Saturday, November 10, 2018

ರಾವಣನ ಕಥೆಯಲ್ಲಿ ರಾಮನೇ ರಾಕ್ಷಸ


 ರಾಕ್ಷಸ ರಾವಣನ ವಿರುದ್ಧ ಧರ್ಮಯುಧ್ಧಕ್ಕೆ ಹೋಗುವ ಮುನ್ನ ರಾಮನು ಯಜ್ಞ ಮಾಡಬೇಕು, ಆ ಯಜ್ಞವನ್ನು ಒಬ್ಬ ಶ್ರೇಷ್ಠ ಬ್ರಾಹ್ಮಣನು ನೆರವೇರಿಸಿ ಕೊಡಬೇಕು ಅಂತ ಗುರುಗಳು ಪಂಡಿತರೆಲ್ಲ ಹೇಳಿದಾಗ, ರಾವಣನಿಗಿಂತ ಶ್ರೇಷ್ಠ ಬ್ರಾಹ್ಮಣ ಇನ್ನೊಬ್ಬನಿಲ್ಲ ಅಂತ ತಿಳಿದ ರಾಮನು ಆ ಯಜ್ಞವನ್ನು ರಾವಣನೇ ಮಾಡಿಕೊಡಲಿ ಎಂದು ರಾವಣನಲ್ಲಿ ಕೇಳಿಕೊಂಡನಂತೆ. ಬ್ರಾಹ್ಮಣ ನೀತಿಯಂತೆ ಆ ವಿನಂತಿಗೆ ಓಗೊಟ್ಟು ದಾನವ ರಾವಣನು ಪೂಜೆಯ ನಡೆಸಿಕೊಟ್ಟು ರಾಮನಿಗೆ 'ವಿಜಯೀಭವ!' ಅಂತ ಆಶೀರ್ವಾದ ಕೂಡ ಮಾಡಿದ್ದನಂತೆ. ಈ ಅಜ್ಜಿ ಕಥೆಯನ್ನು ಈಗಿನ ಆಡಳಿತ ಪಕ್ಷ, ವಿರೋಧ ಪಕ್ಷದ ದೇವರುಗಳು ನಂಬಲಿಕ್ಕಿಲ್ಲ. ಮೋಹಕತಾರೆ ರಮ್ಯಾ ಅಂತೂ 'ಇದು ರಾಮನ ಕುತಂತ್ರ, ನನ್ನ ಬಳಿ ಪ್ರೂಫ್ ಇದೆ. ಕೆಮ್ಮಂಗೇ ಇಲ್ಲ!' ಅಂದುಬಿಡಬಹುದು. ಸದಾ ಕೆಮ್ಮುವ ಕೇಜ್ರಿವಾಲ್ ಕೂಡಈ ಮಾತಿಗೆ ಕೆಮ್ಮದೇ ಸುಮ್ಮನಿದ್ದು ಬಿಡಬಹುದು. ಇತಿಹಾಸ, ಪುರಾಣ ಕಥೆಗಳೇ ಹಾಗೆ, ಒಮ್ಮೊಮ್ಮೆ ನಮ್ಮನ್ನು ಆಶರ್ಯಕ್ಕೆ ಈಡುಮಾಡುತ್ತವೆ. ಯಾವುದೇ ಆಗಲಿ  ಮೊದಲನೇ ಬಾರಿ ಕೇಳಿದಾಗ ತುಂಬಾ ಕುತೂಹಲ ಮೂಡಿಸುತ್ತವೆ. ಒಹ್! ಹೌದೇ? ಚೆನ್ನಾಗಿದೆ ಇದು, ಆದರೆ ಇದು ಹೇಗೆ? ಹಾಗೂ ಇರಬಹುದಲ್ಲವೇ? ಅಂತನಿಸಬಹುದು. ಮನುಷ್ಯನ ಸ್ವಭಾವ ಅದು, ಕಂಡದ್ದು ಕೇಳಿದ್ದನ್ನು ಪ್ರಶ್ನೆ ಮಾಡಿ, ಪರಿಶೀಲಿಸಿ ನೋಡಿ ಆಮೇಲೆ ಧೃಡ ಅನಿಸಿದಾಗ ಅದನ್ನು ನಂಬುವುದು. ಆದರೆ ಒಂದು ಕಥೆಯನ್ನು ನೀವು ಬಿಟ್ಟೂ ಬಿಡದೆ ಹತ್ತು ಹದಿನೈದು ಸಾರಿ ಕೇಳಿದಾಗ ಮನಸಿನ ಆಶ್ಚರ್ಯ ಸೂಚಿಗಳು, ಪ್ರಶ್ನಾರ್ಥಕ ಚಿಹ್ನೆಗಳೆಲ್ಲವೂ ಮಾಸಿ ಸುಸ್ತಾಗಿ ಹೋಗಬಹುದು. ಹೌದು ಇದು ಹೀಗೇ ಇದೆ, ನನಗೂ ಇದು ಗೊತ್ತು ಅಂತ ಅಂದುಕೊಳ್ಳುತ್ತೇವೆಯೋ ಏನೋ. ಒಂದು 'ಕಥೆ' ಯು 'ಸತ್ಯ' ವಾಗುವುದು ಹೀಗೆಯೇ.   

ಕೆಲ ಕೆಥೆಗಳು ಇತಿಹಾಸ ಆದರೆ,  ಕೆಲವು ಪುರಾಣಗಳಾಗಿವೆ, ಇನ್ನೂ ಕೆಲವು ಸತ್ಯವಾಗಿ ಹೋಗಿವೆ.    ಅಜ್ಜಿಕಥೆ ಮೊಮ್ಮಗನಿಗೆ ನಿದ್ದೆ ತರಿಸಿದರೆ, ಅಪ್ಪನ ಕಥೆ ಮಗಳಿಗೆ ಸ್ಫೂರ್ತಿ ತುಂಬುತ್ತದೆ. ದೇವರ ಕಥೆಗಳು ಧೈರ್ಯ ತುಂಬಿದರೆ, ದೆವ್ವಗಳ ಕಥೆಗಳು ಥೇಟರಿನಲ್ಲಿ ದುಡ್ಡು ಮಾಡುತ್ತವೆ. ರಾಮನ ಕಥೆಯಲ್ಲಿ ರಾಮನೇ ದೇವರು , ರಾವಣನ ಕಥೆಯಲ್ಲಿ ರಾವಣನೇ ರಾಮ, ಶಾಮ ಎಲ್ಲಾ. ರಾಮನ ಕಥೆ, ರಾವಣನ ಕಥೆಗಳೆರಡೂ ಸೇರಿದ ಮೇಲೆಯೇ ಒಂದು ರಾಮಾಯಣವಾಗಿದ್ದು, ದೀಪಾವಳಿ ಹುಟ್ಟಿದ್ದು. ಯಾವುದೇ ಕಥೆಯಲ್ಲಿ ಸರಿ ತಪ್ಪುಗಳೆರಡೇ ಆಯಾಮಗಳು ಇರುವುದಿಲ್ಲ. ಸರಿಯಲ್ಲದೇ ಇರುವುದು ತಪ್ಪು, ತಪ್ಪಲ್ಲದೇ ಇರುವುದು ಸರಿ ಅನ್ನುವ ವಾದ ಪ್ರಬುದ್ಧವಾದದ್ದಲ್ಲ. ಚಿಕ್ಕವರಿದ್ದಾಗ ಬ್ಲಾಕ್ ಅಂಡ್ ವೈಟ್ ಟಿವಿಯಲ್ಲಿ ಸಿನಿಮಾ ನೋಡುತ್ತಾ, 'ಅಪ್ಪಾ, ಇವಾ ಚೊಲೋ ಅದಾನೋ ಕೆಟ್ಟ ಅದಾನೋ?' ಎಂದು ಕೇಳುತ್ತಿದ್ದೆವು. ಒಳ್ಳೆಯವನ ಪಾರ್ಟಿ ಆಗಿ, ಅಲ್ಲಿ ನಡೆಯುವ ಕಥೆಯನ್ನು ನೋಡಿ ಆನಂದಿಸಲು ಆಗ ಸ್ವಲ್ಪ ಸುಲಭವಾಗುತ್ತಿತ್ತು. 'ಒಳ್ಳೆಯವನು' ಹುಡುಗಿಯನ್ನು ರೇಗಿಸಿದರೆ ಅದು ಗಂಡಸುತನ, 'ಕೆಟ್ಟವನು' ರೇಗಿಸಿದರೆ ಅದು ಹಿಂಸೆ, ಒಳ್ಳೆಯವನು ಎರಡು ಬಗೆದರೆ ಅದು ಪರಿಸ್ಥಿತಿ, ಕೆಟ್ಟವನು ತಪ್ಪು ಮಾಡಿದರೆ ಅದು ಅಪರಾಧ. ಒಮ್ಮೊಮ್ಮೆ ಯೋಚಿಸಿದರೆ ಈಗಲೂ ಸಹ ನಾವು ಆ ಸಿನಿಮಾ ನೋಡುವ ಪುಟ್ಟ ಹುಡುಗ/ಹುಡುಗಿರಿಯರಾಗೇ  ಉಳಿದು ಹೋದೆವಾ ಅಂತ ಅನಿಸುತ್ತದೆ. ಒಂದು ಘಟನೆ ಶುರುವಾಗೋ ಮುನ್ನವೇ ಯಾರೋ ಒಬ್ಬರನ್ನು ಇದರಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು ಅಂತ ಕೇಳಿ, ಆ 'ಒಳ್ಳೆಯವರ' ಪಕ್ಷದವರಾಗಿ ಆಮೇಲೆ ನಡೆಯುವ ಕಥಾನಕವನ್ನು ನೋಡಿ, ಕೆಟ್ಟವರನ್ನು ನಿಂದಿಸಿ, ಶಪಿಸಿ ಆನಂದಿಸುತ್ತೇವೆ. ನಮ್ಮ ಬದುಕಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಅಂತ ಹೇಳುವುದು/ನಿರ್ಣಯಿಸುವುದು ಇಂಥ ದಾರಿ ಹೋಹಕರೇ. ಕಪ್ಪು ಬಿಳುಪು ಸಿನಿಮಾಗಳು, ಕಥೆಗಳನ್ನು ನೋಡಿ ನೋಡಿ ಬೆಳೆದ ಪೀಳಿಗೆಗೆ, ಕಪ್ಪು ಮತ್ತು ಬಿಳುಪುಗಳಷ್ಟೇ ಸತ್ಯ ಅಂತ ಅನಿಸಿರಬಹುದು. ಕಪ್ಪು ಬಿಳುಪುಗಳ ನಡುವೆಯೂ ಸಾಕಷ್ಟು ಬಣ್ಣಗಳಿವೆ, ಛಾಯೆಗಳಿವೆ ಎಂಬುದು ನಮಗೆ ಮರೆತು ಹೋದಂತಿದೆ.

ನಮ್ಮ ಸುತ್ತ ನಡೆಯುವ ಪ್ರತಿಯೊಂದು ಘಟನೆ, ಪರಿಸ್ಥಿತಿ, ಸಂಗತಿಗೆ ಸಾವಿರಾರು ಆಯಾಮಗಳಿರುತ್ತವೆ. ಕಪ್ಪು ಬಿಳುಪಿನಲ್ಲಿ ನೋಡದೇ, ಯಾವ ಉಲ್ಲೇಖಗಳಿಂದ ಪ್ರಭಾವಿತರಾಗದೇ   ನಡೆದದ್ದನ್ನು ನಡೆದ ಹಾಗೆಯೇ ಕಂಡು ನಮ್ಮದೇ ಸತ್ಯ, ಅಸತ್ಯ ಗಳನ್ನು ಹುಡುಕುವುದರಲ್ಲಿ ಬದುಕು ಅಡಗಿದೆ. ಗಡಿಯಾರದ ಲೋಲಕಕ್ಕೆ (ಪೆಂಡುಲಮ್) ಇರುವುದು ಎರಡೇ ತುದಿಗಳಾದರೂ ಅದುಯಾವ ತುದಿಗೂ ಅಂಟಿಕೊಂಡಿರುವುದಿಲ್ಲ. ಲೋಲಕವು ಸದಾ ಎರಡು ತುದಿಗಳ ನಡುವೆ ಪಯಣಿಸುತ್ತದೆ, ಆ ಪಯಣವೇ ಜಗತ್ತಿಗೆ ಸಮಯದ ಅರಿವು ಮೂಡಿಸುತ್ತದೆ. ಇತಿಹಾಸ, ಪುರಾಣಗಳಲ್ಲಿ ಬರೆದಿದೆ ಎಂದು ಅದೇ ಹಳೆಯ ಕಪ್ಪು ಬಿಳುಪಿನ ಕನ್ನಡಕ ಹಾಕಿಕೊಂಡು ಮುಂದೆ ನಡೆಯುವುದನ್ನೆಲ್ಲ ನೋಡುತ್ತಾ ಕುಳಿತರೆ ಮತ್ತದೇ ಬ್ಲಾಕ್ ಅಂಡ್ ವೈಟ್ ಟಿವಿ ಕಥೆಯಾದೀತು. ಇತಿಹಾಸ ಎಂಬುದು ಇತಿಹಾಸಕಾರನ ಹೊಟ್ಟೆಪಾಡು; ಇತಿಹಾಸ ಓದುವವನಿಗೆ ಅದು ಬರೀ ಒಂದು  ಕಥೆ. ಇತಿಹಾಸಕ್ಕೆ ಜೋತು ಬಿದ್ದು ಭವಿಷ್ಯವನ್ನು ನೋಡಿದರೆ ಜೋತಾಡಿ ಕಣ್ಣು ಮಂಜಾಗುತ್ತದೆಯಷ್ಟೇ. ನೋಟುಗಳನ್ನು ಬದಲಿಸಿದ ರಾಜಕೀಯ ಪಕ್ಷದವರೇ ಊರುಗಳ ಹೆಸರು ಬದಲಾಯಿಸುವುದನ್ನು ಕಂಡು ಅಚ್ಚರಿಯಾಗುತ್ತದೆ. ಒಂದು ಕಾಲದಲ್ಲಿ ಜನ ಸಾಮಾನ್ಯರಿಗೆ ದೇವತೆಯಾಗಿದ್ದ ಇಂದಿರಾ ಗಾಂಧಿಯೇ ಎಮರ್ಜೆನ್ಸಿ ತಂದದ್ದು. ದೇಶಕ್ಕೇ ತಂದೆಯಾದವರು ಸ್ವಂತ ಮಗನಿಗೆ ತಂದೆಯಾಗುವುದರಲಿ ಎಡವಿದರು ಎಂದು ಕೂಡ ಅಲ್ಲಲ್ಲಿ ನಾವು ಓದುತ್ತೇವೆ. ನಿನ್ನೆಯ ಒಳ್ಳೆಯದರಲ್ಲಿ ಇವತ್ತು ಕೆಟ್ಟದ್ದು ಕಾಣಬಹುದು, ಕಂಡರೆ ಅದು ತಪ್ಪಲ್ಲ. ನಿನ್ನೆಗಿಂತ ನಾವು ಇವತ್ತು ಕಣ್ಣು ಅಗಲಿಸಿ ನೋಡಿದ್ದೇವೆ ಎಂದಷ್ಟೇ ಅದರ ಅರ್ಥ.

ರಾಮ ರಾವಣರು ಇಬ್ಬರು ವ್ಯಕ್ತಿಗಳಲ್ಲದೇ ಇರಬಹುದು, ದೇವರುಗಳಲ್ಲದೇ ಇರಬಹುದು, ಅವರಿಬ್ಬರೂ ಬರೀ ನಮ್ಮ ಮನಸಿನ ಎರಡು ಬಣ್ಣಗಳಾಗಿರಬಹುದು. ಅವರಿಬ್ಬರೂ ನಮ್ಮಲ್ಲಿರುವ ಒಳ್ಳೆತನ, ಕೆಟ್ಟ ಗುಣಗಳ ಪ್ರತೀಕ ಮಾತ್ರವೇ ಆಗಿರಬಹುದು. ನೇರ ಬುದ್ಧಿ ಮಾತು ಹೇಳಿದರೆ ಗಮನ ಕೊಟ್ಟು ಕೇಳದ ಒಂದು ಪುಟ್ಟ ಮಗುವಿಗೆ ಅಜ್ಜಿಯೊಬ್ಬಳು ಕಥೆ ಮಾಡಿ ಹೇಳಿದ ಒಂದು ದೊಡ್ಡ ಕಥೆಯೇ ರಾಮಾಯಣವಾಗಿರಬಹುದು, ಕಂಡವರಾರು. ಹಾಗೇನಾದರೂ ಇದ್ದರೆ ಆ ಅಜ್ಜಿಯ ಪ್ಲಾನ್ ವರ್ಕ್ ಔಟ್ ಆಯಿತು, ಬರೀ ಆ ಪುಟ್ಟ ಹುಡುಗನಲ್ಲದೇ ಒಂದಿಡೀ ನಾಗರಿಕತೆಯೇ  ಆ ಕಥೆ ಕೇಳಿತು, ಬುದ್ಧಿ ಕಲಿಯಿತು. ರಾಮ ರಾವಣರಿದ್ದರೋ ಇಲ್ಲವೋ ಎಂಬುದು ನನ್ನ ವಾದವಲ್ಲ,  ಅವರು ಈಗಲೂ ಇದ್ದಾರೆ ಎಂಬುದು, ಪ್ರತಿಯೊಂದರಲ್ಲಿ. ತನ್ನ ದೇಶಕ್ಕೆ ರಾಮನಾದ ಜರ್ಮನಿಯ ಹಿಟ್ಲರ್ ನೋಡು ನೋಡುತ್ತಿದ್ದಂತೆಯೇ ಜಗತ್ತಿಗೆ ರಾವಣನಾಗಿ ಹೋಗುತ್ತಾನೆ. ಗಟ್ಟಿಯಾದ ಬಂಡೆಗಲ್ಲು ಕೆಲ ವರ್ಷಗಳ ನಂತರ ಕರಗಿ ಮರಳಾಗುತ್ತದೆ. ರಾತ್ರಿ ಕಳೆದ ನಂತರ ಕತ್ತಲೂ ಬೆಳಕಾಗುತ್ತದೆ. ನಮ್ಮೊಡನೆ ನಡೆಯುವ ಪ್ರತಿ ಸಂಗತಿ, ಘಟನೆ, ಆಗು ಹೋಗುಗಳಲ್ಲಿಯೂ  ರಾಮ ರಾವಣರು ಹುಟ್ಟಿ, ಬೆಳೆದು, ಆಡಿ, ಗುದ್ದಾಡಿ, ಕೆಟ್ಟು, ಉದ್ಧಾರವಾಗಿ ಕಡೆಗೆ ಸಮಯ ಸತ್ಯದ ಮುಂದೆ ಇಬ್ಬರೂ ಇತಿಹಾಸ ಆಗಿಹೋದರೆ ಮಾತ್ರ ಮನುಷ್ಯತ್ವಕ್ಕೆ ದೀಪಾವಳಿ.


           

ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...

ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು,...