You are never too old for a new dream, ದೊಡ್ಡವರು ಹೀಗೆ ಹೇಳಿದಾಗ ಅನುಭವದಿಂದಲೇ ಹೇಳಿರಬೇಕು ಎಂದೆನಿಸಿತು. ಇಪ್ಪತ್ತಾರು ಆಯ್ತಲ್ಲ, ಹುಡುಗಿ ಹುಡುಕುವುದು ಶುರು ಮಾಡೋಣಲ್ಲ? ಎಂದು ಅಮ್ಮನ-ತಮ್ಮ ನನ್ನ ಕೇಳಿದಾಗ ಖುಷಿ, ನಾಚಿಕೆ, ಆಸೆ ಎಲ್ಲವೂ ಆಯಿತು. ಸೇದು ಎಂದಿದ್ದಷ್ಟೇ ಕೇಳಿಸಿ ಸಿಗರೆಟ್ ನೋ ಅಥವಾ ಬಾವಿಯಲ್ಲಿನ ನೀರೋ ಎಂದು ಮನಸಾರೆ confuse ಆಗೋ ವಯ್ಯಸ್ಸು ಮೊನ್ನೆ ತಾನೇ ಕಳೆದುಹೋಗಿರಬಹುದು. ಅಪ್ಪನಿಗೇ ಬುದ್ಧಿ ಹೇಳುವ ಬುದ್ಧಿವಂತಿಕೆ ಹಠಾತ್ ಹುಟ್ಟಿದ್ದು ನಿನ್ನೆ ರಾತ್ರಿನೇ ಆದರೂ, ನನ್ನ ವಿಷಯದಲ್ಲಿ ಬುದ್ಧಿ ಹೇಳುವ ಅಪ್ಪಂದಿರಾರೂ ಕಾಣಿಸುವುದಿಲ್ಲ ಇವತ್ತು . ಇಂತಹ ಇಪ್ಪತ್ತಾರರಲ್ಲಿ ಕೆಲ ದಿನಗಳಿಂದ ಒಂದು ಪ್ರಶ್ನೆ ಬಹಳವೇ ಕಾಡುತ್ತಿದೆ.ನೀನು settle ಆಗೋದು ಯಾವಾಗ? ಎಂದು.
ನನ್ನ ಕಟ್ಟ ಕಡೆಯ ದಿವಂಗತ ಗರ್ಲ್ಫ್ರೆಂಡ್ (ದಿವಂಗತವನ್ನು ಇಲ್ಲಿ Ex ಎಂದು ಓದಿ ) ಹೇಳಿದ್ದೂ ಅದೇ. 'ಬೇಗ settle ಆಗೋ ನೀನು ಅಂದರೆ ಅಪ್ಪನ ಹತ್ತಿರ ಮಾತಾಡೋದು ಸುಲಭ ಆಗ್ತದೆ'. ನಾಲ್ಕು ವರ್ಷ IT ನಲ್ಲಿ ಕೆಲಸ ಮಾಡಿ, ನಡುವೆ ಆ ಕೆಲಸ ಬೇಜಾರೆಂದು ಮೂರು ತಿಂಗಳು ಕೆಲಸ ಬಿಟ್ಟು ರಾಜಾಜಿನಗರದ ಬಾಡಿಗೆ ರೂಮಿನಲ್ಲೇ 'settle' ಆಗಿ, ಈಗ ಮತ್ತೆ ಇನ್ನೊಂದು IT ಕೆಲಸವನ್ನು ಸೇರಿದ ನನಗೆ ಇವಳು ಹೀಗೆ ಹೇಳಬಹುದಾ ಎಂದು ಯೋಚಿಸಿದೆ ನಾನು. ನಿನ್ನ ಪರಕಾರ settle ಎಂದರೆ ಏನು ಎಂದು ಕೇಳಿದೆ ಅವಳನ್ನು . ಪ್ರಕಾರವನ್ನು ವಿಕಾರವಾಗಿ ಪರಕಾರವೆಂದ ನನ್ನ ಜೋಕ್ ಅವಳಿಗೆ ಕಾಣಲಿಲ್ಲ. ಹೇಳಿದಳು - 'ಇಂಜಿನಿಯರಿಂಗ್ ಮಾಡಿದ್ದು ಇಂಜಿನಿಯರ್ ಆಗೋಕೆ ಅಲ್ಲ, ಬರೀ ಡಿಗ್ರಿ ಗೋಸ್ಕರ ಅಂತೀಯ. ನಾಲ್ಕು ವರ್ಷ ಆದ್ರೂ IT ನಲ್ಲೇ ದುಡಿದು ಎನೂ ಸಾಧಿಸಲಾಗಲಿಲ್ಲ ಎಂದು ಒಂದು ದಿನ ಕೆಲಸ ಬಿಡ್ತೀಯ. ಮೂರು ತಿಂಗಳು ಜರ್ನಲಿಸಂ, ಮ್ಯಾಗಜಿನ್, ಫಿಲಂಸ್ ಅಂತ ಹೇಳಿ ಓಡಾಡಿ ಮತ್ತೆ ತಿರಗಾ IT ನೇ ಸೇರ್ಕೊತೀಯ. ಕೇಳಿದರೆ, ನನಗೆ ಇದು ಇಷ್ಟ ಇಲ್ಲ ಗೌರಿ... ನಾನು ಬೇರೆ ಏನೋ ಮಾಡಬೇಕು ಅಂತೀಯ . ಇದೆಲ್ಲವನ್ನೂ ಹೇಗೆ ಡೈಜೆಸ್ಟ್ ಮಾಡ್ಕೊಳೋದು ಅಂತಾನೆ ಅರ್ಥ ಆಗಲ್ಲ ನನಗೆ, ನಿನಗೆ ಏನಾದರೂ ಬೇಕೋ, ಅಪ್ಪನಿಗೆ ನಾನು ಏನು ಉತ್ತರ ಕೊಡುವುದು, ಮುಂದೆ ಮಕ್ಕಳನ್ನು ನೀನು ಹೇಗೆ ತಗೊತಿಯೋ, responsibilities ಗಳನ್ನ ಹೇಗೆ ಹ್ಯಾಂಡಲ್ ಮಾಡ್ತಿಯೋ ಅಂತ ಯೋಚನೆ ಆಗತ್ತೆ. ಅದಕ್ಕೆ ಕೇಳ್ತಾ ಇದ್ದೀನಿ, settle ಯಾವಾಗ ಆಗ್ತಿಯೋ ನೀನು ಅಂತ . ನಿನ್ನಲ್ಲೇ ನೀನು ತೀರಾ unsettled ಆಗಿರ್ತೀಯ '.
ಮೇಲಿನದೆಲ್ಲ ಈಗ ನನ್ನ ಭೂತ. ಕಾಲದ ಭೂತವು (past ), ಕಾಡುವ ಭೂತವೂ (demon) ಬೇರೆ ಬೇರೆಯಾಗಿದ್ದಷ್ಟು ಒಳ್ಳೇದು. ಎರಡೂ ಒಂದೇ ಆಗಿಬಿಟ್ಟರೆ ಭವಿಷ್ಯತ್ತನ್ನು ಬಿಡಿ, ವರ್ತಮಾನಕ್ಕೆ ಜಾಸ್ತಿ ಧಕ್ಕೆ. ಸಂಬಂಧವಿಲ್ಲದಿದ್ದರೂ ಒಂದು ಲೈನ್ ನೆನಪಾಗಿದ್ದಕ್ಕೆ ಹೇಳಿಬಿಡುವೆ ಇಲ್ಲಿ 'All the miracles in the world happened in present'. ಇದನ್ನು ನೀವೇ ಹೇಗಾದರೂ ಸಂಬಂಧಿಸಿಕೊಳ್ಳಿ. ಮೊನ್ನೆ ನಮ್ಮ ಪಕ್ಕದ್ಮನೆ ಅಂಕಲ್ ಹೇಳಿದರು ಈಗಿನ ಕಾಲದ ಹುಡುಗರು ಭಾರಿ ಚುರುಕು, ೨೫-೨೬ ವಯ್ಯಸಿನಲ್ಲೇ settled ಆಗಿಬಿಡ್ತಾರೆ, ನಮ್ಮ ಕಾಲದಲ್ಲಿ ಮೂವತ್ತೈದು ಆಗಿ ಒಂದೆರಡು ಮಕ್ಕಳು ಆಗೋ ವರೆಗೂ ನಾವು settle ಆಗಿರುತ್ತಿರಲಿಲ್ಲ- ಎಂದು. ನಾನು ಮತ್ತೆ ಅವರನ್ನು ಕೇಳಿದೆ ನಿಮ್ಮ ಅಧಿಕಪ್ರಸಂಗತನದ ಪ್ರಕಾರ settled ಅಂದರೆ ಏನು ಅಂಕಲ್ ?. 'ಅಧಿಕಪ್ರಸಂಗ' ವ ತುಸು ಅವಸರವಾಗಿ ಉಚ್ಚಾರಿಸಿದ್ದಕ್ಕೋ, ಅಥವಾ ಅವರ ಶಬ್ದ ಭಂಡಾರದ ಬಡತನಕ್ಕೋ ಅವರಿಗೆ ನನ್ನ ಕುಹಕ ತಿಳಿಯಲಿಲ್ಲ. ಅವರು ಒಮ್ಮೆ ಆಕಾಶವ ನೋಡಿ, ನನ್ನ ಹೆಗಲ ಮೇಲೆ ಕೈ ಇಟ್ಟು, ಭಗವದ್ಗೀತೆಯ ಕೃಷ್ಣನಂತೆ ಶುರುವಿಟ್ಟರು - 'ನೋಡು ಕಿರಣ್, ಮನುಷ್ಯ ಪ್ರಾಣಿ ಒಂದಕ್ಕೇ ಯೋಚಿಸುವ ಬುದ್ಧಿ ಇರುವುದು. ಉಳಿದೆಲ್ಲವುಗಳು ಇನ್ನೂ nomadic ಸಂಸ್ಕೃತಿಯಲ್ಲೇ ಇರುವಂಥವುಗಳು. ನಮಗಷ್ಟೇ ಒಂದು ಸ್ಥಳದಲ್ಲಿ ಬೇರೂರಿ ಅಲ್ಲೇ ನಮ್ಮವರನ್ನು, ನಮ್ಮತನವನ್ನು ಬೆಳೆಸಿಕೊಂಡು ನಿರಮ್ಮಳವಾಗಿ ಉಸಿರಾಡುವ ಆಸೆ, ಕ್ಷಮತೆ ಇರುವುದು. ಹುಟ್ಟುತ್ತಾ ಬೆತ್ತಲಾಗಿ ಹುಟ್ಟಿದರೂ ಬೆಳೆಯುತ್ತ ಬಣ್ಣವಾಗುತ್ತೇವೆ. ನಮಗೆ ಬೇಕಾದ ಬಣ್ಣಗಳನ್ನು ಆರಿಸಿಕೊಂಡು, ಬಳಿದುಕೊಂಡು ಸಂತೃಪ್ತಿ ಪಟ್ಟುಕೊಳ್ಳುವುದಕ್ಕೇ ಬಹುಷಃ settled ಅನ್ನುತ್ತಾರೆ . ಅಧಿಕಪ್ರಸಂಗತನವಾದರೂ ನಿನ್ನ ಕಾಳಜಿಗಷ್ಟೇ ನಿನ್ನೊಂದಿಗೆ ನನ್ನ ಪ್ರಶ್ನೆ ಹಾಗು ಉತ್ತರಗಳು ' ಎಂದುಬಿಟ್ಟರು!! ವಯ್ಯಸ್ಸು ಬರುವುದು ಹಾಗು ವಯ್ಯಸ್ಸು ಆಗುವುದರ ನಡುವಿನ ವ್ಯತ್ಯಾಸ ತಿಳಿದಂತಾಗಿ ಅವರ ಮುಖ ನೋಡಲಾಗದೆ ನೆಲವನ್ನು ನೋಡಿದೆ. ಕೆಳಗೆ ನೋಡಿದ್ದು ಅವರ ಸ್ಪೀಚ್ ನಿಂದಾಗಿ ಅಲ್ಲ, ಅದರ ಕೊನೆಯ ಸಾಲಿನಿಂದಾಗಿ!
ಲೈಫ್ ನಲ್ಲಿ ಒಂದು ಮಟ್ಟಕ್ಕೆ ಸೆಟ್ಲ್ ಆಗಿದೀನಿ. ಇನ್ನೇನಿದ್ದರೂ ಆರಾಮವಾಗಿ ಮಕ್ಕಳು-ಮರಿ ಅಂತ ಇರೋದು ಅಂತೆಲ್ಲ ಮಾತನಾಡುತ್ತಾರೆ. ಈ ಸೆಟ್ಲ್ ಅನ್ನೋದು ತೀರಾ ರಿಲೇಟಿವ್ ವಿಷಯ, ಅಪ್ಪನ ಪ್ರಕಾರ ಸೆಟ್ಲ್ ಎಂದರೆ ಎರಡು ಸೈಟ್ ಮಾಡುವುದು, ಅಮ್ಮನ ಪ್ರಕಾರ ಹೆಂಡತಿ-ಮಕ್ಕಳನ್ನ ಮಾಡುವುದು, ಸ್ನೇಹಿತ ದೀಪಕ್ ನ ಪ್ರಕಾರ ನಾಲ್ಕು ಜನ ಅಪರಿಚಿತರಿಗೆ ನಮ್ಮ ಹೆಸರು ತಲುಪುವುದು, ಕಿಶೋರ ನಂತೆ ಪ್ರೀತಿಸಿದವಳ ತನ್ನವಳಾಗಿಸುವುದು, ನಮ್ಮ ಸಂಪಾದಕರು ಹಾಗು ನನ್ನ ಗುರುಗಳಾದ (ನನ್ನ ಸ್ವ-ಘೋಷಿತ ಗುರುಗಳು. ನಾನು ಏಕಲವ್ಯನಂತೆ, ಸುಮ್ನೇನಾ!) ಗಣಪತಿ ಸರ್ ಪ್ರಕಾರ ಸಾಯುವುದರೊಳಗೆ ಏನಾದರೂ ಕಡೆದು ಕಟ್ಟೆ ಹಾಕುವುದು.
ಮಳೆ ನಿಂತ ಮೇಲೆ ಗೂಡ ಬಿಡಬೇಕೆನ್ನುವ ಹಕ್ಕಿಗೆ, ಸಂಜೆಯಾದ ಮೇಲೆ ಕೊಂಬೆಗೆ ಜೋತುಬೀಳುವ ಬಾವಲಿಗೆ, ತಿರುಗಿ ಆಯಾಸವಾಗಿ ಧಸ್ಸೆಂದು ಕುಳಿತು ಬಿಡುವ ಗಾಣದೆತ್ತಿಗೆ, ಬೀಸುವ ಗಾಳಿಗೆ, ಉರಿಯೋ ಬೆಂಕಿಗೆ ಇದನ್ನು ಕೇಳಿ ನೋಡಿದೆ. ನೀವೆಲ್ಲ ಲೈಫ್ ಅಲ್ಲಿ settle ಆಗೋದು ಯಾವಾಗ ? ಜೋರಾಗಿ ಕಿರುಚಿ. ಅಕ್ಕಪಕ್ಕದಿಂದ ಕೆಲ ನಗುವಷ್ಟೇ ಕೇಳಿಸಿತು, ಪರಿಚಿತ ನಗುಗಳೇ ಅವು. ಅಪರಿಚಿತರೆಂದೂ ಕೇಳುವ ಹಾಗೆ ನಗುವುದಿಲ್ಲ, ಕೇಳುವುವು ಪರಿಚಿತರ ನಗುಗಳೇ. ಸಂಬಂಧಿಕರಲ್ಲೇ ವೈರಿಗಳಾಗುವ potential ಇರುವುದು ನೋಡಿ . ಇದನ್ನ್ಯಾಕೆ ಹೇಳಿದೆನೋ ಗೊತ್ತಿಲ್ಲ, ನೆನಪು ಹಾರಿಬಿಡಿ. ಹಾಂ! settled ಆಗುವುದು ಅನ್ನೋ ಮಾತು ಭಾರಿ ಲೌಕಿಕ, ವಾಂಛೆಯ ಪರಮಾವಧಿ ಎಂದು ನನ್ನ ಅನಿಸಿಕೆ. ತಿಂಗಳಕ್ಕೆ ೫೦ ಸಾವಿರ ದುಡಿಯುವ ನನಗೂ, ಹಾಗು ತಿಂಗಳಕ್ಕೆ ೩೦ ಸಾವಿರ ದುಡಿಯುವ ನನ್ನ ಆಫೀಸ್ ಕ್ಯಾಬ್ ಡ್ರೈವರ್ ಗೂ ಅಂತಹ ವ್ಯತ್ಯಾಸವೇನೂ ಇಲ್ಲ. ಅವನೂ ಹಂಸಲೇಖರ ಹಾಡುಗಳನ್ನು ಇಷ್ಟಪಟ್ಟು ಕೇಳುತ್ತಾನೆ FM ನಲ್ಲಿ , ದಿನಾಲೂ ಕ್ಯಾಬ್ ನಲ್ಲಿ ಬರುವ ಆ ಬಸವನಗುಡಿ ಹುಡುಗಿಯನ್ನು ಇಬ್ಬರೂ ಕದ್ದು ನೋಡುತ್ತೇವೆ, ಅವಳನ್ನು ನೋಡುವಾಗ ಆಗಾಗ ಒಬ್ಬರ ಕಯ್ಯಲ್ಲಿ ಇನ್ನೊಬ್ಬರು ಸಿಕ್ಕಿ ಮುಖ ಮುಖ ನೋಡಿಕೊಂಡು ಹಲ್ಲುಗಿಂಜುತ್ತೇವೆ. ಇಬ್ಬರೂ ಸೇರೇ ಸೋನಿಯಾ ಗಾಂಧಿಯನ್ನು ಬಯ್ಯುತ್ತೇವೆ, ದೀಪಿಕಾಳನ್ನು (ಪಡುಕೋಣೆ) ಹೊಗಳುತ್ತೇವೆ. ಅವನು ಅಕಸ್ಮಾತ್ ತುಸು ಯಾಮಾರಿದರೆ ಇಬ್ಬರೂ ಒಮ್ಮೆಲೇ ಇಹ ದಿಂದ ಪರಕ್ಕೆ ರವಾನೆಯಾಗುತ್ತೇವೆ!! ಇನ್ನು, ಈ 'settled' ಪದವನ್ನು ಇಲ್ಲಿ ಹೇಗೆ ಕೂರಿಸಲಾದೀತು ??. ಮಾತಿನ ಅರ್ಥ, ದೊಡ್ಡ ಚಿತ್ರಪಟದಲ್ಲಿ ಈ ಶಬ್ದಕ್ಕೆ ಅಷ್ಟಾಗಿ ಅರ್ಥ ಉಳಿಯುವುದೇ ಇಲ್ಲ. ಬಾವಿಯಲ್ಲಿನ ಕಪ್ಪೆಗಳಲ್ಲಿ ಯಾವುದು settled, ಯಾವುದು unsettled!
ಬೇಕೆಂದಾಗ ಬೇಕಾಗಿದ್ದನ್ನು ಮಾಡಿಕೊಂಡು ತಿರುಗುವವನಿಗೆ ಅಲೆಮಾರಿ ಎನ್ನುತ್ತಾರೆ . ಇದ್ದಲ್ಲೇ ಇದ್ದು ತನಗೆ ತಾನೇ ಮಿತಿಗಳನ್ನು ಹಾಕಿಕೊಂಡು ಬಾಳುವವನಿಗೆ ಇಲ್ಲಿ well-settled ಎನ್ನುತ್ತಾರೆ. ಒಂದು ಕೆಲಸದಲ್ಲಿ ನೆಲೆ ಹುಡುಕಿಕೊಂಡು, ಒಂದು ಸಂಸಾರ, ಭವಿಷ್ಯನಿಧಿಯನ್ನು-ಭವಿಷ್ಯವನ್ನು ರೂಪಿಸಿಕೊಂಡು (ರೂಪಿಸಿಕೊಂಡೆವೆಂಬ ಭ್ರಮೆಯಿಂದ ) ಬಾಳುವುದೇ ಸೆಟ್ಲ್ ಆಗೋದು ಎಂದಾದರೆ ವಿವೇಕಾನಂದರ ಬದುಕಿಗೆ ಏನು ಹೆಸರು ಕೊಡಬಹುದು ನಾವು ? ಮನೆ-ಮಠವಿಲ್ಲದೆ, ತಮ್ಮ ಹೆಸರಿಗೆ ಬಿಡಿಗಾಸು ಮಾಡದೆ ಜಗತ್ತನ್ನೇ ತಿರುಗಿದವರು ಅವರು (ಅವರ ಹೆಸರಿಗೆ ರೋಡು, ಮಠಗಳು, ಊರುಗಳೇ ಇವೆ ಈಗ, ಅದು ಬೇರೆ ವಿಷಯ). ನಮ್ಮ ಮಕ್ಕಳಿಗೆ ನಮ್ಮಲ್ಲಿ ಎಷ್ಟು ಜನ ಅವರ ಹೆಸರು ಇಟ್ಟಿಲ್ಲ, ಆದರೂ ಅವರಂತೆ ನಮ್ಮ ಮಕ್ಕಳೂ ನಾನು ಡಿಗ್ರಿ ತಕ್ಕನಾಗೆ ಕೆಲ್ಸಕ್ಕೆ ಸೇರದೇ ಆಧ್ಯಾತ್ಮಿಕತೆ, ಯೋಗ-ಧ್ಯಾನ ಅಂತ ದೇಶ ಸುತ್ತುತ್ತೇನೆ ಎಂದರೆ ನಾವು ಶಹಭಾಸ್ ಎನ್ನುತ್ತೆವೆಯೇ? ನರೇಂದ್ರ ಮೋದಿ ಗುಜರಾತಿನ ಮುಖ್ಯ ಮಂತ್ರಿ ಆಗುವವರೆಗೂ ಅವರ ಹೆಸರು ನಮ್ಮಲ್ಲಿ ಎಷ್ಟು ಜನಕ್ಕೆ ತಿಳಿದಿತ್ತು. ಅವರದ್ದೂ ಅದೇ! ಊರೆನ್ನದೆ, ಹಗಲು-ರಾತ್ರಿಯೆನ್ನದೆ ತಿರುಗಾಡಿ, ಸಂಘ ಸಂಸ್ಥೆಗಳಲ್ಲಿ ದುಡಿದು, ಹೆಸರು ಮಾಡಿ ಆಮೇಲೆ ಮುಖ್ಯಮಂತ್ರಿ, ಪ್ರಧಾನಿ. ಅಂದರೆ ಪ್ರಧಾನಿ ಆದನಂತರ ಅವರು settle ಆದರೆಂದೇ ? ನೂರರಷ್ಟು ನಾಟಕ-ಸಿನಿಮಾ ಗಳನ್ನ ಮಾಡಿ ವರ್ಲ್ಡ್-ಥೀಯೇಟರ್ ನಲ್ಲಿ ಹೆಸರುವಾಸಿಯಾದ ನಸೀರುದ್ದೀನ್ ಶಾಹ್ ರದ್ದು ಮೂವತ್ತಕ್ಕೂ ಹೆಚ್ಚು ಫಿಲಂಸ್ ಗಳು ಡಬ್ಬದಲ್ಲಿಯೇ ಉಳಿದುಕೊಂಡಿವೆ ಎಂದರೆ ನೀವು ನಂಬುತ್ತೀರಾ? ಅನಂತ ನಾಗ್,ದೊರೆ ಭಗವಾನ್ ಅಂಥವರು ಆಗಾಗ ಆಟೋ ಗಳಲ್ಲಿಯೇ ರಸ್ತೆಗಳಲ್ಲಿ ಕಾಣಸಿಗುತ್ತಾರೆ ಎಂದರೆ ಉಬ್ಬು ಹಾರಿಸದೆ ಅದರಲ್ಲೇನಿದೆ ಬಿಡಿ! ಎನ್ನುತ್ತೀರಾ.
ಹಾಳಾಗಿ ಹೋಗ್ಲಿ, ಫೈನಲ್ ಆಗಿ ಏನ್ ಹೇಳ್ತೀಯ ಹೇಳಿ ಸಾಯಿ ಮಾರಾಯ ಅಂದ್ರಾ?
ಇಷ್ಟೇ! ಸೆಟ್ಲ್ ಅನ್ನೋದು ಒಂದು perspective ಅಷ್ಟೇ, ಸಾರ್ವಕಾಲಿಕವಲ್ಲದ ಅಂಶ!
ಬೇಕೆನಿಸದ್ದನ್ನು ಮಾಡೋಣ. ಸೆಟ್ಲ್ ಆಗಬೇಕೆಂಬ ಬೇಡದ ಭಾರವನ್ನ ತಲೆಯ ಮೇಲೆ ಹೊತ್ತು rat race ನಲ್ಲಿ ಓಡಿ ಓಡಿ ಮಂಡೆನೋವಿನಿಂದ ಸಾಯೋದಕ್ಕಿಂತ ಯಾವುದೇ ವಯ್ಯಸ್ಸಿನವರಾದರೂ ಸರಿಯೇ ನಮ್ಮ ಮನಸಿನ ಬೆರಳಿನ ತುದಿಯಂತೆ ಸಾಗೋಣ. ನಮ್ಮ ನಮ್ಮ ಪರಮಾತ್ಮನ ಮಾತಿಗೆ ಕೊಂಚ ಹುಂ-ಗುಡೋಣ! ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ಎಂದು ಕರೆದವರು ಪಾಪ ಕಾದು ಕಾದುನೇ ತೀರಿಹೋಗಿರಬೇಕು, ಆದರೂ ಒಮ್ಮೆ ಕರೀತೀನಿ... ಆದದ್ದಾಗಲಿ ಬನ್ನಿ, ಲೈಫ್ ಅಲ್ಲಿ ಸ್ವಲ್ಪ unsettle ಆಗೋಣ!
Ee article est sala odeno..ast unsettle adeni naa
ReplyDeleteHarish: Ha ha :) Obbrigara use aatla. saak bidu :P
ReplyDelete