ಹತ್ತು ವರ್ಷದಿಂದ ಬೆಂಗಳೂರಲ್ಲೇ ಪಾನಿಪುರಿ ಮಾರಿಕೊಂಡಿದ್ದ ಬಿಹಾರಿ ಹುಡುಗನಿಗೆ ಕನ್ನಡ ಬರೋದಿಲ್ಲ, ಸ್ವಲ್ಪ ಮಳೆ ಆದ್ರೆ ಸಾಕು ಈ ಹಾಳಾದ್ದು ಓಲಾ, ಉಬರ್ ಗಾಡಿಗಳೇ ಸಿಗಲ್ಲ, ಆಫೀಸ್ ಕೆಲಸ -ಟ್ರಾಫಿಕ್ ಜಾಮ್ ಗಳಲ್ಲಿ ಸಿಕ್ಕಿ ಈಗೀಗ ಪರ್ಸನಲ್ ಟೈಮ್ ಅಂತನೇ ಸಿಗಲ್ಲ, ಆಫೀಸ್ ನಲ್ಲಿ ಆ ಬಿಳಿ ಹುಡುಗಿ ಮುಂದೆ ಎಷ್ಟು ಓಡಾಡಿ ಸತ್ರುನೂ ಅವಳು ನನ್ನ ಮುಸುಡಿ ನೋಡಲ್ಲ, ಬೆಳಿಗ್ಗೆ ಎದ್ರೆ ನಲ್ಲೀಲಿ ನೀರು ಬರಲ್ಲ, ನೀರು ಬಂತು ಅಂತ ಬಾತ್ರೂಮ್ ನಲ್ಲಿ ಹೋಗಿ ಕುಂತ್ರೆ ಬರಬೇಕಾಗಿರೋದು ಬರಲ್ಲ, ಮಳೆ ಬಂದ್ರೆ ಕೆರೆ ತುಂಬಲ್ಲ, ಎಲೆಕ್ಷನ್ ಬಂದ್ರೆ ಹಳ್ಳ ಮುಚ್ಚಲ್ಲ, ಮೋದಿಗೆ ನಿದ್ದೆ ಬರಲ್ಲ, ಸಿದಣ್ಣಂಗೆ ಎಚ್ಚರ ಆಗಲ್ಲ! ಅಬ್ಬಾ!! ಎಷ್ಟೊಂದು ಸಮಸ್ಯೆಗಳು ನಮಗೆ, ಜಗತ್ತಲ್ಲಿ ಎಲ್ಲಾ ಕಷ್ಟಗಳೂ ನಮಗೆ ಇವೆ. ಸಾಕಷ್ಟು ಟೆನ್ಶನ್ ಆಗ್ಲೇ ಇವೆ, ಲಕ್ಷಗಟ್ಟಲೆ ಲೋನು, ಮನೆ ಜವಾಬ್ದಾರಿ, ಆಫೀಸ್ ನಲ್ಲಿ ಬಾಸ್, ಮನೇಲಿ ಹೆಂಡತಿ. ಇಷ್ಟಾಗಿಯೂ ಮತ್ತೆ ಡೈಲಿ ಬೇಸಿಸ್ ಮೇಲೆ ಹೊಸ ಹೊಸ ಸಣ್ಣ-ದೊಡ್ಡ ವಿಷಯಗಳ ಚಿಂತೆಗಳು ಯಾಕೆ ಬರ್ತಾನೆ ಹೋಗತ್ತೆ? ಯಾಕೆ ಇಷ್ಟು ಒತ್ತಡ, ಚಿಂತೆ, ಹತಾಶೆ ನಮಗೆ? ಇನ್ನ ಸರಿಯಾಗಿ ಮೂವತ್ತು ತುಂಬಿಲ್ಲ, ಆದ್ರೂ ಜಗತ್ತೇ ತಲೆ ಮೇಲೆ ಬಿದ್ದಂತೆ ಯಾಕೆ ನಾವು? ಪ್ರತೀ ಮಾತು 'ಅಯ್ಯೋ.. ' ಅಂತಾನೆ ಶುರು ಆಗೋದು, ಪ್ರತೀ ಗುರಿಯು ದಾರಿ ಲೆಕ್ಕದಲ್ಲೇ ಮಂಜಾಗೋದು, ಮಲ್ಕೊಂಡ್ರೆ ಬೆನ್ನು ನೋವು, ಕೂತ್ರೆ ಅಂಡ್ ನೋವು ಅಂತೀವಿ. ನಾವೆಲ್ಲಾ ಬಿಸಿ ರಕ್ತದ ಯುವಕರು, ನಮ್ದು ಒಂದು ಬಾಳು!
ಇಂಥ ಸಮಸ್ಯೆ ಅಲ್ಲದ ಸಮಸ್ಯೆಗಳಿಗೆ, ಖಾಲಿ ಪೀಲಿ ಚಿಂತೆಗಳಿಗೆ ನಾವು ದುರ್ಬಲರಾಗಿರೋದು ಏನಕ್ಕೆ ಅಂತ ಅಂದ್ರೆ ಅದಕ್ಕೆ ಸಾವಿರ ಕಾರಣಗಳು, ನಮ್ಮಲ್ಲಿನ ಅಧೈರ್ಯ, ಕಂಪ್ಲೈನ್ ಮಾಡುವ ಮನೋಭಾವ, ದಾರಿದ್ರ್ಯ ಇತ್ಯಾದಿ ಇತ್ಯಾದಿ. ಇವೆಲ್ಲವುಗಳಿಗಿಂತ ದೊಡ್ಡದು ಒಂದಿದೆ ಅದೇನೆಂದರೆ, 'ದೃಷ್ಟಿಕೋನದ ಕೊರತೆ', ಹೌದು! ಆಂಗ್ಲದಲ್ಲಿ 'ಲ್ಯಾಕ್ ಆಫ್ ಪರ್ಸ್ಪೆಕ್ಟಿವ್ಸ್' ಅಂತಾರೆ. ತುಂಬಾ ಸೂಕ್ಷ್ಮವಾಗಿ ಗಮನಿಸಿದರೆ ಗೋಚರಿಸಬಹುದು, ನಮಗೆ ದೃಷ್ಟಿಕೋನಗಳ ಕೊರತೆ ಇರುವುದರಿಂದಲೇ ಬಾವಿಯ ಕಪ್ಪೆಯಂತೆ ಒಂದೇ ಕೋನದಲ್ಲಿ ವಿಚಾರ ಮಾಡಿ ಬಾಯಿ ಬಡಿದುಕೊಳ್ಳುವುದು ನಾವು. ಜೀವನದಲ್ಲಿ ದೃಷ್ಟಿಕೋನ ಸಂಪಾದಿಸುವುದು ತುಂಬಾ ಮುಖ್ಯ, ದೃಷ್ಟಿಕೋನಗಳಿರುವವನಿಗೆ ವಿಷಯಗಳ ಬಗ್ಗೆ ಒಂದು ಪ್ರೌಢ ಮನೋಭಾವ ಇರುತ್ತದೆ, ಬಂದ ಸಮಸ್ಯೆಗಳನ್ನು ಕಾಣುವ ನೋಟ, ವಿಧಾನ ಗೊತ್ತಿರುತ್ತದೆ, ವಿಷಯದ ಬಗ್ಗೆ ತರ್ಕಿಸಿ, ಹೋಲಿಸಿ ನೋಡಿ ಅದರ ಬಗ್ಗೆ ಒಂದು ಸರಿಯಾದ ಐಡಿಯಾ ಪಡೆಯುವ ಕೌಶಲ್ಯ ಇರುತ್ತದೆ. ದಿನಾ ಇದೆ ಕಥೆ, ಇಷ್ಟೊಂದು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಸಾಯಬೇಕು ಅಂತ ನಮ್ಮಲ್ಲೇ ಅನ್ಕೊಂಡು ಕುಂತ್ರೆ ವಿಷಯ ದೊಡ್ಡದಾಗೇ ಕಾಣಿಸಿ ಮನಸು ಹಾತಾಶವಾಗುತ್ತೆ ಅಷ್ಟೇ. ಪ್ರಯಾಣಿಸೋ ಮುನ್ನ ಟ್ರಾಫಿಕ್ ಎಲ್ಲೆಲ್ಲಿ ಇದೆ, ಹೇಗೆ ರೂಟ್ ಬದಲಾಯಿಸಿ ನೋಡಬಹುದು, ಬೇರೆ ಪ್ರಯಾಣಿಕರೆಲ್ಲ ಹೇಗೆ ಪ್ಲಾನ್ ಮಾಡುತ್ತಿದ್ದಾರೆ, ಅಷ್ಟಕ್ಕೂ ಯಾಕೆ ಆ ರೂಟ್ ನಲ್ಲಿ ಇಷ್ಟು ಟ್ರಾಫಿಕ್ ಆಗ್ತಾ ಇರೋದು ಅಂತೆಲ್ಲ ನೋಡಿದರೆ ಸಮಸ್ಯೆಯ ಸುತ್ತ ಒಂದು ಕಲ್ಪನೆ ಬರುತ್ತದೆ. ಆಗ ಅದರ ಬಗ್ಗೆ ಕಂಪ್ಲೈನ್ ಮಾಡುವ ಬದಲು ಅದರಿಂದ ತಪ್ಪಿಸಿಕೊಳ್ಳಲು ಯೋಚಿಸಬಹದು. ಮೆಟ್ರೋ ಲೈನ್ ಕಟ್ಟುವ ಸಲುವಾಗಿ ಸಮಸ್ಯೆ ಆಗುತ್ತಿದ್ದರೆ, ಅದು ಸಧ್ಯಕ್ಕೆ ನಮಗೆ ಕಷ್ಟ ಆದ್ರೆ ಮುಂದೆ ಇದರಿಂದ ತುಂಬಾ ಸಹಾಯ ಆಗುತ್ತದೆ ಅಂತ ಒಂದು ಸಮಾಧಾನ ಸಿಗಬಹುದು. ತೀರಾ ಸಣ್ಣ ವಿಷಯದ ಉದಾಹರಣೆ ಇದು, ಇದರಂತೆ ಪ್ರತಿಯೊಂದು ಸಣ್ಣ, ದೊಡ್ಡ ಸಮಸ್ಯೆಗೂ ಸಾವಿರ ದೃಷ್ಟಿಕೋನಗಳು ಇರುತ್ತವೆ, ಸುತ್ತ ಮುತ್ತಲೂ ನೋಡಿ, ಓದಿ, ಬೇರೆ ಬೇರೆ ದಾರಿಗಳಿಂದ ವಿಚಾರಿಸಿ ದೃಷ್ಟಿಕೋನಗಳ ಗಮನಿಸಿದರೆ ಆ ಸಮಸ್ಯೆ ಬರೀ ಒಂದು ಸಮಸ್ಯೆ ಆಗಿರದೆ ಒಂದು ಅವಕಾಶವಾಗಿಯೂ ಕಾಣಿಸಬಹುದು. ಉದಾಹರಣೆಗೆ ಮೊನ್ನೆ ನನಗೆ ಹೋಂ ಲೋನ್ ಕೊಟ್ಟಿರೋ ಬ್ಯಾಂಕ್ ನವರು ಯಾವುದೋ ಒಂದು ಎಕ್ಸ್ಟ್ರಾ ಡಾಕ್ಯುಮೆಂಟ್ ಬೇಕು ಅಂತ ವಾರಗಟ್ಟಲೆ ಫೋನ್ ಮಾಡಿ ತಲೆ ತಿಂದಾಗ ನನಗೆ ರೇಗಿ ಹೋಗಿತ್ತು, ಸಾಲ ತಗೊಂಡು ಮೂರು ವರ್ಷ ಆಯಿತು, ಆಗಲೇ ಅಷ್ಟು ದುಡ್ಡು ತುಂಬಿದ್ದೀನಿ, ಸಾವಿರ ಕೆಲಸ ಇರ್ತವೆ ಮಾಡೋಕೆ, ನೀವು ಯಾವಾಗ ಬೇಕೋ ಆಗ ಫೋನ್ ಮಾಡಿ ಹೊಸ ಹೊಸ ಪೇಪರ್ ಕೇಳಿದ್ರೆ ಹೇಗೆ? ಅದನ್ನ ಪಡೆಯೋಕೆ, ನಿಮಗೆ ಕೊಡೋಕೆ ಎಷ್ಟೊಂದು ಸಮಯ, ಪ್ರಯತ್ನ ಬೇಕು ಅದೆಲ್ಲ ನೀವೇ ಮಾಡಿಕೊಂಡರೆ ಆಗಲ್ಲವೇ? ಅಂತೆಲ್ಲ ಬೈದೆ. ಸರ್ಕಾರದ ಆಜ್ಞೆ ಅನುಸಾರವಾಗಿ ಇದು ಬೇಕೇ ಬೇಕು ಅಂತ ಅವರು ಹೇಳಿದಾಗ ಸರಕಾರಕ್ಕೂ ಅರ್ಧ ಘಂಟೆ ಬೈದುಕೊಂಡೆ. ಕಡೆಗೆ ಇದರ ಬಗ್ಗೆ ಇಂಟರ್ನೆಟ್ ನಲ್ಲಿ ಓದಿ, ಸ್ನೇಹಿತರ ಜೊತೆ ಮಾತಾಡಿ, ಕಸ್ಟಮರ್ ಕೇರ್ ಅದು ಇದು ಅಂತ ಕೇಳಿ ನೋಡಿದಾಗ ತಿಳೀತು ನಾನು ತುಂಬುತ್ತಿದ್ದ ಬಡ್ಡಿ ದರ ತುಂಬಾ ಜಾಸ್ತಿ ಇತ್ತು, ಈಗ ಅದನ್ನು ಈ ಡಾಕ್ಯುಮೆಂಟ್ ಕೊಡುವಾಗ ರಿಕ್ವೆಸ್ಟ್ ಮಾಡಿಕೊಂಡು ಕಮ್ಮಿ ಮಾಡಿಸಿಕೊಳ್ಳಬಹುದು ಅಂತ. ಒಂದು ಶನಿವಾರ ಹೋಗಿ ಎಲ್ಲ ಕೆಲಸಗಳನ್ನ ಮುಗಿಸಿದೆ, ಅದರಿಂದ ಸುಮಾರು ಆರು ನೂರು ರೂಪಾಯಿ ಪ್ರತಿ ತಿಂಗಳು ಬಡ್ಡಿ ಕಡಿಮೆ ಆಯಿತು. ಮೂರು ವರ್ಷದಿಂದ ಆ ಲೋನ್ ಅಕೌಂಟ್ ಬಗ್ಗೆ ತಲೇನೆ ಕೆಡಿಸಿಕೊಳ್ಳದೆ ಬಡ್ಡಿ ತುಂಬಿಕೊಂಡು ಹೋಗ್ತಾ ಇದ್ದ ನನಗೆ ಈ ಒಂದು 'ಕಿರಿಕಿರಿ' ಯಿಂದಲೇ ಅದನ್ನು ರೀವಿಸಿಟ್ ಮಾಡಲು ಒಂದು ಅವಕಾಶ ಸಿಕ್ಕಿತು. ಅಕ್ಕ ಪಕ್ಕ ಮಾತಾಡಿ ನೋಡಿ, ವಿಷಯದ ಬಗ್ಗೆ ಓದಿ, ಕೆಲ ಬ್ಯಾಂಕರ್ ಸ್ನೇಹಿತರೊಡನೆ ಚರ್ಚಿಸಿದಾಗ ಇದನ್ನು ಲಾಭದಾಯಕವಾಗಿ ಹ್ಯಾಂಡಲ್ ಮಾಡುವ ದಾರಿ ತಿಳಿಯಿತು. ಬೇರೆ ಬೇರೆ ದೃಷ್ಟಿಕೋನಗಳಿಂದ ಹೇಗೆ ಪ್ರತಿಯೊಂದು ವಿಷಯವನ್ನು ಎಲ್ಲಾ ಮೂಲೆಗಳಿಂದ ಕಂಡು, ತಿಳಿದುಕೊಂಡು, ಪೂರಕವಾಗಿ ಪ್ರತಿಕ್ರಿಯಿಸಬಹುದು ಅನ್ನೋದು ಇಂತಹ ಸಣ್ಣ ಪುಟ್ಟ ಉದಾಹರಣೆಗಳಿಂದ ಹೇಳ ಹೊರಟೆ ಅಷ್ಟೇ.
ಆಯ್ತು ಕಣಪ್ಪ ದೃಷ್ಟಿ ಕಣ್ಣಪ್ಪ! ಈ 'ದೃಷ್ಟಿಕೋನ ಸಂಪಾದನೆ' ಅಂದ್ಯಲ್ಲ, ಅದನ್ನ ಹೇಗೆ ಮಾಡೋದು ಅಂತ ಹೇಳು ಅಂದ್ರಾ? ಸಿಂಪಲ್! ನಮ್ಮ ಸುತ್ತ ಮುತ್ತಲಿನ ಸಮಾಜದ ಬಗ್ಗೆ, ಆಗು ಹೋಗುಗಳ ಬಗ್ಗೆ, ಜನರ ಬಗ್ಗೆ, ವಿಷಯಗಳ ಬಗ್ಗೆ ಅರಿವು ಪಡೆಯುತ್ತ ಇರಬೇಕು. ಪುಸ್ತಕಗಳು, ಕಥೆ-ಕಾದಂಬರಿಗಳನ್ನ ಓದುವುದರಿಂದ ಒಂದು ಪ್ರೌಢಿಮೆ ಬರುವುದಂತೂ ಖಚಿತ. ಟಿ.ವಿ, ಸಿನಿಮಾ ಗಳನ್ನೂ ನೋಡಿಯೂ ಅದೆಷ್ಟೋ ಕಲಿಯಬಹುದು, ಹೇಗೆ ಎಲ್ಲವನ್ನು ಹಾಸ್ಯ ದಿಂದ ನೋಡಬಹುದು ಅಂತ ಹಾಸ್ಯ ಧಾರಾವಾಹಿಗಳಲ್ಲಿ (ಇಂಗ್ಲಿಷ್ ನಲ್ಲಿ ಸಿಟ್ಕಾಮ್ ಗಳು), ಹಾಸ್ಯ ಸಿನಿಮಾಗಳ ನೋಡಿ, ಹಾಸ್ಯ ಕಾರ್ಯಕ್ರಮಗಳನ್ನು ನೋಡಿ ತಿಳಿಯಬಹುದು. ಚಿಕ್ಕವರಿದ್ದಾಗ ಕಾಲು ಜಾರಿ ಬಿದ್ದರೆ ಅಳುತ್ತಿದ್ದ ನಾವು ಈಗ ಬಿದ್ದರೆ ನಗುತ್ತೇವೆ, ಅಂಥ ಸಣ್ಣ ವಿಷಯವನ್ನು ಪ್ರೌಢರಾಗಿ, ಹಾಸ್ಯವಾಗಿ ಕಂಡು ಅದನ್ನು ಹಗುರವಾಗಿ ನೋಡಿ ನಕ್ಕು ಬಿಡುತ್ತೇವೆ, ಹಾಗೆಯೇ ಇನ್ನು ಸಾಕಷ್ಟು ವಿಚಾರಗಳಲ್ಲಿ ನಮಗೆ ತಿಳಿಯದಲೇ ಬಹಳಷ್ಟು ದೃಷ್ಟಿಕೋನಗಳ ಸಂಪಾದಿಸಿ ನಿರ್ವಹಿಸುತ್ತಿರುತ್ತೇವೆ, ಅದನ್ನೇ ಸ್ವಲ್ಪ ಸೀರಿಯಸ್ ಆಗಿ ತಗೊಂಡು ಇವೆಲ್ಲವುಗಳ ಮೇಲೆ ಜಾಸ್ತಿ ಒತ್ತು ಕೊಟ್ಟು ಓದಿ, ನೋಡಿ, ಕಲಿತು ಬಾಳಿದರೆ ಪ್ರತಿ ದಿನವೂ ನಗಲು, ಯೋಜಿಸಲು, ಗೆಲ್ಲಲು ಒಂದು ಅವಕಾಶವೇ. ಭಾರತದಲ್ಲಿ ಸ್ಲಂ ಗಳಿವೆ, ಎಷ್ಟೋ ಜನಕ್ಕೆ ಮನೆ ಇಲ್ಲ, ಊಟ ಸಿಗಲ್ಲ ಅಂತ ಹೇಳುತ್ತಿದ್ದ ನನ್ನ ಹೊರದೇಶದ ಸ್ನೇಹಿತರಿಗೆ ಬರೀ ನಮ್ಮ ದೇಶದ ಸಂಸ್ಕೃತಿ, ಪದ್ಧತಿಗಳ ಬಗ್ಗೆ ಮರುತ್ತರ ನೀಡಿ, ಅವುಗಳ ಮುಂದೆ ಎಷ್ಟೇ ದೊಡ್ಡವಾದರೂ ಅಮೆರಿಕಾ, ಆಸ್ಟ್ರೇಲಿಯಾಗಳೇನು ಇಲ್ಲ ಅಂತ ಜಗಳವಾಡುತ್ತಿದ್ದೆ ನಾನು. ನಮ್ಮ ಸಮಸ್ಯೆಗಳನ್ನು ಸಮಸ್ಯೆಗಳೆಂದು ಅರ್ಥ ಮಾಡಿಕೊಂಡು, ಒಪ್ಪಿಕೊಂಡಾಗಲೇ ಅವುಗಳ ಬಗ್ಗೆ ಅರಿವು ಮೂಡಿದ್ದು, ನಾನು ಸ್ಟುಪಿಡ್ ನಿಂದ ಲರ್ನೆಡ್ ಆಗಿದ್ದು. ತಪ್ಪನ್ನು ತಪ್ಪು ಎಂದು ಒಪ್ಪಿಕೊಳ್ಳಲೂ ತುಂಬಾ ದೃಷ್ಟಿಕೋನ ಬೇಕು, ನಮ್ಮ ಮೂಗಿನ ನೇರಕ್ಕೆ ಯೋಚಿಸಿದಾಗಲೇ ಜಗಳ, ಹೊಡೆದಾಟಗಳು ಆಗೋದು. ನಮ್ಮ ದೇಶದಲ್ಲಿ ಹಿಂದುತ್ವ ನೇ ದೊಡ್ಡದು ಅದಕ್ಕಿಂತ ಬೇರೇನಿಲ್ಲ ಅನ್ನೋದು ಒಂದು ವಾದವಾದರೆ , ನಮ್ಮ ದೇಶ ಒಂದು ಪ್ರಜಾಪ್ರಭುತ್ವ ಅಂತ ಇನ್ನೊಂದು ಮಾತು, ಹಸು ದೇವರು ಅಂತ ಒಬ್ರು ಹೇಳಿದ್ರೆ, ಎಮ್ಮೆನೂ ದೇವರೇ ಸೃಷ್ಟಿಸಿದ್ದು ಸ್ವಾಮೀ ಅಂತ ಇನ್ನೊಬ್ರು ಅಂದ್ರಂತೆ, ರಾಮಾಯಣ ನ ರಾವಣನ ದೃಷ್ಟಿಕೋನದಲ್ಲಿ ಬರೆದ ಪುಸ್ತಕ ಓದಿ ದಿಗ್ಭ್ರಮೆ ಆಗತ್ತೆ, ನಂದಿ ಬೆಟ್ಟ ಏರೋವಾಗ ಕಿರಿಕಿರಿ ಎನಿಸಿ ತಲೆ ನೋವು ತರಿಸುವ ರಸ್ತೆ ತಿರುವುಗಳು, ಜನ ಜಂಗುಳಿ, ಬೆಟ್ಟದ ಮೇಲಿಂದ ನೋಡಿದರೆ ತುಂಬಾ ಸಣ್ಣದಾಗಿ ಕಾಣುತ್ತವೆ, ವಾರದ ಹಿಂದೆ ಕೆಲಸದಲ್ಲಿ ಆಸಕ್ತಿ ಬರ್ತಿಲ್ಲ ಅಂತ ಅಂತಿದ್ದ ನನಗೆ ಗ್ಲೋಬಲ್ ರಿಸೆಶನ್ ಬಗ್ಗೆ ತಿಳಿದಮೇಲೆ ಹಠಾತ್ ಆಸಕ್ತಿ ಹುಟ್ಟಿದೆ, ನಮ್ಮ ಮಗ ಮದುವೆ ಬಗ್ಗೆ ಆಸಕ್ತಿನೇ ತೋರಿಸ್ತಿಲ್ಲ ಅಂತ ಬೈದುಕೊಂಡಿದ್ದ ನಮ್ಮ ಅಪ್ಪ ಅಮ್ಮನಿಗೆ ಪಕ್ಕದ್ಮನೆ ಹುಡುಗ ಓಡಿ ಹೋಗಿ ಮದುವೆ ಆದಮೇಲಿಂದ ನನ್ನ ಮೇಲೆ ಜಾಸ್ತಿ ಪ್ರೀತಿ ಬಂದಿದೆ, ಬಲ ಹುಬ್ಬು ಬಡಿದುಕೊಳ್ಳಬಾರದು ಅನ್ನೋ ನಮ್ಮಜ್ಜಿಗೆ ಅದು ಏಕೆ ಬಡಿದುಕೊಳ್ಳುತ್ತದೆ ಅಂತ ವೈಜ್ಞಾನಿಕ ಕಾರಣ ತಿಳಿದ ಮೇಲೆ ಮೌಢ್ಯ ಕಮ್ಮಿ ಆಗಿದೆ, ಪಾನಿಪುರಿ ಹುಡುಗ ಕೂಡ ಕನ್ನಡ ಮಾತಾಡ್ಬೇಕು ಅಂತ ಒಬ್ಬ ಅಂದ್ರೆ, ಕನ್ನಡ ಒಂದು ಭಾಷೆ ಅಷ್ಟೇ ಅದಕ್ಕಿಂತ ದೊಡ್ಡದು ಜೀವನ ,ಮನುಷ್ಯತ್ವ ಅಂತ ಇನ್ನೊಬ್ಬ ಹೇಳ್ತಾನೆ, ಓಲಾ-ಉಬರ್ ಸಿಗ್ತಿಲ್ಲಾ ಅಂತ ಬೈಕೊಳೋ ನನಗೆ ಬಿ.ಎಂ.ಟಿ.ಸಿ ನಲ್ಲಿ ನೇತಾಡಿಕೊಂಡು ಹೋಗುವವವರ ನೋಡಿ ಒಂದು ರೇಂಜ್ ಗೆ ಜೀವನ ಅರ್ಥವಾಗಿದೆ, ಆ ಆಫೀಸ್ ಬೆಡಗಿ ಹುಡುಗಿ ನನ್ನ ನೋಡಲ್ಲ ಅಂತ ದೇವದಾಸ ಆಗಿದ್ದ ನನಗೆ ಅವಳ ಹಿಂದೆ ನನ್ನಂತೆ ಸಾವಿರ ಹುಡುಗರು ಓಡಾಡಿಕೊಂಡಿದ್ದನ್ನು ಗಮನಿಸಿದ ಮೇಲೆ ಅವಳ ಮೇಲೆ ಕನಿಕರ ಹುಟ್ಟಿದೆ, ಟ್ರಾಫಿಕ್ ಜಾಮ್ ಗಳ ಬಗ್ಗೆ ಬಾಯಿ ಬಡಿದುಕೊಳ್ಳುತ್ತಿದ್ದ ನನಗೆ ಮನೆ ತಲುಪಲು ಅದೆಷ್ಟೋ ಹೊಸ ಹೊಸ ಪರ್ಯಾಯ ಮಾರ್ಗಗಳು ಕಂಡಿವೆ, ಮೋದಿ, ಸಿದ್ದಣ್ಣರ ನೆನೆಸೋ ಮೊದಲು ನನಗೆ ನನ್ನ ಏರಿಯಾ ಕಾರ್ಪೊರೇಟರ್, ನನ್ನ ಊರಿನ ಉತ್ಸುವಾರಿ ಸಚಿವರು ನೆನಪಾಗಿ ಅವರನ್ನು ತಲುಪಲು ಪ್ರಕ್ರಿಯೆಗಳು ಕಾಣಿಸುತ್ತಿವೆ.. ಇವೆಲ್ಲವುಗಳೂ ದೃಷ್ಟಿಕೋನಗಳಿಂದಲೇ ಲಭಿಸುವುದು. ಕ್ಲೋಸ್ಡ್ ಮೈಂಡ್ ನಿಂದ ಏನು ನೋಡಿದರೂ ಅದು ಕಿರಿಕಿರಿಯೇ, ಬಾವಿಯಲ್ಲಿರೋ ಕಪ್ಪೆಗೆ ಏನು ಗೊತ್ತು ಟಿ.ವಿ ನೈನ್ ಕೊಳವೆ ಬಾವಿಯ ಬ್ರೇಕಿಂಗ್ ನ್ಯೂಸ್. ಕಣ್ಣು, ಕಿವಿ, ಮನಸ್ಸನ್ನು ತೆರೆದಿಟ್ಟುಕೊಂಡು ನೋಡಿದರೆ ಪ್ರತಿ ವಿಷಯವಯೂ ಒಂದು ಕಲಿಯೋ ಹಾಗೂ ಬೆಳೆಯೋ ಅವಕಾಶ. ನಮ್ಮ ಮೂಗಿನ ನೇರಕ್ಕಷ್ಟೇ ನೋಡದೆ, ಪರರ ಮೂಗಿನ ಸೊಟ್ಟತನಕ್ಕೂ ನೋಡಿ ತಿಳಿದುಕೊಳ್ಳೋಣ. ಎಲ್ಲರಿಗೂ ಒಳ್ಳೇದಾಗ್ಲಿ, ಅವೆಲ್ಲ ಮಾಡಿ, ಏನೋ ಒಂದು ಆಗ್ತದೆ.