Monday, November 27, 2017

ಸರಿ ದಾರಿ ಗೊತ್ತಿದ್ರೆ ಶಬ್ದ ಮಾಡಿ ದಾರಿ ಯಾಕೆ ಕೇಳ್ತೀರಿ?

  


ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತು ಅಂತ ನಮ್ ಅಪ್ಪಾ ನಂಗೆ ಚಿಕ್ಕೋನಿದ್ದಾಗ ಬೈತಿದ್ರು. ಬರ್ತಾ ಬರ್ತಾ ರಾಯರು ಅಗಸ ಆದ್ರೆ ಕುದುರೆ ಕತ್ತೆನೇ ಆಗಬೇಕಲ್ವೇ? ಅಂತ ನಾನು ಮನಸಲ್ಲೇ ಉತ್ತರ ಕೊಡ್ತಿದ್ದೆ, ಜೋರಾಗಿ ಕೊಟ್ರೆ ಚಪ್ಪಲಿ ಏಟು ಗ್ಯಾರಂಟಿ ಅಂತ ಗೊತ್ತಿತ್ತು. ಈ ಒಂದು ಗಂಭೀರವಾದ ಚೈಲ್ಡ್-ಹುಡ್ ಚಿಚೇಸನ್ ಈ ಹೊತ್ತಲ್ಲಿ ಯಾಕಪ್ಪ ನೆನಪಾಗಿದ್ದು ಅಂತಂದ್ರೆ ನಿನ್ನೆ ಆಫೀಸ್ ಗೆ ಹೋಗೋವಾಗ ರಸ್ತೆಯಲ್ಲಿ ಆದ ಟ್ರಾಫಿಕ್ ಜಾಮ್ ಕಿರಿಕಿರಿಯಿಂದ. ರೋಡಲ್ಲಿ ಇತ್ಲಾಕಡೆ ಎರಡು ಕತ್ತೆ ನಿಂತಿದ್ದಕ್ಕೆ ಹೆವೀ ಟ್ರಾಫಿಕ್  ಜಾಮ್.  ಕತ್ತೆಗಳ ಮುಂದೆ ನಿಂತು ಎಷ್ಟ್ ಬಡಕೊಂಡ್ರು ಅವು  ಕ್ಯಾ ರೇ ಅನ್ಲಿಲ್ಲ, ಇತ್ಲಾಕಡೆ ಇಂದ ಹೋಗೋಣ ಅಂತಂದ್ರೆ ಇಲ್ಲಿ ಎರಡು ಮನುಷ್ಯ-ಕತ್ತೆಗಳು ತಮ್ಮ ಕಾರ್ ಅನ್ನು ಅರ್ಧ ರೋಡ್ ಮುಚ್ಚೋ ಹಂಗೆ ಪಾರ್ಕ್ ಮಾಡಿ ಹೋಗಿವೆ. ಇದೆಲ್ಲದರ ನಡುವೆ ಸಿಕ್ಕಿ ರೇಗಿ ಬೊಗಳುವ ನಾಯಿಗಳ (ಹಾರ್ನ್ ಹಾಕುವ ಮನುಷ್ಯರು ಎಂದು ಓದಿ) ಪಾಡು ದೇವರೇ ಬಲ್ಲ. ಈ ಸೀನ್ ನಲ್ಲಿ ಕತ್ತೆ ಯಾರು, ಮನುಷ್ಯ ಯಾರು, ನಾಯಿ ಯಾರು ಅಂತ ಕಕ್ಕಾಬಿಕ್ಕಿಯಾಗಿ ಮಾನವ ವಿಕಸನವೇ ಒಂದು ಭ್ರಮೆ ಅಂತ ಅನಿಸಿಹೋಗಿತ್ತು. ಕಡೆಗೆ ಕತ್ತೆಗಳೇ  ಅರ್ಥ ಮಾಡಿಕೊಂಡು  ಜಾಗ ಮಾಡಿಕೊಟ್ಟವೇ ವಿನಃ ಆ ಪಾರ್ಕ್ ಆಗಿದ್ದ ಕಾರ್ ಗಳಾಗಲಿ, ಒಬ್ಬರ ಮೇಲೊಬ್ಬರು ಹಾರ್ನ್ ಮಾಡಿ, ಬೊಗಳಿ ಕಿರುಚಾಡಿದ ಡ್ರೈವರ್ ಗಳಾಗಲಿ ಹಿಂದೇಟು ಹಾಕಲಿಲ್ಲ. ಹೆಂಗೋ ಸರ್ಕಸ್ ಮಾಡಿ ಆಫೀಸಿಗೆ ಬಂದು ಮುಟ್ಟಿದ ನಮ್ಮ ಧೀರ ಶೂರ ಡ್ರೈವರ್.  ಬರ್ತಾ ಬರ್ತಾ ಬೆಂಗಳೂರಿನ ಟ್ರಾಫಿಕ್ ಹದಗೆಟ್ಟು ಹೋಯ್ತು ಅಂತ ಕ್ಯಾಬ್ ನಲ್ಲೊಬ್ರು ಹೇಳಿದಾಗ ಅನಿಸ್ತು,  ಬೆಂಗಳೂರಿಗರು ಹದ ಬಿಟ್ಟರಲ್ಲವೇ, ಬೆಂಗಳೂರು ಹದಗೆಡುವುದು ಅಂತ. 

ವೈದ್ಯರು ಸಿಗದೇ ಪೇಷಂಟ್ ಗಳು ಸಾಯ್ತಾ ಇದಾರೆ, ಆಫ್ರಿಕಾದಲ್ಲಿ ತಿನ್ನೋಕೆ ಊಟ ಇಲ್ಲ, ಡೆಲ್ಲಿಯಲ್ಲಿ ಉಸಿರಾಡೋಕೆ ಆಕ್ಸಿಜನ್ ನೇ ಇಲ್ಲ.. ಅಂಥದ್ರಲ್ಲಿ ಟ್ರಾಫಿಕ್ಕು, ಜಾಮು, ರೋಡು ಅಂತ ಬಡ್ಕೊಳೋ ನಾನು, ತಿನ್ನೋಕೆ ಬಾಯಿ ಇಲ್ಲ ಅಂತ ದುಃಖ ಪಡೋರ ಮುಂದೆ ಸೇದೋಕೆ ಒಳ್ಳೆ ಸಿಗರೇಟ್ ಸಿಗ್ತಿಲ್ಲ ಅಂತ ಅಳ್ತಾ ಇರೋನಂಗೆ ಕಾಣಿಸಬಹುದು. ಆದರೆ ಒಮ್ಮೊಮ್ಮೆ ಇಂಥ ಸಮಸ್ಯೆಗಳೇ ಬೆಳೆದು ದೊಡ್ಡವಾಗೋದು, ಸೈಲೆಂಟ್ ಕಿಲ್ಲರ್ ಗಳ ಥರ ಗೊತ್ತಿಲ್ಲದೇ ಹಾನಿ ಮಾಡುವ ವಿಷಯಗಳಿವು. ಒಂದು ಹೇಳ್ತಿನಿ, ಮನುಷ್ಯ ಮತ್ತು ಪ್ರಾಣಿಗಳಿಗೆ ಇರೋ ತುಂಬಾ ದೊಡ್ಡ ವ್ಯತ್ಯಾಸ ಕಾಮನ್ ಸೆನ್ಸ್! ಇದೇ ಕಾಮನ್ ಸೆನ್ಸ್ ನಿಂದ  ಮನುಷ್ಯ ಪ್ರಾಣಿಗಳಿಗಿಂತ ಸ್ವಲ್ಪ ಹೊರತಾಗಿ, ನಾಗರೀಕನಾಗಿ ಕಾಣಸ್ತಾನೆ. ಹಸು ಬಾಯಲ್ಲಿ ತಿಂದ್ರೆ ಮನುಷ್ಯ ಸ್ಪೂನ್ ನಲ್ಲಿ ತಿಂತಾನೆ, ನಾಯಿಗಳು ರೋಡಲ್ಲಿ ಮಾಡಿದ್ರೆ ಮನುಷ್ಯ ಯಾರಿಗೂ ಕಾಣಿಸದಂಗೆ ಮಾಡ್ತಾನೆ, ಕಾಗೆಗಳು ಹಂಚಿಕೊಂಡು ತಿಂದ್ರೆ ಮನುಷ್ಯ ಐ.ಟಿ ರೇಡ್ ಆಗೋವರೆಗೂ ಕೂಡಿಡ್ತಾನೆ..  ಇತ್ಯಾದಿ. ಈ ಕಾಮನ್ ಸೆನ್ಸ್ ಈಗೀಗ ಮನುಷ್ಯನಲ್ಲಿ ಅಷ್ಟು ಕಾಮನ್ ಆಗಿ ಕಾಣಿಸುತ್ತಿಲ್ಲ ಅನ್ನೋದೇ ವ್ಯಂಗ್ಯ, ಕಾಮನ್ ಸೆನ್ಸ್ ಕಡಿಮೆ ಆಗಿ ಮನುಷ್ಯನಿಗೂ, ಪ್ರಾಣಿಗಳಿಗೂ ವ್ಯತ್ಯಾಸದ ಗೆರೆ ಮಬ್ಬಾಗಿ ಹೋಗುತ್ತಿದೆ. ಕೆಲ ಸಮಯದ ನಂತರ ಇವನು ಮನುಷ್ಯ, ಇದು ಪ್ರಾಣಿ ಅನ್ನೋಕೆ ಪುರಾವೆಗಳೇ ಇಲ್ಲದಂತಾಗಬಹುದು, ಆಗ ಗೊತ್ತಿರದೇ ತಪ್ಪು ಮಾಡುವುದು ಪ್ರಾಣಿಗಳು, ಗೊತ್ತಿದ್ದೂ ತಪ್ಪು ಮಾಡುವವನು ಮಾನವ ಅನ್ನುವ ಒಂದೇ ಒಂದು ಬೈಫರ್ಕೆಶನ್ ಉಳಿದುಹೋಗುತ್ತದೆ. ಈ ಕಾಮನ್ ಸೆನ್ಸ್ ಅಂತಂದ್ರೆ ತುಂಬಾ ದೊಡ್ಡ ಕೊಡೆ, ಅದರಡಿ ಬಹಳಷ್ಟು ವಿಚಾರಗಳು ಇವೆ, ನಾನು ಹೇಳ ಹೊರಟಿರೋದು ನಮ್ಮ ದಿನ ನಿತ್ಯದ ಜೀವನದಲ್ಲಿ ನಾವು ಕಾಣುವ ಒಂದು ಬಹುದೊಡ್ಡ ಮೂರ್ಖತನದ ಬಗ್ಗೆ, ಅದುವೇ ಹಾರ್ನ್ ಮಾಡುವ ಚಟ! ಇದರಿಂದ ಆಗುವ ಕಿರಿಕಿರಿ, ಅಸಹ್ಯ, ಹಿಂಸೆಗಳು ಯಾವ ದೊಡ್ಡ ಗ್ಲೋಬಲ್ ವಾರ್ಮಿಂಗ್  ಗಿಂತ ಏನು ಕಮ್ಮಿ ಇಲ್ಲ ಅನ್ನುವುದು ಬುರುಡೆದಾಸನ ಉವಾಚ, ಕೇಳ್ಕಳಿ.

ದೇವರು ಕೊಟ್ಟ ಕಣ್ಣುಗಳಿಗೆ ರಸ್ತೆಯುದ್ದಕ್ಕೂ ಆದ ಟ್ರಾಫಿಕ್ ಜಾಮ್ ಕಾಣಿಸುತ್ತಿರುತ್ತದೆ, ಜನ ಅಸಹಾಯಕರಾಗಿ ಕಾಯುತ್ತ ನಿಂತಿರುತ್ತಾರೆ, ಎಲ್ಲರಿಗೂ ಮನೆಗೆ-ಕೆಲಸಕ್ಕೆ ಹೋಗುವ ಅವಸರವೇ, ಯಾರಿಗೂ ರೋಡಲ್ಲೇ ಇರುವ ವಿಚಾರವಿಲ್ಲ, ಆದರೂ ಹಾರ್ನ್ ಮಾಡಿ ಸಾಯುವವರು ನಮ್ಮಲ್ಲಿ ಎಷ್ಟು ಜನರಿಲ್ಲ. ಟ್ರಾಫಿಕ್ ಸಿಗ್ನಲ್ ನಲ್ಲಿ ಎಲ್ಲರೂ ಹಸಿರು ಬಿದ್ದರೆ ಹೋಗಲೆಂದೇ ನಿಂತಿರುತ್ತಾರೆ, ಯಾರಿಗೂ ಸಿಗ್ನಲ್ ನಲ್ಲಿ ನಿಲ್ಲುವ ಹಪಾಪಿಯಿಲ್ಲ, ಅಷ್ಟಾಗಿಯೂ ಸಿಗ್ನಲ್ ಬಿಡುವ ಮುನ್ನವೇ ಹಾಂಕಿಂಗ್ ಶುರು! ಆಂಬುಲೆನ್ಸ್ ಶಬ್ದ ಮಾಡಿಕೊಂಡೇ ಬರುವುದು, ಜಗತ್ತಿಗೇ ಅದು ಕೇಳಿಸಿದರೂ ಅದಕ್ಕೆ ಅಡ್ಡ ನಿಂತು ಮುಂದಿನವಗೆ ಹಾರ್ನ್ ಮಾಡಿ ಸೈಡ್ ಬಿಡು ಅಂತ ಹೇಳುವರು ಎಷ್ಟಿಲ್ಲ, ಎಲ್ಲರೂ ಹಾರ್ನ್ ಮಾಡಿ ಮಾಡಿ ಕಡೆಗೆ ಆಂಬುಲೆನ್ಸ್ ಶಬ್ದವೇ ಕೇಳದಂತಾಗುತ್ತದೆ. ವಯ್ಯಸ್ಸಾದವರು ಅಡ್ಡ ಬಂದರೆ ಹಾರ್ನ್, ಟರ್ನಿಂಗ್ ಬಂದರೆ ಹಾರ್ನ್, ಹಸು ಅಡ್ಡ ನಿಂತರೆ ಹಾರ್ನ್, ಕಲ್ಲು ಅಡ್ಡ ಸಿಕ್ಕರೂ ಹಾರ್ನ್. ಉಸಿರು ಎಳೆದರೆ ಹಾರ್ನ್, ಉಸಿರು ಬಿಟ್ಟರೆ ಹಾರ್ನ್!! ಅಬ್ಬಬ್ಬಾ! ಯಾಕಿಷ್ಟು ಬಡ್ಕೊಳೋದು ನಾವು?? ಯಾಕೆ ಇಷ್ಟು ಹೆದರಿಕೆ, ಸಿಟ್ಟು, ಅವಸರ ನಮಗೆ? ತಲೇಲಿ ಏನೇ ವಿಷಯ ಇದ್ದರೂ, ಕಣ್ಣ ಮುಂದೆ ಏನೇ ಕಂಡರೂ ನಮ್ಮ ಕೈ ಹೋಗೋದು ಹಾರ್ನ್ ಬಟನ್ ಗೆ, ನಮ್ಮ ಮೆದುಳಿನಲ್ಲಿ ಅದ್ಹೇಗೆ ಈ ಅಭ್ಯಾಸ ಪ್ರೋಗ್ರಾಮ್ ಆಗಿದ್ದು?  ಕರ್ಕಶವಾಗಿ, ಅಷ್ಟು ಜೋರಾಗಿ ಶಬ್ದ ಮಾಡಿ ನಮಗೆ ಹೇಳಬೇಕಾದದ್ದೇನು ಇದೆ? ತುಸು ತಾಳ್ಮೆ, ಶಿಸ್ತಿನಿಂದ ಹೇಳಿದರೆ ಆಗದೇ? ಇಷ್ಟು ಇನ್ಸೆಕ್ಯೂರಿಟಿ ಯಾಕೆ ನಮಗೆ? ಹೌದು! ಯೋಚಿಸಿ ನೋಡಿದರೆ ಹಾರ್ನ್ ಮಾಡುವಾಗ, ಹಾರ್ನ್ ಮಾಡುವವನು ಆ ಕ್ಷಣಕ್ಕೆ ಮಾನಸಿಕವಾಗಿ ಇನ್ಸೆಕ್ಯೂರ್ಡ್ ಫೀಲ್ ಮಾಡುತ್ತಾ ಇರುತ್ತಾನೆ, ಅಭದ್ರ ಭಾವದಿಂದ ಏನು ಮಾಡಲೆಂದು ತೋಚದೇ ಕೈ ಹಾರ್ನ್ ಬಟನ್ ಗೆ ಹೋಗುತ್ತದೆ, ಆ ಕರ್ಕಶ ಶಬ್ದದಿಂದ ಅವನಿಗೇನೋ ಒಂದು ಸಮಾಧಾನ. ಸಮಸ್ಯೆ ಬಗೆ ಹರಿಯಿತೋ ಇಲ್ಲವೋ ಗೊತ್ತಿಲ್ಲ ಆದರೆ ಆ ಕ್ಷಣಕ್ಕೆ ಆ 'ಹಾರ್ನಿಗ' ತನ್ನ ಶಬ್ದವನ್ನ ಮಾಡಿ ವಿರಾಳನಾಗುತ್ತಾನೆ. ಇದೊಂಥರ ಡ್ರಗ್ಸ್ ಸೇವಿಸಿದಂಗೆ, ಎಲ್ಲದಕ್ಕೂ ಡ್ರಗ್ಸ್ ಸೇವನೆಯೇ ಉತ್ತರ ಅಂತ ತಿಳಿದು ಅದಕ್ಕೆ ಅಡಿಕ್ಟ್ ಆಗೋ ಡ್ರಗ್ ಅಡ್ದಿಕ್ಟ್ಸ್ ಗಳ ಹಾಗೆ ರಸ್ತೆ ಮೇಲಿರೋ ಕಲ್ಲು, ಮಣ್ಣು, ನಾಯಿ, ನರಿ, ಕಾರುಗಳಿಗೂ ಹಾರ್ನ್ ಒಂದೇ ಉತ್ತರ ಅಂತ ಅಡಿಕ್ಟ್ ಆಗಿರುವುದು. ತನ್ನ ಡ್ರೈವಿಂಗ್ ನ ಮೇಲೆ ಪೂರ್ತಿ ನಂಬಿಕೆ ಇರುವವ ಜಾಸ್ತಿ ಹಾರ್ನ್ ಮಾಡುವುದಿಲ್ಲ, ಅರ್ಧ-ಮರ್ಧ  ಡ್ರೈವಿಂಗ್ ಮಾಡಿಕೊಂಡು ಹೆದರುತ್ತ ಓಡಿಸುವವನೇ ಜಾಸ್ತಿ ಶಬ್ದ ಮಾಡುವುದು, ಮಾನಸಿಕವಾಗಿ ಅನ್ಸ್ಟೇಬಲ್ ಆಗಿ ತನ್ನ ಮೇಲಿನ ಕಂಟ್ರೋಲ್ ತಾನೇ ಕಳೆದುಕೊಳ್ಳುವವ ರಸ್ತೆ ಮೇಲೆ ಎಲ್ಲರನ್ನೂ ಬೈದುಕೊಂಡು, ಹಾರ್ನ್ ಮಾಡಿಕೊಂಡುಸಾಗುವವರು ಬೆಂಗಳೂರಿನಲ್ಲಿ ಲಕ್ಷದಷ್ಟು. ನಮ್ಮ ಕ್ಯಾಬ್ ಡ್ರೈವರ್ ನ ಹತ್ರ ಮೂರು ಬಗೆಯ ಹಾರ್ನ್ ಗಳಿವೆ, ಅವನಿಗೆ ಅದು ಪ್ರತಿಷ್ಠೆಯ ವಿಷಯ, 'ಸಾರ್! ಇದು ನೋಡಿ ಸಾರ್ ಈಗ, ಹೆಂಗೆ ಸೈಡ್ ಹೋಗ್ತಾರೆ ನನ್ ಮಕ್ಳು' ಅಂತ ನಗಾಡಿಕೊಂಡೇ ಶ್ರಿಲ್ ಹಾರ್ನ್ ಮಾಡಿ ಜನರನ್ನು ಬೆಚ್ಚಿ ಬೀಳಿಸುತ್ತಾನೆ. ನಿದ್ದೆಯಲ್ಲಿದ್ದ ಎಲ್ಲ ಎಂಪ್ಲಾಯೀ ಗಳು ಸಹ ಶಬ್ದಕ್ಕೆ ಬೆಚ್ಚಿ ಎಚ್ಚರವಾಗುತ್ತಾರೆ. ಅಪ್ಪಾ! ಆ ಹಾರ್ನ್ ಮಾಡಬೇಡ, ಸ್ವಲ್ಪ ತಾಳ್ಮೆಯಿಂದ ನೋಡಿಕೊಂಡು ಹೋಗು, ಐದು ನಿಮಿಷಾ ಲೇಟ್ ಆದ್ರೆ ಏನಾಗುವುದಿಲ್ಲ ಅಂತ ನಾವು ಹೇಳಿದರೆ, ಸಾರ್ ಹಂಗಾದ್ರೆ ನೀವು ಮನೆ ಮುಟ್ಟಿದಂಗೆ ಸುಮ್ನಿರಿ ಅಂತ ಹೇಳಿ ನಗ್ತಾನೆ, ಕಿವಿಯಿರದ ವಾದ್ಯಕ್ಕೆ ಹಾಡಿದ್ದೆಲ್ಲ ಸೊಗಡು ಅಂತಾ ಸುಮ್ಮನಾದೆವು. ಈ ಹಾರ್ನ್ ಬಳಕೆಯ ಬಗ್ಗೆಯೇ ಕಂಪನಿಯ ಸಾರಿಗೆ ಇಲಾಖೆಗೆ ದೂರು ನೀಡಿ ನೋಡಿದ್ವಿ, ಹೇಳ್ತಿವಿ, ಮಾಡ್ತಿವಿ ಅಂತ ಹೇಳಿ ನಿರ್ಲಕ್ಷಿಸಿದರೇ ವಿನಃ ಅದನ್ನ ಅಡ್ರೆಸ್ ಮಾಡಲಿಲ್ಲ. ಸಾವಿರ ದೂರುಗಳಿವೆ ಸಾರ್, ಇದೂ ಒಂದು ಮ್ಯಾಟರ್ ನಾ? ಅಂತ ಒಬ್ಬ ಇಲಾಖೆಯ ಮೆಂಬರ್ ಹೇಳಿದ್ದನ್ನು ಕೇಳಿ ಮಾತೇ ಬರಲಿಲ್ಲ.                 

ಹೊರದೇಶಗಳಲ್ಲಿ ಹಾರ್ನ್ ಪದ್ಧತಿ ತೀರಾ ವಿರಳ, ತುಂಬಾ ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಹಾರ್ನ್ ಮಾಡಿ ಸಂಪರ್ಕಿಸಲಾಗುತ್ತದೆ. ವಿದೇಶಿಯರು ಭಾರತಕ್ಕೆ ಬಂದು ಹೋದರೆ ಅವರು ಭಾರತದ ಬಗ್ಗೆ ಮಾಡುವ ಎಲ್ಲಕಿಂತ ದೊಡ್ಡ ದೂರೆಂದರೆ ನಮ್ಮ ಜನರ 'ಹಾರ್ನ್ ಮಾಫಿಯಾ' ಬಗ್ಗೆಯೇ. ಇಡೀ ಜಗತ್ತಿಗೆ ಶಾಂತಿ ಸಂದೇಶ ನೀಡಿದ ಭಾರತದ ಮಕ್ಕಳೇ ಈ ಲೆವೆಲ್ ಗೆ ಹಾರ್ನ್ ಮಾಡಿ ಸಾಯ್ತಾರಲ್ಲ ಅಂತ ಒಬ್ರು ಯಾರೋ ಕೇಳಿದ್ರೆ, ದೇಶಕ್ಕೆ ತಂದೆ ಆದೋರು ಸ್ವಂತ ಮಗನಿಗೆ ಆಗಲ್ಲಿಲ್ಲ, ಮೇಷ್ಟ್ರ ಮಕ್ಕಳೇ ಬನ್ನಿ ಪೋಲಿಗಳಾಗೋದು ಅಂತ ಉತ್ತರ ಕೊಟ್ರಂತೆ, ಹಂಗಾಯ್ತು ಕಥೆ. ಕೆಲ ಕಡೆ ಹಾರ್ನ್ ಅನ್ನು ಅಫೆನ್ಸಿವ್ ಆಗಿ ನೋಡಲಾಗುತ್ತದೆ, ಯಾರಾದರೂ ಹಾರ್ನ್ ಮಾಡಿದರೆ ಅದು ಯಾರದ್ದೋ ತಪ್ಪಿನಿಂದ ಎಂದು ಅಸಹ್ಯವಾಗಿ ಕಾಣಲಾಗುತ್ತದೆ , ಒಬ್ಬನಿಗೆ ಹಾರ್ನ್ ಮಾಡಿದರೆ ಅವನು ಹಾರ್ನ್ ಮಾಡಿದವಗೆ ಕ್ಷಮೆ ಕೇಳುವಷ್ಟು ನಾಗರೀಕತೆ. ನಮ್ಮಲ್ಲಿ ಹಾರ್ನ್ ಎನ್ನುವುದು ತೀರಾ ಸಾಮಾನ್ಯವಾದ ವಿಷಯ, ನಮ್ಮಲ್ಲಿ ನಾಗರೀಕತೆ, ಶಿಸ್ತು, ಗೌರವಗಳು ಅಷ್ಟು ಆ-ಸಾಮಾನ್ಯ! ನಮ್ಮ ಮುಂದೆ ಒಬ್ಬ ನಿಂತಿದ್ದಾನೆ ಅಂತಾದರೆ ಅವನೂ ಸಹ ಸ್ಟಕ್ ಆಗಿರಬಹುದು, ತಿಳಿದುಕೊಳ್ಳೋಣ ಅಂತಾಗಲಿ, ಸಿಗ್ನಲ್ ಬಿಟ್ಟ ಮೇಲೆ ಎಲ್ಲರೂ ಹೋಗೋದೇ, ಎರಡು ಸೆಕೆಂಡ್ ಕಾಯೋಣ ಅಂತಾಗಲಿ, ಹಾಸ್ಪಿಟಲ್ ಗಳು, ಸ್ಕೂಲ್ ಗಳು, ಮಾರ್ಕೆಟ್ ಗಳು ಇದ್ದಲ್ಲೆಲ್ಲ ಹಾರ್ನ್ ಹಾಕದೇ ಟ್ರಾಫಿಕ್ ಅನ್ನು ಅರ್ಥ ಮಾಡಿಕೊಂಡು ಹೋಗೋದಾಗಲಿ ನಾವು ಕಲಿಯಬೇಕಿದೆ. ಎಲ್ಲ ಕುರಿಗಳೂ ಬ್ಯಾ ಅಂದಾಗ ನಂದೂ ಒಂದಿರಲಿ ಅಂತ ಬ್ಯಾ ಅನ್ನೋ ಡ್ರೈವರ್ ಗಾಲೆ ಊರಲ್ಲಿ. ಸಿಕ್ಕಾಪಟ್ಟೆ ಸದ್ದು ಮಾಡುವ 'ಶ್ರಿಲ್ ಹಾರ್ನ್' ಗಳನ್ನ ಪೊಲೀಸರು ಬ್ಯಾನ್ ಮಾಡಿದರೂ ಸಹ ಅದನ್ನೇ ಗಾಡಿಗೆ ಸಿಕ್ಕಿಸಿಕೊಂಡು ಎಲ್ಲರಿಗಿಂತ ಜಾಸ್ತಿ ನಾನು ಒದರುತ್ತೇನೆ ಅಂತ ಬರ್ತಾರೆ, ಬೈಕ್ ಗಳಿಗೆ ಯಾವುದ್ಯಾವುದೋ ಎಂಜಿನ್ ಸೌಂಡ್  ಹಾಕಿಸಿ ನಡುರಾತ್ರಿಗಳಲ್ಲಿ ಗರ್! ಅಂತ ಹೋಗ್ತಾರೆ, ಪ್ಯಾಸೆಂಜರ್ ಟೆಂಪೋ-ವ್ಯಾನ್ ಗಳಲ್ಲಿ ಬೋಸ್ ಸ್ಪೀಕರ್ ಗಳಲ್ಲಿ ಜೋರಾಗಿ  ಹಾಡುಗಳನ್ನ ಹಾಕೊಂಡು ಹಿಂದೆ ಬಡಿದುಕೊಳುವವನ ಶಬ್ದ ಕೇಳದೇ  ಜೋರಾಗಿ ಮುಂದಿನವಗೆ ಹಾರ್ನ್ ಮಾಡುತ್ತಾರೆ, ಸಿಟ್ಟಿಗೂ ಹಾರ್ನ್ , ಲಿಫ್ಟಿಗೂ ಹಾರ್ನ್. ದೇವರು ಒಂದಿನ ಬೆಂಗಳೂರಿನ ಎಲ್ಲ  ಗಾಡಿಗಳ ಹಾರ್ನ್ ಗಳನ್ನೂ ಆಫ್ ಮಾಡಿದ್ದೇ ಆದರೆ ಈ ಹಾರ್ನ್ ಅಡಿಕ್ಟ್ ಗಳೆಲ್ಲ ಬೋರ್ ಆಗಿಯೇ ಸತ್ತು ಹೋಗುತ್ತಾರಾ ಅಂತ?

ದೀಪಾವಳಿಗೆ ಪಟಾಕಿ ಬ್ಯಾನ್ ಮಾಡಿ ಅಂತ ಬಡ್ಕೊಳೋ ಸರ್ಕಾರ ಈ ಸಮಸ್ಯೆಯ ಬಗ್ಗೆಯೂ ಸ್ವಲ್ಪ ಯೋಚನೆ ಮಾಡಿದ್ದರೆ ಒಳ್ಳೇದಿತ್ತು, ಟ್ರಾಫಿಕ್ ಪೇದೆಗಳಿಗೆ ಹಾಂಕಿಂಗ್ ನ ಬಗ್ಗೆ ಜಾಸ್ತಿ ಸ್ಟ್ರಿಕ್ಟ್ ಆಗಲು ಹೇಳಿ, ಕಿಕ್ಕಿರಿಯುವ ಸಿಗ್ನಲ್ ಗಳಲ್ಲಿ ಹಾರ್ನ್ ಸೌಂಡ್ ಚೆಕಿಂಗ್ ಮಾಡಿ, ದಂಡ ವಿಧಿಸಿ, ಡ್ರೈವಿಂಗ್ ಲೈಸೆನ್ಸ್ ಕೊಡುವಾಗ ಚಾಲಕರಿಗೆ ಹಾರ್ನ್ ನ ಕಿರಿಕಿರಿಗಳ ಬಗ್ಗೆ ಹಾಗು ಹೆಡ್ ಲೈಟ್ ಪ್ಲಾಶಿಂಗ್/ಬ್ಲಿಂಕಿಂಗ್ ನಂತಹ  ಪರ್ಯಾಯ ಅಭ್ಯಾಸಗಳ ಬಗ್ಗೆ ತಿಳಿಹೇಳಿ ಕೊಡಬಹುದು. ಈಗಿನ ಬೆಂಗಳೂರಿನ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ನೋಡಿದರೆ  ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಹೋಗಲಾಡಿಸುವುದು ತುಂಬಾ ಕಷ್ಟ, ಆದರೆ ಕನಿಷ್ಠ ಪಕ್ಷ ಹಾರ್ನ್ ಪದ್ಧತಿ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಬಹುದು. ಈ ಹಾಂಕಿಂಗ್ ಅಡ್ಡಿಕ್ಷನ್ ನಿಂದ ಹೊರಬರಲು ನಾವೆಲ್ಲರೂ ಜಾಸ್ತಿ ಕಷ್ಟಪಡಬೇಕಾಗಿಲ್ಲ, ಇವತ್ತೊಂದಿನ  ಹಾರ್ನ್ ಮಾಡದೇ ಗಾಡಿ ಓಡಿಸಿ ನೋಡುತ್ತೇನೆ ಎಂದುಕೊಂಡು ಗಾಡಿ ಈಚೆ ತೆಗೆದರೆ ಆಯಿತು. ಒಂದು ದಿನದಿಂದ ಆದ ವ್ಯತ್ಯಾಸ, ಸಿಕ್ಕ ಸಮಾಧಾನ, ಕಲಿತ ತಾಳ್ಮೆ ಯಿಂದ ನಮ್ಮ ಪ್ರಯಾಣ ಎಷ್ಟು ಸುಖಕಾರವಾಗಿತ್ತು ಅಂತ ಅನಿಸದೇ ಇರದು. ನಾಯಿಗಳಂತೆ ರೋಡಿನಲ್ಲಿ ಒಟ್ಟಾಗಿ ಸೇರಿಕೊಂಡು ಬೊಗಳದೇ, ಮನುಷ್ಯರಂತೆ ಟ್ರಾಫಿಕ್ ಅರ್ಥ ಮಾಡಿಕೊಂಡು ಮೂವ್ ಮಾಡಿದಾಗ ಆಗುವ ಒಂದು ಜವಾಬ್ದಾರಿಯ ಅನುಭವ ಬೇರೆಯದ್ದೇ, ಒಮ್ಮೆ ಟ್ರೈ ಮಾಡಿ!       


No comments:

Post a Comment

ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...

ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು,...