Saturday, June 16, 2018

ಬೂಬೂ



 'ಬೂಬೂ...!!' ಎಂದು ಕೂಗುತ್ತ, ಛಾ ಕುಡಿಯಲು ಬಾ ಎಂದು ಸನ್ನೆ ಮಾಡಿ ಕರೆದಳು ಅಕ್ಕ, ಹಿತ್ತಲಿನಲ್ಲಿ ರಾಶಿ ಭಾಂಡಿಗಳ ನಡುವೆ ಬೆವರಾಗುತ್ತಿರುವವಳನ್ನ. 

ಅಡುಗೆ ಮನೆಯಿಂದ ಬಂದ ಛಾ ಲೋಟವೊಂದು ಪಡಸಾಲಿಯ ಟೀಪಾಯಿ ಮೇಲೆ ಬೆಚ್ಚಗೆ ಹೊಗೆ ಬಿಡುತ್ತ ಬೂಬೂಳನ್ನೇ ದಿಟ್ಟಿಸಿ ನೋಡಹತ್ತಿತು. ಅಕ್ಕನ ಅವಸರ ಬಲ್ಲ ಬೂಬೂ ತನ್ನ ಭಾಂಡಿಗಳನ್ನು ಬೇಗ ಮುಗಿಸಲು ಶುರುಮಾಡಿದಳು.

ತನ್ನ ಅಮ್ಮ ಅಡುಗೆ ಮನೆಯ ಕಪಾಟುಗಳ ಸರಂಜಾಮುಗಳನ್ನು ಕಿತ್ತು ಧೂಳು ಝಾಡಿಸುವ ಕೆಲಸದಲ್ಲಿ ಮಗ್ನಳಾಗಿದ್ದನ್ನು  ಕಂಡ ಪುಟ್ಟೂ ಅವಳ ಕಣ್ಣು ಮರೆಸಿ ಅಲ್ಲಿಂದ ಕಾಲು ಕಿತ್ತು ಹೊರ ಓಡಿಬಂದ. ಟೀಪಾಯಿಯ ಮೇಲಿಟ್ಟ ಛಾ ಕಪ್ಪಿನ ಮೇಲೆ ತೇಲುತ್ತಿದ್ದ ದುಂಡು ಕೆನೆಯ ಪದರನ್ನು ತನ್ನ ತೋರುಬೆರಳಿನಲ್ಲಿ ಅದ್ದಿ ಆಡಿದ. ಅಷ್ಟರಲ್ಲೇ ಪಡಸಾಲಿಗೆ ಬಂದ ಬೂಬೂ ಪುಟ್ಟೂವಿನ ಬೆರಳನ್ನು ತನ್ನ ಸೆರಗಿನಿಂದ ಒರೆಸಿ ಛಾ ಲೋಟವನ್ನು ಎತ್ತಿಕೊಂಡಳು. 'ಕೆನಿ ಬೂಬೂ!!, ಅಂದ್ರ ಛಾ ಆರೇತಿ' ಎಂದು ಒಂದೊಂದೇ ಪದ ಜೋಡಿಸಿ ಅಮ್ಮ ಹೇಳಿಕೊಟ್ಟದ್ದನ್ನು ಹೇಳಿದ ಪುಟ್ಟೂ. 'ಹೌದೂ??' ಎಂದು ಮುದ್ದಿನಿಂದ ಪುಟ್ಟೂ ನ ಗಲ್ಲ ಹಿಂಡಿ ಅಡುಗೆ ಮನೆಯತ್ತ ನಡೆದಳು ಬೂಬೂ.

'ಏನಂತಾನ್ ಅವಾ ಉಡಾಳ?' ಅಂತ ಅಕ್ಕ ಬೂಬೂಳನ್ನು ನೋಡಿ ಕೇಳಲು, 'ಏನಿಲ್ಲಕ್ಕಾ' ಅಂತ ನಕ್ಕಳು. ಛಾ ಆರಿದ್ದು ತಿಳಿದರೆ ಅಕ್ಕ ಮತ್ತೊಮ್ಮೆ ಬಿಸಿ ಮಾಡಿ ಕೊಡುವ ಗೋಜಿಗೆ ಹೋಗಬಾರದು. ಅಕ್ಕನ ಮನೆಯಲ್ಲಿ ಕೆಲಸ ಮಾಡುತ್ತಾ ಈಗ ಐದು ವರ್ಷಗಳು, ತನಗೆ ಮದುವೆಯಾಗಿ ಈ ಊರಿಗೆ ಬಂದು ಕೂಡ ಅಷ್ಟೇ ವರ್ಷ. ಗಂಗೀಮರಡಿಯ ಕೇರಿಯಲ್ಲಿ ಒಂದು ಪುಟ್ಟ ತಗಡಿನ ಮನೆಯಲ್ಲಿ ಅವಳ ಸಂಸಾರದ ಬಿಡಾರ. ಗಂಡನ ಹೆಸರು ಮಲಿಕಸಾಬ. ಮಲ್ಕಪ್ಪಣ್ಣ ಎಂದೇ ಜನರಲ್ಲಿ  ಬೆರೆತ ಮಲಿಕಸಾಬ ಬೂಬೂಗಿಂತ ಹದಿನೈದು ವರ್ಷ ದೊಡ್ಡವನು. ಊರಲ್ಲಿ ಸಣ್ಣ ಪುಟ್ಟ ಬಡಿಗಿ ಕೆಲಸವನ್ನು ಮಾಡಿಕೊಂಡಿದ್ದ ಮಲ್ಕಪ್ಪಣ್ಣ ಬೂಬೂಳ 'ಅಕ್ಕ'ನ ಮನೆಯ ಕಪಾಟು, ಕಿಟಕಿಗಳಿಗೂ ಪರಿಚಯ. ರಾಮಗುಡಿಯ ತೇರು ರಿಪೇರಿ ಕೆಲಸ ತುಸು ಕೈ ಹಿಡಿಯುತ್ತಿದ್ದುದರಿಂದ ಈಗೀಗ ಮಲ್ಕಪ್ಪಣ್ಣ ಮನೆಗೆ ಬರಲು ಆರರ ಸಂಜೆಯಾಗುತ್ತದೆ. ಸಂಜೆ ತನ್ನ ಯಜಮಾನ ಮನೆಗೆ ಬರುವ ಮುನ್ನ ಅಂಗಳದ ಕಸ ಗೂಡಿಸಿ, ನೀರು ಚಿಮುಕಿಸಿ, ಕಿಟಕಿಯಡಿಗೆ ಬಂದು ಕುಳಿತರೆ ತನಗೆ ಗಂಗೀಮರಡಿಯ ಮಸೀದಿಯ ಅಜಾನ್ ಕೇಳಿಸುತ್ತದೆ. ಕುಳಿತಲ್ಲಿಂದಲೇ ಕಿಟಕಿಯ ಕಂಬಿಗಳನ್ನು ಸವರಿ ಕೈ ಮುಗಿದು, ಮನೆಯ ಟ್ಯೂಬ್ ಲೈಟ್ ಹಚ್ಚುತ್ತಾಳೆ.

ಮಲಿಕಾಸಾಬನನ್ನು ಬಿಟ್ಟರೆ ಆ ಊರಿನಲ್ಲಿ ಬೂಬೂಳಿಗೆ ಯಾವ ಸಂಬಂಧಿಕರೂ ಇರಲಿಲ್ಲ. ಇಷ್ಟು ದೂರದ ಊರಿಗೆ ತನ್ನ ಮದುವೆ ಗೊತ್ತು ಮಾಡಿದ ತನ್ನ ಚಾಚಾನ ನೆನೆದು ಆಗಾಗ ಅಳು ಬರುತ್ತದೆ. ರೈಲಿನಲ್ಲಿ ತನ್ನೂರಿಗೆ ಹೋಗಲು ಎರಡು ರಾತ್ರಿ ಬೇಕು. ಕೊನೆ ಬಾರಿ ಊರಿಗೆ ಹೋದಾಗ ಚಾಚಾ ಮಂಚಕ್ಕೇ ಅಂಟಿಕೊಂಡಂತಿದ್ದ, ಈಗ ಹೇಗಿದ್ದಾನೋ. ಮುಂದಿನ ತಿಂಗಳು ಹೇಗಾದರೂ ಮಾಡಿ ಹೋಗಿ ಚಾಚಾನನ್ನು ನೋಡಿಕೊಂಡು ಬರೋಣ ಎಂದು ಗಂಡನನ್ನ ಬೇಡಿ ಒಪ್ಪಿಸಿದ್ದಳು. ಊರಿಗೆ ಹೋಗುವುದ ನಿಶ್ಚಯಿಸಿದ ದಿನದಿಂದ ಸರಿಯಾಗಿ ಮೂವತ್ತು ದಿನಗಳನ್ನು ಎಣಿಸಿ ಗೋಡೆಯ ಕ್ಯಾಲೆಂಡರ್ ಮೇಲೆ ತನ್ನ ಕಾಜಲ್ ನಿಂದ ಒಂದು ಸಣ್ಣ ಚುಕ್ಕಿಯನ್ನು ಇಟ್ಟಿದ್ದಾಳೆ. ನೆನಪಾದಾಗ ಒಮ್ಮೆ ಪುಟ ತಿರುಗಿಸಿ, ಪುಟದ ಹಿಂದೆ ಅಡಗಿ ಕುಳಿತ ಆ ಚುಕ್ಕಿಯನ್ನು ನೋಡಿ ಸಮಾಧಾನವಾಗುತ್ತಾಳೆ. 'ನೀ ನಿನ್ನ ಚುಕ್ಕಿ ಮುಟ್ಟುದು ಇರ್ಲಿ, ಚಾಚಾ ಅದನ್ನ ಮುಟ್ಟತಾನೇನ ನೋಡೋಣು ತಡಿ ಇನ್ನ ' ಎಂದು ಗೇಲಿ ಮಾಡಿದ ಮಾಲಿಕಸಾಬನ ಮೇಲೆ ಕೋಪಿಸಿಕೊಂಡವಳು, ಅವನ ಬಾಯಿಂದಲೇ ತೋಬಾ ತೋಬಾ ಅನಿಸಿದ್ದಳು. ಈ ಚಾಚಾ ಚುಕ್ಕಿಯ ಸಂಭ್ರಮವನ್ನು ತನ್ನ ಅಕ್ಕನ ಜೊತೆಗೂ ಹಂಚಿಕೊಂಡು ಖುಷಿಪಟ್ಟಿದ್ದಳು. ಗಂಡನ ಬಿಟ್ಟರೆ ಅಕ್ಕನೇ ಬೂಬೂಳಿಗೆ ಆಸರೆ, "ಸಂಜೀಮುಂದ ಲೇಟ್ ಆಗಿ ಹೋಗೂ ಧವತಿ ಏನೈತಿ ನಿಂಗ, ದಾರಿ ಕಟ್ಟಿಗೆ ಆ ಉಡಾಳ್ ಹುಡಗೋರು ಕುಂತಿರ್ತಾವ ಆ ಹೊತ್ತಿನ್ಯಾಗ ಮೊದಲ" ಎಂದು ಅಕ್ಕ ಅವಳನ್ನು ಜಬರಿಸಿ ಬೇಗ ಮನೆಗೆ ಅಟ್ಟಿದ್ದು, ಪುಂಡರ ಗುಂಪನ್ನು ನೋಡಿದಾಗ ನೆನಪಾಗಿ ಮುಗುಳುನಗುತ್ತಾಳೆ. ಕಟ್ಟೆಯ ಹುಡುಗರು ಮರಳಿ ನಕ್ಕು ತುಸು ದೂರ ಹಿಂಬಾಲಿಸಿದರೆ ಹೆದರಿ ವೇಗ ಪಡೆಯುತ್ತಾಳೆ. ತನಗೆ ತಿಳಿಯದೇ ಇದ್ದ ಎಷ್ಟೋ ವಿಷಯಗಳನ್ನ ತನ್ನಕ್ಕನಿಂದ ತಿಳಿದುಕೊಂಡಿದ್ದಾಳೆ, ತಿಂಗಳಿಗೆ ಐದು ದಿನ ತಾನು 'ಹೊರಗಾದಾಗ' ತನ್ನನ್ನು ರಾತ್ರಿ ಮುಟ್ಟಕೂಡದು ಎಂದು ತನ್ನ ಯಜಮಾನನಿಗೆ ತಾನೇ ತಿಳಿ ಹೇಳಿದ್ದಾಳೆ. ಇಷ್ಟೆಲ್ಲಾ ಗಟ್ಟಿತನ, ತಿಳುವಳಿಕೆ ಅವಳಿಗೆ ದೊಡ್ಡಮನೆ ಅಮ್ಮನವರಿಂದಲೇ ಬಂದಿರುವುದು ಎಂದು ಗೊತ್ತಿದ್ದೂ ಮಲ್ಕಪ್ಪಣ್ಣ "ಅರೆ! ಭಾಳಾ ಶಾಣೆ ಆಗಿ ನೋಡ್ ನೀ ಈಗೀಗ" ಅಂತ ಕಾಡಿಸಿ ನಗುತ್ತಾನೆ. 

ಆವತ್ತು ಮಧ್ಯಾಹ್ನ ಗಂಗೀಮರಡಿಯಲ್ಲಿ ಎಂದಿನಂತೆ ತುಸು ಪೋಲೀಸು ವ್ಯಾನುಗಳು ಸಾಲುಗಟ್ಟಿ ನಿಂತಿದ್ದವು. ಊರಿನಾಚೆ ಇರುವ ಈ ಕೇರಿಯಲಿ ಈ ದೃಶ್ಯ ಹೊಸದೇನಲ್ಲ, "ರಾಮನವಮಿ ಬಂದಿದ್ಕ ಪೊಲೀಸ್ ಬಂದೂಬಸ್ತ್ ಜಾಸ್ತಿ ಆಗೇತಿ" ಎಂದು ನಿನ್ನೆ ರಾತ್ರಿ ಗಂಡ ಹೇಳಿದ ಮಾತು ನೆನಪಾಗಿ ಆ ವ್ಯಾನುಗಳಿಂದ ತುಸು ದೂರದಿಂದಲೇ ಹಾದು ಅಕ್ಕನ ಮನೆಗೆ ಹೆಜ್ಜೆ ಹಾಕಿದಳು. ವಾರೆಗಣ್ಣಿಂದಲೇ ವ್ಯಾನುಗಳನ್ನು ಎಣಿಸುತ್ತ ಬೇಗ ಅಕ್ಕನ ಮುಂದೆ ಇದೆಲ್ಲ ಕಥೆ ಮಾಡಿ ಹೇಳಬೇಕು, "ಇವತ್ತ  ಎಣಿಸಿ ಹನ್ನೆರಡು ಪೊಲೀಸ್ ಗಾಡಿ ಬಂದಾವ್ ಅಕ್ಕಾ!". "ಏನ್ ಬಿಡಾ ಬೂಬೂ, ಸುಮ್ಮ ಕಡ್ಡೀನ ಗುಡ್ಡಾ ಮಾಡ್ತಾವ್ ಮಂದಿ. ಪಾಪ್ ಪೊಲೀಸರು ಹೆಂಡತಿ ಮಕ್ಕಳ್ನ ಬಿಟ್ಟು ಈ ಪುಢಾರಿಗಳ ಮುಕಳಿ ಕಾಯ್ಬೇಕು" ಎಂದು ಏನೋ ಒಂದನ್ನ ಹೇಳಿ ನಕ್ಕು ಬಿಡುತ್ತಾಳೆ ಅಕ್ಕ. ತನ್ನ ಮನದಲ್ಲಿದ್ದ ಎಷ್ಟೋ 'ಗುಡ್ಡ' ಗಳನ್ನ ಹೀಗೇ ಒಂದೇ ಕ್ಷಣದಲ್ಲಿ ಅಕ್ಕ 'ಕಡ್ಡಿ' ಮಾಡಿಬಿಡುತ್ತಾಳೆ.

ಗೇಟು ತೆಗೆದು ಒಳ ಬಂದ ಬೂಬೂಳನ್ನು ನೋಡಿ ಅಕ್ಕ ಅಡುಗೆ ಮನೆಯ ಕಿಟಕಿಯಿಂದಲೇ ಬಾ ಎಂದಳು. ಸೆಕ್ಯೂರಿಟಿ ಗಾರ್ಡ್ ಖಾನ್ ಭಯ್ಯಾ "ಬಾರವಾ ಸೌಕಾರ್ತಿ!" ಅಂತ ಚಾಷ್ಟಿ ಮಾಡಿ ನಕ್ಕು ಬರಮಾಡಿಕೊಂಡ. ಒಳಗೆ ಬಂದವಳೇ ತನ್ನ ಬುರ್ಖಾ ತೆಗೆದು ಚೀಲದಲ್ಲಿಟ್ಟು ಹಿತ್ತಲಿನ ಕಡೆ ನಡೆದಳು. ಹಿತ್ತಲಿನಲ್ಲಿದ್ದ ಪುಟ್ಟೂ ಅವಳನ್ನು ನೋಡಿ ಅವರಮ್ಮನ ಕಡೆಗೆ ಓಡಿದ. ಬೂಬೂ ನೀರಲ್ಲಿ ಅದ್ದಿದ ಬಟ್ಟೆಗಳನ್ನು ಒಂದೊಂದಾಗಿ ತೆಗೆಯುವಾಗ ಪಡಸಾಲಿಯ ಬಾಗಿಲಿನಿಂದ ಪುಟ್ಟೂ ಕಯ್ಯಲ್ಲಿ ಛಾ ಕಪ್ ಹಿಡಿದುಕೊಂಡು ಹಗುರವಾಗಿ, ಒಂದೊಂದೇ ಹೆಜ್ಜೆ ಹಾಕುತ್ತ, ಛಾ ಕೆಳ ಬೀಳಿಸದೆ ಅವಳತ್ತ ಬರುವುದನ್ನು ನೋಡಿ ಬಟ್ಟೆ ಬಿಟ್ಟು ಅವನತ್ತ ಓಡಿದಳು. "ಬೂಬು, ಛಾ!" ಎಂದು ಅರ್ಧಮರ್ಧ ಹೇಳಿದ ಪುಟ್ಟುವಿನ ಕೆನ್ನೆಗೆ ಮುತ್ತಿಡುತ್ತ "ಛಾ!!" ಎಂದು ಅವನ  ಧಾಟಿಯಲ್ಲೇ ಹೇಳಿ ನಕ್ಕಳು. "ಅಕ್ಕಾ, ಇವಾ ಜಳಕಾ ಮಾಡ್ಯಾನ್ರೀ?" ಅಂತ ಅಲ್ಲಿಂದಲೇ ಕೂಗಿ ಅಕ್ಕನನ್ನು ಕೇಳಿದಳು. "ಆಗ್ಲಿಂದ ಕರ್ಯಾಕತ್ತೀನಿ ಬರೇ ಓಡ್ತಾನಾ.. ಅವರಪ್ಪಾ ದಿನಾ ಗಿಡಕ್ಕ ನೀರು ಹಾಕ್ಬೇಕು ಅಂತ ಹೇಳ್ಯಾನಂತ ಇವ ಸುಬ್ಬ ಅದನ ಮಾಡಾಕ್ ಹೋಗಿ ಇಷ್ಟು ರಾಡಿ ಯಬಸ್ಯಾನ ನೋಡು" ಅಂತ ಪುಟ್ಟೂನ ಶರ್ಟ್ ಝಾಡಿಸುತ್ತ ಅವನ ಚಡ್ಡಿ ಕಳಚಿದಳು. "ಅಯ್ಯೋ.. ಪಪ್ಪಿ ಶೇಮ್" ಅಂತ ಲೇವಡಿ ಮಾಡಿದ ಬೂಬೂಳಿಗೆ "ಹ್ಹೀ..!!"' ಎಂದು ಹಲ್ಲು ಗಿಂಜುತ್ತ ಅಲ್ಲಿಂದ ಬಚ್ಚಲು ಮನೆಗೆ ಓಡಿದನು ಪುಟ್ಟೂ.  ಅವನ ಹಿಂದೆಯೇ ಓಡಿ  ಬಂದ ಅಕ್ಕ ಬಚ್ಚಲು ಮನೆಯಲ್ಲಿ ಬಿಸಿ ನೀರಿಗೆ ತಣ್ಣೀರು ಬೆರೆಸಿ, ಪುಟ್ಟೂವಿನ ಗುಣಗಡಿಗೆ ತೆಗೆದು ಶೆಲ್ಫ್ ಮೇಲೆ ಇಡುತ್ತಾಳೆ. ಪುಟ್ಟು ಆಟವಾಡುತ್ತ ಬಕೆಟ್ ನೀರ ಮೇಲೆ ತನ್ನ ಸಣ್ಣ ಕಾರನ್ನು ಓಡಿಸುತ್ತಾನೆ. ಸ್ವಲ್ಪ ಹೊತ್ತಿನ ನಂತರ ಭಾಂಡೀ ಸದ್ದಾಗಿ ಅಕ್ಕ ಕಿಟಕಿಯಾಚೆ ನೋಡಿದರೆ ಬೂಬು ಗೇಟಿನಿಂದ ಹೊರಕ್ಕೆ ಓಡುತ್ತಿದ್ದಾಳೆ. ಹೆದರಿಕೆಯಾಗಿ ಹೊರ ಬಂದು ನೋಡಿದರೆ ಬೂಬು ಹಾಗು ಮತ್ತೊಬ್ಬ ಪುಟ್ಟ ಹುಡುಗ ಅವರ ಮನೆಯತ್ತ  ಓಡುತ್ತಿದ್ದಾರೆ. ಏನು ತೋಚದಾಗಿ ಅಕ್ಕ ಪುಟ್ಟುವಿನತ್ತ ಓಡಿ ಬಂದು ಅವನನ್ನು ಬಚ್ಚಲಿನಿಂದ ಹೊರನಡೆಸಿ ಟವೆಲ್ ಸುತ್ತಿ ಮತ್ತೆ ತಿರುಗಿ ಬಂದು ಬಾಗಿಲಿನತ್ತ ನಿಂತು ನೋಡುತ್ತಾಳೆ. ಅಷ್ಟರಲ್ಲಿ ಒಂದೆರೆಡು ಪೋಲೀಸು ವ್ಯಾನುಗಳು ಗಂಗೀರಾಮರಡಿಯಿಂದ ಸದ್ದು ಮಾಡುತ್ತಾ ಊರೊಳೊಗೆ ಹೋಗುತ್ತವೆ. ಏನೋ ತೋಚಿದಂತಾಗಿ ಅಕ್ಕ ಹೊರ ಓಡಿ ಮನೆಯ ಮೇನ್ ಗೇಟು ಹಾಕು ಎಂದು ಖಾನ್ ಅಣ್ಣನಿಗೆ ಹೇಳಿ ಬಂದು ಎಲ್ಲ ಕಿಟಕಿಗಳನ್ನು ಹಾಕಿ ಪುಟ್ಟುವಿನ ಹಿಡಿದು ಕುಳಿತು ತನ್ನ ಮನೆಯವರಿಗೆ ಅವಸರದಿ ಫೋನು ಮಾಡುತ್ತಾಳೆ.   
         
ಗಂಗೀಮರಡಿಯಲ್ಲಿ ಮತ್ತೆ ಹಿಂದೂ-ಮುಸ್ಲಿಂ ದಂಗೆಗಳಾಗಿವೆ, ಇಬ್ಬರು ಮುಸ್ಲಿಮರನ್ನು ರಾಮ ಗುಡಿಯ ಬಳಿ ಕೊಲ್ಲಲಾಗಿದೆಯಂತೆ, ಅವರಿಬ್ಬರೂ ಮಂದಿರದ ಕೆಲಸ ಮಾಡುತ್ತಿದ್ದವರೇ ಅಂತೆ, ಸಂಜೆ ಒಳಗೆ ಕರ್ಫ್ಯು ಘೋಷಣೆ ಆಗುತ್ತದೆಯಂತೆ, ಮನೆಯತ್ತ  ಓಡುತ್ತಿದ್ದ ಬೂಬುವಿಗೆ ಹೀಗೆ ಏನೇನೋ ಕಿವಿಗೆ ಬೀಳುತ್ತಿದ್ದಂತೆಯೇ ಅವಳ ಆತಂಕ ಮುಗಿಲು ಮುಟ್ಟುತ್ತಿದೆ. ಇವತ್ತು ಕಟ್ಟೆಯ ಮೇಲೆ ಪುಢಾರಿಗಳಿಲ್ಲ, ಆಗಲೇ ತನಗೆ ಕಂಡ ಹನ್ನೆರೆಡು ಪೊಲೀಸ್ ವ್ಯಾನುಗಳು ಆ ಜಾಗದಲಿಲ್ಲ, ಮನೆ ಹತ್ತಿರವೇನೋ ದೊಡ್ಡ ಬೆಂಕಿಯ ಹೊಗೆಯೊಂದು ಕಾಣಿಸಿದಂತಿದೆ, ಜನರ ಕೂಗುಗಳು ಕೇಳಿಬರುತ್ತಿವೆ. ಮತ್ತೊಂದು ವ್ಯಾನು ಜನರನ್ನ ತುಂಬಿಕೊಂಡು ಊರೆಡೆಗೆ ಹೋಯಿತು ಸದ್ದು ಮಾಡುತ್ತಾ ಹೋಯಿತು. ಮಸೀದಿಯ ಬಾಗಿಲು ಹಾಕಿದೆ. ಮಲಿಕಸಾಬ!! ಅಯ್ಯಯ್ಯೋ! ಮಲಿಕಸಾಬ ಒಂದು ವಾರದಿಂದ ರಾಮ ಗುಡಿಯ ಬಡಿಗಿ ಕೆಲಸವನ್ನೇ ಮಾಡುತ್ತಿದ್ದಿದ್ದು, ಈ ಜಗಳದಲ್ಲಿ ಅವನೆಲ್ಲಿದ್ದಾನೋ! ಒಂದೇ ಕ್ಷಣದಲ್ಲಿ ಸಾವಿರ ಯೋಚನೆಗಳು ಬಂದು ಆ ಸುಡು ಬಿಸಿಲಿನಲ್ಲಿ ಅವಳ ತಲೆ ಸುಟ್ಟಂತಿದೆ. ಜೋರಾಗಿ ನಡೆಯುತ್ತಿದ್ದ ಅವಳು ಈಗ ಹುಚ್ಚಿಯಂತೆ ಮನೆಯತ್ತ ಓಡ ಹತ್ತಿದ್ದಾಳೆ. 

ತನ್ನ ಮನೆಯ ಹಿಂದಿನ ಸಣ್ಣ ಬೀದಿಯಲ್ಲಿ ಅಲ್ಲಲ್ಲಿ ಟೈರು, ಕಟ್ಟಿಗೆಗಳಿಗೆ ಬೆಂಕಿ ಹಾಕಲಾಗಿದೆ. ಓಡುತ್ತ ಮನೆಯತ್ತ ಹೋಗಿ ನೋಡಿದರೆ ಮನೆಗೆ ಕೀಲಿ ಹಾಕಿದ್ದೇ ಇದೆ. ಪಕ್ಕದ ಮನೆಯ ಬಾಗಿಲು ಬಡಿಯುತ್ತಾಳೆ. ಬಾಗಿಲು ತೆಗೆದಿದ್ದೇ ಫಾತಿಮಾ ಅಕ್ಕ ಅಳುತ್ತ ಬೂಬುಳನ್ನು ತಬ್ಬಿಕೊಳ್ಳುತ್ತಾಳೆ. ಮೊದಲೇ ಹೆದರಿಕೆಯಲ್ಲಿದ್ದ ಬೂಬು ಇದೆಲ್ಲ ಕಂಡು ಇನ್ನೂ ಕಂಗಾಲಾಗುತ್ತಾಳೆ. ರಾಮ ನವಮಿಯ ತಯಾರಿ ಮಾಡುವಲ್ಲಿ ಕೆಲ ಕಿಡಗೇಡಿಗಳು ಕಲ್ಲು ಎಸೆದರಂತೆ, ನಮ್ಮವರು-ಅವರು ಸೇರಿ ಹೊಡೆದಾಡಿದರೆಂತೆ. ಪೊಲೀಸರು ಅಲ್ಲಿ ಬಂದು ಲಾಠಿ ಚಾರ್ಜ್ ಮಾಡಿ ಅದೆಲ್ಲ ಸಂಭಾಳಿಸುವಷ್ಟರಲ್ಲೇ ಇತ್ತ ಮಸೀದಿಯ ಹತ್ತಿರ ಕೆಲವರನ್ನು ಎಳೆದು ತಂದು ಕೂಡಿ ಹಾಕಿದ್ದಾರಂತೆ. ಹೀಗೆ ಎಲ್ಲ ಅಂತೇ ಕಂತೆಗಳ ಹೇಳಿ ಇನ್ನು ಜೋರಾಗಿ ಅಳುತ್ತಾ ತನ್ನ ಮಕ್ಕಳನ್ನು ತಬ್ಬಿದಳು ಫಾತಿಮಕ್ಕ. "ನಮ್ಮ್ ಹಿರಿಯಾಗ ಹೋಗಬ್ಯಾಡ ಅಂತ ಬಡಕೊಂಡ್ಯಾ, ಇಲ್ಲೇ ಮಸೀದಿ ಕಡೆ ಹೋಗಿ ಬರ್ತೀನಿ ಅಂತ ಉಟ್ಟ ಅರಬ್ಯಾಗ ಓಡಿ ಹೋದ. ಈಗ ನೋಡಿದ್ರ ಮರ್ಡರ್, ಪರ್ಡೆರ್ ಅಂತ ಸುದ್ದಿ ಬರಕತ್ತಾವ" ಅಂತ ಒಂದೇ ಉಸಿರಲ್ಲಿ ಹೇಳಿ ಮತ್ತೆ ಅಳತೊಡಗಿದಳು. ಇದೆಲ್ಲ ಕೇಳಿ ಗುಡಿಯ ಕೆಲಸಲ್ಲಿದ್ದ ಮಲಿಕಸಾಬನ ನೆನಪಾಗಿ ದುಃಖ ಇಮ್ಮಡಿಯಾಗಿ ಧಸಗ್ಗೆಂದು ನೆಲಕ್ಕೆ ಕುಸಿದು ಬಿಟ್ಟಳು ಬೂಬು.   

ಒಂದೆರಡು ಘಂಟೆಗಳ ನಂತರ ಫಾತಿಮಕ್ಕನ ಗಂಡ ಹಾಗೂ ಮಲಿಕಸಾಬ ಸೇರಿದಂತೆ ಹತ್ತು ಹದಿನೈದು ಜನರು ಗಾಡಿಗಳನ್ನು ಇಳಿದು ಧಡಧಡನೆ ಓಡಿ ಬಂದು ಇಫ್ತಾರ್ ಮಾಸ್ಟರ್ ರ ಮನೆ ಹೊಕ್ಕುತ್ತಾರೆ. ಮಲಿಕಾಸಾಬನಿಗೆ ಕಾಲಿಗೆ ಚೂರು ಗಾಯವಾಗಿದೆ, ಓಡಾಟದಲ್ಲಿ ತನ್ನದೇ ಉಳಿ ತನಗೆ ತಾಕಿ ಹೀಗಾಯಿತು ಎಂದು ಅವನು ಹೇಳಿದ ಮೇಲೆ ಬೂಬುಳಿಗೆ ತುಸು ಸಮಾಧಾನ. ಅಲ್ಲಿ ನೆರೆದ ಜನರೆಲ್ಲಾ ಮಸೀದಿಯ ಮೌಲವಿ, ಕೇರಿಯ ಮುಸ್ಲಿಂ ನಾಯಕರು ಮತ್ತು ಕೆಲವರು ಕಟ್ಟೆಯ ಮೇಲೆ ಕೂರುವ ಅದೇ ಪುಂಡ ಪುಢಾರಿಗಳು ಎಂದು ಒಂದೇ ನೋಟದಲ್ಲಿ ಬೂಬುಳಿಗೆತಿಳಿಯಿತು. ಮಂದಿರದ ಹತ್ತಿರ ಮಲ್ಕಪ್ಪಣ್ಣನ ಜೊತೆ ಕೆಲಸ ಮಾಡುತ್ತಿದ್ದ ನಾಲ್ಕು ಹುಡುಗರ ಪೈಕಿ ಇಬ್ಬರಿಗೆ ಗಾಯವಾಗಿದೆ ಹಾಗೂ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ನಡೆದ ಕಲ್ಲು ತೂರಾಟ ಹಾಗು ಹೊಡೆದಾಟಗಳಲ್ಲಿ ನಮ್ಮವರಿಗೇ ಜಾಸ್ತಿ ಗಾಯಗಳಾಗಿವೆ. ಹಿಂದೂಗಳ ಪೈಕಿ ಒಬ್ಬ ಹುಡುಗನೂ ಸಹ ಅದೇ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾನೆ. ಪೋಲೀಸರ ಕಾವಲು ಇದ್ದಿದ್ದಕ್ಕೆ ನಮಗೆ ಒಳ ಹೋಗಲಾಗಿಲ್ಲ, ಇಲ್ಲ ಅಂತಂದ್ರೆ ಇನ್ನೂ ಇತ್ತು ಕಥೆ ಬೇರೆ ಅಂತ ಒಬ್ಬ ಪುಢಾರಿ ಚೀರಿ ಹೇಳಿದ. ಇಫ್ತಾರ್ ಮಾಸ್ತರ ಅವನಿಗೆ ಈ ಆಕ್ರೋಶವನ್ನು ಬೇಕಾದಲ್ಲಿ ಉಪಯೋಗಿಸು, ಇಲ್ಲಿ ಮಾಡಿದರೇನು ಪ್ರಯೋಜನ ಅಂತ ಬೈದು ಕೂರಿಸಿ ನೀರು ಕುಡಿಸಿದರು. ಅಷ್ಟರಲ್ಲಿ ಇನ್ನೊಬ್ಬ ನಾಯಕ ಮಾಲಿಕಸಾಬನನ್ನು ಹಿಡಿದು ನಮ್ಮ ಭಾಯಿ ಮಲಿಕ್ಸಾಬ್ ಯಾರಿಗೂ ತ್ರಾಸು ಮಾಡಿದವನಲ್ಲ ಅಂಥವನ ಮೇಲೆ ಹಲ್ಲೆ ಮಾಡಿದ್ದಾರೆ ರಾಂಡ್ ಕೆ ಬಚ್ಚೆ ಅಂತ ಎದ್ದು ನಿಂತ. ಇದರಿಂದ ತುಸು ಹೆದರಿದ ಬೂಬು ಮಲಿಕಸಾಬ ನ ಕಯ್ಯನ್ನು ಚೂರು ಗಟ್ಟಿಯಾಗಿ ಹಿಡಿದು ಕುಳಿತಳು. ತುಸು ಹೊತ್ತಿನ ನಂತರ ಮೌಲವಿ ಸಾಬರು ಎಲ್ಲರನ್ನೂ ಉದ್ದೇಶಿಸಿ 'ಇವತ್ತು ಆಗಿದ್ದೇ ಸಾಕು, ಇನ್ನು ಮೇಲೆ ಗುಡಿಯ ಹತ್ತಿರ ನಮ್ಮವರು ಹೋಗುವಂತಿಲ್ಲ, ಅವರ ಜನರ ಜೊತೆ ಜಾಸ್ತಿ ಬೆರೆಯುವಂತಿಲ್ಲ. ಇವತ್ತು, ನಾಳೆ ಯಾರೂ ಮನೆ ಹೊರಗೆ ಬರೋ ಹಂಗಿಲ್ಲ. ಎರಡು ದಿನ ಆದಮೇಲೆ ಎಲ್ಲ ತಾನೇ ಸರಿ ಆಗುತ್ತದೆ' ಅಂತ ಹೇಳಿ ಕುಳಿತರು. ಇಷ್ಟೊತ್ತು ದೆವ್ವ ಬಂದಂತೆ ಕಿರುಚಾಡುತ್ತಿದ್ದ ಹುಡುಗರು ಹಾಗೂ ನಾಯಕರು ಈಗ ಸುಮ್ಮನಾಗಿ ಮಾಸ್ತರ್ ರ ಮನೆಯ ತಿಂಡಿ, ಛಾ, ಬಿಸ್ಕೀಟು ಸೇವಿಸುತ್ತ ನಗಾಡಿಕೊಂಡು ಇದ್ದದ್ದನ್ನು ನೋಡಿದ ಬೂಬು ಗೆ ತುಸು ಆಶ್ಚರ್ಯವಾದರೂ ಸಹ ಸಧ್ಯ ಸಮಾಧಾನ ಆದರಲ್ಲ ಜನ ಅಂತ ನಿರಮ್ಮಳವಾಯಿತು. ಎದ್ದು ಹೋಗಿ ಮಾಸ್ತರ್ ಹೆಂಗಸರಿಗೆ ಸಹಾಯ ಮಾಡು ಎಂದು ಸನ್ನೆ ಮಾಡಿ ಹೇಳಿದ ಮಲಿಕಸಾಬನ ಮಾತಿನಂತೆ ಅಲ್ಲಿ ಕೂತವರ ಛಾ ಕಪ್ ಗಳನ್ನ ಗೂಡಿಸಲು ಶುರು ಮಾಡಿದಳು ಬೂಬು. ಈ ಎಲ್ಲದರ ನಡುವಲ್ಲಿ ತನ್ನ ಬುರ್ಖಾ ದೊಡ್ಡಮನೆಯಲ್ಲೇ ಮರೆತು ಹೋದದ್ದು ಅವಳಿಗೆ ನೆನಪಾಗಿದ್ದು ಅಲ್ಲೇ ಕುಳಿತ ಒಬ್ಬ 'ನಾಯಕ' ಅವಳನ್ನು ಕೆಟ್ಟ ಕಣ್ಣಿನಿಂದ ಗುರಾಯಿಸಿ ನೋಡಿದಾಗ.

ಮುಂದಿನ ಎರಡು ದಿನ ಇಫ್ತಾರ್ ಮಾಸ್ತರ್ ರ ಮನೆಯಲ್ಲಿ ಇಂಥ ಹತ್ತಾರು ಮೀಟಿಂಗ್ ಗಳು ಆದವು. ಒಂದೆರಡರಲ್ಲಿ ಮಲಿಕಸಾಬನ ಜೊತೆ ಬೂಬು ಕೂಡ ಹೋಗಿದ್ದಳು. ಪಕ್ಕದ ಊರಿನಿಂದ ಒಬ್ಬ ಪ್ರಭಾವಿ ಮೌಲವಿ ಬಂದು ಹೇಗೆನಮ್ಮವರಿಗೆ ಕೊನೆಗೆ ನಮ್ಮವರೇ ಆಗೋದು, ಹೇಗೆ ಬೇರೆಯವರಿಂದ  ತಾವುಗಳು ದೂರ ಇರಬೇಕು ಎಂದು ಜೋರು ಜೋರಾಗಿ ಬಾಷಣ ಮಾಡಿದರು. ಇನ್ನು ಮೇಲೆ ಅವರ ಕಯ್ಯಲ್ಲಿ ನಮ್ಮವರು ಕೆಲಸ ಮಾಡುವಂತಿಲ್ಲ, ಆ ಹಾಳು ಮಂದಿರದ ಕೆಲಸಕ್ಕೆ ಹೋಗಿದ್ದೇ ಇಷ್ಟಕ್ಕೆಲ್ಲ ಕಾರಣವಾಗಿದ್ದು. ನಮ್ಮವರನ್ನು ಕರೆಸಿ ಕೆಲಸ ಮಾಡಿಸಿಕೊಂಡು ಕೊನೆಗೆ ದುಡ್ಡನೂ ಕೊಡದೆ ಹೊಡೆದು ಹಾಕಿದ್ದಾರೆ ಅಂತ ಬಾಯಿಗೆ ಬಂದಂಗೆ ಬೈದು ಸುಮ್ಮನಾದರು. ಮತ್ತದೇ ನೀರು, ಕಾಫಿ, ಪಾನೀಯ. ಮಲಿಕಸಾಬನೋ ಶಾಲೆಗೆ ಬಂದ ಮಕ್ಕಳಂತೆ ಕರೆದಾಗೆಲ್ಲ ಬಂದು ಎಲ್ಲವನ್ನೂ ವಿಧೇಯಕನಾಗಿ ಕೇಳಿ ಆಮೇಲೆ ಕೊಟ್ಟಿದ್ದನ್ನು ತಿಂದು, ಛಾ ಕುಡಿದು ಏಳುತ್ತಿದ್ದ.

ಎರಡು ದಿನಗಳ ನಂತರ ಕೇರಿಯು ತುಸು ಶಾಂತವಾಗಿತ್ತು, ಮಲಿಕಸಾಬನು ಇಲ್ಲೇ ಚೂರು ಹೋಗಿ ಬರುತ್ತೇನೆ, ಸಂಜೆಯಾಗುತ್ತದೆ ಅಂತ ಹೇಳಿ ಬೆಳಿಗ್ಗೆಯೇ ಮನೆಯಿಂದ ಹೊರಟು ಹೋಗಿದ್ದ. ಮೂರು ದಿನಗಳಿಂದ ನಡೆದುದೆಲ್ಲದರಿಂದ ಬೇಸರಗೊಂಡಿದ್ದ ಬೂಬುಗೆ ಮತ್ತೆ ತನ್ನ ಚಾಚಾ ನೆನಪಾಗಿದ್ದ. ಚೂರೇ ಚೂರು ಪರಿಚಿತವೆನಿಸಲು ಐದು ವರ್ಷ ತಗೆದುಕೊಂಡ ಈ ಊರು ಒಂದೇ ರಾತ್ರಿಯಲ್ಲಿ ಮತ್ತೆ ಅಪರಿಚಿತವೆನಿಸಿ ಕತ್ತಲಿನ ಭೂತದಂತೆ ಕಂಡು ಅವಳನ್ನು ಬೆಚ್ಚಿ ಬೀಳಿಸಿತ್ತು. ಅವಳನ್ನು ಸಮಾಧಾನಿಸುವ ಕ್ಯಾಲೆಂಡರ್ ನ ಚುಕ್ಕಿ ಯಾಕೋ ಅವಳನ್ನ ಇನ್ನೂ ಒಂಟಿತನದೆಡೆಗೆ ದೂಕಿತು. ಅಕ್ಕ!! ಒಮ್ಮೆಲೇ ತನ್ನ ಅಕ್ಕನ ನೆನಪಾಗಿ ಮನಸಲ್ಲಿ ಒಂದು ಹೊಸ ಸಂಚಲನವೇ ಹುಟ್ಟಿ ಕಣ್ಣು ಹಿಗ್ಗಿದವು. ಮೂರು ದಿನಗಳಾಯ್ತು, ಅಕ್ಕನನ್ನು ನೋಡಿಕೊಂಡು ಬಂದರೆ ತುಸು ಸಮಾಧಾನವಾದೀತು. ಅವರ ಮನೆ ಹತ್ತಿರ ಏನೇನು ಗಲಾಟೆಗಳು ಆಗಿವೆಯೋ, ಮಂದಿರದ ಕಮಿಟಿಯಲ್ಲಿ ಅಕ್ಕನ ಮನೆಯವರೂ ಸಹ ಇದ್ದಾರೆ. ಆದರೆ ಇಷ್ಟೆಲ್ಲಾ ರಾದ್ಧಾಂತಗಳು ಆದಮೇಲೆ ನಾನು ಹೋದರೆ ಅಕ್ಕನ ಮನೆಯ ಜನ ನನ್ನ ಒಳ ಸೇರಿಸಿಯಾರೇ? ಗುಡಿಯ ಕೆಲಸಕ್ಕೆ ನನ್ನ ಗಂಡನೂ ಇದ್ದ, ಮಸೀದಿ ಅವರ ಮನೆಗೂ ದೂರವಿಲ್ಲ, ಅಲ್ಲಿ ಏನೇನೋ ಅನಾಹುತಗಳು ನಡೆದಿವೆಯೋ. ಅಕಸ್ಮಾತ್ ನನ್ನ ಅವರು ಇನ್ಮೇಲೆ ಬರಬೇಡ ಅಂದರೆ? ಇಲ್ಲ, ಅಕ್ಕನಿಗೆ ಇದೆಲ್ಲ ಹಾಳು 'ಗುಡ್ಡ'ವನ್ನೂ ಸಹ ನಗಾಡಿ ಒಂದೇ ಮಾತಿನಲ್ಲಿ 'ಕಡ್ಡಿ' ಮಾಡುವುದು ಗೊತ್ತಿರುತ್ತದೆ, ಏನೋ ಒಂದು ಹೇಳಿ ನಕ್ಕು ನನ್ನ ಒಳ ಕರೆದು ಛಾ ಕೊಟ್ಡುತ್ತಾಳೆ. ಅಕ್ಕನ ಬಿಟ್ಟು ಬೇರೆ ಯಾರ ಹತ್ತಿರ ಹೋಗಲಿ? ಎಂದು ಯೋಚಿಸಿ ಮನೆ ಬೀಗ ಹಾಕಿ ಅಕ್ಕನ ಮನೆ ದಾರಿ ನಡೆದೇ ಬಿಟ್ಟಳು.

ದೊಡ್ಡ ಮನೆ ಗೇಟು ಹಾಕಿದೆ. ಕಾಂಪೌಂಡ್ ನಲ್ಲಿ ಹೊಸದೊಂದು ನಾಯಿ ಓಡಾಡುತ್ತಿದೆ, ಆನೆ ಗಾತ್ರದ್ದು. ಅದನ್ನ ನೋಡಿದರೇ ಭಯ. ಗೇಟ್ ಮುಂದೆ ಸದಾ ನಕ್ಕು ಬರಮಾಡಿಕೊಳ್ಳುತ್ತಿದ್ದ ಖಾನ್ ಭಯ್ಯಾ ಕೂಡ ಇಲ್ಲ! ಬದಲಾಗಿ ಬೇರೊಬ್ಬ ಗಾರ್ಡ್ ನಿಂತಿದ್ದಾನೆ. ಅವಳ ಬುರ್ಖಾ ಕಂಡು ಅವನು "ಕ್ಯಾ ಜೀ? ಕಹಾಂ ಜಾರೆ ತುಮೀ?" ಎಂದು ಮುರುಕಲು ಹಿಂದಿಯಲ್ಲಿ ಕೇಳುತ್ತಾನೆ. ತಡವರಿಸುತ್ತ "ಅಕ್ಕ.. ಅಕ್ಕ.. ಮನಿ" ಎಂದು ಬೆರಳು ಮಾಡಿ ಏನೋ ತಪ್ಪು ಮಾಡಿ ಸಿಕ್ಕಿ ಬಿದ್ದವರಂತೆ ಹೆದರುತ್ತಾಳೆ. "ಅಕ್ಕ ನೈ, ಕೌನ್ ನೈ!.. ನಿಮ್ಮವರು ಈಕಡೆ ಬರಂಗಿಲ್ಲ ಕರಿಲೆನ ಪೊಲೀಸರನ??" ಅಂತ ಕೇಳುತ್ತ ತನ್ನ ಲಾಠಿ ತೆಗೆದು ನಡಿ ನಡಿ ಎಂದು ಕೈ ಮಾಡುತ್ತಾ ಇನ್ನೂ ಹತ್ತಿರ ಬರುತ್ತಾನೆ. ಹೆದರಿಕೆಯಲ್ಲಿ ಹುಂ... ಹುಂ ಎಂದು ಅಲ್ಲಿಂದ ಹಿಂದೆ ಬರಲು ಶುರು ಮಾಡುತ್ತಾಳೆ. ತುಸು ದೂರ ಬಂದು ಹಿಂಬದಿಯಿಂದ ಮೇಲಿನ ಕಿಟಕಿಗಳ ನೋಡಿದರೆ ಎಲ್ಲ ಹಾಕಿವೆ. ಮನೆ ಮುಂದೆ ಐದಾರು ಗಾಡಿಗಳೂ ನಿಂತಿವೆ. ಅದೇನಾಗಿದೆಯೋ ಅಲ್ಲಾಹ್! ಅಕ್ಕ, ಅಣ್ಣ ಚೆನ್ನಾಗಿದ್ರೆ ಸಾಕು. ದಾರಿಯಲ್ಲಿ ಯಾರನ್ನಾದರೂ ಅಲ್ಲೇನು ನಡೆದಿದೆ, ಎರಡು ದಿನ ಇಲ್ಲಿ ಏನೇನಾಯಿತು ಎಂದು ಕೇಳಿಬಿಡುವಾಸೆ. ಆದರೆ ಪೊಲೀಸರು, ಜನರು, ಪುಢಾರಿಗಳು, ನಮ್ಮವರು, ಬೇರೆಯವರು ಎಲ್ಲವೂ ನೆನಪಾಗಿ ಏನೂ ತಿಳಿಯದೇ ಹೆದರಿ ಗೊಂದಲದಲ್ಲಿ ಸುಮ್ಮನೆ ಮನೆಯತ್ತ ಸಾಗಿದಳು. ಮದುವೆ ಮುಗಿದ ಸಂಜೆ ಏನೂ ತಿಳಿಯದ ಆ ಇಳಿ ವಯ್ಯಸ್ಸಿ ತನ್ನನ್ನು ಸ್ವಂತ ಮನೆಯಿಂದ, ತನ್ನ ಸ್ನೇಹಿತರಿಂದ ಯಾಕೆ ತನ್ನನ್ನು ದೂರ ಅಟ್ಟುತ್ತಿದ್ದಾರೆಂದು ತಿಳಿಯದೇ ತಾನು ಅತ್ತಿದ್ದು, ಅಸಹಾಯಕ ಮುದಿಯನಂತೆ ಸುಮ್ಮನೆ ಅಳುತ್ತ ನಿಂತಿದ್ದ ತನ್ನ ಚಾಚಾ.. ಅದೆಲ್ಲವೂ ಈಗ ಮತ್ತೊಮ್ಮೆ ಘಟಿಸಿದಂತೆ ಅನಿಸಿ ಅಳು ಉಕ್ಕಿ ಬಂತು. ಮಲಿಕಸಾಬ ಮನೆಗೆ ಬಂದು ಎಲ್ಲಿ ಹೋಗಿದ್ದೆ ಅಂತ ಕೇಳಿ ಬಯ್ಯೋ ಮುನ್ನ ಮನೆ ಮುಟ್ಟಬೇಕು ಎಂದು ಕಣ್ಣು ಒರೆಸುತ್ತಾ ಜೋರಾಗಿ ನಡೆದಳು. ನಿಮಿಷಕ್ಕೊಮ್ಮೆ ತನ್ನಕ್ಕ ಹೇಗೋ ಬಂದು ಕರೆಯುವಳು ಎನಿಸಿ ಮತ್ತೆ ಮತ್ತೆ ದೊಡ್ಡಮನೆಯತ್ತ ನೋಡುತ್ತಾ ಅದರಿಂದ ದೂರ ದೂರ ನಡೆದಳು.   ಕಟ್ಟೆಯ ಮೇಲೆ ಕೂರುತ್ತಿದ್ದ  ಪುಢಾರಿಗಳು ಕಾಣಲಿಲ್ಲ, ಪೊಲೀಸ್ ವ್ಯಾನುಗಳು ಇಲ್ಲ. ಅಕ್ಕ ಪೋಲೀಸರ ಬಗ್ಗೆ ಹೇಳಿದ್ದು ನೆನಪಾಗಿ ಅಳುವಲ್ಲೇ ನಕ್ಕಳು.

ಇತ್ತ ಅವಳ ಅಕ್ಕ ಮೂರು ದಿನವಾದರೂ ಮನೆ ಕೆಡೆ ಬಾರದ ಬೂಬುಳ ದಾರಿಯನ್ನು ಕಾಯುತ್ತ ಮತ್ತೊಮ್ಮೆ  ತನ್ನ ಅಡುಗೆ ಮನೆಯ ಕಿಟಕಿಯಿಂದಾಚೆ ಗೇಟಿನತ್ತ ನೋಡಿದಳು.  

ಪೂರ್ವ ಜನ್ಮದ ಪಾಪಿ



ಭೂಮಿಯಷ್ಟನ್ನೂ ಎಷ್ಟಕ್ಕೆ ಕೊಡುವೆ ?
ಎಂದು ಕೇಳಿ ಕಿಸೆ ಮುಟ್ಟಿ ನೋಡಿಕೊಂಡ
ಹೀಗೇ ಮಾಡಬೇಕೆಂದವನಿಗೆ, ಹಾಗೆ ಮಾಡಿ ತೋರಿಸಿ 
ಕಣ್ಣಲ್ಲೇ ಕಲೆ ಮಾಡಿ ಒಡಮೂಡಿಕೊಂಡ.

ಕೊಳೆಯಾದರೆ ಆದೀತು ಒಮ್ಮೆ ಇಳಿದು ಬಿಡುವಾ
ಕೆಸರಿನಲ್ಲಿ ಕಮಲವ ಹುಡುಕಿ, ಬರಿ ಮೂಸಿ ನೋಡಿ ನಗುವಾ
ಕಣ್ಣನ್ನು ಹಿಸುಕಿ ಕನ್ನಡಕವ ಅಗಲಿಸಿ
ದೂರದ ಒಂದನ್ನು ತಾನೊಬ್ಬನ್ನೆ ಕಂಡಂತೆ ದಿಟ್ಟಿಸಿ ನೋಡುವ.

ಜೀವನವೆಂದರೆ... ಎಂದು ತಾನೇ ಕೇಳಿಕೊಂಡು
ಉತ್ತರದ ಉತ್ತರದುದ್ದಕ್ಕೂ ದಕ್ಷಿಣವ ಹುಡುಕಿ,
ಮೆದುಳಿನಲ್ಲಿ ಸಾಕಿಕೊಂಡ ಪೆಂಡ್ಯುಲಮ್ ನ ಅಲುಗಾಡಿಸಿ
ತಾನೂ ಅದರೊಡನೆ ಒಮ್ಮೆ ಅಲ್ಲಿಂದಿಲ್ಲಿಗೆ ಜೀಕಿ,
ಅದೆಲ್ಲ ಬೇಕಾಗಿಲ್ಲ, ಇದ್ದಿದ್ದನ್ನ ಕಳೆದುಕೊಂಡ ಮೇಲೆ
ಮತ್ತೆ ಅದೇನೋ ಸಿಕ್ಕುತ್ತದೆ; ಅದೇ ಬಹುಷಃ ಅದು - ಎಂದುಕೊಳ್ಳುವ ಪಾರ್ಟಿ!  

ಓಡುವವನಿಗೆ ಕಾಲುಗಳೇ ಮನೆ,
ಓದುವವನಿಗೆ ಕಾಗದಗಳೇ ಕೊನೆ
ಅಂತೆಲ್ಲ ಮಾತಾಡಿ ಮಾತನಾಡದಂತೆಯೇ ಸುಮ್ಮನಾಗಿ,
ಸುಖಾ ಸುಮ್ಮನೆ ಕುಡುಕನಂತೆ ಮಾಡುವ, ನೋಡುಗರಿಗೆ ಆಡುವ.

ಚೋಟುದ್ದ ದೇಹ, ಅರ್ಧ ಕಾಣುವ ಕಣ್ಣು 
ಅಷ್ಟಿದ್ದೂ ಸಮುದ್ರವ ಒಮ್ಮೆಲೇ ಬಾಚುವ ಹಪಾಪಿ.
ಹೇಳದೆಯೇ ಕೇಳಿಸುವ, ಕೇಳಿದರೂ ಹೇಳದಿರುವ
ಫಿಲಾಸಫಿ ಬೊಗಳಿ, ಕಣ್ಣು ಮಿಟುಕಿಸಿ ತರ್ಲೆ ನಗುವ ನಗುವ ಪೂರ್ವ ಜನ್ಮದ ಪಾಪಿ!  

-ಗೆಳೆಯನೊಬ್ಬನ ಮೇಲೆ ಬರೆದದ್ದು. 


Friday, January 5, 2018

ಕಣ್ಣು ಬಿಟ್ಟು ನೋಡಿ, ಬೇಜಾನ್ ಇದೆ ಮ್ಯಾಟ್ರು





ಹತ್ತು ವರ್ಷದಿಂದ ಬೆಂಗಳೂರಲ್ಲೇ ಪಾನಿಪುರಿ ಮಾರಿಕೊಂಡಿದ್ದ ಬಿಹಾರಿ ಹುಡುಗನಿಗೆ ಕನ್ನಡ ಬರೋದಿಲ್ಲ,  ಸ್ವಲ್ಪ ಮಳೆ ಆದ್ರೆ ಸಾಕು ಈ ಹಾಳಾದ್ದು ಓಲಾ, ಉಬರ್ ಗಾಡಿಗಳೇ ಸಿಗಲ್ಲ, ಆಫೀಸ್ ಕೆಲಸ -ಟ್ರಾಫಿಕ್ ಜಾಮ್ ಗಳಲ್ಲಿ ಸಿಕ್ಕಿ ಈಗೀಗ ಪರ್ಸನಲ್ ಟೈಮ್ ಅಂತನೇ ಸಿಗಲ್ಲ, ಆಫೀಸ್ ನಲ್ಲಿ ಆ ಬಿಳಿ ಹುಡುಗಿ ಮುಂದೆ ಎಷ್ಟು ಓಡಾಡಿ ಸತ್ರುನೂ ಅವಳು ನನ್ನ ಮುಸುಡಿ ನೋಡಲ್ಲ, ಬೆಳಿಗ್ಗೆ ಎದ್ರೆ ನಲ್ಲೀಲಿ ನೀರು ಬರಲ್ಲ, ನೀರು ಬಂತು ಅಂತ ಬಾತ್ರೂಮ್ ನಲ್ಲಿ ಹೋಗಿ ಕುಂತ್ರೆ ಬರಬೇಕಾಗಿರೋದು ಬರಲ್ಲ, ಮಳೆ ಬಂದ್ರೆ ಕೆರೆ ತುಂಬಲ್ಲ, ಎಲೆಕ್ಷನ್ ಬಂದ್ರೆ ಹಳ್ಳ ಮುಚ್ಚಲ್ಲ, ಮೋದಿಗೆ ನಿದ್ದೆ ಬರಲ್ಲ, ಸಿದಣ್ಣಂಗೆ ಎಚ್ಚರ ಆಗಲ್ಲ! ಅಬ್ಬಾ!! ಎಷ್ಟೊಂದು ಸಮಸ್ಯೆಗಳು ನಮಗೆ, ಜಗತ್ತಲ್ಲಿ ಎಲ್ಲಾ ಕಷ್ಟಗಳೂ ನಮಗೆ ಇವೆ. ಸಾಕಷ್ಟು ಟೆನ್ಶನ್ ಆಗ್ಲೇ ಇವೆ, ಲಕ್ಷಗಟ್ಟಲೆ ಲೋನು, ಮನೆ ಜವಾಬ್ದಾರಿ, ಆಫೀಸ್ ನಲ್ಲಿ ಬಾಸ್, ಮನೇಲಿ ಹೆಂಡತಿ. ಇಷ್ಟಾಗಿಯೂ ಮತ್ತೆ ಡೈಲಿ ಬೇಸಿಸ್ ಮೇಲೆ ಹೊಸ ಹೊಸ ಸಣ್ಣ-ದೊಡ್ಡ  ವಿಷಯಗಳ ಚಿಂತೆಗಳು ಯಾಕೆ ಬರ್ತಾನೆ ಹೋಗತ್ತೆ? ಯಾಕೆ ಇಷ್ಟು ಒತ್ತಡ, ಚಿಂತೆ, ಹತಾಶೆ ನಮಗೆ? ಇನ್ನ ಸರಿಯಾಗಿ ಮೂವತ್ತು ತುಂಬಿಲ್ಲ, ಆದ್ರೂ ಜಗತ್ತೇ ತಲೆ ಮೇಲೆ ಬಿದ್ದಂತೆ ಯಾಕೆ ನಾವು? ಪ್ರತೀ ಮಾತು 'ಅಯ್ಯೋ.. ' ಅಂತಾನೆ ಶುರು ಆಗೋದು, ಪ್ರತೀ ಗುರಿಯು ದಾರಿ ಲೆಕ್ಕದಲ್ಲೇ ಮಂಜಾಗೋದು, ಮಲ್ಕೊಂಡ್ರೆ  ಬೆನ್ನು ನೋವು, ಕೂತ್ರೆ ಅಂಡ್ ನೋವು ಅಂತೀವಿ. ನಾವೆಲ್ಲಾ ಬಿಸಿ ರಕ್ತದ ಯುವಕರು, ನಮ್ದು ಒಂದು ಬಾಳು!

ಇಂಥ ಸಮಸ್ಯೆ ಅಲ್ಲದ ಸಮಸ್ಯೆಗಳಿಗೆ, ಖಾಲಿ ಪೀಲಿ ಚಿಂತೆಗಳಿಗೆ ನಾವು ದುರ್ಬಲರಾಗಿರೋದು ಏನಕ್ಕೆ ಅಂತ ಅಂದ್ರೆ ಅದಕ್ಕೆ ಸಾವಿರ ಕಾರಣಗಳು, ನಮ್ಮಲ್ಲಿನ ಅಧೈರ್ಯ, ಕಂಪ್ಲೈನ್ ಮಾಡುವ ಮನೋಭಾವ, ದಾರಿದ್ರ್ಯ ಇತ್ಯಾದಿ ಇತ್ಯಾದಿ. ಇವೆಲ್ಲವುಗಳಿಗಿಂತ ದೊಡ್ಡದು ಒಂದಿದೆ ಅದೇನೆಂದರೆ, 'ದೃಷ್ಟಿಕೋನದ ಕೊರತೆ', ಹೌದು! ಆಂಗ್ಲದಲ್ಲಿ 'ಲ್ಯಾಕ್ ಆಫ್ ಪರ್ಸ್ಪೆಕ್ಟಿವ್ಸ್' ಅಂತಾರೆ. ತುಂಬಾ ಸೂಕ್ಷ್ಮವಾಗಿ ಗಮನಿಸಿದರೆ ಗೋಚರಿಸಬಹುದು, ನಮಗೆ ದೃಷ್ಟಿಕೋನಗಳ ಕೊರತೆ ಇರುವುದರಿಂದಲೇ ಬಾವಿಯ ಕಪ್ಪೆಯಂತೆ ಒಂದೇ ಕೋನದಲ್ಲಿ ವಿಚಾರ ಮಾಡಿ ಬಾಯಿ ಬಡಿದುಕೊಳ್ಳುವುದು ನಾವು. ಜೀವನದಲ್ಲಿ ದೃಷ್ಟಿಕೋನ ಸಂಪಾದಿಸುವುದು ತುಂಬಾ ಮುಖ್ಯ, ದೃಷ್ಟಿಕೋನಗಳಿರುವವನಿಗೆ ವಿಷಯಗಳ ಬಗ್ಗೆ ಒಂದು ಪ್ರೌಢ ಮನೋಭಾವ ಇರುತ್ತದೆ, ಬಂದ ಸಮಸ್ಯೆಗಳನ್ನು ಕಾಣುವ ನೋಟ, ವಿಧಾನ ಗೊತ್ತಿರುತ್ತದೆ, ವಿಷಯದ ಬಗ್ಗೆ ತರ್ಕಿಸಿ, ಹೋಲಿಸಿ ನೋಡಿ ಅದರ ಬಗ್ಗೆ ಒಂದು ಸರಿಯಾದ  ಐಡಿಯಾ ಪಡೆಯುವ ಕೌಶಲ್ಯ ಇರುತ್ತದೆ. ದಿನಾ ಇದೆ ಕಥೆ, ಇಷ್ಟೊಂದು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಸಾಯಬೇಕು ಅಂತ ನಮ್ಮಲ್ಲೇ ಅನ್ಕೊಂಡು ಕುಂತ್ರೆ ವಿಷಯ ದೊಡ್ಡದಾಗೇ ಕಾಣಿಸಿ ಮನಸು ಹಾತಾಶವಾಗುತ್ತೆ ಅಷ್ಟೇ. ಪ್ರಯಾಣಿಸೋ ಮುನ್ನ ಟ್ರಾಫಿಕ್ ಎಲ್ಲೆಲ್ಲಿ ಇದೆ, ಹೇಗೆ ರೂಟ್ ಬದಲಾಯಿಸಿ ನೋಡಬಹುದು, ಬೇರೆ ಪ್ರಯಾಣಿಕರೆಲ್ಲ ಹೇಗೆ ಪ್ಲಾನ್ ಮಾಡುತ್ತಿದ್ದಾರೆ, ಅಷ್ಟಕ್ಕೂ ಯಾಕೆ ಆ ರೂಟ್ ನಲ್ಲಿ ಇಷ್ಟು ಟ್ರಾಫಿಕ್ ಆಗ್ತಾ ಇರೋದು ಅಂತೆಲ್ಲ ನೋಡಿದರೆ ಸಮಸ್ಯೆಯ ಸುತ್ತ ಒಂದು ಕಲ್ಪನೆ ಬರುತ್ತದೆ. ಆಗ ಅದರ ಬಗ್ಗೆ ಕಂಪ್ಲೈನ್ ಮಾಡುವ ಬದಲು ಅದರಿಂದ ತಪ್ಪಿಸಿಕೊಳ್ಳಲು ಯೋಚಿಸಬಹದು. ಮೆಟ್ರೋ ಲೈನ್ ಕಟ್ಟುವ ಸಲುವಾಗಿ ಸಮಸ್ಯೆ ಆಗುತ್ತಿದ್ದರೆ, ಅದು ಸಧ್ಯಕ್ಕೆ ನಮಗೆ ಕಷ್ಟ ಆದ್ರೆ ಮುಂದೆ ಇದರಿಂದ ತುಂಬಾ ಸಹಾಯ ಆಗುತ್ತದೆ ಅಂತ ಒಂದು ಸಮಾಧಾನ ಸಿಗಬಹುದು. ತೀರಾ ಸಣ್ಣ ವಿಷಯದ ಉದಾಹರಣೆ ಇದು, ಇದರಂತೆ ಪ್ರತಿಯೊಂದು ಸಣ್ಣ, ದೊಡ್ಡ ಸಮಸ್ಯೆಗೂ ಸಾವಿರ ದೃಷ್ಟಿಕೋನಗಳು ಇರುತ್ತವೆ, ಸುತ್ತ ಮುತ್ತಲೂ ನೋಡಿ, ಓದಿ, ಬೇರೆ ಬೇರೆ ದಾರಿಗಳಿಂದ ವಿಚಾರಿಸಿ ದೃಷ್ಟಿಕೋನಗಳ ಗಮನಿಸಿದರೆ ಆ ಸಮಸ್ಯೆ ಬರೀ ಒಂದು ಸಮಸ್ಯೆ ಆಗಿರದೆ ಒಂದು ಅವಕಾಶವಾಗಿಯೂ ಕಾಣಿಸಬಹುದು. ಉದಾಹರಣೆಗೆ ಮೊನ್ನೆ ನನಗೆ ಹೋಂ ಲೋನ್ ಕೊಟ್ಟಿರೋ ಬ್ಯಾಂಕ್ ನವರು ಯಾವುದೋ ಒಂದು ಎಕ್ಸ್ಟ್ರಾ ಡಾಕ್ಯುಮೆಂಟ್ ಬೇಕು ಅಂತ ವಾರಗಟ್ಟಲೆ ಫೋನ್ ಮಾಡಿ ತಲೆ ತಿಂದಾಗ ನನಗೆ ರೇಗಿ ಹೋಗಿತ್ತು, ಸಾಲ ತಗೊಂಡು ಮೂರು ವರ್ಷ ಆಯಿತು, ಆಗಲೇ ಅಷ್ಟು ದುಡ್ಡು ತುಂಬಿದ್ದೀನಿ, ಸಾವಿರ ಕೆಲಸ ಇರ್ತವೆ ಮಾಡೋಕೆ, ನೀವು ಯಾವಾಗ ಬೇಕೋ ಆಗ ಫೋನ್ ಮಾಡಿ ಹೊಸ ಹೊಸ ಪೇಪರ್ ಕೇಳಿದ್ರೆ ಹೇಗೆ? ಅದನ್ನ ಪಡೆಯೋಕೆ, ನಿಮಗೆ ಕೊಡೋಕೆ ಎಷ್ಟೊಂದು ಸಮಯ, ಪ್ರಯತ್ನ ಬೇಕು ಅದೆಲ್ಲ ನೀವೇ ಮಾಡಿಕೊಂಡರೆ ಆಗಲ್ಲವೇ? ಅಂತೆಲ್ಲ ಬೈದೆ. ಸರ್ಕಾರದ ಆಜ್ಞೆ ಅನುಸಾರವಾಗಿ ಇದು ಬೇಕೇ ಬೇಕು ಅಂತ ಅವರು ಹೇಳಿದಾಗ ಸರಕಾರಕ್ಕೂ ಅರ್ಧ ಘಂಟೆ ಬೈದುಕೊಂಡೆ. ಕಡೆಗೆ ಇದರ ಬಗ್ಗೆ ಇಂಟರ್ನೆಟ್ ನಲ್ಲಿ ಓದಿ, ಸ್ನೇಹಿತರ ಜೊತೆ ಮಾತಾಡಿ, ಕಸ್ಟಮರ್ ಕೇರ್ ಅದು ಇದು ಅಂತ ಕೇಳಿ ನೋಡಿದಾಗ ತಿಳೀತು ನಾನು ತುಂಬುತ್ತಿದ್ದ ಬಡ್ಡಿ ದರ ತುಂಬಾ ಜಾಸ್ತಿ ಇತ್ತು, ಈಗ ಅದನ್ನು ಈ ಡಾಕ್ಯುಮೆಂಟ್ ಕೊಡುವಾಗ ರಿಕ್ವೆಸ್ಟ್ ಮಾಡಿಕೊಂಡು ಕಮ್ಮಿ ಮಾಡಿಸಿಕೊಳ್ಳಬಹುದು ಅಂತ. ಒಂದು ಶನಿವಾರ ಹೋಗಿ ಎಲ್ಲ ಕೆಲಸಗಳನ್ನ ಮುಗಿಸಿದೆ, ಅದರಿಂದ ಸುಮಾರು ಆರು ನೂರು ರೂಪಾಯಿ ಪ್ರತಿ ತಿಂಗಳು ಬಡ್ಡಿ ಕಡಿಮೆ ಆಯಿತು. ಮೂರು ವರ್ಷದಿಂದ ಆ ಲೋನ್ ಅಕೌಂಟ್ ಬಗ್ಗೆ ತಲೇನೆ ಕೆಡಿಸಿಕೊಳ್ಳದೆ ಬಡ್ಡಿ ತುಂಬಿಕೊಂಡು ಹೋಗ್ತಾ ಇದ್ದ ನನಗೆ ಈ ಒಂದು 'ಕಿರಿಕಿರಿ' ಯಿಂದಲೇ ಅದನ್ನು ರೀವಿಸಿಟ್ ಮಾಡಲು ಒಂದು ಅವಕಾಶ ಸಿಕ್ಕಿತು. ಅಕ್ಕ ಪಕ್ಕ ಮಾತಾಡಿ ನೋಡಿ, ವಿಷಯದ ಬಗ್ಗೆ ಓದಿ, ಕೆಲ ಬ್ಯಾಂಕರ್ ಸ್ನೇಹಿತರೊಡನೆ ಚರ್ಚಿಸಿದಾಗ ಇದನ್ನು ಲಾಭದಾಯಕವಾಗಿ ಹ್ಯಾಂಡಲ್ ಮಾಡುವ ದಾರಿ ತಿಳಿಯಿತು. ಬೇರೆ ಬೇರೆ ದೃಷ್ಟಿಕೋನಗಳಿಂದ ಹೇಗೆ ಪ್ರತಿಯೊಂದು ವಿಷಯವನ್ನು ಎಲ್ಲಾ ಮೂಲೆಗಳಿಂದ ಕಂಡು, ತಿಳಿದುಕೊಂಡು, ಪೂರಕವಾಗಿ ಪ್ರತಿಕ್ರಿಯಿಸಬಹುದು ಅನ್ನೋದು ಇಂತಹ ಸಣ್ಣ ಪುಟ್ಟ ಉದಾಹರಣೆಗಳಿಂದ ಹೇಳ ಹೊರಟೆ ಅಷ್ಟೇ.

ಆಯ್ತು ಕಣಪ್ಪ ದೃಷ್ಟಿ ಕಣ್ಣಪ್ಪ!  ಈ 'ದೃಷ್ಟಿಕೋನ ಸಂಪಾದನೆ' ಅಂದ್ಯಲ್ಲ, ಅದನ್ನ ಹೇಗೆ ಮಾಡೋದು ಅಂತ ಹೇಳು ಅಂದ್ರಾ? ಸಿಂಪಲ್! ನಮ್ಮ ಸುತ್ತ ಮುತ್ತಲಿನ ಸಮಾಜದ ಬಗ್ಗೆ, ಆಗು ಹೋಗುಗಳ ಬಗ್ಗೆ, ಜನರ ಬಗ್ಗೆ, ವಿಷಯಗಳ ಬಗ್ಗೆ  ಅರಿವು ಪಡೆಯುತ್ತ ಇರಬೇಕು. ಪುಸ್ತಕಗಳು, ಕಥೆ-ಕಾದಂಬರಿಗಳನ್ನ ಓದುವುದರಿಂದ ಒಂದು ಪ್ರೌಢಿಮೆ ಬರುವುದಂತೂ ಖಚಿತ. ಟಿ.ವಿ, ಸಿನಿಮಾ ಗಳನ್ನೂ ನೋಡಿಯೂ ಅದೆಷ್ಟೋ ಕಲಿಯಬಹುದು, ಹೇಗೆ ಎಲ್ಲವನ್ನು ಹಾಸ್ಯ ದಿಂದ ನೋಡಬಹುದು ಅಂತ ಹಾಸ್ಯ ಧಾರಾವಾಹಿಗಳಲ್ಲಿ (ಇಂಗ್ಲಿಷ್ ನಲ್ಲಿ ಸಿಟ್ಕಾಮ್ ಗಳು), ಹಾಸ್ಯ ಸಿನಿಮಾಗಳ ನೋಡಿ, ಹಾಸ್ಯ ಕಾರ್ಯಕ್ರಮಗಳನ್ನು ನೋಡಿ ತಿಳಿಯಬಹುದು. ಚಿಕ್ಕವರಿದ್ದಾಗ ಕಾಲು ಜಾರಿ ಬಿದ್ದರೆ ಅಳುತ್ತಿದ್ದ ನಾವು ಈಗ ಬಿದ್ದರೆ ನಗುತ್ತೇವೆ, ಅಂಥ ಸಣ್ಣ ವಿಷಯವನ್ನು ಪ್ರೌಢರಾಗಿ, ಹಾಸ್ಯವಾಗಿ ಕಂಡು ಅದನ್ನು ಹಗುರವಾಗಿ ನೋಡಿ ನಕ್ಕು ಬಿಡುತ್ತೇವೆ, ಹಾಗೆಯೇ ಇನ್ನು ಸಾಕಷ್ಟು ವಿಚಾರಗಳಲ್ಲಿ ನಮಗೆ ತಿಳಿಯದಲೇ ಬಹಳಷ್ಟು ದೃಷ್ಟಿಕೋನಗಳ ಸಂಪಾದಿಸಿ ನಿರ್ವಹಿಸುತ್ತಿರುತ್ತೇವೆ, ಅದನ್ನೇ ಸ್ವಲ್ಪ ಸೀರಿಯಸ್ ಆಗಿ ತಗೊಂಡು ಇವೆಲ್ಲವುಗಳ ಮೇಲೆ ಜಾಸ್ತಿ ಒತ್ತು ಕೊಟ್ಟು ಓದಿ, ನೋಡಿ, ಕಲಿತು ಬಾಳಿದರೆ ಪ್ರತಿ ದಿನವೂ ನಗಲು, ಯೋಜಿಸಲು, ಗೆಲ್ಲಲು ಒಂದು ಅವಕಾಶವೇ. ಭಾರತದಲ್ಲಿ ಸ್ಲಂ ಗಳಿವೆ, ಎಷ್ಟೋ ಜನಕ್ಕೆ ಮನೆ ಇಲ್ಲ, ಊಟ ಸಿಗಲ್ಲ ಅಂತ ಹೇಳುತ್ತಿದ್ದ ನನ್ನ ಹೊರದೇಶದ ಸ್ನೇಹಿತರಿಗೆ ಬರೀ ನಮ್ಮ ದೇಶದ ಸಂಸ್ಕೃತಿ, ಪದ್ಧತಿಗಳ ಬಗ್ಗೆ ಮರುತ್ತರ ನೀಡಿ, ಅವುಗಳ ಮುಂದೆ ಎಷ್ಟೇ ದೊಡ್ಡವಾದರೂ ಅಮೆರಿಕಾ, ಆಸ್ಟ್ರೇಲಿಯಾಗಳೇನು ಇಲ್ಲ ಅಂತ ಜಗಳವಾಡುತ್ತಿದ್ದೆ ನಾನು. ನಮ್ಮ ಸಮಸ್ಯೆಗಳನ್ನು ಸಮಸ್ಯೆಗಳೆಂದು ಅರ್ಥ ಮಾಡಿಕೊಂಡು, ಒಪ್ಪಿಕೊಂಡಾಗಲೇ ಅವುಗಳ ಬಗ್ಗೆ ಅರಿವು ಮೂಡಿದ್ದು, ನಾನು ಸ್ಟುಪಿಡ್ ನಿಂದ ಲರ್ನೆಡ್ ಆಗಿದ್ದು. ತಪ್ಪನ್ನು ತಪ್ಪು ಎಂದು ಒಪ್ಪಿಕೊಳ್ಳಲೂ ತುಂಬಾ ದೃಷ್ಟಿಕೋನ ಬೇಕು, ನಮ್ಮ ಮೂಗಿನ ನೇರಕ್ಕೆ ಯೋಚಿಸಿದಾಗಲೇ ಜಗಳ, ಹೊಡೆದಾಟಗಳು ಆಗೋದು. ನಮ್ಮ ದೇಶದಲ್ಲಿ ಹಿಂದುತ್ವ ನೇ ದೊಡ್ಡದು ಅದಕ್ಕಿಂತ ಬೇರೇನಿಲ್ಲ ಅನ್ನೋದು ಒಂದು ವಾದವಾದರೆ , ನಮ್ಮ ದೇಶ ಒಂದು ಪ್ರಜಾಪ್ರಭುತ್ವ ಅಂತ ಇನ್ನೊಂದು ಮಾತು, ಹಸು ದೇವರು ಅಂತ ಒಬ್ರು ಹೇಳಿದ್ರೆ, ಎಮ್ಮೆನೂ ದೇವರೇ ಸೃಷ್ಟಿಸಿದ್ದು ಸ್ವಾಮೀ ಅಂತ ಇನ್ನೊಬ್ರು ಅಂದ್ರಂತೆ, ರಾಮಾಯಣ ನ ರಾವಣನ ದೃಷ್ಟಿಕೋನದಲ್ಲಿ ಬರೆದ ಪುಸ್ತಕ ಓದಿ ದಿಗ್ಭ್ರಮೆ ಆಗತ್ತೆ, ನಂದಿ ಬೆಟ್ಟ ಏರೋವಾಗ ಕಿರಿಕಿರಿ ಎನಿಸಿ ತಲೆ ನೋವು ತರಿಸುವ ರಸ್ತೆ ತಿರುವುಗಳು, ಜನ ಜಂಗುಳಿ,  ಬೆಟ್ಟದ ಮೇಲಿಂದ ನೋಡಿದರೆ ತುಂಬಾ ಸಣ್ಣದಾಗಿ ಕಾಣುತ್ತವೆ, ವಾರದ ಹಿಂದೆ ಕೆಲಸದಲ್ಲಿ ಆಸಕ್ತಿ ಬರ್ತಿಲ್ಲ ಅಂತ ಅಂತಿದ್ದ ನನಗೆ ಗ್ಲೋಬಲ್ ರಿಸೆಶನ್ ಬಗ್ಗೆ ತಿಳಿದಮೇಲೆ ಹಠಾತ್ ಆಸಕ್ತಿ ಹುಟ್ಟಿದೆ, ನಮ್ಮ ಮಗ ಮದುವೆ ಬಗ್ಗೆ ಆಸಕ್ತಿನೇ ತೋರಿಸ್ತಿಲ್ಲ ಅಂತ ಬೈದುಕೊಂಡಿದ್ದ ನಮ್ಮ ಅಪ್ಪ ಅಮ್ಮನಿಗೆ ಪಕ್ಕದ್ಮನೆ ಹುಡುಗ ಓಡಿ ಹೋಗಿ ಮದುವೆ ಆದಮೇಲಿಂದ ನನ್ನ ಮೇಲೆ ಜಾಸ್ತಿ ಪ್ರೀತಿ ಬಂದಿದೆ, ಬಲ ಹುಬ್ಬು ಬಡಿದುಕೊಳ್ಳಬಾರದು ಅನ್ನೋ ನಮ್ಮಜ್ಜಿಗೆ ಅದು ಏಕೆ ಬಡಿದುಕೊಳ್ಳುತ್ತದೆ ಅಂತ ವೈಜ್ಞಾನಿಕ ಕಾರಣ ತಿಳಿದ ಮೇಲೆ ಮೌಢ್ಯ ಕಮ್ಮಿ ಆಗಿದೆ, ಪಾನಿಪುರಿ ಹುಡುಗ ಕೂಡ ಕನ್ನಡ ಮಾತಾಡ್ಬೇಕು ಅಂತ ಒಬ್ಬ ಅಂದ್ರೆ, ಕನ್ನಡ ಒಂದು ಭಾಷೆ ಅಷ್ಟೇ ಅದಕ್ಕಿಂತ ದೊಡ್ಡದು ಜೀವನ ,ಮನುಷ್ಯತ್ವ ಅಂತ ಇನ್ನೊಬ್ಬ ಹೇಳ್ತಾನೆ, ಓಲಾ-ಉಬರ್ ಸಿಗ್ತಿಲ್ಲಾ ಅಂತ ಬೈಕೊಳೋ ನನಗೆ ಬಿ.ಎಂ.ಟಿ.ಸಿ ನಲ್ಲಿ ನೇತಾಡಿಕೊಂಡು ಹೋಗುವವವರ ನೋಡಿ ಒಂದು ರೇಂಜ್ ಗೆ ಜೀವನ ಅರ್ಥವಾಗಿದೆ, ಆ ಆಫೀಸ್ ಬೆಡಗಿ ಹುಡುಗಿ ನನ್ನ ನೋಡಲ್ಲ ಅಂತ ದೇವದಾಸ ಆಗಿದ್ದ ನನಗೆ ಅವಳ ಹಿಂದೆ ನನ್ನಂತೆ ಸಾವಿರ ಹುಡುಗರು ಓಡಾಡಿಕೊಂಡಿದ್ದನ್ನು ಗಮನಿಸಿದ ಮೇಲೆ ಅವಳ ಮೇಲೆ ಕನಿಕರ ಹುಟ್ಟಿದೆ, ಟ್ರಾಫಿಕ್ ಜಾಮ್ ಗಳ ಬಗ್ಗೆ  ಬಾಯಿ ಬಡಿದುಕೊಳ್ಳುತ್ತಿದ್ದ ನನಗೆ ಮನೆ ತಲುಪಲು ಅದೆಷ್ಟೋ ಹೊಸ ಹೊಸ ಪರ್ಯಾಯ ಮಾರ್ಗಗಳು ಕಂಡಿವೆ, ಮೋದಿ, ಸಿದ್ದಣ್ಣರ ನೆನೆಸೋ ಮೊದಲು ನನಗೆ ನನ್ನ ಏರಿಯಾ ಕಾರ್ಪೊರೇಟರ್, ನನ್ನ ಊರಿನ ಉತ್ಸುವಾರಿ ಸಚಿವರು ನೆನಪಾಗಿ ಅವರನ್ನು ತಲುಪಲು ಪ್ರಕ್ರಿಯೆಗಳು ಕಾಣಿಸುತ್ತಿವೆ.. ಇವೆಲ್ಲವುಗಳೂ ದೃಷ್ಟಿಕೋನಗಳಿಂದಲೇ ಲಭಿಸುವುದು. ಕ್ಲೋಸ್ಡ್ ಮೈಂಡ್ ನಿಂದ ಏನು ನೋಡಿದರೂ ಅದು ಕಿರಿಕಿರಿಯೇ, ಬಾವಿಯಲ್ಲಿರೋ ಕಪ್ಪೆಗೆ ಏನು ಗೊತ್ತು ಟಿ.ವಿ ನೈನ್  ಕೊಳವೆ ಬಾವಿಯ ಬ್ರೇಕಿಂಗ್ ನ್ಯೂಸ್. ಕಣ್ಣು, ಕಿವಿ, ಮನಸ್ಸನ್ನು ತೆರೆದಿಟ್ಟುಕೊಂಡು ನೋಡಿದರೆ ಪ್ರತಿ ವಿಷಯವಯೂ ಒಂದು ಕಲಿಯೋ ಹಾಗೂ ಬೆಳೆಯೋ ಅವಕಾಶ.  ನಮ್ಮ ಮೂಗಿನ ನೇರಕ್ಕಷ್ಟೇ ನೋಡದೆ, ಪರರ ಮೂಗಿನ ಸೊಟ್ಟತನಕ್ಕೂ ನೋಡಿ ತಿಳಿದುಕೊಳ್ಳೋಣ. ಎಲ್ಲರಿಗೂ ಒಳ್ಳೇದಾಗ್ಲಿ, ಅವೆಲ್ಲ ಮಾಡಿ, ಏನೋ ಒಂದು ಆಗ್ತದೆ. 

    




            
      

Monday, November 27, 2017

ಸರಿ ದಾರಿ ಗೊತ್ತಿದ್ರೆ ಶಬ್ದ ಮಾಡಿ ದಾರಿ ಯಾಕೆ ಕೇಳ್ತೀರಿ?

  


ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತು ಅಂತ ನಮ್ ಅಪ್ಪಾ ನಂಗೆ ಚಿಕ್ಕೋನಿದ್ದಾಗ ಬೈತಿದ್ರು. ಬರ್ತಾ ಬರ್ತಾ ರಾಯರು ಅಗಸ ಆದ್ರೆ ಕುದುರೆ ಕತ್ತೆನೇ ಆಗಬೇಕಲ್ವೇ? ಅಂತ ನಾನು ಮನಸಲ್ಲೇ ಉತ್ತರ ಕೊಡ್ತಿದ್ದೆ, ಜೋರಾಗಿ ಕೊಟ್ರೆ ಚಪ್ಪಲಿ ಏಟು ಗ್ಯಾರಂಟಿ ಅಂತ ಗೊತ್ತಿತ್ತು. ಈ ಒಂದು ಗಂಭೀರವಾದ ಚೈಲ್ಡ್-ಹುಡ್ ಚಿಚೇಸನ್ ಈ ಹೊತ್ತಲ್ಲಿ ಯಾಕಪ್ಪ ನೆನಪಾಗಿದ್ದು ಅಂತಂದ್ರೆ ನಿನ್ನೆ ಆಫೀಸ್ ಗೆ ಹೋಗೋವಾಗ ರಸ್ತೆಯಲ್ಲಿ ಆದ ಟ್ರಾಫಿಕ್ ಜಾಮ್ ಕಿರಿಕಿರಿಯಿಂದ. ರೋಡಲ್ಲಿ ಇತ್ಲಾಕಡೆ ಎರಡು ಕತ್ತೆ ನಿಂತಿದ್ದಕ್ಕೆ ಹೆವೀ ಟ್ರಾಫಿಕ್  ಜಾಮ್.  ಕತ್ತೆಗಳ ಮುಂದೆ ನಿಂತು ಎಷ್ಟ್ ಬಡಕೊಂಡ್ರು ಅವು  ಕ್ಯಾ ರೇ ಅನ್ಲಿಲ್ಲ, ಇತ್ಲಾಕಡೆ ಇಂದ ಹೋಗೋಣ ಅಂತಂದ್ರೆ ಇಲ್ಲಿ ಎರಡು ಮನುಷ್ಯ-ಕತ್ತೆಗಳು ತಮ್ಮ ಕಾರ್ ಅನ್ನು ಅರ್ಧ ರೋಡ್ ಮುಚ್ಚೋ ಹಂಗೆ ಪಾರ್ಕ್ ಮಾಡಿ ಹೋಗಿವೆ. ಇದೆಲ್ಲದರ ನಡುವೆ ಸಿಕ್ಕಿ ರೇಗಿ ಬೊಗಳುವ ನಾಯಿಗಳ (ಹಾರ್ನ್ ಹಾಕುವ ಮನುಷ್ಯರು ಎಂದು ಓದಿ) ಪಾಡು ದೇವರೇ ಬಲ್ಲ. ಈ ಸೀನ್ ನಲ್ಲಿ ಕತ್ತೆ ಯಾರು, ಮನುಷ್ಯ ಯಾರು, ನಾಯಿ ಯಾರು ಅಂತ ಕಕ್ಕಾಬಿಕ್ಕಿಯಾಗಿ ಮಾನವ ವಿಕಸನವೇ ಒಂದು ಭ್ರಮೆ ಅಂತ ಅನಿಸಿಹೋಗಿತ್ತು. ಕಡೆಗೆ ಕತ್ತೆಗಳೇ  ಅರ್ಥ ಮಾಡಿಕೊಂಡು  ಜಾಗ ಮಾಡಿಕೊಟ್ಟವೇ ವಿನಃ ಆ ಪಾರ್ಕ್ ಆಗಿದ್ದ ಕಾರ್ ಗಳಾಗಲಿ, ಒಬ್ಬರ ಮೇಲೊಬ್ಬರು ಹಾರ್ನ್ ಮಾಡಿ, ಬೊಗಳಿ ಕಿರುಚಾಡಿದ ಡ್ರೈವರ್ ಗಳಾಗಲಿ ಹಿಂದೇಟು ಹಾಕಲಿಲ್ಲ. ಹೆಂಗೋ ಸರ್ಕಸ್ ಮಾಡಿ ಆಫೀಸಿಗೆ ಬಂದು ಮುಟ್ಟಿದ ನಮ್ಮ ಧೀರ ಶೂರ ಡ್ರೈವರ್.  ಬರ್ತಾ ಬರ್ತಾ ಬೆಂಗಳೂರಿನ ಟ್ರಾಫಿಕ್ ಹದಗೆಟ್ಟು ಹೋಯ್ತು ಅಂತ ಕ್ಯಾಬ್ ನಲ್ಲೊಬ್ರು ಹೇಳಿದಾಗ ಅನಿಸ್ತು,  ಬೆಂಗಳೂರಿಗರು ಹದ ಬಿಟ್ಟರಲ್ಲವೇ, ಬೆಂಗಳೂರು ಹದಗೆಡುವುದು ಅಂತ. 

ವೈದ್ಯರು ಸಿಗದೇ ಪೇಷಂಟ್ ಗಳು ಸಾಯ್ತಾ ಇದಾರೆ, ಆಫ್ರಿಕಾದಲ್ಲಿ ತಿನ್ನೋಕೆ ಊಟ ಇಲ್ಲ, ಡೆಲ್ಲಿಯಲ್ಲಿ ಉಸಿರಾಡೋಕೆ ಆಕ್ಸಿಜನ್ ನೇ ಇಲ್ಲ.. ಅಂಥದ್ರಲ್ಲಿ ಟ್ರಾಫಿಕ್ಕು, ಜಾಮು, ರೋಡು ಅಂತ ಬಡ್ಕೊಳೋ ನಾನು, ತಿನ್ನೋಕೆ ಬಾಯಿ ಇಲ್ಲ ಅಂತ ದುಃಖ ಪಡೋರ ಮುಂದೆ ಸೇದೋಕೆ ಒಳ್ಳೆ ಸಿಗರೇಟ್ ಸಿಗ್ತಿಲ್ಲ ಅಂತ ಅಳ್ತಾ ಇರೋನಂಗೆ ಕಾಣಿಸಬಹುದು. ಆದರೆ ಒಮ್ಮೊಮ್ಮೆ ಇಂಥ ಸಮಸ್ಯೆಗಳೇ ಬೆಳೆದು ದೊಡ್ಡವಾಗೋದು, ಸೈಲೆಂಟ್ ಕಿಲ್ಲರ್ ಗಳ ಥರ ಗೊತ್ತಿಲ್ಲದೇ ಹಾನಿ ಮಾಡುವ ವಿಷಯಗಳಿವು. ಒಂದು ಹೇಳ್ತಿನಿ, ಮನುಷ್ಯ ಮತ್ತು ಪ್ರಾಣಿಗಳಿಗೆ ಇರೋ ತುಂಬಾ ದೊಡ್ಡ ವ್ಯತ್ಯಾಸ ಕಾಮನ್ ಸೆನ್ಸ್! ಇದೇ ಕಾಮನ್ ಸೆನ್ಸ್ ನಿಂದ  ಮನುಷ್ಯ ಪ್ರಾಣಿಗಳಿಗಿಂತ ಸ್ವಲ್ಪ ಹೊರತಾಗಿ, ನಾಗರೀಕನಾಗಿ ಕಾಣಸ್ತಾನೆ. ಹಸು ಬಾಯಲ್ಲಿ ತಿಂದ್ರೆ ಮನುಷ್ಯ ಸ್ಪೂನ್ ನಲ್ಲಿ ತಿಂತಾನೆ, ನಾಯಿಗಳು ರೋಡಲ್ಲಿ ಮಾಡಿದ್ರೆ ಮನುಷ್ಯ ಯಾರಿಗೂ ಕಾಣಿಸದಂಗೆ ಮಾಡ್ತಾನೆ, ಕಾಗೆಗಳು ಹಂಚಿಕೊಂಡು ತಿಂದ್ರೆ ಮನುಷ್ಯ ಐ.ಟಿ ರೇಡ್ ಆಗೋವರೆಗೂ ಕೂಡಿಡ್ತಾನೆ..  ಇತ್ಯಾದಿ. ಈ ಕಾಮನ್ ಸೆನ್ಸ್ ಈಗೀಗ ಮನುಷ್ಯನಲ್ಲಿ ಅಷ್ಟು ಕಾಮನ್ ಆಗಿ ಕಾಣಿಸುತ್ತಿಲ್ಲ ಅನ್ನೋದೇ ವ್ಯಂಗ್ಯ, ಕಾಮನ್ ಸೆನ್ಸ್ ಕಡಿಮೆ ಆಗಿ ಮನುಷ್ಯನಿಗೂ, ಪ್ರಾಣಿಗಳಿಗೂ ವ್ಯತ್ಯಾಸದ ಗೆರೆ ಮಬ್ಬಾಗಿ ಹೋಗುತ್ತಿದೆ. ಕೆಲ ಸಮಯದ ನಂತರ ಇವನು ಮನುಷ್ಯ, ಇದು ಪ್ರಾಣಿ ಅನ್ನೋಕೆ ಪುರಾವೆಗಳೇ ಇಲ್ಲದಂತಾಗಬಹುದು, ಆಗ ಗೊತ್ತಿರದೇ ತಪ್ಪು ಮಾಡುವುದು ಪ್ರಾಣಿಗಳು, ಗೊತ್ತಿದ್ದೂ ತಪ್ಪು ಮಾಡುವವನು ಮಾನವ ಅನ್ನುವ ಒಂದೇ ಒಂದು ಬೈಫರ್ಕೆಶನ್ ಉಳಿದುಹೋಗುತ್ತದೆ. ಈ ಕಾಮನ್ ಸೆನ್ಸ್ ಅಂತಂದ್ರೆ ತುಂಬಾ ದೊಡ್ಡ ಕೊಡೆ, ಅದರಡಿ ಬಹಳಷ್ಟು ವಿಚಾರಗಳು ಇವೆ, ನಾನು ಹೇಳ ಹೊರಟಿರೋದು ನಮ್ಮ ದಿನ ನಿತ್ಯದ ಜೀವನದಲ್ಲಿ ನಾವು ಕಾಣುವ ಒಂದು ಬಹುದೊಡ್ಡ ಮೂರ್ಖತನದ ಬಗ್ಗೆ, ಅದುವೇ ಹಾರ್ನ್ ಮಾಡುವ ಚಟ! ಇದರಿಂದ ಆಗುವ ಕಿರಿಕಿರಿ, ಅಸಹ್ಯ, ಹಿಂಸೆಗಳು ಯಾವ ದೊಡ್ಡ ಗ್ಲೋಬಲ್ ವಾರ್ಮಿಂಗ್  ಗಿಂತ ಏನು ಕಮ್ಮಿ ಇಲ್ಲ ಅನ್ನುವುದು ಬುರುಡೆದಾಸನ ಉವಾಚ, ಕೇಳ್ಕಳಿ.

ದೇವರು ಕೊಟ್ಟ ಕಣ್ಣುಗಳಿಗೆ ರಸ್ತೆಯುದ್ದಕ್ಕೂ ಆದ ಟ್ರಾಫಿಕ್ ಜಾಮ್ ಕಾಣಿಸುತ್ತಿರುತ್ತದೆ, ಜನ ಅಸಹಾಯಕರಾಗಿ ಕಾಯುತ್ತ ನಿಂತಿರುತ್ತಾರೆ, ಎಲ್ಲರಿಗೂ ಮನೆಗೆ-ಕೆಲಸಕ್ಕೆ ಹೋಗುವ ಅವಸರವೇ, ಯಾರಿಗೂ ರೋಡಲ್ಲೇ ಇರುವ ವಿಚಾರವಿಲ್ಲ, ಆದರೂ ಹಾರ್ನ್ ಮಾಡಿ ಸಾಯುವವರು ನಮ್ಮಲ್ಲಿ ಎಷ್ಟು ಜನರಿಲ್ಲ. ಟ್ರಾಫಿಕ್ ಸಿಗ್ನಲ್ ನಲ್ಲಿ ಎಲ್ಲರೂ ಹಸಿರು ಬಿದ್ದರೆ ಹೋಗಲೆಂದೇ ನಿಂತಿರುತ್ತಾರೆ, ಯಾರಿಗೂ ಸಿಗ್ನಲ್ ನಲ್ಲಿ ನಿಲ್ಲುವ ಹಪಾಪಿಯಿಲ್ಲ, ಅಷ್ಟಾಗಿಯೂ ಸಿಗ್ನಲ್ ಬಿಡುವ ಮುನ್ನವೇ ಹಾಂಕಿಂಗ್ ಶುರು! ಆಂಬುಲೆನ್ಸ್ ಶಬ್ದ ಮಾಡಿಕೊಂಡೇ ಬರುವುದು, ಜಗತ್ತಿಗೇ ಅದು ಕೇಳಿಸಿದರೂ ಅದಕ್ಕೆ ಅಡ್ಡ ನಿಂತು ಮುಂದಿನವಗೆ ಹಾರ್ನ್ ಮಾಡಿ ಸೈಡ್ ಬಿಡು ಅಂತ ಹೇಳುವರು ಎಷ್ಟಿಲ್ಲ, ಎಲ್ಲರೂ ಹಾರ್ನ್ ಮಾಡಿ ಮಾಡಿ ಕಡೆಗೆ ಆಂಬುಲೆನ್ಸ್ ಶಬ್ದವೇ ಕೇಳದಂತಾಗುತ್ತದೆ. ವಯ್ಯಸ್ಸಾದವರು ಅಡ್ಡ ಬಂದರೆ ಹಾರ್ನ್, ಟರ್ನಿಂಗ್ ಬಂದರೆ ಹಾರ್ನ್, ಹಸು ಅಡ್ಡ ನಿಂತರೆ ಹಾರ್ನ್, ಕಲ್ಲು ಅಡ್ಡ ಸಿಕ್ಕರೂ ಹಾರ್ನ್. ಉಸಿರು ಎಳೆದರೆ ಹಾರ್ನ್, ಉಸಿರು ಬಿಟ್ಟರೆ ಹಾರ್ನ್!! ಅಬ್ಬಬ್ಬಾ! ಯಾಕಿಷ್ಟು ಬಡ್ಕೊಳೋದು ನಾವು?? ಯಾಕೆ ಇಷ್ಟು ಹೆದರಿಕೆ, ಸಿಟ್ಟು, ಅವಸರ ನಮಗೆ? ತಲೇಲಿ ಏನೇ ವಿಷಯ ಇದ್ದರೂ, ಕಣ್ಣ ಮುಂದೆ ಏನೇ ಕಂಡರೂ ನಮ್ಮ ಕೈ ಹೋಗೋದು ಹಾರ್ನ್ ಬಟನ್ ಗೆ, ನಮ್ಮ ಮೆದುಳಿನಲ್ಲಿ ಅದ್ಹೇಗೆ ಈ ಅಭ್ಯಾಸ ಪ್ರೋಗ್ರಾಮ್ ಆಗಿದ್ದು?  ಕರ್ಕಶವಾಗಿ, ಅಷ್ಟು ಜೋರಾಗಿ ಶಬ್ದ ಮಾಡಿ ನಮಗೆ ಹೇಳಬೇಕಾದದ್ದೇನು ಇದೆ? ತುಸು ತಾಳ್ಮೆ, ಶಿಸ್ತಿನಿಂದ ಹೇಳಿದರೆ ಆಗದೇ? ಇಷ್ಟು ಇನ್ಸೆಕ್ಯೂರಿಟಿ ಯಾಕೆ ನಮಗೆ? ಹೌದು! ಯೋಚಿಸಿ ನೋಡಿದರೆ ಹಾರ್ನ್ ಮಾಡುವಾಗ, ಹಾರ್ನ್ ಮಾಡುವವನು ಆ ಕ್ಷಣಕ್ಕೆ ಮಾನಸಿಕವಾಗಿ ಇನ್ಸೆಕ್ಯೂರ್ಡ್ ಫೀಲ್ ಮಾಡುತ್ತಾ ಇರುತ್ತಾನೆ, ಅಭದ್ರ ಭಾವದಿಂದ ಏನು ಮಾಡಲೆಂದು ತೋಚದೇ ಕೈ ಹಾರ್ನ್ ಬಟನ್ ಗೆ ಹೋಗುತ್ತದೆ, ಆ ಕರ್ಕಶ ಶಬ್ದದಿಂದ ಅವನಿಗೇನೋ ಒಂದು ಸಮಾಧಾನ. ಸಮಸ್ಯೆ ಬಗೆ ಹರಿಯಿತೋ ಇಲ್ಲವೋ ಗೊತ್ತಿಲ್ಲ ಆದರೆ ಆ ಕ್ಷಣಕ್ಕೆ ಆ 'ಹಾರ್ನಿಗ' ತನ್ನ ಶಬ್ದವನ್ನ ಮಾಡಿ ವಿರಾಳನಾಗುತ್ತಾನೆ. ಇದೊಂಥರ ಡ್ರಗ್ಸ್ ಸೇವಿಸಿದಂಗೆ, ಎಲ್ಲದಕ್ಕೂ ಡ್ರಗ್ಸ್ ಸೇವನೆಯೇ ಉತ್ತರ ಅಂತ ತಿಳಿದು ಅದಕ್ಕೆ ಅಡಿಕ್ಟ್ ಆಗೋ ಡ್ರಗ್ ಅಡ್ದಿಕ್ಟ್ಸ್ ಗಳ ಹಾಗೆ ರಸ್ತೆ ಮೇಲಿರೋ ಕಲ್ಲು, ಮಣ್ಣು, ನಾಯಿ, ನರಿ, ಕಾರುಗಳಿಗೂ ಹಾರ್ನ್ ಒಂದೇ ಉತ್ತರ ಅಂತ ಅಡಿಕ್ಟ್ ಆಗಿರುವುದು. ತನ್ನ ಡ್ರೈವಿಂಗ್ ನ ಮೇಲೆ ಪೂರ್ತಿ ನಂಬಿಕೆ ಇರುವವ ಜಾಸ್ತಿ ಹಾರ್ನ್ ಮಾಡುವುದಿಲ್ಲ, ಅರ್ಧ-ಮರ್ಧ  ಡ್ರೈವಿಂಗ್ ಮಾಡಿಕೊಂಡು ಹೆದರುತ್ತ ಓಡಿಸುವವನೇ ಜಾಸ್ತಿ ಶಬ್ದ ಮಾಡುವುದು, ಮಾನಸಿಕವಾಗಿ ಅನ್ಸ್ಟೇಬಲ್ ಆಗಿ ತನ್ನ ಮೇಲಿನ ಕಂಟ್ರೋಲ್ ತಾನೇ ಕಳೆದುಕೊಳ್ಳುವವ ರಸ್ತೆ ಮೇಲೆ ಎಲ್ಲರನ್ನೂ ಬೈದುಕೊಂಡು, ಹಾರ್ನ್ ಮಾಡಿಕೊಂಡುಸಾಗುವವರು ಬೆಂಗಳೂರಿನಲ್ಲಿ ಲಕ್ಷದಷ್ಟು. ನಮ್ಮ ಕ್ಯಾಬ್ ಡ್ರೈವರ್ ನ ಹತ್ರ ಮೂರು ಬಗೆಯ ಹಾರ್ನ್ ಗಳಿವೆ, ಅವನಿಗೆ ಅದು ಪ್ರತಿಷ್ಠೆಯ ವಿಷಯ, 'ಸಾರ್! ಇದು ನೋಡಿ ಸಾರ್ ಈಗ, ಹೆಂಗೆ ಸೈಡ್ ಹೋಗ್ತಾರೆ ನನ್ ಮಕ್ಳು' ಅಂತ ನಗಾಡಿಕೊಂಡೇ ಶ್ರಿಲ್ ಹಾರ್ನ್ ಮಾಡಿ ಜನರನ್ನು ಬೆಚ್ಚಿ ಬೀಳಿಸುತ್ತಾನೆ. ನಿದ್ದೆಯಲ್ಲಿದ್ದ ಎಲ್ಲ ಎಂಪ್ಲಾಯೀ ಗಳು ಸಹ ಶಬ್ದಕ್ಕೆ ಬೆಚ್ಚಿ ಎಚ್ಚರವಾಗುತ್ತಾರೆ. ಅಪ್ಪಾ! ಆ ಹಾರ್ನ್ ಮಾಡಬೇಡ, ಸ್ವಲ್ಪ ತಾಳ್ಮೆಯಿಂದ ನೋಡಿಕೊಂಡು ಹೋಗು, ಐದು ನಿಮಿಷಾ ಲೇಟ್ ಆದ್ರೆ ಏನಾಗುವುದಿಲ್ಲ ಅಂತ ನಾವು ಹೇಳಿದರೆ, ಸಾರ್ ಹಂಗಾದ್ರೆ ನೀವು ಮನೆ ಮುಟ್ಟಿದಂಗೆ ಸುಮ್ನಿರಿ ಅಂತ ಹೇಳಿ ನಗ್ತಾನೆ, ಕಿವಿಯಿರದ ವಾದ್ಯಕ್ಕೆ ಹಾಡಿದ್ದೆಲ್ಲ ಸೊಗಡು ಅಂತಾ ಸುಮ್ಮನಾದೆವು. ಈ ಹಾರ್ನ್ ಬಳಕೆಯ ಬಗ್ಗೆಯೇ ಕಂಪನಿಯ ಸಾರಿಗೆ ಇಲಾಖೆಗೆ ದೂರು ನೀಡಿ ನೋಡಿದ್ವಿ, ಹೇಳ್ತಿವಿ, ಮಾಡ್ತಿವಿ ಅಂತ ಹೇಳಿ ನಿರ್ಲಕ್ಷಿಸಿದರೇ ವಿನಃ ಅದನ್ನ ಅಡ್ರೆಸ್ ಮಾಡಲಿಲ್ಲ. ಸಾವಿರ ದೂರುಗಳಿವೆ ಸಾರ್, ಇದೂ ಒಂದು ಮ್ಯಾಟರ್ ನಾ? ಅಂತ ಒಬ್ಬ ಇಲಾಖೆಯ ಮೆಂಬರ್ ಹೇಳಿದ್ದನ್ನು ಕೇಳಿ ಮಾತೇ ಬರಲಿಲ್ಲ.                 

ಹೊರದೇಶಗಳಲ್ಲಿ ಹಾರ್ನ್ ಪದ್ಧತಿ ತೀರಾ ವಿರಳ, ತುಂಬಾ ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಹಾರ್ನ್ ಮಾಡಿ ಸಂಪರ್ಕಿಸಲಾಗುತ್ತದೆ. ವಿದೇಶಿಯರು ಭಾರತಕ್ಕೆ ಬಂದು ಹೋದರೆ ಅವರು ಭಾರತದ ಬಗ್ಗೆ ಮಾಡುವ ಎಲ್ಲಕಿಂತ ದೊಡ್ಡ ದೂರೆಂದರೆ ನಮ್ಮ ಜನರ 'ಹಾರ್ನ್ ಮಾಫಿಯಾ' ಬಗ್ಗೆಯೇ. ಇಡೀ ಜಗತ್ತಿಗೆ ಶಾಂತಿ ಸಂದೇಶ ನೀಡಿದ ಭಾರತದ ಮಕ್ಕಳೇ ಈ ಲೆವೆಲ್ ಗೆ ಹಾರ್ನ್ ಮಾಡಿ ಸಾಯ್ತಾರಲ್ಲ ಅಂತ ಒಬ್ರು ಯಾರೋ ಕೇಳಿದ್ರೆ, ದೇಶಕ್ಕೆ ತಂದೆ ಆದೋರು ಸ್ವಂತ ಮಗನಿಗೆ ಆಗಲ್ಲಿಲ್ಲ, ಮೇಷ್ಟ್ರ ಮಕ್ಕಳೇ ಬನ್ನಿ ಪೋಲಿಗಳಾಗೋದು ಅಂತ ಉತ್ತರ ಕೊಟ್ರಂತೆ, ಹಂಗಾಯ್ತು ಕಥೆ. ಕೆಲ ಕಡೆ ಹಾರ್ನ್ ಅನ್ನು ಅಫೆನ್ಸಿವ್ ಆಗಿ ನೋಡಲಾಗುತ್ತದೆ, ಯಾರಾದರೂ ಹಾರ್ನ್ ಮಾಡಿದರೆ ಅದು ಯಾರದ್ದೋ ತಪ್ಪಿನಿಂದ ಎಂದು ಅಸಹ್ಯವಾಗಿ ಕಾಣಲಾಗುತ್ತದೆ , ಒಬ್ಬನಿಗೆ ಹಾರ್ನ್ ಮಾಡಿದರೆ ಅವನು ಹಾರ್ನ್ ಮಾಡಿದವಗೆ ಕ್ಷಮೆ ಕೇಳುವಷ್ಟು ನಾಗರೀಕತೆ. ನಮ್ಮಲ್ಲಿ ಹಾರ್ನ್ ಎನ್ನುವುದು ತೀರಾ ಸಾಮಾನ್ಯವಾದ ವಿಷಯ, ನಮ್ಮಲ್ಲಿ ನಾಗರೀಕತೆ, ಶಿಸ್ತು, ಗೌರವಗಳು ಅಷ್ಟು ಆ-ಸಾಮಾನ್ಯ! ನಮ್ಮ ಮುಂದೆ ಒಬ್ಬ ನಿಂತಿದ್ದಾನೆ ಅಂತಾದರೆ ಅವನೂ ಸಹ ಸ್ಟಕ್ ಆಗಿರಬಹುದು, ತಿಳಿದುಕೊಳ್ಳೋಣ ಅಂತಾಗಲಿ, ಸಿಗ್ನಲ್ ಬಿಟ್ಟ ಮೇಲೆ ಎಲ್ಲರೂ ಹೋಗೋದೇ, ಎರಡು ಸೆಕೆಂಡ್ ಕಾಯೋಣ ಅಂತಾಗಲಿ, ಹಾಸ್ಪಿಟಲ್ ಗಳು, ಸ್ಕೂಲ್ ಗಳು, ಮಾರ್ಕೆಟ್ ಗಳು ಇದ್ದಲ್ಲೆಲ್ಲ ಹಾರ್ನ್ ಹಾಕದೇ ಟ್ರಾಫಿಕ್ ಅನ್ನು ಅರ್ಥ ಮಾಡಿಕೊಂಡು ಹೋಗೋದಾಗಲಿ ನಾವು ಕಲಿಯಬೇಕಿದೆ. ಎಲ್ಲ ಕುರಿಗಳೂ ಬ್ಯಾ ಅಂದಾಗ ನಂದೂ ಒಂದಿರಲಿ ಅಂತ ಬ್ಯಾ ಅನ್ನೋ ಡ್ರೈವರ್ ಗಾಲೆ ಊರಲ್ಲಿ. ಸಿಕ್ಕಾಪಟ್ಟೆ ಸದ್ದು ಮಾಡುವ 'ಶ್ರಿಲ್ ಹಾರ್ನ್' ಗಳನ್ನ ಪೊಲೀಸರು ಬ್ಯಾನ್ ಮಾಡಿದರೂ ಸಹ ಅದನ್ನೇ ಗಾಡಿಗೆ ಸಿಕ್ಕಿಸಿಕೊಂಡು ಎಲ್ಲರಿಗಿಂತ ಜಾಸ್ತಿ ನಾನು ಒದರುತ್ತೇನೆ ಅಂತ ಬರ್ತಾರೆ, ಬೈಕ್ ಗಳಿಗೆ ಯಾವುದ್ಯಾವುದೋ ಎಂಜಿನ್ ಸೌಂಡ್  ಹಾಕಿಸಿ ನಡುರಾತ್ರಿಗಳಲ್ಲಿ ಗರ್! ಅಂತ ಹೋಗ್ತಾರೆ, ಪ್ಯಾಸೆಂಜರ್ ಟೆಂಪೋ-ವ್ಯಾನ್ ಗಳಲ್ಲಿ ಬೋಸ್ ಸ್ಪೀಕರ್ ಗಳಲ್ಲಿ ಜೋರಾಗಿ  ಹಾಡುಗಳನ್ನ ಹಾಕೊಂಡು ಹಿಂದೆ ಬಡಿದುಕೊಳುವವನ ಶಬ್ದ ಕೇಳದೇ  ಜೋರಾಗಿ ಮುಂದಿನವಗೆ ಹಾರ್ನ್ ಮಾಡುತ್ತಾರೆ, ಸಿಟ್ಟಿಗೂ ಹಾರ್ನ್ , ಲಿಫ್ಟಿಗೂ ಹಾರ್ನ್. ದೇವರು ಒಂದಿನ ಬೆಂಗಳೂರಿನ ಎಲ್ಲ  ಗಾಡಿಗಳ ಹಾರ್ನ್ ಗಳನ್ನೂ ಆಫ್ ಮಾಡಿದ್ದೇ ಆದರೆ ಈ ಹಾರ್ನ್ ಅಡಿಕ್ಟ್ ಗಳೆಲ್ಲ ಬೋರ್ ಆಗಿಯೇ ಸತ್ತು ಹೋಗುತ್ತಾರಾ ಅಂತ?

ದೀಪಾವಳಿಗೆ ಪಟಾಕಿ ಬ್ಯಾನ್ ಮಾಡಿ ಅಂತ ಬಡ್ಕೊಳೋ ಸರ್ಕಾರ ಈ ಸಮಸ್ಯೆಯ ಬಗ್ಗೆಯೂ ಸ್ವಲ್ಪ ಯೋಚನೆ ಮಾಡಿದ್ದರೆ ಒಳ್ಳೇದಿತ್ತು, ಟ್ರಾಫಿಕ್ ಪೇದೆಗಳಿಗೆ ಹಾಂಕಿಂಗ್ ನ ಬಗ್ಗೆ ಜಾಸ್ತಿ ಸ್ಟ್ರಿಕ್ಟ್ ಆಗಲು ಹೇಳಿ, ಕಿಕ್ಕಿರಿಯುವ ಸಿಗ್ನಲ್ ಗಳಲ್ಲಿ ಹಾರ್ನ್ ಸೌಂಡ್ ಚೆಕಿಂಗ್ ಮಾಡಿ, ದಂಡ ವಿಧಿಸಿ, ಡ್ರೈವಿಂಗ್ ಲೈಸೆನ್ಸ್ ಕೊಡುವಾಗ ಚಾಲಕರಿಗೆ ಹಾರ್ನ್ ನ ಕಿರಿಕಿರಿಗಳ ಬಗ್ಗೆ ಹಾಗು ಹೆಡ್ ಲೈಟ್ ಪ್ಲಾಶಿಂಗ್/ಬ್ಲಿಂಕಿಂಗ್ ನಂತಹ  ಪರ್ಯಾಯ ಅಭ್ಯಾಸಗಳ ಬಗ್ಗೆ ತಿಳಿಹೇಳಿ ಕೊಡಬಹುದು. ಈಗಿನ ಬೆಂಗಳೂರಿನ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ನೋಡಿದರೆ  ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಹೋಗಲಾಡಿಸುವುದು ತುಂಬಾ ಕಷ್ಟ, ಆದರೆ ಕನಿಷ್ಠ ಪಕ್ಷ ಹಾರ್ನ್ ಪದ್ಧತಿ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಬಹುದು. ಈ ಹಾಂಕಿಂಗ್ ಅಡ್ಡಿಕ್ಷನ್ ನಿಂದ ಹೊರಬರಲು ನಾವೆಲ್ಲರೂ ಜಾಸ್ತಿ ಕಷ್ಟಪಡಬೇಕಾಗಿಲ್ಲ, ಇವತ್ತೊಂದಿನ  ಹಾರ್ನ್ ಮಾಡದೇ ಗಾಡಿ ಓಡಿಸಿ ನೋಡುತ್ತೇನೆ ಎಂದುಕೊಂಡು ಗಾಡಿ ಈಚೆ ತೆಗೆದರೆ ಆಯಿತು. ಒಂದು ದಿನದಿಂದ ಆದ ವ್ಯತ್ಯಾಸ, ಸಿಕ್ಕ ಸಮಾಧಾನ, ಕಲಿತ ತಾಳ್ಮೆ ಯಿಂದ ನಮ್ಮ ಪ್ರಯಾಣ ಎಷ್ಟು ಸುಖಕಾರವಾಗಿತ್ತು ಅಂತ ಅನಿಸದೇ ಇರದು. ನಾಯಿಗಳಂತೆ ರೋಡಿನಲ್ಲಿ ಒಟ್ಟಾಗಿ ಸೇರಿಕೊಂಡು ಬೊಗಳದೇ, ಮನುಷ್ಯರಂತೆ ಟ್ರಾಫಿಕ್ ಅರ್ಥ ಮಾಡಿಕೊಂಡು ಮೂವ್ ಮಾಡಿದಾಗ ಆಗುವ ಒಂದು ಜವಾಬ್ದಾರಿಯ ಅನುಭವ ಬೇರೆಯದ್ದೇ, ಒಮ್ಮೆ ಟ್ರೈ ಮಾಡಿ!       


Thursday, November 16, 2017

ಶಿವಪೂಜೆಯಲ್ಲಿ ಕರಡಿ ಬಿಟ್ಟವರಾರು?



ಜನ ಸೀತೆಯ ಪವಿತ್ರತೆಯನ್ನು ಪ್ರಶ್ನಿಸಿದಾಗ ಸೀತೆ ಆಫೆಂಡ್ ಆಗಲಿಲ್ಲ, ರಾಮ ಅವಳನ್ನ ಡಿಫೆಂಡ್ ಕೂಡ ಮಾಡಲಿಲ್ಲ. ಬದಲಿಗೆ ಒಂದು ಏಕ್ಸಾಮ್ ಏರ್ಪಡಿಸಿ ಊರಿಗೆಲ್ಲಾ ಕನ್ವೀನ್ಸ್ ಮಾಡಲಾಯಿತು. ನಾನು ಇದರಿಂದ ಬರಹ ಶುರು ಮಾಡಿದಾಗ ಮನಸಲ್ಲಿ ಸಾವಿರ ಪ್ರಶ್ನೆಗಳು, ರಾಮ ಮಾಡಿದ್ದು ಸರಿಯೇ? ಸೀತೆ ಅದ್ಯಾರೋ ಹಾಕಿದ ಚಾಲೆಂಜ್ ಒಪ್ಪಿಕೊಂಡು ಪರೀಕ್ಷೆಗೆ ಕುಳಿತಿದ್ದು ಸರಿಯೇ? ಅಷ್ಟೊಂದು ಜನ ಆಡಿಯನ್ಸ್ ನಡೆದುಕೊಂಡ ರೀತಿ ಸರಿಯೇ? ಅಷ್ಟೆಲ್ಲ ಯುದ್ಧ, ಧರ್ಮ-ಅಧರ್ಮಗಳ ಟ್ರಾಶ್-ಟಾಕ್ ಆದಮೇಲೆ ಇಂಥಾ ಒಂದು ಪ್ರೋಗ್ರಾಮ್ ಆ ದೊಡ್ಮನೆ ಫ್ಯಾಮಿಲಿಗೆ ಬೇಕಾಗಿತ್ತೇ? ಮುಖ್ಯವಾಗಿ ಬೇರೆಯವರ ಫ್ಯಾಮಿಲಿ ಮ್ಯಾಟರ್ ನಲ್ಲಿ ಮೂಗು ತೋರಿಸೋ ಚೇಷ್ಟೆ ನನಗೀಗ ಬೇಕಾಗಿತ್ತೇ? ಅಂತ.

ಈ ಘಟನೆಯ ಮೂಲವೇ ಒಂದು ಪ್ರಶ್ನೆ, ಅಂತ್ಯವೂ ಪ್ರಶ್ನೆಗಳಲ್ಲೇ. ನನ್ನ ಕೆಲ ಪ್ರಶ್ನೆಗಳು ಇತ್ತೀಚಿಗೆ ನನಗೆ ಇರುಸು ಮುರುಸುಗಳಿಗೆ ಈಡು ಮಾಡಿದಾಗ ನನಗೆ ಈ ಬರಹದ ಯೋಜನೆ ಹೊಳೆದಿರಬಹುದು. ಉದಾಹರಣೆಗೆ, ಈಗಲೂ ಸಭೆ ಸಮಾರಂಭಗಳಲ್ಲಿ ಮೋದಿಯವರು ಕಾಂಗ್ರೆಸ್, ರಾಹುಲ್ ಗಾಂಧಿ ಅಂತ ಬೈದುಕೊಳ್ಳೋದು ಎಷ್ಟು ಸರಿ? ಅದೆಲ್ಲ ದಾಟಿ ಅವರೀಗ ಬರೀ ಬಿಜೆಪಿ ನಾಯಕರಾಗಿರದೇ ನಮ್ಮ ದೇಶದ ಸನ್ಮಾನ್ಯ ಪ್ರಧಾನಿಯಾಗಿ ಬೆಳೆದಿಲ್ಲವೇ? 'ಥೂ! ಇಷ್ಟೊಳ್ಳೆ  ಪ್ರಧಾನಮಂತ್ರಿ ಸಿಕ್ಕಿದ್ದೇ ಪುಣ್ಯ, ಅಂಥವರನ್ನೂ ಪ್ರಶ್ನೆ ಮಾಡ್ತೀರಲ್ಲೋ' ಅಂತ ನನ್ನ ಸ್ನೇಹಿತ ಸಿಟ್ಟಾಗಿ ಎದ್ದುಹೋದ. ಹಿಂದೊಮ್ಮೆ, ಇಂದಿರಾ ಕ್ಯಾಂಟೀನ್ ಹೇಗೆ ನಡೆಯುತ್ತದೆ, ಅದಕ್ಕೆ ಎಷ್ಟು ಖರ್ಚಾಯ್ತು, ಎಲ್ಲಿಂದ ದುಡ್ಡು ಬಂತು, ಈ ಐಡಿಯಾ ನಮಗೆ ಎಷ್ಟು ಬೇಕಿತ್ತು ಅಂತ ಕೇಳಿದಾಗ, 'ಬಡವರಿಗೆ ತುತ್ತು ಅನ್ನ ಹಾಕೋ ಕಾರ್ಯಕ್ಕೂ ಪ್ರಶ್ನೆ ಹಾಕ್ತೀರಲ್ಲೋ' ಅಂತ ಟ್ವಿಟ್ಟರಿನಲ್ಲಿ ಯಾರೋ ರೇಗಿದ್ರು. ಭಾರತದಲ್ಲೇಕೆ ಅಷ್ಟು ಸ್ಲಂ ಗಳಿವೆ ಅಂತ ನನ್ನ ಅಮೆರಿಕೆಯ ಸಹೋದ್ಯೋಗಿ ನನ್ನನ್ನು ಕೇಳಿದಾಗ, 'ಭಾರತದ ಸಂಸ್ಕೃತಿ, ಪದ್ಧತಿ, ಇತಿಹಾಸ ಗೊತ್ತಿಲ್ದೇ ಏನೇನೋ ಕೇಳ್ಬೇಡ. ನಿಮ್ಮ ದೇಶದಲ್ಲೆಷ್ಟು ಸುರಕ್ಷತೆ, ಶಿಸ್ತು ಇದೆ ಅಂತ ಮಾತಾಡ್ತಿ ನೀನು?'  ಅಂತ ನಾನು ಏನೇನೋ ತಡವರಿಸಿದ್ದೆ. ನಮ್ಮಲ್ಲಿ ಇಷ್ಟೊಂದು ದೇವರು ಯಾಕೆ? ಶಿವ ಕಾಮನ್ನ ಗೆದ್ದ ಅಂತಂದ್ರೆ ಶಿವನಿಗೆ ಹೇಗೆ ಎರಡು ಮಕ್ಳು? ಜಾತಿ ಬಿಡಿ ಅಂತ ಬಡ್ಕೊಂಡ ಬಸವಣ್ಣನ ಹೆಸರಲ್ಲೇ ಯಾಕೆ ಇಷ್ಟೊಂದು ಜಾತಿಗಳು? ಅಂತ ಅವಾಗೆಲ್ಲ ನಾನು ನಮ್ಮಪ್ಪನ್ನ ಕೇಳಿದ್ರೆ ನಮ್ಮಪ್ಪ, 'ಈಸಾರಿನಾದರೂ ಒಳ್ಳೆ ಮಾರ್ಕ್ಸ್ ಬರತ್ತೋ?', 'ನಿನ್ನ ಸ್ಯಾಲರಿ ಹೆಚ್ಚಾಯ್ತೋ ಅಥವಾ ಇನ್ನ ಅಷ್ಟೇ ಇದೆಯೋ?' ಅಂತ ಮರುಪ್ರಶ್ನೆ ಹಾಕಿ ನನ್ನ ಬಾಯಿ ಮುಚ್ಚಿಸಿದ್ದರು.

ಈ ಪ್ರಶ್ನೆ ಮಾಡುವ ಅಭ್ಯಾಸ, ಸಿಕ್ಕ ಸಿಕ್ಕಿದ್ದನ್ನು ಪ್ರಶ್ನೆ ಮಾಡೋದು, ಎಲ್ಲಾನೂ ಪ್ರಶ್ನೆಗಳ ತರ್ಕಕ್ಕೆ ಹಿಡಿದು ನೋಡುವುದು ಎಷ್ಟು ಸರಿ?, ಇದು ಪ್ರಶ್ನೆ! 

ಸೀತೆ ಅಗ್ನಿಪರೀಕ್ಷೆ ಎಪಿಸೋಡ್ ನಲ್ಲಿ ರಾಮ, 'ನೀವು ಯಾರೋ ನಮ್ ಹುಡುಗೀನಾ ಪ್ರಶ್ನೆ ಮಾಡೋಕೆ? ನಾನ್ ರಾಜ ಆಲ್ವಾ, ನಮ್ಮಪ್ಪ ಬೇಜಾನ್ ಮಾಡಿಟ್ಟೋರೆ, ನಾನು ಹೇಳಿದಂಗೆ ಎಲ್ಲಾ ನಡೀಬೇಕ್! ಪ್ರಶ್ನೆ ಕೇಳೋರೆಲ್ಲ ಬ್ಯಾನ್ ಆಬೇಕ್!' ಅಂತ ಹುಚ್ಚ ವೆಂಕಟ್ ಡೈಲಾಗ್ ಬಿಡ್ಲಿಲ್ಲ.
ಕುರುಕ್ಷೇತ್ರದಲ್ಲಿ ಅರ್ಜುನ, ನಾನು ಯಾಕೆ ಯುದ್ಧ ಮಾಡಬೇಕು, ನಂಗೆ ಬೋರ್ ಆಗತ್ತೆ ಇದೆಲ್ಲ ಅಂತ ಕೇಳಿದಾಗ ಕೃಷ್ಣ,  'ಅಪ್ಪಾ ಬೇಜಾನ್ ಕೆಲಸಗಳಿವೆ ನಂಗೆ, ಹೇಳಿದಷ್ಟು ಮಾಡಪ್ಪ ನೀನು' ಅಂತ ಹೇಳಲಿಲ್ಲ. ಬದಲಾಗಿ ಹೆವೀ ಫಿಲಾಸಫಿಕಲ್ ಆಗಿ ಗೀತೆನ ಒಂದೇ ಉಸಿರಲ್ಲಿ ಹೇಳಿಬಿಟ್ಟ. ಅದನ್ನೇ ಇಸ್ಕಾನ್ ದವರು ಈಗ ಐಫೋನ್ ಥರ ಹೊಸ ಹೊಸ ವರ್ಷನ್ ಅಪ್ಡೇಟ್ ಮಾಡಿ ಮಾರ್ಕೆಟ್ ಗೆ ಬಿಡ್ತಾ ಇರೋದು. ಅಂಥ ಮಹಾನುಭಾವರುಗಳೇ ಪ್ರಶ್ನೆಗಳನ್ನ ಸ್ವೀಕರಿಸಿ ಅದಕ್ಕೆ ತಕ್ಕ ಉತ್ತರಗಳ ಹುಡುಕಾಟದಲ್ಲಿ ತೊಡಗಿಕೊಂಡಾಗ, ಯಕಶ್ಚಿತ್ 'ಹುಳು ಮಾನವ'ರಾದ ನಾವೇಕೆ ಆಫೆಂಡ್ ಆಗ್ತೀವಿ ಪ್ರಶ್ನೆಗಳಿಂದ?

ಸಿನಿಮಾಗಳಲ್ಲಿ ರಾಷ್ಟ್ರಗೀತೆಯ ಕಡ್ಡಾಯದ ಬಗ್ಗೆ ಕೇಳಿದರೆ ಕಾಂಟ್ರವರ್ಸಿ. ಹಿಂದಿ ಭಾಷಾ ಹೇರಿಕೆಯ ವಿರುದ್ಧ ಮಾತಾಡಿದರೆ ಕಾಂಟ್ರವರ್ಸಿ. ಮೀಸಲಾತಿ, ನೂರು- ಮತ್ತೊಂದು-ಭಾಗ್ಯ, ಧಾರ್ಮಿಕ ಸಬ್ಸಿಡಿಗಳ ರಾಜಕೀಯಗಳ ಬಗ್ಗೆ ಕೇಳಿದರೆ ಒಂದು. ಆಜಾನ್ ಸೌಂಡು, ದೇವಸ್ಥಾನದ ಸ್ಪೀಕರ್ ಸೌಂಡಿಗೆ ಲೊಚಗುಟ್ಟಿದರೆ ಮತ್ತೊಂದು. ಪರಿಹಾರ ನಿಧಿಯ ಲೆಕ್ಕ ಏನಾಯ್ತು? ಈ ಮೂರ್ತಿ ಯಾಕೆ ಬೇಕಿತ್ತು? ಆ ಜಯಂತಿಯಿಂದ ಏನು ಪ್ರಯೋಜನ? ಎಂದು ಕೇಳು ಕೇಳುತ್ತಲೇ ಗಲಭೆಗಳು, ಹೊಡೆದಾಟಗಳು. 

ಈ 'ಪ್ರಶ್ನೆ'ಗಳಿಂದ ಯಾಕೆ ಇಷ್ಟೊಂದುಮುನಿಸು ನಮಗೆ? ಪ್ರಶ್ನೆಗಳೇ ಜ್ಞಾನದ ದಾರಿ ಅಂತ ಹೇಳೋ ಗುರುಗಳು, ಮೌಲವಿಗಳನ್ನು ಚರ್ಚೆಗಳಿಗೆ ಕೂರಿಸಿದರೆ ಅವರು ಆಫೆಂಡ್ ಆಗಿ ಮಂಗನಂತೆ ಆಡುವುದನ್ನು ನೋಡಿ ಮುಜುಗರ ಆಗುತ್ತದೆ. ಅದರ ಜೊತೆಯಲ್ಲೇ 'ನಾನು ಗುರು' ಅಂತಾ ಹೇಳಿಕೊಳ್ಳುವ ಇವರೆಲ್ಲ ಅದ್ಹೇಗೆ ಗುರು ಆಗ್ತಾರೆ? ಅಂತ ಮತ್ತೊಂದು ಪ್ರಶ್ನೆ ಬರುತ್ತದೆ. ನಾನು ರಾಜ ಅಂತ ಹೇಳ್ಕೊಳೋನು ರಾಜನೇ ಅಲ್ಲ ಅಂತ ಎಲ್ಲೋ ಓದಿದ ನೆನಪು.

ಜ್ಞಾನದ ಮರ ಅಂತೇನಾದ್ರೂ ಒಂದಿದ್ರೆ ಅದರ ರೆಂಬೆ-ಕೊಂಬೆಗಳೇ ಪ್ರಶ್ನೆಗಳು, ಅವುಗಳ ಮೇಲೆ ಅರಳೋ ಎಲೆ ಹೂವುಗಳೆಲ್ಲ ಉತ್ತರಗಳು. ಪ್ರತಿಯೊಂದು ಹೂವು-ಹಣ್ಣಿಂದ ಎಷ್ಟೊಂದು ಮರಗಳು ಹುಟ್ಟೋ ಸಾಧ್ಯತೆ ಇರುತ್ತದೆ. ಹಾಗೆ ಪ್ರತಿ ಉತ್ತರವೂ ಮತ್ತೆ ಹತ್ತು ಹದಿನಾರು ಪ್ರಶ್ನೆಗಳ ಆದಿ. ಯಾವ ಪ್ರಶ್ನೆಯೂ ತಪ್ಪಲ್ಲ, ಉತ್ತರ ತಪ್ಪಾಗಬಹುದಷ್ಟೇ. ಯಾವ ಪ್ರಶ್ನೆಯೂ ಕ್ಷುಲ್ಲಕ ಅಲ್ಲ, ಉತ್ತರ ಸಿಲ್ಲಿ ಆಗಿರಬಹುದಷ್ಟೇ. ಹಾಗೆ, ಯಾವ ಪ್ರಶ್ನೆಯೂ ಅಫೆನ್ಸ್ ಅಲ್ಲ, ಉತ್ತರಿಸುವವ ಪ್ರಭುದ್ಧನಾಗಿರಬೇಕಷ್ಟೆ. ಸಿದ್ರಾಮಯ್ಯನವರ ನಿದ್ದೆಯ ಬಗ್ಗೆ ಪ್ರಶ್ನಿಸಿದಾಗಲೇ ಅವರ ಆರೋಗ್ಯದ ಬಗ್ಗೆ ನಮಗೆ ತಿಳಿದಿದ್ದು. ಕೇಳದೇ ಹೇಗೆ ಪಡೆಯುವುದು? ಬ್ರಾಹ್ಮಣ ಶ್ರೇಷ್ಠ ರಾವಣನೇ ಆತ್ಮಲಿಂಗುನ ಕೇಳಿ ಪಡೆದ. ವರ್ಷಗಟ್ಟಲೇ ಕೇಳಿ ಹೋರಾಡಿದ ಮೇಲೆಯೇ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು. ಪ್ರಶ್ನೆ ಕೇಳುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ, ಪ್ರತಿಯೊಂದರ ಬಗ್ಗೆ ಪ್ರಶ್ನೆ ಕೇಳಿ ತಿಳಿಯುವುದನ್ನೇ 'ರೈಟ್ ಟು ಇಂಫಾರ್ಮೇಶನ್' ಅಂತ ಭಾರತ ಸಂವಿಧಾನ ಹೇಳೋದು.

ಯಾಕೆ ಶಿವಪೂಜೆಯಲ್ಲಿ ಕರಡಿ ಬಿಡಬಾರದು? ಅಂತ ಮೊನ್ನೆ ನಮ್ಮ ಅಕ್ಕನ ಮಗ ಕೇಳಿದಾ. ಅವನಿಗೆ ಹದಿನಾಲ್ಕೇ ವರ್ಷ. ನಾನು ಉತ್ತರ ಹುಡುಕಿದಾಗ ಗೊತ್ತಾಗಿದ್ದು ಅದು ಕರಡಿ ಬಿಡೋದಲ್ಲ, 'ಕರಡಿಗೆ' ಬಿಡೋದು ಅಂತ. ಶಿವಪೂಜೆಗೆ ಕರಡಿಗೆ ಹಳೇ ಕಾಲದಲ್ಲಿ ತುಂಬಾ ಮುಖ್ಯವಾಗಿತ್ತಂತೆ. ಅದನ್ನ ಬಿಟ್ಟು ಶಿವಪೂಜೇನ ಮಾಡೋದು ಸಾಧ್ಯವೇ ಇಲ್ಲ ಅನ್ನೋಮಟ್ಟಿಗೆ. ಅದಕ್ಕೆ ಇಂಥ ಕಾರ್ಯದಲ್ಲಿ ಏನಪ್ಪಾ ಮುಖ್ಯವಾದದ್ದನೇ ಬಿಟ್ಟು ಬಂದಿರಲ್ಲ ಅಂತ ಅನ್ನೋಕೆ ಆ ಗಾದೆಯನ್ನು ಉಪಯೋಗಿಸುತ್ತಿದ್ದರು. ಉದಾಹರಣೆಗೆ, ಏನಪ್ಪಾ ಮದುವೇಲಿ ತಾಳೀನೇ ಮರೆತು ಬಂದಿರಲ್ಲ ಅಂದಂಗೆ. ಏನಪ್ಪಾ ಎಕ್ಸಾಮ್ ನಲ್ಲಿ ಕಾಪಿ ಚೀಟಿನೇ ಬಿಟ್ಟು ಬಂದಿಯಲ್ಲಾ ನೀನು ಅಂದಂಗೆ. ಇದನ್ನೇ ತುಸು ಸರಳವಾಗಿ ನನ್ನ ಅಳಿಯನಿಗೆ ತಿಳಿಸಿದೆ. ಖುಷಿ ಪಟ್ಟ ಅವನು. ಅವನಿಗಿಂತ ನನಗೆ ಜಾಸ್ತಿ ಖುಷಿಯಾಯ್ತು. ಹೊಸ ವಿಷಯವೊಂದನ್ನು ತಿಳಿದುಕೊಂಡ ಖುಷಿ.

ಹೀಗೆ ಪ್ರಶ್ನೆಗಳಿಗೆ ತಕ್ಕ ಉತ್ತರ ಹುಡುಕುವುದು, ಅದಕ್ಕಿಂತ ಮೇಲಾಗಿ ಪ್ರಶ್ನೆಗಳಿಗೆ ನಾವು ತೆರೆದುಕೊಳ್ಳುವುದು ತುಂಬಾ ಮುಖ್ಯ ಹಾಗು ಆರೋಗ್ಯಕರ. 'ಗಣಪತಿಗೆ ಯಾಕೆ ಅಷ್ಟು ಹೊಟ್ಟೆ? ಶಿವ ಯಾಕೆ ಡಾನ್ಸ್ ಮಾಡ್ತಾನೆ? ನಾನೇಕೆ ವಿಭೂತಿ ಹಚ್ಕೋಬೇಕು? ' ಅಂತೆಲ್ಲ ನನ್ನ ಪುಟ್ಟ ಅಳಿಯ ಕೇಳಿದಾಗೆಲ್ಲ, ನಾನು ರೀಸನ್ ಹುಡುಕಿ ಅವನಿಗೆ ಉತ್ತರ ನೀಡುವ ಪ್ರಯತ್ನ ಮಾಡುತ್ತೇನೆ. ಹೇಗೆ ಎಲ್ಲ ಸಣ್ಣ ಪುಟ್ಟ ಆಚರಣೆಗಳು, ನಂಬಿಕೆಗಳಿಗೂ ಒಂದೊಂದು ಅರ್ಥವಿದೆ ಅಂತ ತಿಳಿದುಕೊಂಡಾಗ ನನಗೆ ಈ ಆಚರಣೆಗಳ ಬಗ್ಗೆ ಹೆಮ್ಮೆ ಆಗುತ್ತದೆ. ದೇವರಿಗೆ ಹಾಗೆಲ್ಲ ಅನಬಾರ್ದು, ಹಾಗೆಲ್ಲ ಕೇಳಬಾರ್ದು, ಅಂತ ಹೇಳಿ ಪ್ರಶ್ನೆಗಳನ್ನು ಚಿವುಟಿದರೆ, ನಂಬಿಕೆಗಳಿಗೆ ಕಾರಣ ತಿಳಿಯದೇ ಮುಂದೆ ಅವನಿಗೆ ಇವೆಲ್ಲ ಮೂಢ ನಂಬಿಕೆ ಅಷ್ಟೇ ಅಂತ ಅನಿಸುವ ಅಪಾಯವಿರುತ್ತದೆ. ನನಗಾಗಿದ್ದು ಅದೇ. ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ತಿಳಿಯದೇ ನಾವು ಎಷ್ಟು ಮೂಢರು, ಹಿರಿಯರು ಹೇಳಿದ್ದೆಲ್ಲ ಕುರಿಗಳಂತೆ ಮಾಡುತ್ತಾ ಹೋಗ್ತೇವೆ ಅನ್ನೋ ಭಾವನೆಯಲ್ಲಿದ್ದೆ. ಆಮೇಲೆ ಓದಿ, ಕೇಳಿ ತಿಳಿದ ನಂತರ ನಮ್ಮ ಪದ್ಧತಿ, ಆಚರಣೆಗಳ ಬಗ್ಗೆ ತಿಳುವಳಿಕೆ ಬೆಳೆಯಿತು. ಪ್ರಶ್ನೆಗಳಿಗೆ ಅಂಜುವ ದೇವರು ಅದೆಂಥ ದೇವರು? ಪ್ರಶ್ನೆಗಳಿಗೆ ಹೆದರುವ ಧರ್ಮ ಅದೆಷ್ಟು ಗಟ್ಟಿ? ಎಲ್ಲವನ್ನು ಪ್ರಶ್ನಿಸಿ ಪರೀಶೀಲಿಸಿದಾಗ ಹೊಚ್ಚ ಹೊಸದಾಗಿ ಪ್ರತಿ ಬಾರಿಯೂ ಹೊಳೆಯುತ್ತ ಬರುವ ಉತ್ತರವೇ ಸತ್ಯ. ಆ ಸತ್ಯದಿಂದಷ್ಟೇ ಧರ್ಮ, ದೇವರುಗಳೆಂಬ ನಂಬಿಕೆಗಳು ನಿಲ್ಲಬೇಕೆ ವಿನಃ ಯಾರೋ ಹೇಳಿದರೆಂದೋ ಅಥವಾ ಯಾವುದೋ ಹೆದರಿಕೆಯಿಂದಲೋ ಅಲ್ಲ.

ಎಲ್ಲರೂ ಮನುಷ್ಯರೇ ಅಂದ ಮೇಲೆ ತಪ್ಪು ಮಾಡುವ ಸಾಧ್ಯತೆ ಇದ್ದೇ ಇರುತ್ತದೆ, ಸೀತೇನೆ ಪರೀಕ್ಷಿಸಿದರು, ದ್ರೌಪದಿ ನೇ ಜೂಜಿಗಿಟ್ರು.. ಎಲ್ಲರೂ ತಪ್ಪು ಮಾಡಿನೇ ದೇವರು ಆಗಿರೋದು ಅಂತಂದರೆ, ಮಾಡಿದ ತಪ್ಪುಗಳ ಅವಲೋಕನ ಮಾಡಿ ತಿದ್ದುಕೊಳ್ಳೋಣ. ನಮ್ಮನ್ನ ಒಬ್ಬರು ಪ್ರಶ್ನಿಸಿದರೆ ಅದಕ್ಕೆ ಸಮರ್ಪಕ ರೀತಿಯಲ್ಲಿ ಉತ್ತರಿಸೋಣ, ಆಗದಿದ್ದರೆ ಉತ್ತರ ಹುಡುಕೋಣ.
ಪ್ರಶ್ನೆ ಕೇಳುವ ಧ್ವನಿಗೆ ಕಿವಿ ಕೊಡೋಣ, ಗುಂಡೇಟನಲ್ಲ. ಪ್ರಶ್ನೆಗಳೇ ಇಲ್ಲದ ನಾಗರಿಕತೆಯ ಬೆಳವಣಿಗೆ ಅಸಾಧ್ಯ. ಚರ್ಚೆಯಾಗದ ಬ್ಯಾನ್ ಗಳು, ಸಮೀಕ್ಷಾರಹಿತ ಕಡ್ದಾಯಗಳಿಂದ ಒಂದು ರಾಜ್ಯ, ದೇಶದ ಅಭಿವೃದ್ಧಿಗೆ ಹಾನಿಯೇ ವಿನಃ ಯಾವ ಪ್ರಯೋಜನವೂ ಇಲ್ಲ. ಪ್ರಶ್ನೆಗಳ ಕೇಳುವ ಸಂಸ್ಕೃತಿಯ ಬೆಳೆಸಿಸುವುದು, ಅದಕ್ಕೆ ಪೂರಕ ವಾತಾವರಣ ಸೃಷ್ಟಿಸುವುದು ತುಂಬಾ ಮುಖ್ಯ. ಅದನ್ನು ನಾವು, ನಮ್ಮ ನಾಯಕರು, ನಮ್ಮ ಸರಕಾರಗಳು ಹೆಚ್ಚೆಚ್ಚು ಮನಗಾಣಲಿ ಎಂದು ಆಶಿಸೋಣ. ಅವರು ಕಿವಿ ಕೊಡಲ್ಲ ಅಂತ ನಾವು ಪ್ರಶ್ನೆ ಕೇಳೋದನ್ನೂ ನಿಲ್ಲಿಸುವುದು ತಪ್ಪೇ. ಹಾವಿಗೆ ಕಿವಿ ಇಲ್ಲ ಅಂತ ಪುಂಗಿ ಊದೋದನ್ನ ನಿಲ್ಲಿಸಿದ್ರೆ ಹಾವಾಡಿಗನಿಗೇ ಕಷ್ಟ, ನಮ್ಮ ಪ್ರಯತ್ನ ನಾವು ಮಾಡೋಣ.

                        

Wednesday, November 1, 2017

ಉಳಿದವರು ಕಂಡಂತೆ

  


ನರೇಂದ್ರ ಮೋದಿ ಒಬ್ಬ ಅದ್ಭುತ ನಟ, ಒಳ್ಳೆ ಆಕ್ಟಿಂಗ್ ಮಾಡ್ತಾರೆ, ಅಂತ ಮೊನ್ನೆ ಒಬ್ರು actor ಹೇಳಿದ್ರಂತೆ. ಏನ್ ಸಾ ಹಿಂಗೆ ಅಂದ್ಬುಟ್ರಿ ಅಂತ ಯಾರೋ ಕೇಳಿದ್ರೆ, ರೀ! ಅಭಿವ್ಯಕ್ತಿ ಸ್ವಾತಂತ್ರ್ಯ ರೀ...ನಾನ್ ಯಾವಾಗ್ಲೂ ವಿರೋಧ ಪಕ್ಸ, ಅಷ್ಟೇ ಆಮೇಲೆ! ಅಂತ ರೇಗಿದ್ರಂತೆ ಸಾರು. ವಿರೋಧ ಪಕ್ಪದ ನಾಯಕ್ರುಗಳೆಲ್ಲ ಚಪ್ಪಾಳೆ ಹೊಡೆದು ಪಾರ್ಟಿ ಮಾಡಿ ಸ್ವಾಗತಿಸಿದ್ರಂತೆ ಸೈಡ್ ಅಲ್ಲಿ, ಏ ನಮ್ ಪಕ್ಸದ್ ಎಸ್ರು ಹೇಳವ್ರೆ ಕಣ್ಲಾ ಅಂತಾ. ಆಡಳಿತ ಪಕ್ಪದವರು, ನಿಮ್ದುಕೆ ಮಾತ್ರ ಆಕ್ಟರ್ ಗೆ ಆಗಿ ಈಥರ  ಪಾಲಿಟಿಕ್ಸ್ ಮಾತಾಡಬೋದು-ಮಾಡಬೋದು.. ನಮ್ದುಕೆ ಯಾಕೆ ಆಕ್ಟಿಂಗ್ ಮಾಡಬಾರ್ದು?  ಅಂತಾ ಕ್ರಾಸ್ ಕೊಚ್ಚನ್ ಮಾಡಿದ್ರಂತೆ. ಸಾಮಾನ್ಯ ಜನ ಬೇಜಾನ್ ಟೆಂಗ್ಸನ್ ಆಗಿ ಇವ್ರು ರಾಜ್ಯದ ವಿರೋಧ ಪಕ್ಷದ ಬಗ್ಗೆ ಹೇಳಿದ್ರಾ ಅಥವಾ ಕೇಂದ್ರ ವಿರೋಧ ಪಕ್ಷದ ಬಗ್ಗೆ ಹೇಳಿದ್ರಾ ಅಂತ ತಲೆ ಕೆರ್ಕೊಳೋವಾಗ,  ಬುದ್ಧಿಜೀವಿಯೊಬ್ಬ ಅರ್ಧ ಬೀಡಿ ಸೇದಿ.. ಏ ಅದು ಹಂಗಲ್ಲಾ ರೀ, ಕೇಂದ್ರಕ್ಕೆ ಇವ್ರು ಕಾಂಗ್ರೆಸ್, ರಾಜ್ಯಕ್ಕೆ ಇವ್ರು ಬಿ.ಜೆ.ಪಿ  ಅಂತ ಹೇಳಿ ಇನ್ನಾ ಜಾಸ್ತಿ ಹುಳ ಬಿಟ್ರಂತೆ. ಮೊನ್ನೆ ಬಸ್ಸಲ್ಲಿ ಕೆಂಪು ಕಲರ್ ಶರ್ಟ್ ಹಾಕಿದ ಒಬ್ಬ (ಸೂತ್ರಗಳ ಪ್ರಕಾರ ಕೆಂಪು ಕಲರ್ ನೇ, ಬೇಕಿದ್ರೆ ಕೇಳ್ಕಳಿ) - 'ಈ ನಟಮಹಾಶಯ ನಮಗಿಂತ ಬೇರೆ ರಾಜ್ಯದ ಸಿನಿಮಾಗಳನ್ನೇ ಜಾಸ್ತಿ ಮಾಡೋದು, ಕಾವೇರಿ ಗಲಭೆ ಬಗ್ಗೆ ಅನಿಸಿಕೆ ಕೇಳಿದ್ರೆ ಅದನ್ನೆಲ್ಲ ಮಾತಾಡೋಕೆ, ಮಾಡೋಕೆ ಕೋರ್ಟ್ ಇದೆ ನಾನ್ಯಾಕೆ ಅನಿಸಿಕೆ ಹೇಳ್ಬೇಕು ಅಂತ ಆ ರಿಪೋರ್ಟರ್ ಹುಡಗಿ ಮೇಲೆ ಗುರ್ ಅಂದು ಎದ್ದೋದ್ರು, ಈಗ ನೋಡು ಹೆಂಗ್ ಬಿಡ್ತಾವ್ರೆ ಬಿಟ್ಟಿ ಅನಿಸಿಕೆಯ' ಅಂತ ನಗ್ತಿದ್ದ. ನಾನೂ ಕಕ್ಕಕ್ಕ ಅಂತ ನಕ್ದೆ, ಸರಿನೋ ತಪ್ಪೋ ಕಾಮಿಡಿಯಾಗಿತ್ತು ಅವ್ನು ಹೇಳಿದ ರೀತಿ.  ಅದನ್ನ ಕೇಳಿ ಪಕ್ಕದಲ್ಲಿದ್ದ ನನ್ನ ಸ್ನೇಹಿತ, "ಯಾವಾಗಲೂ ವಿರೋಧ ಪಕ್ಷದವನಾಗಿರು ನೀನು ಅಂತ ಅವ್ರ ಗುರು ಹೇಳಿದ್ದಂತೆ ಕಣೋ, ಅದೇನೋ ಪಾಪ ನೆನಪಾಗಿರಬೇಕು ಒಂದೇ ಸೈಡ್ ಅಲ್ಲಿ ಕೈ ಇಟ್ಕೊಂಡು ಮಲಗಿದಾಗ, ಅದ್ಕೆ ಸಡನ್ ಆಗಿ ವಿರೋಧ ಪಕ್ಷದವರಾಗಿರ್ತಾರೆ, ಆಮೇಲೇ ಡೈರೆಕ್ಟರು ಶಾಟ್ ರೆಡಿ! ಅಂತ ಕರೆದಾಗ ವಾಪಾಸ್ ಆಕ್ಟಿಂಗ್ ಕೆಲ್ಸಕ್ಕೆ ಹೋಗಿರ್ತಾರಪ್ಪ. ಜನ ಅದೊಂದನ್ನೇ ಹಿಡ್ಕೊಂಡು ಕುಯ್ಯೋದು ತಪ್ಪು ಆಲ್ವಾ" ಅಂತಂದ. ಯಪ್ಪಾ!! ಒಂದೇ ಒಂದು ಮಾತಿಗೆ ಎಷ್ಟೊಂದ್ ಚರ್ಚೆ ನೋಡಿ. ಅವ್ರು ಹೇಳಿದ್ರು, ಇವ್ರು ಹೇಳಿದ್ರು ಅಂತ ನಾನೇ ಎಲ್ಲಾ ಹೇಳ್ತಾ ಇದ್ದೀನಿ ಅಂತ ಅನ್ಕೋಬೇಡಿ, ಇದೆಲ್ಲ ನಮ್ಮ ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್ ನ 'ಸೂತ್ರಗಳ ಆಧಾರವಾಗಿ' ಕಲೆ ಹಾಕಿರೋ ಇಂಫಾರ್ಮೇಸನ್! ಸುಮ್ನಿರ್ರೀ, 'ನುಡಿದಂತೆ ನಡೆದಿದ್ದೇವೆ' ಅಂತ ಬರೀ ಹಳ್ಳಗಳೇ ತುಂಬಿರೋ ರಸ್ತೆ ಮುಂದೆ ಬೋರ್ಡ್ ಹಾಕಿದ್ರೆ ನಂಬತೀರಾ... ನಿಮ್ಮದೊಳ್ಳೆ ರಾಮಾಯಣ!

'ಯೂಟ್ಯೂಬ್' ನಿಮಗೆಲ್ಲ ಗೊತ್ತಿರತ್ತೆ,  ಅದರ ಬಗ್ಗೆ ಸ್ವಲ್ಪ ಕುಯ್ತೀನಿ, ಬಯ್ಬೇಡಿ. ನೀವು ಗಮನಿಸಿರ್ತೀರಾ, ಈ ವಿಡಿಯೋ ಸ್ಟ್ರೀಮಿಂಗ್ ವೆಬ್ಸೈಟ್ ನಲ್ಲಿ ನಾವು ಜಾಸ್ತಿ ಯಾವ ವಿಷಯಗಳ ವಿಡಿಯೋ ಗಳನ್ನ ನೋಡುತ್ತ ಇರುತ್ತೇವೋ ಆ ವಿಷಯಗಳ ಸಂಬಂಧಿತ ಅನ್ಯ ವಿಡಿಯೋಗಳು ನಮ್ಮ ಹೋಮ್ ಪೇಜ್ ನ ಮೇಲೆ ಪಾಪ್ ಆಗ್ತಾ ಇರ್ತವೆ, ಆವರಿಸುತ್ತವೆ. ನೋಡುಗರನ್ನು ವೆಬ್ಸೈಟ್ ನಲ್ಲಿ ತೊಡಗಿಸಿಡಲು, ಎಂಟರ್ಟೈನ್ ಮಾಡಲು ಯೂಟ್ಯೂಬ್ ಮಾಡಿದ ಒಂದು ಪ್ರೋಗ್ರಾಮ್ ಇದು. ನಾವು ಯಾವುದರ ಬಗ್ಗೆ ಜಾಸ್ತಿ ಆಸಕ್ತಿ ತೋರಿಸಿದ್ದೇವೆ ಅಂತ ಸ್ಟಡಿ ಮಾಡಿ, ಅದೇ ವಿಷಯ-ವ್ಯಕ್ತಿಗಳ ಬಗ್ಗೆ ನಮ್ಮ ಸ್ಕ್ರೀನ್ ಮೇಲೆ ವಿಷಯ ತುಂಬುತ್ತದೆ. ಇನ್ನೊಂದು,  ನೋಡುಗನು ಅಲ್ಲಿ ಬೇಕೆಂದ ವಿಷ್ಯಕ್ಕೆ ನೋಂದಾಯಿಸಿಕೊಂಡ್ರೆ, ಆ ವಿಷ್ಯಕ್ಕೆ ಸಂಬಂಧಪಟ್ಟ ಅಧಿಸೂಚನೆಗಳು ಅವನಿಗೆ ಬರುತ್ತದೆ, ಆಗ ಅವನು ಲಾಗಿನ್ ಆಗಿ ವಿಡಿಯೋ ಗಳನ್ನು ನೋಡಬಹುದು. ಈಗ ಒಂದು ಕ್ಷಣ ಈ ಜಗತ್ತು ಕೂಡ ಯೂಟ್ಯೂಬ್ ಅಪ್ಲಿಕೇಶನ್ ಅಂತ ಅಂದುಕೊಳ್ಳಿ, ಸಾವಿರ ಜನರ, ಲಕ್ಷ ಘಟನೆಗಳ ವಿಡಿಯೋಗಳು ನಡೆಯುತ್ತಲೇ ಇರುತ್ತವೆ, ಹಿಗ್ಗಾ ಮುಗ್ಗಾ ಲೈವ್ ಸ್ಟ್ರೀಮಿಂಗ್! ಅವ್ರೇನೋ ಅಂದ್ರು, ಇವ್ರೇನೋ ಮಾಡಿದ್ರು ಅಂತ ಬರ್ತಾನೆ ಇರತ್ತೆ. ನಮಗೆ ಬೇಕಂದದ್ದಕ್ಕೆ  ಮಾತ್ರ ನೋಂದಾಯಿಸಿಕೊಂಡ್ರೆ, ನಮಗೆ ಅದಷ್ಟೇ ಕಾಣ್ತದೆ, ನೋಡಿ ಕಲಿತು, ಲಾಗೌಟ್ ಆಗಬಹುದು. ನಾವು ಪದೇ ಪದೇ ನೋಡೋ/ಆಡೋ ವಿಷಯಗಳು ಅಥವ ನಾವು ನೋಡಬಯಸುವ ವಿಡಿಯೋಗಳನ್ನೇ ಪ್ರಪಂಚ ನಮ್ಮ ಮನಸಿನ ಹೋಂ ಪೇಜ್ ನ ಮೇಲೆ ತೋರಿಸುತ್ತೆ. ಕೆಟ್ಟದನ್ನ ಫಾಲೋ ಮಾಡಿದ್ರೆ ಕಾಣಸಿಗೋದೆಲ್ಲ ಕೆಟ್ಟದ್ದೇ, ಒಳ್ಳೇದನ್ನ ಫಾಲೋ (ಸರ್ಫ್ ಅಂತಾರೆ ಇಂಟರ್ನೆಟ್ ಭಾಷೇಲಿ) ಮಾಡಿದ್ರೆ ಕಾಣಿಸೋದು, ಕೇಳ್ಸೋದು ಎಲ್ಲಾ ಒಳ್ಳೇದೇ. ಬೆಳವಣಿಗೆ ಮುಖ್ಯ, ನಿಂತಲ್ಲೇ ನಿಲ್ಲೋ ಗಿಡ ಕೂಡ ಬೆಳೆದು ಮರವಾಗತ್ತೆ. ಆದ್ರೆ, ಯಾವ ಥರ ಬೆಳವಣಿಗೆ ಬೇಕು ಅಂತ ನೋಡ್ಕೊಬೇಕಷ್ಟೆ. ಪಾಕಿಸ್ತಾನದಲ್ಲಿರೋ ಆತಂಕವಾದಿಗಳು ದೇವರ ಕೆಲಸ ಅಂತ ಹೇಳಿನೇ ಕೊಲೆ ಮಾಡೋದು, ಅವರ ಪ್ರಕಾರ ಹಾಗೆ ಮಾಡೋದ್ರಿಂದ ಅವ್ರು ದೇವರಿಗೆ ಹತ್ತಿರ ಆಗ್ತಾರಂತೆ, ಅವರ ಪ್ರಕಾರ ಅದು ಬೆಳವಣಿಗೆ. ನಾವೆಲ್ಲಾ ಅದು ತಪ್ಪು ಅಂತೀವಿ, ಅದೇ ಸರಿ ಅಂತ ಅವ್ರು ನಂಬಿಸಬಲ್ಲರು (ತಲೆಗೆ ಪಿಸ್ತೋಲ್ ಇಟ್ಟು). ಅದೇ ಯೂಟ್ಯೂಬ್ ನಲ್ಲಿ ಕಾಮೆಂಟ್ಸ್ ವಿಭಾಗ ಕೂಡ ಇದೆ, ಅಲ್ಲಿ ನಮ್ಮ ಅನಿಸಿಕೆಗಳನ್ನು ಎಲ್ಲರಿಗೆ ಕಾಣುವಂತೆ ಬರೆಯಲೂ ಬಹುದು. ಕಾಣುವ ಅಥವಾ ಕೇಳಸಿಗುವ ಪ್ರತಿಯೊಂದಕ್ಕೂ ಅನಿಸಿಕೆ ಇರಲೇಬೇಕೆಂದು ಏನಿಲ್ಲ, ಅದಕ್ಕೆ ಈ ಫೀಚರ್ ನೋಡುಗನಿಗೆ ಐಚ್ಛಿಕ ವಾಗಿದೆ. 'ಜಗತ್ತಿನ ಯೂಟ್ಯೂಬ್ ' ನಲ್ಲೂ ಕೂಡ ಹಿಂಗೇ. ಪ್ರತಿಯೊಂದರ ಬಗ್ಗೆಯೂ ಒಂದು ಅನಿಸಿಕಿ ಹೊಂದಿರಬೇಕು ಅನ್ನೋದೇ ಬಹುಷಃ ನಮ್ಮ ಈಗಿನ ಸಮಾಜದ ದೊಡ್ಡ ಸಮಸ್ಯೆ ಆಗಿರಬಹುದು, ನರೇಂದ್ರ ಮೋದಿನಾ ಅಥವಾ ಸೋನಿಯಾ ಗಾಂಧಿನಾ?, ಎಡಪಂಥ ನಾ ಅಥವಾ ಬಲ ನಾ? ಸಚಿನ್ ನಾ ಅಥವಾ ದ್ರಾವಿಡ್ ನಾ? ಇಂಥ ಪ್ರಶ್ನೆಗಳನ್ನ ಅವರಿವರ ಪ್ರಭಾವದಿಂದ ಮನಸಲ್ಲೇ ಕೇಳ್ಕೊಂಡು ಒಂದು ಪಕ್ಷದ ಕಡೆಗೆ ವಾಲಿ ಫಿಕ್ಸ್ ಆಗಿಯೇ ಮುಂದಿನ ಮಾತು ಕಥೆ! ಎಲ್ಲದರ ಬಗ್ಗೆಯೂ ಒಂದು ಸ್ವಾಗತಾರ್ಹ ಮನೋಭಾವ ಇಟ್ಟುಕೊಂಡು ನೋಡಿದರೆ ಬಹುಷಃ  ತಪ್ಪುಗಳು ಕಡಿಮೆ ಕಾಣಬಹುದು, ಮಲಯಾಳಿ ನರ್ಸಮ್ಮನ್ನ ಬಯಸಿದ ರೋಗಿಗೆ ಅವಳು ಚುಚ್ಚುವ ಸೂಜಿ ಕಾಣಿಸಲ್ವಂತೆ. ಎಲ್ಲರೂ ಮನುಷ್ಯರೇ ಅಂದ ಮೇಲೆ ಸರಿ ತಪ್ಪು ಗಳನ್ನ ಎಲ್ಲರೂ ಮಾಡಿರಬಹುದು, ಕೆಲವರಿಗೆ ಒಳ್ಳೇದನ್ನ ಹೊಗಳೋ ಗುಣ ಇದ್ರೆ, ಕೆಟ್ಟದನ್ನ ಬಯ್ಯೋ ಗುಣನೂ ಎಲ್ಲೋ ಒಬ್ಬರಿಗೆಇರುತ್ತೆ. ಪುರುಸೊತ್ತಿದ್ರೆ ಕೆಟ್ಟ ಕಾಮೆಂಟ್ಸ್ ಗಳನ್ನೂ ನೋಡಿ ಕಲಿಯೋಣ, ಬೇಡವಾದ್ರೆ ಬಿಟ್ಟು ಬಿಡೋಣ. ಬರೀ ಕಾಮೆಂಟ್ಸ್ ಮಾಡುತ್ತಾ ಕುಳಿತ್ಕೊಂಡ್ರೆ ನಮ್ಮ ಪುಟ್ಟ ಕನಸಿನ ಕಥೆಯ ವಿಡಿಯೋವನ್ನು ಕಟ್ಟಿ ಬೆಳೆಸಿ ಈ ಜಗತ್ತಿಗೆ ತೋರಿಸಲು ಆಗುವುದೇ ಇಲ್ಲ. ಮೋದಿ ಆಕ್ಟರ್ ಅಂತ ಒಬ್ಬರಿಗೆ ಅನಿಸಿದ್ರೆ ಅದು ಅವರ ಅನಿಸಿಕೆ, ನಾವೆಲ್ಲಾ ಅದಕ್ಕೆ ಸಿಟ್ಟಾಗಬೇಕಾಗಿಲ್ಲ ಇಲ್ಲ. ಅವರು ಅದ್ಯಾವ ಪರಿಸ್ಥಿತಿ, ಮನಸ್ಥಿತಿಯಲ್ಲಿ ಹಾಗಂದರೋ ಅವರಿಗೇ ಗೊತ್ತು. ಅವರು ಘಟನೆಯ ಘನತೆ ಹಾಗು ಗಾಂಭೀರ್ಯವ ದಾಟಿ ಒಬ್ಬ ವ್ಯಕ್ತಿಯ ಬಗ್ಗೆ ಅವಸರಕ್ಕೆ ಸಿಕ್ಕಿ ತೀರ್ಪು ಕೊಡುವುದು ಅಥವಾ ಕಾಮೆಂಟ್ ಮಾಡಿದ್ದು ತಪ್ಪು ಎಂದೆನ್ನುವವರು ಮಾಡುತ್ತಿರುವುದೇನು? ಅವರು ಕೂಡ ಪೂರ್ತಿ ಚಿತ್ರ ತಿಳಿಯದೇ ಆ ನಟನನ್ನುತೀರ್ಪಿಗೆ ಈಡು ಮಾಡುತ್ತಿರುವುದೇ ತಾನೇ? ಕಣ್ಣಿಗೆ ಕಣ್ಣು ಅಂತಾದರೆ ಜಗತ್ತೇ ಕುರುಡಾಗಿರುತಿತ್ತು. ಕಣ್ಣು ಬೇಕು ರೀ, ಇನ್ನು ಏನೇನೋ ನೋಡಬೇಕು ನಾವೆಲ್ಲಾ. ದಲಿತರಿಗೆ ಎಪ್ಪತ್ತು ಪ್ರತಿಶತಃ ಮೀಸಲಾತಿ ಅಂತ ಸಿ.ಎಂ ಸಾಹೇಬ್ರು ಹೇಳಿದ್ದಾರೆ ಮೊನ್ನೆ, ಅದನ್ನ ನೋಡೋದು ಬೇಡವಾ? ಮೀಸಲಾತಿ ನೂರಕ್ಕೆ ನೂರು ಆದ್ಮೇಲೆ ಎಲ್ಲಾನೂ ನೋಡಿದಂತಾಗಿ ತಣ್ಣಗೆ ಕಣ್ಣು ಮುಚ್ಚಬೋದು ಎಲ್ಲರೂ ಒಟ್ಟಿಗೆ, ಏನಂತೀರಾ?

ಅಂಕಣ : ಬುರುಡೆದಾಸ
     

Saturday, October 7, 2017

ಹುಲಿರಾಯ

ಸಿನಿಮಾ ನೋಡಿ ಹೊರಗ್  ಬರೋವಾಗ ಸಿನೆಮಾಸ್ ನ usher ಹೊರಬಾಗಿಲು ತೆಗೆಯುತ್ತಾ, "ಹೇಗಿದೆ ಸಾ ಮೂವಿ?" ಅಂತ ಕೇಳ್ದಾ ..

Labrador, Pomeranian ಅಂತಾ ಯಾವುದ್ ಯಾವುದೋ ಜಾತಿಯ ನಾಯಿಗಳನ್ನ ನೋಡಿ, ಸಾಕಿ, ಮುದ್ದಾಡಿಕೊಂಡಿರೋರಿಗೆ ನಡು ರಸ್ತೆಯಯಲ್ಲಿ  close-up ನಲ್ಲಿ ಅನಾಮತ್ತಾದ ಹುಲಿಯೊಂದು ಬಂದು Dolby DTS Surround ನಲ್ಲಿ ಘರ್Ssss!! ಅಂದಂಗೆ, ಸರ್ಕಸ್ ನಲ್ಲಿ  ಬರೀ harmless ಪಿಳ್ಳಿ-ಪಿಚ್ಕು ಪ್ರಾಣಿಗಳು entertain ಮಾಡುವುದನ್ನು ನೋಡುತ್ತಾ, pop-corn ತಿನ್ನುತ್ತಾ ಕುಳಿತ audience ಮುಂದೆ ಹಠಾತ್ತನೆ ಹಸಿದ ಹುಲಿಯೊಂದು ಹಂಟರ್ ನ ಬೇಲಿಯಿಂದ ತಪ್ಪಿಸಿಕೊಂಡು ಘರ್ಜಿಸುತ್ತಾ ಕಣ್ಮುಂದೆ ಬಂದ ಹಾಗಾಯ್ತು ಮಾರಾಯ ಅಂತೆಲ್ಲ ಒಂದೇ ಉಸಿರಲ್ಲಿ ಕಕ್ಕಿ ಬಿಡುವಾಸೆ ಆಯ್ತು, ಆದರೆ ಹಿಂದೆ ಜನರ ಸಾಲಿತ್ತು ಹಾಗು ಅವನಿಗೆ ನನ್ನಷ್ಟು ಪುರುಸೊತ್ತು ಇರಲಿಲ್ಲ ಕೇಳೋಕೆ. ಮುಗುಳ್ನಕ್ಕು ತುಂಬಾ ಚೆನ್ನಾಗಿದೆ ಅಂತ ಹೇಳಿ ಬಂದೆ.

ಲಕ್ಷ  ಚಿತ್ರಗಳನ ನೋಡಿ, ಸಾವಿರ category ಗಳಲ್ಲಿ ಅವನ್ನ ಹಾಕಿ, ಕಾಮಿಡಿ ಸಕ್ಕತ್ತಾಗಿದೆ, ಸಸ್ಪೆನ್ಸ್ ಹೆವಿ ಇದೆ, ಪಕ್ಕಾ ಮಾಸ್ ಮೂವಿ, ಡಾಕ್ಯುಮೆಂಟರಿ ಥರ ಇದೆ ಅಂತೆಲ್ಲ ಹೇಳ್ತಿವಿ. ಯಾರೋ ಒಬ್ರು ಹೇಗಿದೆ ಮೂವಿ ಅಂದಾಗ ಅದರಲ್ಲಿ ಒಂದನ್ನು ಹೇಳಿಬಿಡುತ್ತೇವೆ, ಸಾ ಹೆವೀ ಲವ್ ಫೇಲ್ಯೂರ್ ಮೂವಿ ಸಾ! ಲವ್ವಾಗೋಯ್ತದೆ ನೋಡಿದಟ್ಗೆ ಅಂತಂದ್ಬುಟ್ಟು. ಆದರೆ ಕೆಲವು ಚಿತ್ರಗಳು ಇವೆಲ್ಲವನ್ನೂ ಹೊರತಾಗಿ ನಿಂತುಬಿಡುತ್ತವೆ, ಹೇಗಿದೆ ಚಿತ್ರ ಅಂತ ಒಂದೇ ಸಾಲಲ್ಲಿ ಹೇಳೋದು ಹೇಗೆ, ಏನು ಅಂತ confusion. "ಹುಲಿರಾಯ" ಕೂಡ ಹಂಗೆ. ಒಂದು expect ಮಾಡದೇ ಇರುವಂಥ, ಸುಂದರವಾದ ಆತ್ಮ ಇರುವಂಥ ದೃಶ್ಯ ಕಥೆ. ಬಾಲು ನಾಗೇಂದ್ರ ರ ಅಭಿನಯ ನೋಡಿದ್ರೆ ಪ್ರೀತಿ ಬರ್ತದೆ, ಕಥೆ ಮೇಲೆ ಪೂರ್ತಿ ಕಂಟ್ರೋಲ್ ಇರುವಂಥ ಅರವಿಂದ್ ಕೌಶಿಕ್ ರ ನಿರ್ದೇಶನದ discipline ಪ್ರತಿ scene ನಲ್ಲೂ ಕಾಣಿಸ್ತದೆ. ಹಾಲ್ ನಲ್ಲಿ ಜನರು ತುಂಬದೇ ಇದ್ದದ್ದನ್ನು ನೋಡಿ ಸಮಾಧಾನ ಆಗದೇ ಇಷ್ಟುದ್ದ ವರ್ಣಿಸಿ ಬರೆದು ಹಾಕಿದೆ. Review ಅಲ್ಲ ಇದು, review ಅಂದರೆ ಯುದ್ಧ ಮಾಡಿ ಹುತಾತ್ಮನಾದ ಯೋಧನ ಮನೆಗೆ ಮೈಕ್ ಹಿಡಿದುಕೊಂಡು ಹೋದ ಒಬ್ಬ ಹೊಟ್ಟೆಬಾಕ ರಿಪೋರ್ಟರ್, ಯುದ್ಧ ಮಾಡೋದು ತಪ್ಪು, ಕುಳಿತು ಚರ್ಚೆಗಳಿಂದ ವಿಷಯಗಳನ್ನ ಬಗೆ ಹರಿಸಬೇಕು ಅಂದಂಗೆ. ಪಟ್ಟ ಇಷ್ಟ-ಕಷ್ಟ ಗಳು ಮಾಡುವವರಿಗೇ ಗೊತ್ತು ಹೊರತು ಆಡುವವರಿಗಲ್ಲ. ಏನೋ, ಇದನ್ನ ನೋಡಿ ನನ್ನ ಕೆಲ ಸ್ನೇಹಿತರು ಸಿನಿಮಾಗೆ ಹೋದ್ರು ಸಾಕು, ವರ್ಷಾನುಗಟ್ಟಲೆ ಕಷ್ಟ ಪಟ್ಟ ಬಾಲು ಮತ್ತೆ ಅರವಿಂದ್ ಕೌಶಿಕ್ efforts ಸಾರ್ಥಕ ಆಗ್ಲಿ. ಮುಂದಿನ ವಾರ ನೋಡೋಣ, ನಾಡಿದ್ದು ನೋಡೋಣ ಅಂತನ್ಕೊಂಡು ಕೂತ್ರೆ ಸಿನಿಮಾಸ್ ನಿಂದ ಎತ್ತಂಗಡಿ ಆಗೋಗತ್ತೆ ಚಿತ್ರ, ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಬಂದ ಗ್ರಹಚಾರ ಇದು. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ನಮ್ ಮಕ್ಕೆ! ನಾಳೆನೇ ಹೋಗಿ ನೋಡಿ, first weekend collections ಮೇಲೆನೇ ಸಿನಿಮಾ ಮುಂದೆ ಓಡ್ಸೋದೋ ಬೇಡ್ವೋ ಅಂತ ಲೆಕ್ಕ ಹಾಕಲಾಗತ್ತಂತೆ. ಒಳ್ಳೇ ಸಿನಿಮಾ ನೋಡಿ. ಒಳ್ಳೇದಾಗ್ಲಿ                



            

ರಾವಣನ ಕಥೆಯಲ್ಲಿ ರಾಮನೇ ರಾಕ್ಷಸ

 ರಾಕ್ಷಸ ರಾವಣನ ವಿರುದ್ಧ ಧರ್ಮಯುಧ್ಧಕ್ಕೆ ಹೋಗುವ ಮುನ್ನ ರಾಮನು ಯಜ್ಞ ಮಾಡಬೇಕು, ಆ ಯಜ್ಞವನ್ನು ಒಬ್ಬ ಶ್ರೇಷ್ಠ ಬ್ರಾಹ್ಮಣನು ನೆರವೇರಿಸಿ ಕೊಡಬೇಕು ಅಂತ ಗುರುಗಳು ಪ...