"ಯಾವ ಹಾಳೆನೂ ಖಾಲಿ ಇಲ್ಲ. ಎಲ್ಲ ಮೊದಲೇ ಬರೆದಾಗಿದೆ. ನಾವು ಕೆಲುವು ಕಣ್ಣುಗಳಿಗೆ ಅದನ್ನು ಕಾಣಿಸುತ್ತೇವೆ ಅಷ್ಟೇ . ಕಾಣದ ಪದಗಳಿಗೆ ಖಾಲಿ ಕಾಗದ ಎಂದು ಬಿಡುತ್ತೇವೆ. ಅದರಲ್ಲೂ ಕಡೆಗೆ ನಮಗೆ ಬೇಕಾದ್ದನ್ನೇ ನೋಡುತ್ತೇವೆ ನಮ್ಮ ಪದಗಳ ಮುಖಾಂತರ.. " -ಪುಟ 25
ಖಾಲಿ ಹಾಳೆಗಳು ಅವನ ಶತ್ರುಗಳು. ಕಂಡರೆ ಆಗ್ತಾ ಇರ್ಲಿಲ್ಲ, ಏನಾದರು ಬರೆದು ಬಿಡುತ್ತಿದ್ದ. ಏಕಾಂತದಲ್ಲಿ ಪದಗಳೊಡನೆ ಒಡನಾಡಿಸುತ್ತಿದ್ದ . ಮೊದಲು ಹವ್ಯಾಸವಾಗಿದ್ದಿದ್ದು ಈಗ ಅವಶ್ಯಕತೆ ಆಗಿದೆ..
"ಅವನ ರಾತ್ರಿಗಳು ಸೂಳೆಯ ಎಕಾಂತದಷ್ಟೇ ಭಯಾನಕವಾಗಿದ್ದವು. ಎಂಥಾ ನರಕ ಯಾತನೆನೂ ಸಹಿಸಿಕೊಳ್ಳೋ ಅವಳು ಏಕಾಂತವನ್ನು ಸಹಿಸಲಾರಳು. ಉತ್ತರವಿಲ್ಲದ ಪ್ರಶ್ನೆಗಳು, ತೇಲುಗಣ್ಣಲ್ಲೂ ಕುಕ್ಕುವ ಅಂತರಾಳದ ಬೆಳಕು.. " - ಪುಟ 32.
ಓದುವವರಿಗೆ waste of time ಅನ್ನಿಸೋ ಇವನ 'collection of
words' ಅವನ ಪ್ರಕಾರ A path to
nowhere . ಮನುಷ್ಯ ಒಂದು ಗುರಿ ಇಟ್ಕೊಬೇಕು, ಹೀಗೆ ಕುಂತಲ್ಲೇ ಎಲ್ಲ ಬರಲಿ ಅಂತಂದ್ರೆ ಏನು ಆಗಲ್ಲ ಅಂತ ಅಪ್ಪ ಬೈದ್ರೆ, 'ಗುರಿ ನಾವು ಅಂದುಕೊಳ್ಳುವುದೋ ಅಥವಾ ಸೆಟ್ ಮಾಡಿಕೊಳ್ಲೋದೋ ಅಲ್ಲ. ಗುರಿ ಕಾಣಬೇಕು' ಅಂತಿದ್ದ. ಏನೇ ಹೇಳಿದರೂ ಪ್ರತ್ಯುತ್ತರ ನೀಡಿ ಸುಮ್ಮನಾಗಿಸುತ್ತಿದ್ದ. ಇತಿಹಾಸ ಅನ್ನೋದು ಅದನ್ನು ಬರೆದವನ ಹೊಟ್ಟೆಪಾಡು ಅಂತಾನೆ. ದೇವರು ಅನ್ನೋದು ಮನುಷ್ಯನ ಅಧೈರ್ಯದ ಒಂದು excuse ಅಂತಾನೆ. ಹೀಗೆ ಏನೇನೋ ಬರೆದುಕೊಳ್ಳುತ್ತ, ಕೆಲ್ಸನು ಮಾಡದೆ, ಖಾಲಿ ಮಾತಾಡೋದು ಇವನ ಅಭ್ಯಾಸ. ಪಕ್ಕ ದರಿದ್ರ.
"ನಾನು ನಡೀಬೇಕು, ಭೂಮಿ ಮುಗಿಯುವಷ್ಟು ನಡೀಬೇಕು, ನಡೀತಾ ನಡೀತಾ ಒಂದು ದಿನ ನನ್ನ ಹೆಜ್ಜೆ ಚಂದ್ರನ ಮೇಲೆ ಬಿದ್ದರೂ ಬೀಳಬಹುದು, ಅಷ್ಟು ನಡೀಬೇಕು. ಅಲ್ಲೆಲ್ಲೋ ದೂರದಲ್ಲಿ ನನ್ನ ಮನೆ ಇದೆ.. ನನ್ನ ಮನೆ ಸಿಗೋವರೆಗೂ ನಾನು ನಡೀಬೇಕು.. " - Miscellaneous ೨೪
ಯಾರೂ ಬರೀದೇ ಇದ್ದಿದ್ದನ್ನ ನಾನು ಬರೀಬೇಕು. ಓದುವ ಕಣ್ಣಿಗೂ, ತಿಳ್ಕೊಳೋ ಮನಸಿಗೂ short-circuit ಆಗಿ connection ಕಟ್ ಆಗಿರಬೇಕು... ಆ ಥರಾ ಏನಾದರು ಬರೀಬೇಕು ಅಂದುಕೊಳ್ಳುತ್ತಿದ್ದ.
ನೀನು ಬರೀ ಹಿಂಗೆ ಏನೇನೋ ಬರಕೊಂಡು, ಉಡಾಫೆ ಮಾತುಗಳಿಂದ ಕಾಲ ಹರಣ ಮಾಡಿಕೊಂಡಿದ್ರೆ ಹೇಗಾಗತ್ತೆ. ಕೆಲಸ ಮಾಡೋಕೆ ಆಸಕ್ತಿ ಇಲ್ಲದಿದ್ದರೆ ಹೋಗ್ಲಿ. ನಿನ್ನ ಬರವಣಿಗೆ ನಾದ್ರೂ use ಮಾಡಿಕೊಂಡು ಏನಾದ್ರು ಸಾಧಿಸು. ಬರೆದು ಬರೆದು ಇಡೋದ್ರಿಂದ ಏನು ಪ್ರಯೋಜನ ಇಲ್ಲ.. ೪ ವರ್ಷ ಆಯ್ತು ಡಿಗ್ರಿ ಮುಗಿದು. ಇನ್ನು ಕೆಲಸ ಇಲ್ಲ ನಿಂಗೆ. ಹೀಗೆ ಆದರೆ ಅಪ್ಪನ್ನ ಹೇಗೆ ಒಪ್ಪಿಸೋದು ಅಂದ ಪ್ರೇಯಸಿ ಮಾತಿಗೆ 'ಜೊತೆಗೆ ಇರಬೇಕಾದೊರು ಏನಾದರೂ ಜೊತೆಗೆ ಇದ್ದೆ ಇರ್ತಾರೆ, ಬಿಟ್ಟು ಹೋಗೋರನ್ನ ಯಾರು ತಡೆಯೋಕೆ ಆಗಲ್ಲ ' ಅಂದಿದ್ದ. ಅವಳು ಬಿಟ್ಟು ಹೋಗಿದ್ದು ಆಯ್ತು.. ಬೇರೆ ಮದುವೆ ಆಗಿದ್ದು ಆಯ್ತು.
ನಿನ್ನ ಲೈಫ್ ನಲ್ಲಿ ಆಗಿದ್ದನ್ನ, ಸುತ್ತ ನೋಡಿದ್ದನ್ನ loosely base ಮಾಡಿ ಒಂದೆನಾದರೂ ಬರಿಬಾರದಾ.. ನಂಗೆ ಒಬ್ಬ ಡೈರೆಕ್ಟರ್ ಪರಿಚಯ ಇದೆ. ಅವರನ್ನ ನೀನು ಭೇಟಿ ಮಾಡಿ ನಿನ್ನ ಬರವಣಿಗೆ ನ ತೋರಿಸಿದರೆ ಏನಾದರು ಆಗ್ಬೋದು ಅಂತ ಅಂದ ಗೆಳೆಯ ಶಾಮ ನ ಮಾತಿಗೆ... 'passion ನ fashion ಆಗಿ ಅರ್ಥೈಸಿದರೆ ಅದು ವ್ಯವಹಾರ ಆಗಿಬಿಡತ್ತೆ, ಕನಸೇ ಬೇರೆ ಜೀವನಾ ನೆ ಬೇರೆ' ಅಂದಿದ್ದ.
ಆದರೂ ಒಂದು ದಿನ ಒತ್ತಾಯ ಮಾಡಿ ಆ ಡೈರೆಕ್ಟರ್ ನ ಭೇಟಿ ಮಾಡಲು ಶಾಮ ಇವನನ್ನ ಕಳಿಸಿದ್ದ. ಹಾಳಾಗಿ ಹೋಗಲಿ, ನಿಂದು ಒಂದ್ ಮಾತನ್ನ ಕೇಳೆಬಿಡ್ತೀನಿ ಅಂತ ಬಂದಿದ್ದ.
ಅದು ಪ್ರಖ್ಯಾತ ಡೈರೆಕ್ಟರ್ ಒಬ್ಬರ ಸಿನಿಮಾ "ಕೆಂಡಸಂಪಿಗೆ"ಯ audition..
ಸ್ಟುಡಿಯೋ ಹೊರಗೆ ಸಾಲಿನಲ್ಲಿ ನಿಂತು ಬಸವಳಿದು ಕಡೆಗೆ ತನ್ನ ಸರದಿ ಬಂದಾಗ ಒಳ ಹೋದ..
ಡೈರೆಕ್ಟರ್: ಬಾರಪ್ಪಾ. ಕೂತ್ಕೋ.. ಹೇಳು ಏನ್ ಮಾಡ್ತಿಯ ನೀನು ?
ಇವನು: ನಾನು ಬರೀತೀನಿ ಸರ್.. ಸಿಕ್ಕಾಪಟ್ಟೆ ಬರೀತೀನಿ..
ಡೈರೆಕ್ಟರ್: ಹಾಂ ?? ಬರೀತಿಯಾ ?? ಹಾಗಾದ್ರೆ ಬರೆಯೋದನ್ನ ಬಿಟ್ಟು ಇಲ್ಲ್ಯಾಕೆ ಬಂದಿದೀಯ ಅಂತ ಲೇವಡಿ ಮಾಡಿ ಕೇಳಿದರು.
ಇವ್ನು: ನಾನು ಬರೆದಿದ್ದ ಕೆಲುವುಗಳನ್ನ ನಿಮಗೆ ತೋರಿಸೋಕೆ ಬಂದಿದೀನಿ ಸರ್.. ನೀವು ಒಂದ್ಸಾರಿ ನೋಡಿದ್ರೆ ...
ಡೈರೆಕ್ಟರ್ : ರೀ ಶೇಷಾದ್ರಿ.. ಯಾರ್ಯಾರನ್ನೋ ಬಿಡ್ತೀರಲ್ರಿ ಒಳಗೆ.. ನೋಡಪ್ಪ ಕುವೆಂಪು.. ನಾವು ಇಲ್ಲಿ acting auditions ಮಾಡ್ತಾ ಇದ್ದೀವಿ. writers ಅಲ್ಲ. ನೀನು acting ಮಾಡೋ ಹಂಗಿದ್ರೆ ಮಾಡು, ಇಲ್ಲ side ಹೋಗು. ತುಂಬಾ ಕೆಲಸ ಇದೆ ನಂಗೆ..
ಡೈರೆಕ್ಟರ್: Next ಬಾರಮ್ಮ..
ಒಂದು ಸುಂದರವಾದ ಹುಡುಗಿ ಬಂದು ಚೇರ್ ಮೇಲೆ ಕೂತ್ಗೊಂತು..
ಹುಡುಗಿ : Hi ಸರ್.. ನನ್ನಹೆಸರು ..
ಡೈರೆಕ್ಟರ್ : ಹೆಸರಲ್ಲೇನಿದೆ ಬಿಡಮ್ಮ.. ನಾನೇ ಒಂದು ಹೆಸರನ್ನ ಕೊಡ್ತೀನಿ ನಿಂಗೆ, ನೀನು 'ಸಂಪಿಗೆ ಹೂವ '. ನಿನ್ನ scene ಏನು ಅಂದರೆ ನಿನ್ನ ಹುಡುಗ ನಿನ್ನನ್ನು ಭೇಟಿ ಆಗಲು Sun-glasses ಹಾಕೊಂಡು ಬಂದಿದಾನೆ, ನಿನಗೆ ಅದು ಇಷ್ಟ ಇಲ್ಲ.. ಅದನ್ನು ನೀನು ಏನೋ dialog ಹೇಳಿ ವ್ಯಕ್ತಪಡಿಸು.. diaolg ಮುಖ್ಯ ಅಲ್ಲ.. expressions ಮುಖ್ಯ.. ಹಾಂ..!! ಶುರು ಮಾಡು..
ಕಯ್ಯಲ್ಲಿದ್ದ cigarette ನಿಂದ ಒಂದು ಪಫ್ ಎಳೆಯುತ್ತ ಕೂತರು ಡೈರೆಕ್ಟರ್ ಸಾಹೇಬರು.
ಹುಡುಗಿ: 'ಹೇ ಪ್ರಿಯತಮ.. ಇದೇನು ನಿನ್ನ ಕಣ್ಣ ಮೇಲೆ, ಕಪ್ಪು ಕನ್ನಡಕ. ನಾನು ಒಲಿದಿರೋದು ನಿನ್ನ ಕಣ್ಣಲ್ಲಿರೋ ಆ ಸತ್ಯಕ್ಕೆ. ಅಲ್ಲೇನೋ ಕಾಣತ್ತೆ ನನಗೆ.. ಈ ಕಪ್ಪು ಕಾಜಿನಲ್ಲಿ... '
ಡೈರೆಕ್ಟರ್: ಏನಮ್ಮ ನೀನು.. ನೆಲ ನೋಡ್ಕೊಂಡು dialog ಹೇಳ್ತಿಯ.. ಏಯ್ ಬಾ ಮರಿ ಇಲ್ಲಿ.. ಹಾಂ!! ಇವನನ್ನ ನೋಡಿ ಹೇಳು.. ಇವನೆ ನಿನ್ನ ಪ್ರಿಯತಮ..ಇವನ ಹೆಸರು 'ಕಥಾನಾಯಕ'.
ಪಕ್ಕ ನಿಂತಿದ್ದ ನಮ್ಮ writer ಹುಡುಗನ ಕರೆಸಿ ನಿಲ್ಲಿಸಿಯೇಬಿಟ್ಟರು ಡೈರೆಕ್ಟರ್ ಸಾಹೇಬರು..
ಹುಡುಗಿ: 'ಕಥಾನಾಯಕ.. ನಿನ್ನ ಕಪ್ಪು ಕನಡಕದಲ್ಲಿ ನನಗೆ ನೀನು ಕಾಣುವುದಿಲ್ಲ.. ಅದನ್ನು ತೆಗೆದು ನನ್ನನ್ನು ನೋಡು, ಆಗ ನನಗೆ ಖುಷಿ. ನಮ್ಮಿಬ್ಬರ ನಡುವೆ ಯಾವ ಬಣ್ಣವು ಬೇಡ.. ನಮ್ಮ ಪ್ರೀತಿ ನೀರಿನ ಬಣ್ಣದಷ್ಟೇ ಪವಿತ್ರವಾಗಿರಲಿ. ಏನಿದೆ ಈ ನಿನ್ನ ಕಪ್ಪು ಕನ್ನಡಕದಲ್ಲಿ... '
ಅವಳು ಮಾತು ಮುಗಿಸುವ ಮುನ್ನ..
ಇವನು: 'ಹೇ ನನ್ನ ಸಂಪಿಗೆ ಹೂವ.. ಈ ಕನ್ನಡಕವೆಂದರೆ ಏನೆಂದು ತಿಳಿದಿದ್ದೀ.. ಆ ಶನಿಯು ಹನುಮನನ್ನು ನೋಡಲು ಹೋದಾಗ ಅವನ ವಕ್ರ ದೃಷ್ಟಿ ತನ್ನ ಮೇಲೆ ಬೀಳದಿರಲಿ ಎಂದು ಹನುಮ ಶನಿಗೆ ಹಾಕಿದ್ದು ಇದೆ ಕಪ್ಪು-ಕನ್ನಡಕವನ್ನ. ೧೯೮೦ ದಶಕದಲ್ಲಿ ಆದ white-revolution
ಗೆ ಈ ಕನ್ನಡಕವೆ ಕಾರಣ. ಎಮ್ಮೆ ಹಸುಗಳು ಒಣಗಿದ ಹುಲ್ಲನ್ನು ತಿನ್ನಲು ನಿರಾಕರಿಸಿದಾಗ ಅವುಗಳ ಕಣ್ಣಿಗೆ ಹಸಿರು ಬಣ್ಣದ goggles ಅನ್ನು ಹಾಕಿದರು. ಆಗ ಒಣಗಿದ ಹುಲ್ಲು ಹಸಿರಾಗಿ ಕಂಡು ಆ ದನಗಳು ಹುಲ್ಲನ್ನು ಸಿಕ್ಕಾಪಟ್ಟೆ ತಿಂದು ಹಾಲನ್ನು ಕೊಟ್ಟವು. ಆಗ ಆದದ್ದೇ
white-revolution. ಇದನ್ನು ಹಾಕಿ ನೋಡಿದರೆ ಸೂರ್ಯನು ಚಂದ್ರನಂತೆ ತಂಪಾಗಿ ಕಾಣುತ್ತಾನೆ, ನೀನು ನನಗೆ ಇನ್ನೂ ಹತ್ತಿರ ಕಾಣಿಸುತ್ತೀಯ.. ಅದಕ್ಕಾಗಿಯೆ ನಾನು.. '
ಡೈರೆಕ್ಟರ್ : ಮುಚ್ಚಯೋ!! ಬಿಟ್ಟರೆ ಮಾತಾಡ್ತಾನೆ ಇರ್ತೀಯ..
ಅವನ ಮಾತುಗಳನ್ನ ಕೇಳಿ ಆ ಹುಡುಗಿ ಘೋಳ್ ಅಂತ ನಕ್ಕಿದ್ದಳು.. ಸುತ್ತ ಇದ್ದ ಯೂನಿಟ್ ಜನ ಕೂಡ ನಗುತ್ತಿದ್ದರು.
ಡೈರೆಕ್ಟರ್: ಮಗನೆ ಸುಮ್ಮನೆ ನಿಂತ್ಕೋ ಅಂದ್ರೆ comedy ಮಾಡ್ತಿಯ. ನಾವೆನಿಲ್ಲಿ ತಮಾಷೆ ಮಾಡ್ತಾ ಇದ್ದೀವಿ ಅನ್ಕೊಂಡಿದಿಯಾ ??.. ಶೇಷಾದ್ರಿ ಇವನನ್ನ ಒದ್ದು ಹೊರಗೆ ಹಾಕ್ರಿ..
ಶೇಷಾದ್ರಿ ಗಹಗಹಿಸುತ್ತಲೇ ಇವನನ್ನ ಹೋಗಪ್ಪ ನರಸಿಂಹರಾಜು ಅಂತ ಗೇಟ್ ಇಂದ ಹೊರ ಹಾಕಿದ್ದರು..
ಸ್ಟುಡಿಯೋ ಹೊರಗೆ ಇದ್ದ ಟೀ ಅಂಗಡಿ ನಲ್ಲಿ ಟೀ ಕುಡಿದು ಚಿಲ್ಲರೆ ಇಲ್ಲದೆ ಜೇಬಿನಲ್ಲಿ ಹುಡುಕುತ್ತಿರುವಾಗ ಪಕ್ಕದಲ್ಲಿ ಒಂದು ಕೈ ಕಂಡಿತು.. ಅಂಗೈ ನಲ್ಲಿ ಚಿಲ್ಲರೆ ಹಿಡಿದಿದ್ದಾಳೆ.
ಅವಳು : ತಗೋಳಿ ಪರವಾಗಿಲ್ಲ.. ಇದೆ ನನ್ನ ಹತ್ತಿರ ಚಿಲ್ಲರೆ..
ಅವನು: ಇಲ್ಲ ಇಲ್ಲ ಬೇಡ .. ನಾನು adjust ಮಾಡ್ತೀನಿ..
ಅಂಗಡಿಯ ಟೇಬಲ್ ಮೇಲೆ ಚಿಲ್ಲರೆ ಇಟ್ಟಳು ಅವಳು. ಆಯ್ತು ಅಂತ ಅವನು ಸುಮ್ಮನಾದ. ಇಬ್ಬರು ಹೊರ ನಡೆದರೂ..
ಅವಳು : ಮತ್ತೆ??... ನೀವೂ audition ಗೆ ಬಂದಿದ್ರ?? ಪರವಾಗಿಲ್ಲ dialog ಚೆನ್ನಾಗೆ ಹೊಡಿದ್ರಿ.. ಜೋರಾಗಿ ನಕ್ಕಳು..
ಅವನು: ನಗುತ್ತಲೇ.. ಹೌದು ಆದರೆ ನಾನ್ actor ಅಲ್ಲ, ಸುಮ್ಮನೆ ನನ್ನ ಬರವಣಿಗೆ ತೋರಿಸೋಕೆ ಬಂದಿದ್ದೆ..
ಅವಳು: ಓಹೋ !! writer ಸಾಹೇಬರು. ಅಂದಹಾಗೆ ನಾನು ಜಸ್ಟ್ MBA ಮುಗಿಸಿದಿನಿ. ಫ್ಯಾಷನ್ designingಗೆ apply ಮಾಡಿದಿನಿ. ಆಕ್ಟಿಂಗ್ ನಲ್ಲ್ಲಿ ಆಸಕ್ತಿ, ಅದಕ್ಕೆ ಬಂದೆ. ಈ ಡೈರೆಕ್ಟರ್ ತುಂಬಾ ಟಾಲೆಂಟೆಡ್. ಅದಕ್ಕೆ ಸಣ್ಣ role ಆದರೂ ಪರವಾಗಿಲ್ಲ ಅಂತ ಬಂದಿದ್ದು.. ನಿಮ್ಮ ಕಥೆ??
ಅವನು: ನಾವು ಕನ್ನಡದಲ್ಲಿ Masters ಮಾಡಿದಿವಿ. ಬರವಣಿಗೆ ಹುಚ್ಚು. ನನ್ನ ಕನಸು ಅಪ್ಪನಿಗೆ ದುಸ್ವಪ್ಪ್ನ, ಅವರ ಆಸೆ ನನ್ನ ಪಾಲಿಗೆ ದುರಾಸೆ. ಇಷ್ಟು ನಾವು!! ಅಂದಹಾಗೆ ನಿಮ್ಮ ಹೆಸರು??
ಅವಳು: ಸಂಪಿಗೆ ಹೂವ!!
ಅವನು: ಅದು ಆ ಡೈರೆಕ್ಟರ್ ಇಟ್ಟಿದ್ದು.. ನಿಮ್ಮದೇ ಆದ ಒಂದು ಹೆಸರು ಇರಬೇಕಲ್ಲ..
ಅವಳು: ಇದೆ.. ಆದರೆ ಬೇಡ.. ಇದೆ ಚೆನ್ನಾಗಿದೆ. ಅವರು ಹೇಳಿದಂತೆ ಹೆಸರಲ್ಲೇನಿದೆ. ಈಗ ನಾನು "ಸಂಪಿಗೆ ಹೂವ", ನೀವು "ಕಥಾನಾಯಕ".
ಅವನ ಕಣ್ಣು ಹಿಗ್ಗಿದವು.. ಅರೆ! ಇದೊಂಥರ ಚೆನ್ನಾಗಿದೆ.. interesting ಅಂತ ಅವಳನ್ನೇ ನೋಡಿದ..
ಅವನು : ಹೇಳು ಸಂಪಿಗೆ ಹೂವೆ ಎಲ್ಲಿಗೆ ನಿನ್ನ ಪಯಣ?? ಅಂತ ನಾಟಕೀಯವಾಗಿ ಕೇಳಿದ
ಸಂಪಿಗೆ ಹೂ: ಹ್ಹ ಹ್ಹ.... BTM ಲೇಔಟ್. ನಿನ್ನ ಊರೆಲ್ಲಿ ? ಕಥಾನಾಯಕ?
ಕಥಾನಾಯಕ: ನಮ್ಮದು ವಿಜಯನಗರ ಸಾಮ್ರಾಜ್ಯ. ಮಾರುತಿ ಮಂದಿರ ಬಸ್ ಸ್ಟಾಪ್ ಹತ್ತಿರ..
ನಗು ನಗುತ್ತ ಇಬ್ಬರೂ ಬಸ್ ಸ್ಟಾಪ್ ಹತ್ತಿರ ಹೋದರು..
ಸಂಪಿಗೆ ಹೂ: ಈ ಬಸ್ ಗಾಗಿ ಕಾಯೋದು ತುಂಬಾ bore. ಒಂದೂ ನೀನು ಏನಾದರೂ ಕೇಳಿಸು, ಇಲ್ಲ ನಾನೇ ಒಂದು ಕಥೆ ಹೇಳ್ತೀನಿ ನಿಂಗೆ..
ಇವಳು ನಂಗೆ ಇವತ್ತು ಪರಿಚಯ ಆಗಿದ್ದ ಅಥವಾ ನಾವು ಸಿಕ್ಕು ಒಂದು ಹತ್ತು ವರ್ಷಾನಾದ್ರು ಆಗಿದೆಯ?? ಹೊಸ feeling ಇದ್ದರೂ ಒಂಥರಾ ಹಳೆ feel!
ಸಂಪಿಗೆ ಹೂ: ಹಲೋ!!.. ಏನು ಮಾಡೋದು ಹೇಳು ಬೇಗ..
ಕಥಾನಾಯಕ : ನೀನೆ ಹೇಳು ಕಥೇನ..
ಸಂಪಿಗೆ ಹೂ: ಸಧ್ಯ!! ನಂಗು ಇದೆ ಬೇಕಿತ್ತು.. ನೀನ್ ಹೇಳಿದ್ರೆ ಇನ್ನ ಜಾಸ್ತಿ ಬೋರ್ ಹೊಡಿಸ್ತಿದ್ದೆ ಅಂತ ನಕ್ಕು .. ಸರಿ ಇಲ್ಲಿ ಕೇಳು ..
ಒಂದೂರಲ್ಲಿ ಒಬ್ಬ ರಾಜಕುಮಾರ ಇದ್ದ. ಅವನಿಗೆ ತುಂಬಾ ಜಾಸ್ತಿ ನಿದ್ದೆ ಬರ್ತಿತ್ತು. ನಿದ್ದೆಯಲ್ಲಿ ಬಿದ್ದ ಕನಸುಗಳನ್ನ ಆಸ್ಥಾನದ ಪಂಡಿತರ ಕೈಲಿ ಬರೆಸುತ್ತಿದ್ದ. ನಿದ್ದೆ ಮಾಡೋದು, ಕನಸು ಕಾಣೋದು, ಅದನ್ನ ಬರೆದಿಡಿಸುವುದು ಅಷ್ಟೇ ಕಾಯಕವಾಗಿತ್ತು. ಒಂದು ದಿನ ಅವನ ಕನಸಲ್ಲಿ ಅವನು ಸೂರ್ಯನ ಹೆಗಲ ಮೇಲೇರಿದ್ದ. ಅಲ್ಲಿಂದ ಭೂಮಿಯನ್ನು ನೋಡಿದ್ದ. ತನ್ನ ಆಸ್ಥಾನವು ತುಂಬಾ ಚಿಕ್ಕದಾಗಿ ಕಂಡಿತ್ತು. ತಿರುಗುವ ಭೂಮಿಯನ್ನು ತನ್ನ ಕೈಗಳಿಂದ ನಿಲ್ಲಿಸಲು ಪ್ರಯತ್ನ ಮಾಡಿದ್ದ. ನಿದ್ದೆಯಿಂದ ಎದ್ದೊಡನೆ ಆ ಕನಸನ್ನು ನಿಜ ಮಾಡಬೇಕು ಎಂದು ಯೋಚಿಸತೊಡಗಿದ. ಹೇಗಾದರೂ ಮಾಡಿ ಸೂರ್ಯನ ಹೆಗಲನ್ನು ಏರಬೇಕು. ಅಲ್ಲಿಂದ ಭೂಮಿಯನ್ನು ನೋಡಬೇಕು ಅಂತ ಆಸೆಪಟ್ಟಿದ್ದ. ಎಲ್ಲ ಪಂಡಿತರನ್ನು ಕರೆದು ನನಗೆ ಸೂರ್ಯನ ಹೆಗಲ ಮೇಲೆ ಏರುವುದಿದೆ, ಇದಕ್ಕೊಂದು ಉಪಾಯ ಮಾಡಿಕೊಟ್ಟವರಿಗೆ ನನ್ನ ಇಡೀ ರಾಜ್ಯವನ್ನೇ ಬಹುಮಾನವಾಗಿ ಕೊಡುವೆ ಎಂದು ಘೋಷಿಸಿದ. ರಾಜನ ದಾರಿದ್ರ್ಯ, ವಿಲಾಸಗಳಿಗೆ ಬೇಸತ್ತ ಜನಕ್ಕೆ ಇದು ತಲೆನೋವಾಗಿ ಹೋಯಿತು. ಪಂಡಿತರು ತಲೆ ಕೆಡಸಿಕೊಂಡು ಸಣ್ಣಾದರು. ಕಡೆಗೆ ಚಿಂತಾಮಣಿ ಅನ್ನೋ ಒಬ್ಬ ಮೇಧಾವಿ ಪಂಡಿತ ಆಸ್ಥಾನಕ್ಕೆ ಬಂದು ಪ್ರಭುಗಳೇ! ನೀವು ಸೂರ್ಯನನ್ನು ಮುಟ್ಟಲು ನನ್ನಲ್ಲೊಂದು ಉಪಾಯವಿದೆ. ನಮ್ಮ ರಾಜ್ಯದ ಮೇರು ಪರ್ವತ ಹಿಮಾಲಯದಿಂದಾಚೆ ಒಂದು ಪಥದಲ್ಲಿ ನಡೆದರೆ ನೀವು ಅಲ್ಲಿಗೆ ತಲುಪಬಹುದು. ಆದರೆ ಅದಕ್ಕೆ ನೀವು ಒಂದು ಬಿಳಿ ಕುದುರೆಯನ್ನೇರಿ ಕಣ್ಣಿಗೆ ಬಿಳಿ ಬಟ್ಟೆಯನ್ನು ಕಟ್ಟಿಕೊಂಡು ಹೋಗಬೇಕು. ಗಾಳಿ, ಮಳೆ, ಬಿಸಿಲು ಏನೇ ಇದ್ದರು ನೀವು ನಿಲ್ಲಕೂಡದು, ಬಟ್ಟೆ ತಗೆಯ ಕೂಡದು ಎಂದು ಹೇಳಿದ. ನಿಮ್ಮ ಮಾತು ಸುಳ್ಳಾದಲ್ಲಿ ನಿಮ್ಮ ಶಿರ ನನಗೆ ಮೀಸಲು ಪಂಡಿತರೆ ಎಂದ ರಾಜನ ಮಾತಿಗೆ. ಆಯಿತು ಪ್ರಭು ನನ್ನ ಮಾತು ಸುಳ್ಳಾದರೆ ನನ್ನ ಪ್ರಾಣ ನಿಮಗೆ, ನಿಜವಾದರೆ ನಿಮ್ಮ ಆಸ್ಥಾನ ನನಗೆ ಅಂದನು. ತನ್ನ ಆಸ್ಥಾನದಿಂದ ಹೊರಗೇ ಬಾರದ ರಾಜನನ್ನು ಚಿಂತಾಮಣಿ ಕರೆದೊಯ್ದಿದ್ದು ಹಿಮಾಲಯಕ್ಕೆ. ಸೂರ್ಯನಿಗಿಂತ ಎತ್ತರವಾಗಿ ಕಂಡ ಹಿಮಾಲಯವ ನೋಡಿ ರಾಜ ದಿಗ್ಭ್ರಾಂತನಾದ. ಪರ್ವತ ಇಷ್ಟು ಎತ್ತರವಿದೆ, ಇಲ್ಲಿಂದ ಸೂರ್ಯನ ಹೆಗಲು ಮುಟ್ಟುವುದು ಕಷ್ಟ ಇಲ್ಲ ಎಂದುಕೊಂಡು, ಪಂಡಿತರು ಹೇಳಿದಂತೆ ಕಣ್ಣಿಗೆ ಬಟ್ಟೆ ಧರಿಸಿ, ಕುದುರೆಯ ಮೇಲೇರಿ ಹೊರಟ. ಇದಾಗಿ ಕೆಲುವು ವರ್ಷಗಳ ನಂತರ ಯಾರೋ ಹೇಳಿದರು ಹಿಮಾಲಯದಿಂದಾಚೆ ಒಂದು ಬಿಳಿ ಕುದುರೆ ಮತ್ತು ಒಂದು ಮೃತ ದೇಹ ಸಿಕ್ಕಿದೆ ಎಂದು.
ಕಥಾನಾಯಕ ಅವಳನ್ನೇ ನೋಡುತ್ತಿದ್ದ..
ಸಂಪಿಗೆ ಹೂ: ಹಲೋ!! ಏನ್ ನೋಡ್ತಾ ಇದ್ದೀಯಾ ?? ಕಥೆ ಮುಗೀತು!
ಕಥಾನಾಯಕ: ಹಾಂ?? ?ಮುಗೀತಾ?? ಅಷ್ಟೇನಾ ??
ಸಂಪಿಗೆ ಹೂ: ಹಾಂ ಅಷ್ಟೇ!! ಈ ಕಥೆ ನಾ ನಮ್ಮ ತಾತ ಹೇಳಿದ್ದರು ನಾನು ೬ ನೆ ಕ್ಲಾಸ್ ನಲ್ಲಿ ಇದ್ದಾಗ.. ಈಗ ಅವರು ಇಲ್ಲ..
ಕಥಾನಾಯಕ: ಏನು ಕಥೆನೋ ಏನೋ.. ಒಂದು ಆರಂಭ ಇಲ್ಲ.. ಒಂದು ಅಂತ್ಯ ಇಲ್ಲ..
ಸಂಪಿಗೆ ಹೂ: ಆರಂಭ, ಅಂತ್ಯ ಎಲ್ಲ ಇದೆ.. ನಿಂಗೆ ನೋಡೋಕೆ ಕಣ್ಣಿಲ್ಲ ಅಷ್ಟೇ..
ಕಥಾನಾಯಕ: ಬರೀ ಮಾತಾಡೋದಲ್ಲ ಅರ್ಥ ಹೇಳು..
ಸಂಪಿಗೆ ಹೂ: ಕನಸು ಕಾಣೋದೆ ಆರಂಭ . ಮನುಷ್ಯನಿಗೆ ಕನಸು ಬೇಕು. ನಿದ್ದೆ temporary ಮರಣ ಇದ್ದ ಹಾಗೆ. ನಿದ್ದೆಯಲ್ಲೂ ಕನಸು ಕಂಡವ ಅಲ್ಲೂ ಜೀವಿಸುತ್ತಾನೆ. ರಾಜಕುಮಾರ ತನ್ನ ಕರ್ತವ್ಯವನ್ನು ಮರೆತು ಬರಿ ವಿಲಾಸ, ನಿದ್ದೆಯಲ್ಲಿ ಕಾಲ ಕಳೆಯುತ್ತಾನೆ. ಅಂದಾಗ ಅಂತಹ ಕನಸು ಬಿದ್ದರು ಅದನ್ನು ಅರ್ಥೈಸಿಕೊಳ್ಳದೆ ತಪ್ಪು ದಾರಿಯ ಪಾಲಾಗುತ್ತಾನೆ. ಆರಂಭ ಕನಸು, ಗುರಿ ಸೂರ್ಯನ ಹೆಗಲು. ನನ್ನ ಪ್ರಕಾರ ದಾರಿದ್ರ್ಯ ದಲ್ಲಿ ಮುಳುಗಿ ಈ ರಾಜ ಕಂಡದ್ದು ಸೂರ್ಯನ ಹೆಗಲೆರೋ ಸ್ವಪ್ನವಾದರೂ ಕಡೆಗೆ ಅವನೇರಿದ್ದು ಶನಿಯ ಹೆಗಲು.
ಕಥಾನಾಯಕ ಮೌನ!! ಅವಳನ್ನೇ ನೋಡ್ತಾ ಇದಾನೆ..
ಸಂಪಿಗೆ ಹೂ: ತನ್ನ ಕೈಯನ್ನು ಅವನ ಮುಖದ ಮುಂದೆ ಆಡಿಸುತ್ತ.. ತಿಳೀತೋ ಸಾಹೇಬರಿಗೆ??
ಕಥಾನಾಯಕ : ಒಂಥರಾ ಅರ್ಥ ಆಯ್ತು ಅಂತ ನಸುನಗುತ್ತ ಹೇಳಿದ.
ಸಂಪಿಗೆ ಹೂ : ಈಗ ನಾನು ಅಷ್ಟು ಚೆನ್ನಾಗಿ ನಿಂಗೆ explain ಮಾಡಿದ್ದಕ್ಕೆ ನೀನು ನನಗೆ ಮೆಚ್ಚಿ, ನನ್ನ ಹೊಗಳಿ ಒಂದೆರಡು ಲೈನ್ ಗಳನ್ನ ಬಿಡು ಹಂಗೆ ನೋಡೋಣ..(ಪೋಲಿ ನಗು ನಗುತ್ತ ಹೇಳಿದಳು )
ಕಥಾನಾಯಕ:
ಈ ಹುಡುಗಿಯ ಮಾತು ಕೇಳಿ ನನ್ನ ಮನಸಿಗೇನೋ ಧಾಡಿ..
ಇವತ್ತು ಸಿಕ್ಕಳಾ ನನಗೆ ಈ ಸಂಪಿಗೆ ಊರಿನ ಮಿಟಕಲಾಡಿ!!
ಸಂಪಿಗೆ ಹೂ: ಥೂ!!.. ಇದು ಒಂದು ಕವಿತೆ ನಾ?? ಅದು ನನ್ನ ಮೇಲೆ.. ಸರಿ ಇಲ್ಲ ಇದು.. U definitely
must improve boy!! ಅಂತ ನಕ್ಕಳು..
ಕಥಾನಾಯಕ:
ಅವಳ ಮಾತಿನ ದೋಸೆಗೆ ನನ್ನ ಚಂದ್ರಗ್ರಹಣ ಮಾಡಿರೋ ಜಂಭ..
ತಿಳಿದು ತಿಳಿಯದೆ ಆಯಿತು ನನ್ನೊಳಗಿನ್ನು, ಕಂಡು ಕಾಣದೊಂದು ಆರಂಭ!!
ಸಂಪಿಗೆ ಹೂ: ಅರೆ!! ಇದು ಚೆನ್ನಾಗಿದೆ.. ಅರ್ಧ ಅರ್ಥ ಆಯ್ತು.. ನನ್ನ ಮೇಲೆ ಹೇಳಿದಯಾ ??
ಕಥಾನಾಯಕ: ಹುo!!
ಸಂಪಿಗೆ ಹೂ: clear ಆಗಿ explain ಮಾಡು.. ದೋಸೆ ಅಂದರೆ??.. ಯಾವ ಆರಂಭ??
ಕಥಾನಾಯಕ: ಬಿಡು ಅದನ್ನ.. ನಿನ್ನ ಬಸ್ ಬಂದಂಗಾಯ್ತು..
ಸಂಪಿಗೆ ಹೂ: ಹಾಂ!! ಹೌದು ಅದೇ ಬಸ್.. hey!.. we had
a great time together.. we MUST catch up again.. ಇದೋ ಇದರಲ್ಲಿ ನನ್ನ ನಂಬರ್ ಇದೆ.. ಕಾಲ್ ಮಾಡು.. ಅಂತ ಒಂದು ಪೇಪರ್ ನ ಅವನ ಕೈಗಿಟ್ಟು ಬಸ್ ಹತ್ತಿದಳು.
ಬಸ್ ನಲ್ಲಿ ಕೂತ ಕಿಟಕಿಯಿಂದ ಇವನ್ನನ್ನು ನೋಡಿ ಜೋರಾಗಿ ಹೇಳಿದಳು "ನಾನಿನ್ನು ಬರುವೆ, ಓ ನನ್ನ ಕಥಾನಾಯಕ!!!!!".
ಪಕ್ಕದಲ್ಲಿ ಕುಳಿತ ಆಂಟಿ ಒಮ್ಮೆಲೇ ಇವಳನ್ನು ನೋಡಿದರು.. ಅವಳು ಇವನನ್ನು ನೋಡಿ ಕಣ್ಣು ಹೊಡೆದು ನಕ್ಕಳು.. ಇವನು ನಕ್ಕ.
ಅವಳ ಬಸ್ ಹೋಯಿತು.. ಕೈಯಲ್ಲಿದ್ದ ಅವಳ ಫೋನ್ ನಂಬರ್ ಇರುವ ಪೇಪರ್ ಅನ್ನು ನೋಡಿ, ಮನಸಲ್ಲಿ ಏನು ಅಂದುಕೊಂಡು, Thank you ಸಂಪಿಗೆ ಹೂ ಅಂದ. ಅವಳು ಕೊಟ್ಟ ಪೇಪರ್ ಅನ್ನು ಹರಿದು ಹಾಕಿದ..
'ಇಂದು ಕಥಾನಾಯಕನಿಗೆ ಅವನ ಸಂಪಿಗೆ ಹೂ ಸಿಕ್ಕಿತು.. ಅವನ ಎಕಾಂತಗಳಿನ್ನು ಏಕಾಂಗಿಯಲ್ಲ. ಬರಿ ಕನಸು ಕಾಣುತ್ತಿದ್ದ ಅವನು ನಡೆಯಲಾರಂಭಿಸಿದ.. ಹೆಜ್ಜೆಗಳನು ಚಂದ್ರನ ಮೇಲೆ ಹಾಕುವ ತವಕ ಬಲವಾಗಿತ್ತು ' - ಕಥೆ ಶುರು!
ಇಷ್ಟು ಬರೆದು ಪುಸ್ತಕವನ್ನು ಬ್ಯಾಗ್ ನಲ್ಲಿ ಇಟ್ಟುಕೊಂಡ.
ಮರುದಿನ ಬೆಳಿಗ್ಗೆ ತಾನು ಬರೆದ ಕೆಲುವು ಕಾಗದಗಳು, ಪುಸ್ತಕಗಳನ್ನು ತಗೊಂಡು ಮನೆಯಿಂದ ಹೊರಟ..
ಅಪ್ಪ: ಬೆಳಿಗ್ಗೆನೇ ಎಲ್ಲೋ ಹೊರಟೆ??
ಕಥಾನಾಯಕ: ಹೀಗೆ.. ಗುರಿ ಕಂಡಿದೆ.. ದಾರಿ ಹುಡುಕೋಕೆ..
No comments:
Post a Comment