಿಕ್ಕಿ ಮುಖ ಮುಖ ನೋಡಿಕೊಂಡು ಹಲ್ಲುಗಿಂಜುತ್ತೇವೆ. ಇಬ್ಬರೂ ಸೇರೇ ಸೋನಿಯಾ ಗಾಂಧಿಯನ್ನು ಬಯ್ಯುತ್ತೇವೆ, ದೀಪಿಕಾಳನ್ನು (ಪಡುಕೋಣೆ) ಹೊಗಳುತ್ತೇವೆ. ಅವನು ಅಕಸ್ಮಾತ್ ತುಸು ಯಾಮಾರಿದರೆ ಇಬ್ಬರೂ ಒಮ್ಮೆಲೇ ಇಹ ದಿಂದ ಪರಕ್ಕೆ ರವಾನೆಯಾಗುತ್ತೇವೆ!! ಇನ್ನು, ಈ 'settled' ಪದವನ್ನು ಇಲ್ಲಿ ಹೇಗೆ ಕೂರಿಸಲಾದೀತು ??. ಮಾತಿನ ಅರ್ಥ, ದೊಡ್ಡ ಚಿತ್ರಪಟದಲ್ಲಿ ಈ ಶಬ್ದಕ್ಕೆ ಅಷ್ಟಾಗಿ ಅರ್ಥ ಉಳಿಯುವುದೇ ಇಲ್ಲ. ಬಾವಿಯಲ್ಲಿನ ಕಪ್ಪೆಗಳಲ್ಲಿ ಯಾವುದು settled, ಯಾವುದು unsettled!

ಬೇಕೆಂದಾಗ ಬೇಕಾಗಿದ್ದನ್ನು ಮಾಡಿಕೊಂಡು ತಿರುಗುವವನಿಗೆ ಅಲೆಮಾರಿ ಎನ್ನುತ್ತಾರೆ . ಇದ್ದಲ್ಲೇ ಇದ್ದು ತನಗೆ ತಾನೇ ಮಿತಿಗಳನ್ನು ಹಾಕಿಕೊಂಡು ಬಾಳುವವನಿಗೆ ಇಲ್ಲಿ well-settled ಎನ್ನುತ್ತಾರೆ. ಒಂದು ಕೆಲಸದಲ್ಲಿ ನೆಲೆ ಹುಡುಕಿಕೊಂಡು, ಒಂದು ಸಂಸಾರ, ಭವಿಷ್ಯನಿಧಿಯನ್ನು-ಭವಿಷ್ಯವನ್ನು ರೂಪಿಸಿಕೊಂಡು (ರೂಪಿಸಿಕೊಂಡೆವೆಂಬ ಭ್ರಮೆಯಿಂದ ) ಬಾಳುವುದೇ ಸೆಟ್ಲ್ ಆಗೋದು ಎಂದಾದರೆ ವಿವೇಕಾನಂದರ ಬದುಕಿಗೆ ಏನು ಹೆಸರು ಕೊಡಬಹುದು ನಾವು ? ಮನೆ-ಮಠವಿಲ್ಲದೆ, ತಮ್ಮ ಹೆಸರಿಗೆ ಬಿಡಿಗಾಸು ಮಾಡದೆ ಜಗತ್ತನ್ನೇ ತಿರುಗಿದವರು ಅವರು (ಅವರ ಹೆಸರಿಗೆ ರೋಡು, ಮಠಗಳು, ಊರುಗಳೇ ಇವೆ ಈಗ, ಅದು ಬೇರೆ ವಿಷಯ). ನಮ್ಮ ಮಕ್ಕಳಿಗೆ ನಮ್ಮಲ್ಲಿ ಎಷ್ಟು ಜನ ಅವರ ಹೆಸರು ಇಟ್ಟಿಲ್ಲ, ಆದರೂ ಅವರಂತೆ ನಮ್ಮ ಮಕ್ಕಳೂ ನಾನು ಡಿಗ್ರಿ ತಕ್ಕನಾಗೆ ಕೆಲ್ಸಕ್ಕೆ ಸೇರದೇ ಆಧ್ಯಾತ್ಮಿಕತೆ, ಯೋಗ-ಧ್ಯಾನ ಅಂತ ದೇಶ ಸುತ್ತುತ್ತೇನೆ ಎಂದರೆ ನಾವು ಶಹಭಾಸ್ ಎನ್ನುತ್ತೆವೆಯೇ? ನರೇಂದ್ರ ಮೋದಿ ಗುಜರಾತಿನ ಮುಖ್ಯ ಮಂತ್ರಿ ಆಗುವವರೆಗೂ ಅವರ ಹೆಸರು ನಮ್ಮಲ್ಲಿ ಎಷ್ಟು ಜನಕ್ಕೆ ತಿಳಿದಿತ್ತು. ಅವರದ್ದೂ ಅದೇ! ಊರೆನ್ನದೆ, ಹಗಲು-ರಾತ್ರಿಯೆನ್ನದೆ ತಿರುಗಾಡಿ, ಸಂಘ ಸಂಸ್ಥೆಗಳಲ್ಲಿ ದುಡಿದು, ಹೆಸರು ಮಾಡಿ ಆಮೇಲೆ ಮುಖ್ಯಮಂತ್ರಿ, ಪ್ರಧಾನಿ. ಅಂದರೆ ಪ್ರಧಾನಿ ಆದನಂತರ ಅವರು settle ಆದರೆಂದೇ ? ನೂರರಷ್ಟು ನಾಟಕ-ಸಿನಿಮಾ ಗಳನ್ನ ಮಾಡಿ ವರ್ಲ್ಡ್-ಥೀಯೇಟರ್ ನಲ್ಲಿ ಹೆಸರುವಾಸಿಯಾದ ನಸೀರುದ್ದೀನ್ ಶಾಹ್ ರದ್ದು ಮೂವತ್ತಕ್ಕೂ ಹೆಚ್ಚು ಫಿಲಂಸ್ ಗಳು ಡಬ್ಬದಲ್ಲಿಯೇ ಉಳಿದುಕೊಂಡಿವೆ ಎಂದರೆ ನೀವು ನಂಬುತ್ತೀರಾ? ಅನಂತ ನಾಗ್,ದೊರೆ ಭಗವಾನ್ ಅಂಥವರು ಆಗಾಗ ಆಟೋ ಗಳಲ್ಲಿಯೇ ರಸ್ತೆಗಳಲ್ಲಿ ಕಾಣಸಿಗುತ್ತಾರೆ ಎಂದರೆ ಉಬ್ಬು ಹಾರಿಸದೆ ಅದರಲ್ಲೇನಿದೆ ಬಿಡಿ! ಎನ್ನುತ್ತೀರಾ.

ಹಾಳಾಗಿ ಹೋಗ್ಲಿ, ಫೈನಲ್ ಆಗಿ ಏನ್ ಹೇಳ್ತೀಯ ಹೇಳಿ ಸಾಯಿ ಮಾರಾಯ ಅಂದ್ರಾ?
ಇಷ್ಟೇ! ಸೆಟ್ಲ್ ಅನ್ನೋದು ಒಂದು perspective ಅಷ್ಟೇ, ಸಾರ್ವಕಾಲಿಕವಲ್ಲದ ಅಂಶ!
ಬೇಕೆನಿಸದ್ದನ್ನು ಮಾಡೋಣ. ಸೆಟ್ಲ್ ಆಗಬೇಕೆಂಬ ಬೇಡದ ಭಾರವನ್ನ ತಲೆಯ ಮೇಲೆ ಹೊತ್ತು rat race ನಲ್ಲಿ ಓಡಿ ಓಡಿ ಮಂಡೆನೋವಿನಿಂದ ಸಾಯೋದಕ್ಕಿಂತ ಯಾವುದೇ ವಯ್ಯಸ್ಸಿನವರಾದರೂ ಸರಿಯೇ ನಮ್ಮ ಮನಸಿನ ಬೆರಳಿನ ತುದಿಯಂತೆ ಸಾಗೋಣ.  ನಮ್ಮ ನಮ್ಮ ಪರಮಾತ್ಮನ ಮಾತಿಗೆ ಕೊಂಚ ಹುಂ-ಗುಡೋಣ! ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ಎಂದು ಕರೆದವರು ಪಾಪ ಕಾದು ಕಾದುನೇ ತೀರಿಹೋಗಿರಬೇಕು, ಆದರೂ ಒಮ್ಮೆ ಕರೀತೀನಿ...  ಆದದ್ದಾಗಲಿ ಬನ್ನಿ, ಲೈಫ್ ಅಲ್ಲಿ ಸ್ವಲ್ಪ unsettle ಆಗೋಣ!
                                                    

Sunday, February 22, 2015

ಅವಳ ಹೆಸರು ಕೇಳಬಹುದಿತ್ತು...



'Hey, Good morning!... How was your weekend?'- ನನಗೆ ಬಂದ ಪ್ರಶ್ನೆ

Weekend?.... ಆ ವೀಕ್ ನ ಎಂಡ್ ಎಷ್ಟು ಚನ್ನಾಗಿತ್ತು ಎಂದು ನನಗೆ ಮಾತ್ರ ಗೊತ್ತಿತ್ತು. ನಿನ್ನೆ ರಾತ್ರಿ ನಡೆದ ಘಟನೆ! ಕುಳಿತಲ್ಲಿಯೇ ಎಲ್ಲವನ್ನೂ ನೆನೆಸಿಕೊಂಡೆ.  

ಭೈರಪ್ಪ ಅಭಿಮಾನಿನಾ ? -  ನಾನು ಅವಳನ್ನ ಕೇಳಿದ ಮೊದಲನೇ ಮಾತು

ಭೈರಪ್ಪನವರ 'ಪರ್ವ' ಪುಸ್ತಕವನ್ನು ಕವರ್ ನಲ್ಲಿ ತುರುಕುತ್ತಾ ಥಟ್ಟನೆ ನನ್ನತ್ತ ನೋಡಿದ್ದಳು. ತನ್ನನ್ನೇ ಯಾರೋ ಮಾತನಾದಿಸಿದರಾ ಅಂತ.

ಭೈರಪ್ಪನವರ ಪರ್ವ ನಿಮ್ಮ ಕಯ್ಯಲ್ಲಿ ನೋಡಿ ಕೇಳಿದೆ.. - ನಾನು ಪುಸ್ತಕದೆಡೆ ಬೆರಳು ಮಾಡುತ್ತಾ ಮತ್ತೊಮ್ಮೆ ಹೇಳಿದೆ .

ಹಾಗೆ ನೋಡಿದರೆ ಅಪರಿಚಿತ ಹುಡುಗಿಯರ ಮಾತನಾಡಿಸುವಲ್ಲಿ ಕೊನೆಯವನು ನಾನೇ. ಹಾಗೆ ಎಂದೂ, ಯಾವುದೂ ಹುಡುಗಿಯನ್ನ  ನಾನೇ ಕರೆದು ಮಾತನಾಡಿದ್ದು ಇಲ್ಲ. ಯಾರನ್ನೋ ಮಾತನಾಡಿಸಿ ಅಕಸ್ಮಾತ್ ಅವರು ಅನಪೇಕ್ಷಿತ ಪ್ರತಿಕ್ರಿಯೆಯನ್ನು ಕೊಟ್ಟು ನನ್ನ ಮಾನ ಹರಾಜಾದರೆ ಅನ್ನುವ ಸ್ವಾಭಿಮಾನಿ ಭಯ. ಅದಕ್ಕಿಂತ ಜಾಸ್ತಿ, ನಾನು ಎಂದೂ ಅಪರಿಚಿತರ ಗೋಜಿಗೆ ಹೋಗುವುದೇ ಕಡಿಮೆ. ಪರಿಚಿತರಲ್ಲಿಯೇ ತುಸು ಮಾತು ಕಡಿಮೆ ಆಗಿದ್ದಿದ್ದರೆ ಒಳ್ಳೆಯದಿತ್ತು ಅನ್ನಿಸುತ್ತದೆ ಒಮ್ಮೊಮ್ಮೆ.  ಬಸ್ಸಿನಲ್ಲಿ ಪ್ರಯಾಣಿಸುವಾಗ, ಆಫೀಸ್ ಕ್ಯಾಬ್ ನಲ್ಲಿ ಸಾಗುವಾಗ, ಆಫೀಸ್ ನಲ್ಲಿ ನನ್ನ ಡಬ್ಬಿಯ ಮುಂದೆ ಕೂತಿರುವಾಗ ಅಕ್ಕ ಪಕ್ಕದವರು ಮಾತಿಗೆ ಶುರುವಿಟ್ಟರೆ,  ಈಕೆ/ ಈತ ನನಗೆ ಪರಿಚಯವಾಗದಿದ್ದರೆ ಸರಿ ಇತ್ತು ಎಂದು ಅದೆಷ್ಟೋ ಸಾರಿ ಅಂದುಕೊಂಡದ್ದಿದೆ. FM ಕೇಳುವುದು, ಸಿನಿಮಾ ನೋಡುವುದು, ಕ್ಯಾಬ್ ನಲ್ಲಿ ನಿದ್ದೆ ಮಾಡುವುದು, ಹಾಡು ಕೇಳುತ್ತಲೇ ಕಿಟಕಿಯಲ್ಲಿ ಕಣ್ಣಾಡಿಸಿ ನಗುವುದು ಹೀಗೆ ಏನೇನೋ ಮಾಡಬಹುದು, ಅದೆಲ್ಲ ಬಿಟ್ಟು ಖಾಲಿ ಪೀಲಿ ಹರಟೆ ಹೊಡೆಯುವುದು ಒಂದಿನಿತೂ ಸಲ್ಲ , ಅದೂ ಯಾರ್ಯಾರದ್ದೋ ಜೊತೆ! ಅಂತ ಯೋಚಿಸಿ ಸುಮ್ಮನೆ ಇರುತ್ತೇನೆ. ಹೊಸ ಮುಖಗಳಿಗೆ ಜಾಸ್ತಿಯೆಂದರೆ ಒಂದು ಸ್ಮೈಲ್ ಕೊಟ್ಟೇನು, ಹೊಸ ಹುಡುಗಿಯರ ನೋಡಿ, ಮತ್ತೆ ಮತ್ತೆ ಕದ್ದು  ನೋಡುತ್ತಲೇ ಕೂತೇನು, ಆದರೆ ಮಾತನಾಡಿಸುವುದಿಲ್ಲ. ಹುಡುಗಿ ಚಂದವಿದ್ದರಂತೂ ಅವಳಲ್ಲಿ ಮಾತಾಡುವುದಕ್ಕೆ ಧೈರ್ಯವೇ ಸಾಲದು.  ಆದರೆ,ನಿನ್ನೆ 'ಸಪ್ನಾ ಬುಕ್ ಹೌಸ್ ' ನಲ್ಲಿ ನಾನು ಕೌಂಟರ್ ನಲ್ಲಿ ನಿಂತಾಗ ಪಕ್ಕದ ಹುಡುಗಿಯು ಕನ್ನಡ ಪುಸ್ತಕವನ್ನು ಖರೀದಿಸಿದ್ದನ್ನು ನೋಡಿ ಅದೇಕೋ ಸರಕ್ಕನೆ ಮಾತನಾಡಿಸಿಬಿಟ್ಟೆನು. ಒಂದು ನಿಮಿಷವೂ ಪ್ರತ್ಯುತ್ತರದ ಬಗ್ಗೆ ಯೋಚಿಸಿರಲಿಲ್ಲ. ಅವಳ ಮುಖವನ್ನೂ ಬಹುಷಃ ನನ್ನ ಬಾಯಿಯಿಂದ ಮಾತು ಹೊರಟು ನಿಂತ ಮೇಲೆಯೇ ನೋಡಿರಬೇಕು. ಕಣ್ಣಿಗೂ ಮುಂಚೆ ಮಾತು ಅವಸರ ಪಡಿಸಿದ್ದನ್ನು ನಾನು ವಿಷಾದಿಸಬೇಕಿದ್ದಿಲ್ಲ! ಕಾರಣ ಅವಳು ನೋಡಲೂ ಸುಂದರವಾಗಿದ್ದಿದ್ದು.

ನಾನು ಭಾರಿ social ಆಗಿ ನಡೆದುಕೊಂದಿದ್ದಕ್ಕೆ ಎರಡು ಕಾರಣಗಳಿರಬಹುದು. ಒಂದು, ಹುಡುಗಿಯೊಬ್ಬಳು ಪುಸ್ತಕದ ಅಂಗಡಿಯಲ್ಲಿ ತೀರ ಗಂಭೀರವಾಗಿ ಪುಸ್ತಕಗಳಲ್ಲಿ ಕಳೆದುಹೋಗಿದ್ದ ದೃಶ್ಯ. ಅದಕ್ಕಿಂತ ಎಂದರೆ, ಹುಡುಗಿ ಕನ್ನಡ ಕಾದಂಬರಿಯನ್ನು ಹಿಡಿದಿದ್ದು. ಹುಡುಗಿಯರಿಗೂ ಕಾದಂಬರಿಗಳಿಗೂ ಅಷ್ಟಕ್ಕಷ್ಟೇ ನೋ ಎಷ್ಟೋ ಗೊತ್ತಿಲ್ಲ, ಆದರೆ ನನಗೆ ಪರಿಚಯವಿದ್ದ ಹುಡುಗಿಯರಲ್ಲಂತೂ ಓದುವ ಹವ್ಯಾಸಿಗಳು ತೀರಾ ದುರ್ಲಭ. ಹರಕು ಮುರುಕು ಇಂಗ್ಲಿಷ್ ನಲ್ಲಿ ಬರುವ ಲವ್ ಸ್ಟೋರಿ ಗಳನ್ನ ಓದಿಕೊಂಡು ಅಡ್ಡಾಡುವುದು ಅಲ್ಲಲ್ಲಿ ಕಂಡರೂ , ಕನ್ನಡ ಪುಸ್ತಕಗಳನ್ನು ಓದುವವರನ್ನ ಅಷ್ಟಾಗಿ ನಾ ಕಾಣೆ. ಅಂಥವರನ್ನು ಕಂಡರೆ ನನಗೆ ಬಹಳಷ್ಟು ಗೌರವ (ಹೆಚ್ಚಾಗಿ ಹುಡಗಿಯರನ್ನು ಕಂಡು, ಹುಡುಗರು ಕನ್ನಡ ಓದುವುದು ಅಪರೂಪವೇನಲ್ಲ). ಇದಕ್ಕಾಗಿಯೇ ನಾನು ಆ ಮಹಾತಾಯಿಯನ್ನು ಮಾತಿಗೆ ಆಮಂತ್ರಿಸಿದ್ದು.

ಕ್ಷಮಿಸಿ??
- ನನ್ನತ್ತ ನೋಡುತ್ತಾ ಅವಳಂದಳು
ಮತ್ತೆ ತಾನೇ 'ಒಹ್! The Book!!... ಹಾಂ!.. ಅವರ ಪುಸ್ತಕಗಳನ್ನ ಓದ್ತೇನೆ'    ಅಂದಳು

ಅಷ್ಟಾಗಿ ನಗದೇ, ನನ್ನ ಪ್ರಶ್ನೆಗೆ ಉತ್ತರವಾಗದೆ ಬರೀ ಪ್ರತಿಕ್ರಿಯೆಯಂತೆ ಮಾತನಾಡಿದಳು.
ಸಧ್ಯ ಮಾತಂತೂ ಆಡಿದಳಲ್ಲ, ಇಲ್ಲದೆ ಇದ್ದರೆ ಆ ಕೌಂಟರ್ ನಲ್ಲಿ ಮಾನ ಹೋಗುತ್ತಿತ್ತು. ಸಾಲಿನಲ್ಲಿ  ಹಿಂದೆ ನಿಂತ  ಧಡಿಯ, ಮುಂದೆ ಬಿಲ್ಲಿಂಗ್ ಮಾಡುತ್ತಿದ್ದ ಕರಿಮುಖ, ಎಲ್ಲರೂ ಆಗ ನಮ್ಮನ್ನೇ ನೋಡುತ್ತಿದ್ದರು. ಸಾಲಿನಲ್ಲಿ ಅವಳ ಹಿಂದೆ ನಿಂತ ನಾರ್ತ್ ಇಂಡಿಯನ್ ಆಂಟಿಯಂತೂ ನಾನು ಆ ಹುಡುಗಿಯನ್ನು ಮಾತನಾಡಿಸಿದ್ದು, ಅದೂ ಕನ್ನಡದಲ್ಲಿ ಮಾತನಾಡಿಸಿದ್ದು ತರವೇ ಅಲ್ಲ ಎಂಬಂತೆ ಬ್ರಹ್ಮಾಂಡ ಬೇಜಾರಾಗಿ ಹೊಲಸು ಮುಖ ಮಾಡಿ ನನ್ನನೇ ನೋಡುತ್ತಿದ್ದಳು. ಹುಡುಗಿ 'Sorry I don't speak your language?' ಅಂತ ಅಂದಿದ್ದಿದ್ದರೆ ಆ ಆಂಟಿಗೆ ಸ್ವಲ್ಪ ಖುಷಿಯಗುತ್ತಿತ್ತೋ ಏನೋ. ಆದರೆ ಆ ಹುಡುಗಿ ನನ್ನನ್ನು ಅದೆಲ್ಲದರಿಂದ ಪಾರು ಮಾಡಿದ್ದಳು. ಕನ್ನಡದಲ್ಲೇ ಉತ್ತರ ಕೊಟ್ಟು.

ಅಷ್ಟೇ ಸಾಕು, ಬೀಸುವ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು ಎಂದುಕೊಂಡು ಅವಳ ಬೆನ್ನಲ್ಲೇ ನನ್ನ ಪುಸ್ತಕಗಳ ಬಿಲ್ಲಿಂಗ್ ಮುಗಿಸಿ ಹೊರಬಂದೆ. ಕನ್ನಡದ ಹುಡುಗಿಯೊಬ್ಬಳು ಭೈರಪ್ಪನವರನ್ನು ಓದುತ್ತಿರುವುದರ ಬಗ್ಗೆ ಹೆಮ್ಮೆ, ಖುಷಿ ಎಲ್ಲವೂ ಮನದಲ್ಲಿ ಮೂಡಿತು. ನಾನು ಖರೀದಿಸಿದ 'ಜೋಕುಮಾರಸ್ವಾಮಿ, ಮೂಕಜ್ಜಿಯ ಕನಸುಗಳು  ' ಪುಸ್ತಕಗಳನ್ನು ಹೊಂದಿಸಿಕೊಳ್ಳುತ್ತ baggage deposit counter ನಿಂದ ನನ್ನ ಬ್ಯಾಗನ್ನು ಟೋಕನ್ ಹಿಂದಿರುಗಿಸಿ ಪಡೆಯಹತ್ತಿದೆ .

ಅವಳ ಬ್ಯಾಗ್ ಯಾಕೋ ಸಿಗ್ತಾ ಇರ್ಲಿಲ್ಲ ಅಲ್ಲಿ. ಬ್ಯಾಗೇಜ್ ಕೌಂಟರ್ ನವನ ಜೊತೆ ಅದೇನೋ ಮಾತು ನಡೆದಿತ್ತು. 'ಇದೀಗ ತಾನೇ ಬ್ಯಾಗ್ ಇಟ್ಟು ಹೋಗಿದ್ದೆ, ಟೋಕನ್ ಕಳೆದು ಹೋದರೆ ಏನಾಯಿತು ನಾನು ಹೇಳುತ್ತೆನಲ್ಲ  ಭಯ್ಯಾ! ಪ್ಲೀಸ್ ಚೆಕ್ ಕರ್ಕೆ ದೆದೋನಾ?' ಅಂತ ಹೇಳಿದ್ದು ಕೇಳಿಸಿತು . ಆದರೆ ಯಾಕೋ ಆ ' ಚಪ್ಪಟೆ ಕಣ್ಣಿನ ಭಯ್ಯಾ' ಮಾತ್ರ ಅವಳ ಮಾತನ್ನು ಒಪ್ಪುವಂತೆ ತೋರುತ್ತಿರಲಿಲ್ಲ.ನಿನ್ನೆ ಭಾನುವಾರ, ಸಪ್ನಾ ಬುಕ್ಸ್ ನವರು ಡಿಸ್ಕೌಂಟ್ ಆಫರ್ ಗಳನ್ನ ಇಟ್ಟಿದ್ದಕ್ಕೋ ಏನೋ ಅಲ್ಲಿ ಭರ್ತಿ ಜನಜಂಗುಳಿಯಾಗಿತ್ತು. ಒಂದರ ಮೇಲೊಂದು ಬ್ಯಾಗ್ ಗಳನ್ನೂ ವಟ್ಟಲಾಗಿತ್ತು. ಇವಳ ಬ್ಯಾಗ್ ಅನ್ನು ಅದರಲ್ಲಿ ಹುಡುಕುವುದಕ್ಕೆ ಸಮಯ ಹಿಡಿಯುವುದಾಗಿಯೂ, ಅಲ್ಲಿ ಎರಡು ನೂರಕ್ಕೂ ಹೆಚ್ಚು ಬ್ಯಾಗ್ ಗಳನ್ನೂ ಇರಿಸಲಾಗಿದ್ದಾಗಿಯೂ, ಜನ ಹೊರಟಂತೆ ಅವಳ ಬ್ಯಾಗ್ ಉಳಿದಿಕೊಂಡ ಮೇಲೆ ಅದನ್ನು ಒಮ್ಮೆ ಮ್ಯಾನೇಜರ್ ಜೊತೆ ಕನ್ಫರ್ಮ್ ಮಾಡಿದ ಮೇಲೆ ಕೊಡುವುದಾಗಿಯೂ ಹೇಳಿದ ಆ ಬ್ಯಾಗ್ ಭಯ್ಯಾ!

ಕಯ್ಯಲ್ಲಿ ಮೂರು ವಜನವಾದ ಪುಸ್ತಕಗಳನ್ನು ಹೊತ್ತು ಸುಮ್ಮನೆ ಹಿಂದಕ್ಕೆ ಬಂದು ಆ ವಿಸ್ತಾರವಾದ ಮೆಟ್ಟಿಲಿನ ಮೇಲೆ ಕುಳಿತುಕೊಂಡಳು ಆ ಹುಡುಗಿ, ಆ ಭಯ್ಯಾ ನ ಕೂಗಿಗೆ ಕಾಯುತ್ತ. ಸಮಯ ೧೦:೦೦ ಘಂಟೆ ರಾತ್ರಿ. ಕೋರಮಂಗಲದಲ್ಲಿ ಹನ್ನೆರಡು ಘಂಟೆಯವರೆಗೂ ಹುಡುಗಿಯರು ಓಡಾಡುತ್ತಿದ್ದರಾದರೂ ಇವಳ್ಯಾಕೋ ಅಷ್ಟು ಕಂಫರ್ಟಬಲ್ ಆಗಿರಲಿಲ್ಲ . ಆಗಾಗ ಕೈ-ಗಡಿಯಾರವನ್ನೊಮ್ಮೆ, ಭಯ್ಯಾ ನನ್ನೊಮ್ಮೆ ನೋಡುತ್ತಾ ಕುಳಿತಿದ್ದಳು. ಇನ್ನು ಜನ ಅಲ್ಲಿಂದ ಖಾಲಿಯಾಗುವುದಕ್ಕೆ ಎಷ್ಟೊತ್ತು ಆಗುತ್ತದೋ ಏನೋ. ರೋಡ್ ನಲ್ಲಾದರೂ ಯಾರೂ ಕಾಣುತ್ತಿಲ್ಲ. ಅಲ್ಲೊಬ್ಬ ಇಲ್ಲೊಬ್ಬ ಅಂತ ಹುಡುಗರು ನಗಾಡಿಕೊಂಡು ಹೋಗುತ್ತಿದ್ದಾರೆ, ಬಸ್ಸುಗಳು ತಮ್ಮ ಡ್ಯೂಟಿ ಮುಗಿಸಿ ಡಿಪೋ ವನ್ನು ಹಾಸಿಗೆ ಹುಡುಕಿಕೊಂಡು ಭರ್ರನೆ ಬರುವ ಪೋರನಂತೆ ಬರುತ್ತಿವೆ . ಬಹುಷಃ ಈ ಬಸ್ಸು ಮರಳಿ ಬರಲಿಕ್ಕಿಲ್ಲ, ಕೋರಮಂಗಲ ಡಿಪೊ ನತ್ತಲೇ ಹೋಯಿತು,  ಆಟೋ ದವರೂ ಅದೆಷ್ಟು ದುಡ್ಡು ಕೇಳುತ್ತಾರೋ ಏನೋ. ಪೇಪರ್ ನಲ್ಲಿ ಓದಿದ ಸುದ್ದಿಗಳೆಲ್ಲವೂ ಒಮ್ಮೆಲೇ ನೆನಪಾಗಿ ಅಲ್ಲಿಂದ ಧಡಕ್ಕನೆ ಎದ್ದು ಮತ್ತೊಮ್ಮೆ ಆ ಹುಡುಗಿ ಭಯ್ಯಾ ನತ್ತ ಹೋಗಿ ವಿಚಾರಿಸಿದಳು. ಅವನು ಇನ್ನೂ ಅರ್ಧ ಘಂಟೆಯಾದರೂ ಆದೀತು, ಮ್ಯಾನೇಜರ್ ಬಿಜಿ ಇದ್ದಾರೆ ಎಂದು ಹೇಳಿಬಿಟ್ಟ. ಅದಾಗಲೇ ಸಮಯ ೧೦:೩೦ ಘಂಟೆ!

ಇದೆಲ್ಲವನ್ನೂ ನಾನು ಗಮನಿಸುತ್ತಲೇ ಇದ್ದೆ. ಹೌದು! ಆ ಅರ್ಧ ಘಂಟೆಯೂ ನಾನು ಸಹ ಅಲ್ಲೇ, ಅದೇ ಮೆಟ್ಟಿಲುಗಳ ಮೇಲೆಯೇ ಕುಳಿತಿದ್ದೆ. ಯಾರಿಗೂ ಕಾಯದೇ, ಎನೂ ಕೆಲಸವಿಲ್ಲದೆಯೇ . ಅವಳಿಗಿಂತ ಒಂದಷ್ಟು ದೂರದಲ್ಲಿ, ಆದರೆ ಅವಳ ನೋಟಕ್ಕೆ ಸಿಗುವಷ್ಟು ಸನಿಹದಲ್ಲಿ. ಅದು ಅವಳಿಗೂ ಗೊತ್ತಿತ್ತು ಅಂದುಕೊಳ್ಳುತ್ತೇನೆ. ಆ ಹೊತ್ತಿನಲ್ಲಿ ಅವಳು ಒಬ್ಬಳೇ ಪಡುತ್ತಿದ್ದ ಪಾಡನ್ನು ನೋಡಿ ಹಾಗೆ ಮಾಡಿದ್ದೆನೇ ವಿನಃ ಅವಳ ಸೌಂದರ್ಯಕ್ಕೆ ಆಕರ್ಷಿತವಾಗಿ ಆಗಲಿ ಅಥವ  ಅವಳ ಒಡನಾಟವನ್ನು ಬಯಸಿಯಾಗಲಿ ಉಳಿದಿದ್ದಿಲ್ಲ. ಮೂಲ ಕಾರಣವು ಅವಳಿಗೆ ತುಸು ಕಂಫರ್ಟಬಲ್ ಹಾಗು ಸೇಫ್ ಫೀಲ್ ಆಗಲಿ ಎಂದಷ್ಟೇ ಇತ್ತು, ನಾನಲ್ಲಿ ಉಳಿದಿದ್ದಕ್ಕೆ. ನನ್ನ ಮನೆಯೂ ಅಲ್ಲಿಂದ ನಡೆದು ಹೋದರೆ ೧೦ ನಿಮಿಶದಷ್ಟೇ ದೂರವಿತ್ತು.

ಸುಮಾರು ಹತ್ತು ಘಂಟೆ ನಲವತ್ತೈದು ನಿಮಿಷಕ್ಕೆ ಆ ಮ್ಯಾನೇಜರ್ ಅಲ್ಲಿಗೆ ಬಂದ. ಇವಳು ಅವನೆಡೆ ಓಡಿ ಆ ಭಯ್ಯಾನನ್ನು ತೋರಿಸಿ ತನ್ನ ಅಸಹನೆಯನು ತೋಡಿಕೊಂಡಳು, ನಡು ನಡುವೆ ತನ್ನ ಕೈ ಗಡಿಯಾರವನ್ನು ನೋಡಿಕೊಂಡು ಸಮಯದ ಅರಿವನ್ನೂ ಅವನಿಗೆ ಕೊಟ್ಟಳು. ಮ್ಯಾನೇಜರ್ ಸೌಮ್ಯವಾಗಿಯೇ ಅವಳನ್ನು ಕರೆದೊಯ್ದು ಭಯ್ಯಾ ನಿಗೆ ಅವಳ ಬ್ಯಾಗ್ ಅನ್ನು ಹುಡುಕಿ ಕೊಡಲು ಆಜ್ಞೆ ಮಾಡಿದ. ಭಯ್ಯಾ ಅವನಿಗೆ ಗೋಣು ಹಾಕಿ ಅವಳ ಬ್ಯಾಗ್ ಅನ್ನು ಹುಡುಕ ಹತ್ತಿದ. ಹತ್ತು ನಿಮಿಷದಲ್ಲಿ ಅವಳ ಬ್ಯಾಗ್ ಅನ್ನು ಹುಡುಕಿ ತೆಗೆದು ಅಗೋ ಅಲ್ಲಿ!! ಅದೇ! ಎಂದು ಅವಳು ಹೇಳಿದ ಮೇಲೆ ಅದನ್ನು ಅವಳ ಕಯ್ಯಲ್ಲಿಡದೆ ಬದಿಗಿಟ್ಟುಕೊಂಡು 'ರೆಜಿಸ್ಟರ್ ಮೇ ಸೈನ್ ಕರೋ ಮೇಡಂ ಆಪ್... ಫೋನ್ ನಂಬರ್ ಸಬ ಲಿಖ್ ಕೆ. ಬಾದ್ ಮೇ ಕಿಸಿ ಔರ್ ಕ ಹುವಾ ತೋ  ಹಮೇ ಹಿ ಪಕಡೆಂಗೆ' ಎಂದ. ಅವಳು ಸಧ್ಯ! ಬ್ಯಾಗ್ ಸಿಕ್ಕರೆ ಸಾಕು ಎಂದು 'ಹಾಂ' ಅಂತ ಹೇಳಿ ರೆಜಿಸ್ಟರ್ ಅನ್ನು ಇಸಿದುಕೊಂಡು ಸೈನ್ ಮಾಡಹತ್ತಿದಳು. ಅವನು ಕೊಟ್ಟ ಪೆನ್ನು ಮೂಡುತ್ತಿರಲಿಲ್ಲ!

ಕೊನೆಯ ಪೇಜಿನ ಮೇಲೆ ಎಷ್ಟು ಗೀಚಿದರೂ ಮೂಡದೆ ಇದ್ದಾಗ ಅವನು 'ಆಪ್ಕೆ ಪಾಸ್ ಪೆನ್ ಹೋಗಾ ನಾ ಮೇಡಂ ' ಎಂದು ಅವಳನ್ನೇ ಕೇಳಿದ. ಮನದಲ್ಲಿ ಒಂದು ಸಾವಿರವಾದರೂ ಬೈಗುಳಗಳನ್ನು ಒಂದೇ ಕ್ಷಣದಲ್ಲಿ ಬೈದಂತೆ ಮುಖ ಮಾಡಿ ತನ್ನ ಬ್ಯಾಗ್ ನಲ್ಲಿ  ಹುಡುಕಿಕೊಂಡಳು. ಅದರಲ್ಲಿಯೂ ಪೆನ್ನು ಸಿಗದೇ ಹೋದಾಗ ಅವನತ್ತ ಮೂತಿ ಮಾಡಿ, ನನ್ನಲ್ಲಿಯೂ ಇಲ್ಲ, ಬೇಕಿದ್ದರೆ ನನ್ನ ಫೋನ್ ನಂಬರ್ ತಗೊಳ್ಳಿ, ನಾನಿನ್ನು ಹೊರಡುತ್ತೇನೆ  ಎಂದು ಕೇಳಿಕೊಂಡಳು. ನಾನೇನು ಮಾಡಲಿ ನಿಮ್ಮ ನಂಬರ್ ತಗೊಂಡು, ಅದನ್ನು ರೆಜಿಸ್ಟರ್ ನಲ್ಲಿಯೇ ಬರೆಯಬೇಕು ಎಂದು ಹೇಳಿದ ಅವಳ ಭಯ್ಯಾ. ಮ್ಯಾನೇಜರ್ ಬರ್ತಾರೆ ಹೊರಗೆ ಈಗ, ಅವರ ಹತ್ತಿರ ಪೆನ್ ಇರ್ತದೆ ಎಂದು ಹೇಳಿದ. ಆ ಮ್ಯಾನೇಜರ್ ಹೊರಗೆ ಬರಬೇಕಾದರೆ ಮತ್ತೆ ಎಷ್ಟು ಸಮಯ ಬೇಕಾಗುತ್ತೋ ಎಂದು ಅವಳು ತನ್ನ ಬಲಗೈ ಇಂದ ತನ್ನ ಜೋತು ಹಾಕಿದ್ದ ಬ್ಯಾಗ್ ಗೆ ನಿರಾಸೆಯಿಂದ ಹೊಡೆದುಕೊಂಡಳು. ಆಗ ಅವಳು ನನ್ನನ್ನೇ ನೋಡುವಂತೆ ಕಾಣಿಸಿತು.ನಿಜವಾಗಿಯೂ ನೋಡಿದಳೋ  ಅಥವ ಬರೀ  ನನ್ನ ಭ್ರಮೆಯೋ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ನಾನು ಎದ್ದು ಹೋದೆ . ಅವಳತ್ತ ಹೋಗಿ 'ತಗೋಳಿ ನನ್ನ ಹತ್ರ ಇದೆ ಪೆನ್ನು ' ಎಂದು ಅವಳಿಗೆ ನನ್ನ ಲೇಖನಿಯನ್ನು ಕೊಟ್ಟೆ. ಅವಳು ಒಂದೂ ಮಾತನಾಡದೆ ಪೆನ್ ತಗೊಂಡು ಸಹಿ ಹಾಕಿ ಅಲ್ಲಿಂದ ಹೊರಟು ನಿಂತಳು.
                                                                                  
ಬರೋಬರಿ ಹನ್ನೊಂದು ಘಂಟೆ ಸಮಯ. ಅವಳು ಹೊರಟು ನಿಂತಳೆಂದು ಮೆಟ್ಟಿಲು ಇಳಿದು ರೋಡಿಗೆ ನಡೆದೆ. ರಸ್ತೆ ಬದಿಯಲ್ಲೇ ನಿಂತು ಅವಳು ಆಟೋ ಒಂದಕ್ಕೆ ಕೈ ಮಾಡಿ ನಿಲ್ಲಿಸಿದಳು. ಅವನೊಡನೆ ತುಸು ಚೌಕಾಶಿ ಮಾಡಿ ಕಡೆಗೆ ಹತ್ತಿಕೊಂಡಳು. ನಾನು ಮುನ್ನಡೆದೆ.

ಅವಳು ನನ್ನನ್ನು ನೋಡಿರಲಿಕ್ಕಿಲ್ಲವೆ ? ಒಂದು ಘಂಟೆಗೂ ಮೇಲೆ ಅಲ್ಲೇ ಕುಳಿತಿದ್ದೆನಲ್ಲ. ತೀರಾ ಅಷ್ಟೂ ಗಮನಿಸಲಿಲ್ಲವಾ ?  ಅಥವಾ ಅಪರಿಚಿತರೊಡನೆ ಮಾತು ಬೇಡ ಎಂದೇ ಸುಮ್ಮನಿದ್ದಳೇ. ಆದರೆ ನಾನು ಕನ್ನಡದವನು ಎಂದು ಅವಳಿಗೆ ತಿಳಿದಿತ್ತಲ್ಲ. ಕೌಂಟರ್ ನಲ್ಲಿ ಮಾತನಾಡಿಸಲಿಲ್ಲವೇನು ?... ನಾನು ಅಲ್ಲಿ ಅಷ್ಟು ಹೊತ್ತು ಅವಳಿಗಾಗಿಯೇ ಉಳಿದುಕೊಂಡೆ ಎಂದು ಅನ್ನಿಸಲಿಲ್ಲವೆ ?. ಕನ್ನಡದ ಹುಡುಗಿ ಎಂದು ನಾನು ತೋರಿದ ಅಕ್ಕರೆ ಜಾಸ್ತಿಯಾಯಿತೇ ? ಅಥವಾ ಅವಳಿಗೆ ನಾನು ಅಲ್ಲಿ ಕೂತಿರುವುದಕ್ಕೇ ಜಾಸ್ತಿ ಅನ್-ಕಂಫರ್ಟಬಲ್ ಅನ್ನಿಸ್ತಾ ?? ಹಾಗೇನಾದ್ರೂ ಆಗಿದ್ರೆ ಕಷ್ಟ. ಸಹಾಯ ಮಾಡಲು ಹೋಗಿ ಹೆದರಿಸಿ ಬಿಟ್ಟೆನಲ್ಲ ನಾನು. ಪಾಪ ಅದಕ್ಕೇ ಅವಳು ಅಷ್ಟು embarrassed  ಫೀಲ್ ಮಾಡಿಕೊಳ್ಳುತಿರಬೇಕು. ಅಪರಿಚಿತ ಜಾಗದಲ್ಲಿ ಒಬ್ಬ ಅಪರಿಚಿತ ಹುಡುಗ ಅವಳ ಬೆನ್ನಿಗೇ  ಬಿದ್ದು, ಅವಳು ಹೋಗುವವರೆಗೂ ಕಾಯ್ದುಕೊಂಡು ಕುಳಿತುಕೊಂಡನೆಂದರೆ.. ಎಂಥ ಹುಡುಗೀಗೂ ಅದು odd ಅನಿಸಬಹುದು. ಥೂ!! ಹಾಗೆ ಸೈಲೆಂಟ್-ಹೀರೋ ನ ಹಾಗೆ ಕೂರುವ ಬದಲು ಅವಳೊಡನೆ ಕೊಂಚ ಮಾತನಾಡಿ.. 'ಪರವಾಗಿಲ್ಲ, ನಾನು ನಿಮ್ಮ ಬ್ಯಾಗ್ ಸಿಗುವವರೆಗೂ ಇಲ್ಲೇ ಇರುತ್ತೇನೆ, ಏನು ಅಂಜಿಕೆಯಿಲ್ಲ' ಎಂದು ಹೇಳಿದ್ದರೆ ಒಳ್ಳೆದಿತ್ತೋ ಏನೋ. ಆಗ ನನ್ನನ್ನು ತಪ್ಪಾಗಿಯಂತೂ ತಿಳಿಯುತ್ತಿರಲಿಲ್ಲ ಅವಳು. ನನ್ನ ಇರುವಿಕೆಯ ಮುಜುಗರದಿಂದಲೇ ಇರಬೇಕು, ಅವಳು ಬಿರ ಬಿರನೆ ಓಡಿ  ಆಟೋ ಹಿಡಿದು ಹತ್ತಿದ್ದು, ಇವನಿಂದ ಬೆನ್ನು ತಪ್ಪಿದರೆ ಸಾಕಪ್ಪ ಎಂದು. ಛೆ! ಎಂಥ ಕೆಲಸ ಆಗಿ ಹೋಯ್ತು ನನ್ನಿಂದ! ಸಧ್ಯ.. ಆ ಮ್ಯಾನೇಜರ್ ಅಥವಾ ಆ ಭಯ್ಯಾ ನ ಹತ್ತಿರ ನನ್ನ ಬಗ್ಗೆ ದೂರು ಹೇಳಲಿಲ್ಲವಲ್ಲ ಮಾತ್ರ. ಅಷ್ಟು ಸಾಕು, ಆಗ ಪೆಚ್ಚು ಮೊರೆ ಹೊತ್ತು ಸುಮ್ಮನ್ನೆ ಬರಬೇಕಾಗಿತ್ತು ನಾನು. ಅವಮಾನವಂತೂ ಆಗಲಿಲ್ಲವಲ್ಲ. ಅಷ್ಟು ಸಾಕು ಬಿಡು ಎಂದು ನನ್ನಲ್ಲೇ ಯೋಚಿಸುತ್ತ ರಸ್ತೆಯಲ್ಲಿ ನಡೆಯತೊಡಗಿದ್ದೆ.

ಹಿಂದಿನಿಂದ ಒಂದು ಆಟೋ ನನ್ನ ಪಕ್ಕಕ್ಕೆ ಬಂದು ಬ್ರೇಕ್ ಹಾಕಿತು. 'Excuse me! ನಿಮ್ಮ ಪೆನ್ ... '  ಅದೇ ಹುಡುಗಿ. ನನ್ನ ಪೆನ್ ಅವಳ ಬಳಿಯೇ ಉಳಿದುಹೋಗಿತ್ತು.

'ಒಹ್! ಮರೆತುಹೋಗಿದ್ದೆ.. sorry!'   - ನಾನು ಹೇಳಿದೆ, ಪೆನ್ನು ಇಸಿದುಕೊಳ್ಳುತ್ತ

'ಇಲ್ಲ! ಮರೆತು ಹೋಗಿದ್ದು ನಾನು. I should be sorry ' - ಅವಳೆಂದಳು.

ಇಬ್ಬರೂ ಸ್ಮೈಲ್ ಮಾಡಿದೆವು.

'Thanks for everything tonight!, I saw you were there for me all through that' - ಆಟೋದಲ್ಲಿ ಕುಳಿತೇ ಹೇಳಿದಳು ಬೆಡಗಿ

Engineering ಫಸ್ಟ್ ಸೆಮ್ ನಲ್ಲಿ with-held ಆಗಿದ್ದ ಪೇಪರ್ ನ ರಿಸಲ್ಟ್ ಬಂದಂಗಾಯ್ತು. ಅದೂ ಪಾಸ್ ಎಂದು !! ಮನದಲ್ಲೇ ನನ್ನ ಮೇಲೆ ನಾನೇ ಹೆಮ್ಮೆ ಪಟ್ಟುಕೊಂಡೆ. ಅವಳಿಗೆ ಒಂದು ಸ್ಮೈಲ್ ಅಷ್ಟೇ ಕೊಟ್ಟೆ, ಇನ್ನು ಮಾತು ಬೇಡ ಎಂದು ನನಗೆ ನಾನೇ ಅಂದುಕೊಂಡು.

ಅವಳೂ ಮರು ನಕ್ಕಳು.

ಆಟೋ ಡ್ರೈವರ್ ಎಕ್ಸಿಲೆಟರ್ ಕೊಡುವವರೆಗೂ ಇಬ್ಬರ ಸ್ಮೈಲ್ ಹಿಗ್ಗಿತು. ಅವನ ಇರುವಿಕೆಯ ನೆನಪಾದಂತೆಯೋ ಏನೋ ಅವಳು, 'ಬನ್ನಿ, ಮನೆವರೆಗೂ ಡ್ರಾಪ್ ಮಾಡ್ತೀನಿ ' ಎಂದಳು

'ಬೇಡ, ನೀವು ಹೋಗಿ ನನ್ನ ಮನೆ ಇಲ್ಲೇ ಇದೆ. ನಡೆದುಕೊಂಡೇ ಹೋಗುತ್ತೇನೆ ' ಎಂದೆ.

'Okay then. It was nice being with you , Hope to see you again soon' ಎಂದು ಗಾಳಿಯಲ್ಲಿ ಕಯ್ಯಾಡಿಸಿದಳು. Bye ಎಂಬಂತೆ.

ನಾನೂ ಕಯ್ಯತ್ತಿ bye ಮಾಡಿದೆ.

ಆಟೋ ಡ್ರೈವರ್ ನನ್ನ ನೋಡಿ ಸ್ಮೈಲ್ ಮಾಡಿ ಆಟೋ ಮುಂದೆ ಓಡಿಸಿದ. ಅವನ್ಯಾಕೆ ನಕ್ಕ್ಕನೋ ನನಗೆ ತಿಳಿಯಲಿಲ್ಲ. ಆದರೆ ಆ ಹೊತ್ತಿಗೆ ಅವನೂ ನನ್ನ ಒಳ್ಳೇತನವ ಮೆಚ್ಚಿಯೇ ನಕ್ಕ ಅಂದುಕೊಂಡೆ. ಅವನಿಗೆ ಅಲ್ಲಿ ನಡೆದದ್ದು ಎನೂ ತಿಳಿದಿರಲ್ಲ ಎಂಬುದನ್ನು ಬಲ್ಲವಾಗಿಯೂ . ಅವಳು ಮುಂದೆ ಮುಂದೆ ಹೊರಟು ಹೋದಳು.    
                                          
ಅವಳ 'It was nice being with you' ಮಾತು ಮತ್ತೆ ಮತ್ತೆ ನೆನಪಿಗೆ ಬಂತು. ಅದೆಷ್ಟೋ ಬಾರಿ ತಾಸುಗಟ್ಟಲೆ ಹರಟೆ ಹೊಡೆದು ಕೂತುಕೊಂಡರೂ ಅಷ್ಟಾಗಿ memorable ಆಗಿರುವುದಿಲ್ಲ ಸಮಯ. ಆದರೆ ಇವತ್ತು ಅದೇನೋ ತುಂಬಾ ಸಮಾಧಾನವಾದಂತೆ ಇದೆ ಭೇಟಿ . ಇಬ್ಬರ ನಡುವೆ ಒಂದು ಮಾತೂ ಇಲ್ಲದೆ ಒಂದೂವರೆ ಘಂಟೆ ಜೊತೆಗಿದ್ದೆವು . ಅವಳಿಗೂ ನನ್ನಂತೆ ಅಲ್ಲಿ ಕಳೆದ ಪ್ರತಿ ಕ್ಷಣದ ಅನುಭವವೂ ಇತ್ತು ಎಂದು ಈಗ ಮನದಟ್ಟಾಯಿತು. ನಾನು ಅವಳನ್ನು ನೋಡುತ್ತಾ ಅವಳ ಬಗ್ಗೆ ಯೋಚಿಸುತ್ತಿದಂತೆಯೇ ಅವಳೂ ನನ್ನ ಬಗ್ಗೆ ತುಸುವಾದರೂ ಯೋಚಿಸಿರಬಹುದು ಎಂದು ತರ್ಕ ಹಾಕಿ ವಿಚಿತ್ರ  ಖುಷಿಪಟ್ಟೆ. ಪ್ರಪಂಚಕ್ಕೆ ಇಬ್ಬರು ಬೇರೆ ಬೇರೆಯಂತೆ ಕಂಡರೂ ನಮಗಿಬ್ಬರಿಗೂ ಆ ಸಮಯಕ್ಕೆ ನಾವಿಬ್ಬರು ಬೇರೆ ಬೇರೆಯಲ್ಲ ಎಂದು ತಿಳಿದಿತ್ತು . ಅಲ್ಲಿದ್ದಷ್ಟು ಹೊತ್ತು ಕೂಡ ಅವಳಿಗಾಗಿಯೇ ನಾನಿದ್ದೇನೆಂದು ಅವಳಿಗೆ ತಿಳಿದಿತ್ತು. ನನಗೆ ಅವಳ ಬಗ್ಗೆ ಕಾಳಜಿಯಿತ್ತು. ಪರಸ್ಪರ ಮಾತಿರದೆ ಸಾವಿರ ಮಾತನಾಡಿಕೊಂಡ ಹಾಗೆ ಅನ್ನಿಸಿತ್ತು. ಅವಳೂ ಈಗ ಆ ಆಟೋದಲ್ಲಿ ಅದೆಲ್ಲವನ್ನು ನನ್ನಂತೆಯೇ ನೆನೆಯುತ್ತಿರಲೂಬಹುದು.

ರಾತ್ರಿ ಆ ಮಾಯೆಯಂತಹ ನೆನಪಿಗೆ ಮಾರುಹೋಗಿ ನಗುತ್ತಲೇ ಮಲಗಿದ್ದೆ. ಅವಳು Thanks for being there for me ಅಂದ ಮಾತು, ಆಗ ಅವಳು ಮಾಡಿದ ಆ ಖಾಸಗಿ ಒಡನಾಟದ ಮುಖ ಮತ್ತೆ ಮತ್ತೆ ನೆನಪಾಯಿತು. ರಾತ್ರಿ ಕಳೆದು ಬೆಳಿಗ್ಗೆ ಆಫೀಸ್ ಕ್ಯಾಬ್ ನಲ್ಲಿ ಕುಳಿತು ಅತ್ತ ಇತ್ತ ಕಣ್ಣಾಡಿಸಿದೆ ರೋಡಿನಲ್ಲಿ, ಎಲ್ಲಾದರೂ ಮತ್ತೆ ಕಾಣಸಿಗಬಹುದಾ ಅವಳು ಅಂತ. ಅಷ್ಟರಲ್ಲಿ ಹಿಂದಿನಿಂದ ಒಂದು ಹೆಣ್ಣು ಧ್ವನಿ....

'Hey, Good morning!...... '

ತಿರುಗಿ ನೋಡಿದೆ...

ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...

ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು,...