Wednesday, November 1, 2017

ಉಳಿದವರು ಕಂಡಂತೆ

  


ನರೇಂದ್ರ ಮೋದಿ ಒಬ್ಬ ಅದ್ಭುತ ನಟ, ಒಳ್ಳೆ ಆಕ್ಟಿಂಗ್ ಮಾಡ್ತಾರೆ, ಅಂತ ಮೊನ್ನೆ ಒಬ್ರು actor ಹೇಳಿದ್ರಂತೆ. ಏನ್ ಸಾ ಹಿಂಗೆ ಅಂದ್ಬುಟ್ರಿ ಅಂತ ಯಾರೋ ಕೇಳಿದ್ರೆ, ರೀ! ಅಭಿವ್ಯಕ್ತಿ ಸ್ವಾತಂತ್ರ್ಯ ರೀ...ನಾನ್ ಯಾವಾಗ್ಲೂ ವಿರೋಧ ಪಕ್ಸ, ಅಷ್ಟೇ ಆಮೇಲೆ! ಅಂತ ರೇಗಿದ್ರಂತೆ ಸಾರು. ವಿರೋಧ ಪಕ್ಪದ ನಾಯಕ್ರುಗಳೆಲ್ಲ ಚಪ್ಪಾಳೆ ಹೊಡೆದು ಪಾರ್ಟಿ ಮಾಡಿ ಸ್ವಾಗತಿಸಿದ್ರಂತೆ ಸೈಡ್ ಅಲ್ಲಿ, ಏ ನಮ್ ಪಕ್ಸದ್ ಎಸ್ರು ಹೇಳವ್ರೆ ಕಣ್ಲಾ ಅಂತಾ. ಆಡಳಿತ ಪಕ್ಪದವರು, ನಿಮ್ದುಕೆ ಮಾತ್ರ ಆಕ್ಟರ್ ಗೆ ಆಗಿ ಈಥರ  ಪಾಲಿಟಿಕ್ಸ್ ಮಾತಾಡಬೋದು-ಮಾಡಬೋದು.. ನಮ್ದುಕೆ ಯಾಕೆ ಆಕ್ಟಿಂಗ್ ಮಾಡಬಾರ್ದು?  ಅಂತಾ ಕ್ರಾಸ್ ಕೊಚ್ಚನ್ ಮಾಡಿದ್ರಂತೆ. ಸಾಮಾನ್ಯ ಜನ ಬೇಜಾನ್ ಟೆಂಗ್ಸನ್ ಆಗಿ ಇವ್ರು ರಾಜ್ಯದ ವಿರೋಧ ಪಕ್ಷದ ಬಗ್ಗೆ ಹೇಳಿದ್ರಾ ಅಥವಾ ಕೇಂದ್ರ ವಿರೋಧ ಪಕ್ಷದ ಬಗ್ಗೆ ಹೇಳಿದ್ರಾ ಅಂತ ತಲೆ ಕೆರ್ಕೊಳೋವಾಗ,  ಬುದ್ಧಿಜೀವಿಯೊಬ್ಬ ಅರ್ಧ ಬೀಡಿ ಸೇದಿ.. ಏ ಅದು ಹಂಗಲ್ಲಾ ರೀ, ಕೇಂದ್ರಕ್ಕೆ ಇವ್ರು ಕಾಂಗ್ರೆಸ್, ರಾಜ್ಯಕ್ಕೆ ಇವ್ರು ಬಿ.ಜೆ.ಪಿ  ಅಂತ ಹೇಳಿ ಇನ್ನಾ ಜಾಸ್ತಿ ಹುಳ ಬಿಟ್ರಂತೆ. ಮೊನ್ನೆ ಬಸ್ಸಲ್ಲಿ ಕೆಂಪು ಕಲರ್ ಶರ್ಟ್ ಹಾಕಿದ ಒಬ್ಬ (ಸೂತ್ರಗಳ ಪ್ರಕಾರ ಕೆಂಪು ಕಲರ್ ನೇ, ಬೇಕಿದ್ರೆ ಕೇಳ್ಕಳಿ) - 'ಈ ನಟಮಹಾಶಯ ನಮಗಿಂತ ಬೇರೆ ರಾಜ್ಯದ ಸಿನಿಮಾಗಳನ್ನೇ ಜಾಸ್ತಿ ಮಾಡೋದು, ಕಾವೇರಿ ಗಲಭೆ ಬಗ್ಗೆ ಅನಿಸಿಕೆ ಕೇಳಿದ್ರೆ ಅದನ್ನೆಲ್ಲ ಮಾತಾಡೋಕೆ, ಮಾಡೋಕೆ ಕೋರ್ಟ್ ಇದೆ ನಾನ್ಯಾಕೆ ಅನಿಸಿಕೆ ಹೇಳ್ಬೇಕು ಅಂತ ಆ ರಿಪೋರ್ಟರ್ ಹುಡಗಿ ಮೇಲೆ ಗುರ್ ಅಂದು ಎದ್ದೋದ್ರು, ಈಗ ನೋಡು ಹೆಂಗ್ ಬಿಡ್ತಾವ್ರೆ ಬಿಟ್ಟಿ ಅನಿಸಿಕೆಯ' ಅಂತ ನಗ್ತಿದ್ದ. ನಾನೂ ಕಕ್ಕಕ್ಕ ಅಂತ ನಕ್ದೆ, ಸರಿನೋ ತಪ್ಪೋ ಕಾಮಿಡಿಯಾಗಿತ್ತು ಅವ್ನು ಹೇಳಿದ ರೀತಿ.  ಅದನ್ನ ಕೇಳಿ ಪಕ್ಕದಲ್ಲಿದ್ದ ನನ್ನ ಸ್ನೇಹಿತ, "ಯಾವಾಗಲೂ ವಿರೋಧ ಪಕ್ಷದವನಾಗಿರು ನೀನು ಅಂತ ಅವ್ರ ಗುರು ಹೇಳಿದ್ದಂತೆ ಕಣೋ, ಅದೇನೋ ಪಾಪ ನೆನಪಾಗಿರಬೇಕು ಒಂದೇ ಸೈಡ್ ಅಲ್ಲಿ ಕೈ ಇಟ್ಕೊಂಡು ಮಲಗಿದಾಗ, ಅದ್ಕೆ ಸಡನ್ ಆಗಿ ವಿರೋಧ ಪಕ್ಷದವರಾಗಿರ್ತಾರೆ, ಆಮೇಲೇ ಡೈರೆಕ್ಟರು ಶಾಟ್ ರೆಡಿ! ಅಂತ ಕರೆದಾಗ ವಾಪಾಸ್ ಆಕ್ಟಿಂಗ್ ಕೆಲ್ಸಕ್ಕೆ ಹೋಗಿರ್ತಾರಪ್ಪ. ಜನ ಅದೊಂದನ್ನೇ ಹಿಡ್ಕೊಂಡು ಕುಯ್ಯೋದು ತಪ್ಪು ಆಲ್ವಾ" ಅಂತಂದ. ಯಪ್ಪಾ!! ಒಂದೇ ಒಂದು ಮಾತಿಗೆ ಎಷ್ಟೊಂದ್ ಚರ್ಚೆ ನೋಡಿ. ಅವ್ರು ಹೇಳಿದ್ರು, ಇವ್ರು ಹೇಳಿದ್ರು ಅಂತ ನಾನೇ ಎಲ್ಲಾ ಹೇಳ್ತಾ ಇದ್ದೀನಿ ಅಂತ ಅನ್ಕೋಬೇಡಿ, ಇದೆಲ್ಲ ನಮ್ಮ ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್ ನ 'ಸೂತ್ರಗಳ ಆಧಾರವಾಗಿ' ಕಲೆ ಹಾಕಿರೋ ಇಂಫಾರ್ಮೇಸನ್! ಸುಮ್ನಿರ್ರೀ, 'ನುಡಿದಂತೆ ನಡೆದಿದ್ದೇವೆ' ಅಂತ ಬರೀ ಹಳ್ಳಗಳೇ ತುಂಬಿರೋ ರಸ್ತೆ ಮುಂದೆ ಬೋರ್ಡ್ ಹಾಕಿದ್ರೆ ನಂಬತೀರಾ... ನಿಮ್ಮದೊಳ್ಳೆ ರಾಮಾಯಣ!

'ಯೂಟ್ಯೂಬ್' ನಿಮಗೆಲ್ಲ ಗೊತ್ತಿರತ್ತೆ,  ಅದರ ಬಗ್ಗೆ ಸ್ವಲ್ಪ ಕುಯ್ತೀನಿ, ಬಯ್ಬೇಡಿ. ನೀವು ಗಮನಿಸಿರ್ತೀರಾ, ಈ ವಿಡಿಯೋ ಸ್ಟ್ರೀಮಿಂಗ್ ವೆಬ್ಸೈಟ್ ನಲ್ಲಿ ನಾವು ಜಾಸ್ತಿ ಯಾವ ವಿಷಯಗಳ ವಿಡಿಯೋ ಗಳನ್ನ ನೋಡುತ್ತ ಇರುತ್ತೇವೋ ಆ ವಿಷಯಗಳ ಸಂಬಂಧಿತ ಅನ್ಯ ವಿಡಿಯೋಗಳು ನಮ್ಮ ಹೋಮ್ ಪೇಜ್ ನ ಮೇಲೆ ಪಾಪ್ ಆಗ್ತಾ ಇರ್ತವೆ, ಆವರಿಸುತ್ತವೆ. ನೋಡುಗರನ್ನು ವೆಬ್ಸೈಟ್ ನಲ್ಲಿ ತೊಡಗಿಸಿಡಲು, ಎಂಟರ್ಟೈನ್ ಮಾಡಲು ಯೂಟ್ಯೂಬ್ ಮಾಡಿದ ಒಂದು ಪ್ರೋಗ್ರಾಮ್ ಇದು. ನಾವು ಯಾವುದರ ಬಗ್ಗೆ ಜಾಸ್ತಿ ಆಸಕ್ತಿ ತೋರಿಸಿದ್ದೇವೆ ಅಂತ ಸ್ಟಡಿ ಮಾಡಿ, ಅದೇ ವಿಷಯ-ವ್ಯಕ್ತಿಗಳ ಬಗ್ಗೆ ನಮ್ಮ ಸ್ಕ್ರೀನ್ ಮೇಲೆ ವಿಷಯ ತುಂಬುತ್ತದೆ. ಇನ್ನೊಂದು,  ನೋಡುಗನು ಅಲ್ಲಿ ಬೇಕೆಂದ ವಿಷ್ಯಕ್ಕೆ ನೋಂದಾಯಿಸಿಕೊಂಡ್ರೆ, ಆ ವಿಷ್ಯಕ್ಕೆ ಸಂಬಂಧಪಟ್ಟ ಅಧಿಸೂಚನೆಗಳು ಅವನಿಗೆ ಬರುತ್ತದೆ, ಆಗ ಅವನು ಲಾಗಿನ್ ಆಗಿ ವಿಡಿಯೋ ಗಳನ್ನು ನೋಡಬಹುದು. ಈಗ ಒಂದು ಕ್ಷಣ ಈ ಜಗತ್ತು ಕೂಡ ಯೂಟ್ಯೂಬ್ ಅಪ್ಲಿಕೇಶನ್ ಅಂತ ಅಂದುಕೊಳ್ಳಿ, ಸಾವಿರ ಜನರ, ಲಕ್ಷ ಘಟನೆಗಳ ವಿಡಿಯೋಗಳು ನಡೆಯುತ್ತಲೇ ಇರುತ್ತವೆ, ಹಿಗ್ಗಾ ಮುಗ್ಗಾ ಲೈವ್ ಸ್ಟ್ರೀಮಿಂಗ್! ಅವ್ರೇನೋ ಅಂದ್ರು, ಇವ್ರೇನೋ ಮಾಡಿದ್ರು ಅಂತ ಬರ್ತಾನೆ ಇರತ್ತೆ. ನಮಗೆ ಬೇಕಂದದ್ದಕ್ಕೆ  ಮಾತ್ರ ನೋಂದಾಯಿಸಿಕೊಂಡ್ರೆ, ನಮಗೆ ಅದಷ್ಟೇ ಕಾಣ್ತದೆ, ನೋಡಿ ಕಲಿತು, ಲಾಗೌಟ್ ಆಗಬಹುದು. ನಾವು ಪದೇ ಪದೇ ನೋಡೋ/ಆಡೋ ವಿಷಯಗಳು ಅಥವ ನಾವು ನೋಡಬಯಸುವ ವಿಡಿಯೋಗಳನ್ನೇ ಪ್ರಪಂಚ ನಮ್ಮ ಮನಸಿನ ಹೋಂ ಪೇಜ್ ನ ಮೇಲೆ ತೋರಿಸುತ್ತೆ. ಕೆಟ್ಟದನ್ನ ಫಾಲೋ ಮಾಡಿದ್ರೆ ಕಾಣಸಿಗೋದೆಲ್ಲ ಕೆಟ್ಟದ್ದೇ, ಒಳ್ಳೇದನ್ನ ಫಾಲೋ (ಸರ್ಫ್ ಅಂತಾರೆ ಇಂಟರ್ನೆಟ್ ಭಾಷೇಲಿ) ಮಾಡಿದ್ರೆ ಕಾಣಿಸೋದು, ಕೇಳ್ಸೋದು ಎಲ್ಲಾ ಒಳ್ಳೇದೇ. ಬೆಳವಣಿಗೆ ಮುಖ್ಯ, ನಿಂತಲ್ಲೇ ನಿಲ್ಲೋ ಗಿಡ ಕೂಡ ಬೆಳೆದು ಮರವಾಗತ್ತೆ. ಆದ್ರೆ, ಯಾವ ಥರ ಬೆಳವಣಿಗೆ ಬೇಕು ಅಂತ ನೋಡ್ಕೊಬೇಕಷ್ಟೆ. ಪಾಕಿಸ್ತಾನದಲ್ಲಿರೋ ಆತಂಕವಾದಿಗಳು ದೇವರ ಕೆಲಸ ಅಂತ ಹೇಳಿನೇ ಕೊಲೆ ಮಾಡೋದು, ಅವರ ಪ್ರಕಾರ ಹಾಗೆ ಮಾಡೋದ್ರಿಂದ ಅವ್ರು ದೇವರಿಗೆ ಹತ್ತಿರ ಆಗ್ತಾರಂತೆ, ಅವರ ಪ್ರಕಾರ ಅದು ಬೆಳವಣಿಗೆ. ನಾವೆಲ್ಲಾ ಅದು ತಪ್ಪು ಅಂತೀವಿ, ಅದೇ ಸರಿ ಅಂತ ಅವ್ರು ನಂಬಿಸಬಲ್ಲರು (ತಲೆಗೆ ಪಿಸ್ತೋಲ್ ಇಟ್ಟು). ಅದೇ ಯೂಟ್ಯೂಬ್ ನಲ್ಲಿ ಕಾಮೆಂಟ್ಸ್ ವಿಭಾಗ ಕೂಡ ಇದೆ, ಅಲ್ಲಿ ನಮ್ಮ ಅನಿಸಿಕೆಗಳನ್ನು ಎಲ್ಲರಿಗೆ ಕಾಣುವಂತೆ ಬರೆಯಲೂ ಬಹುದು. ಕಾಣುವ ಅಥವಾ ಕೇಳಸಿಗುವ ಪ್ರತಿಯೊಂದಕ್ಕೂ ಅನಿಸಿಕೆ ಇರಲೇಬೇಕೆಂದು ಏನಿಲ್ಲ, ಅದಕ್ಕೆ ಈ ಫೀಚರ್ ನೋಡುಗನಿಗೆ ಐಚ್ಛಿಕ ವಾಗಿದೆ. 'ಜಗತ್ತಿನ ಯೂಟ್ಯೂಬ್ ' ನಲ್ಲೂ ಕೂಡ ಹಿಂಗೇ. ಪ್ರತಿಯೊಂದರ ಬಗ್ಗೆಯೂ ಒಂದು ಅನಿಸಿಕಿ ಹೊಂದಿರಬೇಕು ಅನ್ನೋದೇ ಬಹುಷಃ ನಮ್ಮ ಈಗಿನ ಸಮಾಜದ ದೊಡ್ಡ ಸಮಸ್ಯೆ ಆಗಿರಬಹುದು, ನರೇಂದ್ರ ಮೋದಿನಾ ಅಥವಾ ಸೋನಿಯಾ ಗಾಂಧಿನಾ?, ಎಡಪಂಥ ನಾ ಅಥವಾ ಬಲ ನಾ? ಸಚಿನ್ ನಾ ಅಥವಾ ದ್ರಾವಿಡ್ ನಾ? ಇಂಥ ಪ್ರಶ್ನೆಗಳನ್ನ ಅವರಿವರ ಪ್ರಭಾವದಿಂದ ಮನಸಲ್ಲೇ ಕೇಳ್ಕೊಂಡು ಒಂದು ಪಕ್ಷದ ಕಡೆಗೆ ವಾಲಿ ಫಿಕ್ಸ್ ಆಗಿಯೇ ಮುಂದಿನ ಮಾತು ಕಥೆ! ಎಲ್ಲದರ ಬಗ್ಗೆಯೂ ಒಂದು ಸ್ವಾಗತಾರ್ಹ ಮನೋಭಾವ ಇಟ್ಟುಕೊಂಡು ನೋಡಿದರೆ ಬಹುಷಃ  ತಪ್ಪುಗಳು ಕಡಿಮೆ ಕಾಣಬಹುದು, ಮಲಯಾಳಿ ನರ್ಸಮ್ಮನ್ನ ಬಯಸಿದ ರೋಗಿಗೆ ಅವಳು ಚುಚ್ಚುವ ಸೂಜಿ ಕಾಣಿಸಲ್ವಂತೆ. ಎಲ್ಲರೂ ಮನುಷ್ಯರೇ ಅಂದ ಮೇಲೆ ಸರಿ ತಪ್ಪು ಗಳನ್ನ ಎಲ್ಲರೂ ಮಾಡಿರಬಹುದು, ಕೆಲವರಿಗೆ ಒಳ್ಳೇದನ್ನ ಹೊಗಳೋ ಗುಣ ಇದ್ರೆ, ಕೆಟ್ಟದನ್ನ ಬಯ್ಯೋ ಗುಣನೂ ಎಲ್ಲೋ ಒಬ್ಬರಿಗೆಇರುತ್ತೆ. ಪುರುಸೊತ್ತಿದ್ರೆ ಕೆಟ್ಟ ಕಾಮೆಂಟ್ಸ್ ಗಳನ್ನೂ ನೋಡಿ ಕಲಿಯೋಣ, ಬೇಡವಾದ್ರೆ ಬಿಟ್ಟು ಬಿಡೋಣ. ಬರೀ ಕಾಮೆಂಟ್ಸ್ ಮಾಡುತ್ತಾ ಕುಳಿತ್ಕೊಂಡ್ರೆ ನಮ್ಮ ಪುಟ್ಟ ಕನಸಿನ ಕಥೆಯ ವಿಡಿಯೋವನ್ನು ಕಟ್ಟಿ ಬೆಳೆಸಿ ಈ ಜಗತ್ತಿಗೆ ತೋರಿಸಲು ಆಗುವುದೇ ಇಲ್ಲ. ಮೋದಿ ಆಕ್ಟರ್ ಅಂತ ಒಬ್ಬರಿಗೆ ಅನಿಸಿದ್ರೆ ಅದು ಅವರ ಅನಿಸಿಕೆ, ನಾವೆಲ್ಲಾ ಅದಕ್ಕೆ ಸಿಟ್ಟಾಗಬೇಕಾಗಿಲ್ಲ ಇಲ್ಲ. ಅವರು ಅದ್ಯಾವ ಪರಿಸ್ಥಿತಿ, ಮನಸ್ಥಿತಿಯಲ್ಲಿ ಹಾಗಂದರೋ ಅವರಿಗೇ ಗೊತ್ತು. ಅವರು ಘಟನೆಯ ಘನತೆ ಹಾಗು ಗಾಂಭೀರ್ಯವ ದಾಟಿ ಒಬ್ಬ ವ್ಯಕ್ತಿಯ ಬಗ್ಗೆ ಅವಸರಕ್ಕೆ ಸಿಕ್ಕಿ ತೀರ್ಪು ಕೊಡುವುದು ಅಥವಾ ಕಾಮೆಂಟ್ ಮಾಡಿದ್ದು ತಪ್ಪು ಎಂದೆನ್ನುವವರು ಮಾಡುತ್ತಿರುವುದೇನು? ಅವರು ಕೂಡ ಪೂರ್ತಿ ಚಿತ್ರ ತಿಳಿಯದೇ ಆ ನಟನನ್ನುತೀರ್ಪಿಗೆ ಈಡು ಮಾಡುತ್ತಿರುವುದೇ ತಾನೇ? ಕಣ್ಣಿಗೆ ಕಣ್ಣು ಅಂತಾದರೆ ಜಗತ್ತೇ ಕುರುಡಾಗಿರುತಿತ್ತು. ಕಣ್ಣು ಬೇಕು ರೀ, ಇನ್ನು ಏನೇನೋ ನೋಡಬೇಕು ನಾವೆಲ್ಲಾ. ದಲಿತರಿಗೆ ಎಪ್ಪತ್ತು ಪ್ರತಿಶತಃ ಮೀಸಲಾತಿ ಅಂತ ಸಿ.ಎಂ ಸಾಹೇಬ್ರು ಹೇಳಿದ್ದಾರೆ ಮೊನ್ನೆ, ಅದನ್ನ ನೋಡೋದು ಬೇಡವಾ? ಮೀಸಲಾತಿ ನೂರಕ್ಕೆ ನೂರು ಆದ್ಮೇಲೆ ಎಲ್ಲಾನೂ ನೋಡಿದಂತಾಗಿ ತಣ್ಣಗೆ ಕಣ್ಣು ಮುಚ್ಚಬೋದು ಎಲ್ಲರೂ ಒಟ್ಟಿಗೆ, ಏನಂತೀರಾ?

ಅಂಕಣ : ಬುರುಡೆದಾಸ
     

No comments:

Post a Comment

ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...

ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು,...