Thursday, November 16, 2017

ಶಿವಪೂಜೆಯಲ್ಲಿ ಕರಡಿ ಬಿಟ್ಟವರಾರು?



ಜನ ಸೀತೆಯ ಪವಿತ್ರತೆಯನ್ನು ಪ್ರಶ್ನಿಸಿದಾಗ ಸೀತೆ ಆಫೆಂಡ್ ಆಗಲಿಲ್ಲ, ರಾಮ ಅವಳನ್ನ ಡಿಫೆಂಡ್ ಕೂಡ ಮಾಡಲಿಲ್ಲ. ಬದಲಿಗೆ ಒಂದು ಏಕ್ಸಾಮ್ ಏರ್ಪಡಿಸಿ ಊರಿಗೆಲ್ಲಾ ಕನ್ವೀನ್ಸ್ ಮಾಡಲಾಯಿತು. ನಾನು ಇದರಿಂದ ಬರಹ ಶುರು ಮಾಡಿದಾಗ ಮನಸಲ್ಲಿ ಸಾವಿರ ಪ್ರಶ್ನೆಗಳು, ರಾಮ ಮಾಡಿದ್ದು ಸರಿಯೇ? ಸೀತೆ ಅದ್ಯಾರೋ ಹಾಕಿದ ಚಾಲೆಂಜ್ ಒಪ್ಪಿಕೊಂಡು ಪರೀಕ್ಷೆಗೆ ಕುಳಿತಿದ್ದು ಸರಿಯೇ? ಅಷ್ಟೊಂದು ಜನ ಆಡಿಯನ್ಸ್ ನಡೆದುಕೊಂಡ ರೀತಿ ಸರಿಯೇ? ಅಷ್ಟೆಲ್ಲ ಯುದ್ಧ, ಧರ್ಮ-ಅಧರ್ಮಗಳ ಟ್ರಾಶ್-ಟಾಕ್ ಆದಮೇಲೆ ಇಂಥಾ ಒಂದು ಪ್ರೋಗ್ರಾಮ್ ಆ ದೊಡ್ಮನೆ ಫ್ಯಾಮಿಲಿಗೆ ಬೇಕಾಗಿತ್ತೇ? ಮುಖ್ಯವಾಗಿ ಬೇರೆಯವರ ಫ್ಯಾಮಿಲಿ ಮ್ಯಾಟರ್ ನಲ್ಲಿ ಮೂಗು ತೋರಿಸೋ ಚೇಷ್ಟೆ ನನಗೀಗ ಬೇಕಾಗಿತ್ತೇ? ಅಂತ.

ಈ ಘಟನೆಯ ಮೂಲವೇ ಒಂದು ಪ್ರಶ್ನೆ, ಅಂತ್ಯವೂ ಪ್ರಶ್ನೆಗಳಲ್ಲೇ. ನನ್ನ ಕೆಲ ಪ್ರಶ್ನೆಗಳು ಇತ್ತೀಚಿಗೆ ನನಗೆ ಇರುಸು ಮುರುಸುಗಳಿಗೆ ಈಡು ಮಾಡಿದಾಗ ನನಗೆ ಈ ಬರಹದ ಯೋಜನೆ ಹೊಳೆದಿರಬಹುದು. ಉದಾಹರಣೆಗೆ, ಈಗಲೂ ಸಭೆ ಸಮಾರಂಭಗಳಲ್ಲಿ ಮೋದಿಯವರು ಕಾಂಗ್ರೆಸ್, ರಾಹುಲ್ ಗಾಂಧಿ ಅಂತ ಬೈದುಕೊಳ್ಳೋದು ಎಷ್ಟು ಸರಿ? ಅದೆಲ್ಲ ದಾಟಿ ಅವರೀಗ ಬರೀ ಬಿಜೆಪಿ ನಾಯಕರಾಗಿರದೇ ನಮ್ಮ ದೇಶದ ಸನ್ಮಾನ್ಯ ಪ್ರಧಾನಿಯಾಗಿ ಬೆಳೆದಿಲ್ಲವೇ? 'ಥೂ! ಇಷ್ಟೊಳ್ಳೆ  ಪ್ರಧಾನಮಂತ್ರಿ ಸಿಕ್ಕಿದ್ದೇ ಪುಣ್ಯ, ಅಂಥವರನ್ನೂ ಪ್ರಶ್ನೆ ಮಾಡ್ತೀರಲ್ಲೋ' ಅಂತ ನನ್ನ ಸ್ನೇಹಿತ ಸಿಟ್ಟಾಗಿ ಎದ್ದುಹೋದ. ಹಿಂದೊಮ್ಮೆ, ಇಂದಿರಾ ಕ್ಯಾಂಟೀನ್ ಹೇಗೆ ನಡೆಯುತ್ತದೆ, ಅದಕ್ಕೆ ಎಷ್ಟು ಖರ್ಚಾಯ್ತು, ಎಲ್ಲಿಂದ ದುಡ್ಡು ಬಂತು, ಈ ಐಡಿಯಾ ನಮಗೆ ಎಷ್ಟು ಬೇಕಿತ್ತು ಅಂತ ಕೇಳಿದಾಗ, 'ಬಡವರಿಗೆ ತುತ್ತು ಅನ್ನ ಹಾಕೋ ಕಾರ್ಯಕ್ಕೂ ಪ್ರಶ್ನೆ ಹಾಕ್ತೀರಲ್ಲೋ' ಅಂತ ಟ್ವಿಟ್ಟರಿನಲ್ಲಿ ಯಾರೋ ರೇಗಿದ್ರು. ಭಾರತದಲ್ಲೇಕೆ ಅಷ್ಟು ಸ್ಲಂ ಗಳಿವೆ ಅಂತ ನನ್ನ ಅಮೆರಿಕೆಯ ಸಹೋದ್ಯೋಗಿ ನನ್ನನ್ನು ಕೇಳಿದಾಗ, 'ಭಾರತದ ಸಂಸ್ಕೃತಿ, ಪದ್ಧತಿ, ಇತಿಹಾಸ ಗೊತ್ತಿಲ್ದೇ ಏನೇನೋ ಕೇಳ್ಬೇಡ. ನಿಮ್ಮ ದೇಶದಲ್ಲೆಷ್ಟು ಸುರಕ್ಷತೆ, ಶಿಸ್ತು ಇದೆ ಅಂತ ಮಾತಾಡ್ತಿ ನೀನು?'  ಅಂತ ನಾನು ಏನೇನೋ ತಡವರಿಸಿದ್ದೆ. ನಮ್ಮಲ್ಲಿ ಇಷ್ಟೊಂದು ದೇವರು ಯಾಕೆ? ಶಿವ ಕಾಮನ್ನ ಗೆದ್ದ ಅಂತಂದ್ರೆ ಶಿವನಿಗೆ ಹೇಗೆ ಎರಡು ಮಕ್ಳು? ಜಾತಿ ಬಿಡಿ ಅಂತ ಬಡ್ಕೊಂಡ ಬಸವಣ್ಣನ ಹೆಸರಲ್ಲೇ ಯಾಕೆ ಇಷ್ಟೊಂದು ಜಾತಿಗಳು? ಅಂತ ಅವಾಗೆಲ್ಲ ನಾನು ನಮ್ಮಪ್ಪನ್ನ ಕೇಳಿದ್ರೆ ನಮ್ಮಪ್ಪ, 'ಈಸಾರಿನಾದರೂ ಒಳ್ಳೆ ಮಾರ್ಕ್ಸ್ ಬರತ್ತೋ?', 'ನಿನ್ನ ಸ್ಯಾಲರಿ ಹೆಚ್ಚಾಯ್ತೋ ಅಥವಾ ಇನ್ನ ಅಷ್ಟೇ ಇದೆಯೋ?' ಅಂತ ಮರುಪ್ರಶ್ನೆ ಹಾಕಿ ನನ್ನ ಬಾಯಿ ಮುಚ್ಚಿಸಿದ್ದರು.

ಈ ಪ್ರಶ್ನೆ ಮಾಡುವ ಅಭ್ಯಾಸ, ಸಿಕ್ಕ ಸಿಕ್ಕಿದ್ದನ್ನು ಪ್ರಶ್ನೆ ಮಾಡೋದು, ಎಲ್ಲಾನೂ ಪ್ರಶ್ನೆಗಳ ತರ್ಕಕ್ಕೆ ಹಿಡಿದು ನೋಡುವುದು ಎಷ್ಟು ಸರಿ?, ಇದು ಪ್ರಶ್ನೆ! 

ಸೀತೆ ಅಗ್ನಿಪರೀಕ್ಷೆ ಎಪಿಸೋಡ್ ನಲ್ಲಿ ರಾಮ, 'ನೀವು ಯಾರೋ ನಮ್ ಹುಡುಗೀನಾ ಪ್ರಶ್ನೆ ಮಾಡೋಕೆ? ನಾನ್ ರಾಜ ಆಲ್ವಾ, ನಮ್ಮಪ್ಪ ಬೇಜಾನ್ ಮಾಡಿಟ್ಟೋರೆ, ನಾನು ಹೇಳಿದಂಗೆ ಎಲ್ಲಾ ನಡೀಬೇಕ್! ಪ್ರಶ್ನೆ ಕೇಳೋರೆಲ್ಲ ಬ್ಯಾನ್ ಆಬೇಕ್!' ಅಂತ ಹುಚ್ಚ ವೆಂಕಟ್ ಡೈಲಾಗ್ ಬಿಡ್ಲಿಲ್ಲ.
ಕುರುಕ್ಷೇತ್ರದಲ್ಲಿ ಅರ್ಜುನ, ನಾನು ಯಾಕೆ ಯುದ್ಧ ಮಾಡಬೇಕು, ನಂಗೆ ಬೋರ್ ಆಗತ್ತೆ ಇದೆಲ್ಲ ಅಂತ ಕೇಳಿದಾಗ ಕೃಷ್ಣ,  'ಅಪ್ಪಾ ಬೇಜಾನ್ ಕೆಲಸಗಳಿವೆ ನಂಗೆ, ಹೇಳಿದಷ್ಟು ಮಾಡಪ್ಪ ನೀನು' ಅಂತ ಹೇಳಲಿಲ್ಲ. ಬದಲಾಗಿ ಹೆವೀ ಫಿಲಾಸಫಿಕಲ್ ಆಗಿ ಗೀತೆನ ಒಂದೇ ಉಸಿರಲ್ಲಿ ಹೇಳಿಬಿಟ್ಟ. ಅದನ್ನೇ ಇಸ್ಕಾನ್ ದವರು ಈಗ ಐಫೋನ್ ಥರ ಹೊಸ ಹೊಸ ವರ್ಷನ್ ಅಪ್ಡೇಟ್ ಮಾಡಿ ಮಾರ್ಕೆಟ್ ಗೆ ಬಿಡ್ತಾ ಇರೋದು. ಅಂಥ ಮಹಾನುಭಾವರುಗಳೇ ಪ್ರಶ್ನೆಗಳನ್ನ ಸ್ವೀಕರಿಸಿ ಅದಕ್ಕೆ ತಕ್ಕ ಉತ್ತರಗಳ ಹುಡುಕಾಟದಲ್ಲಿ ತೊಡಗಿಕೊಂಡಾಗ, ಯಕಶ್ಚಿತ್ 'ಹುಳು ಮಾನವ'ರಾದ ನಾವೇಕೆ ಆಫೆಂಡ್ ಆಗ್ತೀವಿ ಪ್ರಶ್ನೆಗಳಿಂದ?

ಸಿನಿಮಾಗಳಲ್ಲಿ ರಾಷ್ಟ್ರಗೀತೆಯ ಕಡ್ಡಾಯದ ಬಗ್ಗೆ ಕೇಳಿದರೆ ಕಾಂಟ್ರವರ್ಸಿ. ಹಿಂದಿ ಭಾಷಾ ಹೇರಿಕೆಯ ವಿರುದ್ಧ ಮಾತಾಡಿದರೆ ಕಾಂಟ್ರವರ್ಸಿ. ಮೀಸಲಾತಿ, ನೂರು- ಮತ್ತೊಂದು-ಭಾಗ್ಯ, ಧಾರ್ಮಿಕ ಸಬ್ಸಿಡಿಗಳ ರಾಜಕೀಯಗಳ ಬಗ್ಗೆ ಕೇಳಿದರೆ ಒಂದು. ಆಜಾನ್ ಸೌಂಡು, ದೇವಸ್ಥಾನದ ಸ್ಪೀಕರ್ ಸೌಂಡಿಗೆ ಲೊಚಗುಟ್ಟಿದರೆ ಮತ್ತೊಂದು. ಪರಿಹಾರ ನಿಧಿಯ ಲೆಕ್ಕ ಏನಾಯ್ತು? ಈ ಮೂರ್ತಿ ಯಾಕೆ ಬೇಕಿತ್ತು? ಆ ಜಯಂತಿಯಿಂದ ಏನು ಪ್ರಯೋಜನ? ಎಂದು ಕೇಳು ಕೇಳುತ್ತಲೇ ಗಲಭೆಗಳು, ಹೊಡೆದಾಟಗಳು. 

ಈ 'ಪ್ರಶ್ನೆ'ಗಳಿಂದ ಯಾಕೆ ಇಷ್ಟೊಂದುಮುನಿಸು ನಮಗೆ? ಪ್ರಶ್ನೆಗಳೇ ಜ್ಞಾನದ ದಾರಿ ಅಂತ ಹೇಳೋ ಗುರುಗಳು, ಮೌಲವಿಗಳನ್ನು ಚರ್ಚೆಗಳಿಗೆ ಕೂರಿಸಿದರೆ ಅವರು ಆಫೆಂಡ್ ಆಗಿ ಮಂಗನಂತೆ ಆಡುವುದನ್ನು ನೋಡಿ ಮುಜುಗರ ಆಗುತ್ತದೆ. ಅದರ ಜೊತೆಯಲ್ಲೇ 'ನಾನು ಗುರು' ಅಂತಾ ಹೇಳಿಕೊಳ್ಳುವ ಇವರೆಲ್ಲ ಅದ್ಹೇಗೆ ಗುರು ಆಗ್ತಾರೆ? ಅಂತ ಮತ್ತೊಂದು ಪ್ರಶ್ನೆ ಬರುತ್ತದೆ. ನಾನು ರಾಜ ಅಂತ ಹೇಳ್ಕೊಳೋನು ರಾಜನೇ ಅಲ್ಲ ಅಂತ ಎಲ್ಲೋ ಓದಿದ ನೆನಪು.

ಜ್ಞಾನದ ಮರ ಅಂತೇನಾದ್ರೂ ಒಂದಿದ್ರೆ ಅದರ ರೆಂಬೆ-ಕೊಂಬೆಗಳೇ ಪ್ರಶ್ನೆಗಳು, ಅವುಗಳ ಮೇಲೆ ಅರಳೋ ಎಲೆ ಹೂವುಗಳೆಲ್ಲ ಉತ್ತರಗಳು. ಪ್ರತಿಯೊಂದು ಹೂವು-ಹಣ್ಣಿಂದ ಎಷ್ಟೊಂದು ಮರಗಳು ಹುಟ್ಟೋ ಸಾಧ್ಯತೆ ಇರುತ್ತದೆ. ಹಾಗೆ ಪ್ರತಿ ಉತ್ತರವೂ ಮತ್ತೆ ಹತ್ತು ಹದಿನಾರು ಪ್ರಶ್ನೆಗಳ ಆದಿ. ಯಾವ ಪ್ರಶ್ನೆಯೂ ತಪ್ಪಲ್ಲ, ಉತ್ತರ ತಪ್ಪಾಗಬಹುದಷ್ಟೇ. ಯಾವ ಪ್ರಶ್ನೆಯೂ ಕ್ಷುಲ್ಲಕ ಅಲ್ಲ, ಉತ್ತರ ಸಿಲ್ಲಿ ಆಗಿರಬಹುದಷ್ಟೇ. ಹಾಗೆ, ಯಾವ ಪ್ರಶ್ನೆಯೂ ಅಫೆನ್ಸ್ ಅಲ್ಲ, ಉತ್ತರಿಸುವವ ಪ್ರಭುದ್ಧನಾಗಿರಬೇಕಷ್ಟೆ. ಸಿದ್ರಾಮಯ್ಯನವರ ನಿದ್ದೆಯ ಬಗ್ಗೆ ಪ್ರಶ್ನಿಸಿದಾಗಲೇ ಅವರ ಆರೋಗ್ಯದ ಬಗ್ಗೆ ನಮಗೆ ತಿಳಿದಿದ್ದು. ಕೇಳದೇ ಹೇಗೆ ಪಡೆಯುವುದು? ಬ್ರಾಹ್ಮಣ ಶ್ರೇಷ್ಠ ರಾವಣನೇ ಆತ್ಮಲಿಂಗುನ ಕೇಳಿ ಪಡೆದ. ವರ್ಷಗಟ್ಟಲೇ ಕೇಳಿ ಹೋರಾಡಿದ ಮೇಲೆಯೇ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು. ಪ್ರಶ್ನೆ ಕೇಳುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ, ಪ್ರತಿಯೊಂದರ ಬಗ್ಗೆ ಪ್ರಶ್ನೆ ಕೇಳಿ ತಿಳಿಯುವುದನ್ನೇ 'ರೈಟ್ ಟು ಇಂಫಾರ್ಮೇಶನ್' ಅಂತ ಭಾರತ ಸಂವಿಧಾನ ಹೇಳೋದು.

ಯಾಕೆ ಶಿವಪೂಜೆಯಲ್ಲಿ ಕರಡಿ ಬಿಡಬಾರದು? ಅಂತ ಮೊನ್ನೆ ನಮ್ಮ ಅಕ್ಕನ ಮಗ ಕೇಳಿದಾ. ಅವನಿಗೆ ಹದಿನಾಲ್ಕೇ ವರ್ಷ. ನಾನು ಉತ್ತರ ಹುಡುಕಿದಾಗ ಗೊತ್ತಾಗಿದ್ದು ಅದು ಕರಡಿ ಬಿಡೋದಲ್ಲ, 'ಕರಡಿಗೆ' ಬಿಡೋದು ಅಂತ. ಶಿವಪೂಜೆಗೆ ಕರಡಿಗೆ ಹಳೇ ಕಾಲದಲ್ಲಿ ತುಂಬಾ ಮುಖ್ಯವಾಗಿತ್ತಂತೆ. ಅದನ್ನ ಬಿಟ್ಟು ಶಿವಪೂಜೇನ ಮಾಡೋದು ಸಾಧ್ಯವೇ ಇಲ್ಲ ಅನ್ನೋಮಟ್ಟಿಗೆ. ಅದಕ್ಕೆ ಇಂಥ ಕಾರ್ಯದಲ್ಲಿ ಏನಪ್ಪಾ ಮುಖ್ಯವಾದದ್ದನೇ ಬಿಟ್ಟು ಬಂದಿರಲ್ಲ ಅಂತ ಅನ್ನೋಕೆ ಆ ಗಾದೆಯನ್ನು ಉಪಯೋಗಿಸುತ್ತಿದ್ದರು. ಉದಾಹರಣೆಗೆ, ಏನಪ್ಪಾ ಮದುವೇಲಿ ತಾಳೀನೇ ಮರೆತು ಬಂದಿರಲ್ಲ ಅಂದಂಗೆ. ಏನಪ್ಪಾ ಎಕ್ಸಾಮ್ ನಲ್ಲಿ ಕಾಪಿ ಚೀಟಿನೇ ಬಿಟ್ಟು ಬಂದಿಯಲ್ಲಾ ನೀನು ಅಂದಂಗೆ. ಇದನ್ನೇ ತುಸು ಸರಳವಾಗಿ ನನ್ನ ಅಳಿಯನಿಗೆ ತಿಳಿಸಿದೆ. ಖುಷಿ ಪಟ್ಟ ಅವನು. ಅವನಿಗಿಂತ ನನಗೆ ಜಾಸ್ತಿ ಖುಷಿಯಾಯ್ತು. ಹೊಸ ವಿಷಯವೊಂದನ್ನು ತಿಳಿದುಕೊಂಡ ಖುಷಿ.

ಹೀಗೆ ಪ್ರಶ್ನೆಗಳಿಗೆ ತಕ್ಕ ಉತ್ತರ ಹುಡುಕುವುದು, ಅದಕ್ಕಿಂತ ಮೇಲಾಗಿ ಪ್ರಶ್ನೆಗಳಿಗೆ ನಾವು ತೆರೆದುಕೊಳ್ಳುವುದು ತುಂಬಾ ಮುಖ್ಯ ಹಾಗು ಆರೋಗ್ಯಕರ. 'ಗಣಪತಿಗೆ ಯಾಕೆ ಅಷ್ಟು ಹೊಟ್ಟೆ? ಶಿವ ಯಾಕೆ ಡಾನ್ಸ್ ಮಾಡ್ತಾನೆ? ನಾನೇಕೆ ವಿಭೂತಿ ಹಚ್ಕೋಬೇಕು? ' ಅಂತೆಲ್ಲ ನನ್ನ ಪುಟ್ಟ ಅಳಿಯ ಕೇಳಿದಾಗೆಲ್ಲ, ನಾನು ರೀಸನ್ ಹುಡುಕಿ ಅವನಿಗೆ ಉತ್ತರ ನೀಡುವ ಪ್ರಯತ್ನ ಮಾಡುತ್ತೇನೆ. ಹೇಗೆ ಎಲ್ಲ ಸಣ್ಣ ಪುಟ್ಟ ಆಚರಣೆಗಳು, ನಂಬಿಕೆಗಳಿಗೂ ಒಂದೊಂದು ಅರ್ಥವಿದೆ ಅಂತ ತಿಳಿದುಕೊಂಡಾಗ ನನಗೆ ಈ ಆಚರಣೆಗಳ ಬಗ್ಗೆ ಹೆಮ್ಮೆ ಆಗುತ್ತದೆ. ದೇವರಿಗೆ ಹಾಗೆಲ್ಲ ಅನಬಾರ್ದು, ಹಾಗೆಲ್ಲ ಕೇಳಬಾರ್ದು, ಅಂತ ಹೇಳಿ ಪ್ರಶ್ನೆಗಳನ್ನು ಚಿವುಟಿದರೆ, ನಂಬಿಕೆಗಳಿಗೆ ಕಾರಣ ತಿಳಿಯದೇ ಮುಂದೆ ಅವನಿಗೆ ಇವೆಲ್ಲ ಮೂಢ ನಂಬಿಕೆ ಅಷ್ಟೇ ಅಂತ ಅನಿಸುವ ಅಪಾಯವಿರುತ್ತದೆ. ನನಗಾಗಿದ್ದು ಅದೇ. ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ತಿಳಿಯದೇ ನಾವು ಎಷ್ಟು ಮೂಢರು, ಹಿರಿಯರು ಹೇಳಿದ್ದೆಲ್ಲ ಕುರಿಗಳಂತೆ ಮಾಡುತ್ತಾ ಹೋಗ್ತೇವೆ ಅನ್ನೋ ಭಾವನೆಯಲ್ಲಿದ್ದೆ. ಆಮೇಲೆ ಓದಿ, ಕೇಳಿ ತಿಳಿದ ನಂತರ ನಮ್ಮ ಪದ್ಧತಿ, ಆಚರಣೆಗಳ ಬಗ್ಗೆ ತಿಳುವಳಿಕೆ ಬೆಳೆಯಿತು. ಪ್ರಶ್ನೆಗಳಿಗೆ ಅಂಜುವ ದೇವರು ಅದೆಂಥ ದೇವರು? ಪ್ರಶ್ನೆಗಳಿಗೆ ಹೆದರುವ ಧರ್ಮ ಅದೆಷ್ಟು ಗಟ್ಟಿ? ಎಲ್ಲವನ್ನು ಪ್ರಶ್ನಿಸಿ ಪರೀಶೀಲಿಸಿದಾಗ ಹೊಚ್ಚ ಹೊಸದಾಗಿ ಪ್ರತಿ ಬಾರಿಯೂ ಹೊಳೆಯುತ್ತ ಬರುವ ಉತ್ತರವೇ ಸತ್ಯ. ಆ ಸತ್ಯದಿಂದಷ್ಟೇ ಧರ್ಮ, ದೇವರುಗಳೆಂಬ ನಂಬಿಕೆಗಳು ನಿಲ್ಲಬೇಕೆ ವಿನಃ ಯಾರೋ ಹೇಳಿದರೆಂದೋ ಅಥವಾ ಯಾವುದೋ ಹೆದರಿಕೆಯಿಂದಲೋ ಅಲ್ಲ.

ಎಲ್ಲರೂ ಮನುಷ್ಯರೇ ಅಂದ ಮೇಲೆ ತಪ್ಪು ಮಾಡುವ ಸಾಧ್ಯತೆ ಇದ್ದೇ ಇರುತ್ತದೆ, ಸೀತೇನೆ ಪರೀಕ್ಷಿಸಿದರು, ದ್ರೌಪದಿ ನೇ ಜೂಜಿಗಿಟ್ರು.. ಎಲ್ಲರೂ ತಪ್ಪು ಮಾಡಿನೇ ದೇವರು ಆಗಿರೋದು ಅಂತಂದರೆ, ಮಾಡಿದ ತಪ್ಪುಗಳ ಅವಲೋಕನ ಮಾಡಿ ತಿದ್ದುಕೊಳ್ಳೋಣ. ನಮ್ಮನ್ನ ಒಬ್ಬರು ಪ್ರಶ್ನಿಸಿದರೆ ಅದಕ್ಕೆ ಸಮರ್ಪಕ ರೀತಿಯಲ್ಲಿ ಉತ್ತರಿಸೋಣ, ಆಗದಿದ್ದರೆ ಉತ್ತರ ಹುಡುಕೋಣ.
ಪ್ರಶ್ನೆ ಕೇಳುವ ಧ್ವನಿಗೆ ಕಿವಿ ಕೊಡೋಣ, ಗುಂಡೇಟನಲ್ಲ. ಪ್ರಶ್ನೆಗಳೇ ಇಲ್ಲದ ನಾಗರಿಕತೆಯ ಬೆಳವಣಿಗೆ ಅಸಾಧ್ಯ. ಚರ್ಚೆಯಾಗದ ಬ್ಯಾನ್ ಗಳು, ಸಮೀಕ್ಷಾರಹಿತ ಕಡ್ದಾಯಗಳಿಂದ ಒಂದು ರಾಜ್ಯ, ದೇಶದ ಅಭಿವೃದ್ಧಿಗೆ ಹಾನಿಯೇ ವಿನಃ ಯಾವ ಪ್ರಯೋಜನವೂ ಇಲ್ಲ. ಪ್ರಶ್ನೆಗಳ ಕೇಳುವ ಸಂಸ್ಕೃತಿಯ ಬೆಳೆಸಿಸುವುದು, ಅದಕ್ಕೆ ಪೂರಕ ವಾತಾವರಣ ಸೃಷ್ಟಿಸುವುದು ತುಂಬಾ ಮುಖ್ಯ. ಅದನ್ನು ನಾವು, ನಮ್ಮ ನಾಯಕರು, ನಮ್ಮ ಸರಕಾರಗಳು ಹೆಚ್ಚೆಚ್ಚು ಮನಗಾಣಲಿ ಎಂದು ಆಶಿಸೋಣ. ಅವರು ಕಿವಿ ಕೊಡಲ್ಲ ಅಂತ ನಾವು ಪ್ರಶ್ನೆ ಕೇಳೋದನ್ನೂ ನಿಲ್ಲಿಸುವುದು ತಪ್ಪೇ. ಹಾವಿಗೆ ಕಿವಿ ಇಲ್ಲ ಅಂತ ಪುಂಗಿ ಊದೋದನ್ನ ನಿಲ್ಲಿಸಿದ್ರೆ ಹಾವಾಡಿಗನಿಗೇ ಕಷ್ಟ, ನಮ್ಮ ಪ್ರಯತ್ನ ನಾವು ಮಾಡೋಣ.

                        

No comments:

Post a Comment

ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...

ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು,...